Tag: Mysuru Lok Sabha

  • ಎರಡು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾದ ಸಿದ್ದರಾಮಯ್ಯ!

    ಎರಡು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾದ ಸಿದ್ದರಾಮಯ್ಯ!

    ಮೈಸೂರು: ತಾಲೂಕು ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ಸಂಸತ್‌ಗೆ ಹೋಗಲು ಸಿದ್ದರಾಮಯ್ಯ (Siddaramaiah) ಯತ್ನಿಸಿದ್ದರು. ನಂತರ ಕೊಪ್ಪಳದಿಂದಲೂ (Koppal) ಎರಡನೇ ಪ್ರಯತ್ನ ನಡೆಸಿದ್ದರು. ಎರಡೂ ವಿಫಲವಾದವು.

    1978 ರಲ್ಲಿ ಸಿದ್ದರಾಮಯ್ಯ ಅವರು ಮೈಸೂರು (Mysuru) ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. 1980 ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ಜನತಾಪಕ್ಷ (ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರಿಗೆ ಬಂದ ಮತ 8,327 ಮಾತ್ರ! 1,95,724 ಮತಗಳನ್ನು ಪಡೆದ ಕಾಂಗ್ರೆಸ್-ಐನ ಎಂ.ರಾಜಶೇಖರಮೂರ್ತಿ ಆಗ ಗೆದ್ದಿದ್ದರು. ಇದನ್ನೂ ಓದಿ: 2019 ರಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಬಂದ ಮತ ಎಷ್ಟು?

    ಇದಾದ ನಂತರ ಸಿದ್ದರಾಮಯ್ಯ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ‘ತಕ್ಕಡಿ’ ಗುರುತಿನಲ್ಲಿ ಸ್ಪರ್ಧಿಸಿ, ಪ್ರಥಮ ಬಾರಿಗೆ ಚುನಾಯಿತರಾದರು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾದರು. ನಂತರ ಹೆಗಡೆ ಅವರು ಸಂಪುಟಕ್ಕೆ ತೆಗೆದುಕೊಂಡು ರೇಷ್ಮೆ ಖಾತೆ ನೀಡಿದರು.

     

    1985 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಕ್ರಮವಾಗಿ ಪಶುಸಂಗೋಪನೆ, ಸಾರಿಗೆ ಸಚಿವರಾಗಿದ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಇದನ್ನೂ ಓದಿ: ರಾಜರೂರಿನವರು ಮಂತ್ರಿಗಳೇ ಆಗಲಿಲ್ಲ!

    ಆಗ 1991 ರಲ್ಲಿ ಲೋಕಸಭಾ ಚುನಾವಣಾ ಎದುರಾದಾಗ ಸಿದ್ದರಾಮಯ್ಯ ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್‌ ಬಸವರಾಜ್ ಪಾಟೀಲ್ ಅನ್ವರಿ 2,41.176 ಮತಗಳನ್ನು ಪಡೆದು ಚುನಾಯಿತರಾದರು. ಸಿದ್ದರಾಮಯ್ಯ 2,29,979 ಮತಗಳನ್ನು ಪಡೆದು, 11,197 ಮತಗಳ ಅಂತರದಿಂದ ಸೋತರು. ಇದಾದ ನಂತರ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.

  • ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ

    ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ

    ಮೈಸೂರು: ಲೋಕಸಭಾ ಕ್ಷೇತ್ರದಲ್ಲಿ ಜನತಾ ಪರಿವಾರ ಅಥವಾ ಈಗಿನ ಜೆಡಿಎಸ್ ಒಮ್ಮೆಯೂ ಗೆಲುವಿನ ನಗೆ ಬೀರಿಯೆ ಇಲ್ಲ. ಜನತಾ ಪರಿವಾರದ ಘಟಾನುಘಟಿ ನಾಯಕರು ಮೈಸೂರಿನವರೆ (Mysuru Lok Sabha) ಆದರೂ ಕೂಡ ಜನತಾ ಪರಿವಾರಕ್ಕೆ ಇಲ್ಲಿ ಗೆಲವು ಮರೀಚಿಕೆಯೆ ಆಗಿದೆ.

    1983 ರಲ್ಲಿ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಚನೆಯಾಗಿದ್ದರಿಂದ, 1984 ರ ಲೋಕಸಭಾ ಚುನಾವಣೆ ಮಹತ್ವ ಪಡೆದುಕೊಂಡಿತ್ತು. ಮೈಸೂರಿನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್ ಅಭ್ಯರ್ಥಿಯಾದರು. ಮೊದಲಿಗೆ ಜನತಾ ಪಕ್ಷವು ನಗರದ ಮೊದಲ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರೂ ಆಗಿದ್ದ ಮಾಜಿ ಸಚಿವ ಕೆ. ಪುಟ್ಟಸ್ವಾಮಿ ಅವರ ಪುತ್ರ ಪಿ. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಿತು. ಅವರ ಬಿ ಫಾರಂ ಸಲ್ಲಿಸಿಯಾಗಿತ್ತು. ನಂತರ ಅಂದಿನ ಹನೂರು ಶಾಸಕ ಕೆ.ಪಿ. ಶಾಂತಮೂರ್ತಿ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿತು. ಹೀಗಾಗಿ ಜನತಾಪಕ್ಷದ ‘ನೇಗಿಲು ಹೊತ್ತ ರೈತ’ ನ ಗುರುತು ವಿಶ್ವನಾಥ್ ಪಾಲಾಗಿದ್ದರಿಂದ ಶಾಂತಮೂರ್ತಿ ‘ಎರಡು ಎಲೆ’ ಗುರುತಿನಿಂದ ಜನತಾಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಇದನ್ನೂ ಓದಿ: ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!

    1989 ರ ಲೋಕಸಭಾ ಚುನಾವಣೆ ವೇಳೆಗೆ ಜನತಾಪಕ್ಷ ಇಬ್ಭಾಗವಾಗಿತ್ತು. ಜನತಾದಳದಿಂದ ಪ. ಮಲ್ಲೇಶ್ ಹಾಗೂ ಸಮಾಜವಾದಿ ಜನತಾ ಪಕ್ಷದಿಂದ ಡಿ. ಮಾದೇಗೌಡ ಸ್ಪರ್ಧಿಸಿ, ಸೋತರು. 1991 ರಲ್ಲಿ ಮತ್ತೆ ಡಿ. ಮಾದೇಗೌಡ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡರು.

    1996 ರಲ್ಲಿ ಜಿ.ಟಿ.ದೇವೇಗೌಡ ಜನತಾದಳ ಅಭ್ಯರ್ಥಿಯಾಗಿ 11,676 ಮತಗಳ ಅಂತರದಿಂದ ಸೋತರು. 1998 ರಲ್ಲಿ ಜಿ.ಟಿ.ದೇವೇಗೌಡ ಮತ್ತೆ ಜನತಾದಳದ ಅಭ್ಯರ್ಥಿ. ಆದರೆ ಮೂರನೇ ಸ್ಥಾನಕ್ಕೆ ಹೋದರು. 1999 ರಲ್ಲಿ ಬಿ.ಎಸ್. ಮರಿಲಿಂಗಯ್ಯ ಜೆಡಿಎಸ್ ಅಭ್ಯರ್ಥಿಯಾಗಿ ಹೀನಾಯವಾಗಿ ಸೋತರು. 2004 ರಲ್ಲಿ ಮಾಜಿ ಶಾಸಕ ಎ.ಎಸ್. ಗುರುಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ 10,150 ಮತಗಳ ಅಂತರದಿಂದ ಸೋತರು. ಇದನ್ನೂ ಓದಿ: ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!

    2009 ರಲ್ಲಿ ಬಿ.ಎ. ಜೀವಿಜಯ, 2014 ರಲ್ಲಿ ನ್ಯಾ. ಚಂದ್ರಶೇಖರಯ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಒಟ್ಟಾರೆ 1996 ಹಾಗೂ 2004 ರಲ್ಲಿ ಜನತಾದಳ ಅಲೆ ಇದ್ದಿದ್ದರಿಂದ ಜನತಾ ಪರಿವಾರದ ಅಭ್ಯಥಿಗಳು ಗೆಲುವಿನ ಸಮೀಪ ಬಂದಿದ್ದರು, ಆದರೆ ಗೆಲ್ಲಲಾಗಲಿಲ್ಲ. ಸಿದ್ದರಾಮಯ್ಯ, ವಿ. ಶ್ರೀನಿವಾಸಪ್ರಸಾದ್, ಡಾ.ಹೆಚ್.ಸಿ. ಮಹದೇವಪ್ಪ, ಹೆಚ್.ಎಸ್. ಮಹದೇವಪ್ರಸಾದ್ ಅವರಂಥ ಘಟಾನುಘಟಿ ನಾಯಕರು ಪಕ್ಷದಲ್ಲಿ ಇದ್ದಾಗಲೇ ಜನತಾ ಪರಿವಾರ ಗೆದ್ದಿಲ್ಲ ಎಂಬುದು ವಿಶೇಷ.

  • ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!

    ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!

    ಮೈಸೂರು: ಲೋಕಸಭಾ ಕ್ಷೇತ್ರ (Lok Sabha Election 2024) ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ ನಾಲ್ಕು ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ ಹಳೆಯ ಮೈಸೂರು (Mysuru) ಸೀಮೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.

    28 ವರ್ಷಗಳಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಹೋರಾಟ ನಡೆಯುತ್ತಿತ್ತು. 2019 ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಡುವೆ ನೇರ ಹೋರಾಟ. ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ ಮೈತ್ರಿಕೂಟ ಹೊಂದಾಣಿಕೆ ಮಾಡಿಕೊಂಡು ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಇದಕ್ಕೆ ಕಾರಣ. 1962 ರಿಂದ ಮೈಸೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹೆಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರಕ್ಕೆ ಸೀಮಿತವಾಗಿದ್ದ ಕ್ಷೇತ್ರ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ

    2009 ರಿಂದ ಮೈಸೂರಿನ ಆರು ಹಾಗೂ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆ ಮುಂಚೆ ಮಂಗಳೂರು ಕ್ಷೇತ್ರಕ್ಕೆ ಸೇರಿತ್ತು. 1952 ರಲ್ಲಿ ಕಿಸಾನ್ ಮಜೂರ್ ಪ್ರಜಾಪಾರ್ಟಿಯ (ಕೆಎಂಪಿಪಿ) ಎಂ.ಎಸ್. ಗುರುಪಾದಸ್ವಾಮಿ ಗೆದ್ದಿದ್ದನ್ನು ಹೊರತುಪಡಿಸಿದರೆ 1996 ರವರೆಗೆ ಮೈಸೂರು ಕಾಂಗ್ರೆಸ್ಸಿನ ಭದ್ರಕೋಟೆ. 1998, 2004, 2014, 2019 ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ಛಿದ್ರ ಮಾಡಿ, ‘ಕಮಲ’ ಅರಳಿಸಿದೆ. 1998 ರಿಂದ 2014 ರವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಣ್ಣಾಮುಚ್ಚಾಲೆ ನಡೆದಿದೆ. ಒಂದು ಬಾರಿ ಬಿಜೆಪಿ, ಮತ್ತೊಂದು ಬಾರಿ ಕಾಂಗ್ರೆಸ್ ಎಂಬಂತೆ ಈ ನಾಲ್ಕು ಅವಧಿಯಲ್ಲಿ ಫಲಿತಾಂಶ ಬಂದಿತ್ತು. ಆದರೆ 2019 ರಲ್ಲಿ ಬಿಜೆಪಿ ಸತತ ಎರಡನೇ ಗೆಲವು ದಾಖಲಿಸಿತು.

    ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984 ರಲ್ಲಿ ರಾಜಕಾರಣ ಪ್ರವೇಶ ಮಾಡಿದ ನಂತರ ರಾಜರ ಕೋಟೆಯಾಗಿತ್ತು. ಕಾಂಗ್ರೆಸ್ ಹಾಗೂ ರಾಜರ ಕೋಟೆಗೆ ಲಗ್ಗೆ ಹಾಕುವುದರಲ್ಲಿ ಬಿಜೆಪಿ ನಾಲ್ಕು ಬಾರಿ ಯಶಸ್ವಿಯಾಗಿದೆ. 1998 ರವರೆಗೆ ಆ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗುತ್ತಿರಲಿಲ್ಲ ಎಂಬುದು ಗಮನಾರ್ಹ. ತೋಂಟದಾರ್ಯ ಕಾಯಂ ಅಭ್ಯರ್ಥಿ ಎಂಬಂತೆ ಆಗಿದ್ದರು. ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್ ಅವರಂಥ ಘಟಾನುಘಟಿ ನಾಯಕರಿದ್ದಾಗಲೂ ಜನತಾ ಪರಿವಾರ ಈ ಕ್ಷೇತ್ರದಲ್ಲಿ ಈವರೆಗೆ ಖಾತೆ ತೆರೆದಿಲ್ಲ. 1996 ರವರೆಗೆ ಆ ಪಕ್ಷಕ್ಕೆ ಎರಡನೇ ಸ್ಥಾನ ಕಾಯಂ. 1998, 1999, 2009 ಹಾಗೂ 2014 ರಲ್ಲಿ ತೃತೀಯ ಸ್ಥಾನಕ್ಕೆ ಕುಸಿಯಿತು. 1984 ರಲ್ಲಿ ಪ್ರಬಲ ಪೈಪೋಟಿ ನೀಡಿತ್ತು. 1996, 2004 ರಲ್ಲಿ ಕ್ರಮವಾಗಿ ಜನತಾ ಪರಿವಾರದ ಜಿ.ಟಿ. ದೇವೇಗೌಡ, ಎ.ಎಸ್, ಗುರುಸ್ವಾಮಿ ಜಯದ ಹೊಸ್ತಿಲಿಗೆ ಬಂದು, ಸೋತರು. ಇದನ್ನೂ ಓದಿ: ‘ಲೋಕ’ಸಮರಕ್ಕೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್‌ ಬಾಬು

    ಈವರೆಗೆ ಗೆದ್ದಿರುವವರು
    1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)
    1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್)
    1962- ಎಂ. ಶಂಕರಯ್ಯ ( ಕಾಂಗ್ರೆಸ್)
    1967- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
    1971- ಎಚ್.ಡಿ. ತುಳಸಿದಾಸ್ ( ಕಾಂಗ್ರೆಸ್)
    1977- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
    1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)
    1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ( ಕಾಂಗ್ರೆಸ್)
    1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
    1991- ಚಂದ್ರಪ್ರಭ ಅರಸು ( ಕಾಂಗ್ರೆಸ್)
    1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
    1998- ಸಿ.ಎಚ್. ವಿಜಯಶಂಕರ್ (ಬಿಜೆಪಿ)
    1999- ಶ್ರೀಕಂಠದತ್ತನರಸಿಂಹರಾಜ ಒಡೆಯರ್ ( ಕಾಂಗ್ರೆಸ್)
    2004- ಸಿ.ಎಚ್. ವಿಜಯಶಂಕರ್ (ಬಿಜೆಪಿ)
    2009- ಎಚ್. ವಿಶ್ವನಾಥ್ (ಕಾಂಗ್ರೆಸ್)
    2014- ಪ್ರತಾಪ್‌ ಸಿಂಹ (ಬಿಜೆಪಿ)
    2019 – ಪ್ರತಾಪ್ ಸಿಂಹ (ಬಿಜೆಪಿ)

  • ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!

    ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!

    ಮೈಸೂರು: ಲೋಕಸಭೆಗೆ 9ನೇ ಸಾರ್ವತ್ರಿಕ ಚುನಾವಣೆ 1989ರಲ್ಲಿ ನಡೆಯಿತು. ಮೈಸೂರು (Mysuru Lok Sabha) ಸಾಮಾನ್ಯ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸತತ ಎರಡನೇ ಬಾರಿಗೆ ಗೆದ್ದಿದ್ದರು.

    ಆ ಸಂದರ್ಭದಲ್ಲಿ ಜನತಾ ಪಕ್ಷ ವಿಭಜನೆಯಾಗಿತ್ತು. ಜನತಾದಳ ಹಾಗೂ ಜನತಾಪಕ್ಷ (ಜೆಪಿ) ಎಂದು ಇಬ್ಬಣಗಳಾಗಿ ಕಣದಲ್ಲಿತ್ತು. ಇದರಿಂದ ಕಾಂಗ್ರೆಸ್‌ಗೆ (Congress) ಸುಲಭ ಜಯ ಸಿಕ್ಕಿತು. ಮೈಸೂರು ಕ್ಷೇತ್ರದಲ್ಲಿ 10,52,491 ಮತದಾರರ ಪೈಕಿ ಶೇ.69.74 ರಷ್ಟು ಮತದಾನವಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡಯರ್ 3,84,888 ಮತಗಳು ಪಡೆದು ಬಹು ದೊಡ್ಡ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು

    ಒಡೆಯರ್‌ ಸಮೀಪದ ಪ್ರತಿಸ್ಪರ್ಧಿ ಜನತಾಪಕ್ಷ (ಜೆಪಿ) ಅಭ್ಯರ್ಥಿ ಡಿ. ಮಾದೇಗೌಡ- 1,35,524, ಜನತಾದಳದ ಪ. ಮಲ್ಲೇಶ್- 1,31,905, ಬಿಜೆಪಿಯ ತೋಂಟದಾರ್ಯ- 25,398, ಪಕ್ಷೇತರರಾದ ಡಿ. ಕಾಳಸ್ವಾಮಿ- 7,013, ಪತ್ರಕರ್ತರಾಗಿದ್ದ ಶಫಿ ಅಹ್ಮದ್ ಷರೀಫ್ – 4,230, ಮೈಸೂರು ಗ್ರಾಹಕ ಪಂಚಾಯತ್‌ ಭಾಮಿ ವಿ. ಶೆಣೈ- 2,644 ಮತಗಳನ್ನು ಪಡೆದಿದ್ದರು. ಒಡೆಯರ್ ಅವರ ಈ ಗೆಲುವು ಅವತ್ತಿನ ಮಟ್ಟಿಗೆ ದಾಖಲೆ.