ಮೈಸೂರು: ದಸರಾ ಮುಗಿದ ನಾಲ್ಕು ದಿನದಲ್ಲಿಯೇ ನಾಡಿನ ಅಧಿದೇವತೆ, ಚಾಮುಂಡಿಬೆಟ್ಟದಲ್ಲಿ (Chamundi Hills) ನೆಲೆಸಿರುವ ಶ್ರೀ ಚಾಮುಂಡೇಶ್ವರಿ ರಥೋತ್ಸವ ಇಂದು (ಅ.6) ವೈಭವದಿಂದ ನೆರವೇರಿತು. ಕರ್ನಾಟಕದ ವಿವಿಧೆಡೆಯಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ನೆರವೇರಿದ ಚಾಮುಂಡೇಶ್ವರಿ ದೇವಿಯ ರಥೋತ್ಸವದಲ್ಲಿ ಭಕ್ತಿ ಭಾವ ಮೇಳೈಸಿತ್ತು.
ಬೃಹದಾಕಾರದ ರಥಕ್ಕೆ ವಿವಿಧ ಬಣ್ಣದ ಬಾವುಟಗಳನ್ನು ಕಟ್ಟಲಾಗಿತ್ತು. ಜೊತೆಗೆ ವಿವಿಧ ಬಗೆಯ ಹೂವುಗಳು, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗೆ ಚಿನ್ನ, ವಜ್ರ ವೈಢೂರ್ಯದ ಆಭರಣಗಳನ್ನು ಹಾಕಿ, ವಿಶೇಷ ಅಲಂಕಾರ ಮಾಡಲಾಗಿತ್ತು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರು ಮಹಾಮಂಗಳಾರತಿ ಮಾಡಿದ ಬಳಿಕ ರಥೋತ್ಸವ ಆರಂಭವಾಯಿತು. ಬೆಳಗ್ಗೆ 9:55ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ
ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಬೃಹತ್ ರಥ ದೇಗುಲವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿತು. ಸುಮಾರು ಒಂದು ಗಂಟೆ ಕಾಲ ಕ್ರಮಿಸಿದ ಬೃಹತ್ ರಥ ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ವಸ್ಥಾನಕ್ಕೆ ಬಂದು ತಲುಪಿತು. ರಥೋತ್ಸವ ಸಾಗಿದೆಡೆಯಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ರಥದ ಮೇಲೆ ಹಣ್ಣು, ಜವನ ಎಸೆದು ಹರಕೆ ತೀರಿಸಿದ ಭಕ್ತರು, ಜೈ ಚಾಮುಂಡಿ, ಉಘೇ ಉಘೇ ಚಾಮುಂಡಿ ಎಂದು ಘೋಷಣೆ ಕೂಗಿ ಭಕ್ತಿಭಾವ ತೋರಿದರು. ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಅತ್ಯಂತ ವೈಭವದಿಂದ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ನೆರವೇರಿತು.
ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗು ತಂದವು. ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಸಿಡಿಮದ್ದುಗಳನ್ನು ಸಿಡಿಸಿದರು. ಚಾಮುಂಡೇಶ್ವರಿ ರಥೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಹಾಗೂ ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಒಡೆಯರ್, ತ್ರಿಷಿಕಾ ಕುಮಾರಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಪತ್ನಿ ಲಲಿತಾ ದೇವೇಗೌಡ ಹಾಗೂ ಮಕ್ಕಳು ರಥೋತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿ ದೇವಿ ಮೈಸೂರು ಅರಸರ ಕುಲದೇವತೆಯಾಗಿರುವ ಕಾರಣ ರಥೋತ್ಸವ ಆರಂಭದ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು. ಯದುವಂಶದವರು ತಾಯಿಗೆ ಮೊದಲ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಶುರುವಾಯಿತು. ಇದೇ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬುಧವಾರ ಸಂಜೆ ಚಾಮುಂಡಿಬೆಟ್ಟದ ದೇವಿ ಕೆರೆಯಲ್ಲಿ ಅಮ್ಮನವರ ತೆಪ್ಪೋತ್ಸವ ನಡೆಯಲಿದೆ. ಅದರೊಂದಿಗೆ ಈ ವರ್ಷದ ದಸರಾ ಧಾರ್ಮಿಕ ಚಟುವಟಿಕೆಗಳಿಗೆ ಚಾಮುಂಡಿಬೆಟ್ಟದಲ್ಲಿ ತೆರೆ ಬೀಳಲಿದೆ.ಇದನ್ನೂ ಓದಿ: ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಮುಂದಿನ ಸಾರಥಿ ಯಾರು?
ಮೈಸೂರು: ದಸರಾ ಜಂಬೂಸವಾರಿ (Dasara Jamboo Savari) ದಿನ ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಜೊತೆ ತಮ್ಮ ಮೊಮ್ಮಗನನ್ನೂ ಕರೆದು ಕೊಂಡು ಹೋದ ನಡೆಗೆ ಆಕ್ಷೇಪ ವ್ಯಕ್ತವಾದ ಕುರಿತು ಸಚಿವ ಮಹದೇವಪ್ಪ (HC Mahadevappa) ಸ್ಪಷ್ಟನೆ ನೀಡಿದ್ದಾರೆ.
ಮೈಸೂರಲ್ಲಿ (Mysuru) ಮಾತನಾಡಿದ ಅವರು, ಅಲ್ಲಿ ಯಾವ ಪ್ರೋಟೋಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೋಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಏಕೆಂದ್ರೆ ಅದು ಪೇರೆಡ್ ಅಲ್ಲ, ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!
ಅರಮನೆ ಹೊರ ಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನಂದಿ ಧ್ವಜ ಪೂಜೆ ಮುಗಿಸಿ, ಅರಮನೆಯ ಆವರಣಕ್ಕೆ ಗಣ್ಯರು ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಆಗಮಿಸಿದ್ದರು. ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಅವರ ಮೊಮ್ಮಗನೂ ಪ್ರಯಾಣಿಸಿದ್ದ. ಇದನ್ನೂ ಓದಿ: ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್ ಪಾಸ್ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಮುಂದಿನ ಸಾರಥಿ ಯಾರು?
ಮೈಸೂರು: ದಸರಾ ಮೆರವಣಿಗೆಯ (Mysuru Dasara) ಆರಂಭದ ವೇಳೆ ತೆರೆದ ಜೀಪಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸಚಿವರ ಜೊತೆ ಸಚಿವ ಮಹದೇವಪ್ಪ (H.C Mahadevappa) ಅವರ ಮೊಮ್ಮಗ ಪ್ರಯಾಣಿಸಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.
ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಮೊಮ್ಮಗನೂ ಪ್ರಯಾಣಿಸಿದ್ದ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್ ಪಾಸ್ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR
– ಶಿವರಾಜ್‌ಕುಮಾರ್‌ಗೆ ಸೊಂಡಿಲೆತ್ತಿ ಸೆಲ್ಯೂಟ್ ಮಾಡಿದ ಧನಂಜಯ
ಮೈಸೂರು: ಗುರುವಾರ ನಡೆದ ಮೈಸೂರು ದಸರಾ (Mysuru Dasara) ಮೆರವಣಿಗೆಯಲ್ಲಿ ನಟ ಶಿವರಾಜ್ ಕುಮಾರ್ (Shivarajkumar) ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ದಸರಾ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡಲು ಹೈ ಸರ್ಕಲ್ ಬಳಿಯಿರುವ ಖಾಸಗಿ ಹೋಟೆಲ್ ಮುಂಭಾಗ ಶಿವರಾಜ ಕುಮಾರ್ ಕುಟುಂಬ ಸಮೇತ ಕುಳಿತಿದ್ದರು. ಆಗ ಮೆರವಣಿಗೆಯಲ್ಲಿ ಸಾಗಿ ಬಂದ ತಮಟೆಯ ಟೀಂನ ಸದ್ದಿಗೆ ಖುಷಿಯಿಂದಲೇ ತಾವು ಕುಳಿತಿದ್ದ ಜಾಗದಲ್ಲೇ ಎದ್ದು ನಿಂತು ಸ್ಟೆಪ್ ಹಾಕಿದರು. ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ
ಇದೇ ವೇಳೆ ಮೆರವಣಿಗೆಯಲ್ಲಿ ಸಾಗಿ ಬಂದ ಧನಂಜಯ ಆನೆ ಶಿವರಾಜ್ ಕುಮಾರ್‌ಗೆ ಸೆಲ್ಯೂಟ್ ಮಾಡಿತು.
ಮೈಸೂರು ದಸರಾ ಜಂಬೂ ಸವಾರಿಯು ಗುರುವಾರ ಅದ್ಧೂರಿಯಾಗಿ ನೆರವೇರಿದೆ. ಸತತ 6ನೇ ಬಾರಿಗೆ ಚಿನ್ನದಂಬಾರಿ ಹೊತ್ತು ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ನಡೆಸಿಕೊಟ್ಟಿದ್ದಾನೆ. ಲಕ್ಷಾಂತರ ಜನರು ವಿಶ್ವವಿಖ್ಯಾತ ದಸರಾವನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ
ವಿಜಯದಶಮಿಯ ಪ್ರಮುಖ ಆಕರ್ಷಣೆ, ಮೈಸೂರು ದಸರಾದ ವಿಶ್ವವಿಖ್ಯಾತ ಜಂಬೂಸವಾರಿ ಅದ್ಧೂರಿಯಾಗಿ ನಡೆದಿದೆ. 750 ಕೆಜಿ ತೂಕದ ಬಂಗಾರ ಅಂಬಾರಿಯನ್ನು 6ನೇ ಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಗಂಭೀರವಾಗಿ ಹೆಜ್ಜೆ ಹಾಕಿದ್ದಾನೆ. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಕಾವೇರಿ, ರೂಪ ಜೊತೆಗಿದ್ದವು. ಸಂಜೆ 4:42ರಿಂದ 5:06 ಗಂಟೆಯ ಕುಂಭಲಗ್ನದಲ್ಲಿ ತಾಯಿ ಚಾಮುಂಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಿದರು.
ಜಂಬೂಸವಾರಿಗೆ ಚಾಲನೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ
ಜಂಬೂಸವಾರಿ ವೀಕ್ಷಿಸಲು ಅರಮನೆ ಮುಂಭಾಗ ಸೇರಿದ ಜನ
750 ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯು
ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ
ದೊಡ್ಡ ಗಡಿಯಾರ ತಿರುವು, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಸೇರಿದ ಜನ
ಅಭಿಮನ್ಯುವಿಗೆ ಸಾಥ್ ನೀಡಿದ ಕಾವೇರಿ, ರೂಪ
ಅಭಿಮಾನಿಗಳಿಗೆ ಕೈ ಬೀಸಿದ ಅಭಿಮನ್ಯು ಮಾವುತ ಜೆ.ಎಸ್.ವಸಂತ
ಜಂಬೂಸವಾರಿ ವೀಕ್ಷಿಸಲು ರಸ್ತೆ ಬದಿಯಲ್ಲಿ ಕಾದು ಕುಳಿತಿರುವ ಜನರು
ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ (Jamboo Savari) ವೀಕ್ಷಣೆ ವೇಳೆ ನೂಕುನುಗ್ಗಲು ಉಂಟಾಗಿ ಯುವತಿ ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ಜಂಬೂಸವಾರಿ ಕೆಆರ್ ಆಸ್ಪತ್ರೆ ಬಳಿ ತಲುಪುತ್ತಿದ್ದಂತೆ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿ ಯುವತಿ ಅಸ್ವಸ್ಥಗೊಂಡಿದ್ದಾಳೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ
ಕೂಡಲೇ ಅಸ್ವಸ್ಥಗೊಂಡ ಯುವತಿಯನ್ನು ಬ್ಯಾರಿಕೇಡ್‌ನಿಂದ ಆಚೆ ತಂದ ಪೊಲೀಸರು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ
– ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ – ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು
ಮೈಸೂರು: ಲಕ್ಷಾಂತರ ಜನರು ಕಾತುರದಿಂದ ಕಾದಿದ್ದ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂಸವಾರಿಗೆ(Jambusavari) ಅದ್ದೂರಿ ಚಾಲನೆ ಸಿಕ್ಕಿದೆ.
ಸಂಜೆ 4.42ರಿಂದ 5.06 ಅವಧಿಯ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಿಎಂ ಜೊತೆ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಪುಷ್ಪಾರ್ಚನೆ ಮಾಡಿದರು.
ಅಲಂಕೃತಗೊಂಡ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡ ಅಧಿದೇವತೆ ಚಾಮುಂಡಿತಾಯಿಯನ್ನು (Chamundeshwari) ಹೊತ್ತು 6ನೇ ಬಾರಿ ಅಭಿಮನ್ಯು (Abhimnyu) ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.
ದಸರಾ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಧನಂಜಯ ಹೆಜ್ಜೆ ಹಾಕಿದರೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪ, ನೌಫತ್ ಆನೆಯಾಗಿ ಗೋಪಿ, ಪಟ್ಟದ ಆನೆಯಾಗಿ ಶ್ರೀಕಂಠ ಮತ್ತು ಲಕ್ಷ್ಮಿ ಹೆಜ್ಜೆ ಹಾಕುತ್ತಿವೆ. ಸಾಲಾನೆಯಾಗಿ ಮಹೇಂದ್ರ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಈ ಆನೆಗಳು ಅಭಿಮನ್ಯುವಿಗೆ ಸಾಥ್ ನೀಡುತ್ತಿವೆ.
ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡಿತಾಯಿಯನ್ನು ಕಣ್ತುಂಬಿಕೊಂಡು ಜನರು ಧನ್ಯತಾ ಭಾವ ಮೆರೆದರು. ದಸರಾ ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 48 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ದಸರಾ ಜಂಬೂಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡುತ್ತಿವೆ. ಒಟ್ಟು 57 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ 140ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿವೆ.
ಉತ್ತರ ದ್ವಾರದ ಮೂಲಕ ತೆರಳಿರುವ ಜಂಬೂಸವಾರಿ ಮೆರವಣಿಗೆ ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಸಂಜೆ ವೇಳೆಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ತಲುಪಲಿದೆ.
ಜಂಬೂ ಸವಾರಿಯಿಲ್ಲದೇ ಮೈಸೂರು ದಸರಾ ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮೈಸೂರು ದಸರಾ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಈ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಅಂದ್ರೆ ಆನೆಗಳೇ ಆಕರ್ಷಣೆ. ಮೈಸೂರು ಮಹಾರಾಜರ ಆಡಳಿತದ ನಂತರವೂ ಆನೆಯ ಮೇಲೆ ಅಂಬಾರಿ ಹೊರುವ ಪರಂಪರೆ ಸಾಗಿ ಬಂದಿದೆ. ಅದೇ ರೀತಿ ಈ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಅಷ್ಟೇ ವಿಸ್ಮಯ. ಹೀಗೆ ಇತಿಹಾಸ ನಿರ್ಮಿಸಿ ಹೋದ ಹಳೆಯ ಆನೆಗಳ ಸಾಲಿನ ಅಂಚಿನಲ್ಲಿ ಈಗ ಅಭಿಮನ್ಯು (Abhimanyu) ಕೂಡ ಇದ್ದಾನೆ. ದಶಕಗಳಿಂದ ಈಚೆಗೆ ಬಂದ ಆನೆಗೆ ಅಂಬಾರಿ ಹೊರುವ ಹೊಣೆ ಬಿಟ್ಟುಕೊಡುವ ಕಾಲ ಬಂದೇ ಬಿಟ್ಟಿದೆ.
ದಸರಾ ಉತ್ಸವದ ಕೊನೆಯ ದಿನ ಜಂಬೂ ಸವಾರಿಯೊಂದಿಗೆ (Jamboo Savari) ಮುಕ್ತಾಯಗೊಳ್ಳುತ್ತದೆ. ಇಂದು ಸ್ತಬ್ಧಚಿತ್ರಗಳ ಮೆರವಣಿಗೆ ಬಳಿಕ ಅಭಿಮನ್ಯು ತಾಯಿ ಚಾಮುಂಡಿ ವಿಗ್ರಹ ಇರುವ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಸಾಗಲಿದ್ದಾನೆ.
ಮುಂದಿನ ವರ್ಷ ಅಂಬಾರಿ ಹೊತ್ತರೆ ಮುಗಿಯಿತು:
ದಸರಾ ಆನೆಗಳಿಗೂ ಶತಮಾನದ ನಂಟು ಇದೆ. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರಿನ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಆದರೆ, ಈಗ ಇರುವ ಹಳೆಯ ಆನೆಗಳ ಪೈಕಿ ಅಭಿಮನ್ಯುನೇ ಹಿರಿಯ. 59 ವರ್ಷ ವಯಸ್ಸಿನ ಅಭಿಮನ್ಯು ಮುಂದಿ ವರ್ಷ ಅಂಬಾರಿ ಹೊತ್ತರೆ ಮುಗಿಯಿತು. ಏಕೆಂದರೆ ಅರಣ್ಯ ಅಧಿಕಾರಿಗಳು ಹೇಳುವಂತೆ 60 ವರ್ಷ ತುಂಬಿದ ಆನೆಗಳಿಗೆ ನಿಯಮದಂತೆ ನಿವೃತ್ತಿ ಕೊಡಬೇಕು. ಅಭಿಮನ್ಯುವಿಗೆ ಈಗ 59 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷ 60ನೇ ವಯಸ್ಸಿಗೆ ಕಾಲಿಡಲಿದ್ದಾನೆ. ಮುಂದಿನ ವರ್ಷ ಅಂಬಾರಿ ಹೊತ್ತರೆ ಅಲ್ಲಿಗೆ ಅಭಿಮನ್ಯು ಇತಿಹಾಸ ಪುಟ ಸೇರಿಕೊಳ್ಳಲಿದ್ದಾನೆ ಎನ್ನುತ್ತಾರೆ ಡಿಸಿಎಫ್ ಪ್ರಭು. ಇದನ್ನೂ ಓದಿ: 6ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಬಗ್ಗೆ ನಿಮಗೆಷ್ಟು ಗೊತ್ತು?
ಅಭಿಮನ್ಯು ಹೆಮ್ಮರವಾಗಿ ಬೆಳೆದಿದ್ದು ಹೇಗೆ?
1951ರ ಸಮಯದಲ್ಲಿ ಸುರ್ಗುಜಾ ಮಧ್ಯಪ್ರದೇಶದ ಭಾಗವಾಗಿತ್ತು. ಆದ್ರೆ 2000 ಇಸವಿಯ ನಂತರ ಛತ್ತಿಸ್‌ಘಡದ ಜಿಲ್ಲೆಯಾಗಿ ಸೇರ್ಪಡೆಯಾಯಿತು. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟು ಇದೆ. ಅದು ಹೇಗೆ ಅಂತೀರಾ..? ಈ ಹಿಂದೆ ಸುಮಾರು 3 ದಶಕಗಳ ಕಾಲ ಸರ್ಗುಜಾದಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತು. ಆನೆಗಳನ್ನ ಸೆರೆ ಹಿಡಿಯಬೇಕು, ಉಪಟಳ ತಪ್ಪಿಸಬೇಕು ಅನ್ನೋ ಕೂಗು ಸರ್ಗೂಜಾ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಅಂದಿನ ಮಧ್ಯಪ್ರದೇಶದ ರಾಜ್ಯ ಸರ್ಕಾರ ಆನೆಗಳನ್ನ ಸೆರೆ ಹಿಡಿಯೋದಕ್ಕೇನೋ ಅನುಮತಿ ನೀಡಿತು. ಆದ್ರೆ ಅವುಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಆಗ ಮಧ್ಯಪ್ರದೇಶದ ಚಿತ್ತ ಹಾಯಿಸಿದ್ದು, ಕರ್ನಾಟಕದತ್ತ. ಖೆಡ್ಡಕ್ಕೆ ಕೆಡವುವ ಕಾರ್ಯಾಚರಣೆಯಲ್ಲಿ ಕರ್ನಾಟಕದ ಆನೆಗಳು ಆಗಲೇ ಬಲಶಾಲಿಗಳಾಗಿ ಗುರುತಿಸಿಕೊಂಡಿದ್ದವು. ಇಲ್ಲಿಂದ ಆನೆಗಳನ್ನ ಕರೆದುಕೊಂಡು ಬಂದು ಆನೆಗಳನ್ನ ಸೆರೆಹಿಡಿಯುವ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಮುಂದಾಯಿತು. ಅದರಂತೆ ಇಂದಿನ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಸೇರಿ ಹಲವು ಆನೆಗಳ ತಂಡವನ್ನ ಸರ್ಗುಜಾಕ್ಕೆ ಕರೆದೊಯ್ಯಲಾಯ್ತು. ನೀರಿಕ್ಷೆಯಂತೆ ನಮ್ಮ ಆನೆಗಳು ಸರ್ಗುಜಾದಲ್ಲಿ ಸುಮಾರು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration – Wild Elephant Captureʼ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್ ಎಂದರೆ ʻಅಭಿಮನ್ಯುʼ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದ್ರೆ ಇನ್ನೊಂದು ವರ್ಷ ಕಳೆದರೆ ಆಮೇಲೆ ಅಭಿಮನ್ಯು ಅಂಬಾರಿ ಹೊರುವ ಸೌಭಾಗ್ಯದಿಂದ ದೂರವಾಗಲಿದ್ದಾನೆ ಅನ್ನೋದು ವಿಷಾದನೀಯ.
ಅಂಬಾರಿ ಹೊತ್ತ ಆನೆಗಳು ಅಜರಾಮರ:
ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಆನೆಗಳು ಭಾಗಿಯಾಗಿವೆ. ಇಂತ ಆನೆಗಳ ಪಟ್ಟಿ ನೂರಕ್ಕೂ ಅಧಿಕ. ಆದ್ರೆ ಅಂಬಾರಿ ಹೊತ್ತ ಆನೆಗಳ ಸಂಖ್ಯೆ ಕಡಿಮೆ. ಇದರಲ್ಲಿ ಶತಮಾನಗಳಷ್ಟು ಹಳೆಯಾದ ಜಯಮಾರ್ತಾಂಡ ಆನೆಯೇ ಅತ್ಯಂತ ಹಿರಿಯ. ಈತನೇ ಅಂಬಾರಿ ಹೊತ್ತ ಮೊದಲಿಗ. ಹಲವಾರು ವರ್ಷ ಮಾರ್ತಾಂಡ ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿ ಮಹಾರಾಜರ ಪ್ರೀತಿಗೂ ಪಾತ್ರನಾಗಿದ್ದ. ಈಗಲೂ ಅರಮನೆಯ ದೊಡ್ಡ ದ್ವಾರದ (ಜಯಮಾರ್ತಾಂಡ ದ್ವಾರ) ರೂಪದಲ್ಲಿ ಅಜರಾಮರನಾಗಿದ್ದಾನೆ. ಆನಂತರ ವಿಜಯಬಹದ್ದೂರ್, ರಾಮಪ್ರಸಾದ್, ನಂಜುಂಡ, ಐರಾವತ, ಮೋತಿಲಾಲ್, ರಾಜೇಂದ್ರ, ಬಿಳಿಗಿರಿ, ದ್ರೋಣ, ಬಲರಾಮ, ಅರ್ಜುನನ ನಂತರ ಅಭಿಮನ್ಯು ಈ ಸ್ಥಾನ ಅಲಂಕರಿಸಿದ್ದಾನೆ.
ಕೆಲ ಆನೆಗಳ ಅಕಾಲಿಕ ಮರಣ
ಇನ್ನು ದಸರೆಯಲ್ಲಿ ಪಾಲ್ಗೊಂಡು ವಿಶ್ವವಿಖ್ಯಾತಿಯಾಗಿದ್ದ ಆನೆಗಳ ಪೈಕಿ ಕೆಲ ಆನೆಗಳು ಅಕಾಲಿಕ ಮರಣಕ್ಕೆ ತುತ್ತಾಗಿ ಕಹಿ ಸುದ್ದಿ ನೀಡಿದ ಘಟನೆಗಳೂ ನಮ್ಮ ಕಣ್ಣಮುಂದಿವೆ. ಹೌದು. ಈ ಹಿಂದೆ ದ್ರೋಣ ಆನೆ ವಿದ್ಯುತ್ ದುರಂತದಿಂದ ಸಾವನ್ನಪ್ಪಿತ್ತು. 2023ರಲ್ಲಿ ಎಲ್ಲರ ಮನೆ ಮಾತಾಗಿದ್ದ ಅರ್ಜುನ ಆನೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನದಲ್ಲಿ ಕಾಡಾನೆ ತಿವಿತದಿಂದ ಸಾವನ್ನಪ್ಪಿತ್ತು. ಕೋಟ್ಯಂತರ ಅಭಿಮಾನಿಗಳು ಅರ್ಜುನನ್ನ ನೆನೆದು ಕಣ್ಣೀರಿಟ್ಟಿದ್ದರು. ಇದೀಗ ಸರ್ಕಾರ ಅರ್ಜುನನ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ಘೋಷಣೆ ಮಾಡಿದೆ. ಇದಕ್ಕೆ ಒಂದು ವರ್ಷದ ಮುನ್ನವೇ ಅಂಬಾರಿ ಹೊರುವ ಆನೆಗಳ ಸಾಲಿನಲ್ಲಿದ್ದ ಗೋಪಾಲಕೃಷ್ಣ ಆನೆಯೂ ಅಯ್ಯಪ್ಪ ಎಂಬ ಆನೆ ಜೊತೆಗೆ ಕಾದಾಟ ನಡೆಸಿ ಸಾವನ್ನಪ್ಪಿತ್ತು. ದಸರೆ, ಗಜಪಯಣ ಬಂತೆಂದರೆ, ಆನೆ ಪ್ರಿಯರಿಗೆ ಇದು ಮರೆಯಲಾಗದ ಕಹಿ ಘಟನೆ. ಇದನ್ನೂ ಓದಿ: ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಅಭಿಮನ್ಯು ನಂತರದ ಯಜಮಾನ ಯಾರು?
ದಸರಾ ಪ್ರತಿ ವರ್ಷದ ನಾಡ ಹಬ್ಬ. ಮೈಸೂರು ದಸರಾವೆಂದರೆ ಅದು ಜಂಬೂ ಸವಾರಿಯೂ ಹೌದು. ಅಭಿಮನ್ಯು ನಿವೃತ್ತಿ ನಂತರ ಹಳೆ ತಲೆಮಾರಿನ ಆನೆಗಳ ಕೊಂಡಿ ಮುಗಿಯಲಿದೆ. ಬಳಿಕ ಹೊಸ ತಲೆಮಾರಿನ ಆನೆಗಳದ್ದೇ ಕಾಲ. 2026ರ ನಂತರ ಹೊಸ ಕ್ಯಾಪ್ಟನ್ ಬೇಕೇ ಬೇಕು. ಇದಕ್ಕಾಗಿ ಈಗಿನಿಂದಲೇ ಅರಣ್ಯ ಇಲಾಖೆ ತಯಾರಿಯನ್ನೂ ಮಾಡಿಕೊಂಡಿದೆ. ದಶಕದ ಹಿಂದೆಯಷ್ಟೆ ಸೆರೆ ಸಿಕ್ಕು ನಾಲೈದು ವರ್ಷದಿಂದ ದಸರಾಕ್ಕೆ ಬರುತ್ತಿರುವ ಆನೆಗಳಿಗೂ ಅಂಬಾರಿ ಹೊರುವ ಅವಕಾಶ ಸಿಗಲಿದೆ. ಇದರಲ್ಲಿ ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಪ್ರಶಾಂತ, ಏಕಲವ್ಯ ಆನೆಗಳಿವೆ. ಇವುಗಳಲ್ಲಿ ಧನಂಜಯ ಇಲ್ಲವೇ ಮಹೇಂದ್ರಗೆ ಮುಂದಿನ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಅಂಬಾರಿ ಆನೆಗಳ ಸಿನಿಮಾ ನಂಟು
ಹಲವು ಆನೆಗಳು ಅಂಬಾರಿ ಹೊತ್ತು ಹೆಸರುವಾಸಿಯಾಗಿವೆ. ಅಲ್ಲದೇ ಸಿನಿಮಾ ನಂಟನ್ನು ಹೊಂದಿರುವುದು ವಿಶೇಷ. ಹೌದು. ಐರಾವತ ಆನೆಯಂತು ಹಾಲಿವುಡ್ ಸಿನಿಮಾದಲ್ಲೇ ನಟಿಸಿ ಸೈ ಎನಿಸಿಕೊಂಡಿದೆ. 1935ರಲ್ಲಿ ತೆರೆ ಕಂಡ ʻದಿ ಎಲಿಫೆಂಟ್ ಬಾಯ್ʼ ಅನ್ನೋ ಚಿತ್ರದಲ್ಲಿ ನಟಿಸಿದ್ದ. ಇನ್ನೂ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ರಾಜೇಂದ್ರ ಆನೆ. ಅಣ್ಣಾವ್ರ ಗಂಧದ ಗುಡಿ ಸಿನಿಮಾ ನೋಡುವಾಗೆಲ್ಲ ರಾಜೇಂದ್ರ ಕಣ್ಮುಂದೆ ಬರುತ್ತಾನೆ. ಇನ್ನೂ ಅಭಿಮನ್ಯು ಕೂಡ ವಿಶೇಷ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ದ್ರೋಣ ಆನೆಯೂ ಸ್ಟೋರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ
ಹೀಗೆ ಮೈಸೂರು ದಸರಾದ ಮುಕುಟ ಮಣಿಗಳಂತೆ ಕಾಣಿಸಿಕೊಳ್ಳುವ ದಸರಾ ಆನೆಗಳ ಇತಿಹಾಸ ಅವಿಸ್ಮರಣೀಯವಾಗಿದೆ. ಆದ್ರೆ ಅಭಿಮನ್ಯು ನಂತರ ಯಾರಾಗಲಿದ್ದಾರೆ ಅಂಬಾರಿಯ ಸಾರಥಿ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಮೆರುಗು ಜೋರಾಗಿದ್ದು, ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ 58 ಸ್ತಬ್ಧಚಿತ್ರ ಸೇರಿ 150ಕ್ಕೂ ಕಲಾತಂಡಗಳು ಭಾಗಿಯಾಗಲಿವೆ.
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 58 ಟ್ಯಾಬ್ಲೋಗಳು ಸಾಗಲು ಸಿದ್ಧಗೊಂಡಿವೆ. 31 ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳು ಸೇರಿದಂತೆ 58 ಟ್ಯಾಬ್ಲೋಗಳು ಅಂಬಾವಿಲಾಸ ಅರಮನೆಯ ಆವರಣದಲ್ಲಿ ಸಿದ್ಧಗೊಂಡಿವೆ. ಈ ಮೂಲಕ ತಮ್ಮ ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಯೋಜನೆಗಳು ಸೇರಿದಂತೆ ಹಲವು ಮಹತ್ವ ಸಾರಲಿವೆ.ಇದನ್ನೂ ಓದಿ: ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಎಲ್ಲಾ ಸ್ತಬ್ಧಚಿತ್ರಗಳು ಮೈಸೂರು ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸಿದ್ಧವಾಗಿ ನಿಂತಿವೆ. ಜೊತೆಗೆ ಮೆರವಣಿಗೆಯಲ್ಲಿ 150ಕ್ಕೂ ಅಧಿಕ ಕಲಾತಂಡಗಳು ಪಾಲ್ಗೊಳ್ಳಲಿದ್ದು, ಜಂಬೂಸವಾರಿಯಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿವೆ.
ಇನ್ನೂ ಜಂಬೂ ಸವಾರಿ ಹಿನ್ನೆಲೆ ಮೈಸೂರಿನಾದ್ಯಂತ ಬಿಗಿಭದ್ರತೆ ಮಾಡಿಕೊಳ್ಳಲಾಗಿದ್ದು, ವಿವಿಧ ಜಿಲ್ಲೆಗಳಿಂದ ಪೊಲೀಸ್ ಪಡೆ ಆಗಮಿಸಿದೆ. ನಗರದಾದ್ಯಂತ 9 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ಬೆಳಗಾವಿಯಿಂದ ಗರುಡ ಪಡೆ, ಶ್ವಾನದಳ, ಬಾಂಬ್ ಸ್ಕ್ವಾಡ್ ಆಗಮಿಸಿದೆ. ಜೊತೆಗೆ ಜಂಬೂಸವಾರಿ ಸಾಗುವ ಮಾರ್ಗದ ಉದ್ದಕ್ಕೂ ಭಾರಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಅಂಬಾರಿ ಸಾಗುವ ಮಾರ್ಗದಲ್ಲಿ ಹೆಚ್ಚುವರಿ ಸಿಸಿಟಿವಿ ನಿಯೋಜನೆ ಮಾಡಲಾಗಿದೆ. ಬನ್ನಿಮಂಟಪ ಸೇರಿದಂತೆ ರಾಜಮಾರ್ಗಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.ಇದನ್ನೂ ಓದಿ: ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪುರಸ್ಕೃತ ಪಂಡಿತ್ ಚನ್ನುಲಾಲ್ ಮಿಶ್ರಾ ನಿಧನ
ನವದೆಹಲಿ: ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿಜಯದಶಮಿಯ (Vijaya Dashami) ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ವಿಜಯದಶಮಿಯು ದುಷ್ಟ ಮತ್ತು ಸುಳ್ಳಿನ ಮೇಲೆ ಒಳ್ಳೆಯದು ಮತ್ತು ಸದಾಚಾರದ ವಿಜಯವನ್ನು ಆಚರಿಸುತ್ತದೆ. ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿ ಯಾವಾಗಲೂ ನಮ್ಮ ಮಾರ್ಗಗಳಿಗೆ ಮಾರ್ಗದರ್ಶನ ನೀಡಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ
Vijaya Dashami celebrates the triumph of good and righteousness over evil and falsehood. May courage, wisdom and devotion always guide our paths.