Tag: muzrai department

  • ಮುಜರಾಯಿ ಇಲಾಖೆಯಿಂದ ಅಂಜನಾದ್ರಿ ದೇವಸ್ಥಾನ ಮರಳಿ ಪಡೆಯಲು ಷಡ್ಯಂತ್ರ

    ಮುಜರಾಯಿ ಇಲಾಖೆಯಿಂದ ಅಂಜನಾದ್ರಿ ದೇವಸ್ಥಾನ ಮರಳಿ ಪಡೆಯಲು ಷಡ್ಯಂತ್ರ

    – ವಿದ್ಯಾದಾಸ ಬಾಬಾನಿಂದ ಫಲ ಪಡೆದವರ ಕುತಂತ್ರವೇ?
    – ಡಿಸಿ ವಿರುದ್ಧ ಅವಹೇಳನಕಾರಿ ಮಾತು
    – ಅಭಿವೃದ್ಧಿ ಆಗುತ್ತಿರುವ ವೇಳೆ ಷಡ್ಯಂತ್ರ

    ಕೊಪ್ಪಳ: ಖಾಸಗಿ ಟ್ರಸ್ಟ್ ಕೈವಶದಲ್ಲಿದ್ದ ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿ ದೇವಸ್ಥಾನವು ಮುಜರಾಯಿ ಇಲಾಖೆ ಸುಪರ್ದಿಗೆ ಹೋಗಿತ್ತು. ಅದನ್ನು ಮರಳಿ ಪಡೆಯುವ ಷ್ಯಡ್ಯಂತ್ರ ನಿರಂತರವಾಗಿ ನಡೆಯುತ್ತಲೇ ಇವೆ. ಈ ಹಿಂದೆ ಪದಚ್ಯುತಗೊಂಡಿದ್ದ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾನನ್ನು ಛೂ ಬಿಟ್ಟು ಕಾಣದ ಕೈಗಳು ಕ್ರಿಯಾಶೀಲವಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.

    ಹನುಮನ ಜನ್ಮಸ್ಥಳದಲ್ಲಿ ಈ ಹಿಂದೆ ಖಾಸಗಿಯಾಗಿ ರಚನೆಯಾಗಿದ್ದ ಟ್ರಸ್ಟ್ ಇಡೀ ದೇವಸ್ಥಾನದ ಪೂಜೆ, ಜಪ-ತಪ ಸೇರಿದಂತೆ ಎಲ್ಲವನ್ನೂ ನಿರ್ವಹಿಸುತ್ತಿತ್ತು. ಆದರೆ ಆ ಟ್ರಸ್ಟ್‌ನಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾತ್ರ ಆಗಿರಲಿಲ್ಲ. ಹೊರತಾಗಿ ಟ್ರಸ್ಟ್‌ನಲ್ಲಿದ್ದವರು, ಕೆಲ ರಾಜಕಾರಣಿಗಳು, ಸಂಘಟನೆಗಳ ಪ್ರಮುಖರು ಅಭಿವೃದ್ಧಿಯಾಗಿದ್ದರು. ಆಗ ಬಾಬಾನ ಕುರಿತು ಒಂದು ಸೆಕ್ಸ್ ಸ್ಕ್ಯಾಂಡಲ್ ಹೊರ ಬಂದಾಗಲೇ ಎಲ್ಲಾ ವಿವಾದಕ್ಕೆ ಕಾರಣವಾಗಿ ದೇವಸ್ಥಾನದ ಹೆಸರಿನಲ್ಲಿದ್ದ ಎರಡ್ಮೂರು ಟ್ರಸ್ಟ್‌ನವರು ಬಾಬಾನನ್ನು ಹೊರ ಹಾಕಿದರು.

    ಈ ವಿದಾದ ಹೆಚ್ಚಾಗುತ್ತಲೇ ಅಂದಿನ ಎಸ್‍ಪಿ ಅನೂಪ್ ಶಟ್ಟಿ ವರದಿ ನೀಡಿ ಆ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಳಪಡುವಂತೆ ಮಾಡಿದ್ದರು. ಅಂದಿನಿಂದ ಇಲ್ಲಿವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ. ಆದರೆ ವಿದ್ಯಾದಾಸ ಬಾಬಾ ಮತ್ತು ಆತನಿಂದ ಅದುವರೆಗೂ ಫಲಾನುಭವಿಗಳಾದ ಕೆಲವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮತ್ತೆ ಕ್ರಿಯಾಶೀಲರಾಗಿದ್ದಾರೆ. ಅದರ ಮುಂದುವರಿದ ಭಾಗವೇ ಇದೀಗ ಬಾಬ ಜಿಲ್ಲಾಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿರುವುದು.

    ಕಾಣದ ಕೈಗಳ ಕೆಲಸ?:
    ವಿದ್ಯಾದಾಸ ಬಾಬಾ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವವರೆಗೂ ಸುಮ್ಮನಿದ್ದ. ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತೋ ಅಂದಿನಿಂದ ಹಿಂದುತ್ವ ವಿಷಯ ಮುಂದಿಟ್ಟುಕೊಂಡು ದೇವಸ್ಥಾನವನ್ನು ಮತ್ತೆ ಟ್ರಸ್ಟ್‌ಗೆ ನೀಡುವಂತೆ ಸಚಿವರು, ಸಿಎಂ ಮೇಲೆ ಒತ್ತಡ ತಂದಿದ್ದಾನೆ. ಮುಜರಾಯಿ ಇಲಾಖೆ ಸಚಿವರು ಈತನ ಎಲ್ಲಾ ಕರ್ಮಕಾಂಡಗಳ ವರದಿ ನೋಡಿ ಉಗಿದು ಕಳುಹಿಸಿದ್ದಾರೆ. ಇಷ್ಟಿದ್ದರೂ ನಿರಂತರ ಪ್ರಯತ್ನ ಮಾಡುತ್ತಿರುವ ಬಾಬಾ, ಇದೀಗ ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ವಿಷಯವಾಗಿ ಸತತ ಯತ್ನ ನಡೆಸಿದ್ದಾನೆ ಎನ್ನುವ ಮಾಹಿತಿ ದೊರಕಿವೆ. ಇದರೆಲ್ಲದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ಗಂಗಾವತಿ ಕ್ಷೇತ್ರದ ಜನತೆ ಮಾತು.

    ನೌಕರರ ಸಂಘ ಪ್ರತಿಭಟನೆ:
    ಡಿಸಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಬಾಬಾನನ್ನು ಬಂಧಿಸಿ ಗಡಿಪಾರು ಮಾಡುವಂತೆ ಸರ್ಕಾರಿ ನೌಕರರ ಸಂಘ ಕೊಪ್ಪಳದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅತ್ತ ಗಂಗಾವತಿಯ ಕೆಲ ಮುಖಂಡರು ಬಾಬನ ವರ್ತನೆ, ಆತನ ವ್ಯವಹಾರ, ನಡೆತೆ, ಚಲನವಲನಗಳ ಬಗ್ಗೆ ಮಾತನಾಡಿ ಬಾಬಾನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಗಳು ಬಂದಿವೆ.

    ಸರ್ಕಾರದ ಸುಪರ್ದಿಗೆ ಬಂದ ನಂತರ ದೇವಸ್ಥಾನಕ್ಕೆ 1.60 ಕೋಟಿ ರೂ. ಆದಾಯ ಬಂದಿದೆ. 30 ಲಕ್ಷ ರೂ. ಎಫ್‍ಡಿ ಮಾಡಿದ್ದರೆ, 30 ಲಕ್ಷ ರೂ. ದೇವಸ್ಥಾನದ ಅಕೌಂಟ್‍ನಲ್ಲಿದೆ. ಉಳಿದಂತೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆದಿವೆ. ವಿಷಯ ಹೀಗಿರುವಾಗ ಕೆಲ ಕುತಂತ್ರಿಗಳು ವಿದ್ಯಾದಾಸ ಬಾಬಾನನ್ನು ಛೂ ಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವುದು ಓಪನ್ ಸೀಕ್ರೆಟ್. ಯಾವುದೇ ಕಾರಣಕ್ಕೂ ಸರ್ಕಾರ ಈ ದೇವಸ್ಥಾನವನ್ನು ಖಾಸಗಿಯವರಿಗೆ ನೀಡಬಾರದು ಎನ್ನುವುದು ಜಿಲ್ಲೆಯ ಜನತೆ ಒತ್ತಾಯ.

    ಟ್ರಸ್ಟ್‌ಗೆ ನೋಟಿಸ್:
    ಅಂಜನಾದ್ರಿ ದೇವಸ್ಥಾನ ಸರ್ಕಾರದ ಸುಪರ್ದಿಗೆ ಬಂದ ನಂತರ ಕೋಟಿ ಕೋಟಿ ಆದಾಯ ಬಂದಿದೆ. ಆದರೆ ಬರುವುದಕ್ಕೂ ಮೊದಲು ಅಷ್ಟು ವರ್ಷಗಳ ಕಾಲ ಎಷ್ಟು ಪ್ರಮಾಣದಲ್ಲಿ ಭಕ್ತರ ದೇಣಿಗೆ, ಕಾಣಿಕೆ, ತಟ್ಟೆಕಾಸು ಹರಿದುಬಂದಿದೆ ಎಂಬ ಲೆಕ್ಕ ಇದುವರೆಗೂ ಸಿಕ್ಕಿಲ್ಲ. ಟ್ರಸ್ಟ್ ರಿಜಿಸ್ಟ್ರೇಷನ್ ಕಾಯ್ದೆ ಪ್ರಕಾರ ನೋಂದಣಿಯಾದ ನಂತರದ ದಿನಗಳಿಂದ ಸರ್ಕಾರ ವಶಪಡಿಸಿಕೊಂಡ ದಿನದವರೆಗೂ ಲೆಕ್ಕಪತ್ರಗಳನ್ನು ಒಪ್ಪಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿಯವರು ಶ್ರೀ ಆಂಜನೇಯ ಪರ್ವತ ಮತ್ತು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಿಗೂ ಹಾಗೂ ವಿದ್ಯಾದಾಸ ಬಾಬಾಗೂ ನೋಟಿಸ್ ಜಾರಿ ಮಾಡಿದ್ದಾರೆ. ಒಂದುವೇಳೆ ಲೆಕ್ಕಪತ್ರ ಸಲ್ಲಿಸದಿದ್ದರೆ ಸಾರ್ವತ್ರಿಕ ಹಣದ ದುರುಪಯೋಗದ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

  • ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ

    ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ

    ಬೆಂಗಳೂರು: ರಾಜ್ಯ ಸರ್ಕಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಈ ವರ್ಷದಿಂದ ಅನುಷ್ಠಾನವಾಗಲಿದ್ದು, ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ರಾಜ್ಯದ ‘ಎ’ ದರ್ಜೆಯ ದೇವಸ್ಥಾನಗಳಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ನೀಡುತ್ತಿದ್ದಾರೆ.

    ಸರ್ಕಾರದಿಂದ ಆಯ್ಕೆ ಮಾಡಿರುವ 100 ದೇವಾಲಯಗಳಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಈಗಾಗೀ ಸಚಿವರು ‘ಎ’ ದರ್ಜೆಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ನಿನ್ನೆ ಚಿಕ್ಕಬಳ್ಳಾಪುರದ ಸುಬ್ರಮಣ್ಯ ದೇವಸ್ಥಾನ, ಮಂಗಳೂರಿನ ಮಂಗಳಾ ದೇವಿ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳಿಗೆ ಸೇರಿದಂತೆ ‘ಎ’ ದರ್ಜೆಯ ದೇವಸ್ಥಾನಗಳಿಗೆ ಭೇಟಿ ನೀಡಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸಚಿವರು ಸಲಹೆ ನೀಡಿದ್ದಾರೆ.

    ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ 55,000 ರೂ.ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ. ವರನಿಗೆ ಪಂಚೆ-ಶರ್ಟ್ ಹಾಗೂ ಶಲ್ಯ ನೀಡಲಾಗುತ್ತದೆ. ವಧುವಿಗೆ ಧಾರೆ ಸೀರೆ, ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು  ನೀಡಲಾಗುತ್ತದೆ.

    ಏಪ್ರಿಲ್ 24ರಂದು ಮೊದಲ ಹಂತದಲ್ಲಿ ಹಾಗೂ ಮೇ 24ರಂದು ಎರಡನೇ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಈಗಾಗಲೇ ಮುಜರಾಯಿ ಸಚಿವರು ಮತ್ತು ಇಲಾಖೆ ಅಧಿಕಾರಿಗಳು ಸಾಮೂಹಿಕ ವಿವಾಹ ಕುರಿತು ದೇವಸ್ಥಾನಗಳಿಗೆ ಭೇಟಿ ಚರ್ಚೆ ನಡೆಸುತ್ತಿದ್ದಾರೆ.

  • ನಮ್ಗೂ ವಾರದ ರಜೆ ಕೊಡಿ- ಅರ್ಚಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆ

    ನಮ್ಗೂ ವಾರದ ರಜೆ ಕೊಡಿ- ಅರ್ಚಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆ

    ಬೆಂಗಳೂರು: ಐಟಿ, ಸರ್ಕಾರಿ, ಕೂಲಿ ಕಾರ್ಮಿಕರು, ಚಾಲಕರೆಲ್ಲ ವಾರದಲ್ಲೊಂದು ದಿನ ರಜಾ ತೆಗೆದುಕೊಂಡು ರೆಸ್ಟ್ ಮಾಡುತ್ತಾರೆ. ಆದರೆ ನಮಗೆ ಯಾಕೆ ರಜೆ ಇಲ್ಲಾ ಎಂದು ಇದೀಗ ದೇವರಿಗೆ ಪೂಜೆ ಮಾಡೋ ಪೂಜಾರಿಗಳು ಕೂಡ ವಾರದ ರಜೆ ಬೇಕು ಎಂದು ಸರ್ಕಾರದ ಮುಂದೆ ಹೊಸ ಮನವಿ ಸಲ್ಲಿಸೋಕೆ ರೆಡಿಯಾಗಿದ್ದಾರೆ.

    ಪೂಜೆ ಜಪ ಹೋಮ ಹವನ ಎಂದು ದೇವಸ್ಥಾನದ ಅರ್ಚಕರು ಫುಲ್ ಟೈಂ ಬ್ಯುಸಿಯಾಗಿರುತ್ತಾರೆ. ಮುಜರಾಯಿ ದೇವಸ್ಥಾನದ ಅರ್ಚಕರು ಈಗ ವಾರದ ಅಷ್ಟು ಹೊತ್ತು ದೇವರ ಪೂಜೆ ಮಾಡಿ ಸುಸ್ತಾಗಿದ್ದಾರೆ ಅನ್ನಿಸುತ್ತಿದೆ. ಎಲ್ಲರೂ ವಾರಕ್ಕೊಂದು ರಜೆ ತಗೋತಾರೆ. ಆದರೆ ನಮಗ್ಯಾಕೆ ವೀಕ್‍ಆಫ್ ಇಲ್ಲ. ವಾರದ ಒಂದಿನ ನಮಗೆ ರಜಾ ಬೇಕೆ ಬೇಕು ಎಂದು ಅರ್ಚಕರ ಸಂಘಕ್ಕೆ ಬಹುತೇಕ ಮುಜರಾಯಿ ಅರ್ಚಕರು ಮನವಿ ಮಾಡಿದ್ದು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

    ಶ್ರೀಮಂತ ಮುಜರಾಯಿ ದೇಗುಲಕ್ಕೆ ಪರ್ಯಾಯ ಅರ್ಚಕರು ಇರೋದರಿಂದ ಸಮಸ್ಯೆಯಾಗಲ್ಲ. ಆದರೆ ಸಿ ಗ್ರೇಡ್, ಬಿ ಗ್ರೇಡ್ ದೇಗುಲದಲ್ಲಿ ಒಬ್ಬೊಬ್ಬರೇ ಅರ್ಚಕರು ಇರೋದ್ರಿಂದ ಕಷ್ಟವಾಗುತ್ತಿದೆ. ಇದಕ್ಕಾಗಿ ರಜೆಗಾಗಿ ಅರ್ಚಕರು ಸರ್ಕಾರದ ಮೊರೆ ಹೋಗಿದ್ದಾರೆ. ಜೊತೆಗೆ ಸರ್ಕಾರ ಬೇರೆ ಈ ಹಿಂದೆ ನೀವು ರಜೆ ಹಾಕಿರುವ ದಿನ ದೇವಸ್ಥಾನದ ಚಿನ್ನಭಾರಣ, ಹುಂಡಿ ಹಣದ ಜವಾಬ್ದಾರಿಯೂ ನಿಮ್ಮದೇ ಎಂದು ಭಯ ಹುಟ್ಟಿಸಿದ್ದಾರೆ. ಇದಕ್ಕಾಗಿ ಬಹಳಷ್ಟು ಅರ್ಚಕರು ಬೇಸರಗೊಂಡಿದ್ದಾರೆ ಎಂದು ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಎಲ್ಲರೂ ಮಾಡೋದು ಹೊಟ್ಟೆಗಾಗಿಯೇ. ಹೀಗಾಗಿ ದೇವರ ಪೂಜೆಯೂ ಒಂದು ಕೆಲಸವೇ ಆಗಿದೆ. ನಮಗೆ ರಜೆ ಬೇಕು ಎಂದು ಅರ್ಚಕರ ಹೊಸ ಬೇಡಿಕೆನಾ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ಮುಜರಾಯಿ ಇಲಾಖೆಗೆ ಇಬ್ಬಿಬ್ರು ಮಿನಿಸ್ಟರ್- ಇಲ್ಲಿ ಇವ್ರದ್ದೇ ಹವಾ!

    ಮುಜರಾಯಿ ಇಲಾಖೆಗೆ ಇಬ್ಬಿಬ್ರು ಮಿನಿಸ್ಟರ್- ಇಲ್ಲಿ ಇವ್ರದ್ದೇ ಹವಾ!

    ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿ ಈಗ ಇಬ್ಬರು ಮಿನಿಸ್ಟರ್. ಕೆಲವೊಮ್ಮೆ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗೆ ನಮ್ ಮಿನಿಸ್ಟರ್ ಯಾರಪ್ಪ ಅನ್ನೋ ಕನ್‍ಫ್ಯೂಶನ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

    ಹೌದು. ಸಚಿವ ರಾಜಶೇಖರ್ ಪಾಟೀಲ್ ಅವರಿಗಿಂತ ಮುಜರಾಯಿ ಇಲಾಖೆಯ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಎಚ್.ಡಿ.ರೇವಣ್ಣ ಮುಜರಾಯಿ ಸಚಿವರಗಿಂತ ಮೊದಲೇ ಅಧಿಕಾರಿಗಳ ಅನೌಪಚಾರಿಕ ಮೀಟಿಂಗ್ ಬೇರೆ ಮಾಡಿದ್ದಾರಂತೆ. ಎಲ್ಲಾ ದೇವಾಲಯದ ಆದಾಯದ ವಿವರ, ಅಲ್ಲಿನ ಅರ್ಚಕರಿಗೆ ಕೊಡುತ್ತಿರುವ ವೇತನದ ಬಗ್ಗೆ ಲಿಸ್ಟ್ ತರುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.

    ಎಲ್ಲ ನಾಯಕರಿಗಿಂತ ಸ್ವಲ್ಪ ಹೆಚ್ಚು ದೈವ ಭಕ್ತರಾಗಿರುವ ರೇವಣ್ಣ, ಕೆಲ ಆಪ್ತ ಮುಜರಾಯಿ ಅರ್ಚಕರ ವೇತನ ಹೆಚ್ಚಿಸಲು ಜೊತೆಗೆ ಹಾಸನ ಕಡೆಯ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಪಡೆಯೋಕೆ ಹೀಗೆಲ್ಲ ಕೆಲಸ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಸುದ್ದಿಯೂ ಹರಿದಾಡುತ್ತಿದೆ. ಎಲ್ಲರ ಲಿಸ್ಟ್ ಹಿಡ್ಕೊಂಡು ಬನ್ನಿ ಮತ್ತೆ ಸಭೆ ಮಾಡ್ತೀನಿ ಅಂತಾ ಅಧಿಕಾರಿಗಳಿಗೆ ಎಚ್.ಡಿ.ರೇವಣ್ಣ ಸೂಚನೆ ನೀಡಿದ್ದಾರೆ ಅಂತ ಮುಜರಾಯಿ ಉನ್ನತ ಇಲಾಖೆಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ಸರ್ಕಾರದ ನೌಕರನಾಗಿ ನಾನು ಒಂದು ಕ್ಷಣವೂ ಇರಲಾರೆ: ಉಡುಪಿಯಲ್ಲಿ ಪೇಜಾವರಶ್ರೀ

    ಸರ್ಕಾರದ ನೌಕರನಾಗಿ ನಾನು ಒಂದು ಕ್ಷಣವೂ ಇರಲಾರೆ: ಉಡುಪಿಯಲ್ಲಿ ಪೇಜಾವರಶ್ರೀ

    ಉಡುಪಿ: ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ಬಗೆಗಿನ ಸರ್ಕಾರದ ನಡೆಗೆ ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದರೆ ನಾನು ಮಠದಿಂದ ಹೊರಬರುತ್ತೇನೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಒಂದು ಕ್ಷಣವೂ ಇರಲಾರೆ ಎಂದ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ.

     ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ದೇವಾಲಯ- ಮಠಗಳನ್ನು ಸರ್ಕಾರಿಕರಣ ಮಾಡುವ ಚಿಂತನೆ ವಿಪಕ್ಷಗಳ ಹೋರಾಟಕ್ಕೆ ಅಸ್ತ್ರ ಸಿಕ್ಕಂತಾಗುತ್ತದೆ. ಚುನಾವಣಾ ಹೊಸ್ತಿಲಲ್ಲಿ ವಿಪಕ್ಷಗಳು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

    ಸರ್ಕಾರದ ವಿರುದ್ಧ ನಾನು ಹೋರಾಟ ಮಾಡುವುದಿಲ್ಲ. ಸರ್ಕಾರದ ಈ ನಡೆಯ ಬಗ್ಗೆ ಜನರು, ಮಠದ ಭಕ್ತರು ಚಿಂತನೆ ನಡೆಸಲಿ. ಒಂದು ಸರಿಯಾದ ತೀರ್ಮಾನಕ್ಕೆ ಬರಲಿ ಎಂದು ಪೇಜಾವರ ಸ್ವಾಮೀಜಿ ಹೇಳಿದರು.

    ನಾವು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಸರ್ಕಾರ ಹೀಗೆ ಮಾಡಬಾರದು. ಬಹುಸಂಖ್ಯಾತ, ಅಲ್ಪಸಂಖ್ಯಾತರನ್ನು ಒಂದಾಗಿ ಕಾಣಬೇಕು. ರಾಜ್ಯದ ಜನತೆಯ ಬಗ್ಗೆ ತಾರತಮ್ಯ ಮಾಡಬಾರದು. ಆದರೆ ಇದಕ್ಕೆ ತದ್ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಅಲ್ಪಸಂಖ್ಯಾತರ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಆದೇಶ ಪತ್ರ ಹೊರಡಿಸಿತ್ತು. ಮುಗ್ಧರೆಂದಾದರೆ ಎಲ್ಲರ ಪ್ರಕರಣಗಳನ್ನು ಸರ್ಕಾರ ಕೈಬಿಡಬೇಕು. ಇದೆಲ್ಲದಕ್ಕೆ ರಾಜ್ಯ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಇಂತಹ ಗೊಂದಲಕಾರಿ ಆದೇಶಗಳಿಂದ ಜನ ಮತ್ತಷ್ಟು ಗೋಂದಲಕ್ಕೀಡಾಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಮಠ, ಖಾಸಗಿ ದೇವಸ್ಥಾನಗಳನ್ನು ಸರ್ಕಾರಿಕರಣ ಮಾಡುವ ಬಗ್ಗೆ ಯಾವುದೇ ನೋಟೀಸ್ ಈವರೆಗೆ ನಮ್ಮ ಕೈ ತಲುಪಿಲ್ಲ. ಪರ್ಯಾಯ ಮಠಕ್ಕೆ ಬಂದ ಬಗ್ಗೆಯೂ ಮಾಹಿತಿಯಿಲ್ಲ. ಸರಕಾರದ ಯಾವುದೇ ಮೂಲಗಳಿಂದ ತಿಳಿದುಬಂದಿಲ್ಲ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಸುದ್ದಿಯ ಪ್ರಸಾರ ನೋಡಿ ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ ಎಂದು ಪೇಜಾವರಶ್ರೀ ಹೇಳಿದರು.

    ಯೂಟರ್ನ್ ಹೊಡೆದ ಸರ್ಕಾರ: ಮಠಗಳನ್ನು, ದೇವಾಲಯಗಳನ್ನು ವಶಪಡಿಸಿಕೊಳ್ಳುವ ಸಂಬಂಧ ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆ 15 ದಿನಗಳ ಕಾಲಾವಕಾಶ ಕೊಟ್ಟು, ಜನವರಿ 29 ರಂದು ಸಾರ್ವಜನಿಕ ಪ್ರಕಟಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ಎಚ್ಚೆತ್ತು ಹಿಂದೆ ಈಗ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಸಿಎಂ ಸಿದ್ದರಾಮಯ್ಯ ನಡೆಯನ್ನ ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ವ್ಯಾಪಕ ಟೀಕೆಯಿಂದ ಎಚ್ಚೆತ್ತ ಸಚಿವ ರುದ್ರಪ್ಪ ಲಮಾಣಿ ಅಂತ ಪ್ರಸ್ತಾವನೆಯೇ ಇಲ್ಲ. ಕೋರ್ಟ್ ನಿರ್ದೇಶನದಂತೆ ನಾವು ಅಭಿಪ್ರಾಯ ಕೇಳಿದ್ದೇವೆ. ಬಿಜೆಪಿಯವರು ಜನರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಎಂದರು.

    https://www.youtube.com/watch?v=wcUoOzXNf6Y