Tag: Mysore Dasara

  • ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    ಜಂಬೂ ಸವಾರಿಗೆ ಜನರು ಕಾಯುತ್ತಿದ್ದು, ಇನ್ನು ನಾಲ್ಕು ದಿನಗಳ ಕಾಲ ದಸರಾ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಳೆಕಟ್ಟುತ್ತದೆ. ಈಗಾಗಲೇ ದೇವಿಗಾಗಿ ಮೈಸೂರು ಪಾಕ್, ಜಿಲೇಬಿ, ಕಜ್ಜಾಯವನ್ನು ಮಾಡಿದ್ದೀರಿ, ಸಿಹಿ ಮಾತ್ರವಲ್ಲದೇ ಮೈಸೂರು ಬೋಂಡಾವನ್ನು ಕೂಡ ಮಾಡಿದ್ದೀರಿ, ಈಗ ಮತ್ತೊಂದು ಸಿಹಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ.. ನಿಮಗಾಗಿ ಸಿಂಪಲ್ ಆಗಿ ಸಿಹಿ ಬಾದೂಷ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – 1 ಕೆಜಿ
    2. ಮೈದಾಹಿಟ್ಟು – ಅರ್ಧ ಕೆಜಿ
    3. ಬೆಣ್ಣೆ – 100 ಗ್ರಾಂ
    4. ಅಡುಗೆ ಸೋಡಾ -ಚಿಟಿಕೆ
    5. ಏಲಕ್ಕಿ ಪುಡಿ – ಚಿಟಿಕೆ
    6. ಎಣ್ಣೆ ಕರಿಯಲು

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ಸಕ್ಕರೆ ಅದಕ್ಕೆ 2 ಕಪ್ ನೀರು ಹಾಕಿ ಕುದಿಸಿ.
    * ಅದಕ್ಕೆ ಏಲಕ್ಕಿ ಪುಡಿ ಹಾಕಿ ಒಂದು ಎಳೆ ಪಾಕ ಮಾಡಿಟ್ಟುಕೊಳ್ಳಿ.
    * ಬಳಿಕ ಒಂದು ಬೌಲ್‍ಗೆ ಜರಡಿ ಹಿಡಿದ ಮೈದಾ ಹಿಟ್ಟು, ಬೆಣ್ಣೆ, ಸೋಡಾ ಹಾಕಿ ಕಲಸಿ.
    * ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಆದಷ್ಟು ಸಾಫ್ಟ್ ಆಗಿದ್ದರೆ ಉತ್ತಮ.
    * ಈಗ ಹಿಟ್ಟನ್ನು ಚೆನ್ನಾಗಿ ನಾದಿ. ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ.
    * ಸಣ್ಣ ಉಂಡೆಯನ್ನು ಮತ್ತೆ ಎರಡೂ ಕೈಯಲ್ಲಿ ನಾದಿ ಎರಡು ಕಡೆಗಳಲ್ಲಿ ಮಧ್ಯದಲ್ಲಿ ಬೆರಳಿನಿಂದ ಒತ್ತಿ.


    * ಹೀಗೆ ಮಾಡಿಟ್ಟುಕೊಂಡ ಬಾದುಷಾವನ್ನು ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋತನಕ ಡೀಪ್ ಪ್ರೈ ಮಾಡಿ.
    * ಬಿಸಿ ಇರುವಾಗಲೇ ಸಕ್ಕರೆ ಪಾಕಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟು ಪಾಕದಿಂದ ಬಾದುಷಾವನ್ನು ತೆಗೆದು ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿಗೆ ಮಾಜಿ ಸಿಎಂ ಗುಡ್ ಬೈ?

    ಮೈಸೂರಿಗೆ ಮಾಜಿ ಸಿಎಂ ಗುಡ್ ಬೈ?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಅರಮನೆ ನಗರಿ ಮೈಸೂರಾಗಿದೆ. ಆದರೆ ಈಗ ದಸರಾ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ದೂರ ಇದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ, ಮುಂದಿನ ದಸರಾ ಕೂಡ ನನ್ನ ನೇತೃತ್ವದಲ್ಲಿ ನಡೆಯುತ್ತದೆ ನೋಡಿ ಎಂದು ಕಳೆದ ದಸರಾದಲ್ಲಿ ಅಬ್ಬರಿಸಿದ್ದರು. ಆದರೆ ಈಗ ಅದೇ ಮೈಸೂರಿಗೆ ಹೋಗಲು ನಿರಾಸಕ್ತಿ ತೋರುತ್ತಿದ್ದಾರೆ.

    ಸಿದ್ದರಾಮಯ್ಯ ವೈಯುಕ್ತಿವಾಗಿಯೂ ಕೂಡ ಮೈಸೂರು ಪ್ರವಾಸ ಕೈಗೊಳ್ಳುತ್ತಿಲ್ಲ. ಮುಂದಿನ ವಾರ ಬಾಗಲಕೋಟೆ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ನಾಪಮತ್ರ ಸಲ್ಲಿಕೆ ಇದೆ. ಆದ್ದರಿಂದ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ನವರಾತ್ರಿ ದಿನಗಳಲ್ಲಿ ಮೈಸೂರಿಗೆ ತೆರಳದಿರಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೈಸೂರು ದಸರಾಗಳನ್ನ ನೋಡಿದ ಬೆಳೆದ ಸಿದ್ದರಾಮಯ್ಯಗೆ ಈಗ ನಿರಾಸಕ್ತಿ ಏಕೆ? ಎಂಬ ಪ್ರಶ್ನೆ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರು ಉಪಚುನಾವಣೆಯ ನೆಪ ಹೇಳಿ ಮೈಸೂರು ಪ್ರವಾಸಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಸೋತಿದ್ದರು. ಆದ್ದರಿಂದ ಮುಜುಗರದಿಂದ ಮೈಸೂರಿಗೆ ಹೋಗುತ್ತಿಲ್ಲ ಎನ್ನಲಾಗಿದೆ.

    ಸಿದ್ದರಾಮಯ್ಯ ಜಿ.ಟಿ.ದೇವೇಗೌಡರ ವಿರುದ್ಧ ನಿಂತು ಸೋತಿದ್ದರು. ಈಗ ಜಿ.ಟಿ.ದೇವೇಗೌಡರು ಮೈಸೂರು ಉಸ್ತುವಾರಿ ಸಚಿವರು ಇವರ ನೇತ್ವದಲ್ಲಿಯೇ ದಸರಾ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ದಸರಾದಲ್ಲಿ ಕಾಂಗ್ರೆಸ್ ಮಂಕಾಗಿ ಜೆಡಿಎಸ್ ರಂಗಾಗಿದೆ. ಯಾಕೆಂದರೆ ಕಾಂಗ್ರೆಸ್ಸಿನ ಮೂವರು ಸಚಿವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕೆಲ ಶಾಸಕರು ಆರೋಪಿಸಿದ್ದರು. ದಸರಾ ಉದ್ಘಾಟನೆಯ ದಿನವೂ ಕೆಲ ಕೈ ಶಾಸಕರುಗಳೇ ಗೈರು ಹಾಜರಾಗಿದ್ದರು. ಆನಂತರ ಕಾರ್ಯಕ್ರಮಗಳಲ್ಲೂ ಕಾಂಗ್ರೆಸ್ ಶಾಸಕರು ಬಂದಿರಲಿಲ್ಲ.

    ಇವೆಲ್ಲವನ್ನು ಗಮನಿಸಿದ ಸಿದ್ದರಾಮಯ್ಯ ಅವರು, ಜಿ.ಟಿ. ದೇವೇಗೌಡರು ಇರಬೇಕಾದರೆ ನಾನು ಅಲ್ಲಿಗೆ ಹೋಗುವುದು ಸರಿಯಿಲ್ಲ. ನಾನು ಮೈಸೂರಿಗೆ ಹೋಗಿ ಮುಜುಗರ ಆಗೋದು ಬೇಡ ಎಂದು ನಿರ್ಧಾರ ಮಾಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    ವರಾತ್ರಿಯ ನಾಲ್ಕನೇಯ ದಿನ ದೇವಿಯನ್ನು ಕೂಷ್ಮಾಂಡ ರೂಪದಲ್ಲಿ ಪೂಜಿಸಲಾಗುತ್ತದೆ. ತನ್ನ ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎಂದು ಕರೆಯಲಾಗುತ್ತದೆ.

    ಇವಳಿಗೆ ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಇವಳ ಏಳು ಕೈಗಳಲ್ಲಿ ಕ್ರಮವಾಗಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇದೆ. ಇವಳ ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಪ್ರಿಯವಾಗಿದೆ. ಈ ಕಾರಣದಿಂದಲೂ ಇವಳನ್ನು ಕೂಷ್ಮಾಂಡ ಎಂದು ಕರೆಯುತ್ತಾರೆ.

    ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆ ಅಂಧಕಾರವೇ-ಅಂಧಕಾರ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಡವನ್ನು ರಚಿಸಿದ್ದಳು. ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಆದಿಶಕ್ತಿಯಾಗಿದ್ದಾಳೆ. ಇವಳಿಂದ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ.

    ಇವಳ ನಿವಾಸವು ಸುರ್ಯಮಂಡಲದೊಳಗಿನ ಲೋಕದಲ್ಲಿ ಇದೆ. ಸೂರ್ಯ ಲೋಕದಲ್ಲಿ ನಿವಾಸ ಮಾಡುವ ಅರ್ಹತೆ ಮತ್ತು ಶಕ್ತಿ ಇವಳಲ್ಲೇ ಇದೆ. ಇವಳ ಶರೀರದ ಕಾಂತಿ, ಪ್ರತಿಭೆಯೂ ಸೂರ್ಯನಿಗೆ ಸಮಾನವಾಗಿ ದೇವಿಪ್ಯಮಾನ ಹಾಗೂ ಹೊಳೆಯುವಂತಹುದು.

    ಬೇರೆ ಯಾವುದೇ ದೇವದೇವತೆಗಳು ಇವಳ ತೇಜ, ಪ್ರಭಾವಕ್ಕೆ ಸರಿಗಟ್ಟಲಾರರು. ಇವಳ ತೇಜ ಮತ್ತು ಪ್ರಕಾಶದಿಂದಲೇ ಹತ್ತೂ ದಿಕ್ಕುಗಳು ಪ್ರಕಾಶವಾಗಿದೆ. ಬ್ರಹ್ಮಾಂಡದ ಎಲ್ಲ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಇರುವ ತೇಜ ಇವಳದೇ ಛಾಯೆಯಾಗಿದೆ.

    ನಾಲ್ಕನೇಯ ದಿನ ಸಾಧಕನ ಮನಸ್ಸು ‘ಅನಾಹುತ’ ಚಕ್ರದಲ್ಲಿ ನೆಲೆನಿಲ್ಲುತ್ತದೆ. ಆದ್ದರಿಂದ ಅಂದು ಅವನು ಅತ್ಯಂತ ಪವಿತ್ರ ಮತ್ತು ಅಚಂಚಲ ಮನಸ್ಸಿನಿಂದ ಕೂಷ್ಮಾಂಡ ದೇವಿಯ ಸ್ವರೂಪವನ್ನು ಧ್ಯಾನದಲ್ಲಿ ಧರಿಸಿಕೊಂಡು ಪೂಜೆ ಉಪಾಸನೆಯ ಕಾರ್ಯದಲ್ಲಿ ತೊಡಬೇಕು. ಜಗಜ್ಜನನೀ ಕೂಷ್ಮಾಂಡ ದೇವಿಯ ಉಪಾಸನೆಯಿಂದ ಭಕ್ತರ ಎಲ್ಲ ರೋಗ- ಶೋಕಗಳು ನಾಶವಾಗುತ್ತದೆ. ಇವಳ ಭಕ್ತಿಯಿಂದ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ. ತಾಯಿ ಕೂಷ್ಮಾಂಡ ದೇವಿಯು ಸ್ವಲ್ಪ ಸೇವೆ-ಭಕ್ತಿಯಿಂದ ಪ್ರಸನ್ನಳಾಗುತ್ತಾಳೆ. ನಿಜವಾದ ಹೃದಯದಿಂದ ಮನುಷ್ಯನು ಇವಳಿಗೆ ಶರಣಾಗತನಾದರೆ ಬಳಿಕ ಅವನಿಗೆ ಅತ್ಯಂತ ಸುಲಭವಾಗಿ ಪರಮ ಪದದ ಪ್ರಾಪ್ತಿಯಾಗಬಲ್ಲದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    9.ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    10. ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    11. ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    12. ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

  • ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಆರಂಭವಾಗಿದೆ. ಇಂದು ದಸರಾ ಹಬ್ಬದ ಮೂರನೇ ದಿನದ ಹಬ್ಬ-ಆಚರಣೆಗಳು ಶುರುವಾಗಿದೆ. ದಸರಾ ಅಂದರೆ ಒಂಬತ್ತು ದಿನ ಒಂದೊಂದು ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಹಬ್ಬ ಅಂದರೆ ಸಿಹಿ ಮಾತ್ರವಲ್ಲದೇ ಬೇರೆ ತಿಂಡಿಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಮೈಸೂರು ಬೋಂಡಾ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಗ್ರಿಗಳು:
    1. ಮೈದಾ ಹಿಟ್ಟು – 1.5 ಬಟ್ಟಲು
    2. ಅಕ್ಕಿ ಹಿಟ್ಟು – 1 ಬಟ್ಟಲು
    3. ಗಟ್ಟಿ ಮೊಸರು – 1/4 ಲೀಟರ್
    4. ಜೀರಿಗೆ -ಸ್ವಲ್ಪ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಎಣ್ಣೆ – ಕರಿಯಲು
    7. ಅಡುಗೆ ಸೋಡಾ – ಚಿಟಿಕೆ

    ಮಾಡುವ ವಿಧಾನ:
    * ಒಂದು ಬಟ್ಟಲಿಗೆ ಮೈದಾ ಹಿಟ್ಟು, ಅಕ್ಕಿಹಿಟ್ಟನ್ನು ಜರಡಿ ಹಿಡಿದು ಹಾಕಿಕೊಳ್ಳಿ
    * ಅದಕ್ಕೆ ಜೀರಿಗೆ, ಉಪ್ಪು, ಸೋಡಾ ಹಾಕಿ ಮಿಕ್ಸ್ ಮಾಡಿ.
    * ಈಗ ಗಟ್ಟಿ ಮೊಸರು ಹಾಕಿ ಬೋಂಡಾ ಹದಕ್ಕೆ ಕಲಸಿ. (ಹಿಟ್ಟು ಕಲಸಲು ನೀರು ಬಳಸಬೇಡಿ)
    * ಕಾದ ಎಣ್ಣೆಗೆ ಬೋಂಡಾ ರೀತಿ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಕರಿಯಿರಿ.
    * ಸಿಂಪಲ್ ಮೈಸೂರು ಬೋಂಡಾ ಸವಿಯಲು ಸಿದ್ಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನೇ ದಿನೇ ಕಳೆಗಟ್ಟುತ್ತಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ ಎಲ್ಲರ ಕಣ್ಮನಸೆಳೆಯುತ್ತಿದೆ.

    ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಗುಲಾಬಿ ರಂಗಿನಲ್ಲಿ ಅನಾವರಣಗೊಂಡಿರುವ ಬಲರಾಮ ದ್ವಾರ, ಕೈ ಬೀಸಿ ಕರೀತಿರುವ ಆನೆ ಗಾಡಿ, ಕಣ್ಣುಕುಕ್ಕುತ್ತಿರುವ ಡಾಲ್ಫಿನ್ ಗೆ ಸಾಥ್ ನೀಡಿರುವ ಮಶ್ರೂಮ್ ಕಲಾಕೃತಿ, ಪುಷ್ಪನಮನ ಸ್ವೀಕರಿಸುತ್ತಾ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಇವುಗಳ ನಡುವೆ ಚೆಲುವಿನ ನಗೆ ಬೀರುತ್ತಿರುವ ಗ್ಲಾಸ್ ಹೌಸ್, ಗಾಜಿನ ಮನೆಗೆ ಕಳೆ ತುಂಬಿರುವ ದೆಹಲಿಯ ಲೋಟಸ್ ಟೆಂಪಲ್ ಕಲಾಕೃತಿ ಇದೆಲ್ಲವನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

    ದಸರಾ ಹಿನ್ನೆಲೆಯಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಶೋನಲ್ಲಿ ಡಿಫರೆಂಟ್ ಟೈಪ್ ಆಫ್ ಫ್ಲವರ್ಸ್ ಲಗ್ಗೆ ಇಟ್ಟಿದ್ದು, ಉದ್ಯಾನವನಕ್ಕೆ ಕಳೆ ತುಂಬಿದ್ದಾರೆ. ಡಿಫರೆಂಟ್ ಡಿಫರೆಂಟ್ ಕಲಾಕೃತಿಗಳಿಗೆ ಸಿಟಿ ಮಂದಿ ಫಿದಾ ಆಗಿದ್ದಾರೆ. ಇಡೀ ಉದ್ಯಾನವನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫಿದಾ ಆಗಿರೋದಾಗಿ ಪ್ರವಾಸಿಗರು ಹೇಳಿದ್ದಾರೆ.

    ಬಣ್ಣ ಬಣ್ಣದ ದೇಶ-ವಿದೇಶಿಯ ಹೂಗಳಿಂದ ಕುಪ್ಪಣ್ಣ ಪಾರ್ಕ್ ಸಿಂಗಾರಗೊಂಡಿದೆ. ಅಮರ್ ಜವಾನ್, ರೊಮಿಯೋ ಜೂಲಿಯಟ್ ಸೇರಿದಂತೆ ವಿಭಿನ್ನ ಕಲಾಕೃತಿ ಪ್ರವಾಸಿಗರ ಮನಸೊರೆಗೊಳಿಸುತ್ತಿವೆ. 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಎಲ್ಲರ ಗಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

    ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

    ಮೈಸೂರು: ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅವರ ಲೇಟೆಸ್ಟು ಸ್ಟೈಲ್ ಗೆ ಕೆಲವ್ರು ಫಿದಾ ಆದ್ರೇ ಇನ್ನು ಕೆಲವ್ರು ಇರಿಸುಮುರಿಸು ಅನುಭವಿಸಿದ್ರು.

    ಸಂಭ್ರಮದ ದರ್ಬಾರ್ ನಲ್ಲಿ ಫುಲ್ ರೌಂಡ್ ಹೊಡೆಯುತ್ತಿರುವ ಜಮೀರ್ ಸಾಹೇಬ್ರಿಗೆ ಏನು ಹೊಸ ಐಡಿಯಾ ಹೊಡೆಯಿತೋ ಗೊತ್ತಿಲ್ಲ. ಸ್ಕೌಡ್ಸ್ ಅಂಡ್ ಗೈಡ್ ಗ್ರೌಂಡ್ ನಲ್ಲಿ ಫುಡ್ ಫೆಸ್ಟ್ ನಲ್ಲಿ ಭಾಗವಹಿಸಿದ್ದ ಸಾಹೇಬ್ರು ಊಟಕ್ಕೆ ಕೂತ್ರು.

    ಮೈಸೂರು ಊಟ ಗಡದ್ದಾಗಿ ತಿಂದು ತೇಗೋದು ಬಿಟ್ಟು ಗ್ಯಾಪ್ ನಲ್ಲಿ ಹೊಸ ವಿವಾದ ಮಾಡ್ಕೊಂಡ್ರು. ಊಟದ ಕೊನೆಯಲ್ಲಿ ಅನ್ನ ಮಿಕ್ಕಿತ್ತೋ ಅಥ್ವಾ ಪೊಲೀಸರ ಮೇಲೆ ಹೆವಿ ಪ್ರೀತಿ ಉಕ್ಕಿ ಹರಿಯಿತೋ ಗೊತ್ತಿಲ್ಲ. ಇಧರ್ ಆವೋ ಅಂತಾ ಖಾಕಿಯವರನ್ನು ಕರೆದ್ರು. ಮಿನಿಸ್ಟ್ರು ಕರೆಯುತ್ತಾರೆ ಅಂತಾ ಓಡೋಡಿ ಬಂದ ಪೊಲೀಸ್ ಪೇದೆಗಳಿಗೆ ಬಾಯಿ ಹಾ ಅನ್ನು ಅಂತಾ ಹೇಳಿ ಅನ್ನ ಕಲಸಿ ಹಂಗಂಗೆ ತುರುಕಿದ್ರು. ಅದು ಮೂರು ಜನ್ರಿಗೂ ಎಂಜಲೆಲೆ ಊಟ ನಾ ಬಾಯಿಗೆ ತುರುಕಿದ್ರು.

    ಇತ್ತ ಸಚಿವರ ಕೈ ತುತ್ತಿಗೆ ಬೇಡ ಅನ್ನೋದಕ್ಕೂ ಆಗದೇ ಪೇದೆಗಳು ಬಾಯಿ ಒರೆಸಿಕೊಂಡು ಸುಮ್ಮನಾದ್ರು. ಇದು ಮಿನಿಸ್ಟ್ರ ಸಿಂಪ್ಲಿಸಿಟಿ ಅಂತಾ ಅಂದ್ ಕೊಂಡ್ರು. ಈಗ ಈ ರೀತಿ ಎಂಜಲೆಲೆ ಊಟ ಕೊಟ್ಟಿದ್ದು ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಮನಿಸಿ, ಮೈಸೂರು ದಸರಾ ವಾಹನಗಳ ಮಾರ್ಗ ಬದಲಾವಣೆ: ಎಲ್ಲಿ ನಿರ್ಬಂಧ? ಯಾವ ಮಾರ್ಗದಲ್ಲಿ ಸಂಚರಿಸಬೇಕು?

    ಗಮನಿಸಿ, ಮೈಸೂರು ದಸರಾ ವಾಹನಗಳ ಮಾರ್ಗ ಬದಲಾವಣೆ: ಎಲ್ಲಿ ನಿರ್ಬಂಧ? ಯಾವ ಮಾರ್ಗದಲ್ಲಿ ಸಂಚರಿಸಬೇಕು?

    ಮೈಸೂರು: ದಸರಾ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಮತ್ತು ಕೆಆರ್ ಎಸ್ ಸೇರಿದಂತೆ ಸುತ್ತಮುತ್ತ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.

    ಇಂದಿನಿಂದ ಮೈಸೂರಿನ ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂದಿನಿಂದಲೇ ರಾತ್ರಿ 11 ಗಂಟೆವರೆಗೆ ಪಾಂಡವಪುರ ತಾಲೂಕಿನ ಕಟ್ಟೇರಿ ಕಡೆಯಿಂದ ಕೆಆರ್‍ಎಸ್ ಮಾರ್ಗವಾಗಿ ಬರುವ ಎಲ್ಲ ಸರಕು ವಾಹನಗಳ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.

    ಈ ವಾಹನಗಳು ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು ಕಡೆಗೆ ಅಥವಾ ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆ.

    ಅಕ್ಟೋಬರ್ 17 ರಿಂದ 21ರವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರಗೆ ಮೈಸೂರು ಕಡೆಯಿಂದ ಬೃಂದಾವನ ಗಾರ್ಡನ್ ವೀಕ್ಷಿಸಲು ಬರುವ ಪ್ರವಾಸಿಗರ ಎಲ್ಲಾ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

    ಬೃಂದಾವನ ಗಾರ್ಡನ್ ವೀಕ್ಷಿಸಿದ ನಂತರ ವಾಪಸ್ ಹೊರಡುವಾಗ ಅಣೆಕಟ್ಟೆ ಬಳಿಯಿರುವ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ನಾರ್ತ್ ಬ್ಯಾಂಕ್ ಕಟ್ಟೇರಿ, ಎಲೆಕೆರೆ ಹ್ಯಾಂಡ್‍ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇತರೆ ಕಡೆಗಳಿಗೆ ಏಕಮುಖವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳ ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.

    ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾ ಸರಸ್ವತಿಯನ್ನು ಪೂಜಿಸಲಾಗುತ್ತಿದೆ. ಮಹಾಕಾಳಿ ತಾಮಸ ಗುಣಕ್ಕೂ, ಮಹಾಲಕ್ಷ್ಮಿ ರಾಜಸಗುಣಕ್ಕೂ, ಮಹಾಸರಸ್ವತಿ ಸಾತ್ವಿಕ ಗುಣದ ಸಂಕೇತ. ನವರಾತ್ರಿ ಆಚರಿಸುವ ಭಕ್ತರು ತಾಮಸದಿದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ ಬಂದಾಗ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತದೆ.

    ನವರಾತ್ರಿ ವೇಳೆ ದೇವಿಯ ಪೂಜೆ, ದೇವಿ ಭಾಗವತ, ದುರ್ಗ ಸಪ್ತಶತೀ, ಲಲಿತಾ ಸಹಸ್ರನಾಮ ಪವಿತ್ರ ಸ್ತೋತ್ರಗಳ ಮತ್ತು ಮಂತ್ರಗಳ ಪಠಣ ಹಾಗೂ ಪಾರಾಯಣ ನಡೆಯುತ್ತದೆ. ನವದುರ್ಗೆಯರ ಆರಾಧನೆಯ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿದಿನ ದೇವಿಯ ಒಂದೊಂದು ಅವತಾರದ ವಿವರಣೆಯನ್ನು ಪಬ್ಲಿಕ್ ಟಿವಿ ಪ್ರಕಟಿಸಲಿದೆ.

    ಒಂಬತ್ತು ದುರ್ಗೆಯರು:
    1. ಶೈಲಪುತ್ರಿ
    2. ಬ್ರಹ್ಮಚಾರಿಣಿ
    3. ಚಂದ್ರಘಂಟಾ
    4. ಕೂಷ್ಮಾಂಡಾ
    5. ಸ್ಕಂದ ಮಾತೆ
    6. ಕಾತ್ಯಾಯನಿ
    7. ಕಾಳರಾತ್ರಿ
    8. ಮಹಾಗೌರಿ
    9. ಸಿದ್ಧಿದಾತ್ರಿ


    ಪರ್ವತ ರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ದಸರಾ ದಿನ ಈ ದೇವಿಯನ್ನು ಮೊದಲಿಗೆ ಆರಾಧಿಸುತ್ತಾರೆ. ಈ ದೇವಿಯನ್ನು ಆರಾಧಿಸಲು ಒಂದು ಕಥೆಯಿದೆ. ಪ್ರಜಾಪತಿ ಬಹ್ಮನ ಮಗನಾದ ದಕ್ಷ ತನ್ನ 27 ಮಂದಿ ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದ್ದಳು.

    ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಹಿಮಾವೃತವಾಗಿರುವ ಕೈಲಾಸ ಅಥವಾ ಸ್ಮಶಾನದಲ್ಲಿ ವಾಸ, ಕುತ್ತಿಗೆಗೆ ನಾಗರಹಾವು ಇರುವ ಶಿವನಿಗಿಂತ ನನ್ನ ಚೆಲುವೆಯಾಗಿರುವ ಮಗಳಿಗೆ ಉತ್ತಮನಾಗಿರುವ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

    ಶಿವನ ವಿಚಾರದಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದ್ದ ದಕ್ಷ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲ ಮಕ್ಕಳಿಗೆ, ಬಂಧು ಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ದಕ್ಷ, “ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ” ಎಂದು ಮನಸ್ಸಿನಲ್ಲೇ ಕಹಿಯನ್ನು ಅನುಭವಿಸಿದ.

    ಕೆಲ ಸಮಯದ ಬಳಿಕ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿದ. ಈ ಬಾರಿ ಮಗಳು ದಾಕ್ಷಾಯಿಣಿ ಮತ್ತು ಶಿವನಿಗೆ ಆಹ್ವಾನ ನೀಡದೇ ಎಲ್ಲ ಮಕ್ಕಳಿಗೆ ಆಹ್ವಾನ ನೀಡಿದ್ದ. ತಂದೆ ಯಾಗವನ್ನು ಆಯೋಜಿಸಿದ ವಿಚಾರ ತಿಳಿದು ಮಗಳು ಶಿವನ ಜೊತೆ,”ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ” ಎಂದು ಕೇಳುತ್ತಾಳೆ. ಇದಕ್ಕೆ ಶಿವ,”ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆ ಸೇರಿದಂತೆ ಎಲ್ಲಿಗೂ ಹೋಗಬಾರದು” ಎಂದು ತಿಳಿಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ,”ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತುಹೋಗಿರಬಹುದು. ತಂದೆ ಮನೆಗೆ ಹೋಗಲು ಮಗಳಿಗೆ ಆಹ್ವಾನ ಯಾಕೆ ಬೇಕು”ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿಯ ಹಠಕ್ಕೆ ಕರಗಿ ಶಿವ ತಂದೆಯ ಮನೆಗೆ ಹೋಗಲು ಅನುಮತಿ ನೀಡುತ್ತಾನೆ.

    ಪತಿಯಿಂದ ಅನುಮತಿ ಸಿಕ್ಕಿದ್ದೆ ತಡ ದಾಕ್ಷಾಯಿಣಿ ಶಿವನ ವಾಹನ ನಂದಿಯನ್ನೇರಿ, ಕೈಗೆ ಸಿಕ್ಕ ಉಡುಗೊರೆಯನ್ನು ಹಿಡಿದುಕೊಂಡು ತಂದೆಯ ಯಜ್ಞ ಸಮಾರಂಭಕ್ಕೆ ತೆರಳುತ್ತಾಳೆ. ಮಗಳನ್ನು ನೋಡಿದ ಕೂಡಲೇ ದಕ್ಷ,”ನಾನು ನಿನಗೆ ಆಹ್ವಾನ ನೀಡಿಲ್ಲ. ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ” ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ಆ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನ ವಿರುದ್ಧ ಕಿಡಿಕಾರುತ್ತಾನೆ.”ನೀನು ಪತಿಯನ್ನು ಸೇರು. ಇಲ್ಲಿಂದ ಹೊರಟು ಹೋಗು” ಎಂದು ಅವಮಾನಿಸುತ್ತಾನೆ. ಈ ಎಲ್ಲರ ಮುಂದೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ಶಿವನನ್ನು ಧ್ಯಾನಿಸುತ್ತಾ,”ಪತಿಯೇ ನಾನು ನಿಮ್ಮ ಮಾತನ್ನು ಕೇಳಿ ಇಲ್ಲಿಗೆ ಬಾರಬಾರದಿತ್ತು. ತಂದೆ ನಿಮಗೆ ಮಾಡಿದ ಈ ಅವಮಾನವನ್ನು ನಾನು ಸಹಿಸಲಾರೆ” ಎಂದು ಪ್ರಾರ್ಥಿಸಿ ಮುಂದಿದ್ದ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.

    ಪತಿಯನ್ನು ಅವಮಾನಿಸಿದ್ದನ್ನು ಸಹಿಸದೆ ಯಜ್ಞ ಕುಂಡಕ್ಕೆ ಹಾರಿಕೊಂಡಿದ್ದ ದಾಕ್ಷಾಯಿಣಿಗೆ ಅಂದಿನಿಂದ `ಸತಿ’ ಎಂಬ ಹೆಸರು ಬಂತು. ಸತಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ‘ಶೈಲಪುತ್ರಿ’ ಎಂದು ಹೆಸರುವಾಸಿಯಾಗುತ್ತಾಳೆ. ಮತ್ತೆ ಶಿವನ ಮಡದಿಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರ ಸೂಚನೆ ಏನೋ ಎಂಬಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯ ನಡೆಯುತ್ತದೆ. ಶೈಲಪುತ್ರಿ ವೃಷಭ ವಾಹನದ ಮೇಲೆ ಕುಳಿತು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಹಿಡಿದುಕೊಂಡಿರುತ್ತಾಳೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ನ್ನೇನು ಗೊಂಬೆಗಳ ಹಬ್ಬ ಬಂದೇ ಬಿಡ್ತು. ಗೊಂಬೆ ಕೂರಿಸುವವರು ಈಗಾಗಲೇ ಎಲ್ಲಾ ಪ್ರೀಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಲ ಲಾಸ್ಟ್ ಟೈಂಗಿಂತ ಚೆನ್ನಾಗಿ ಹಬ್ಬ ಮಾಡಬೇಕು. ಆ ರೀತಿ ಗೊಂಬೆ ತರಬೇಕು, ಈ ರೀತಿ ಗೊಂಬೆ ಡೆಕೊರೇಷನ್ ಮಾಡಬೇಕು. ಎಲ್ಲರೂ ಮಾಡುವಂತೆ ನಾವು ಹಬ್ಬ ಮಾಡಿದ್ರೆ ಮಜಾ ಇರಲ್ಲ ಅನ್ನೋರು ಇರ್ತಾರೆ. ಅವರಿಗೆಲ್ಲಾ ಸೇರಿ ನೆಚ್ಚಿನ ಗೊಂಬೆಗಳನ್ನು ಹೇಗೆ ಕೂರಿಸಿದ್ರೆ ಚೆಂದ. ಹೇಗೆ ಅಲಂಕರಿಸಿದ್ರೆ ಅಂದ ಅನ್ನೋದನ್ನ ನೋಡೋಣ..

    ಈ ಹಿಂದೆ ಗೊಂಬೆಗಳ ಹಬ್ಬ ಅಂದರೆ ಮನೆಯಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತಿತ್ತು.. ಮನೆಯ ಅಟ್ಟದಲ್ಲಿ ಜೋಡಿಸಿಟ್ಟಿದ್ದ ಮಣ್ಣಿನ ಗೊಂಬೆಗಳನ್ನು ಕೆಳಗಿಳಿಸಿ, ಶುದ್ಧಗೊಳಿಸುವುದಕ್ಕೆ ವಾರವಾದರೂ ಬೇಕಾಗಿತ್ತು. ಸದ್ಯದ ಪೀಳಿಗೆಯವರಿಗೆ ಎಲ್ಲಿದೆ? ಇಷ್ಟೊಂದು ಟೈಮ್. ಕೆಲವರು ಹಬ್ಬದ ದಿನ ಹಬ್ಬದೂಟ ಮಾಡಿ ತಿಂದರೆ ಸಾಕು ಅಂತಿರುತ್ತಾರೆ. ಇನ್ನೂ ಕೆಲವರು ಯಾರಾದ್ರೂ ಫ್ರೆಂಡ್ಸ್, ಸಂಬಂಧಿಕರು ಕರೆದರೆ ಸಾಕಾಪ್ಪ ಅಂತಿರುತ್ತಾರೆ. ಹೀಗಿರುವಾಗ ಗೊಂಬೆ ಕೂರಿಸಲು ಸಾಕಷ್ಟು ಸಮಯ ವ್ಯಯಿಸಲು ಆಗುವುದಿಲ್ಲ. ಗೊಂಬೆ ಜೋಡಿಸುವುದು, ಕೂರಿಸುವುದು ಒಂದು ಕಲೆ. ಅದು ಎಲ್ಲರಿಗೂ ಒಲಿದಿರುವುದಿಲ್ಲ. ಹಾಗಾಗಿ ಈ ಒಂದು ಸಿಂಪಲ್ ಟಿಪ್ಸ್ ಗಳನ್ನು ಒಮ್ಮೆ ಕಣ್ಣಾಡಿಸಿ. ಗೊಂಬೆ ಕೂರಿಸಿ ನೋಡಿ.

    * ನಿಮ್ಮ ಮನೆಯಲ್ಲಿ ಮೊದಲಿನಿಂದಲೂ ಗೊಂಬೆ ಕೂರಿಸುವ ರೂಡಿ ಇದ್ದರೆ ಚೆಂದ.
    * ಎತ್ತಿಟ್ಟಿದ್ದ ಮಣ್ಣಿನ ಗೊಂಬೆಗಳನ್ನೆಲ್ಲ ಒಣಗಿದ ಕಾಟನ್ ಬಟ್ಟೆಯಲ್ಲಿ ಒರೆಸಿ ಇಡಿ.
    * ಗೊಂಬೆ ಕೂರಿಸುವ ಮೊದಲು ಯಾವ ಥೀಮ್‍ನಲ್ಲಿ ಕೂರಿಸಬೇಕೆಂದು ಪ್ಲಾನ್ ಮಾಡಿ.
    (ಪೌರಾಣಿಕ, ಐತಿಹಾಸಿಕ, ಸಣ್ಣ ಕಥೆಯಾಧಾರಿತ, ನೀತಿ ಕಥೆ, ಜೀವನಶೈಲಿ, ಆಧುನಿಕ ವಿಷಯಗಳು. ಹೀಗೆ ಯಾವುದು ಇಷ್ಟವೋ ಅದನ್ನ ಸೆಲೆಕ್ಟ್ ಮಾಡಿ)

    ಸೀತೆ ಸ್ವಯಂವರ, ಸೀತೆ ವನವಾಸ, ಶ್ರೀನಿವಾಸ ಕಲ್ಯಾಣ, ಕೃಷ್ಣನ ಆಟ-ತುಂಟಾಟ, ಗಣೇಶನಿಗೆ ಆನೆ ಮುಖ ಬಂದಿದ್ದು, ಕ್ರಿಸ್ತನ ಹುಟ್ಟು ಈ ಪೌರಾಣಿಕ ರೀತಿಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಇತಿಹಾಸದ ಒಲವು ಹೊಂದಿರುವವರು ವಿಜಯನಗರ ಆಡಳಿತ, ಮೈಸೂರು ಒಡೆಯರ್ ಆಡಳಿತ, ವಂಶಾವೃಕ್ಷ, ಕದಂಬ ಸಾಮ್ರಾಜ್ಯ ಎಂಬುದರ ಬಗ್ಗೆಯೂ ಚಿಂತಿಸುತ್ತಾರೆ. ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ ಪಾಠ, ಐತಿಹಾಸಿಕ ಪುರುಷರ ಜೀವನಗಾಥೆ, ಪ್ರೇರಣೆ ನೀಡಬಲ್ಲಂತಹ ಗಣ್ಣರ ಜೀವನ ಶೈಲಿ ತೋರಿಸುವ ರೀತಿಯಲ್ಲಿ ಗೊಂಬೆಗಳನ್ನು ಅಲಂಕರಿಸಬಹುದು. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ? ಯಾವುದು ನಿಮಗೆ ಹೆಚ್ಚು ತಿಳಿದಿದೆಯೋ ಅಂತಹ ಥೀಮ್ ಸೆಲೆಕ್ಟ್ ಮಾಡಿಕೊಳ್ಳಬೇಕು.

    * ಅವರು ಹೇಳಿದ್ರು ಅಂತಾಗಲಿ.. ಅವರು ಮಾಡಿದ್ದಾರೆ ನಾವು ಮಾಡಬೇಕು ಎಂದು ಗೊತ್ತಿಲ್ಲದ, ಮಾಹಿತಿ ಇಲ್ಲದೇ ಗೊಂಬೆ ಕೂರಿಸಿ ಆಭಾಸಕ್ಕೊಳಗಾಗಬೇಡಿ.
    * ಗೊಂಬೆ ಕೂರಿಸಲು ಸ್ಥಳದ ಆಯ್ಕೆ ಸೂಕ್ತವಾಗಿರಲಿ. ಗೊಂಬೆಯನ್ನು ಒಮ್ಮೆ ಕೂರಿಸಿದರೆ 9 ದಿನಗಳ ಕಾಲ ಅದೇ ಸ್ಥಳದಲ್ಲಿರುತ್ತದೆ. ಹೀಗಾಗಿ ಗೊಂಬೆಯನ್ನು ಮೆಟ್ಟಿಲುಗಳ ರೀತಿಯೂ ಕೂರಿಸಬಹುದು. ಇಲ್ಲವಾದಲ್ಲಿ ಒಂದು ವಿಶಾಲವಾದ ಸ್ಥಳದಲ್ಲಿ ಕೂರಿಸಬಹುದು.

    * ಗೊಂಬೆಗಳಿಗೆ ಹೆಚ್ಚಿನ ಹೂವಿನ ಅಲಂಕಾರ ಬೇಡ. 9 ದಿನಗಳವರೆಗೆ ಹೂವು ತಾಜಾವಾಗಿರುವುದಿಲ್ಲ. ಕ್ಲೀನ್ ಮಾಡುವಾಗ ಗೊಂಬೆಗಳು ಡ್ಯಾಮೇಜ್ ಆದ್ರೆ ಕಷ್ಟ.
    * ಹೆಚ್ಚಿನ ಸೀರಿಯಲ್ ಸೆಟ್ ಲೈಟ್‍ಗಳು, ಕಣ್ಣಿಗೆ ರಾಚುವಂತಹ ಲೈಟ್ ಬಳಸಬೇಡಿ.
    * ಸಣ್ಣದಾಗಿದ್ರೂ ಸಿಂಪಲ್ ಆಗಿದ್ರೆ ಗೊಂಬೆಗಳನ್ನು ನೋಡಲು ಚೆಂದ.
    * ಎಷ್ಟೊಂದು ಗೊಂಬೆಗಳಿದೆ ಎಂದು ಎಲ್ಲಾವನ್ನು ತುಂಬಬೇಡಿ. ಅಗತ್ಯಕ್ಕನುಗುಣವಾಗಿ ಜೋಡಿಸಿ.
    * ಚಿಕ್ಕದಾಗಿದ್ರೂ ಚೊಕ್ಕವಾಗಿದ್ರೆ ಎಲ್ಲರನ್ನೂ ಆಕರ್ಷಿಸಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ