Tag: mutt

  • ಶಿವಮೊಗ್ಗದ ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ- ಬೆಂಗ್ಳೂರಿನ 18 ಎಕರೆ ಮೇಲೆ ಕಣ್ಣು

    ಶಿವಮೊಗ್ಗದ ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ- ಬೆಂಗ್ಳೂರಿನ 18 ಎಕರೆ ಮೇಲೆ ಕಣ್ಣು

    – ಅಸಲಿ, ನಕಲಿ ಸ್ವಾಮೀಜಿಗಳ ಫೈಟ್

    ಶಿವಮೊಗ್ಗ: ನಗರದ ರಾಮಲಿಂಗೇಶ್ವರ ಮಠ, ಈ ಮಠದ ಹೆಸರಲ್ಲಿ ಬೆಂಗಳೂರಿನ ನಾಗಸಂದ್ರ ಬಳಿ 18 ಎಕರೆ ಜಮೀನಿದೆ. ನೂರಾರು ಕೋಟಿ ಬೆಲೆಬಾಳುವ ಈ ಜಾಗದ ಮೇಲೆ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರಭಾವಿಗಳ ಕಣ್ಣು ಬಿದ್ದಿದೆ. ಸ್ವಾಮೀಜಿಗಳ ನಡುವೆಯೇ ಅಸಲಿ, ನಕಲಿ ಅಂತ ವಿವಾದ ತಾರಕಕ್ಕೇರಿದೆ.

    ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠಕ್ಕೆ ನೂರಾರು ವರ್ಷ ಇತಿಹಾಸ ಇದೆ. ಕೆಳದಿ ಸಂಸ್ಥಾನದ ಅರಸರ ಕಾಲದಲ್ಲಿ ಈ ಮಠ ಅಸ್ತಿತ್ವಕ್ಕೆ ಬಂತಂತೆ. ಮಠ ಆರಂಭದ ದಿನಗಳಲ್ಲಿ ದಾಸೋಹ, ಪೂಜೆ-ಪ್ರವಚನ ಮಾಡಿಕೊಂಡು ಸಾಮಾಜಮುಖಿ ಕೆಲಸದಲ್ಲಿ ತೊಡಗಿತ್ತು. ಕಾಲಕ್ರಮೇಣ ಮಠ ಕೂಡ ಕಮರ್ಷಿಯಲ್ ಟಚ್ ಪಡೆದುಕೊಂಡಿತು. ಈ ಮಠಕ್ಕೆ ಬೆಂಗಳೂರಿನ ನಾಗಸಂದ್ರ ಬಳಿ ನೂರಾರು ಕೋಟಿ ರೂ. ಬೆಲೆ ಬಾಳುವ 18 ಎಕರೆ ಜಮೀನಿದ್ದು ಮಠದ ಆಸ್ತಿ ಕಬಳಿಸಲು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದ್ಯಂತೆ.

    ಮಠದ ಆಸ್ತಿ ವ್ಯಾಜ್ಯ ಕೋರ್ಟಿನಲ್ಲಿದ್ದು 1988ರಿಂದ ಇಂದಿನವರೆಗೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸದ್ಯ ವಿಶ್ವರಾಧ್ಯ ಸ್ವಾಮೀಜಿ ಮಠದಲ್ಲಿ ವಾಸವಿದ್ದು, ಕಾಶಿ ಪ್ರವಾಸಕ್ಕೆ ಹೋಗಿದ್ದಾರೆ. ಇದೇ ವೇಳೆ ರಾಮಲಿಂಗೇಶ್ವರ ಮಠದ ಮೂಲ ಸ್ವಾಮೀಜಿ ನಾನೇ ಅಂತ ಹೇಳಿಕೊಂಡು ಶಿವಕುಮಾರ ಸ್ವಾಮಿ ಅಲಿಯಾಸ್ ಚಂದ್ರಮೌಳೇಶ್ವರ ಸ್ವಾಮೀಜಿ ತಮ್ಮ ಬೆಂಬಲಿಗರ ಜೊತೆ ಬಂದು ಮಠಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಮಠದಲ್ಲಿದ್ದ ವಿಶ್ವರಾಧ್ಯ ಶ್ರೀ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂಸಿ ಪೊಲೀಸರು ಗುಂಪು ಗಲಾಟೆ ತಪ್ಪಿಸಿದ್ದಾರೆ.

    ಬೆಂಗಳೂರಿನ ನಾಗಸಂದ್ರ ಬಳಿ ಮಠಕ್ಕೆ ಸೇರಿದ 18 ಎಕರೆ ಜಮೀನನ್ನು ಮೆಟ್ರೋ ಕಾಮಗಾರಿಗೆ ಬಿಎಂಆರ್‍ಸಿಎಲ್ ವಶಪಡಿಸಿಕೊಂಡಿದೆ. ಪರಿಹಾರ ಮೊತ್ತವಾಗಿ 88 ಕೋಟಿ ರೂ.ನೀಡಿದೆ. ಆದರೆ ಈ ಭೂಮಿ ನ್ಯಾಯಾಲಯದಲ್ಲಿದ್ದ ಕಾರಣ ಪರಿಹಾರದ ಹಣ ಸರ್ಕಾರದ ಬಳಿಯೇ ಇದೆ. ಹಾಗಾಗಿ ಈ ಹಣ ಲಪಟಾಯಿಸಲು ಮಠದ ಗಂಧ-ಗಾಳಿಯೇ ಗೊತ್ತಿಲ್ಲದವರು ಕೂಡ ನಾನು ಸ್ವಾಮೀಜಿ, ನಾನು ಪೀಠಾಧಿಪತಿ ಅಂತ ಹೊಸಹೊಸದಾಗಿ ಹುಟ್ಟಿಕೊಳ್ತಿದ್ದಾರಂತೆ.

    ಒಟ್ಟಾರೆ, ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ ಗೊಂದಲದ ಗೂಡಾಗಿದೆ. ಈಗಾಗಿ ಇಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆಗ ಸತ್ಯಾಸತ್ಯತೆ ಹೊರ ಬರಲಿದೆ ಅಂತ ಮಠದ ಭಕ್ತರು ಹಾಗು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ನನಗೂ ಡಿಸಿಎಂ ಆಗುವ ಆಸೆ ಇತ್ತು: ಸಚಿವ ಶ್ರೀರಾಮುಲು

    ನನಗೂ ಡಿಸಿಎಂ ಆಗುವ ಆಸೆ ಇತ್ತು: ಸಚಿವ ಶ್ರೀರಾಮುಲು

    ದಾವಣಗೆರೆ: ನನಗೂ ಡಿಸಿಎಂ ಆಗುವ ಆಸೆ ಇತ್ತು. ಆದರೆ ಮುಖ್ಯಮಂತ್ರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಮುಜುಗರ ತರುವ ಕೆಲಸ ಮಾಡೋಲ್ಲ ಎಂದು ನನಗೂ ಡಿಸಿಎಂ ಸ್ಥಾನದ ಮೇಲೆ ಆಸೆ ಇದೆ ಎನ್ನುವುದನ್ನು ಆರೋಗ್ಯ ಸಚಿವ ಶ್ರೀರಾಮುಲು ಹೊರಹಾಕಿದ್ದಾರೆ.

    ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಸಚಿವ ಶ್ರೀರಾಮುಲು ಅಧ್ಯಕ್ಷರಾಗಿದ್ದಾರೆ. ಮಠಕ್ಕೆ ಹೊರಡುವ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಮಾತನಾಡಿದ ಅವರು, ಡಿಸಿಎಂ ಆಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪ ನವರು ವಾಲ್ಮೀಕಿ ಸಮಾಜಕ್ಕೆ ಅವಕಾಶ ಕೊಡುತ್ತಾರೆ. ಅಲ್ಲದೆ ಕೊಟ್ಟ ಮಾತನ್ನು ಯಡಿಯೂರಪ್ಪ ಯಾವತ್ತು ತಪ್ಪುವುದಿಲ್ಲ. ಈಗ ಸಿಎಂ ಸಾಕಷ್ಟು ಒತ್ತಡದಲ್ಲಿದ್ದಾರೆ. ಈಗ ಹೋಗಿ ಒತ್ತಡ ಹಾಕಿದ್ರೆ ಅವರಿಗೆ ಮುಜುಗರ ನೀಡಿದಂತಾಗುತ್ತದೆ.

    ನಾಳೆ, ನಾಡಿದ್ದು ಬಜೆಟ್ ಪೂರ್ವ ಸಭೆ ಇದ್ದು, ನಮ್ಮ ಸಲಹಗೆಳನ್ನು ನಾವು ಸಿಎಂಗೆ ಕೊಡುತ್ತೇವೆ ಎಂದು ಶ್ರೀರಾಮುಲು ಹೇಳಿದರು. ಇದೇ ವೇಳೆ ಅವರಿಗೆ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

    ಶನಿವಾರವಾದ್ದರಿಂದ ದಾವಣಗೆರೆಯ ಹೊರವಲಯದಲ್ಲಿರುವ ಶಾಮನೂರು ಗ್ರಾಮದ ಆಂಜನೇಯನ ದೇವಸ್ಥಾನಕ್ಕೆ ಶ್ರೀರಾಮುಲು ಭೇಟಿ ನೀಡಿದ್ದು, ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಅಲ್ಲದೆ ಆಂಜನೇಯ ಹಾಗೂ ಈಶ್ವರನಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹೋಟೆಲೊಂದರಲ್ಲಿ ಒಗ್ಗರಣೆ ಮಂಡಕ್ಕಿ ಹಾಗೂ ಮೆಣಸಿನಕಾಯಿ ತಿಂದು ಅಲ್ಲಿಂದ ವಾಲ್ಮೀಕಿ ಮಠಕ್ಕೆ ಪ್ರಯಾಣ ಬೆಳಸಿದರು. ಇನ್ನು ಸಚಿವ ಶ್ರೀರಾಮುಲು ಅವರನ್ನು ನೋಡುತ್ತಿದ್ದಂತೆ ಸಾಕಷ್ಟು ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು.

  • ಮಠಕ್ಕೆ ಡೊನೇಷನ್ ಕೊಡೋ ಹೆಸ್ರಲ್ಲಿ ಕಳ್ಳತನ!

    ಮಠಕ್ಕೆ ಡೊನೇಷನ್ ಕೊಡೋ ಹೆಸ್ರಲ್ಲಿ ಕಳ್ಳತನ!

    – ಅರ್ಚಕರ ಮನೆಯಲ್ಲೇ ಉಳಿದುಕೊಂಡಿದ್ದ ಕಳ್ಳ

    ಮೈಸೂರು: ಬ್ರಾಹ್ಮಣರ ವೇಷ ಧರಿಸಿ ಮಠಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸ್ಥಳೀಯರು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿದ ಘಟನೆ ಮೈಸೂರಿನ ರಾಮಾನುಜ ರಸ್ತೆಯಲ್ಲಿ ನಡೆದಿದೆ.

    ದೇವಾಲಯಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಮಠದ ಅರ್ಚಕರ ಮನೆಯಲ್ಲಿ ಉಳಿದುಕೊಂಡು ಕಳ್ಳತನ ಮಾಡುತ್ತಿದ್ದನು. ಪಂಚೆ, ಶಲ್ಯ, ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ ಇವನು ಮನೆಯವರ ನಂಬಿಕೆ ಗಳಿಸಿ ಅದೇ ಮನೆಯಲ್ಲೆ ಕಳ್ಳತನ ಮಾಡುತ್ತಿದ್ದ. ಇವತ್ತು ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

    ಪ್ರವೀಣ್ ಎಂದು ಹೇಳಿಕೊಂಡಿರುವ ಈ ಕಳ್ಳ ತಾನು ಭದ್ರಾವತಿ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ರಾಮಾನುಜ ರಸ್ತೆಯ ಮನೆಯಲ್ಲಿ ಕಳ್ಳತನ ಮಾಡಿ ಗೂಸ ತಿಂದಿದ್ದಾನೆ. ರಾಘವೇಂದ್ರ ಸ್ವಾಮಿ ಮಠದ ಅರ್ಚಕ ವ್ಯಾಸಾತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಇದೇ ರೀತಿಯಲ್ಲಿ ಇವರ ಮನೆಯಲ್ಲಿ ಉಳಿದುಕೊಂಡು 50 ಸಾವಿರ ಕದ್ದಿದ್ದನು.

    ಕೆ.ಆರ್.ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದಾರೆ.

  • ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯಶ್ರೀ ದಿಟ್ಟ ನಿರ್ಧಾರ – ಶ್ರೀಗಳು ಮಠಕ್ಕೆ ಶಿಫ್ಟ್

    ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯಶ್ರೀ ದಿಟ್ಟ ನಿರ್ಧಾರ – ಶ್ರೀಗಳು ಮಠಕ್ಕೆ ಶಿಫ್ಟ್

    ಉಡುಪಿ: ವಿಶ್ವಸಂತ ಪೇಜಾವರ ಶ್ರೀಗಳ ದೇಹಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಚಿಕಿತ್ಸೆಗೆ ಶ್ರೀಗಳ ದೇಹ ಸ್ಪಂದಿಸುತ್ತಿಲ್ಲ. ಹೀಗಾಗಿ ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯ ಶ್ರೀಗಳು ದಿಟ್ಟ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಶ್ರೀಗಳ ಕೊನೆಯಾಸೆಯಂತೆ ಮಠಕ್ಕೆ ಶಿಫ್ಟ್ ಮಾಡಲಾಗಿದೆ.

    ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ನಸುಕಿನ ಜಾವವೇ ವೆಂಟಿಲೇಟರ್ ಸಹಿತ ಪೇಜಾವರ ಶ್ರೀಗಳನ್ನು ಅಂಬುಲೆನ್ಸ್ ಮೂಲಕ ಉಡುಪಿ ಮಠಕ್ಕೆ ಕರೆದುಕೊಂಡು ಹೋಗಲಾಗಿದೆ. ಶ್ರೀಗಳ ಮಠದ ಕೊಠಡಿಯಲ್ಲಿ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಾಗಿ ಕೃಷ್ಣನೂರು ಉಡುಪಿಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ.

    ಇತ್ತ ಪೇಜಾವರ ಶ್ರೀಗಳು ಅಧೋಕ್ಷಜ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.

  • ಸಚಿವ ಶ್ರೀರಾಮುಲು ಮಂತ್ರಾಲಯಕ್ಕೆ ಭೇಟಿ

    ಸಚಿವ ಶ್ರೀರಾಮುಲು ಮಂತ್ರಾಲಯಕ್ಕೆ ಭೇಟಿ

    ರಾಯಚೂರು: ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

    ಉಪ ಮಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿ ಇರುವ ಶ್ರೀರಾಮುಲು ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಸೂರ್ಯಗ್ರಹಣ ಹಿನ್ನೆಲೆಯೂ ರಾಯರ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

    ಮಂತ್ರಾಲಯ ಮಠದಲ್ಲಿ ಸಚಿವ ಶ್ರೀರಾಮುಲು ಅವರನ್ನು ವಾದ್ಯಗೋಷ್ಠಿ ಮೂಲಕ ಸ್ವಾಗತಿಸಲಾಯಿತು. ಬಳಿಕ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶಾಲು ಹೊದಿಸಿ ಆಶೀರ್ವದಿಸಿದರು. ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದರು.

    ಈ ವೇಳೆ ರಾಯಚೂರು ಜಿಲ್ಲಾ ಬಿಜೆಪಿ ಮುಖಂಡರು ಶ್ರೀರಾಮುಲು ಜೊತೆಗಿದ್ದರು. ಮಂತ್ರಾಲಯ ಮಠದ ಬಳಿಕ ಎಲೆಬಿಚ್ಚಾಲಿಯ ರಾಯರ ಏಕಶಿಲಾ ಸ್ವಪ್ನ ಬೃಂದಾವನಕ್ಕೆ ಭೇಟಿ ನೀಡಿ ದರ್ಶನ ಪಡೆದು ಯಾದಗಿರಿ ಜಿಲ್ಲಾ ಪ್ರವಾಸಕ್ಕೆ ತೆರಳಲಿದ್ದಾರೆ.

  • ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ಹಾವೇರಿ: ಕಳೆದ ನಾಲ್ಕು ತಿಂಗಳಿನಿಂದ ಮಹಿಳೆಯೊಬ್ಬಳು ವಾಮಾಚಾರಕ್ಕೆ ತತ್ತರಿಸಿ ಹೋಗಿದ್ದಾರೆ. ಮಹಿಳೆ ಬಾಯಿಂದ ಕೂದಲು, ಮಣ್ಣಿನ ಗೊಂಬೆಗಳು ಹಾಗೂ ಅನ್ನದ ಬುತ್ತಿ ಬೀಳುತ್ತಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುನಂದಾ ಗೋಂದ್ಕರ (45) ತೊಂದರೆ ಅನುಭವಿಸುತ್ತಿರುವ ಮಹಿಳೆ. ಸುನಂದಾ ಬಾಯಿಂದ ಪ್ರತಿನಿತ್ಯ ವಸ್ತುಗಳು ಬರುತ್ತಿವೆ. ಸುನಂದಾ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದ ನಿವಾಸಿವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿದ್ದಾಗ ಬಾಯಿಯಿಂದ ನಿಂಬೆಹಣ್ಣು, ಕಬ್ಬಿಣದ ಮೊಳೆ, ಕೂದಲು, ಮಣ್ಣಿನ ಗೊಂಬೆಗಳು ಪ್ರತಿನಿತ್ಯ ಬೀಳುತ್ತಿದ್ದವು. ಆಗ ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ತೋರಿಸಿದ್ದಾರೆ.

    ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ನಾರ್ಮಲ್ ಎಂದು ಬಂದಿತ್ತು. ಏನೋ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಮತ್ತೆ ಮನೆಗೆ ಹೋದ ಮೇಲೆ ಬಾಯಿಯಿಂದ ವಸ್ತುಗಳು ಬರುತ್ತೆವೆ. ಇದರಿಂದ ಮಹಿಳೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೊನೆಗೆ ತೊಂದರೆ ನಿವಾರಣೆಗಾಗಿ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಿವಾಲಿಬಸವೇಶ್ವರ ಮಠದ ಮೂಕಪ್ಪ ಸ್ವಾಮೀಜಿಗಳ ಮೊರೆ ಬಂದಿದ್ದಾರೆ.

    ಕಳೆದ ಏಳು ದಿನಗಳಿಂದ ಮಠದಲ್ಲಿ ಆಶ್ರಯ ಪಡೆದ ಮೇಲೆ ಮಹಿಳೆಗೆ ತೊಂದರೆ ಕಡಿಮೆಯಾಗುತ್ತಿದೆ. ಸದ್ಯ ಪ್ರತಿದಿನ ಮಠದಲ್ಲಿ ಒಂದು ಅಥವಾ ಎರಡು ಬಾರಿ ಬಾಯಿಯಿಂದ ಕೂದಲು ಬರುತ್ತಿವೆ. ಮಹಿಳೆ ಬಾಯಿಯಿಂದ ಬರುತ್ತಿರುವ ವಸ್ತುಗಳನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಯಾರೋ ವಾಮಾಚಾರ ಅಥವಾ ಬಾನಾಮತಿ ಮಾಡಿಸಿದ್ದಾರೆ. ಪತಿಯ ಮನೆಯವರು ವರದಕ್ಷಿಣೆಗಾಗಿ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಮಠದಲ್ಲಿ ಪ್ರತ್ಯಕ್ಷ

    ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಮಠದಲ್ಲಿ ಪ್ರತ್ಯಕ್ಷ

    ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಕೊಪ್ಪಳ ಜಿಲ್ಲೆಯ ಅಳವಂಡಿಯ ಉಜ್ಜಯನಿಪೀಠದ ಸಿದ್ದೆಶ್ವರ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ.

    ಸಿದ್ದೇಶ್ವರ ಸ್ವಾಮೀಜಿಯವರು ತಾನು ಪ್ರೀತಿಸಿದ ಹುಡುಗಿಗಾಗಿ ಪೀಠ ತ್ಯಾಗ ಮಾಡಿದ್ದರು. ಅಲ್ಲದೆ ಜನವರಿಯಿಂದ ಕಾಣೆಯಾಗಿದ್ದು, ಯಾರಿಗೂ ಅವರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಈಗ ಸಿದ್ದೇಶ್ವರ ಸ್ವಾಮೀಜಿ ಮಠದಲ್ಲಿ ಪ್ರತ್ಯಕ್ಷವಾಗಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಮಠದ ಮಂಡಳಿ ಕಳೆದ ವಾರವಷ್ಟೇ ಸಿದ್ದವೀರ ಸ್ವಾಮೀಜಿ ಅವರನ್ನು ಗುಪ್ತವಾಗಿ ನೇಮಿಸಿದ್ದರು. ಈ ಸಂದರ್ಭದಲ್ಲೇ ಹಳೆ ಸ್ವಾಮೀಜಿ ಸಿದ್ದೇಶ್ವರ ಮಠದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.

    ಈ ಬಗ್ಗೆ ಸಿದ್ದೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಾನು ಪೀಠದಲ್ಲಿದ್ದಾಗ ನನಗೆ ಹೆಚ್ಚು ತೋಳಲಾಟ ಹಾಗೂ ಸಮಸ್ಯೆಗಳು ಆಗುತ್ತಿತ್ತು. ಮಠದಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆ ವಿರೋಧಿಸಿದ್ದಕ್ಕೆ ನನ್ನ ಕುಟುಂಬಸ್ಥರೇ ನನಗೆ ಕಿರುಕುಳ ನೀಡುತ್ತಿದ್ದರು. ಈ ಮಠದಲ್ಲಿ ನಾನು ನೋಡೋದಕ್ಕೆ ಸ್ವಾಮೀಜಿ ಅಷ್ಟೇ. ಆದರೆ ನನಗೆ ಯಾವುದೇ ರೀತಿಯ ಅಧಿಕಾರ ಹಾಗೂ ಸ್ವಾತಂತ್ರ್ಯ ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್

    ಅಲ್ಲದೆ ನನ್ನ ದೊಡ್ಡಪ್ಪ ಗುರುಮೂರ್ತಿಸ್ವಾಮಿ ಆಸ್ತಿ ಸಲುವಾಗಿ ನನಗೆ ವಿಪರೀತ ಕಿರುಕುಳ ನೀಡುತ್ತಿದ್ದರು. ದೊಡ್ಡಪ್ಪ ಸಸಿ ಹಚ್ಚುವ ಜಾಗಕ್ಕೂ ತಗಾದೆ ತೆಗೆದು ಗೆರೆ ಹಾಕಿದ್ದರು. ಬೆಟ್ಟದೂರಲ್ಲಿ 11 ಎಕರೆ ಜಾಗ ಭಕ್ತರು ಕೊಟ್ಟದ್ದು, ದಾನದ ಜಾಗದ ಮಾಲೀಕತ್ವಕ್ಕೂ ವಿವಾದ ನಡೆದಿದೆ. ದೊಡ್ಡಪ್ಪ ಹಾಗೂ ಅವರ ಕುಟುಂಬ ಇಡೀ ಮಠವನ್ನೇ ಖಾಸಗಿಯಾಗಿ ಬಳಸುತ್ತಿದ್ದಾರೆ. ಕಮಿಟಿಯಲ್ಲಿ ಕುಟುಂಬದ ಎಂಟು ಜನ ಇದ್ದಾರೆ. ಗ್ರಾಮಸ್ಥರು ಒಬ್ಬರೂ ಇಲ್ಲ. ಇದನ್ನು ವಿರೋಧಿಸಿದೆ ಎಂದು ಮಾಜಿ ಸ್ವಾಮೀಜಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?

    ಇಂತಹ ಮಾನಸಿಕ ಕಿರುಕುಳ ಹಾಗೂ ಕುಗ್ಗುಸುವಿಕೆ ಕೆಲಸದಿಂದ ನಾನು ಬೇಸತ್ತು ಹೋಗಿದ್ದೆ. ದೊಡ್ಡಪ್ಪ ಒತ್ತಾಯಪೂರ್ವಕವಾಗಿ ನನ್ನಿಂದ ಪೀಠತ್ಯಾಗಕ್ಕೆ ಸಹಿ ಮಾಡಿಸಿಕೊಂಡರು. ಮುಂಡರಗಿ ಕಾಲೇಜಿನಲ್ಲಿ ಪಾಠ ಮಾಡಲು ಹೋದಾಗ ಹುಡುಗಿ ನನ್ನನ್ನ ಪ್ರೀತಿಸಿದ್ದು ನಿಜ. ಇದನ್ನೇ ನೆಪ ಮಾಡಿಕೊಂಡು ದೊಡ್ಡಪ್ಪ ಮತ್ತು ಕುಟುಂಬದವರು ಸಾಕಷ್ಟು ಕಿರುಕುಳ ಕೊಟ್ಟು ಪೀಠತ್ಯಾಗಕ್ಕೆ ಸಹಿ ಮಾಡಿಸಿಕೊಂಡರು. ಪೀಠತ್ಯಾಗಕ್ಕೂ ಮೊದಲು ಜನರಿಗೆ ತಿಳಿಸೋಣ ಎಂದರೂ ಭೀತಿ ಹುಟ್ಟಿಸಿ, ಓಡಿಸಿದ್ದರು ಎಂದು ಸಿದ್ದೇಶ್ವರ ಸ್ವಾಮೀಜಿ ತಮ್ಮ ಅಳಲುತೋಡಿಕೊಂಡಿದ್ದಾರೆ.

  • ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ತುಮಕೂರು: ಸಿದ್ದಗಂಗಾ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಕ್ತರು ಹಾಕಿಕೊಂಡ ಅನ್ನವನ್ನು ವ್ಯರ್ಥ ಮಾಡದೇ ತಟ್ಟೆಯನ್ನು ಖಾಲಿ ಮಾಡಿ ಸಂತಸಪಟ್ಟಿದ್ದಾರೆ.

    ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ವೇಳೆ ಅನ್ನ ಎಸೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರಿಗೆ ಮಠದ ವಿದ್ಯಾರ್ಥಿ ಅನ್ನದ ಮಹತ್ವವನ್ನು ತಿಳಿಸಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದ ಪ್ರಭಾವ ಏನೋ ಎಂಬಂತೆ ಭಕ್ತರು ಇಂದು ಎಷ್ಟು ಅನ್ನಬೇಕೋ ಅಷ್ಟೇ ಪ್ರಮಾಣದ ಅನ್ನವನ್ನು ಹಾಕಿಕೊಂಡು ತಿಂದಿದ್ದಾರೆ. ಇದನ್ನು ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಪುಣ್ಯಾರಾಧನೆಗೆ ಆಗಮಿಸಿದ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಆವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇರಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ. ಇದನ್ನು ಓದಿ: ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವೇಳೆ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಶಿವು ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ್ದನು. ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದನು. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=Ku2W_RqZM9M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ 11ನೇ ಪುಣ್ಯಾರಾಧನೆ – ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್

    ಸಿದ್ದಗಂಗಾ ಶ್ರೀಗಳ 11ನೇ ಪುಣ್ಯಾರಾಧನೆ – ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್

    ತುಮಕೂರು: ಇಂದು ಸಿದ್ದಗಂಗಾಶ್ರೀಗಳ 11ನೇ ಪುಣ್ಯಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

    ಬುಧವಾರ ಮಠಕ್ಕೆ ಬಂದಿರುವ ದಕ್ಷಿಣ ವಲಯ ಐಜಿಪಿ ದಯಾನಂದ್, ಭದ್ರತೆಯ ಉಸ್ತುವಾರಿ ವಹಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಭಕ್ತರು ಮಠಕ್ಕೆ ಧಾವಿಸಲಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗ ಬದಲಾವಣೆಯನ್ನು ಪೊಲೀಸ್ ಮಾಡಿದೆ.

    ಎನ್‍ಹೆಚ್ 4ನಲ್ಲಿ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಬರುವ ಗೂಡ್ಸ್ ವಾಹನಗಳಿಗೆ ಶಿರಾ, ಮಧುಗಿರಿ, ಕೊರಟಗೆರೆ, ದಾಬಸ್ ಪೇಟೆ ಮೂಲಕ ಬೆಂಗಳೂರಿಗೆ ತೆರಳಲು ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ದಾವಣಗೆರೆಯತ್ತ ಹೋಗುವ ಗೂಡ್ಸ್ ವಾಹನಗಳಿಗೆ ದಾಬಸ್‍ಪೇಟೆ, ಕೊರಟಗೆರೆ, ಮಧುಗಿರಿ ಮೂಲಕ ಶಿರಾಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ ಬಸ್, ಕಾರುಗಳಿಗೆ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ.

    ಇಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮವಿದ್ದು, ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ. ಭಕ್ತರು ರಾತ್ರಿಯೇ ಬಂದು ಶ್ರೀಮಠದಲ್ಲಿ ತಂಗಿದ್ದಾರೆ. ರಾತ್ರಿಯಿಡಿ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಳೆ ಶ್ರೀಗಳ 11ನೇ ದಿನದ ಪುಣ್ಯಾರಾಧನೆ- ಲಕ್ಷಾಂತರ ಭಕ್ತರಿಗೆ ಮಠದಲ್ಲಿ ಸಕಲ ಸಿದ್ಧತೆ

    ನಾಳೆ ಶ್ರೀಗಳ 11ನೇ ದಿನದ ಪುಣ್ಯಾರಾಧನೆ- ಲಕ್ಷಾಂತರ ಭಕ್ತರಿಗೆ ಮಠದಲ್ಲಿ ಸಕಲ ಸಿದ್ಧತೆ

    ತುಮಕೂರು: ಸಿದ್ದಗಂಗಾ ಶ್ರೀಗಳು ದೇಹತ್ಯಾಗ ಮಾಡಿ ಇಂದಿಗೆ 9 ದಿನಗಳು ಆಗಿದೆ. 11ನೇ ದಿನವಾದ ಗುರುವಾರ ಶ್ರೀಗಳ ಪುಣ್ಯಾರಾಧನೆ ನಡೆಯಲಿದೆ. ಈ ಹಿನ್ನೆಲೆ ಮಠದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಶ್ರೀಗಳ ಪುಣ್ಯಸ್ಮರಣೆಗೆ ರಾಜ್ಯದೆಲ್ಲೆಡೆಯಿಂದ ಭಕ್ತರು ಅನ್ನದಾಸೋಹಕ್ಕೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಮಠಕ್ಕೆ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಿದ್ದಾರೆ.

    ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆಗೆ ಶ್ರೀಮಠ ಸಜ್ಜಾಗುತ್ತಿದೆ. ಗುರುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಭಕ್ಷ್ಯ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ಮಠದ 4 ಅಡುಗೆ ಕೊಪ್ಪಲಿನಲ್ಲಿ 100ಕ್ಕೂ ಹೆಚ್ಚು ಅಡುಗೆ ಭಟ್ಟರು ವಿವಿಧ ಸಿಹಿ ತಿನಿಸುಗಳ ತಯಾರಿ ನಡೆಯುತ್ತಿದೆ. ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇದೆ. ಮಠದ ಆವರಣದಲ್ಲಿ ಸುಮಾರು ಹತ್ತು ಕಡೆ ಅನ್ನ ದಾಸೋಹಕ್ಕೂ ಸಿದ್ಧತೆ ನಡೆದಿದೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

    ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ದಿನಸಿ ಸಾಮಾಗ್ರಿಗಳು ಹರಿದು ಬರುತ್ತಿದೆ. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಸ್ವಯಂ ಪ್ರೇರಿತರಾಗಿ ಸಾವಿರಾರು ಕ್ವಿಂಟಾಲ್ ಅಕ್ಕಿ, ಬೇಳೆ, ಬೆಲ್ಲ, ತರಕಾರಿ ತಂದು ಕೊಡುತ್ತಿದ್ದಾರೆ. ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಠದ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕರು, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv