Tag: muslim activists

  • ಮಹಿಳೆಯರ ಫೋಟೋ ಹರಾಜು ಹಾಕುತ್ತಿದ್ದ ಆನ್‌ಲೈನ್ ಆ್ಯಪ್ ನಿಷೇಧ

    ಮಹಿಳೆಯರ ಫೋಟೋ ಹರಾಜು ಹಾಕುತ್ತಿದ್ದ ಆನ್‌ಲೈನ್ ಆ್ಯಪ್ ನಿಷೇಧ

    ನವದೆಹಲಿ: ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲವಾಗಿ ಚಿತ್ರಿಸಿ ಅವರನ್ನು ಹರಾಜು ಹಾಕುತ್ತಿದ್ದ ಬುಲ್ಲಿ ಬೈ ಆ್ಯಪ್‌ನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

    ಸಮುದಾಯದ ಪ್ರಮುಖರು ಶನಿವಾರ ಸ್ಕ್ರೀನ್ ಶಾಟ್ ಸಹಿತ ಈ ಆಘಾತಕಾರಿ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದ್ದರು. ಶಿವಸೇನೆ ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಶಶಿ ತರೂರ್ ಸೇರಿದಂತೆ ಪ್ರಮುಖರು ಈ ಬಗ್ಗೆ ಕಟುವಾಗಿ ಟೀಕಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಕೂಡಲೇ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಆ್ಯಪ್‌ನ್ನು ನಿಷೇಧಿಸುವ ಕುರಿತು ಕ್ರಮ ಕೈಗೊಂಡಿದ್ದಾರೆ.

    ಸಾವಿರಾರು ಮಹಿಳೆಯರ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಬುಲ್ಲಿಬೈ ಎಂಬ ಆ್ಯಪ್‌ನ್ನು ನಿಷೇಧಿಸಲಾಗಿದೆ. ಬುಲ್ಲಿ ಆ್ಯಪ್ ಪೋರ್ಟಲ್‌ನ್ನು ಗಿಟ್‌ಹಬ್ ತನ್ನ ವೇದಿಕೆಯಿಂದ ಬ್ಲಾಕ್ ಮಾಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ

    ಈ ಬಗ್ಗೆ ಮುಂಬೈ ಹಾಗೂ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ದೆಹಲಿ ಪೊಲೀಸರು ಆ್ಯಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಕಾಂಗ್ರೆಸ್ಸಿನ ಅತ್ಯಂತ ಹೀನಾಯ ರಾಜಕಾರಣ: ಕಟೀಲ್

    ಗಿಟ್ ಹಬ್ ಆ್ಯಪ್ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಫೋಟೋವನ್ನು ಹರಾಜಿಗೆ ಮಾರಾಟ ನಡೆಯುತ್ತಿತ್ತು. ಕಳೆದ ವರ್ಷ ಸುಲ್ಲಿ ಡೀಲ್ಸ್ ಹೆಸರಿನಲ್ಲಿ ಇದೇ ರೀತಿ ಮುಸ್ಲಿಂ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ ಅವರನ್ನು ಹರಾಜಿಗೆ ಇಡುವ ರೀತಿ ಬಿಂಬಿಸುವ ವೆಬ್ ಪೋರ್ಟಲ್ ಕಾಣಿಸಿಕೊಂಡಿತ್ತು. ಮಹಿಳೆಯರ ಸಾಮಾಜಿಕ ಜಾಲತಾಣದಲ್ಲಿರುವ ಫೋಟೋವನ್ನು ತೆಗೆದುಕೊಂಡು ಈ ಕೃತ್ಯ ಮಾಡಲಾಗಿದೆ.

  • ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ – ರಾಯಚೂರಿನಲ್ಲಿ ಪ್ರತಿಭಟನೆ

    ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ – ರಾಯಚೂರಿನಲ್ಲಿ ಪ್ರತಿಭಟನೆ

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

    ನಗರದ ಗಡಿಯಾರ ವೃತ್ತದಲ್ಲಿ ಜಮಾಯಿಸಿದ ನೂರಾರು ಮುಸ್ಲಿಂ ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪೌರತ್ವ ಕಾಯ್ದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು. ಪೌರತ್ವ ಕಾಯ್ದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದರು.

    ದೇಶದ ಜಾತ್ಯಾತೀತ ತತ್ವವನ್ನು ನಾಶ ಮಾಡುವ ಕಾಯ್ದೆಯನ್ನು ಯಾರು ಬೆಂಬಲಿಸುವುದಿಲ್ಲ. ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಕಾಯ್ದೆಗೆ ನಮ್ಮ ವಿರೋಧ ಇದೆ ಎಂದು ಘೋಷಣೆ ಕೂಗಿದರು. ಕೂಡಲೇ ಕಾಯ್ದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಜನ ಯುವಕರು ಪಾಲ್ಗೊಂಡಿದ್ದರು.

  • ಸ್ವ-ಕ್ಷೇತ್ರ ಉಳ್ಳಾಲದಲ್ಲೇ ಮುಸ್ಲಿಂ ಕಾರ್ಯಕರ್ತರಿಂದ ಸಚಿವ ಖಾದರ್ ಗೆ ಘೇರಾವ್!

    ಸ್ವ-ಕ್ಷೇತ್ರ ಉಳ್ಳಾಲದಲ್ಲೇ ಮುಸ್ಲಿಂ ಕಾರ್ಯಕರ್ತರಿಂದ ಸಚಿವ ಖಾದರ್ ಗೆ ಘೇರಾವ್!

    ಮಂಗಳೂರು: ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯುಟಿ ಖಾದರ್ ಅವರಿಗೆ ಮುಸ್ಲಿಂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

    ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಶನಿವಾರ ಸಂಜೆ ಎಸ್‍ಕೆಎಸ್‍ಎಸ್‍ಎಫ್ ಸಮಸ್ತ ಸಮ್ಮೇಳನ ನಡೆದಿತ್ತು. ಸಾವಿರಾರು ಮುಸ್ಲಿಮ್ ಕಾರ್ಯಕರ್ತರು ಪಾಲ್ಗೊಂಡಿದ್ದ ಸಮ್ಮೇಳನದಲ್ಲಿ ಸಚಿವರು ಕೂಡ ಭಾಗವಹಿಸಿದ್ದರು.

    ಕಾರ್ಯಕ್ರಮ ಮಗಿದು ತೆರಳುತ್ತಿದ್ದಂತೆಯೇ ಕೆಲ ಮುಸ್ಲಿಂ ಕಾರ್ಯಕರ್ತರು ಖಾದರ್ ಅವರನ್ನು ಸುತ್ತುವರಿದು, ಒಬ್ಬರು ಸಚಿವರಾಗಿ ಕಾರ್ಯಕ್ರಮದ ಕುರಿತು ಹಾಕಲಾಗಿದ್ದ ಬ್ಯಾನರ್ ಗಳನ್ನು ತೆಗೆಯಲು ಯಾಕೆ ಅವಕಾಶ ಮಾಡಿಕೊಟ್ಟಿದ್ದೀರಿ ಅಂತ ಪ್ರಶ್ನಿಸಿ, ಘೇರಾವ್ ಹಾಕಿದ್ದಾರೆ.

    ಈ ವೇಳೆ ಸಚಿವರು ಚುನಾವಣಾ ದಿನಾಂಕ ಘೋಷಣೆಯಾದಂದೇ ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾನರ್ ಗಳನ್ನು ಹಾಕಲು ಅವಕಾಶವಿಲ್ಲ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.