Tag: Murugesh nirani

  • 90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ: ಸಚಿವ ನಿರಾಣಿ

    90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ: ಸಚಿವ ನಿರಾಣಿ

    – ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಪ್ರಾರಂಭ

    ಬೆಂಗಳೂರು: ಕಂದಾಯ, ಸಾರಿಗೆ, ಅರಣ್ಯ ಮತ್ತು ಪರಿಸರ ಇಲಾಖೆ ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತಂದು 90 ದಿನಗಳಲ್ಲಿ ಉದ್ಯಮಿಗಳ ಮನೆ ಬಾಗಿಲಿಗೆ ಎನ್‍ಒಸಿ (ನಿರಪೇಕ್ಷಣ ಪತ್ರ) ತಲುಪಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದರು.

    ನಗರದ ಅರಮನೆ ಮೈದಾನದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ಸ್ ಉದ್ಯಮಿಗಳಿಗೆ ಹಮ್ಮಿಕೊಂಡಿದ್ದ ಸುರಕ್ಷತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

    ಕಲ್ಲು ಕ್ವಾರಿ ಮತ್ತು ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಅನುಕೂಲವಾಗುವಂತೆ ನಾಲ್ಕು ಇಲಾಖೆಗಳನ್ನು ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿ ಮಾಡಿ ಅರ್ಜಿ ಸಲ್ಲಿಸಿದ 90 ದಿನದೊಳಗೆ ಉದ್ಯಮಿದಾರರ ಮನೆ ಬಾಗಿಲಿಗೆ ಇಲಾಖೆ ವತಿಯಿಂದಲೇ ಎನ್‍ಒಸಿ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಜಾರಿ ಮಾಡಲಿದ್ದೇವೆ. ಉದ್ದಿಮೆದಾರರು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಕರಾವಳಿ ಭಾಗದಲ್ಲಿ ಪ್ರತ್ಯೇಕವಾಗಿ ಮಂಗಳೂರಿನಲ್ಲಿ ಹಾಗೂ ರಾಜ್ಯದ ನಾಲ್ಕು ಕಂದಾಯ ಭಾಗಗಳಲ್ಲಿ ಗಣಿ ಅದಾಲ್ ನಡೆಸಲಾಗುವುದು. ಇದರಿಂದ ಸ್ಥಳದಲ್ಲೇ ಉದ್ದಿಮೆದಾರರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ ಎಂದರು.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜನಸ್ನೇಹಿ ಹಾಗೂ ಜನಪರವಾಗಿ ಇರಬೇಕೆಂಬ ಗುರಿ ಇಟ್ಟುಕೊಂಡಿದೆ. 24/7 ಕೆಲಸ ಮಾಡಬೇಕು, ಉದ್ದಿಮೆದಾರರಿಗೆ ಯಾವುದೇ ರೀತಿಯ ಕಾನೂನಿನ ತೊಡಕು ಉಂಟಾಗದಂತೆ ಸರಳೀಕರಣವಾಗಿ ಉದ್ಯಮ ನಡೆಸಲು ವೇದಿಕೆ ಕಲ್ಪಿಸಿಕೊಡುವುದು ನಮ್ಮ ಮುಖ್ಯ ಗುರಿ ಎಂದರು.

    ಉದ್ದಿಮೆದಾರರಿಗೆ ಪ್ರಸ್ತುತ ಐದು ಪಟ್ಟು ದಂಡ ವಿಧಿಸುವ ನಿಯಮ ಇಲಾಖೆಯಲ್ಲಿದೆ. ಸುಮಾರು 6,700ಕೋಟಿ ರಾಜಸ್ವ ಸರ್ಕಾರಕ್ಕೆ ಬರಬೇಕಾಗಿದೆ. ಇನ್ನು ಮುಂದೆ ಏಕಕಂತು ತಿರುವಳಿ ಯೋಜನೆ (ಒನ್ ಟೈಮ್ ಸಟ್ಲ್‍ಮೆಂಟ್ ಸ್ಕೀಮ್) ಪ್ರಾರಂಭಿಸಲಾಗುವುದು. ಬಹುದಿನಗಳ ಬೇಡಿಕೆಯಂತೆ ಜಿಲ್ಲಾ ಗಣಿ ನಿಧಿ (ಡಿಎಂಎಫ್) ಪ್ರಸ್ತುತ ಶೇ.30ರಷ್ಟಿದೆ. ಇದನ್ನು ಶೇ.10ಕ್ಕೆ ಇಳಿಕೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.

    ಉದ್ದಿಮೆದಾರರು ರಾಜಸ್ವ ಹಾಗೂ ಜಿಎಸ್‍ಟಿ ಕಟ್ಟುತ್ತಾರೆ. ಇದರಿಂದಲೇ ಕೋಟ್ಯಂತರ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗುತ್ತದೆ. ನಿಮಗೆ ಅನುಕೂಲ ಕಲ್ಪಿಸಿಕೊಟ್ಟರೆ ಉದ್ಯಮ ಸುಲಭವಾಗಿ ನಡೆಯಲಿದೆ. ಶೀಘ್ರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಜನಪರವಾದ ಹಾಗೂ ಜನ ಸ್ನೇಹಿ ಗಣಿ ನೀತಿಯನ್ನು ಜಾರಿ ಮಾಡಲಿದ್ದೇವೆ. ಇದರಲ್ಲಿ ನಿಮ್ಮ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದರು.

    ದೇಶಕ್ಕೆ ಮಾದರಿಯಾದ ಗಣಿ ನೀತಿಯನ್ನು ಜಾರಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಕರ್ನಾಟಕದ ನೀತಿಯನ್ನು ಬೇರೆ ರಾಜ್ಯಗಳು ಮಾದರಿಯಾಗಿಟ್ಟುಕೊಳ್ಳಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದರು. ನಾನೂ ಕೂಡ ಮೂಲತಃ ಉದ್ಯಮಿಯಾಗಿದ್ದು, ಉದ್ಯಮಿದಾರರ ಸಮಸ್ಯೆಗಳು ಏನೆಂಬುದರ ಬಗ್ಗೆ ಅರಿವಿದೆ. ನೀವು ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಗೌರವಯುತವಾಗಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಗ್ದಾನ ಮಾಡಿದರು.

    ಎಲ್ಲ ಜಿಲ್ಲೆಗಳಲ್ಲಿ ಖನಿಜ ಭವನ
    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಇಲಾಖೆವತಿಯಿಂದ ಪ್ರತ್ಯೇಕ ಖನಿಜ ಭವನಗಳನ್ನು ಪ್ರಾರಂಭ ಮಾಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ಖನಿಜ ಭವನಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಖನಿಜ ಭವನಗಳನ್ನು ತೆರೆಯಲಾಗುವುದು. ಇದರಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟರು.

    ನಾನು 20-25 ವರ್ಷಗಳ ಹಿಂದೆ ಸಣ್ಣ ಉದ್ಯಮಿಯಾಗಿದ್ದೆ. ಅಂದು ನನ್ನ ಬಳಿ ಹೆಚ್ಚಿನ ಹಣಕಾಸು ಇರಲಿಲ್ಲ. ಇಂದು ಏಷ್ಯಾದಲ್ಲೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆಯನ್ನು ನಾನು ನಡೆಸುತ್ತಿದ್ದೇನೆ. ನನ್ನ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಗುರಿ ಇದ್ದಿದ್ದರಿಂದಲೇ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

    ಸಕ್ಕರೆ ಕಾರ್ಖಾನೆ ಜೊತೆಗೆ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಅಲ್ಲದೆ ಸಹಕಾರ ಕ್ಷೇತ್ರದಲ್ಲೂ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದೇವೆ. ಎಥಿನಾಲ್, ಸಿಮೆಂಟ್ ಉತ್ಪಾದನೆ ಸೇರಿದಂತೆ ವಾರ್ಷಿಕ 5 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದೇವೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಕಾರ್ಖಾನೆ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು. ನಮ್ಮ ಫೌಂಡೇಶನ್ ಬೆಳದು ಬಂದ ಹಾದಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಎಂದರು.

    ಇಲಾಖೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಶಿವಮೊಗ್ಗದ ಹುಣಸೋಡು, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಬಳಿ ನಡೆದ ಘಟನೆಯ ನಂತರ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಎರಡು ಘಟನೆ ನಡೆದ ನಂತರ ವಿರೋಧ ಪಕ್ಷದವರು ನನಗೆ ಮಾಲೀಕರನ್ನು ಬಂಧಿಸುವಂತೆ ಒತ್ತಡ ಹಾಕಿದರು. ಇದು ಮಾಲೀಕರಿಂದ ಪ್ರಮಾದವಾಗಿಲ್ಲ ಎಂದು ನಾನು ಮನವರಿಕೆ ಮಾಡಿಕೊಟ್ಟೆ. ಸ್ಪೋಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಉಂಟಾದ ಅತಾಚುರ್ಯದಿಂದ ಇದು ಸಂಭವಿಸಿತು. ಮುಂದೆ ಈ ರೀತಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದರು.

    ಮಾಲೀಕರು ಬಂಡವಾಳ ಹೂಡಿ ಉದ್ಯಮ ಆರಂಭಿಸುತ್ತಾರೆ. ಅವರ ಮೇಲೆ ಕ್ರಮ ಜರುಗಿಸಿದರೆ ಕ್ರಷರ್‍ಗಳು ನಿಂತು ಹೋಗುತ್ತವೆ. ಬ್ಯಾಂಕ್‍ನಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತದೆ. ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್.ದತ್ತಾತ್ರೀ, ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಷನ್ಸ್ ಅಧ್ಯಕ್ಷ ಎಸ್.ಸಂಜೀವ ಹಟ್ಟಿಹೊಳಿ, ಗಣಿ ಸುರಕ್ಷತಾ ಮಹಾನಿದೇರ್ಶಕರಾದ ಮುರಳಿಧರ್ (ಬೆಂಗಳೂರು ವಲಯ), ಶ್ಯಾಮ್ ಸುಂದರ್ ಸೋನಿ(ಗೋವಾ ವಲಯ) ಹಾಗೂ ಉಮೇಶ್ ಎಂ.ಸಾವರ್ಕರ್ (ಬಳ್ಳಾರಿ ವಲಯ) ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

  • ಗಣಿಗಾರಿಕೆ ಲೈಸೆನ್ಸ್ ನೀಡಲು ಆಫ್‍ಲೈನ್-ಆನ್‍ಲೈನ್ ವ್ಯವಸ್ಥೆ ಜಾರಿ: ಮುರುಗೇಶ್ ನಿರಾಣಿ

    ಗಣಿಗಾರಿಕೆ ಲೈಸೆನ್ಸ್ ನೀಡಲು ಆಫ್‍ಲೈನ್-ಆನ್‍ಲೈನ್ ವ್ಯವಸ್ಥೆ ಜಾರಿ: ಮುರುಗೇಶ್ ನಿರಾಣಿ

    -30 ದಿನದಲ್ಲಿ ನೂತನ ನಿಯಮ ಜಾರಿ
    -ಸ್ಥಳೀಯವಾಗಿಯೇ ಅದಿರು ಬಳಸಲು ಚಿಂತನೆ
    -ಅಧಿಕಾರಿಗಳಿಗೆ ಅನಾಹುತ ತಡೆಗಟ್ಟಲು ತರಬೇತಿ

    ಧಾರವಾಡ: ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಣಿ, ಆಫ್‍ಲೈನ್, ಆನ್‍ಲೈನ್ ಜಾರಿ ಮಾಡಿದರೆ 30 ದಿನದಲ್ಲಿ ಗಣಿಗಾರಿಕೆ ಲೈಸೆನ್ಸ್ ಪಡೆಯಬಹುದು, 30 ದಿನದೊಳಗೆ ಈ ಎರಡೂ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತರಲಿದೆ. ಈಗಾಗಲೇ ಕರಡು ನೀತಿ ಸಿದ್ಧವಾಗಿದ್ದು, ಗಣಿಗಾರಿಕೆ ಅನುಮತಿ ಪಡೆಯುವವರೆಗೆ ತೊಂದರೆಯಾಗದಂತೆ ಸರಳೀಕರಣ ಮಾಡುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

    ಅದಿರನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿನ ಅದಿರನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಜಿಂದಾಲ್, ಬಲ್ಡೋಟಾ, ಕಿರ್ಲೋಸ್ಕರ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ಹೊರಗಡೆಯಿಂದ ಅದಿರು ಆಮದು ಮಾಡಿಕೊಂಡರೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ಈಗಾಗಲೇ ಅದಿರಿನ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ. ಅವರು ಕೂಡ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಸದ್ಯದಲ್ಲೇ ಮತ್ತೊಮ್ಮೆ ಅಕಾರಿಗಳ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ರಾಜ್ಯದಲ್ಲಿ ಪದೇ ಪದೇ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನಂತರ ನಾವು ಹೊಸ ನಿಯಮಗಳನ್ನು ತಂದಿದ್ದೇವೆ, ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಸ್ಪೋಟಕ ವಸ್ತುಗಳನ್ನು ಬಳಸಬೇಕು. ಅದನ್ನು ಹೊರತುಪಡಿಸಿ ಬೇರೆ ಯಾರು ಕೂಡ ಬಳಸದಂತೆ ಕಾನೂನು ಜಾರಿಗೆ ತರಲಾಗುತ್ತದೆ. ಯಾರಾದರೂ ಕಾನೂನುಬಾಹಿರವಾಗಿ ಸ್ಪೋಟಕಗಳನ್ನು ಇಟ್ಟುಕೊಂಡಿದ್ದರೆ ಕೂಡಲೇ ಹಿಂತಿರುಗಿಸಬೇಕೆಂದು ಸಚಿವರು ಮನವಿ ಮಾಡಿದರು.

    ರಾಜ್ಯದಲ್ಲಿ ಹೊಸದಾಗಿ ಸ್ಕೂಲ್ ಆಫ್ ಮೈನಿಂಗ್ ತೆರೆಯುವ ಉದ್ದೇಶವಿದೆ. ಗಣಿಗಾರಿಕೆ ನಡೆಸುವವರಿಗೆ ಇದರಿಂದ ಅನುಕೂಲವಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರಂಭಿಸುವ ಉದ್ದೇಶ ಇದೆ ಹೀಗಾಗಿ ಎಲ್ಲ ಕಡೆ ಅಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಗಣಿಗಾರಿಕೆ ನಡೆಸುವವರಿಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು. ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ಹಣವನ್ನು ರಾಜಸ್ವ ಧನದ ಮೂಲಕ ಸಂಗ್ರಹಿಸಲಾಗಿದೆ. ಇದರ ಬಡ್ಡಿ ಸೇರಿಸಿ ಒಟ್ಟು 18 ಸಾವಿರ ಕೋಟಿ ರೂಪಾಯಿಯಾಗಿದೆ. ಇದು ಮೂರು ತಿಂಗಳ ಒಳಗೆ ನಮ್ಮ ಕೈ ಸೇರಿದರೆ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಲಿದ್ದೇವೆ ಈ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರುವುದು ನಮ್ಮ ಉದ್ದೇಶವಾಗಿದೆ. ಜನರಿಗೆ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಸಿಗಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತಿನ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  • ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ: ನಿರಾಣಿ

    ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ: ನಿರಾಣಿ

    ಧಾರವಾಡ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲ ಬದಲಾವಣೆ ತರಲು ಬಯಸಿದ್ದೇವೆ. ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿರಾಣಿ, ಗಣಿ ಇಲಾಖೆ ಜೊತೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕೂಡಾ ಬರುತ್ತಿವೆ, ಗಣಿ ಲೈಸನ್ಸ್ ಗೆ ಆಫ್‍ಲೈನ್ ಹಾಗೂ ಆನ್‍ಲೈನ್ ಎರಡು ರೀತಿಯಲ್ಲಿ ಅನುಮತಿ ಪಡೆಯಬಹುದು. 30 ದಿನದಲ್ಲಿ ಈ ಗಣಿ ನಿಯಮ ಜಾರಿಗೆ ತರುತ್ತೇವೆ ಅದರ ಡ್ರಾಫ್ಟ್ ಕೂಡಾ ತಯಾರಿದೆ ಎಂದು ಮಾಹಿತಿ ಹಂಚಿಕೊಂಡರು.

    ಗಣಿ ಅನುಮತಿ ಪಡೆಯುವವರಿಗೆ ತೊಂದರೆಯಾಗದಂತೆ ಗಣಿ ನಿಯಮವನ್ನು ಸರಳೀಕರಣ ಮಾಡುತ್ತಿದ್ದೇವೆ ಜಿಂದಾಲ್, ಬಲ್ದೋಟಾ, ಕಿರ್ಲೊಸ್ಕರ್ ಕಂಪನಿಗಳು ಹಾಗೂ ಇತರ ಕಂಪನಿಗಳ ಜೊತೆ ಸಭೆ ನಡೆಸಿದ್ದೇವೆ. ಅದಿರು ಹೊರಗಿನಿಂದ ತರುವುದಕ್ಕೆ ಬೆಲೆ ಹೆಚ್ಚಾಗುತ್ತದೆ ಎಂಬ ಮಾಹಿತಿ ಇದೆ ಇದನ್ನು ಕೂಡಾ ಸಿಎಂ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

    ಸ್ಕೂಲ್ ಆಫ್ ಮೈನಿಂಗ್ ಮಾಡಿದರೆ ಅಕ್ರಮ ಮೈನಿಂಗ್ ಆಗುವುದನ್ನು ಬದಲಾವಣೆ ತರಬಹುದು, ಈ ಹಿನ್ನೆಲೆ ಎಲ್ಲ ಕಡೆ ವರ್ಕ್‍ಶಾಪ್ ಮಾಡಿ ಅಧಿಕಾರಿಗಳಿಗೆ ಹಾಗೂ ಮೈನಿಂಗ್ ಮಾಡುವವರಿಗೆ ತರಬೇತಿ ನೀಡುತ್ತಿದ್ದೇವೆ. ಗಣಿ ಮಾಲಿಕರು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ರೂಪಾಯಿ ರಾಯಲ್ಟಿ ಕಟ್ಡಿದ್ದಾರೆ. ಅದರ ಬಡ್ಡಿ ಸೇರಿ ಆ ಹಣ 18 ಸಾವಿರ ಕೋಟಿ ಆಗಿದೆ. ಮೂರು ತಿಂಗಳಲ್ಲಿ ಆ ಹಣ ನಮ್ಮ ಕೈ ಸೇರುವ ನಿರೀಕ್ಷೆ ಇದೆ, ಆ ಹಣವನ್ನು ಕ್ರಿಯಾ ಯೋಜನೆಗೆ ಬಳಕೆ ಮಾಡಿಕೊಂಡು ಕೆಲಸಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

  • ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    –  ಹೆಲಿಕಾಪ್ಟರ್‌ನಲ್ಲಿ ಓಡಾಡುವ ಎಸ್‍ಸಿ, ಎಸ್‍ಟಿಗಳು ಇದ್ದಾರೆ

    ಧಾರವಾಡ: ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಆ ಜನರೆಲ್ಲರೂ ಪಂಚಮಸಾಲಿಯ ನಾಯಕರೇ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕೂಡಲ ಸಂಗಮ ಮತ್ತು ಹರಿಹರ ಪೀಠ ಸ್ವಾಮೀಜಿ 2ಎ ಗಾಗಿ ಅವರದ್ದೇ ಲೆವಲ್‍ನಲ್ಲಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವು ಸಹ ವಿಧಾನಸಭೆ ಒಳಗೆ ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದೆವೆ. ಮೀಸಲಾತಿ ಕೊಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮೀಸಲಾತಿ ಬಂದ ಬಳಿಕ ಕೋರ್ಟ್‍ಗೆ ಹೋದರೆ ಅದು ಹಾಗೆಯೇ ಉಳಿಯುತ್ತದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿಗಳ ತ್ರಿ ಸದಸ್ಯ ಪೀಠದಿಂದ ಈ ಕೆಲಸ ನಡೆದಿದೆ. ಇಷ್ಟೇ ದಿನದಲ್ಲಿ ಮೀಸಲಾತಿ ಆಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಎಲ್ಲ ಸಮಾಜದಲ್ಲಿ ಬಡವರು ಶ್ರೀಮಂತರು ಇದ್ದಾರೆ. ಎಸ್‍ಸಿ ಸಮಾಜದಲ್ಲಿಯೂ ಶ್ರೀಮಂತರಿದ್ದಾರೆ, ಮಲ್ಲಿಕಾರ್ಜುನ ಖರ್ಗೆಯಂಥವರು ಹೆಲಿಕಾಪ್ಟರ್‍ನಲ್ಲಿ ಓಡಾಡುವವರು ಎಸ್‍ಸಿ, ಎಸ್‍ಟಿಯಲ್ಲಿ ಇದ್ದಾರೆ. ಬ್ರಾಹ್ಮಣ ಮೇಲ್ವರ್ಗದ ಸಮಾಜದಲ್ಲೂ ಬಡವರಿದ್ದಾರೆ ಎಂದು ಹೇಳಿದರು.

    ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಇದು ನಕಲಿ ಸಿಡಿ ಎಂದು ಜಾರಕಿಹೊಳಿಯವರೇ ಹೇಳಿದ್ದಾರೆ. ಆದರೂ ಸಹ ಸತ್ಯಾಸತ್ಯತೆ ಕಂಡು ಹಿಡಿಯಲು ತನಿಖೆ ಮಾಡುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ನಿರಪರಾಧಿಯಾಗಿ ಹೊರ ಬರುತ್ತಾರೆ. ವರದಿ ಬಂದ ಬಳಿಕ ಅಪಾದನೆಯಿಂದ ಹೊರಗೆ ಬರುತ್ತಾರೆ. ಗೃಹ ಇಲಾಖೆಗೆ ತನ್ನದೆಯಾದ ಪ್ರಕ್ರಿಯೆ ಇರುತ್ತದೆ. ಆ ಪ್ರಕ್ರಿಯೆ ಅಡಿಯಲ್ಲಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

  • ಸಚಿವ ಮುರುಗೇಶ್ ನಿರಾಣಿ ಮುಂದೆ ಕಷ್ಟ ಹೇಳಿಕೊಂಡ ಕಾರ್ಮಿಕ ಅಮಾನತು

    ಸಚಿವ ಮುರುಗೇಶ್ ನಿರಾಣಿ ಮುಂದೆ ಕಷ್ಟ ಹೇಳಿಕೊಂಡ ಕಾರ್ಮಿಕ ಅಮಾನತು

    ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಕಂಪನಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದೆ ಕಷ್ಟ ತೋಡಿಕೊಂಡ ಕಾರ್ಮಿಕನಿಗೆ ಈಗ ಅಮಾನತು ಶಿಕ್ಷೆಯಾಗಿದೆ. ಕಷ್ಟ ಹೇಳಿಕೊಂಡಿದ್ದೇ ತಪ್ಪಾ ಅನ್ನೋ ಪರಸ್ಥಿತಿ ಕಾರ್ಮಿಕರಿಗೆ ಬಂದೊದಗಿದೆ. ತಮ್ಮ ಕಷ್ಟವನ್ನ ಸಚಿವರ ಮುಂದೆ ಬಿಚ್ಚಿಟ್ಟ ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಮಿಕ ಮಲ್ಲಪ್ಪ ಅಮಾನತುಗೊಂಡಿದ್ದಾರೆ. ನಾಗಪ್ಪ, ಸಾಬಣ್ಣ ಎಂಬವರಿಗೆ ಶೋಕಾಸ್ ನೋಟಿಸ್ ಜಾರಿಮಾಡಲಾಗಿದೆ.

    ಫೆಬ್ರವರಿ 26 ರಂದು ಹಟ್ಟಿಚಿನ್ನದ ಗಣಿಗೆ ಭೇಟಿ ನೀಡಿದ್ದ ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿಗಳಿಂದಲೇ ಕಾಲಿಗೆ ಶೂ ಹಾಕಿಸಿಕೊಂಡು ವಿವಾದಕ್ಕೀಡಾಗಿದ್ದರು. ಅಂದೇ ತಮ್ಮ ಮುಂದೆ ಕಷ್ಟ ತೋಡಿಕೊಂಡ ಕಾರ್ಮಿಕರಿಗೆ ಈಗ ಅಮಾನತು ಶಿಕ್ಷೆಯಾಗಿದೆ. ಮೃತ ಕಾರ್ಮಿಕರ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಸಚಿವರಿಗೆ ಆಗ್ರಹಿಸಿದ್ದರು. ಅನ್ ಫೀಟ್ ಆದರೆ ಅಂತವರ ಕಟುಂಬದವರಿಗೆ ಕೆಲಸ ಕೊಡಬೇಕು. ಗಣಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸುರಕ್ಷತಾ ಸಾಧನಗಳನ್ನ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಮನವಿ ಸಲ್ಲಿಸಲು ಆಗಮಿಸಿದ್ದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

    ಸಚಿವರ ಮುಂದೆ ತಮ್ಮ ಅಳಲು ತೊಡಿಕೊಳ್ಳಲು ಅವಕಾಶ ಸಿಗದಿದ್ದಕ್ಕೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ನೀವು ಗಣಿ ಆವರಣದಲ್ಲಿ ಗಲಾಟೆ ಮಾಡಲು ಮುಂದಾಗಿದ್ದೀರಿ, ಮಾಧ್ಯಮಗಳ ಮುಂದೆ ಮಾತನಾಡಿದ್ದೀರಿ ಎಂದು ನೋಟಿಸ್ ನೀಡಿ ಅಮಾನತು ಮಾಡಲಾಗಿದೆ. ಮೂರು ದಿನಗಳೊಳಗಾಗಿ ಉತ್ತರ ನೀಡಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

    ಕಾರ್ಮಿಕ ಸಾಬಣ್ಣ ತನ್ನ ತಮ್ಮನ ಸಾವಿನ ನಂತರ ಅವರ ಕುಟುಂಬಕ್ಕೆ ಉದ್ಯೋಗ ಕೇಳಲು ಬಂದಿದ್ದ, ಈ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಬಣ್ಣನಿಗೂ ಕಾರಣ ಕೇಳಿ ನೋಟೀಸ್ ಜಾರಿಯಾಗಿದೆ. ದುರ್ನಡತೆ ತೋರಿರುವ ಆರೋಪದಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

  • ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

    ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

    ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡಿದ ವೇಳೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿಯಿಂದ ಶೂ ತೊಡಿಸಿಕೊಂಡು ವಿವಾದಕ್ಕೀಡಾಗಿದ್ದಾರೆ.

    ಲಿಂಗಸುಗೂರಿನ ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿದ ಮುರುಗೇಶ್ ನಿರಾಣಿ, ಅಧಿಕಾರಿಗಳ ಸಭೆ ನಡೆಸಿ ನಂತರ ಗಣಿ ವೀಕ್ಷಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವರು ಅಲ್ಲಿನ ಸಿಬ್ಬಂದಿಯಿಂದ ಸುರಕ್ಷತಾ ಸಾಧನಾ ಮತ್ತು ಕಾಲಿಗೆ ಶೂ ತೊಡಿಸಿಕೊಂಡಿದ್ದಾರೆ.

    ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ನಿರಾಣಿ, ಈ ಆರ್ಥಿಕ ವರ್ಷದಲ್ಲಿ ಹಟ್ಟಿ ಚಿನ್ನದ ಗಣಿಯಿಂದ 1700 ಕೆಜಿ ಚಿನ್ನ ಉತ್ಪಾದನೆಯಾಗಿದೆ. ಗಣಿಯನ್ನು ಆಧುನಿಕರಣಗೊಳಿಸಲು ಚಿಂತನೆ ನಡೆದಿದ್ದು, ಈಗಾಗಲೇ ಆಧುನಿಕರಣಕ್ಕೆ ವರದಿ ತಯಾರಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಚಿನ್ನದ ಉತ್ಪಾದನೆಯ ಪ್ರಮಾಣ ಕಡಿತವಾಗಿತ್ತು ಈಗ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ನಿರಾಣಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಕಂಪನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಮಕ್ಕಳಿಗೆ ಕೆಲಸ ನೀಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ. 60 ಜನ ಸಂತ್ರಸ್ತರಿಗೆ ಹಟ್ಟಿ ಕಂಪನಿಯಲ್ಲಿ ಕೆಲಸ ನೀಡಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಮಿಕರಿಗೆ ಅನ್ಯಾಯವಾಗದಂತೆ ಅಧಿಕಾರಿಗಳೊಂದಿಗೆ ಬೇಡಿಕೆ ಕುರಿತು ಚರ್ಚೆ ಮಾಡುತ್ತೇನೆ. 18 ಸಾವಿರ ಕೋಟಿ ರೂ. ಗಣಿಯ ಹಣವು ಸುಪ್ರೀಂ ಕೋರ್ಟ್‍ನಲ್ಲಿದೆ ಅದನ್ನು ಬಳಸಿಕೊಳ್ಳಲಾಗುವುದು ಎಂದರು.

    ಮೀಸಲಾತಿ ಕೇಳಿ ಹಲವು ಸಮಾಜಗಳು ಹೋರಾಟ ಮಾಡುತ್ತಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಸಮಿತಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಮೀಸಲಾತಿಗೆ ಬಂದಿರು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಮೀಸಲಾತಿಗಾಗಿ ಬಂದಿರುವ ಅರ್ಜಿಗಳನ್ನು ಪರಿಗಣಿಸಿ ಅಧ್ಯಯನಕ್ಕೆ ಸಮಯ ಬೇಕಾಗುತ್ತದೆ. ಅಧ್ಯಯನದ ನಂತರ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ವಿವರಿಸಿದರು.

    ಶಿವಮೊಗ್ಗದ ಸ್ಫೋಟ ಪ್ರಕರಣ ಗಣಿ ಕೌಶಲ್ಯ ಹೊಂದದೆ ಇರುವದರಿಂದ ಘಟಿಸಿದೆ. ಹಂತ ಹಂತವಾಗಿ ಗಣಿ ಕೌಶಲ್ಯ ತರಬೇತಿ ನೀಡಲಾಗುವುದು. ಗಣಿ ವಿಷಯಕ್ಕಾಗಿ ಸರ್ಟಿಫಿಕೇಟ್ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾಗಿದ್ದೆ ಇದಕ್ಕೆ ಕಾರಣ ಎಂದು ಟೀಕಿಸಿ, ಮುಂದಿನ ದಿನಗಳಲ್ಲಿ ಗಣಿಗಳಲ್ಲಿ ಎಕ್ಸಪ್ಲೋಸಿವ್ ಇದ್ದರೆ ಗಣಿ ಗುತ್ತಿಗೆ ರದ್ದು ಮಾಡಲಾಗುವುದು ಎಂದು ಗಣಿ ಮಾಲೀಕರಿಗೆ ನಿರಾಣಿ ಎಚ್ಚರಿಕೆ ನೀಡಿದರು.

  • ಎಷ್ಟೇ ಪ್ರಭಾವ ಬೀರಿದ್ರೂ ಆರೋಪಿಗಳ ರಕ್ಷಣೆ ಇಲ್ಲ: ನಿರಾಣಿ

    ಎಷ್ಟೇ ಪ್ರಭಾವ ಬೀರಿದ್ರೂ ಆರೋಪಿಗಳ ರಕ್ಷಣೆ ಇಲ್ಲ: ನಿರಾಣಿ

    – ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ

    ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆ ಗುಂಡಿಬಂಡೆ ತಾಲೂಕಿನ ಹಿರೇನಾಗವಲ್ಲಿಯಲ್ಲಿ ಜೆಲಿಟಿನ್ ಕಡ್ಡಿ ಸ್ಫೋಟವಾಗಿ ಆರು ಮಂದಿ ಸಾವನ್ನಪ್ಪಿರುವ ಘಟನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್.ಆರ್ ನಿರಾಣಿ ಆಘಾತ ವ್ಯಕ್ತಪಡಿಸಿದ್ದಾರೆ.

    ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಮೃತರ ಕುಟುಂಬ ಸದಸ್ಯರಿಗೆ ಮತ್ತು ಗಾಯಾಳುಗಳಿಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಶಿವಮೊಗ್ಗ ಸ್ಫೋಟದ ನಂತರ ಮತ್ತೊಂದು ದುರಂತ ನಡೆದಿರುವುದು ತನಗೆ ತೀವ್ರ ನೋವಾಗಿದೆ. ಜಿಲಿಟಿನ್ ಕಡ್ಡಿ ಸ್ಫೋಟದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿರುವುದು ತುಂಬಾ ನೋವು ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.

    ಇದು ಅತ್ಯಂತ ದುರದೃಷ್ಟಕರ ಘಟನೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ಮತ್ತು ಗಾಯಗೊಂಡ ವ್ಯಕ್ತಿಗೆ ಸರ್ಕಾರ ಎಲ್ಲಾ ಸಹಾಯವನ್ನು ನೀಡಲಿದೆ ಎಂದು ಅಭಯ ನೀಡಿದ್ದಾರೆ.

    ಯಾರ ರಕ್ಷಣೆಯೂ ಇಲ್ಲ: ಘಟನೆಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕಾನೂನು ತೆಗೆದುಕೊಳ್ಳಲಾಗುವುದು. ಸರ್ಕಾರ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಶಿವಮೊಗ್ಗ ಸ್ಫೋಟಕ್ಕೆ ಮೊದಲೇ ಸ್ಪೋಟಕಗಳನ್ನು ಸಂಗ್ರಹಿಸಿಡಲಾಗಿತ್ತೇ? ಎಂಬ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಯಾರು ಎಷ್ಟೇ ಪ್ರಭಾವ ಬೀರಿದರೂ ಆರೋಪಿಗಳನ್ನು ರಕ್ಷಣೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಕೆಲವು ಅಧಿಕೃತ ಕೆಲಸಗಳಿಂದಾಗಿ ನಾನು ದೆಹಲಿಯಲ್ಲಿದ್ದೇನೆ. ಇಂದು ಸಂಜೆ ಬೆಂಗಳೂರಿಗೆ ಬಂದಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಸಚಿವರಾದ ಬಸವರಾಜ್ ಬೊಮ್ಮಾಯಿ, ಡಾ.ಸುಧಾಕರ್, ಡಿಸಿ, ಎಸ್ಪಿ ಮತ್ತು ನಮ್ಮ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂಥ ದುರಂತಗಳು ಮರುಕಳಿಸದಂತೆ ಎಚ್ಚರವಹಿಸಲು ನುರಿತ ಕೆಲಸಗಾರರಿಗೆ ತರಬೇತಿ ನೀಡುವುದು ಮತ್ತು ಗಣಿಗಾರಿಕೆ ಶಾಲೆಯ ರಚನೆಯ ಮಹತ್ವದ ಬಗ್ಗೆ ನಿರಾಣಿ ಪುನರುಚ್ಚರಿಸಿದರು.

    ಹೊಸ ಕಾನೂನು: ಇನ್ನು ಮುಂದೆ ಕಲ್ಲುಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಲು ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಬಳಕೆ ಮಾಡಲು ಹೊಸ ಕಾನೂನು ಜಾರಿ ಮಾಡುತ್ತೇವೆ. ಕೆಲವರು ಕಾನೂನು ಬಾಹಿರವಾಗಿ ಕಲ್ಲು ಕ್ವಾರಿ ಮತ್ತು ಗಣಿ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದಲೇ ಇಂಥ ಘಟನೆಗಳು ನಡೆಯುತ್ತವೆ ಎಂದು ಹೇಳಿದರು.

    ಇದನ್ನು ತಡೆಯಲು ಸದ್ಯದಲ್ಲೇ ಹೊಸ ಕಾನೂನು ಜಾರಿ ಮಾಡಲಾಗುವುದು. ಸರ್ಕಾರದಿಂದ ಲೈಸೆನ್ಸ್ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಸುವ ಕಾನೂನು ಜಾರಿ ಮಾಡಲಾಗುವುದು. ಕೆಲವು ಕಡೆ ಕಾನೂನು ಬಾಹಿರವಾಗಿ ಕಲ್ಲುಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಇದನ್ನು ತಡೆಗಟ್ಟಲು ಇಲಾಖಾ ಮಟ್ಟದಲ್ಲಿ ಹಲವಾರು ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಒಂದು ವೇಳೆ ನಮ್ಮ ಅಧಿಕಾರಿಗಳು ಇಂಥಹುದರಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

    ಈ ಘಟನೆಗಳು ನುರಿತ ಕೆಲಸಗಾರರಿಗೆ ತರಬೇತಿ ಮತ್ತು ಗಣಿಗಾರಿಕೆ ಶಾಲೆಯ ಸ್ಥಾಪನೆಯ ಮಹತ್ವವನ್ನು ನಮಗೆ ನೆನಪಿಸುತ್ತವೆ. ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಗಣಿಗಾರಿಕೆ ಸ್ಥಳಗಳಲ್ಲಿ ಜಿಲಿಟಿನ್ ಕಡ್ಡಿಗಳು ಸ್ಫೋಟಕಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

    ರಾಜ್ಯದಲ್ಲಿ ಗಣಿಗಾರಿಕೆ ಶಾಲೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಗಣಿಗಾರಿಕೆ ಪ್ರದೇಶಗಳಲ್ಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಯಾರೇ ಪ್ರಭಾವಿಗಳಾಗಿದ್ದರೂ ಎಷ್ಟೇ ದೊಡ್ಡವರಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನೇ ಸರ್ಕಾರ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ. ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಪುನಃ ಪುನಃ ಮರುಕಳಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಘಟನೆ ನಡೆದ ನಂತರ ಕೆಲವರು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಪೊಲೀಸರು ತಕ್ಷಣವೇ ಅವರನ್ನು ಬಂಸುವ ವಿಶ್ವಾಸವಿದೆ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

  • ಮಂಡ್ಯದ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ, ನಿರಾಣಿ ಭೇಟಿ

    ಮಂಡ್ಯದ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ, ನಿರಾಣಿ ಭೇಟಿ

    ಮಂಡ್ಯ: ಸಂಸತ್‍ನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದರು.

    ಮೊದಲು ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಸಮೀಪ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ದಿಲೀಪ್ ಕನ್‍ಸ್ಟ್ರಕ್ಷನ್ ಅವರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕಾರಿಗಳ ಬಳಿ ಇದ್ದ ಮಾಹಿತಿಯನ್ನು ಸಚಿವ ಮುರುಗೇಶ್ ನಿರಾಣಿ ಅವರಿಗೆ ನೀಡಲು ಸೂಚನೆ ನೀಡಿದರು. ಬಳಿಕ ದಿಲೀಪ್ ಕನ್‍ಸ್ಟ್ರಕ್ಷನ್ ಅವರು ಅಕ್ರಮವಾಗಿ ಮಾಡಿರುವ ಗಣಿಗಾರಿಕೆಯ ವರದಿ ತೆಗೆದುಕೊಂಡು ಅವರಿಗೆ ದಂಡ ವಿಧಿಸುವುದಾಗಿ ಮುರುಗೇಶ್ ನಿರಾಣಿ ಅವರು ತಿಳಿಸಿದರು. ಅಲ್ಲದೇ ರಾಜಧನ ಪಾವತಿ ಮಾಡದವರ ವಿರುದ್ಧ ಕ್ರಮಕೈಗೊಂಡು ಅವರಿಂದ ರಾಜಧನ ವಸೂಲಿ ಮಾಡುವುದಾಗಿ ಅವರು ತಿಳಿಸಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನಾನು ಸಂಸದೆ ಆದಾಗಿನಿಂದ ಮಂಡ್ಯ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನನ್ನ ಉದ್ದೇಶ ನನ್ನ ಜನರಿಗೆ ಹಾಗೂ ರೈತರಿಗೆ ಅನ್ಯಾಯವಾಗ ಬಾರದು, ನಾನು ಅಭಿವೃದ್ಧಿಯ ಪರವಾಗಿ ಇದ್ದೇನೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು. ಆದರೆ ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ನಾನು ಈ ಬಗ್ಗೆ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ಹೇಳಿದ್ದೆ. ಅದರಂತೆ ಇಂದು ಅವರೊಂದಿಗೆ ಬಂದು ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದರು.

  • ನಮ್ಮ ರಾಜೀನಾಮೆ ಕೇಳಲು ಯತ್ನಾಳ್ ಯಾರು?: ಮುರುಗೇಶ್ ನಿರಾಣಿ

    ನಮ್ಮ ರಾಜೀನಾಮೆ ಕೇಳಲು ಯತ್ನಾಳ್ ಯಾರು?: ಮುರುಗೇಶ್ ನಿರಾಣಿ

    – ಕಾಶಪ್ಪನವರ್ ಸ್ವಯಂಘೋಷಿತ ಅಧ್ಯಕ್ಷ

    ಬೆಂಗಳೂರು: ನಮ್ಮ ರಾಜೀನಾಮೆ ಕೇಳಲು ಬಸನಗೌಡ ಪಾಟೀಲ್ ಯತ್ನಾಳ್ ಯಾರು? ಬೇಕಿದ್ರೆ ಯತ್ನಾಳ್ ರಾಜೀನಾಮೆ ನೀಡಿ, ಪಕ್ಷೇತರರಾಗಿ ಆಯ್ಕೆಯಾಗಿ ಬರಲಿ ಎಂದು ಸಚಿವ ಮುರುಗೇಶ್ ನಿರಾಣಿ ಸವಾಲ್ ಹಾಕಿದ್ದಾರೆ.

    ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮುರುಗೇಶ್ ನಿರಾಣಿ ಏಕವಚನದಲ್ಲಿ ಯತ್ನಾಳ್ ವಿರುದ್ಧ ಕಿಡಿ ಕಾರಿದರು. ಸಿಎಂ ಬಿಎಸ್‍ವೈ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರ ವಿರುದ್ಧ ಯತ್ನಾಳ್ ಮಾತನಾಡಿದ್ದಾರೆ. ಕಳೆದ 25 ವರ್ಷಗಳಿಂದಲೂ ಯತ್ನಾಳ್ ವಾಗ್ದಾಳಿ ಮಾಡಿಕೊಂಡು ಬಂದಿದ್ದು, ಕಾಂಗ್ರೆಸ್ ಬಿ ಟೀಂ ಎಂಬಂತೆ ವರ್ತಿಸುತ್ತಿದ್ದಾರೆ. ಪ್ರತಿಪಕ್ಷಗಳಿಗಿಂತ ಇವರೇ ಮಾತನಾಡೋದು ಹೆಚ್ಚಾಗಿದೆ. ಮೊದಲು ರಾಜೀನಾಮೆ ಕೊಟ್ಟು ಬೇರೆಯವರ ಬಗ್ಗೆ ಯತ್ನಾಳ್ ಮಾತನಾಡೋದು ಒಳ್ಳೆಯದು ತಿರುಗೇಟು ನೀಡಿದರು.

    ಪಂಚಮಸಾಲಿ ಜೊತೆಗೆ ವೀರಶೈವ ಲಿಂಗಾಯತರನ್ನ 2ಎ ಮೀಸಲಾತಿ ನೀಡುವಂತೆ ಹಿಂದುಳಿದ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ. ಇವತ್ತೇ ಮಾಡಬೇಕು, ಸತ್ಯಾಗ್ರಹ ಮಾಡ್ತೀನಿ ಅಂದ್ರೆ ಸಂಪೂರ್ಣ ರಾಜಕೀಯ ಇದೆ. ಜಯಮೃತ್ಯಂಜಯ ಸ್ವಾಮೀಜಿಗಳು ಕೇವಲ ಇಬ್ಬರ ಮಾತು ಕೇಳಿ ನಿರ್ಧಾರ ಮಾಡಬೇಡಿ.. 80 ಲಕ್ಷ ಮಂದಿ ಸಮುದಾಯದವರಿದ್ದೀವಿ.. ಗಡುವು ಕೊಡುವುದು ಸರಿಯಲ್ಲ ಎಂದು ಮನವಿ ಮಾಡಿದರು. ಸ್ವಾಮೀಜಿ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ತಪ್ಪು ಸಂದೇಶ ಹೋಗುತ್ತೆ. ಪಾದಯಾತ್ರೆ ಮಾಡಿದ್ದೀರಿ ಎಲ್ಲರ ಗಮನಕ್ಕೆ ಬಂದಿದೆ. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡರು.

    ಸ್ವಯಂಘೋಷಿತ ಅಧ್ಯಕ್ಷ: ಮಾಜಿ ಶಾಸಕ ವಿಜಯಾನಂದ ಸ್ವಯಂಘೋಷಿತ ಅಧ್ಯಕ್ಷರಾಗಿದ್ದಾರೆ. ಯಾರನ್ನ ಕೇಳಿ ಕಾಶಪ್ಪನವರ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಶಪ್ಪನವರ ನಡವಳಿಕೆಯಿಂದ ಸಮಾಜಕ್ಕೆ ತೊಂದರೆ ಆದ್ರೆ ಅದಕ್ಕೆ ಅವರೇ ಹೊಣೆ. ಕಾಶಪ್ಪನವರ ಮೈ ಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. 100ಕ್ಕೂ ಹೆಚ್ಚು ಕೇಸ್ ಇರುವ ಕೆಟ್ಟ ಹಿನ್ನೆಲೆ ಇರುವ ಈತ ಸಮುದಾಯದ ಅಧ್ಯಕ್ಷ ಆಗಲು ನಾಲಾಯಕ್. ಸಮುದಾಯ ಸಂಘಟನೆ ಲೀಡ್ ಮಾಡುವವರು ಪಕ್ಷಾತೀತ ವ್ಯಕ್ತಿಯಾಗಿರಬೇಕು. ಇಂತಹ ವ್ಯಕ್ತಿಗಳನ್ನ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರನ್ನ ಘೋಷಿಸಿರೋದು ಕಳಂಕ ಎಂದು ಆಕ್ರೋಶ ಹೊರ ಹಾಕಿದರು.

  • ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

    ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

    – ಸರ್ಕಾರಕ್ಕೆ ಮಾರ್ಚ್ 4ರವರೆಗೂ ಡೆಡ್‍ಲೈನ್
    – ಇಕ್ಕಟ್ಟಿನಲ್ಲಿ ಸಿಎಂ ಬಿಎಸ್‍ವೈ

    ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಏಳುನೂರಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿದ ಪಂಚಮಸಾಲಿ ಸಮುದಾಯದ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ಪಂಚಮ ಪಾಂಚಜನ್ಯ ಮೊಳಗಿಸಿದ್ದಾರೆ. ಪಂಚಮಸಾಲಿ ಸಮುದಾಯದ ಹೋರಾಟವನ್ನು ನಿಲ್ಲಿಸಬೇಕೆಂದು ಸಚಿವರ ಮೂಲಕ ಸಿಎಂ ಯಡಿಯೂರಪ್ಪ ಮಾಡಿದ ಒಂದೇ ಒಂದು ತಂತ್ರವೂ ಫಲ ಕೊಡಲಿಲ್ಲ. ಬದಲಿಗೆ ಮೀಸಲು ಹೋರಾಟ ಇನ್ನಷ್ಟು ತೀವ್ರವಾಯ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಡೀ ಸಮುದಾಯ ಯತ್ನಿಸಿತು. ಅಧಿವೇಶನದಲ್ಲಿ ಅಂತಿಮ ನಿರ್ಣಯ ಆಗಲೇಬೇಕು. ಎಂಬ ಒಕ್ಕೊರಲ ನಿರ್ಣಯವನ್ನು ಸಮಾವೇಶ ತೆಗೆದುಕೊಂಡಿದೆ. ಇದರಿಂದಾಗಿ ಸಿಎಂ ಯಡಿಯೂರಪ್ಪ ಅಕ್ಷರಷಃ ಅಡಕತ್ತರಿಗೆ ಸಿಲುಕಿದ್ದಾರೆ.

    ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ಕತ್ತಿ ಝಳಪಿಸುವ ಮೂಲಕ, ವಿಜಯಾನಂದ ಕಾಶಪ್ಪನವರ್ ಕಹಳೆ ಊದುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶ ಉದ್ದೇಶಿಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಇದು ಮುಕ್ತಾವಯಲ್ಲ, ಶಕ್ತಿ ಪ್ರದರ್ಶನ. ಯಾರೇನೇ ಒತ್ತಡ ಹೇರಿದರೂ ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ. ಮಾರ್ಚ್ 4ರವರೆಗೂ ಶಾಂತಿಯುತ ಧರಣಿ ಮಾಡೋದಾಗಿ ಘೋಷಿಸಿದರು.

    ಸಚಿವರ ಮನವೊಲಿಕೆ ಫುಲ್ ಫೇಲ್: ಸಿಎಂ ಸಂದೇಶ ತಂದಿದ್ದ ಸಚಿವ ಸಿಸಿ ಪಾಟೀಲ್ ಮಾತನಾಡಿ, ನಮ್ಮ ಹೋರಾಟಕ್ಕೆ ಸಿಎಂ ಬೆಂಬಲ ಸೂಚಿಸಿದ್ದಾರೆ. ಹಿಂದುಳಿದ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಿದ್ದಾರೆ. ಏಕಾಏಕಿ ತೀರ್ಮಾನ ಕೈಗೊಂದರೆ ಬೇರೆಯವರು ನ್ಯಾಯಾಲಯಕ್ಕೆ ಹೋಗಬಹುದು ಎನ್ನುತ್ತಲೇ ಸಭಿಕರು ಘೋಷಣೆ ಕೂಗಿದರು. ಆದ್ರೂ ಮಾತು ಮುಂದುವರೆಸಿದ ಸಿಸಿ ಪಾಟೀಲ್, ಸಮಾವೇಶದ ನಂತರ ಪ್ರತಿಭಟನೆ ಕೈಬಿಡಿ ಮನವಿ ಮಾಡಿದರು.

    ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ಮೀಸಲಾತಿ ಕೊಡಿಸುವ ಸಲುವಾಗೆ ಈ ಸಮಾವೇಶ ಮಾಡ್ತಿದ್ದೇವೆ. 70 ವರ್ಷ ಆಳಿದವರು ಏನು ಮಾಡಲಿಲ್ಲ ಅಂತಾ ಕಾಂಗ್ರೆಸ್ಸಿಗರ ಮೇಲೆ ಗೂಬೆ ಕೂರಿಸಲು ನೋಡಿದರು. ನಾವು ಕೊಟ್ಟೇ ಕೊಡ್ತೀವಿ ಸ್ವಲ್ಪ ಟೈಮ್ ಕೊಡಿ ಎಂದು ಮನವಿ ಮಾಡಿಕೊಂಡರು.

    ಸಚಿವರ ಭರವಸೆಯನ್ನು ಒಪ್ಪಲು ತಯಾರಿಲ್ಲದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮೂಗಿಗೆ ತುಪ್ಪ ಸವರೋ ಕೆಲಸ ಮಾಡಬೇಡಿ. ಇದು ಮಾಡು ಇಲ್ಲವೇ ಮಡಿ ಹೋರಾಟ. ಮೀಸಲಾತಿ ಸಿಗವರೆಗೂ ಮನೆಗೆ ಹೋಗಲ್ಲ. ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕೇ ಹಾಕ್ತೀವಿ ಅಂತಾ ಗುಡುಗಿದರು.

    ಯತ್ನಾಳ್ ಸವಾಲ್:
    ಸಚಿವರ ಭರವಸೆಯನ್ನು ನಂಬಲು ತಯಾರಿರದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸ್ವಾಗತ ಸಮಿತಿ ಅಧ್ಯಕ್ಷ ಯತ್ನಾಳ್‍ಗೆ ನೀಡಿದ್ರು. ಈ ವೇಳೆ ಮಾತನಾಡಿದ ಯತ್ನಾಳ್, ನನ್ನ ಕೈಯಲ್ಲಿ ಕತ್ತಿ ಕೊಟ್ಟಿದ್ದಾರೆ. ಯಾಕೆ ಅಂದ್ರೆ ಮಾಡು ಇಲ್ಲವೇ ಮಡಿ ಅಂತಾ. ನಾವು ಬೆನ್ನಿಗೆ ಚೂರಿ ಹಾಕಲ್ಲ. ಎದುರು ಬಂದ್ರೆ ಹೊಡೆಯೋದೇ ಅಂತಾ ಅಬ್ಬರಿಸಿದರು. ಇಬ್ಬರು ಸಚಿವರು ಹೋಗಿ ಸಿಎಂಗೆ ಕೇಳಿ, ಇಲ್ಲವಾದ್ರೆ ರಾಜೀನಾಮೆ ಕೊಡ್ತಿನಿ ಅಂತಾ ಹೇಳಿರಿ.. ಅದ್ಯಾಕೆ ಮಾಡಲ್ಲ ನಾನು ನೋಡ್ತೀನಿ ಅಂತಾ ಓಪನ್ ವೇದಿಕೆಯಲ್ಲಿ ಸವಾಲು ಹಾಕಿದರು.

    ಶಾಸಕ ಯತ್ನಾಳ್ ಉರುಳಿಸಿದ ರಾಜಕೀಯ ದಾಳಕ್ಕೆ ಕಕ್ಕಾಬಿಕ್ಕಿಯಾದ ಸಚಿವರಿಬ್ಬರು ಕೋಪದಿಂದ ವೇದಿಕೆಯಿಂದ ಕೆಳಗಿಳಿದು ಹೊರ ನಡೆದರು. ನೇರವಾಗಿ ಸಿಎಂ ಮನೆಗೆ ಹೋಗಿ ಸಮಾವೇಶದ ವರದಿ ಒಪ್ಪಿಸಿದರು. ಇದಕ್ಕೂ ಮುನ್ನ ಜೈಲಲ್ಲಿರುವ ಮಾಜಿ ಮಂತ್ರಿ ವಿಜಯ್ ಕುಲಕರ್ಣಿ ಪತ್ನಿಯನ್ನು ವೇದಿಕೆಗೆ ಕರೆಯಿಸಿ ಸಮುದಾಯದ ಮುಖಂಡರು ಧೈರ್ಯ ತುಂಬುವ ಕೆಲಸ ಮಾಡಿದರು. ಈ ವೇಳೆ ಮಾತು ಬಾರದೇ ವಿನಯ್ ಕುಲಕರ್ಣಿ ಪತ್ನಿ ಗದ್ಗದಿತರಾದರು. ಸಮಾವೇಶದ ಮಧ್ಯೆ ಮಳೆ ಬಂದು ಕೆಲ ಕಾಲ ಜನ ಪರದಾಡಿದರು. ನಗರದಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು.