Tag: Muzammil Pasha

  • ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    – 6 ತಿಂಗಳ ಹಿಂದೆ ಎಸ್‌ಡಿಪಿಐಗೆ ಬಂದು ಸೇರಿದ್ದ
    – ಭಯೋತ್ಪಾದಕ ಸಂಘಟನೆಗಳಿಗೆ ಸ್ಲೀಪರ್ ಸೆಲ್?

    ಬೆಂಗಳೂರು: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು ಇದ್ಯಾ ಈ ಪ್ರಶ್ನೆಯನ್ನು ಇಟ್ಟುಕೊಂಡು ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಗಲಾಭೆಯ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳ ಮೊಬೈಲ್‌ ಕರೆ, ವಾಟ್ಸಪ್‌ ಕಾಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಗಲಭೆಯ ಸಂಚುಕೋರ ಮುಜಾಮಿಲ್‍ ಕರೆಯಲ್ಲಿ ಸ್ಫೋಟಕ ವಿಚಾರಗಳು ಲಭ್ಯವಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಪಿಎಫ್‌ಐ ಸಂಘಟನೆ ಸದಸ್ಯನಾಗಿದ್ದ ಮುಜಾಮಿಲ್‌ ಪಾಷಾ 6 ತಿಂಗಳ ಹಿಂದೆ ಎಸ್‌ಡಿಪಿಐ ಸಂಘಟನೆ ಸೇರಿದ್ದ. ಬೆಂಗಳೂರು ಗಲಭೆಯ ಎ1 ಆರೋಪಿ ಆಗಿರುವ ಈತ ಭಯೋತ್ಪಾದನಾ ಸಂಘಟನೆಗಳಿಗೆ ಸ್ಲೀಪರ್‌ ಸೆಲ್‌ ಆಗಿ ಕೆಲಸ ಮಾಡುತ್ತಿದ್ದಾನಾ ಎಂಬ ಅನುಮಾನ ಮೂಡಿದೆ.

    ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಜೊತೆ ಭಯೋತ್ಪಾದನಾ ಸಂಘಟನೆಗಳ ನಂಟು ಇದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಈಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದನ್ನೂ ಓದಿ: ವಿಡಿಯೋ: ನವೀನ್ ತಲೆ ತಂದವ್ರಿಗೆ 51 ಲಕ್ಷ ಕೊಡ್ತೀನಿ- ಮುಸ್ಲಿಂ ನಾಯಕ ಘೋಷಣೆ

    ಗಲಭೆಯಲ್ಲಿ ಪಾಲ್ಗೊಂಡವರಿಗೆ ಈತ ಹಣವನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪವೂ ಇದೆ. ಹೀಗಾಗಿ ಈತನಿಗೆ ಹಣವನ್ನು ನೀಡಿದವರು ಯಾರು? ಈತನ ಖಾತೆಗೆ ಎಲ್ಲಿಂದ ಹಣ ಜಮೆ ಆಗುತ್ತಿತ್ತು? ಇಷ್ಟು ಪ್ರಮಾಣದಲ್ಲಿ ಜನರನ್ನು ಸೇರಿಸಿದ್ದು ಹೇಗೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಯುತ್ತಿದೆ.

    ಸದ್ಯ ನಡೆಯುತ್ತಿರುವ ವಿಚಾರಣೆ ವೇಳೆ ನಾನು ಧರ್ಮವನ್ನು ಪಾಲಿಸುವ ವ್ಯಕ್ತಿ ಎಂದಷ್ಟೇ ಹೇಳುತ್ತಿದ್ದಾನೆ. ಬೇರೆ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ ಎಂಬುದಾಗಿ ಉತ್ತರಿಸುತ್ತಿದ್ದಾನೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಒಂದು ವೇಳೆ ಮುಜಾಮಿಲ್‌ ಪಾಷಾನ ವಾಟ್ಸಪ್‌, ಇಮೇಲ್‌, ಮೊಬೈಲ್‌ ಕರೆಗಳ ತನಿಖೆಯ ವೇಳೆ ಹೊರ ದೇಶ ಅಥವಾ ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕದ ಶಂಕೆ ವ್ಯಕ್ತವಾದರೆ ಈ ಪ್ರಕರಣಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಎಂಟ್ರಿ ಕೊಡಲಿದೆ. ಒಂದು ವೇಳೆ ಎನ್‌ಐಎ ಎಂಟ್ರಿ ನೀಡಿದರೆ ಈಗ ನಡೆಯುತ್ತಿರುವ ಮ್ಯಾಜಿಸ್ಟ್ರೇಟ್‌ ತನಿಖೆಯ ಸ್ವರೂಪವೇ ಬದಲಾಗಲಿದೆ. ಇದನ್ನೂ ಓದಿ: ಸರ್ಕಾರಿ ಸಂಬಳ ತಗೊಂಡು ಬೆಂಕಿ ಇಟ್ಟ ಕಿರಾತಕ- ಗಲಭೆಯ ಮಾಸ್ಟರ್ ಮೈಂಡ್ ಫೈರೋಜ್ ಖಾನ್

    ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಸಂಘಟನೆಗಳು ದೇಶದಲ್ಲಿ ದಾಳಿ ನಡೆಸಲು ಮತ್ತು ಭಯೋತ್ಪಾದಕರನ್ನು ತಯಾರಿಸಲು ಇಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸುವುದು ಹೊಸದೆನಲ್ಲ. ಬಡ ಯುವಕರಲ್ಲಿ ಮತೀಯ ಭಾವನೆಗಳನ್ನು ಬೆಳೆಸಿ ತಮ್ಮ ಕೃತ್ಯದಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡುವುದನ್ನು ಉಗ್ರ ಸಂಘಟನೆಗಳು ಮಾಡಿಕೊಂಡೇ ಬಂದಿದೆ. ಈ ಯುವಕರಿಗೆ ಹಣದ ಆಮಿಷವನ್ನು ಒಡ್ಡಿ ಉಗ್ರ ಸಂಘಟನೆಗಳಿಗೆ ಸೇರುವಂತೆ ಮಾಡುವುದು ಸ್ಲೀಪರ್‌ ಸೆಲ್‌ ಸದಸ್ಯರ ಕೆಲಸ. ಈ ವ್ಯಕ್ತಿಗಳು ಸಮಾಜ ಸುಧಾರಕರಂತೆ ಬಿಂಬಿಸುತ್ತಾ ಒಳಗಡೆ ಉಗ್ರ ಕೃತ್ಯಗಳಿಗೆ ಸಾಥ್‌ ನೀಡುತ್ತಿರುತ್ತಾರೆ.

  • ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ಎಸ್‍ಡಿಪಿಐ (Social Democratic Party of India) ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

    ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾನನ್ನು ಡಿಜೆ ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಮುಜಾಮಿಲ್ ಪಾಷಾ ಎ-1 ಆರೋಪಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ಮಂಗಳವಾರ ರಾತ್ರಿ ಕೆಜಿ ಹಳ್ಳಿಯಲ್ಲಿ ದಾಂಧಲೆ ಮಾಡುತ್ತಿದ್ದ ಗಲಭೆಕೋರರ ಜೊತೆ ಮುಜಾಮಿಲ್ ಪಾಷಾ ಇದ್ದನು. ಅಲ್ಲದೇ ಗಲಭೆ ನಡೆಯುತ್ತಿದ್ದಾಗ ಮೈಕ್ ಹಿಡಿದುಕೊಂಡು ಗಲಭೆಗೋರರ ಜೊತೆ ಮಾತನಾಡಿದ್ದನು. ಹೀಗಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಿ ಡಿಜೆ ಪೊಲೀಸರು ಮುಜಾಮಿಲ್ ಪಾಷಾನನ್ನು ಬಂಧಿಸಿದ್ದಾರೆ.

    ಮುಜಾಮಿಲ್ ಪಾಷಾನ ವಿರುದ್ಧ ಈಗಾಗಲೇ ಡಿಜೆ ಹಳ್ಳಿ ಠಾಣೆಯಲ್ಲಿ ಐದು ಕೇಸ್ ದಾಖಲಾಗಿವೆ. ಗುಂಪು ಕಟ್ಟಿಕೊಂಡು ಹಲ್ಲೆ ಮತ್ತು ಪ್ರಚೋದಾನಾತ್ಮಕ ಹೇಳಿಕೆ ಪ್ರಕರಣ ದಾಖಲಾಗಿವೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.