Tag: Mysuru Dasara 2020

  • ದಸರಾ ಯಶಸ್ಸಿಗೆ ಹೊತ್ತಿದ್ದ ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ದಸರಾ ಯಶಸ್ಸಿಗೆ ಹೊತ್ತಿದ್ದ ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ಮೈಸೂರು: ನಾಡಹಬ್ಬ ದಸರಾ ಯಶಸ್ವಿಯಾಗಲು ಹೊತ್ತಿದ್ದ ಹರಕೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತೀರಿಸಿದ್ದಾರೆ.

    ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ರೋಹಿಣಿ ಸಿಂಧೂರಿ ತಾನು ಹೊತ್ತಿದ್ದ ಹರಕೆಯನ್ನು ಒಪ್ಪಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ದಸರಾ ಹೊತ್ತಿನಲ್ಲೇ ಮೈಸೂರಿಗೆ ಡಿಸಿಯಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ಸುಸೂತ್ರವಾಗಿ ನಡೆಯುವಂತೆ ಹರಕೆ ಹೊತ್ತಿದ್ದರು.

    ನವರಾತ್ರಿಯ 9 ನೇ ದಿನ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ. ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ರೋಹಿಣಿ ಕುಟುಂಬ ಸಂಜೆ ಬೆಟ್ಟಕ್ಕೆ ತೆರಳಿ ರಥ ಎಳೆದಿದೆ.

    ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅಂದ್ರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತಿದ್ದ ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದಾಗಿ ಈ ಬಾರಿ ಜಂಬೂ ಸವಾರಿ ಈ ಬಾರಿ ಕೇವಲ 500 ಮೀಟರ್‍ಗೆ ಸೀಮಿತವಾಗಿತ್ತು. ಜಂಬೂಸವಾರಿ ಕಾರ್ಯಕ್ರಮ ಆರಂಭವಾಗೋದೇ ನಾಡದೊರೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ. ಕುಂಭಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ್ರು. ಸಿಎಂ ಯಡಿಯೂರಪ್ಪ ಜೊತೆ ಎಸ್‍ಟಿ ಸೋಮಶೇಖರ್, ಸಿಟಿ ರವಿ, ಪ್ರತಾಪ್ ಸಿಂಹ ಭಾಗಿಯಾಗಿದ್ರು.

    ಕೊರೊನಾದಿಂದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕೇವಲ 23 ನಿಮಿಷದಲ್ಲಿ ಮುಕ್ತಾಯಗೊಂಡಿತು. ಕೊರೊನಾ ಇದ್ದಿದ್ದರಿಂದ ಸರ್ಕಾರದ ಆದೇಶದನ್ವಯ ಕೇವಲ 500 ಮೀಟರ್ ಮಾತ್ರ ಜಂಬೂಸವಾರಿ ಸಾಗಿತು. ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಹೊತ್ತ ಅಭಿಮನ್ಯು, ಐದೂವರೆ ಕಿ.ಮೀ. ದೂರದ ಬನ್ನಿಮಟ್ಟಪದ ಬದಲಿಗೆ ಅರಮನೆ ಆವರಣದಲ್ಲಿ 500 ಮೀಟರ್ ಮಾತ್ರ ಹೆಜ್ಜೆ ಹಾಕಿದ್ದಾನೆ.

  • ವಿಶ್ವವಿಖ್ಯಾತ ಮೈಸೂರು ದಸರಾ- ಕೊರೊನಾದಿಂದಾಗಿ ಸರಳವಾಗಿ ಆಚರಣೆ

    ವಿಶ್ವವಿಖ್ಯಾತ ಮೈಸೂರು ದಸರಾ- ಕೊರೊನಾದಿಂದಾಗಿ ಸರಳವಾಗಿ ಆಚರಣೆ

    – ಕೇವಲ 300 ಮಂದಿ ಭಾಗಿಗಷ್ಟೇ ಅವಕಾಶ

    ಮೈಸೂರು: ದಸರಾ ಅಂದ್ರೇನೇ ರೋಮಾಂಚನ ಆಗುತ್ತೆ. ದಸರಾದ ಅದ್ಧೂರಿತನ ನೋಡೋದೇ ಚಂದ. ಆದರೆ ಈ ಬಾರಿ ವಿಶ್ವವಿಖ್ಯಾತ ದಸರಾ ಸಂಭ್ರಮವನ್ನು ಕೊರೊನಾ ಕಿತ್ತುಕೊಂಡಿದೆ. ಇಂದು ಜಂಬೂ ಸವಾರಿ ನಡೆಯಲಿದೆ. ನಿನ್ನೆ ಅರಮನೆಯಲ್ಲಿ ಆಯುಧಪೂಜೆ ನೆರವೇರಿಸಲಾಯ್ತು.

    ಪಟ್ಟದ ಆನೆ, ಕುದುರೆ, ಹಸು, ಒಂಟೆಗಳನ್ನ ಆನೆ ಬಾಗಿಲ ಬಳಿಯಿಂದ ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ಕರೆತರಲಾಯಿತು. ಈ ವೇಳೆ ಪಲ್ಲಕ್ಕಿ ಮೇಲಿದ್ದ ಪಟ್ಟದ ಕತ್ತಿ ಸಮೇತ ರಾಜವಂಶಸ್ಥರು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು. ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಯದವೀರ್ ಪೂಜೆ ಸಲ್ಲಿಸಿದ್ರು. ನಂತರ ಸವಾರಿ ತೊಟ್ಟಿಯಲ್ಲಿ ಆನೆ, ಒಂಟೆ, ಕುದುರೆ, ಪಲ್ಲಕಿ, ಕುದುರೆಗಳಿಗೂ ಮತ್ತು ಕಾರುಗಳಿಗೂ ಯದುವೀರ್ ಪೂಜೆ ಸಲ್ಲಿಸಿದ್ರು.

    ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಜಂಬೂಸವಾರಿ ಗಜಪಡೆಗೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಶೃಂಗಾರಗೊಂಡಿದ್ದ ಆನೆಗಳಿಗೆ ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ, ಹಣ್ಣು ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಸಲಾಯ್ತು. ಇದೇ ವೇಳೆ, ಅಭಿಮನ್ಯು ಆನೆಯ ಮಾವುತ, ಕಾವಾಡಿಗನ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯ್ತು.

    300 ಮೀಟರ್ ಜಂಬೂಸವಾರಿ, 300 ಮಂದಿಗಷ್ಟೇ ಅವಕಾಶ:
    ಇಂದು ಸರಳ ದಸರೆಯ ಜಂಬೂಸವಾರಿ ನಡೆಯಲಿದೆ. ಇದೇ ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತು ಗಾಂಭೀರ್ಯದ ಹೆಜ್ಜೆ ಹಾಕಲಿದ್ದಾನೆ. ಆದರೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಲ್ಲ. ಇಷ್ಟು ಸಮಯ ಐದೂವರೆ ಕಿಲೋ ಮೀಟರ್ ನಡೀತಿದ್ದ ಜಂಬೂ ಸವಾರಿ ಈ ಬಾರಿ ಕೇವಲ 400 ಮೀಟರ್‍ಗಷ್ಟೇ ಸೀಮಿತವಾಗಿದೆ. ಅಲ್ಲದೇ ಈ ಬಾರಿ ಕೇವಲ 30 ರಿಂದ 40 ನಿಮಿಷಗಳಲ್ಲಿ ಜಂಬೂಸವಾರಿ ಪೂರ್ಣಗೊಳ್ಳಲಿದೆ.

    ಅರಮನೆ ಆವರಣದಲ್ಲಷ್ಟೇ ಸರಳವಾಗಿ ಚಾಮುಂಡಿ ಅಮ್ಮನ ಅಂಬಾರಿ ಸಾಗಲಿದೆ. ಕೇವಲ 300 ಮಂದಿಗಷ್ಟೇ ಅವಕಾಶ ನೀಡಲಾಗಿದೆ. ಇದಕ್ಕಾಗಿ ಕುರ್ಚಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿ ತೆರಳುವ ಎಡ ಮತ್ತು ಬಲ ಭಾಗದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ಹತ್ತಿ ದಸರಾ ವೀಕ್ಷಣೆಗೆ ಅವಕಾಶ ಇಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ. ಅರಮನೆಯಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಇಂದು ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಬನ್ನಿಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.59 ರಿಂದ 3.20ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 4.15ರೊಳಗೆ ಸಲ್ಲುವ ಶುಭ ಕುಂಭಲಗ್ನದಲ್ಲಿ ಸಿಎಂ ಚಾಮುಂಡಿದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಂಬೂ ಸವಾರಿಯಲ್ಲಿ 2 ಟ್ಯಾಬ್ಲೋ, ಕೆಲವೇ ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ. ಇನ್ನು ಬನ್ನಿ ಮಂಟಪದಲ್ಲಿ ಪಂಜಿನ ಕವಾಯತನ್ನು ಈ ಬಾರಿ ರದ್ದುಗೊಳಿಸಲಾಗಿದೆ.

    ಇಂದಿನ ಸರಳಾತಿ ಸರಳ ದಸರಾ ಜಂಬೂಸವಾರಿ ಹಿನ್ನೆಲೆ ಮೈಸೂರು ಅರಮನೆಯ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅರಮನೆಯ ಸುತ್ತಲಿನ ಕನಿಷ್ಠ 200 ಮೀಟರ್ ದೂರದಲ್ಲೂ ಯಾರು ನಿಲ್ಲುವಂತಿಲ್ಲ. ಕಟ್ಟಡಗಳನ್ನ ಹತ್ತಿ ದಸರಾ ವೀಕ್ಷಿಸುವಂತಿಲ್ಲ ಎಂದು ಆದೇಶಿಸಲಾಗಿದೆ.

  • ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು: ಡಾ. ಮಂಜುನಾಥ್

    ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು: ಡಾ. ಮಂಜುನಾಥ್

    – ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವವಿದು
    – ಮುಂದಿನ ವರ್ಷವೇ ಕೊರೊನಾಗೆ ಲಸಿಕೆ

    ಮೈಸೂರು: ದಸರಾ ಉದ್ಘಾಟಿಸಿದ್ದು ನನ್ನ ಜೀವಿತಾವಧಿಯ ದೊಡ್ಡ ಗೌರವವಿದು. ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವವಿದು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

    ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು. ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್ ಆಗಿದೆ. ಎರಡರ ನಡುವೆ ಸಮತೋಲನವಾಗಬೇಕು. ಇಂದು ನನಗಾಗಿ ನಾನು ಏನನ್ನೂ ಚಾಮುಂಡಿ ದೇವಿಯ ಬಳಿ ಬೇಡಿಲ್ಲ. ಕೊರೊನಾ ಲಸಿಕೆ ಬೇಗ ಬರಲಿ, ಕೊರೊನಾ ಸಂಪೂರ್ಣ ನಿವಾರಣೆಯಾಗಲಿ, ಜಲಪ್ರವಾಹ ಕಡಮೆಯಾಗಲಿ ಎಂದು ದೇವರ ಬಳಿ ಬೇಡಿದ್ದೇನೆ ಎಂದರು.

    ಮಾಡಬಾರದ್ದು ಮಾಡಿದರೆ, ತಿನ್ನಬಾರದ್ದನ್ನು ತಿಂದರೆ ಹೇಗೆ ವೈರಸ್ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ. ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಕೊರೊನಾ ವಾರಿಯರ್ಸ್ ಮೃತರಾದರೆ ಅವರನ್ನು ಹುತಾತ್ಮರ ಎಂದು ಕರೆಯಬೇಕು. ಹುತಾತ್ಮ ಯೋಧರಿಗೆ ಸಿಗುವ ಗೌರವ ಕರೋನಾ ವಾರಿಯರ್ಸ್ ಮೃತರಾದರೆ ಅವರಿಗೆ ಸಿಗಬೇಕು. ಕೊರೊನಾ ಪಾಸಿಟಿವ್ ಬಂದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ ಎಂದು ಹೇಳಿದರು.

    ಕೊರೊನಾ ಕಾಯಿಲೆಗಿಂತ ಕೊರೊನಾದ ಭಯವೇ ದೊಡ್ಡ ಕಾಯಿಲೆಯಾಗಿದೆ. ವೈದ್ಯರೇ ರೋಗಿಗಳಾಗುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು. ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ ವೈದ್ಯರು ಗ್ರಾಮೀಣ ಭಾಗಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಮೇಲೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಹೊರಗಿಟ್ಟು ಜಿಲ್ಲಾ ಕೇಂದ್ರದಿಂದ ನಿರ್ವಹಣೆ ಮಾಡಿಸಬೇಕು ಎಂದರು.

    ಸಾಮಾಜಿಕ ಜಾಲತಾಣಗಳು ಸಮಾಜ ಕಟ್ಟಬೇಕಿತ್ತು. ಆದರೆ ಅವು ಸಮಾಜವನ್ನು ತಪ್ಪು ದಾರಿಗೆ ತಳ್ಳುತ್ತಿದೆ. ಇದು ವಿಷಾದನೀಯ. ಜಯದೇವ ಆಸ್ಪತ್ರೆಯಲ್ಲಿ ಈವರೆಗೆ 50 ಲಕ್ಷ ಜನರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. 5 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕೊರೊನಾಗೆ ಈ ವರ್ಷ ಲಸಿಕೆ ಬರುವ ಲಕ್ಷಣಗಳಿಲ್ಲ. ಮುಂದಿನ ವರ್ಷದ ಫೆಬ್ರವರಿ, ಮಾರ್ಚ್ ನಲ್ಲಿ ಲಸಿಕೆ ಬರಬಹುದು ಎಂದು ಮಾಹಿತಿ ನೀಡಿದರು.

  • ಮೈಸೂರಿನ ಪ್ರವಾಸಿ ತಾಣಗಳು ಓಪನ್: ಎಸ್.ಟಿ ಸೋಮಶೇಖರ್

    ಮೈಸೂರಿನ ಪ್ರವಾಸಿ ತಾಣಗಳು ಓಪನ್: ಎಸ್.ಟಿ ಸೋಮಶೇಖರ್

    ಮೈಸೂರು: ಪ್ರವಾಸಿ ತಾಣಗಳು ಇಂದಿನಿಂದ ಓಪನ್ ಮಾಡುವಂತೆ ಸಚಿವ ಎಸ್ ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ.

    ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶದ ಮೇರೆಗೆ ತೆರೆಯುವಂತೆ ಸಚಿವರು ಘೋಷಿಸಿದ್ದಾರೆ.

    ಚಾಮುಂಡಿ ಬೆಟ್ಟ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಅರಮನೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನವೆಂಬರ್ 1 ರವೆಗೂ ಮೈಸೂರು ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮೈಸೂರಿನ ಹಲವು ಸಂಘ ಸಂಸ್ಥೆಗಳು ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡವು. ಈ ಮನವಿಗೆ ಸಿಎಂ ಸ್ಪಂದಿಸಿದ್ದು, ಸದ್ಯ ಎಲ್ಲಾ ಪ್ರವಾಸಿತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿದೆ.

    ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

    ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

  • ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ಮಡಿಕೇರಿ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲು ಕೊಡಗಿನ ನಾಲ್ಕು ಆನೆಗಳು ಆಯ್ಕೆಯಾಗಿವೆ. ಆನೆಗಳ ದೇಹದಾಡ್ರ್ಯ ಮತ್ತು ಆರೋಗ್ಯ ಪರಿಶೀಲನೆ ಮಾಡಿರುವ ವಜ್ಯಜೀವಿ ವೈದ್ಯರು ಮತ್ತು ಅರಣ್ಯ ಇಲಾಖೆ, ಉನ್ನತ ಅಧಿಕಾರಿಗಳು ತಿಂಗಳಾಂತ್ಯಕ್ಕೆ ಆನೆಗಳನ್ನು ಮೈಸೂರಿಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದಾರೆ.

    ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮೆರಗು ಅಂದ್ರೆ ಅದು ಜಂಬೂ ಸವಾರಿ. ಆದರೆ ಈ ಬಾರಿ ವಿಶ್ವಕ್ಕೆ ಬಂದೊದಗಿರುವ ಕೊರೊನಾ ಮಹಾಮಾರಿ ಮೈಸೂರು ದಸರಾದ ಜಂಬೂ ಸವಾರಿ ಮೇಲೂ ಕರಿನೆರಳು ಬೀರಿದೆ. ಹೀಗಾಗಿ ಈ ಬಾರಿ ನಡೆಯುತ್ತಿರುವ ಸರಳ ದಸರಾಕ್ಕೆ ಕೊಡಗಿನ ಆನೆ ಶಿಬಿರದ ನಾಲ್ಕು ಆನೆಗಳು ಆಯ್ಕೆಯಾಗಿವೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಕಾವೇರಿ, ಗೋಪಿ, ವಿಜಯ ಮತ್ತು ವಿಕ್ರಮ ಆನೆಗಳು ಈ ಬಾರಿಯ ದಸರಾಕ್ಕೆ ಆಯ್ಕೆಯಾಗಿವೆ. ಗೋಪಿ ಮತ್ತು ಕಾವೇರಿ ಆನೆಗಳು ತಲಾ ಒಂಬತ್ತು ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸಿವೆ. ವಿಕ್ರಮ ಕೂಡ ಆರೇಳು ಬಾರಿ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ವಿಕ್ರಮ ಆನೆಯೂ ಹತ್ತಕ್ಕೂ ಹೆಚ್ಚು ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ಹೀಗಾಗಿ ಈ ಆನೆಗಳು ದಸರಾದಲ್ಲಿ ಭಾಗವಹಿಸುವುದು ಸೂಕ್ತವೆಂದು ನಿರ್ಧರಿಸಿ ಈ ತಿಂಗಳ ಅಂತ್ಯದೊಳಗೆ ಆನೆಗಳನ್ನು ಮೈಸೂರಿಗೆ ಸಾಗಿಸಲಿದ್ದಾರೆ.

    ಪ್ರತೀ ವರ್ಷ ಕೊಡಗಿನ ದುಬಾರೆ ಆನೆ ಶಿಬಿರದಿಂದ ಏಳು ಆನೆಗಳು ದಸರಾಕ್ಕೆ ಭಾಗವಹಿಸುತ್ತಿದ್ದವು. ಜೊತೆಗೆ ಅಷ್ಟೂ ಆನೆಗಳ ಮಾವುತ, ಕವಾಡಿಗ ಮತ್ತು ಅವರ ಕುಟುಂಬಗಳು ದಸಾರಕ್ಕೆ ಹೋಗುತ್ತಿದ್ದವು. ತಿಂಗಳುಗಟ್ಟಲೆ ಆ ಕುಟುಂಬಗಳು ಮೈಸೂರು ಅರಮನೆ ಆವರಣದಲ್ಲಿದ್ದು ಮೈಸೂರು ದಸರಾದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳುತ್ತಿದ್ದವು. ಈ ಬಾರಿ ಅದ್ಯಾವುದಕ್ಕೂ ಅವಕಾಶವೇ ಇಲ್ಲ. ಬದಲಾಗಿ ನಾಲ್ಕು ಆನೆಗಳ ಮಾವುತರು ಮತ್ತು ಕವಾಡಿಗರು ಮಾತ್ರವೇ ಭಾಗವಹಿಸಲಿದ್ದಾರೆ.

  • ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆ – ಏನಿರುತ್ತೆ? ಏನಿರಲ್ಲ?

    ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆ – ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಈ ಬಾರಿಯ 2020ರ ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

    ದಸರಾ ಆಚರಣೆ ಕುರಿತು ಚರ್ಚಿಸಲು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸಿಟಿ ರವಿ, ಚಾಮುಂಡಿ ಬೆಟ್ಟ, ಅರಮನೆಗೆ ಮಾತ್ರ ಈ ಬಾರಿ ದಸರಾ ಸೀಮಿತವಾಗಿರಬೇಕು ಎಂದು ಉನ್ನತ ಮಟ್ಟದ ಸಮಿತಿಯಿಂದ ತೀರ್ಮಾನ ಮಾಡಲಾಗಿದೆ. ಅರಮನೆಯಲ್ಲಿ ಹಾಗೂ ಚಾಮುಂಡಿ ಬೆಟ್ಟದಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ಇರುತ್ತೆ. ಯುವ ದಸರಾ, ವಸ್ತು ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸದೇ ಇರಲು ನಿರ್ಧಾರ ಮಾಡಲಾಗಿದ್ದು, ಅರಮನೆ ಒಳಗೆ ಮಾತ್ರ ಜಂಬೂ ಸವಾರಿ ನಡೆಯಲಿದೆ ಎಂದು ತಿಳಿಸಿದರು.

    ಈ ಬಾರಿ ಕೊರೊನಾ ವಾರಿಯರ್ಸ್ ಗಳಿಂದ ದಸರಾ ಉದ್ಘಾಟನೆ ಮಾಡಲಾಗುವುದು. ದಸರಾಗೆ ಪ್ರಾರಂಭಿಕವಾಗಿ 10 ಕೋಟಿ ರೂ. ಬಿಡುಗಡೆಗೆ ಮಾಡಲು ನಿರ್ಧಾರ ಮಾಡಲಾಗಿದ್ದು, ದಸರಾದಲ್ಲಿ ಚೀನಿ ವಸ್ತುಗಳು ಸಂಪೂರ್ಣ ನಿಷೇಧ ಮಾಡಲಾಗಿದೆ. ಅಲ್ಲದೇ ಈ ಬಾರಿ ದಸರಾಗೆ ಆನೆಗಳ ಸಂಖ್ಯೆಯಲ್ಲಿ ಇಳಿಕೆ ಮಾಡಲಾಗಿದ್ದು, 10ಕ್ಕೂ ಹೆಚ್ಚು ಆನೆಗಳ ಬದಲಾಗಿ ಕೇವಲ 5 ಆನೆಗಳು ಮಾತ್ರ ಇರುತ್ತದೆ. ಆದರೆ ಅರಮನೆ ಆವರಣದಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ. ಮೈಸೂರಿನಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಏನಿರುತ್ತೆ?
    * ಈ ವರ್ಷ ಕೇವಲ ಚಾಮುಂಡಿ ಬೆಟ್ಟ, ಅರಮನೆ ಒಳಗೆ ಮಾತ್ರ ಆಚರಣೆ. ಜನಸಂದಣಿಗೆ ಅವಕಾಶ ನೀಡದಂತೆ ಮೈಸೂರು ದಸರಾ ಆಚರಣೆ.
    * ಸಂಪ್ರದಾಯಕ್ಕೆ ಸೀಮಿತವಾಗಿ ಈ ಬಾರಿ ದಸರಾ ಸಂಭ್ರಮಾಚರಣೆ ನಡೆಯಲಿದ್ದು, ಚಾಮುಂಡಿ ಬೆಟ್ಟ, ಅರಮನೆ ಒಳಗೆ ಮಾತ್ರ ದಸರಾ ಆಚರಣೆ.
    * ಆರಮನೆ ಆವರಣದಲ್ಲಿ ಜಂಬೂ ಸವಾರಿ ನಡೆಯಲಿದ್ದು, ಈ ಬಾರಿ ದಸರಾಗೆ 5 ಆನೆಗಳು ಮಾತ್ರ ಆಗಮನ.
    * 5 ಜನ ಕೊರೊನಾ ವಾರಿಯರ್ಸ್ ಗಳಿಂದ ಈ ಬಾರಿ ದಸರಾ ಉದ್ಘಾಟನೆ ಮಾಡಲಿದ್ದು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆ, ಪೌರ ಕಾರ್ಮಿಕರು, ಪೊಲೀಸ್ ರಿಂದ ಉದ್ಘಾಟನೆ ನಡೆಯಲಿದೆ.
    * ಸಂಪ್ರದಾಯಕ್ಕೆ ಸೀಮಿತವಾಗಿ ಕುಸ್ತಿ ಪಂದ್ಯ ಆಯೋಜನೆ ಮಾಡಲಾಗುತ್ತದೆ.
    * ನಗರದ ಪ್ರಮುಖ ಬೀದಿಗಳು, ಸರ್ಕಲ್ ನಲ್ಲಿ ದೀಪಾಲಂಕಾರ ಮಾಡಲಾಗುತ್ತದೆ.
    * ದಸರಾ ಆಚರಣೆಗೆ ಸಿಎಂ ಅವರಿಂದ 10 ಕೋಟಿ ರೂ. ಮತ್ತು ಮೂಡಾ ದಿಂದ 5 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ.

    ಏನಿರಲ್ಲ?
    * ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು.
    * ಯುವ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ, ಯೋಗ ದಸರಾ ವಸ್ತು ಪ್ರದರ್ಶನ, ಫಲ ಪುಷ್ಪ ಪ್ರದರ್ಶನ.
    * ಚಿತ್ರೋತ್ಸವ, ಹಾಸ್ಯೋತ್ಸವ, ಸಂಗೀತ ಸಂಜೆ, ಕವಿಗೋಷ್ಠಿ, ಸಾಹಸ ಕ್ರೀಡೆ, ಆಹಾರ ಮೇಳೆ, ಕುಸ್ತಿ ಪಂದ್ಯ.
    * ರೈತ ದಸರಾ, ರಾಜ್ಯ ದಸರಾ ಕ್ರೀಡಾ ಕೂಟ, ಏರ್ ಶೋ, ಹೆಲಿ ರೈಡ್, ಚಿತ್ರ ಸಂತೆ, ಹಸಿರು ಸಂತೆ, ಹಾಟ್ ಏರ್ ಬಲ್ಯೂನ್, ಮತ್ಸ್ಯ ಮೇಳ.
    * ಪಂಜಿನ ಕವಾಯತು.

    ಸಭೆಯಲ್ಲಿ ಡಿಸಿಎಂಗಳಾದ ಕಾರಜೋಳ, ಲಕ್ಷ್ಮಣ ಸವದಿ, ಡಾ. ಅಶ್ವಥ್ ನಾರಾಯಣ, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ, ಮೈಸೂರು ಭಾಗದ ಜನಪ್ರತಿನಿಧಿಗಳು, ಮಂಡ್ಯ ಜಿಲ್ಲೆ ಜನಪ್ರತಿನಿಧಿಗಳು, ಮೈಸೂರು ಡಿಸಿ, ಮೈಸೂರು ಆಯುಕ್ತರು, ಎಸ್‍ಪಿ ಸೇರಿ ವಿವಿಧ ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು.