Tag: Muslim Area

  • ದೆಹಲಿ ದಂಗೆ: ಮುಸ್ಲಿಂ ನೆರೆಹೊರೆಯವರ ಸಮ್ಮುಖದಲ್ಲಿ ಹಿಂದೂ ಜೋಡಿಯ ಮದ್ವೆ

    ದೆಹಲಿ ದಂಗೆ: ಮುಸ್ಲಿಂ ನೆರೆಹೊರೆಯವರ ಸಮ್ಮುಖದಲ್ಲಿ ಹಿಂದೂ ಜೋಡಿಯ ಮದ್ವೆ

    ನವದೆಹಲಿ: ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಚಂದ್‍ಬಾಗ್ ನಗರದಲ್ಲಿ ಅತಿ ಹೆಚ್ಚಾಗಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ದಂಗೆಯ ನಡುವೆಯೂ ಮುಸ್ಲಿಂ ಪ್ರದೇಶದಲ್ಲಿ ಹಿಂದೂ ಜೋಡಿಯ ಮದುವೆಯಾಗಿದೆ.

    ಸಾವಿತ್ರಿ ಪ್ರಸಾದ್ (23) ಮದುವೆಯಾದ ವಧು. ದೆಹಲಿಯಲ್ಲಿ ನಡೆಯುತ್ತಿರುವ ದಂಗೆಯಿಂದ ಮುಸ್ಲಿಂ ಪ್ರದೇಶದಲ್ಲಿ ವಾಸಿಸುತ್ತಿರುವ ವಧು ಸಾವಿತ್ರಿ ಮದುವೆಯನ್ನು ಮುಂದೂಡುವಂತೆ ಆಕೆಯ ಕುಟುಂಬಸ್ಥರಿಗೆ ಒತ್ತಡ ಹಾಕಲಾಗಿತ್ತು. ಇತ್ತ ವಧು ಸಾವಿತ್ರಿ ಮೆಹಂದಿ ಹಾಕಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಳು. ಆದರೆ ದೆಹಲಿಯಲ್ಲಿ ನಡೆಯುತ್ತಿದ್ದ ಹಿಂಸಾಚಾರದಿಂದ ಮಂಗಳವಾರ ನಡೆಯಬೇಕಿದ್ದ ಮದುವೆ ನಿಂತಿತ್ತು. ಇದರಿಂದ ನೊಂದ ವಧು ಕಣ್ಣೀರು ಹಾಕುತ್ತಿದ್ದಳು.

    ಆಗ ನೆರೆಹೊರೆಯ ಮುಸ್ಲಿಮರು ಬಂದು ಸಮಾಧಾನ ಮಾಡಿದ್ದರು. ಕೊನೆಗೆ ಸಾವಿತ್ರಿ ತಂದೆ ಮರುದಿನ ಅಂದರೆ ಬುಧವಾರ ವಿವಾಹವನ್ನು ಆಯೋಜಿಸಿದ್ದರು. ಆದರೆ ವರ ಮತ್ತು ಅವರ ಕುಟುಂಬದವರು ಮನೆಗೆ ಬರುವುದು ತುಂಬಾ ಅಪಾಯಕಾರಿ. ಅಲ್ಲದೇ ಬುಧವಾರ ಹಿಂಸಾಚಾರ ಹೆಚ್ಚಾಗಿದ್ದು, ಇದರಿಂದ ಮಾರುಕಟ್ಟೆಗಳು ಮುಚ್ಚಿಹೋಗಿದ್ದವು. ಜೊತೆಗೆ ನಿವಾಸಿಗಳು ಮನೆಯೊಳಗೆ ಇದ್ದರು. ಇದರಿಂದ ಮತ್ತಷ್ಟು ಘರ್ಷಣೆಯಾಗುವ ಭಯದಿಂದ ಸಾವಿತ್ರಿ ಅವರ ತಂದೆ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದರು.

    ಆಗ ನೆರೆಹೊರೆಯ ಮುಸ್ಲಿಮರು ಬಂದು ಮದುವೆಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಕೊನೆಗೆ ಮುಸ್ಲಿಮರು ತಮ್ಮ ಏರಿಯಾದಲ್ಲಿಯೇ ಸಾವಿತ್ರಿಯ ಮದುವೆಯನ್ನು ಆಯೋಜನೆ ಮಾಡಿದ್ದರು. ನಂತರ ಮುಸ್ಲಿಂ ನೆರೆಹೊರೆಯವರ ಕುಟುಂಬದ ಸಮ್ಮುಖದಲ್ಲಿ ಸಾವಿತ್ರಿಯ ವಿವಾಹ ನೆರವೇರಿದೆ.

    ಚಂದ್‍ಬಾಗ್ ಜಿಲ್ಲೆಯ ಸಾವಿತ್ರಿ ಅವರ ಮನೆಯಲ್ಲಿ ಮದುವೆ ಆಚರಣೆಗಳು ಶುರುವಾಗಿದ್ದವು. ಆದರೆ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಹಿಂಸಾಚಾರದಿಂದ ಕಾರು ಮತ್ತು ಅಂಗಡಿಗಳನ್ನು ಧ್ವಂಸವಾಗಿದ್ದವು. ಅಲ್ಲದೇ ಮುಸ್ಲಿಂ ದೇಗುಲಕ್ಕೂ ಬೆಂಕಿ ಹಚ್ಚಲಾಗಿತ್ತು.

    ನಾವು ಟೆರೇಸ್‍ಗೆ ಹೋಗಿ ನೋಡಿದ್ದೆವು. ಅಲ್ಲಿಂದ ರಸ್ತೆಯಲ್ಲಿ ತುಂಬಾ ಹೊಗೆ ಮಾತ್ರ ಕಾಣಿಸುತ್ತಿತ್ತು. ಅಷ್ಟರ ಮಟ್ಟಿಗೆ ಘರ್ಷಣೆ ನಡೆಯುತ್ತಿತ್ತು. ನಾವು ಮುಸ್ಲಿಮರೊಂದಿಗೆ ಹಲವಾರು ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಹಿಂಸಾಚಾರದ ಹಿಂದೆ ಯಾರಿದ್ದಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಅವರು ನಮ್ಮ ನೆರೆಹೊರೆಯವರಲ್ಲ. ಇಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವುದೇ ದ್ವೇಷವಿಲ್ಲ ಎಂದು ಸಾವಿತ್ರಿ ತಂದೆ ಭೋಡೆ ಪ್ರಸಾದ್ ಹೇಳಿದ್ದಾರೆ.

    ಹಿಂದೂ ಅಥವಾ ಮುಸ್ಲಿಂ ನಾವೆಲ್ಲರೂ ಮನುಷ್ಯರು. ನಾವೆಲ್ಲರೂ ಹಿಂಸಾಚಾರದಿಂದ ಭಯಭೀತರಾಗಿದ್ದೇವೆ. ಈ ಹೋರಾಟವು ಧರ್ಮದ ಬಗ್ಗೆ ಅಲ್ಲ, ಆದರೆ ಅದನ್ನು ಮಾಡಲಾಗಿದೆ. ಆದರೆ ಇದರಿಂದ ಸಾವಿತ್ರಿಯ ಮದುವೆಗೆ ತೊಂದೆಯಾಯಿತು. ಕೊನೆಗೆ ಮುಸ್ಲಿಮರು ಮುಂದೆ ಬಂದು ಮದುವೆ ಮಾಡಿಸಿದ್ದಾರೆ. ನಾವು ಮದುವೆ ಸಮಾರಂಭಕ್ಕೆ ವಧುವಿಗೆ ಬೇಕಾದ ಉಡುಪನ್ನು ನೀಡಿದ್ದೇವೆ ಎಂದು ಸಾವಿತ್ರಿ ಸೋದರಸಂಬಂಧಿ ಪೂಜಾ ಹೇಳಿದ್ದಾರೆ.

    ಮುಸ್ಲಿಂ ನೆರೆಹೊರೆಯವರು ವರ ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಕೊನೆಗೆ ಅವರ ಸಮ್ಮುಖದಲ್ಲೇ ವಿವಾಹದ ಕಾರ್ಯಕ್ರಮಗಳು ನಡೆದಿದೆ. ಮುಸ್ಲಿಂರ ಪ್ರದೇಶದಲ್ಲಿ ಮದುವೆ ನಡೆಯುತ್ತಿದ್ದಾಗ ಹಲವಾರು ಪುರುಷರೊಂದಿಗೆ ಆ ಏರಿಯದಲ್ಲಿ ಮದುವೆಗೆ ಯಾವುದೇ ತೊಂದರೆ ಬಾರದಂತೆ ಕಾವಲು ಕಾಯುತ್ತಿದ್ದರು. ಮದುವೆ ನಂತರ ವಧು ಸಾವಿತ್ರಿ, ವರ ಮತ್ತು ಅವರ ಕುಟುಂಬದವರನ್ನು ನೆರೆಹೊರೆಯವರು ಕಾಲುದಾರಿಗಳಿಂದ ಅವರ ಮನೆಗೆ ಕಳುಹಿಸಿದ್ದಾರೆ.

    “ನನ್ನ ಮುಸ್ಲಿಂ ಸಹೋದರರು ಇಂದು ನನ್ನನ್ನು ರಕ್ಷಿಸಿದ್ದಾರೆ” ಎಂದು ವಧು ಸಾವಿತ್ರಿ ಸಂತಸದಿಂದ ಮಾತನಾಡಿದ್ದಾಳೆ. ಇಂದು, ನಮ್ಮ ಸಂಬಂಧಿಕರು ಯಾರೂ ನನ್ನ ಮಗಳ ಮದುವೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದರೆ ನಮ್ಮ ಮುಸ್ಲಿಂ ನೆರೆಹೊರೆಯವರು ಇಲ್ಲಿದ್ದಾರೆ. ಅವರು ನಮ್ಮ ಕುಟುಂಬವೇ ಎಂದು ಭೋಡೆ ಪ್ರಸಾದ್ ಸಂತಸ ವ್ಯಕ್ತಪಡಿಸಿದರು.