Tag: mysterious death

  • ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

    ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

    ಉಡುಪಿ: ಶಿರೂರು ಸ್ವಾಮೀಜಿಯವರು ಧರಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ಭದ್ರವಾಗಿದೆ. ಈ ಚಿನ್ನಾಭರಣಗಳನ್ನು ಶೀರೂರು ಶ್ರೀಗಳ ಪೂರ್ವಶ್ರಮಕ್ಕೆ ಸಲ್ಲಿಕೆ ಮಾಡಲಾಗಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಶಿರೂರು ಶ್ರೀಗಳು ಧರಿಸುತ್ತಿದ್ದ ಚಿನ್ನಾಭರಣ ಸೇಫಾಗಿದೆ. ರಮ್ಯಾ ಶೆಟ್ಟಿ ಚಿನ್ನಾಭರಣ ಕದ್ದಿಲ್ಲ. ಸ್ವಾಮೀಜಿ ಆಪ್ತರೂ ಚಿನ್ನಾಭರಣ ಎಗರಿಸಿಲ್ಲ. ಕೆಲ ಮಾಧ್ಯಮಗಳಲ್ಲಿ ಚಿನ್ನಾಭರಣ ಕಾಣೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದ್ರೆ ಇದೀಗ ಚಿನ್ನಾಭರಣಗಳನ್ನು ಆಸ್ಪತ್ರೆಯ ವೈದ್ಯರು ಸ್ವಾಮೀಜಿ ಕುಟುಂಬಕ್ಕೆ ನೀಡಿದ್ದಾರೆ ಅಂತ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶನಿವಾರ ಮರಣೋತ್ತರ ವರದಿ?;
    ಜುಲೈ 19 ರಂದು ಶೀರೂರು ಶ್ರೀ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಶ್ರೀಗಳ ಸಾವಿನ ಕುರಿತು ಇನ್ನೆರಡು ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬರಲಿದೆ. ಶನಿವಾರ ಮರಣೋತ್ತರ ಪರೀಕ್ಷೆಯ ವರದಿ ಸಿಗುವ ಸಾಧ್ಯತೆಗಳಿದ್ದು, 6 ವಾರದ ನಂತರ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಕೈ ಸೇರುವ ಸಾಧ್ಯತೆಯಿದೆ. ಈ ಎರಡೂ ವರದಿ ಬಂದ ಬಳಿಕ ಸಾವಿನ ತನಿಖೆ ಮಹತ್ವ ಪಡೆಯಲಿದೆ.

    ಜುಲೈ 31ರಂದು ಆರಾಧನೆ:
    ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನಸ್ಥ ಹಿನ್ನೆಲೆಯಲ್ಲಿ ಜುಲೈ 31 ರಂದು ಶಿರೂರು ಸ್ವಾಮೀಜಿ ಆರಾಧನೆ ಕಾರ್ಯಕ್ರಮವಿದೆ. ಶ್ರೀಗಳು ನಿಧನ ಹೊಂದಿದ ಹದಿಮೂರನೇ ದಿನ ಸೋದೆಮಠದ ನೇತೃತ್ವದಲ್ಲಿ ಈ ಆರಾಧನೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಹಿರಿಯಡ್ಕ ಸಮೀಪದ ಮೂಲಮಠ ಶೀರೂರಿನಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಅನಗತ್ಯ ಮಾನಹಾನಿ:
    ಸ್ವಾಮೀಜಿಯ ಚಿನ್ನವನ್ನು ಸ್ವಾಮೀಜಿ ಆಪ್ತ ಬುಲೆಟ್ ಗಣೇಶ್ ಎಂಬವರು ಕದ್ದಿದ್ದಾರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗಣೇಶ್, ನಾನು ಆರೋಪಿಯಲ್ಲ. ನಾನು ಚಿನ್ನ ಕದ್ದಿಲ್ಲ. ನನ್ನನ್ನು ಯಾರೂ ಈವರೆಗೆ ವಿಚಾರಣೆ ಮಾಡಿಲ್ಲ. ಅನಗತ್ಯವಾಗಿ ನನ್ನ ಮಾನಹಾನಿ ಮಾಡಲಾಗುತ್ತಿದೆ ಅಂತ ಕಿಡಿಕಾರಿದ್ದಾರೆ.

    ಸ್ವಾಮೀಜಿ ಚಿನ್ನಕ್ಕೂ ನನಗೂ ಸಂಬಂಧವಿಲ್ಲ. ಸ್ವಾಮೀಜಿ ಜೊತೆ ಯಾವುದೇ ಆರ್ಥಿಕ ವ್ಯವಹಾರ ಇಲ್ಲ. ನಾನು ಸ್ವಾಮೀಜಿ ಪಾರ್ಟ್‍ನರ್ ಅಲ್ಲ. ನಾನು ಶಿರೂರು ಸ್ವಾಮೀಜಿಯ ಭಕ್ತನಾಗಿದ್ದು, ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು ಅಂತ ಅವರು ಆಗ್ರಹಿಸಿದ್ದಾರೆ.

  • ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶಿರೂರು ಶ್ರೀಗೆ ಭೂ ಮಾಫಿಯಾ ಜೊತೆ ಸಂಪರ್ಕ ಇದೆ ಎನ್ನಲಾಗುತ್ತಿದ್ದು, ಈ ಕುರಿತು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದೆ. ಮಠ ಸಂಘರ್ಷ, ಭೂ ವ್ಯವಹಾರ, ಅನೈತಿಕ ಸಂಬಂಧದ ವಿಚಾರದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಉಡುಪಿ ಎಸ್ ಪಿ 5 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಉಡುಪಿಯಲ್ಲಿರುವ ಪ್ರಮುಖ ಉದ್ಯಮಿ ಹಾಗೂ ಬಿಲ್ಡರ್ ಗಳ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಸ್ವಾಮೀಜಿಗೆ 26 ಕೋಟಿ ರೂ. ವಂಚನೆ ನಡೆದಿದೆ ಅನ್ನೋ ವಿಡಿಯೋ ಮತ್ತು ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಸ್ವಾಮೀಜಿಗಳ ರಿಯಲ್ ಎಸ್ಟೇಟ್ ಉದ್ಯಮ ಪಾಲುದಾರರ ತೀವ್ರ ವಿಚಾರಣೆ ಆರಂಭವಾಗಿದೆ. ಇದನ್ನೂ ಓದಿ: ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಸ್ವಾಮೀಜಿಗಳ ಬಳಿ ನೂರಾರು ಎಕರೆ ಜಮೀನು ಇದೆ. ಸುಮಾರು 30 ಕೋಟಿ ರೂ. ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯದಲ್ಲಿವೆ. ಈ ವಿಚಾರದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಈ ಕಾಂಪ್ಲೆಕ್ಸ್ ನಿರ್ಮಾಣ ಮತ್ತು ಸೇಲ್ ಬಗ್ಗೆ ಸಾಕಷ್ಟು ಚರ್ಚೆಗಳು, ಜಟಾಪಟಿ ನಡೆದಿತ್ತು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿಯೂ ಕೂಡ ಪೊಲೀಸರು ಈಗಾಗಲೇ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ಉಡುಪಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.  ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ನಡೆಸಲಾಗಿದೆ.

  • ಯಾದಗಿರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ನಿಗೂಢ ಸಾವು!

    ಯಾದಗಿರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ನಿಗೂಢ ಸಾವು!

    ಯಾದಗಿರಿ: 13 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ಯಾದಗಿರಿ ತಾಲೂಕು ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಮಗಳ ಮೇಲೆ ಹಾಡಹಗಲೇ ಅತ್ಯಾಚಾರಗೈದು ಕೊಲೆ ಮಾಡಿ ನಂತರ ನೇಣು ಬಿಗಿದು ಇದೊಂದು ಆತ್ಮಹತ್ಯೆ ಪ್ರಕರಣವೆಂಬಂತೆ ಬಿಂಬಿಸಲಾಗುತ್ತಿದ್ದು, ಇದನ್ನು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಾಲಕಿಯ ತಂದೆ ದೂರು ಸಲ್ಲಿಸಿದ್ದಾರೆ.

    ಫೆ. 2ರಂದು ಕಡೇಚೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ಬಡ- ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಳು. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿತ್ತು.

    ಈ ಬಗ್ಗೆ ಅಂದು ಯಾವುದೇ ದೂರು ದಾಖಲಿಸದೆ ಇತ್ತ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ತರಾತುರಿಯಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ವಿಚಿತ್ರವೆಂದರೆ ಗ್ರಾಮದ `ಸಾಹುಕಾರ’ನ ಮಧ್ಯಸ್ಥಿಕೆಯಲ್ಲಿ ರಾಜೀ ಪಂಚಾಯ್ತಿ ನಡೆಸಿ ಒಂದಿಷ್ಟು ಪರಿಹಾರ ಕೊಟ್ಟು ಇಡೀ ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರಗಳು ನಡೆದಿವೆ ಎನ್ನಲಾಗಿದೆ.

    ಸದ್ಯ ಬಾಲಕಿಯ ತಂದೆಯ ದೂರನ್ನು ಆಧರಿಸಿ ಯಾದಗಿರಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತನಿಖೆಗೆ ಮುಂದಾಗಿದ್ದಾರೆ. ಮುದ್ದಿನ ಮಗಳು ಅಮಾನುಷ ಕೃತ್ಯವೊಂದಕ್ಕೆ ಬಲಿಯಾದರೂ ಸಹ ಆರೋಪಿಗಳು ಬಲಿಷ್ಠರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ಪೋಷಕರು ಧ್ವನಿ ಎತ್ತಿರಲಿಲ್ಲ.

    ಶಾಲೆಯ ಪಠ್ಯ ಚಟುವಟಿಕೆಗಳ ಜೊತೆಗೆ ಕಬಡ್ಡಿ ಹಾಗೂ ಗುಂಡು ಎಸೆತದಲ್ಲಿ ಚಾಂಪಿಯನ್ ಆಗಿದ್ದ ಬಾಲಕಿಯ ನಿಗೂಢ ಸಾವಿನ ಬಗ್ಗೆ ಗ್ರಾಮದಲ್ಲಿ ಬಹುತೇಕರು ಮೌನಕ್ಕೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನೋಸ್ಥಿತಿಯ ಹುಡುಗಿ ಆಕೆ ಅಲ್ಲವೇ ಅಲ್ಲ ಎಂಬ ಮಾತುಗಳು ಅಲ್ಲಿ ಕೇಳಿಬರುತ್ತವೆ. ಆದ್ರೆ ಘಟನೆಯ ಕುರಿತು ಮಾತನಾಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿರುವುದು ಮತ್ತಷ್ಟೂ ಅನುಮಾನಗಳಿಗೆ ಕಾರಣವಾಗಿದೆ.

  • ಪರೇಶ್ ಮೇಸ್ತಾ ನಿಗೂಢ ಸಾವು ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

    ಪರೇಶ್ ಮೇಸ್ತಾ ನಿಗೂಢ ಸಾವು ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತಾ(19) ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೊಂಡಿದ್ದು, ಈ ಹಿಂದೆ ಹೊನ್ನಾವರದ ಗುಡ್ ಲಕ್ ಹೋಟೆಲ್ ಮಾಲೀಕ ಆಜಾದ್ ಅಣ್ಣಿಗೇರಿಯನ್ನು ಮೊದಲು ಬಂಧಿಸಿದ್ದರು. ನಂತರ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಲೀಂ ಶೇಖ್ ಎಂಬವನನ್ನು ಇದೇ ಶುಕ್ರವಾರ ಬಂಧಿಸಿದ್ದು, ಇದೀಗ ಹೊನ್ನಾವರದ ಕಟ್ಟಿಗೆ ಡಿಪೋದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಆಸೀಫ್ ರಫೀಕ್ ನನ್ನು ಬಂಧಿಸಲಾಗಿದೆ. ಇದನ್ನೂ ಓದಿ:  Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ

    ಇನ್ನು ಉಳಿದ ಆರೋಪಿಗಳಾದ ಮಹ್ಮದ್ ಫೈಸಲ್ ಅಣ್ಣಿಗೇರಿ, ಇಮ್ತಿಯಾಜ್ ಗನಿ ಎಂಬವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಸಿಬಿಐ ತನಿಖೆ ಪ್ರಾರಂಭವಾಗುವ ಮುನ್ನವೇ ಕಮಲಾಕರ್ ಮೇಸ್ತಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ಪರೇಶ್ ಮೇಸ್ತಾ ಸಾವು ಸಹಜ ಸಾವಲ್ಲ. ಇದೊಂದು ಕೊಲೆ ಎನ್ನುವ ಆರೋಪಕ್ಕೆ ಹೆಚ್ಚಿನ ಮಹತ್ವ ಬಂದಿದ್ದು ಆರೋಪಿಗಳ ತನಿಖೆಯಲ್ಲಿ ಮತ್ತಷ್ಟು ವಿಷಯಗಳು ಹೊರಬರುವ ಸಾಧ್ಯತೆಯಿದೆ.

    ಹೊನ್ನಾವರದಲ್ಲಿ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಪರೇಸ್ ಮೇಸ್ತಾ ನಗರದ ಶಟ್ಟಿಕೆರೆಯಲ್ಲಿ ಡಿಸೆಂಬರ್ 8 ರಂದು ಹೆಣವಾಗಿ ಪತ್ತೆಯಾಗಿದ್ದ. ನಿಗೂಢ ಸಾವಿನ ಕುರಿತು ತಂದೆ ಕಮಲಾಕರ್ ಮೇಸ್ತಾ ರವರು ಶವ ಪತ್ತೆಯಾದ ಡಿಸೆಂಬರ್ 8 ರಂದೇ ಐದು ಮಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದರು. ಇದನ್ನೂ ಓದಿ:   ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ

    ಪರೇಶ್ ಮೆಸ್ತಾ ಸಾವು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೇ ಹಲವು ಭಾಗದಲ್ಲಿ ಘರ್ಷಣೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ಪ್ರಕರಣವನ್ನು ನೀಡಿತ್ತು. ಇದನ್ನೂ ಓದಿ: ಪರೇಶ್ ಮೇಸ್ತಾ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

    ಈ ಕುರಿತು ಅಂದು ಪಬ್ಲಿಕ್ ಟಿವಿ ಜೊತೆಗೆ ಮಾತಾಡಿದ ತಂದೆ ಕಮಲಾಕರ್ ಮೇಸ್ತಾ, ನನ್ನ ಮಗನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ವಿಷವುಣಿಸಿ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಆದ್ರೆ ಕಾಲು ಜಾರಿ ಬಿದ್ದು ಸತ್ತಿದ್ದಾನೆಂಬ ಪೊಲೀಸರ ಹೇಳಿಕೆ ನೀಡಿದ್ದು, ಇದು ಸರಿಯಲ್ಲ. ನಮ್ಮ ಮಗನಿಗೆ ಈಜು ಬರುತ್ತಿತ್ತು ತಂದೆ ಹೇಳಿದ್ದರು.

    ನನ್ನ ಮಗ 6ನೇ ತಾರೀಖು ಕಾಣೆಯಾದ. ಎಲ್ಲಾ ಕಡೆ ಹುಡುಕಿ ನಂತರ ಪೊಲೀಸರಿಗೆ ದೂರು ಕೊಟ್ಟಿದ್ವಿ. ನಂತರ ಶನೀಶ್ವರ ದೇವಸ್ಥಾನದ ಹಿಂದೆ ಶೆಟ್ಟಿ ಕೆರೆಯಲ್ಲಿ ಮಗನ ಶವ ತೇಲುತ್ತಿತ್ತು. ಮುಖ ನೋಡಿದಾಗ ಕಪ್ಪಾಗಿದ್ದು, ಮುಖ ಜಜ್ಜಿತ್ತು, ಕಣ್ಣು ಗೆಡ್ಡೆ ಕಿತ್ತು ಬಂದಿತ್ತು. ಕಿಡ್ನಾಪ್ ಮಾಡಿ ಸಾಯಿಸಿರೋದು ನೂರಕ್ಕೆ ನೂರು ಸತ್ಯ. ಇದಕ್ಕೆ ಪೊಲೀಸ್ ಇಲಾಖೆಯ ಕುಮ್ಮಕ್ಕೂ ಇದೆ. ನನ್ನ ಮಗನಿಗೆ ನ್ಯಾಯ ಸಿಗಬೇಕು. ಪ್ರಕರಣದ ತನಿಖೆಯನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಒತ್ತಾಯಿಸಿದ್ದರು. ಇದನ್ನೂ ಓದಿ:ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ, ಕೊಲೆ ಹೇಗೆ ಆಗುತ್ತೆ: ಸಿಎಂ ಸಿದ್ದರಾಮಯ್ಯ

    ಪ್ರಕರಣದ ಸಾವಿನ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ನೀಡಿದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯ ಶಂಕರ್ ಒಕ್ಕಣ್ಣನವರ್ ಸುಳ್ಳು ವರದಿ ಕೊಟ್ಟಿದ್ದಾರೆಂದು ಅಸಮಾಧಾನ ವ್ಯಕ್ತವಾಗಿದ್ದು, ಹೀಗಾಗಿ ಅವರ ವಿರುದ್ಧ ಮೇಲೆ ಫೇಸ್ ಬುಕ್- ವಾಟ್ಸಪ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

     

    https://www.youtube.com/watch?v=5XVX-SyTRAI

  • ಮೆಡಿಕಲ್ ವಿದ್ಯಾರ್ಥಿ ದೆಹಲಿಯಲ್ಲಿ ನಿಗೂಢ ಸಾವು

    ಮೆಡಿಕಲ್ ವಿದ್ಯಾರ್ಥಿ ದೆಹಲಿಯಲ್ಲಿ ನಿಗೂಢ ಸಾವು

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಮಿಳುನಾಡಿನ ಮೆಡಿಕಲ್ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

    ಸ್ನಾತಕೋತ್ತರ ವಿದ್ಯಾರ್ಥಿಯಾದ ಎಸ್. ಶರತ್ ಪ್ರಭು (24) ಬುಧವಾರ ತನ್ನ ಫ್ಲ್ಯಾಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗುರು ತೇಗ್ ಬಹದ್ದೂರ್ ಮೆಡಿಕಲ್ ಆಸ್ಪತ್ರೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶರತ್ ಬುಧವಾರ ಬೆಳಗ್ಗೆ ಪ್ರಜ್ಞೆಯಿಲ್ಲದೇ ವಾಶ್‍ರೂಮಿನಲ್ಲಿ ಬಿದ್ದಿದ್ದರು.

    ಶರತ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯದಲ್ಲೇ ಶರತ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾಗ ಶರತ್ ಪ್ರಜ್ಞೆ ತಪ್ಪಿಬಿದ್ದ ಸ್ಥಳದಲ್ಲಿ ಇಂಜೆಕ್ಷನ್ ಪತ್ತೆಯಾಗಿದೆ.

    ಶರತ್ ಸಾವಿನ ಹಿಂದಿನ ದಿನ ನಮ್ಮ ಜೊತೆ ಚೆನ್ನಾಗಿ ಮಾತನಾಡಿದ್ದನು. ಆಗ ಅವನು ಚೆನ್ನಾಗಿಯೇ ಇದ್ದ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಶರತ್ ಪೋಷಕರು ಹೇಳಿದ್ದಾರೆ.

    ಶರತ್ ಸಾವಿನಿಂದ ದೆಹಲಿಯಲ್ಲಿ ಓದುತ್ತಿರುವ ತಮಿಳು ನಾಡು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿ ಸಂಘಗಳು ಹಾಗೂ ರಾಜಕೀಯ ಪಕ್ಷಗಳು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ತಮಿಳು ನಾಡು ಸರ್ಕಾರಕ್ಕೆ ತಿಳಿಸಿದೆ.

    ಈ ಹಿಂದೆ ಎಂದರೆ ಕಳೆದ ವರ್ಷ ತಮಿಳು ನಾಡಿನ ವಿದ್ಯಾರ್ಥಿಯಾದ ಸರವಣನ್ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಸರವಣನ್ ಕೂಡ ದೆಹಲಿಯಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು. ಸರವಣನ್ ಸಾವನ್ನಪ್ಪಿದ್ದ ಜಾಗದಲ್ಲೂ ಕೂಡ ಇಂಜೆಕ್ಷನ್ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಂದ ನಂತರ ಲೆತಲ್ ಇಂಜೆಕ್ಷನ್‍ನಿಂದ ಸರವಣನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.

    ಈ ಘಟನೆಯಲ್ಲಿ ಸಾವನ್ನಪ್ಪಿದ ಸರವಣನ್ ಹಾಗೂ ಶರತ್ ಬಾಬು ಇಬ್ಬರೂ ತಮಿಳು ನಾಡಿನ ತಿರುಪೂರುದವರಾಗಿದ್ದು, ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು ಎಂದು ವರದಿಯಾಗಿದೆ.

  • ಮೃತ ಯುವತಿಯ ಹೃದಯವೇ ಕಾಣೆ- ಅರ್ಧಕ್ಕೆ ನಿಂತ ನಿಗೂಢ ಸಾವಿನ ತನಿಖೆ

    ಮೃತ ಯುವತಿಯ ಹೃದಯವೇ ಕಾಣೆ- ಅರ್ಧಕ್ಕೆ ನಿಂತ ನಿಗೂಢ ಸಾವಿನ ತನಿಖೆ

    ಮುಂಬೈ: 5 ವರ್ಷಗಳ ಹಿಂದೆ ನಡೆದ ಯುವತಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಈಗ ಅರ್ಧಕ್ಕೆ ನಿಂತಿದೆ. ಕಾರಣ ಮೃತ ಯುವತಿಯ ಹೃದಯ ಕಾಣೆಯಾಗಿದೆ.

    2012ರಲ್ಲಿ ತನ್ನ 19ನೇ ಹುಟ್ಟುಹಬ್ಬದ ದಿನದಂದೇ ಯುವತಿ ಸನಮ್ ಸಾವನ್ನಪ್ಪಿದ್ದಳು. ಆಕೆಯ ಸಾವಿನ ತನಿಖೆಗೆ ಈಗ ತೊಡಕುಂಟಾಗಿದೆ. ಯಾವುದೋ ವಯಸ್ಸಾದ ಮಹಿಳೆಯ ಹೃದಯವನ್ನ ಪರೀಕ್ಷೆಗೆ ನೀಡಲಾಗಿದೆ ಎಂದು ಕೆಲವು ವಾರಗಳ ಹಿಂದೆ ಹೈದರಾಬಾದ್‍ನ ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿದ ಬಳಿಕವಷ್ಟೆ ಯುವತಿಯ ಹೃದಯ ಕಾಣೆಯಾಗಿರೋದು ಬಹಿರಂಗಾವಗಿದೆ. ಇದೀಗ ಕಾಡ್ತಿರೋ ಅನೇಕ ಪ್ರಶ್ನೆಗಳಿಗೆ ಸನಮ್ ಪೋಷಕರು ಉತ್ತರ ಹುಡುಕುತ್ತಿದ್ದಾರೆ.

    ಬೇಕಂತಲೇ ಬದಲಾಯಿಸಿದ್ದಾರೆ: ಸನಮ್ ತಾಯಿ ನಾಗಿನಾ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಯಾರೋ ಬೇಕೆಂತಲೇ ತನಿಖೆಗೆ ತೊಂದರೆ ಮಾಡಲು ನನ್ನ ಮಗಳ ಹೃದಯವನ್ನ ಬದಲಾಯಿಸಿದ್ದಾರೆ. ಈ ರೀತಿ ಆಗಿರೋದು ಇದೇ ಮೊದಲೇನಲ್ಲ. ಮೊದಲ ಬಾರಿ ಪರೀಕ್ಷೆಗೆ ಯಾವುದೋ ಪುರುಷನ ಹೃದಯವನ್ನ ನೀಡಲಾಗಿದೆ ಅಂತ ಕಲಿನಾದ ವಿಧಿ ವಿಜ್ಞಾನ ಪ್ರಯೋಗಾಲಯ ಪತ್ತೆ ಮಾಡಿತ್ತು ಎಂದಿದ್ದಾರೆ. ನೇರವಾಗಿ ಅಥವಾ ಪರೋಕ್ಷವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಯಾರೋ ಪ್ರಭಾವಿ ವ್ಯಕ್ತಿಯೇ ಇದರ ಹಿಂದೆ ಇರಬಹುದು. ಒಂದು ಬಾರಿ ಆಗಿದ್ದರೆ ಏನೋ ತಪ್ಪಾಗಿ ಆಗಿರಬಹುದು ಎಂದು ಅರ್ಥಮಾಡಿಕೊಳ್ಳುತ್ತಿದ್ವಿ. ಆದ್ರೆ ಎರಡು ಬಾರಿ ಹೀಗಾಗಿದೆ. ಸನಮ್ ಹೃದಯ ಎಲ್ಲಿದೆ ಅನ್ನೋದೇ ಗೊತ್ತಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ಅಡಚಣೆ ಉಂಟು ಮಾಡಲೆಂದು ಬೇಕಂತಲೇ ಈ ರೀತಿ ಮಾಡಲಾಗಿದೆ ಎಂದು ನಾಗಿನಾ ಹೇಳಿದ್ದಾರೆ.

    ಹೃದಯ ಸಿಗದೆ ತನಿಖೆ ಅಸಾಧ್ಯ: ಯುವತಿಯ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ ಕಾಣೆಯಾಗಿರೋ ಅಂಗವಾದ ಹೃದಯವೇ ಈ ಪ್ರಕರಣದಲ್ಲಿ ಬಹುಮುಖ್ಯವಾದುದು. ಯುವತಿ 2012ರಲ್ಲಿ ಸಾವನ್ನಪ್ಪಿದಾಗ ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ರಕ್ತಕೊರತೆಯ ಹೃದಯರೋಗದ ಜೊತೆ ಮದ್ಯಪಾನದಿಂದ ಯುವತಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು. ಅಲ್ಲದೆ ಯುವತಿಯ ಹೃದಯದಲ್ಲಿ ಶೇ.70ರಷ್ಟು ಬ್ಲಾಕೇಜ್ ಇದೆ ಎಂದು ಹೇಳಲಾಗಿತ್ತು. ವೀರ್ಯ ಪತ್ತೆಯಾಗಿದ್ದು, ಸಾವಿಗೂ ಮುನ್ನ ಲೈಂಗಿಕ ಸಂಪರ್ಕ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಆದ್ರೆ ಇದನ್ನ ಯುವತಿಯ ಪೋಷಕರು ನಿರಾಕರಿಸಿದ್ದರು. ವಿಧಿ ವಿಜ್ಞಾನ ಪರೀಕ್ಷೆ ಮಾಡಲಾದ ಹೃದಯ ತಮ್ಮ ಮಗಳದ್ದೇ ಎಂದು ಸಾಬೀತುಪಡಿಸಲು ಡಿಎನ್‍ಎ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ರು.

    ಹೃದಯ ಸಂಬಂಧಿ ಕಾಯಿಲೆ ಹಾಗೂ ಮದ್ಯಪಾನದಿಂದ ಸನಮ್ ಸಾವನ್ನಪ್ಪಿದ್ದಾಳೆಂಬ ವಾದವನ್ನ ಆಕೆಯ ಪೋಷಕರು ತಳ್ಳಿಹಾಕಿದ್ದಾರೆ. ಆದ್ರೆ ಆಕೆಯ ಹೃದಯವನ್ನ ಪರೀಕ್ಷೆಗೆ ಒಳಪಡಿಸದೆ ಸಾವಿಗೆ ನಿಖರವಾದ ಕಾರಣವನ್ನ ಪತ್ತೆ ಮಾಡಲು ಸಾಧ್ಯವಿಲ್ಲ. ತಜ್ಞರಿಂದ ಅಭಿಪ್ರಾಯ ಪಡೆಯಲು ಹೃದಯವನ್ನ ಮೆಡಿಕಲ್ ಬೋರ್ಡ್‍ಗೆ ಕಳಿಸಬಹುದಿತ್ತು. ಆದ್ರೆ ಈಗ ಅಂಗವೇ ಕಾಣೆಯಾಗಿರೋದ್ರಿಂದ ಈ ವಾದಕ್ಕೆ ಉತ್ತರ ಹುಡುಕಲು ಸಾಧ್ಯವಿಲ್ಲ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಹೃದಯರೋಗವೇ ಇರಲಿಲ್ಲ: ನಮ್ಮ ಸನಮ್‍ಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ. ಆಕೆ ಫುಟ್‍ಬಾಲ್ ಆಟಗಾರ್ತಿಯಾಗಿದ್ದಳು. ಆಕೆ ಸಾವನ್ನಪ್ಪಿದ 12 ದಿನಗಳ ಹಿಂದೆ ಕಾಲೇಜ್ ಟೂರ್ನ್ ಮೆಂಟ್‍ನಲ್ಲಿ ಭಾಗವಹಿಸಿದ್ದಳು. ಅಲ್ಲದೆ ಘಟನೆಯ ಹಿಂದಿನ ದಿನ ಜಿಮ್‍ನಲ್ಲಿ ಕಾರ್ಡಿಯೋ ಎಕ್ಸರ್ಸೈಸ್ ಮಾಡಿದ್ದಳು. ನಾವು ಮರಣೋತ್ತರ ಪರೀಕ್ಷೆಯ ವರದಿಯನ್ನು ನಂಬಲು ಸಿದ್ಧವಿರಲಿಲ್ಲ. ಹೀಗಾಗಿ ಹೃದಯದ ಡಿಎನ್‍ಎ ಪರೀಕ್ಷೆಗೆ ಒತ್ತಾಯಿಸಿದ್ದೆವು. ಜೊತೆಗೆ ವೀರ್ಯದ ಡಿಎನ್‍ಎ ಪರೀಕ್ಷೆ ನಡೆಸುವಂತೆಯೂ ಕೇಳಿದ್ದೆವು ಎಂದು ಸನಮ್ ಪೋಷಕರು ಹೇಳಿದ್ದಾರೆ.

    2 ಬಾರಿ ಹೃದಯ ಬದಲಾವಣೆ: ಸನಮ್ ಪೋಷಕರ ಒತ್ತಾಯದ ಮೇಲೆ ಯುವತಿಯ ಮೃತದೇಹದ ಒಳಾಂಗಗಳನ್ನು ಕಲೀನಾ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಆಗ ಹೃದಯವು ಪುರುಷನದ್ದು ಎಂದು ವೈದ್ಯರು ದೃಢಪಡಿಸಿದ್ದರು. ಕಳೆದ ವರ್ಷ ಈ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿತ್ತು. 2016ರ ಆಗಸ್ಟ್‍ನಲ್ಲಿ ಹಾಗೂ ಇದೇ ವರ್ಷ ಜನವರಿಯಲ್ಲಿ ಸಿಬಿಐ ಸನಮ್ ಮೃತದೇಹವನ್ನು ಹೊರತೆಗೆಸಿತ್ತು. ಮೃತದೇಹದ ಅವಶೇಷಗಳು ಯುವತಿಯದ್ದೇ ಎಂದು ಡಿಎನ್‍ಎ ಪರೀಕ್ಷೆ ವರದಿಯಲ್ಲಿ ದೃಢವಾಗಿತ್ತು. ನಂತರ ಸಿಬಿಐ ಯುವತಿಯ ಒಳಾಂಗಳನ್ನು ಪರೀಕ್ಷೆಗಾಗಿ ಹೈದರಾಬಾದ್‍ಗೆ ಕಳಿಸಿತ್ತು. ಆದ್ರೆ ಈ ಬಾರಿ ಹೃದಯವು ವಯಸ್ಸಾದ ಮಹಿಳೆಯದ್ದು ಎಂದು ಪತ್ತೆಯಾಗಿದೆ. ಆದರೂ ಉಳಿದ ಅಂಗಗಳಾದ ಕಿಡ್ನಿ, ಲಿವರ್, ಸ್ಪೀನ್…ಇತ್ಯಾದಿ ಕುಟುಂದ ಡಿಎನ್‍ಎಗೆ ಹೊಂದಿಕೆಯಾಗಿವೆ.

    ಸನಮ್ ಹೃದಯ ಕಾಣೆಯಾಗಿರೋದೇ ನಮಗೆ ದೊಡ್ಡ ಸವಾಲಾಗಿದೆ. ನಾವು ಮೃತದೇಹವನ್ನ ಹೊರತೆಗೆಸಿದೆವು. ಡಿಎನ್‍ಎ ಕೂಡ ಆಕೆಯ ಪೋಷಕರೊಂದಿಗೆ ಹೊಂದಿಕೆಯಾಗಿತ್ತು. ಹೀಗಾಗಿ ಸಮಾಧಿ ಸನಮ್‍ಳದ್ದೇ ಎಂಬುದು ಸ್ಪಷ್ಟವಾಗಿತ್ತು. ಆದ್ರೆ ಈಗ ಆಕೆಯ ಹೃದಯ ಎಲ್ಲಿ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

    2012ರ ಫ್ಲ್ಯಾಶ್‍ಬ್ಯಾಕ್: ಸನಮ್ ಪುಣೆಯ ಸಿಂಬೋಸಿಸ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಫ್ಯಾಶನ್ ಡಿಸೈನಿಂಗ್ ಅಂಡ್ ಕಮ್ಯನಿಕೇಷನ್ ವಿದ್ಯಾರ್ಥಿನಿಯಾಗಿದ್ದಳು. 2012ರ ಅಕ್ಟೋಬರ್ 12ರಂದು ಆಕೆಯ ಹುಟ್ಟುಹಬ್ಬ. ಮನೆಯಲ್ಲಿ ಕೇಕ್ ಕತ್ತರಿಸಿದ್ದಷ್ಟೇ ಆಕೆಯ ಪೋಷಕರಿಗೆ ಇರುವ ಕೊನೆಯ ನೆನಪು. ಬಳಿಕ ಸನಮ್ ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದಳು. ಮರುದಿನ ಬೆಳಿಗ್ಗೆ ತಮ್ಮ ಮಗಳು ಆಸ್ಪತ್ರೆಯಲ್ಲಿರುವುದಾಗಿ ಸನಮ್ ಪೋಷಕರಿಗೆ ಮಾಹಿತಿ ಬಂದಿತ್ತು. ಅವರು ಆಸ್ಪತ್ರೆಗೆ ಹೋಗುವ ವೇಳೆಗೆ ಸನಮ್ ಸಾವನ್ನಪ್ಪಿದ್ದಳು. ಆಸ್ಪತ್ರೆಯಲ್ಲಿ ಆಕೆಯ ಸ್ನೇಹಿತರ್ಯಾರೂ ಇರಲಿಲ್ಲ.

    ಯಾರು ಹೊಣೆ: ಅಂದು ರಾತ್ರಿ ಸನಮ್ ಜೊತೆಗಿದ್ದ ಸ್ನೇಹಿತರನ್ನ ಸಿಬಿಐ ತಂಡ ವಿಚಾರಣೆ ಮಾಡಿದೆ. ಆದ್ರೆ ಅವರು 2012ರಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನೀಡಿದ್ದ ಹೇಳಿಕೆಗಳಲ್ಲಿ ಭಿನ್ನತೆಯಿರೋದು ಗೊತ್ತಾಗಿದೆ. ಸನಮ್ ಹೃದಯವನ್ನು ಬದಲಾವಣೆ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ತೀರಾ ಎಂಬ ಪ್ರಶ್ನೆಗೆ, ನಮ್ಮ ತನಿಖೆ ಮುಂದುವರೆದಿದೆ. ಸನಮ್ ಹೃದಯವನ್ನ ಬೇಕಂತಲೇ ಬದಲಾವಣೆ ಮಾಡಲಾಗಿದ್ಯಾ ಅಥವಾ ತಪ್ಪಾಗಿ ಆಗಿದ್ಯಾ ಎಂದು ಪತ್ತೆ ಮಾಡುತ್ತಿದ್ದೇವೆ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಕೊಲೆಯೋ, ಸಹಜ ಸಾವೋ?: ಸನಮ್ ಹೃದಯ ಪತ್ತೆಯಾಗದ ಹೊರತು ಪೊಲೀಸರು ಇದನ್ನ ಕೊಲೆ ತನಿಖೆ ಎಂದು ಕೂಡ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಹಜ ಸಾವು ಎಂದು ಹೇಳಿದ್ದಾರೆ. ಆದ್ರೆ ಸನಮ್ ಹೃದಯ ಸಿಗದೆ ನಾವು ಇದು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಉತ್ತರ ಸಿಗದ ಪ್ರಶ್ನೆಗಳು:
    > ಸನಮ್ ಸ್ನೇಹಿತರು ಆಸ್ಪತ್ರೆಯಲ್ಲಿ ಅಥವಾ ಅಂತ್ಯಸಂಸ್ಕಾರದ ವೇಳೆ ಯಾಕೆ ಇರಲಿಲ್ಲ?
    > ಸನಮ್ ಫೋನ್ ಮೆಮೊರಿ ಸಂಪೂರ್ಣವಾಗಿ ಕ್ಲೀನ್ ಮಾಡಿದ್ದು ಯಾರು?
    > ಆಕೆಯ ಫೋನ್‍ನಲ್ಲಿದ್ದ 8 ಜಿಬಿ ಮೆಮೊರಿ ಕಾರ್ಡ್ ಜಾಗದಲ್ಲಿ 2 ಜಿಬಿ ಕಾರ್ಡ್ ಬದಲಿಸಿದ್ದು ಯಾರು?
    > ಮರಣೋತ್ತರ ಪರೀಕ್ಷೆಯ ವೇಳೆ ವೈದ್ಯರು ದೇಹದ ಪ್ರಮುಖ ಅಂಗಗಳ ಫೋಟೋ ಯಾಕೆ ತೆಗೆದಿರಲಿಲ್ಲ.
    > ಅಧಿಕಾರಿಗಳು ಸನಮ್ ಹೃದಯದ ಜಾಗದಲ್ಲಿ ಪುರುಷನ ಹೃದಯ ಬದಲಾಯಿಸಿದ್ದು ಹೇಗೆ?
    > ಎರಡನೇ ಬಾರಿಯೂ ಸನಮ್ ಹೃದಯ ಬದಲಾವಣೆ ಆದದ್ದು ಹೇಗೆ?

  • ನಿಗೂಢವಾಗಿ ಸಾವನಪ್ಪಿದ ಅಧಿಕಾರಿ ಅನುರಾಗ್ ತಿವಾರಿ ಕೊನೆ ಕ್ಷಣದ ವಿಡಿಯೋ ನೋಡಿ

    ನಿಗೂಢವಾಗಿ ಸಾವನಪ್ಪಿದ ಅಧಿಕಾರಿ ಅನುರಾಗ್ ತಿವಾರಿ ಕೊನೆ ಕ್ಷಣದ ವಿಡಿಯೋ ನೋಡಿ

    ಬೆಂಗಳೂರು: ಉತ್ತರಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ಕರ್ನಾಟಕದ ಐಎಎಸ್ ಅಧಿಕಾರು ಅನುರಾಗ್ ತಿವಾರಿ ಅವರ ಕೊನೆಯ ಕ್ಷಣದ ವಿಡಿಯೋವೊಂದು ಲಭ್ಯವಾಗಿದೆ.

    ಉತ್ತರಪ್ರದೇಶ ರಾಜಧಾನಿ ಲಕ್ನೋದ ಹಜರತ್‍ಗಂಜ್‍ನಲ್ಲಿರುವ ಆರ್ಯನ್ ಹೋಟೆಲ್‍ಗೆ ಎಂಟ್ರಿ ಕೊಡ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೃಶ್ಯದಲ್ಲಿ ಗ್ಲಾಸ್ ಡೋರ್‍ನ್ನು ತಳ್ಳಿಕೊಂಡು ತಿವಾರಿ ಎಂಟ್ರಿ ಕೊಡ್ತಿದ್ದಾರೆ. ಒಳಗೆ ಬಂದ ಬಳಿಕ ತಿವಾರಿ ಅಲ್ಲೇ ಇದ್ದ ಸ್ಟ್ಯಾಂಡ್‍ವೊಂದರಲ್ಲೇ ಏನನ್ನೋ ತೆಗೆದು ಓದುತ್ತಿದ್ದಾರೆ. ಹೋಟೆಲ್‍ಗೆ ತಿವಾರಿ ಎಂಟ್ರಿ ಕೊಡೋ ವೇಳೆ ಅವರ ಬ್ಯಾಚ್‍ಮೇಟ್ ಆಗಿದ್ದ ಪಿಎನ್ ಸಿಂಗ್ ಕೂಡಾ ಇದ್ದರು ಎನ್ನುವುದು ವಿಶೇಷ.

    ಇದನ್ನೂ ಓದಿ: Exclusive: ಅನುರಾಗ್ ತಿವಾರಿಗೆ ಇತ್ತು ಜೀವ‌ ಭಯ- 4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ 

    ಮೇ 17ರಂದು ತಿವಾರಿ ಮೃತದೇಹ ಹೋಟೆಲ್‍ನ ಬಳಿಯೇ ಸಿಕ್ಕಿತ್ತು. ಮೂರು ದಿನಗಳಿಂದ ಇದೇ ಹೋಟೆಲ್‍ನಲ್ಲಿ ತಿವಾರಿ ತಂಗಿದ್ದರೂ ರೂಂ ಬುಕ್ ಆಗಿದ್ದು ಮಾತ್ರ ಅವರ ಸ್ನೇಹಿತ ಪಿಎನ್ ಸಿಂಗ್ ಹೆಸರಲ್ಲಿ ಅನ್ನೋದು ವಿಚಿತ್ರ. ತಿವಾರಿ ಮರಣೋತ್ತರ ಪರೀಕ್ಷೆ ಕೂಡಾ ಅಪೂರ್ಣವಾಗಿದ್ದು ಸಾವಿಗೆ ಖಚಿತ ಕಾರಣ ಸಿಕ್ಕಿಲ್ಲ.

    ಇದನ್ನೂ ಓದಿ: ಅನುರಾಗ್ ತಿವಾರಿ ನಿಗೂಢ ಸಾವು: ಹರ್ಷ ಗುಪ್ತಾಗೆ ನೋಟಿಸ್ ಜಾರಿ? 

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿ  ಜನ್ಮದಿನದಂದೇ ಶವವಾಗಿ ಪತ್ತೆ 

    https://www.youtube.com/watch?v=tzqcBK2kx8k