Tag: Muskan Khan

  • ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ನವದೆಹಲಿ: ರಾಜ್ಯದಲ್ಲಿ ಹಿಜಬ್ ವಿವಾದ ತಣ್ಣಗಾಗುತ್ತಿದೆ. ಆದರೆ ಇದೀಗ ಈ ಬಗ್ಗೆ ಜಾಗತಿಕ ಭಯೋತ್ಪಾದಕ ಗುಂಪು ಅಲ್ ಖೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಪ್ರತಿಕ್ರಿಯಿಸಿ ಭಾರತೀಯ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾನೆ.

    ಒಂಬತ್ತು ನಿಮಿಷಗಳ ವೀಡಿಯೋ ಇರುವ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ವೀಡಿಯೋದಲ್ಲಿ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮುಸ್ಕಾನ್ ಖಾನ್‍ನ್ನು ಹೊಗಳಿದ್ದಾನೆ. ಮುಸ್ಕಾನ್ ಖಾನ್ ಬುರ್ಖಾ ಧರಿಸುವವರನ್ನು ವಿರೋಧಿಸುವವರ ವಿರುದ್ಧವೇ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಅವರ ಜೈ ಶ್ರೀರಾಮ್ ಘೋಷಣೆಯನ್ನು ವಿರೋಧಿಸಿದ್ದಾಳೆ ಎಂದು ಶ್ಲಾಘಿಸಿದ್ದಾನೆ.

    ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಬರೆಯಲಾದ ಪೋಸ್ಟರ್‌ನ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್‍ನನ್ನು ಹೊಗಳಿ ರಚಿಸಿದ ಕವನವನ್ನು ಓದಿದ್ದಾನೆ. ಈ ಕವಿತೆಯಲ್ಲಿ ಮುಸ್ಕಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವೀಡಿಯೋಗಳನ್ನು ನೋಡುವ ಮೂಲಕ ತಿಳಿದುಕೊಂಡಿದ್ದೇನೆ. ಇವಳಿಂದ ತುಂಬಾ ಪ್ರಭಾವಿತರಾಗಿದ್ದೇನೆ ಎಂಬ ಸಾಲಿದೆ. ಕವಿತೆ ಓದಿದ ನಂತರ ಫ್ರಾನ್ಸ್ ಹಾಗೂ ಈಜಿಪ್ಟ್ ಸೇರಿದಂತೆ ಹಿಜಬ್ ನಿಷೇಧಿಸಿದ ದೇಶಗಳ ಮೇಲೆ ಕಿಡಿಕಾರಿದ್ದಾನೆ.

    ನವೆಂಬರ್ ನಂತರದ ಮೊದಲ ವೀಡಿಯೋ ಇದಾಗಿದ್ದು, ಮೋಸ್ಟ್ ವಾಂಟೆಡ್ ಜಿಹಾದಿ ಭಯೋತ್ಪಾದಕರ ಪಟ್ಟಿಯಲ್ಲಿ ಈತ ಸ್ಥಾನ ಪಡೆದಿದ್ದಾನೆ. ಜವಾರಿಯ 2020ರಲ್ಲಿ ಸಹಜವಾ ಗಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಕೆಲ ದಿನಗಳ ನಂತರ ದಿನಾಂಕವಿಲ್ಲದ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ಕೈವಾಕ್‍ನಿಂದ ಜಿಗಿದ ವ್ಯಕ್ತಿ – ಸೊಂಟಕ್ಕೆ ಗಂಭೀರ ಪೆಟ್ಟು

    ನವೆಂಬರ್ 2021ರ ಒಂದು ವೀಡಿಯೊದಲ್ಲಿ, ವಿಶ್ವಸಂಸ್ಥೆ ಒಡ್ಡುವ ಬೆದರಿಕೆಗಳ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದ. ಈತ ಎಲ್ಲಿದ್ದಾನೆ ಎಂಬ ವಿಚಾರ ತಿಳಿದು ಬಂದಿಲ್ಲ. ಸದ್ಯ ಈತ ಅಫ್ಘಾನಿಸ್ತಾನಲ್ಲಿ ಇದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್

  • ನಾನು ಭಯ ಯಾಕೆ ಪಡಬೇಕು, ಧರ್ಮ ಪಾಲನೆ ಮಾಡಿದ್ದೇನೆ: ಮಂಡ್ಯ ವಿದ್ಯಾರ್ಥಿನಿ

    ನಾನು ಭಯ ಯಾಕೆ ಪಡಬೇಕು, ಧರ್ಮ ಪಾಲನೆ ಮಾಡಿದ್ದೇನೆ: ಮಂಡ್ಯ ವಿದ್ಯಾರ್ಥಿನಿ

    ಮಂಡ್ಯ: ಎಲ್ಲ ರೀತಿಯ ಧರ್ಮ ಆಚರಿಸಲು ನಮ್ಮ ಭಾರತದಲ್ಲಿ ಸ್ವಾತಂತ್ರ್ಯವಿದೆ. ನಮ್ಮ ಧರ್ಮವನ್ನ ಆಚರಿಸಲು ಬಿಡಿ ಎಂದು ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಪ್ರತಿಕ್ರಿಯೆ ನೀಡಿದರು.

    ಮಂಡ್ಯದಲ್ಲಿ ಹುಡುಗರ ಮುಂದೆ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ನಾನು ಅಸೈನ್ಮೆಂಟ್ ಕೊಡಲು ಕಾಲೇಜಿಗೆ ಹೋಗಿದ್ದು. ಆಗ ಕೆಲವು ಹುಡುಗರ ಗುಂಪು ನನ್ನನ್ನು ನೋಡಿ ನೀನು ಕಾಲೇಜಿಗೆ ಬರಬೇಡ ಎಂದು ಜಗಳವಾಡಲು ಪ್ರಾರಂಭಿಸಿದರು. ಕಾಲೇಜಿಗೆ ನೀನು ಹೋಗಬೇಕಾದರೆ ಬುರ್ಕಾ ತೆಗೆದುಹೋಗು. ಅಲ್ಲ, ನೀನು ಬುರ್ಕಾದಲ್ಲಿ ಇರಬೇಕು ಎಂದರೆ ಮನೆಗೆ ಹೋಗು ಎಂದರು. ಆದರೂ ನಾನು ಕಾಲೇಜ್ ಒಳಗೆ ಹೋದೆ. ಆದರೆ ಅವರು ನನ್ನ ಕಿವಿ ಹತ್ತಿರ ಬಂದು ‘ಜೈ ಶ್ರೀರಾಮ್’ ಅಂತ ಘೋಷಣೆ ಕೂಗುತ್ತಿದ್ರು. ಅದಕ್ಕೆ ನಾನು ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಈ ವೇಳೆ ನನ್ನ ಕಾಲೇಜಿನ ಪ್ರತಿಯೊಬ್ಬರು ನನ್ನನ್ನು ಬೆಂಬಲಿಸಿದ್ದು, ರಕ್ಷಿಸಿದ್ರು ಎಂದು ವಿವರಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ

    ನಾನು ಹೋಗುವುದಕ್ಕೂ ಮುನ್ನ ನನ್ನ ನಾಲ್ಕು ಸ್ನೇಹಿತರು ಆಳುತ್ತ ಮನೆಗೆ ಹೋದರು. ಅವರು ಕೂಗಿದ್ದು ತಪ್ಪಿಲ್ಲ, ನಾನು ಕೂಗಿದ್ದು ತಪ್ಪಿಲ್ಲ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ಕಿವಿ ಹತ್ತಿರ ಬಂದು ಘೋಷಣೆ ಕೂಗಿದ್ರು. ಆ ಕ್ಷಣದಲ್ಲಿ ನನಗೆ ಯಾವ ಭಯವಾಗಿಲ್ಲ. ಭಯ ಏಕೆ ಪಡಬೇಕು ಎಂದು ಪ್ರಶ್ನಿಸಿದರು.

    ಹಿಜಬ್ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅವರು, ಎಲ್ಲ ಧರ್ಮಕ್ಕೂ ಸ್ವಾತಂತ್ರ್ಯವಿದೆ. ನಮ್ಮ ಭಾರತದಲ್ಲಿ ಎಲ್ಲ ರೀತಿಯ ಧರ್ಮಗಳಿವೆ. ಎಲ್ಲರೂ ಅವರವರ ಧರ್ಮವನ್ನು ಪಾಲನೆ ಮಾಡುತ್ತಾರೆ. ನಾವು ನಮ್ಮ ಧರ್ಮವನ್ನು ಪಾಲಿಸುತ್ತೇವೆ. ನಮ್ಮ ಧರ್ಮವನ್ನು ನಾವು ಆಚರಿಸಲು ಅವರೂ ಬಿಡಬೇಕು. ನಾವು ಅವರನ್ನು ಪ್ರಶ್ನೆ ಮಾಡುತ್ತಿಲ್ಲ. ಅದೇ ರೀತಿ ಅವರು ನಮ್ಮನ್ನು ಪ್ರಶ್ನೆ ಮಾಡಬಾದರು ಎಂದು ಮನವಿ ಮಾಡಿದರು.

    ಹೈಕೋರ್ಟ್ ತೀರ್ಪುನ್ನು ಕೊಟ್ಟ ಮೇಲೆ ಮುಂದೆ ಏನು ಮಾಡಬೇಕು ಎಂದು ನೋಡಬೇಕು. ಕೋರ್ಟ್ ತೀರ್ಪುನ್ನು ಕೊಟ್ಟ ಮೇಲೆ ನಾವು ಅದನ್ನು ಪಾಲಿಸುತ್ತೇವೆ. ಆದರೆ ಹಿಜಬ್ ನಮಗೆ ತುಂಬಾ ಮುಖ್ಯ. ಇದನ್ನು ತೆಗೆಯುವುದಕ್ಕೆ ಆಗುವುದಿಲ್ಲ ಎಂದರು. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

    5 ಲಕ್ಷ ರೂ. ಬಹುಮಾನ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿಯಿಲ್ಲ ಎಂದರು.

  • Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

    Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

    ನವದೆಹಲಿ: ಮಂಡ್ಯದಲ್ಲಿ ಹುಡುಗರ ಮುಂದೆ ʼಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ಪಿಇಎಸ್‌ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ಗೆ ಜಮಾತ್‌ ಉಲೆಮಾ-ಎ-ಹಿಂದ್‌ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

    ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾಗ ಮುಸ್ಕಾನ್‌ ‘ಅಲ್ಲಾಹು ಅಕ್ಬರ್’ ಎಂದು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ. ವೈರಲ್‌ ಆದ ಬೆನ್ನಲ್ಲೇ ಜಮಾತ್‌ ಉಲೆಮಾ-ಎ-ಹಿಂದ್‌ ಟ್ವೀಟ್‌ ಮಾಡಿ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.

    ವಿದ್ಯಾರ್ಥಿನಿ ಹೇಳಿದ್ದೇನು?
    ನಾನು ಎಂದಿನಂತೆ ಬುರ್ಕಾ ಧರಿಸಿ ಕಾಲೇಜು ಪ್ರವೇಶಿಸಿದೆ. ಈ ವೇಳೆ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತು. ನಾನು ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಆ ಗುಂಪಿನಲ್ಲಿದ್ದವರಲ್ಲಿ ಕೇವಲ ಶೇ.10ರಷ್ಟು ಮಂದಿ ಮಾತ್ರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಉಳಿದ 90 ಪ್ರತಿಶತ ಯುವಕರು ಹೊರಗಿನಿಂದ ಬಂದವರಾಗಿದ್ದರು.

    ಶಿಕ್ಷಣವೇ ನಮ್ಮ ಆದ್ಯತೆ. ಆದರೆ ಅವರು ಅದನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ತುಂಡು ಬಟ್ಟೆ ವಿಚಾರಕ್ಕೆ ನಮ್ಮ ಶಿಕ್ಷಣ ಹಾಳುಮಾಡಲು ಯತ್ನಿಸುತ್ತಿದ್ದಾರೆ. ನಾವು ಯಾವಾಗಲೂ ಬುರ್ಕಾ ಮತ್ತು ಹಿಜಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದೆವು. ಕಾಲೇಜಿಗೆ ಬಂದಾಗ ಬುರ್ಕಾ ತೆಗೆದು, ಹಿಜಬ್ ಮಾತ್ರ ಹಾಕಿಕೊಂಡು ತರಗತಿಯಲ್ಲಿ ಕೂರುತ್ತಿದ್ದೆವು. ಯಾವಾಗಲೂ ಇದಕ್ಕೆ ವಿರೋಧ ಇರಲಿಲ್ಲ. ಆದರೆ ಒಂದು ವಾರದಿಂದ ಹಿಜಬ್‌ಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇದನ್ನೂ ಓದಿ: ಸಂವಿಧಾನವೇ ನನಗೆ ಭಗವದ್ಗೀತೆ, ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ: ಹಿಜಬ್‌ ವಿವಾದ ಕೋರ್ಟ್‌ನಲ್ಲಿ ಏನಾಯ್ತು?

    ಹಿಜಬ್ ನಮ್ಮ ಭಾಗವೇ ಆಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರೂ ಇದಕ್ಕೆ ಯಾವುದೇ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿಲ್ಲ. ಹೊರಗಿನವರು ಪ್ರತಿರೋಧ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಬುರ್ಕಾವನ್ನು ಹಾಕಿ ಬರಬೇಡಿ ಎಂದು ನಮ್ಮ ಪ್ರಾಂಶುಪಾಲರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಒಂದು ಭಾಗ ಹಿಜಬ್. ನಾವು ಹಿಜಬ್‌ಗಾಗಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ನಾವಿಲ್ಲಿ ಸುರಕ್ಷಿತವಾಗಿದ್ದೇವೆ. ನಾವು ನಿಮ್ಮೊಟ್ಟಿಗಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಘಟನೆ ಕುರಿತು ಮಾತನಾಡಿದ್ದಾರೆ.