Tag: Mysore Palace

  • Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?

    Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?

    ಜಂಬೂ ಸವಾರಿಯಿಲ್ಲದೇ ಮೈಸೂರು ದಸರಾ (Mysuru Dasara) ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮೈಸೂರು ದಸರಾ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಈ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಅಂದ್ರೆ ಆನೆಗಳೇ ಆಕರ್ಷಣೆ. ಮೈಸೂರು ಮಹಾರಾಜರ ಆಡಳಿತದ ನಂತರವೂ ಆನೆಯ ಮೇಲೆ ಅಂಬಾರಿ ಹೊರುವ ಪರಂಪರೆ ಸಾಗಿ ಬಂದಿದೆ. ಅದೇ ರೀತಿ ಈ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಅಷ್ಟೇ ವಿಸ್ಮಯ. ಹೀಗೆ ಇತಿಹಾಸ ನಿರ್ಮಿಸಿ ಹೋದ ಹಳೆಯ ಆನೆಗಳ ಸಾಲಿನಲ್ಲಿ ಈಗ ಅಭಿಮನ್ಯುವೇ (Abhimanyu Elephant) ಕೊನೆಯವನಾಗಿದ್ದು, ದಶಕಗಳಿಂದ ಈಚೆಗೆ ಬಂದ ಆನೆಗೆ ಅಂಬಾರಿ ಹೊರುವ ಹೊಣೆ ಬಿಟ್ಟುಕೊಡುವ ಕಾಲ ಬಂದೇ ಬಿಟ್ಟಿದೆ.

    ಹೌದು. ಪ್ರಸಕ್ತ ವರ್ಷದ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ಶುರುವಾಗಿದೆ. ನಾಡಹಬ್ಬ ದಸರಾದ ಐತಿಹಾಸಿಕ ಜಂಬೂ ಸವಾರಿಯಲ್ಲಿ ಈ ಬಾರಿಯೂ 59 ವರ್ಷ ವಯಸ್ಸಿನ ಅಭಿಮನ್ಯು ಆನೆಯೇ ಅಂಬಾರಿ ಹೊರಲಿದೆ. ದಸರಾ ಮಹೋತ್ಸವಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪೈಕಿ 9 ಆನೆಗಳ ಪಟ್ಟಿಯನ್ನ ಈಗಾಗಲೇ ಬಿಡುಗಡೆ ಮಾಡಿದ್ದು, ಆಗಸ್ಟ್‌ 4ರಂದು (ಸೋಮವಾರ) ಅವು ಗಜಪಯಣದ ಮೂಲಕ ಅರಮನೆ ಅಂಗಳಕ್ಕೆ ಬಂದಿಳಿಯಲಿವೆ.

    ಮೊದಲ ಹಂತದಲ್ಲಿ ನಾಡಿಗೆ ಬರಲಿರುವ 9 ಆನೆಗಳು

    ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯು (59 ವರ್ಷ), ಮತ್ತಿಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್‌ (24), ಧನಂಜಯ (44), ಪ್ರಶಾಂತ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40), ದುಬಾರೆ ಶಿಬಿರದ ಕಾವೇರಿ (45/ಹೆಣ್ಣಾನೆ), ಬಳ್ಳೆಯ ಲಕ್ಷ್ಮಿ (53/ಹೆಣ್ಣಾನೆ).

    ಮುಂದಿನ ವರ್ಷ ಅಂಬಾರಿ ಹೊತ್ತರೆ ಮುಗಿಯಿತು:

    ದಸರಾ ಆನೆಗಳಿಗೂ (Dasara Elephants) ಶತಮಾನದ ನಂಟು ಇದೆ. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರಿನ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಆದ್ರೆ ಈಗ ಇರುವ ಹಳೆಯ ಆನೆಗಳ ಪೈಕಿ ಅಭಿಮನ್ಯುನೇ ಹಿರಿಯ. 59 ವರ್ಷ ವಯಸ್ಸಿನ ಅಭಿಮನ್ಯು ಮುಂದಿ ವರ್ಷ ಅಂಬಾರಿ ಹೊತ್ತರೆ ಮುಗಿಯಿತು. ಏಕೆಂದರೆ ಅರಣ್ಯ ಅಧಿಕಾರಿಗಳು ಹೇಳುವಂತೆ 60 ವರ್ಷ ತುಂಬಿದ ಆನೆಗಳಿಗೆ ನಿಯಮದಂತೆ ನಿವೃತ್ತಿ ಕೊಡಬೇಕು. ಅಭಿಮನ್ಯುವಿಗೆ ಈಗ 59 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷ 60ನೇ ವಯಸ್ಸಿಗೆ ಕಾಲಿಡಲಿದ್ದಾನೆ. ಮುಂದಿನ ವರ್ಷ ಅಂಬಾರಿ ಹೊತ್ತರೆ ಅಲ್ಲಿಗೆ ಅಭಿಮನ್ಯು ಇತಿಹಾಸ ಪುಟ ಸೇರಿಕೊಳ್ಳಲಿದ್ದಾನೆ ಎನ್ನುತ್ತಾರೆ ಡಿಸಿಎಫ್‌ ಪ್ರಭು.

    ಅಭಿಮನ್ಯು ಹೆಮ್ಮರವಾಗಿ ಬೆಳೆದಿದ್ದು ಹೇಗೆ?

    1951ರ ಸಮಯದಲ್ಲಿ ಸುರ್ಗುಜಾ ಮಧ್ಯಪ್ರದೇಶದ ಭಾಗವಾಗಿತ್ತು. ಆದ್ರೆ 2000 ಇಸವಿಯ ನಂತರ ಛತ್ತಿಸ್‌ಘಡದ ಜಿಲ್ಲೆಯಾಗಿ ಸೇರ್ಪಡೆಯಾಯಿತು. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟು ಇದೆ. ಅದು ಹೇಗೆ ಅಂತೀರಾ..? ಈ ಹಿಂದೆ ಸುಮಾರು 3 ದಶಕಗಳ ಕಾಲ ಸರ್ಗುಜಾದಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತು. ಆನೆಗಳನ್ನ ಸೆರೆ ಹಿಡಿಯಬೇಕು, ಉಪಟಳ ತಪ್ಪಿಸಬೇಕು ಅನ್ನೋ ಕೂಗು ಸರ್ಗೂಜಾ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಅಂದಿನ ಮಧ್ಯಪ್ರದೇಶದ ರಾಜ್ಯ ಸರ್ಕಾರ ಆನೆಗಳನ್ನ ಸೆರೆ ಹಿಡಿಯೋದಕ್ಕೇನೋ ಅನುಮತಿ ನೀಡಿತು. ಆದ್ರೆ ಅವುಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಆಗ ಮಧ್ಯಪ್ರದೇಶದ ಚಿತ್ತ ಹಾಯಿಸಿದ್ದು, ಕರ್ನಾಟಕದತ್ತ. ಖೆಡ್ಡಕ್ಕೆ ಕೆಡವುವ ಕಾರ್ಯಾಚರಣೆಯಲ್ಲಿ ಕರ್ನಾಟಕದ ಆನೆಗಳು ಆಗಲೇ ಬಲಶಾಲಿಗಳಾಗಿ ಗುರುತಿಸಿಕೊಂಡಿದ್ದವು. ಇಲ್ಲಿಂದ ಆನೆಗಳನ್ನ ಕರೆದುಕೊಂಡು ಬಂದು ಆನೆಗಳನ್ನ ಸೆರೆಹಿಡಿಯುವ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಮುಂದಾಯಿತು. ಅದರಂತೆ ಇಂದಿನ ಅಂಬಾರಿ ಹೊರುವ ಕ್ಯಾಪ್ಟನ್‌ ಅಭಿಮನ್ಯು ಸೇರಿ ಹಲವು ಆನೆಗಳ ತಂಡವನ್ನ ಸರ್ಗುಜಾಕ್ಕೆ ಕರೆದೊಯ್ಯಲಾಯ್ತು. ನೀರಿಕ್ಷೆಯಂತೆ ನಮ್ಮ ಆನೆಗಳು ಸರ್ಗುಜಾದಲ್ಲಿ ಸುಮಾರು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration – Wild Elephant Captureʼ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್ ಎಂದರೆ ʻಅಭಿಮನ್ಯುʼ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದ್ರೆ ಇನ್ನೊಂದು ವರ್ಷ ಕಳೆದರೆ ಆಮೇಲೆ ಅಭಿಮನ್ಯು ಅಂಬಾರಿ ಹೊರುವ ಸೌಭಾಗ್ಯದಿಂದ ದೂರವಾಗಲಿದ್ದಾನೆ ಅನ್ನೋದು ವಿಷಾದನೀಯ.

    ಅಂಬಾರಿ ಹೊತ್ತ ಆನೆಗಳು ಅಜರಾಮರ

    ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಆನೆಗಳು ಭಾಗಿಯಾಗಿವೆ. ಇಂತ ಆನೆಗಳ ಪಟ್ಟಿ ನೂರಕ್ಕೂ ಅಧಿಕ. ಆದ್ರೆ ಅಂಬಾರಿ ಹೊತ್ತ ಆನೆಗಳ ಸಂಖ್ಯೆ ಕಡಿಮೆ. ಇದರಲ್ಲಿ ಶತಮಾನಗಳಷ್ಟು ಹಳೆಯಾದ ಜಯಮಾರ್ತಾಂಡ ಆನೆಯೇ ಅತ್ಯಂತ ಹಿರಿಯ. ಈತನೇ ಅಂಬಾರಿ ಹೊತ್ತ ಮೊದಲಿಗ. ಹಲವಾರು ವರ್ಷ ಮಾರ್ತಾಂಡ ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿ ಮಹಾರಾಜರ ಪ್ರೀತಿಗೂ ಪಾತ್ರನಾಗಿದ್ದ. ಈಗಲೂ ಅರಮನೆಯ ದೊಡ್ಡ ದ್ವಾರದ (ಜಯಮಾರ್ತಾಂಡ ದ್ವಾರ) ರೂಪದಲ್ಲಿ ಅಜರಾಮರನಾಗಿದ್ದಾನೆ. ಆನಂತರ ವಿಜಯಬಹದ್ದೂರ್, ರಾಮಪ್ರಸಾದ್, ನಂಜುಂಡ, ಐರಾವತ, ಮೋತಿಲಾಲ್, ರಾಜೇಂದ್ರ, ಬಿಳಿಗಿರಿ, ದ್ರೋಣ, ಬಲರಾಮ, ಅರ್ಜುನನ ನಂತರ ಅಭಿಮನ್ಯು ಈ ಸ್ಥಾನ ಅಲಂಕರಿಸಿದ್ದಾನೆ.

    ಕೆಲ ಆನೆಗಳ ಅಕಾಲಿಕ ಮರಣ

    ಇನ್ನು ದಸರೆಯಲ್ಲಿ ಪಾಲ್ಗೊಂಡು ವಿಶ್ವವಿಖ್ಯಾತಿಯಾಗಿದ್ದ ಆನೆಗಳ ಪೈಕಿ ಕೆಲ ಆನೆಗಳು ಅಕಾಲಿಕ ಮರಣಕ್ಕೆ ತುತ್ತಾಗಿ ಕಹಿ ಸುದ್ದಿ ನೀಡಿದ ಘಟನೆಗಳೂ ನಮ್ಮ ಕಣ್ಣಮುಂದಿವೆ. ಹೌದು. ಈ ಹಿಂದೆ ದ್ರೋಣ ಆನೆ ವಿದ್ಯುತ್‌ ದುರಂತದಿಂದ ಸಾವನ್ನಪ್ಪಿತ್ತು. 2023ರಲ್ಲಿ ಎಲ್ಲರ ಮನೆ ಮಾತಾಗಿದ್ದ ಅರ್ಜುನ ಆನೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನದಲ್ಲಿ ಕಾಡಾನೆ ತಿವಿತದಿಂದ ಸಾವನ್ನಪ್ಪಿತ್ತು. ಕೋಟ್ಯಂತರ ಅಭಿಮಾನಿಗಳು ಅರ್ಜುನನ್ನ ನೆನೆದು ಕಣ್ಣೀರಿಟ್ಟಿದ್ದರು. ಇದೀಗ ಸರ್ಕಾರ ಅರ್ಜುನನ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ಘೋಷಣೆ ಮಾಡಿದೆ. ಇದಕ್ಕೆ ಒಂದು ವರ್ಷದ ಮುನ್ನವೇ ಅಂಬಾರಿ ಹೊರುವ ಆನೆಗಳ ಸಾಲಿನಲ್ಲಿದ್ದ ಗೋಪಾಲಕೃಷ್ಣ ಆನೆಯೂ ಅಯ್ಯಪ್ಪ ಎಂಬ ಆನೆ ಜೊತೆಗೆ ಕಾದಾಟ ನಡೆಸಿ ಸಾವನ್ನಪ್ಪಿತ್ತು. ದಸರೆ, ಗಜಪಯಣ ಬಂತೆಂದರೆ, ಆನೆ ಪ್ರಿಯರಿಗೆ ಇದು ಮರೆಯಲಾಗದ ಕಹಿ ಘಟನೆ.

    elephant gopalaswamy

    ಅಭಿಮನ್ಯು ನಂತರದ ಯಜಮಾನ ಯಾರು?

    ದಸರಾ ಪ್ರತಿ ವರ್ಷದ ನಾಡ ಹಬ್ಬ. ಮೈಸೂರು ದಸರಾವೆಂದರೆ ಅದು ಜಂಬೂ ಸವಾರಿಯೂ ಹೌದು. ಅಭಿಮನ್ಯು ನಿವೃತ್ತಿ ನಂತರ ಹಳೆ ತಲೆಮಾರಿನ ಆನೆಗಳ ಕೊಂಡಿ ಮುಗಿಯಲಿದೆ. ಬಳಿಕ ಹೊಸ ತಲೆಮಾರಿನ ಆನೆಗಳದ್ದೇ ಕಾಲ. 2026ರ ನಂತರ ಹೊಸ ಕ್ಯಾಪ್ಟನ್ ಬೇಕೇ ಬೇಕು. ಇದಕ್ಕಾಗಿ ಈಗಿನಿಂದಲೇ ಅರಣ್ಯ ಇಲಾಖೆ ತಯಾರಿಯನ್ನೂ ಮಾಡಿಕೊಂಡಿದೆ. ದಶಕದ ಹಿಂದೆಯಷ್ಟೆ ಸೆರೆ ಸಿಕ್ಕು ನಾಲೈದು ವರ್ಷದಿಂದ ದಸರಾಕ್ಕೆ ಬರುತ್ತಿರುವ ಆನೆಗಳಿಗೂ ಅಂಬಾರಿ ಹೊರುವ ಅವಕಾಶ ಸಿಗಲಿದೆ. ಇದರಲ್ಲಿ ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಪ್ರಶಾಂತ, ಏಕಲವ್ಯ ಆನೆಗಳಿವೆ. ಇವುಗಳಲ್ಲಿ ಧನಂಜಯ ಇಲ್ಲವೇ ಮಹೇಂದ್ರಗೆ ಮುಂದಿನ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    ಅಂಬಾರಿ ಆನೆಗಳ ಸಿನಿಮಾ ನಂಟು

    ಹಲವು ಆನೆಗಳು ಅಂಬಾರಿ ಹೊತ್ತು ಹೆಸರುವಾಸಿಯಾಗಿವೆ. ಅಲ್ಲದೇ ಸಿನಿಮಾ ನಂಟನ್ನು ಹೊಂದಿರುವುದು ವಿಶೇಷ. ಹೌದು. ಐರಾವತ ಆನೆಯಂತು ಹಾಲಿವುಡ್‌ ಸಿನಿಮಾದಲ್ಲೇ ನಟಿಸಿ ಸೈ ಎನಿಸಿಕೊಂಡಿದೆ. 1935ರಲ್ಲಿ ತೆರೆ ಕಂಡ ʻದಿ ಎಲಿಫೆಂಟ್‌ ಬಾಯ್‌ʼ ಅನ್ನೋ ಚಿತ್ರದಲ್ಲಿ ನಟಿಸಿದ್ದ. ಇನ್ನೂ ಅಣ್ಣಾವ್ರ ಸೂಪರ್‌ ಹಿಟ್‌ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ರಾಜೇಂದ್ರ ಆನೆ. ಅಣ್ಣಾವ್ರ ಗಂಧದ ಗುಡಿ ಸಿನಿಮಾ ನೋಡುವಾಗೆಲ್ಲ ರಾಜೇಂದ್ರ ಕಣ್ಮುಂದೆ ಬರುತ್ತಾನೆ. ಇನ್ನೂ ಅಭಿಮನ್ಯು ಕೂಡ ವಿಶೇಷ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ದ್ರೋಣ ಆನೆಯೂ ಸ್ಟೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು.

    ಹೀಗೆ ಮೈಸೂರು ದಸರಾದ ಮುಕುಟ ಮಣಿಗಳಂತೆ ಕಾಣಿಸಿಕೊಳ್ಳುವ ದಸರಾ ಆನೆಗಳ ಇತಿಹಾಸ ಅವಿಸ್ಮರಣೀಯವಾಗಿದೆ. ಆದ್ರೆ ಅಭಿಮನ್ಯು ನಂತರ ಯಾರಾಗಲಿದ್ದಾರೆ ಅಂಬಾರಿಯ ಸಾರಥಿ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

    ಮೋಹನ ಬನ್ನಿಕುಪ್ಪೆ

  • ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    – ಶನಿವಾರ ವಿಜಯದಶಮಿ ಮೆರವಣಿಗೆಗೆ ಭರದ ಸಿದ್ಧತೆ

    ಮೈಸೂರು: ನವರಾತ್ರಿಯ 9ನೇ ದಿನವಾದ ಇಂದು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಲಿದೆ. ರಾಜವಂಶಸ್ಥ ಯದುವೀರ್ ಪಟ್ಟದ ಆನೆ, ಕುದುರೆ, ಹಸು ಸೇರಿ ಖಾಸಾ ಆಯುಧಗಳು, ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಿದ್ದು, ದಸರಾ (Dasara) ವೈಭವ ಮತ್ತಷ್ಟು ಕಳೆಗಟ್ಟಲಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

    ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9 ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯುಧ ಪೂಜಾ ನೆರವೇರಿಸಲಿದ್ದಾರೆ. ಈ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗಿನಿಂದಲೇ ಆಯುಧ ಪೂಜೆಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ.

    ಬೆಳಿಗ್ಗೆ 6ಗಂಟೆಗೆ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾಹೋಮ ನೆರವೇರಲಿದ್ದು, ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನವಾಗಲಿವೆ. ಖಾಸಗಿ ಆಯುಧಗಳನ್ನ ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ. ಬಳಿಕ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನ ಆನೆ ಬಾಗಿಲ ಮುಖಾಂತರ ಅರಮನೆಯ ಕಲ್ಯಾಣ ಮಂಟಪಕ್ಕೆ ರವಾನೆ ಮಾಡಲಾಗುತ್ತದೆ. ನಂತರ ಚಂಡಿ ಹೋಮ ಪೂರ್ಣಾಹುತಿ ನೆರವೇರಲಿದೆ. ಆ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಬಂದು, ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ.

    ಆಯುಧ ಪೂಜೆಯ ಕೊನೆಯಲ್ಲಿ ತಾವು ಬಳಸುವ ವಾಹನಗಳಿಗೂ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ನವರಾತ್ರಿಯ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡುತ್ತಾರೆ. ಆ ಬಳಿಕ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ.

    ಒಟ್ಟಾರೆ ಅಂಬಾವಿಲಾಸ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧಪೂಜೆ ನೆರವೇರಿಸುವ ಮೂಲಕ ನವರಾತ್ರಿ ಪೂಜೆ ಪೂರ್ಣಗೊಳ್ಳಲಿದೆ. ನಾಳೆ ವಿಜಯದಶಮಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ.

  • ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಮೈಸೂರು: ಜಿಲ್ಲಾಡಳಿತ ದಸರಾ (Dasara) ಲೆಕ್ಕಚಾರ ದಾಖಲೆ ಬಿಡುಗಡೆ ಮಾಡಿದ್ದು, ಈ ಬಾರಿ ನೆರವೇರಿದ ಅದ್ಧೂರಿ ದಸರಾಗೆ ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿದೆ.

    ಕಳೆದ ಎರಡು ವರ್ಷ ಕೊರೊನಾದಿಂದಾಗಿ (Corona) ಅರಮನೆ (Mysore Palace) ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಅದ್ಧೂರಿ ಆಚರಣೆಗೆ ಮೈಸೂರು ಜಿಲ್ಲಾಡಳಿತಕ್ಕೆ ವಿವಿಧ ಮೂಲಗಳಿಂದ ಒಟ್ಟು 31 ಕೋಟಿ 8 ಲಕ್ಷ ರೂಪಾಯಿ ಹಣ ಸಂದಾಯವಾಗಿತ್ತು. ಇದರಲ್ಲಿ 76 ಲಕ್ಷ ರೂಪಾಯಿ ಗೋಲ್ಡ್ ಕಾರ್ಡ್ (Dasara GoldCard) ಹಾಗೂ ದಸರಾ ಟಿಕೆಟ್ ಮಾರಾಟದಿಂದಲೇ ಬಂದಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ಬಂದ 31 ಕೋಟಿ 8 ಲಕ್ಷ ರೂಪಾಯಿಯಲ್ಲಿ 28 ಕೋಟಿ 74 ಲಕ್ಷ ರೂಪಾಯಿ ದಸರಾಗೆ ಖರ್ಚಾಗಿದೆ. ಇದರಲ್ಲೇ ಮಂಡ್ಯ (Mandya), ಚಾಮರಾಜನಗರ (Chamarajanagar) ಹಾಗೂ ಹಾಸನ (Hassan) ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ದಸರಾ ಅನುದಾನ ಕೂಡ ಸೇರಿದೆ. ಮೈಸೂರಿನ ಯದುವಂಶದವರಿಗೆ ಗೌರವಧನವಾಗಿ (ರಾಜಧನ) 47 ಲಕ್ಷ ರೂಪಾಯಿ ನೀಡಲಾಗಿದೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

    ಯುವ ದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ 36 ಲಕ್ಷ ರೂಪಾಯಿ ವೆಚ್ಚವಾಗಿದೆ. ದಸರಾ ಮೆರವಣಿಗೆಗೆ 2 ಕೋಟಿ 22 ಲಕ್ಷ, ಪಂಜಿನ ಕವಾಯತಿಗೆ 1 ಕೋಟಿ 17 ಲಕ್ಷ ರೂ.ಗಳಷ್ಟು ಹಣ ಖರ್ಚಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಸಚಿವರು, ಒಟ್ಟು 22 ವಿವಿಧ ಸಮಿತಿ ಅಧಿಕಾರಿಗಳು ತಾವು ಖರ್ಚು ಮಾಡಿರುವ ಹಣದ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಆದರೆ, ಲೆಕ್ಕ ಸಲ್ಲಿಸುವ ವೇಳೆಗೆ ಜಿಲ್ಲಾಧಿಕಾರಿ ಬದಲಾದ ಕಾರಣ ಈ ಲೆಕ್ಕದ ಪರಿಶೀಲನೆ ನಡೆದಿಲ್ಲ. ಹೀಗಾಗಿ, ಉಪ ಸಮಿತಿ ನೀಡಿರುವ ಲೆಕ್ಕದ ಪರಿಶೀಲನೆ ಜವಾಬ್ದಾರಿ ಹೊಸ ಜಿಲ್ಲಾಧಿಕಾರಿ ಹೆಗಲಿಗೆ ಬಿದ್ದಿದೆ. ಇವರು ಲೆಕ್ಕ ಪರಿಶೀಲಿಸಿದ ಬಳಿಕ ಎಲ್ಲಾ ಉಪ ಸಮಿತಿಗಳ ಖರ್ಚಿನ ಪಟ್ಟಿ ಅಂತಿಮವಾಗುತ್ತದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಅರಮನೆ ಆವರಣದ ಕೋಟೆ ಗೋಡೆ ಕುಸಿತ

    ಮೈಸೂರು ಅರಮನೆ ಆವರಣದ ಕೋಟೆ ಗೋಡೆ ಕುಸಿತ

    ಮೈಸೂರು: ನಿರಂತರವಾಗಿ ಮಳೆ (Rain) ಬರುತ್ತಿರುವ ಪರಿಣಾಮದಿಂದಾಗಿ ಮೈಸೂರು ಅರಮನೆಯ (Mysuru Palace) ಆವರಣದ ಕೋಟೆ ಗೋಡೆ ಕುಸಿತವಾಗಿದೆ.

    ಅರಮನೆ ಹೊರ ಆವರಣದಲ್ಲಿನ ಕೋಟೆ ಮಾರಮ್ಮ ದೇಗುಲ (Temple) ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಕೋಟೆಯ ಗೋಡೆ ಕುಸಿದಿದೆ. ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆ ಇದ್ದಾಗಿದ್ದು, ಅಂದಿನ ಆರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ನಿರ್ಮಿಸಲಾಗಿತ್ತು. ಇದನ್ನೂ ಓದಿ: 527 ಕೆ.ಜಿ ರಕ್ತ ಚಂದನ ಕಳ್ಳಸಾಗಾಣೆ – ಅರಣ್ಯಾಧಿಕಾರಿಗಳಿಂದ ವಶ

    ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿದ್ದ ಕೋಟೆ ಇದಾಗಿತ್ತು. ಆದರೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಮದಾಗಿ ಕೋಟೆ ಗೋಡೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ಕುಸಿದಿರುವ ಭಾಗಕ್ಕೆ ಟಾರ್ಪಲ್ ಹೊದಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ಉಪತಳಿ BQ.1 ಭಾರತದಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್‌

    ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್‌

    ಮೈಸೂರು: ಅರಮನೆಯ ಆನೆಗಳು ಗುಜರಾತ್‌ಗೆ ಶಿಪ್ಟ್‌ ಆಗಿವೆ. ಆನೆಗಳ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಗುಜರಾತ್‌ಗೆ ರವಾನಿಸಲಾಗಿದೆ.

    ರಾಜವಂಶಸ್ಥರಿಗೆ ಸೇರಿದ ಈ ಆನೆಗಳ ನಿರ್ವಹಣೆ ಕಷ್ಟವಾಗಿತ್ತು. ಪ್ರತಿ ತಿಂಗಳು ಆನೆಗಳ ನಿರ್ವಹಣೆಗೆ ಲಕ್ಷ ಲಕ್ಷ ಖರ್ಚಾಗುತ್ತಿತ್ತು. ಹೀಗಾಗಿ ಗುಜರಾತ್‌ನ ಆನೆಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಆನೆ ವೈದ್ಯರಿಂದ ತಪಾಸಣೆ ನಡೆಸಿದ್ದ ಅರಣ್ಯ ಇಲಾಖೆಯು ತಪಾಸಣೆ ಬಳಿಕ ಆನೆಗಳನ್ನು ಕಳುಹಿಸಿತು. ಇದನ್ನೂ ಓದಿ: ಶೌರ್ಯ, ಶೌರ್ಯೇತರ ಪ್ರಶಸ್ತಿ ಪಡೆದ ಯೋಧರ ಅನುದಾನ ಹೆಚ್ಚಳಕ್ಕೆ ಸಿಎಂ ಅಸ್ತು

    ಮೂರು ದಿನಗಳ ಕಾಲ ಪ್ರಯಾಣ ಮಾಡಲಿದ್ದು, ಆನೆಗಳು ಮೂರು ದಿನದ ಬಳಿಕ ಗುಜರಾತ್ ತಲುಪಲಿವೆ. ದೊಡ್ಡ ಟ್ರಕ್ ಮೂಲಕ ಗುಜರಾತ್‌ಗೆ ಆನೆಗಳನ್ನು ರವಾನಿಸಲಾಗಿದೆ. ಇದನ್ನೂ ಓದಿ: ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ನಿರ್ಮಿಸಿದ ಹೊಸೂರು ಗ್ರಾಮಸ್ಥರು

  • ಯದುವೀರ್ ಹೆಸರಲ್ಲಿ ಫೇಕ್ ಅಕೌಂಟ್- ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಬರಹ

    ಯದುವೀರ್ ಹೆಸರಲ್ಲಿ ಫೇಕ್ ಅಕೌಂಟ್- ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಬರಹ

    ಮೈಸೂರು: ಯದುವಂಶದ ಯದುವೀರ್ ಹೆಸರಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಆಗಿದೆ. ಫೇಕ್ ಅಕೌಂಟ್ ಇರುವುದರ ಬಗ್ಗೆ ಸ್ವತಃ ಯದುವೀರ್ ಒಡೆಯರ್ ಸೋಷಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

    ಟ್ವಿಟ್ಟರ್‌ನಲ್ಲಿ ಫೇಕ್ ಅಕೌಂಟ್ ಕ್ರೀಯೆಟ್ ಆಗಿದೆ ಎಂದು ಯದುವೀರ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಯದುವೀರ್ ಕೆ.ಸಿ. ಒಡೆಯರ್ ಎಂಬ ಹೆಸರಿನಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಆಗಿದ್ದು, ಅದರಲ್ಲಿ ರೈತರನ್ನ ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನ ಬಗೆಹರಿಸಿ ಎಂದು ಟ್ವೀಟ್ ಮಾಡಲಾಗಿದೆ.

    ಟ್ವಿಟ್ಟರ್ ಖಾತೆಯ ಸ್ಕ್ರೀನ್‍ಶಾಟ್ ಜೊತೆ ಇನ್‍ಸ್ಟಾಗ್ರಾಂನಲ್ಲಿ ಸ್ಪಷ್ಟನೆಯನ್ನು ಯದುವೀರ್ ಅವರು ನೀಡಿದ್ದಾರೆ. ಇದೊಂದು ಫೇಕ್ ಅಕೌಂಟ್ ಆಗಿದೆ. ಇದು ನನ್ನ ಅಥವಾ ಮೈಸೂರು ಅರಮನೆಯ ಅಭಿಪ್ರಾಯವಲ್ಲ ಎಂದು ಪೋಸ್ಟ್ ಹಾಕಿ ಸ್ಪಷ್ಟಪಡಿಸಿದ್ದಾರೆ.

  • ಮೈಸೂರು ಅರಮನೆ ನೋಡಿ ಕ್ರಿಕೆಟಿಗ ಬ್ರೇಟ್ ಲೀ ಹೇಳಿದ್ದು ಹೀಗೆ

    ಮೈಸೂರು ಅರಮನೆ ನೋಡಿ ಕ್ರಿಕೆಟಿಗ ಬ್ರೇಟ್ ಲೀ ಹೇಳಿದ್ದು ಹೀಗೆ

    ಮೈಸೂರು: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ತಮ್ಮ ಸ್ನೇಹಿತರ ಜೊತೆ ಮೈಸೂರು ಅರಮನೆ ವೀಕ್ಷಣೆಗೆ ಬಂದು ಹೊಗಳಿದ್ದಾರೆ.

    ಮೈಸೂರಿಗೆ ಭೇಟಿ ನೀಡಿದ ಬ್ರೇಟ್ ಲೀ ಅರಮನೆ ಕಂಡು ಬೆರಗಾಗಿದ್ದಾರೆ. ಅರಮನೆ ನೋಡಿದ ಬಳಿಕ ಆನೆಗಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಆನೆಗಳಿಂದ ಆರ್ಶಿವಾದ ಪಡೆದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು.

    ಇದು ಒಂದು ಒಳ್ಳೆಯ ಅನುಭವ ಹಾಗೂ ಸುಂದರ ಅರಮನೆ ಎಂದು ಟ್ವಿಟ್ಟರ್ ನಲ್ಲಿ ಪ್ರಶಂಸೆಯನ್ನು ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

  • ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

    ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

    ಬಳ್ಳಾರಿ: ಮೈಸೂರು ಅರಮನೆಯಲ್ಲಿ ಅನುಮತಿ ಪಡೆಯದೇ ಫೋಟೋಶೂಟ್ ಮಾಡಿದ್ದ ಛಾಯಾಚಿತ್ರಗಾರ ವೆಂಕಿ ಈಗ ಅಂತದ್ದೆ ಕಿತಾಪತಿ ಮಾಡಿದ್ದಾರೆ.

    ಹೈದ್ರಾಬಾದ್ ಮೂಲದ ಫೋಟೋಗ್ರಾಫರ್ ವೆಂಕಿ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್ ಮಾಡಿದ್ದಾರೆ. ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಬಳಿ ನವ ಜೋಡಿಯ ಫೋಟೋಶೂಟ್ ಮಾಡಲಾಗಿದೆ. ಹಂಪಿಯ ಅರಮನೆ, ಮಹನವಮಿ ದಿಬ್ಬ, ಮಾತಂಗ ಪರ್ವತ ಸೇರಿದಂತೆ ಹಲವು ಸ್ಮಾರಕಗಳ ಸುತ್ತ ಫೋಟೋಶೂಟ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

    ಹಂಪಿ ಸ್ಮಾರಕಗಳು, ಹಂಪಿಯ ಸುತ್ತಮುತ್ತ ಫೋಟೋಗ್ರಫಿ ಮಾಡಲು ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯಲೇಬೇಕು. ಸ್ಥಳೀಯರಿಗೆ ಫೋಟೋ ತೆಗೆಯಲು ಬಿಡದ ಪ್ರಾಚ್ಯವಸ್ತು ಅಧಿಕಾರಿಗಳು ವೆಂಕಿಗೆ ಹೇಗೆ ಫೋಟೋಶೂಟ್ ಮಾಡಲು ಅವಕಾಶ ಕಲ್ಪಿಸಿದ್ರು ಅನ್ನೋ ಪ್ರಶ್ನೆ ಈಗ ಕಾಡುತ್ತಿದೆ.

    ಮೈಸೂರು ಅರಮನೆಯಲ್ಲಿ ಇದೇ ವೆಂಕಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿದ್ದು ಸಾಕಷ್ಟು ಸುದ್ದಿಯಾಗಿತ್ತು.