ಜಗತ್ತಿನಲ್ಲಿ ಅತಿ ದೊಡ್ಡ ಭತ್ತ ಉತ್ಪಾದನೆ ರಾಷ್ಟ್ರದಲ್ಲೊಂದು ಎಂಬ ಹೆಗ್ಗಳಿಕೆ ಹೊಂದಿರುವ ಫಿಲಿಪೈನ್ಸ್‌ನೊಂದಿಗೆ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಭತ್ತದ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಕೃಷಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.
ರಾಜ್ಯದ ಭತ್ತ ಉತ್ಪಾದನಾ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯೂ ಪ್ರಮುಖ ಸ್ಥಾನ ಹೊಂದಿದೆ. ಈ ನಡುವೆ ಭತ್ತ ಬೆಳೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಜೊತೆಗೆ ಇಳುವರಿ ಕುಂಠಿತವಾಗುತ್ತಿರುವುದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಆದಾಗ್ಯೂ ಭತ್ತದ ಉತ್ಪಾದನೆಗೆ ಹೆಚ್ಚಿನ ರೈತರು ಒಲವು ತೋರುತ್ತಾರೆ. ಈ ಹಿನ್ನೆಲೆಯಲ್ಲಿ ಭತ್ತದಲ್ಲಿ ಹೊಸ ತಳಿ ಸಂಶೋಧನೆಗೆ ಮಂಡ್ಯ ಕೃಷಿ ವಿವಿ ಫಿಲಿಪೈನ್ಸ್‌ನ ಇಂಟರ್‌ನ್ಯಾಷನಲ್ ರೈಸ್ ರಿಸರ್ಚ್ ಇನ್ಶಿಟ್ಯೂಟ್(ಐಆರ್‌ಆರ್‌ಐ)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಕರ್ನಾಟಕದಲ್ಲಿ 1.2 ದಶಲಕ್ಷ ಹೆಕ್ಟೇರ್‌ನಲ್ಲಿ ಭತ್ತದ ಬೆಳೆ
ಸಚಿವ ಎನ್.ಚಲುವರಾಯಸ್ವಾಮಿ ಅವರ ಸೂಚನೆ ಮೇರೆಗೆ ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ ಹರಿಣಿಕುಮಾರ್ ವಿಸ್ತಾರವಾದ ಪ್ರಸ್ತಾವನೆ ಸಿದ್ಧಪಡಿಸಿ ಐಆರ್‌ಆರ್‌ಐಗೆ ಸಲ್ಲಿಸಿದ್ದಾರೆ. ಅದರಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿ ಮತ್ತು ರೈತರನ್ನ ಉನ್ನತೀಕರಿಸಲು ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿವಿ ಸ್ಥಾಪಿಸಲಾಗಿದೆ. ಭಾರತ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಜನರಿಗೆ ಅಕ್ಕಿ ಪ್ರಧಾನ ಆಹಾರ ಮತ್ತು ಪೋಷಣೆಯ ಪ್ರಾಥಮಿಕ ಮೂಲವಾಗಿದೆ. ಇದು ಆದಾಯ ಮತ್ತು ಉದ್ಯೋಗದ ಪ್ರಮುಖ ಮೂಲ. ಮಾತ್ರವಲ್ಲದೆ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ. ಕರ್ನಾಟಕದಲ್ಲಿ ಸುಮಾರು 1.2 ದಶಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಿದ್ದು, ಪ್ರತಿ ಹೆಕ್ಟೇರ್‌ಗೆ ಸರಾಸರಿ 3 ಟನ್ ಇಳುವರಿ ನೀಡುತ್ತದೆ. ಇದರಲ್ಲಿ ಶೇ.44ರಷ್ಟು ನೀರಾವರಿ ಮತ್ತು ಶೇ.56ರಷ್ಟು ಮಳೆಯಾಶ್ರಿತವಾಗಿದೆ.
ಪ್ರಸ್ತುತ ಕರ್ನಾಟಕದಲ್ಲಿ ಭತ್ತದ ಸಂಶೋಧನೆಯು ವಿ.ಸಿ ಫಾರ್ಮ್ ಹಾಗೂ ಗಂಗಾವತಿ ಕೇಂದ್ರದಲ್ಲಿ ನಡೆಯುತ್ತಿದೆ. 1969ರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವಿ.ಸಿ ಫಾರ್ಮ್‌ನಲ್ಲಿ ಅಖಿಲ ಭಾರತ ಸಂಯೋಜಿತ ಭತ್ತದ ಸುಧಾರಣಾ ಯೋಜನೆ ಪ್ರಾರಂಭಿಸಿತು. ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಗಮನಾರ್ಹ ವಿಷಯವೆಂದರೆ ಭಾರತದ ಮೊದಲ ಹೈಬ್ರಿಡ್ ಭತ್ತದ ವಿಧವಾದ ಕೆಆರ್‌ಎಚ್-2 ಅನ್ನು ಫಿಲಿಪೈನ್ಸ್‌ನ ಐಆರ್‌ಆರ್‌ಐನಿಂದ ಜರ್ಮ್‌ಪ್ಲಾಸಂ ಬಳಸಿ ವಿ.ಸಿ ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಹವಾಮಾನ ಬದಲಾವಣೆ, ನೀರಿನ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚ, ಕೀಟ ಮತ್ತು ರೋಗಗಳ ಒತ್ತಡ ಮತ್ತು ಕುಗ್ಗುತ್ತಿರುವ ಭತ್ತದ ವಿಸ್ತೀರ್ಣದಂತಹ ಸವಾಲು ಎದುರಿಸಲು ಹಾಗೂ ಉತ್ಪಾದಕತೆ ಹೆಚ್ಚಿಸಲು ವಿ.ಸಿ ಫಾರ್ಮ್ ವಿಜ್ಞಾನಿಗಳು 45 ಭತ್ತದ ಪ್ರಭೇದ, 2 ಮಿಶ್ರತಳಿ ಮತ್ತು 47 ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ಪ್ರಯತ್ನಗಳ ಹೊರತಾಗಿಯೂ ಕರ್ನಾಟಕದಲ್ಲಿ ಭತ್ತದ ಕೃಷಿ ನೀರಿನ ಕೊರತೆ, ಕೀಟ ಮತ್ತು ರೋಗಗಳ ಹರಡುವಿಕೆ, ಅಜೈವಿಕ ಒತ್ತಡ, ಕಾರ್ಮಿಕರ ಕೊರತೆಯಿಂದ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಹೊಸ ತಳಿ ಸಂಶೋಧನೆಗೆ ಐಆರ್‌ಆರ್‌ಐ ನೆರವಿನ ಅವಶ್ಯಕತೆ ಇದೆ ಎಂದಿದ್ದಾರೆ.
ಗುಣಮಟ್ಟದ ಅಕ್ಕಿ ಪೂರೈಕೆ ಗುರಿ
ಕುಗ್ಗುತ್ತಿರುವ ಕೃಷಿ ಪ್ರದೇಶಗಳ ನಡುವೆಯೂ ಭತ್ತಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹವಾಮಾನ, ಸ್ಮಾರ್ಟ್, ಹೆಚ್ಚಿನ ಇಳುವರಿ ನೀಡುವ, ಕೀಟ-ನಿರೋಧಕ ಮತ್ತು ಪೋಷಕಾಂಶ-ದಟ್ಟವಾದ ಭತ್ತದ ಪ್ರಭೇದಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಫಿಲಿಪೈನ್ಸ್‌ನ ಐಆರ್‌ಆರ್‌ಐ ಜೊತೆ ಹೊಸ ಸಹಯೋಗದ ಸಂಶೋಧನಾ ಉಪಕ್ರಮದ ಅವಶ್ಯಕತೆ ಇದೆ. ಇದರಿಂದ ಉತ್ತಮ ಗುಣಮಟ್ಟದ ಸಂಶೋಧನೆಗೆ ಅನುವು ಮಾಡಿಕೊಡುವುದರ ಜೊತೆಗೆ ಭಾರತದ ಕೃಷಿ ವಲಯಕ್ಕೆ ವಿಶಾಲ ಅವಕಾಶ ತೆರೆಯುತ್ತದೆ.
ಒಪ್ಪಂದದ ಮೂಲಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಅಧ್ಯಯನ ಮಾಡುವುದು ಮತ್ತು ಹೆಚ್ಚಿಸುವುದು. ಹವಾಮಾನ-ನಿರೋಧಕ ಮತ್ತು ಪೋಷಕಾಂಶ-ಭರಿತ ಮಿಶ್ರತಳಿ ಅಭಿವೃದ್ಧಿಪಡಿಸುವುದು. ಉತ್ತಮ ಬೆಳೆ ನಿರ್ವಹಣೆ ಪದ್ಧತಿ ಉತ್ತೇಜಿಸುವುದು. ಭತ್ತದ ಸಂಶೋಧನೆ ಮತ್ತು ಕೃಷಿಯಲ್ಲಿ ವಿಜ್ಞಾನಿಗಳು ಮತ್ತು ರೈತರನ್ನ ಸಬಲೀಕರಣಗೊಳಿಸಬಹುದು. ಪರಿಣಾಮ ಫಿಲಿಪೈನ್ಸ್‌ಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ರಾಜ್ಯದ ರೈತ ಸಮುದಾಯಗಳಲ್ಲಿ ಸುಧಾರಿತ ಜೀವನೋಪಾಯಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

ಜಿಲ್ಲೆಯ ಜನರ ಹಲವು ದಶಕದ ಬೇಡಿಕೆಯಂತೆ ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಿಸುವಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಹತ್ವದ ಪಾತ್ರ ವಹಿಸಿದ್ದರು. ಇದರ ಮುಂದುವರೆದ ಭಾಗವಾಗಿ ಭತ್ತದ ತಳಿ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಫಿಲಿಪೈನ್ಸ್‌ನ ಐಆರ್‌ಆರ್‌ಐ ಜತೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಫಿಲಿಪೈನ್ಸ್‌ನ ಮನಿಲಾದಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತೆರಳಿದ್ದಾರೆ. ರಾಜ್ಯದಲ್ಲಿ ನೆರೆ ಹಾವಳಿ, ಬರ ಪರಿಸ್ಥಿತಿ, ಕರಾವಳಿ, ಮಲೆನಾಡು, ಬಯಲು ಸೀಮೆ ಹೀಗೆ ವಿಭಿನ್ನ ಭೌಗೋಳಿಕ ಪರಿಸರಕ್ಕೆ ಹೊಂದಾಣಿಕೆಯಾಗುವ ವಿವಿಧ ಜೈವಿಕ, ಅಜೈವಿಕ ಒತ್ತಡಗಳಿಗೆ ನಿರೋಧಕತೆ ಜತೆಗೆ ಪೌಷ್ಠಿಕಾಂಶವುಳ್ಳ, ಅಧಿಕ ಇಳುವರಿ ತರುವ ಬೇಸಾಯ ಕ್ರಮ ಮತ್ತು ಭತ್ತದ ತಳಿಗಳ ಸಂಶೋಧನೆಗೆ ಈ ಒಡಂಬಡಿಕೆ ನೆರವಾಗಲಿದೆ.










