Tag: Mysore District Collector

  • ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆ ಆದೇಶಕ್ಕೆ ತಡೆ

    ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆ ಆದೇಶಕ್ಕೆ ತಡೆ

    ಮೈಸೂರು: ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆಯ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ತಡೆ ನೀಡಿದ್ದು, ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆ ಆಗಿದೆ. ಬಿ.ಶರತ್ ಅವರ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು.

    ಬಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡಬೇಕು. ಡಿಸೆಂಬರ್ 22ರೊಳಗೆ ಈ ಸಂಬಂಧ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ತಿಳಿಸಲು ಅಡ್ವೊಕೇಟ್ ಜನರಲ್ ಗೆ ಸಿಎಟಿ ನಿರ್ದೇಶನ ನೀಡಿದೆ. ಒಂದು ವೇಳೆ ತಪ್ಪಿದ್ದಲ್ಲಿ ಸಿಎಟಿ ಈ ಬಗ್ಗೆ ಆದೇಶ ಹೊರಡಿಸಲಿದೆ ಎಂದು ಸೂಚಿಸಿದೆ. ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಲ್ಲಾದ ಬಿ.ಶರತ್ ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು.

    ಕೆಲ ದಿನಗಳಿಂದ ಮೈಸೂರಿನ ಜನಪ್ರತಿನಿಧಿಗಳು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜನಪರ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಇನ್ನು ಸಚಿವ ಆರ್.ಅಶೋಕ್ ಸಹ ಬಹಿರಂಗವಾಗಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

    ವರ್ಗಾವಣೆ ಆಗಿದ್ದೇಕೆ?: ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ ಅನ್ನೋ ಆರೋಪಗಳು ಬಿ.ಶರತ್ ಅವರ ವಿರುದ್ಧ ಕೇಳಿ ಬಂದಿದ್ದವು. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿತ್ತು. ದಸರಾ ಸಮೀಪಿಸಿದ್ದರೂ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎನ್ನಲಾಗಿತ್ತು.

    ವರ್ಗಾವಣೆ ಬಳಿಕ ಶರತ್ ಅವರಿಗೆ ಕರೆ ಮಾಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಬೇರೆ ಸೂಕ್ತ ಸ್ಥಳ ನೀಡುತ್ತೇವೆ. ಕಾನೂನು ತೊಡಕು ಮಾಡಿಕೊಳ್ಳಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ. ಶರತ್ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನೇ ನೇಮಿಸಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.