Tag: Murugesh nirani

  • ರಾಜ್ಯದಲ್ಲಿ ಇನ್ಮುಂದೆ ಬ್ಯಾಗ್‍ನಲ್ಲೇ ಸಿಗಲಿದೆ ಮರಳು!

    ರಾಜ್ಯದಲ್ಲಿ ಇನ್ಮುಂದೆ ಬ್ಯಾಗ್‍ನಲ್ಲೇ ಸಿಗಲಿದೆ ಮರಳು!

    – 50 ಕೆ.ಜಿ.ಮರಳು ಬ್ಯಾಗ್ ಗಳಲ್ಲಿ ಲಭ್ಯ
    – ಪ್ರಾಯೋಗಿಕವಾಗಿ 5 ಕಡೆ ಘಟಕ ಆರಂಭ

    ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ, ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡುವ ವಿನೂತನ ಯೋಜನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರಂಭಿಸಲಿದೆ. ಸರ್ಕಾರದ ವತಿಯಿಂದಲೇ ಕೈಗೆಟುಕುವ ದರದಲ್ಲಿ ಜನಸಾಮಾನ್ಯರಿಗೆ ಮರಳು ಸಿಗಲಿದ್ದು, ಇದರ ಪ್ರಸ್ತಾವನೆಯೂ ಸಿದ್ಧವಾಗಿದೆ.

    ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಬುಧವಾರ ವಿಕಾಸಸೌಧದಲ್ಲಿ ಕಲ್ಲು ಗಣಿಗಾರಿಕೆ ಮರಳು ಕುರಿತು ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮದ್ಯವನ್ನು ಯಾವ ರೀತಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಮಾರಾಟ ಮಾಡುತ್ತಿದೆಯೋ, ಅದೇ ಮಾದರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನ್ನದೇ ಸಂಸ್ಥೆಯ ಮೂಲಕ ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡಲು ಉದ್ದೇಶಿಸಿದೆ ಎಂದು ಪ್ರಕಟಿಸಿದರು.

    ಮರಳು ಸಾಗಾಣಿಕೆ ಮಾಡುವ ವೇಳೆ ಕನಿಷ್ಠ ಶೇ.25ರಿಂದ 30ರಷ್ಟು ಮರಳು ಅನುಪಯುಕ್ತವಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ 50 ಕೆ.ಜಿ.ಯ ಬ್ಯಾಗ್, 1 ಟನ್ ಹಾಗೂ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಮರಳನ್ನು ಖರೀದಿಸಬಹುದು. ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆ ಈ ಘಟಕಗಳನ್ನು ಪ್ರಾರಂಭ ಮಾಡಲಾಗುವುದು. ಮರಳು ಮಾರಾಟ ಮಾಡಲು ಬ್ಯಾಗ್‍ಗಳನ್ನು ಸಿದ್ಧಪಡಿಸುವುದು, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಸಂಬಂಧಪಟ್ಟವರಿಗೆ ನೀಡಲಿದ್ದೇವೆ ಎಂದು ತಿಳಿಸಿದರು.

    ಬ್ಯಾಗ್ ಮೂಲಕ ಮಾರಾಟ ಮಾಡುವಾಗ ಎ,ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಣ ಮಾಡುತ್ತೇವೆ. ಮೊದಲು ಸ್ಟಾಕ್ ಯಾರ್ಡ್‍ಗಳಲ್ಲಿ ಪ್ರತ್ಯೇಕಗೊಳಿಸಿ ನಂತರ ಅದನ್ನು ಕೈಗೆಟಕುವ ದರದಲ್ಲಿ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.

    ಮರಳುಗಾರಿಕೆಯನ್ನು ಕೇವಲ ಆರು ತಿಂಗಳು ಮಾತ್ರ ನಡೆಸಬಹುದು. ನದಿಗಳಲ್ಲಿ ನೀರು ಸಂಗ್ರಹಣೆಯಾದರೆ ಮರಳು ತೆಗೆಯಲು ಅವಕಾಶವಿರುವುದಿಲ್ಲ. ಬ್ಯಾಗ್‍ಗಳಲ್ಲಿ ಮರಳು ಸಂಗ್ರಹಿಸಿಟ್ಟುಕೊಂಡರೆ ವರ್ಷ ಪೂರ್ತಿ ಬಳಕೆ ಮಾಡಬಹುದು ಎಂದು ಸಲಹೆ ನೀಡಿದರು.

    ಬ್ಯಾಗ್‍ಗಳಲ್ಲಿ ಮರಳು ಸಂಗ್ರಹಣೆಯಾದರೆ ಸಾರ್ವಜನಿಕರಿಗೆ ಗುಣಮಟ್ಟದ ಮರಳು ಸಿಗಲಿದೆ. ತಮ್ಮ ವಾಹನಗಳಲ್ಲಿ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಇದರಿಂದ ಸಾಗಾಣಿಕೆ ವೆಚ್ಚವು ಕಡಿಮೆಯಾಗಲಿದೆ ಎಂದರು.

    ವರ್ಷಪೂರ್ತಿ ಮರಳು ಸಿಗದ ಕಾರಣ ಮಾರುಕಟ್ಟೆಯಲ್ಲಿ ಮರಳಿನ ದರವು ದುಪ್ಪಟ್ಟಾಗುತ್ತಿತ್ತು. ಇದನ್ನು ತಪ್ಪಿಸಲು ಈ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ. ಬ್ಯಾಗ್‍ಗಳಲ್ಲಿ ಮರಳನ್ನು ಸಂಗ್ರಹಿಸಿಟ್ಟರೆ ಯಾವಾಗ ಬೇಕಾದರೂ ವಿತರಣೆ ಮಾಡಬಹುದು. ಇದಕ್ಕೆ ದರ ಕಡಿಮೆ ಇರುತ್ತದೆ. ಕೇವಲ 50 ರೂ. ಖರ್ಚಾಗಬಹುದು. 5 ಲಕ್ಷಕ್ಕಿಂತ ಕಡಿಮೆ ದರದಲ್ಲಿ ಮನೆ ಕಟ್ಟಿಸಿಕೊಳ್ಳುವವರಿಗೆ ಯಾವುದೇ ರೀತಿಯ ರಾಜಧನ ಕಟ್ಟಿಸಿಕೊಳ್ಳುವುದಿಲ್ಲ. ಬಡವರು, ಬಡತನ ರೇಖೆಗಿಂತ ಕೆಳಗಿನವರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಶ್ರಯ ಮನೆ ಕಲ್ಪಿಸಿಕೊಳ್ಳುವವರಿಗೆ ಉಚಿತ ಮರಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

    ಬ್ಲಾಕ್‍ಗಳನ್ನು ಗುರುತಿಸಿ: ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಉಪಸಂರಕ್ಷಣಾಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿದ ಸಚಿವ ಮುರುಗೇಶ್ ನಿರಾಣಿ ಅವರು ತಕ್ಷಣವೇ ನದಿ ಪಾತ್ರಗಳಲ್ಲಿ ಒಂದು, ಎರಡು, ಮೂರನೆ ಶ್ರೇಣಿಯ ಮರಳು ಬ್ಲಾಕ್‍ಗಳನ್ನು ಗುರುತಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಕೆಎಸ್‍ಎಂಸಿಎಲ್, ಹೆಚ್‍ಜಿಎಂಎಲ್ ವತಿಯಿಂದ ನಾಲ್ಕು, ಐದು ಮತ್ತು ಆರನೆ ಶ್ರೇಣಿಯ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮರಳು ಬ್ಲಾಕ್‍ಗಳನ್ನು ಗುರುತಿಸಿ, ಅಧಿಸೂಚನೆ ಹೊರಡಿಸಿ, ಕಾರ್ಯಾದೇಶ ನೀಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಇದು ಏಕೆ ಸಾಧ್ಯವಾಗಿಲ್ಲ. ಕೂಡಲೇ ಬ್ಲಾಕ್ ಗುರುತಿಸುವ ಕಾರ್ಯ ಮಾಡಿ ಎಂದು ಸೂಚಿಸಿದರು.

    ಡ್ರೋನ್ ಮೂಲಕ ಸಮೀಕ್ಷೆ ನಡೆಸಬೇಕು. ಹೊಸದಾಗಿ ಟೆಂಡರ್ ಕರೆಯುವುದು ಅಥವಾ ಮರು ಟೆಂಡರ್ ಕರೆದಾದರೂ ಬ್ಲಾಕ್‍ಗಳನ್ನು ಗುರುತಿಸಬೇಕು. ಸಬೂಬು ಹೇಳಬೇಡಿ ಎಂದು ನಿರಾಣಿ ತಾಕೀತು ಮಾಡಿದರು. ಈಗಾಗಲೇ ನೂತನ ಮರಳು ನೀತಿ ಸಿದ್ಧವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಅದಷ್ಟು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ. ಇದು ದೇಶಕ್ಕೆ ಮಾದರಿಯಾದ ನೀತಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

    ಗಣಿಬಾಧಿತ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾ ಅದಿರು ನಿಧಿಯಿಂದ ದೊಡ್ಡ ಯೋಜನೆಗಳನ್ನು ರೂಪಿಸಲು ವಿಸ್ತೃತ ಯೋಜನ ವರದಿ(ಡಿಪಿಆರ್) ಸಿದ್ಧಪಡಿಸಲು ಸಚಿವ ನಿರಾಣಿ ಸೂಚಿಸಿದರು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಮತ್ತಿತರರ ಜೊತೆ ಪ್ರತ್ಯೇಕವಾಗಿ ವೀಡಿಯೋ ಸಂವಾದ ನಡೆಸಿದ ಅವರು, ಕೂಡಲೇ ಡಿಪಿಆರ್ ಸಿದ್ಧಪಡಿಸಲು ನಿದೇರ್ಶನ ನೀಡಿದರು. ಈ ಮೂರು ಜಿಲ್ಲೆಗಳಲ್ಲಿ ಡಿಎಂಎಫ್ ನಿಧಿಯಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲೀಕರಣ, ಸಮುದಾಯ ಭವನ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಇದೆ. ಡಿಎಂಎಫ್ ನಿಧಿ ಬಳಕೆ ಮಾಡಿಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು. ವಿಶೇಷವಾಗಿ ಚಿತ್ರದುರ್ಗ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಜಾರಿ ಮಾಡುವ ಕುರಿತಾಗಿ ಡಿಪಿಆರ್ ಸಿದ್ಧಪಡಿಸಬೇಕೆಂದು ಹೇಳಿದರು. ಇದಕ್ಕೆ ಸಮ್ಮತಿಸಿದ ಮೂರು ಜಿಲ್ಲೆಗಳ ಅಧಿಕಾರಿಗಳು ಆದಷ್ಟು ಶೀಘ್ರ ಇಲಾಖೆಗೆ ವಿಸ್ತøತ ಯೋಜನಾ ವರದಿ ಸಿದ್ಧಪಡಿಸುವುದಾಗಿ ತಿಳಿಸಿದರು.

  • ಕೋವಿಡ್ 3ನೇ ಅಲೆ ತಪ್ಪಿಸಲು ಸಿದ್ಧತೆ ಕೈಗೊಳ್ಳಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗಳಿಗೆ ಸೂಚನೆ

    ಕೋವಿಡ್ 3ನೇ ಅಲೆ ತಪ್ಪಿಸಲು ಸಿದ್ಧತೆ ಕೈಗೊಳ್ಳಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗಳಿಗೆ ಸೂಚನೆ

    – ಟೆಲಿಕನ್ಸಲ್ಟೇಷನ್ ಮೂಲಕ ಮಕ್ಕಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ
    – ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ರೀಫಿಲಿಂಗ್ ಸೌಲಭ್ಯ ವ್ಯವಸ್ಥೆ
    – ಸಹಾಯವಾಣಿ ಆರಂಭ

    ಕಲಬುರಗಿ: ರಾಜ್ಯದಲ್ಲಿ 3ನೇ ಕೋವಿಡ್-19 ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದೆಂಬ ತಜ್ಞರ ಸಲಹೆಯಂತೆ ಜಿಲ್ಲಾಡಳಿತವು ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಂಭಾವ್ಯ ದಾಳಿಯನ್ನು ತಪ್ಪಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಸೂಚಿಸಿದರು.

    ಸೋಮವಾರ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋವಿಡ್ -19 2ನೇ ಅಲೆಯನ್ನು ಯಾವ ರೀತಿ ಯಶಸ್ವಿಯಾಗಿ ನಿಭಾಯಿಸಲಾಯಿತೊ ಅದೇ ಮಾದರಿಯಲ್ಲೂ 3ನೇ ಅಲೆಯನ್ನು ಎದುರಿಸಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಮೂರನೇ ಕೋವಿಡ್ ಅಲೆಯ ಕಾರ್ಯಪಡೆ ಅಧ್ಯಕ್ಷರಾದ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿಯು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ. ಇದನ್ನು ತಡೆಗಟ್ಟುವುದು ಜಿಲ್ಲಾಡಳಿತದ ಮೊದಲ ಕರ್ತವ್ಯ ಎಂದು ಸಲಹೆ ಮಾಡಿದರು.

    ಮಕ್ಕಳಿಗೆ ಸೋಂಕು ಹೆಚ್ಚು ತಗಲಬಹುದೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಹೀಗಾಗಿ ತಕ್ಷಣವೇ ಜಿಲ್ಲಾದ್ಯಂತ ಪ್ರತ್ಯೇಕ ಮಕ್ಕಳ ವಿಭಾಗ ಸ್ಥಾಪನೆ, ಆಸ್ಪತ್ರೆಯಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ರೀಫಿಲಿಂಗ್ ಸೌಲಭ್ಯ, 50 ಎಲ್‍ಪಿಎಂ ಲಿಕ್ವಿಡ್ ಆಕ್ಸಿಜನ್ ಜನರೇಟರ್ ಘಟಕಗಳನ್ನು ಸ್ಥಾಪಿಸಲು ಮುಂದಾಗಬೇಕು, 50 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಜೊತೆಗೆ ಅಗತ್ಯ ಜಂಬು ಸಿಲಿಂಡರ್ ಗಳನ್ನು ಇಟ್ಟುಕೊಳ್ಳಬೇಕೆಂದು ಅಧಿಕಾರಿಗಲಿಗೆ ನಿರ್ದೇಶಿಸಿದರು. ಹೆಚ್ಚಿನ ಭಾಗದಲ್ಲಿ ಮಕ್ಕಳಿಗೆ ಸೋಂಕು ತಗಲುಗುವ ಮಕ್ಕಳ ಚಿಕಿತ್ಸೆಗೆ ಬೆಡ್‍ಗಳ ಸಂಖ್ಯೆ ಹೆಚ್ಚಳ ಮಾಡುವುದು. ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಸ್‍ಎನ್‍ಸಿಯು ಘಟಕವನ್ನು ಸಂಪೂರ್ಣವಾಗಿ ಮಕ್ಕಳಿಗೆ ಮೀಸಲಿಡಬೇಕೆಂದು ತಾಕೀತು ಮಾಡಿದರು.

    ಅಗತ್ಯಕ್ಕೆ ಅನುಗುಣವಾಗಿ 500 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಗಳನ್ನುಬಳಸಿಕೊಂಡು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮುಂದಿನ ಎರಡು ವಾರದೊಳಗೆ ಪೋಷಣಾ ಪುನರ್ವಸತಿ ಕೇಂದ್ರ ಸ್ಥಾಪನೆ, ಟೆಲಿಕನ್ಸಲ್ಟೇಷನ್ ಸೇವೆ, ತಾಲೂಕು ಆಸ್ಪತ್ರೆಗಳಿಗೆ ಜಿಲ್ಲಾಸ್ಪತ್ರೆ ಮತ್ತು ಇಎಸ್‍ಐ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರನ್ನು ನೇಮಿಸುವುದು, ಅಗತ್ಯವಿರುವ ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೆ ಪಾಲನೆ ಮಾಡಬೇಕು. ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ, ಕರಪತ್ರಘಿ ಸೇರಿದಂತೆ ಬೇರೆ ಬೇರೆ ವಿಭಾಗದಿಂದಲೂ ಸಾರ್ವಜನಿಕರಲ್ಲಿ ಜನಜಾಗೃತಿಯನ್ನು ಮೂಡಿಸುವಂತೆಯೂ ಸಚಿವರು ಕಿವಿಮಾತು ಹೇಳಿದರು.

    ಜಿಲ್ಲಾಧಿಕಾರಿ ವಿ.ವಿ.ಜೋಸ್ನಾ, ನಗರ ಪೊಲೀಸ್ ಆಯುಕ್ತ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯನ್ ಜಾರ್ಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲಿಶಾ ಸಾಸಿ, ಮಹಾನಗರ ಪಾಲಿಕೆ ಆಯುಕ್ತ ಲೋಕಲ್‍ಡೇ ಸ್ನೇಹಲ್ ಸುಧಾಕರ್, ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕವಿತಾ ಪಾಟೀಲ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪಘಿ ಗಣಜಲಖೇಡ, ಇಎಸ್‍ಐಡಿನ್ ಡಾ.ಇವಾನೊಲೊಗೊ ಸೇರಿದಂತೆ ಮತ್ತಿತರ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ನಿರಾಣಿ ತಿಳಿಸಿದರು.

    7 ಆಸ್ಪತ್ರೆಗಳು ಸಿದ್ಧ:
    ಮಕ್ಕಳಿಗೆ ಉಂಟಾಗಬಹುದಾದ 3ನೇ ಅಲೆ ಕೋವಿಡ್ ಅಲೆಯನ್ನು ತಪ್ಪಿಸಲು ಕಲಬುರಗಿ ಜಿಲ್ಲಾಡಳಿತ ನಗರದಲ್ಲಿ ತಾತ್ಕಾಲಿಕವಾಗಿ 7 ಮಕ್ಕಳ ಆಸ್ಪತ್ರೆಗಳನ್ನು ಗುರುತಿಸಿದೆ. ನಗರದಲ್ಲಿರುವ 15 ಆಸ್ಪತ್ರೆಗಳ ಪೈಕಿ ಈಗಾಗಲೇ 7 ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ 2ರಿಂದ 3 ಹೆಚ್ಚುವರಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ವಾಣಿಶ್ರೀ ಪಾಟೀಲ್ ಅವರ ಸಲಹೆ ಮೇರೆಗೆ ಜಿಲ್ಲೆಯಾದ್ಯಂತ 90 ಪೀಡಿಯಾಟ್ರಿಶಿಯನ್‍ಗಳನ್ನು ಗುರುತಿಸಲಾಗಿದೆ. ಈಗಾಗಲೇ ಇವರೆಲ್ಲರಿಗೂ ವೆಬಿನಾರ್ ಮೂಲಕ ಮಕ್ಕಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ, ಜುಲೈ 6ರವರೆಗೆ 11 ಲಕ್ಷ ಸಸಿ ನೆಡಲು ಯೋಜನೆ: ರವಿಕುಮಾರ್

    ಸಹಾಯವಾಣಿ ಆರಂಭ:
    ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಣೆಗಾಗಿ ಜಿಲ್ಲಾಡಳಿತ 144499 ಟೋಲ್ ಫ್ರೀ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಮಕ್ಕಳಲ್ಲಿ ವಾಂತಿ, ಬೇಧಿ, ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣವೇ ಪೋಷಕರು ಈ ಸಂಖ್ಯೆಗೆ ಕರೆ ಮಾಡಿದರೆ ನುರಿತ ವೈದ್ಯರು ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಕೋವಿಡ್ ಮೊದಲನೇ ಅಲೆಯಲ್ಲಿ 22,007 ಸೋಂಕಿತರ ಪೈಕಿ 3149 ಹಾಗೂ 2ನೇ ಅಲೆಯಲ್ಲಿ 31,226 ಪೈಕಿ 5019 ಮಕ್ಕಳು ಸೋಂಕಿಗೆ ಸಿಲುಕಿದ್ದರು. 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾದ್ಯಂತ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ, ಕಾಲೇಜು ತೆರೆಯಿರಿ – ತಜ್ಞರ ವರದಿಯಲ್ಲಿ ಏನಿದೆ?

  • ನಾನು ಸಿಎಂ ರೇಸ್‍ನಲ್ಲಿ ಇಲ್ಲ: ಮುರುಗೇಶ್ ನಿರಾಣಿ

    ನಾನು ಸಿಎಂ ರೇಸ್‍ನಲ್ಲಿ ಇಲ್ಲ: ಮುರುಗೇಶ್ ನಿರಾಣಿ

    ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಿಎಂ ರೇಸ್ ನಲ್ಲಿ ಮುರುಗೇಶ್ ನಿರಾಣಿ ಹೆಸರು ಕೇಳಿ ಬಂದ ವಿಚಾರಕ್ಕೆ ಸಂಬಂಧಿಸಿದ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

    ಸರ್ಕಾರಿ ವಸತಿ ಗೃಹದಲ್ಲಿ ಸಚಿವ ಶಿವರಾಂ ಹೆಬ್ಬಾರ್ ಭೇಟಿ ಬಳಿಕ ಮಾತನಾಡಿದ ಮುರುಗೇಶ್ ನಿರಾಣಿ, ಸಿಎಂ ರೇಸ್ ನಲ್ಲಿ ನಾನಿಲ್ಲ. ನಾನು ಸಿಎಂ ಆಕಾಂಕ್ಷಿ ಅಲ್ಲ. ಮಾಧ್ಯಮದವರೇ ನನ್ನ ಹೆಸರನ್ನ ಹೇಳುತ್ತಿರುವುದು. ನಾನು ಪಕ್ಷದ ಶಿಸ್ತಿನ ಸಿಪಾಯಿ ಹೈಕಮಾಂಡ್ ನನಗೆ ಕೊಟ್ಟ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇನೆ. ಅಲ್ಲದೆ ಯಡಿಯೂರಪ್ಪನವರೆ ಮುಂದಿನ ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು. ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

    ಈಗಾಗಲೇ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅಂತ ಹೇಳಿದ್ದಾರೆ. ನಾನು ಅದನ್ನೇ ಹೇಳಿದ್ದೇನೆ. ನಾನು ಪರ – ವಿರೋಧದ ಹೇಳಿಕೆ ನೀಡಲ್ಲ. ಸಚಿವನಾಗಿ ಕೆಲಸ ಮಾಡ್ತಾ ಇದ್ದೇವೆ. ಅರುಣ್ ಸಿಂಗ್ ಸಹ ಕೆಲವು ಸೂಚನೆ ಕೊಟ್ಟಿದ್ದಾರೆ. ಅವರ ಭೇಟಿ ವೇಳೆಯೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಪಕ್ಷವನ್ನ ಮುಂದೆ ಅಧಿಕಾರಕ್ಕೆ ತರಲು ಎಫೆಕ್ಟ್ ಆಗಿ ಕೆಲಸ ಮಾಡಿ. ಜನರ ಕೆಲಸ, ಜಿಲ್ಲೆ ಜವಬ್ದಾರಿ ಅಚ್ಚುಕಟ್ಟಾಗಿ ಮಾಡಿ ಅಂತ ಹೇಳಿದ್ದಾರೆ. ಅದರಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲೂ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

  • ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

    ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

    ಹುಬ್ಬಳ್ಳಿ: ಕಲಘಟಗಿ ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದೂವರೆ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ ಉದ್ಯೋಗ ಬೇರೆ ರಾಜಕಾರಣ ಬೇರೆ, ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ.

    ನಗರದ ಹನ್ನೆರಡು ಮಠದಲ್ಲಿ ತಾಲೂಕಿನ ರೈತರ ಸಭೆಯಲ್ಲಿ ಮಾತನಾಡಿದ ನಿರಾಣಿ, ತಾಲೂಕಿನ ರೈತರು ಷೇರು ಸಂಗ್ರಹಿಸಿ ಉಳಿದ ಎಷ್ಟೇ ಹಣ ಖರ್ಚಾದರೂ ನಾನು ಸ್ವಂತ ದುಡ್ಡು ಹಾಕಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಡುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಂತಾಗುತ್ತದೆ. 12,200 ಎಕರೆ ಕಬ್ಬು ಕಲಘಟಗಿಯಲ್ಲಿ ಬೆಳೆಯುತ್ತಿದೆ ಒಂದು ತಿಂಗಳು ಸಮಯ ತೆಗೆದುಕೊಳ್ಳಿ ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಗುದ್ದಲಿ ಪೂಜೆ ಮಾಡಲು ಮುಂದಾಗೋಣ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಪ್ರಯತ್ನ- ಹುಬ್ಬಳ್ಳಿಯಲ್ಲಿ 2 ರೂ.ಗೆ ಸಿಗುತ್ತೆ ಸರ್ಜಿಕಲ್ ಮಾಸ್ಕ್!

    ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ. ಉದ್ಯೋಗ ಬೇರೆ ರಾಜಕಾರಣ ಬೇರೆ ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ನಿಮಗೆ ತಿಳಿದವರಿಗೆ ಮತಹಾಕಿ ಯಾವುದೇ ಪಕ್ಷ ಬೇಧವಿಲ್ಲದೆ ತಾಲೂಕಿನ ರೈತರು ಕಾರ್ಖಾನೆ ಸ್ಥಾಪಿಸುವಲ್ಲಿ ಸರ್ಕಾರದೊಂದಿಗೆ ಸಹಕಾರ ನೀಡಬೇಕು. ಆಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಶಾಸಕ ಸಿಎಂ ನಿಂಬಣ್ಣವರ್ ಮುಂದಾಳತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡೋಣ ನನ್ನ ಒಡೆತನದಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು ಭಾರತ ದೇಶದಲ್ಲಿ 2ನೇ ಸ್ಥಾನ ನಮಗೆ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.

    ಮನಸಿದ್ದರೆ ಮಾರ್ಗ ಮೊದಲು ಸಕ್ಕರೆ ಕಾರ್ಖಾನೆ ಮಾಡುವ ಸಂದರ್ಭದಲ್ಲಿ ಮನೆಯ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿ ಮನೆಯಿಂದ ಹೊರ ಹಾಕಿದರು. ಆದರೆ ಛಲಬಿಡದೆ ಎಲ್ಲ ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ ನಂತರ ದಿನಗಳಲ್ಲಿ ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ ಮೈಸೂರು ಭಾಗದಲ್ಲಿ ಕೂಡ ನನ್ನದೇ ಒಡೆತನದ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಉತ್ತರ ಕರ್ನಾಟಕದವರು ಯಾವುದು ಕಡಿಮೆ ಇಲ್ಲ ಎಂಬ ಹೆಗ್ಗಳಿಕೆ ಗಳಿಸಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಸೌಹಾರ್ದ ಬ್ಯಾಂಕ್ ಸಿಮೆಂಟ್ ಫ್ಯಾಕ್ಟರಿ ಹಾಗೂ ನಿರಾಣಿ ಉದ್ದಿಮೆ ಸಂಸ್ಥೆ ಸೇರಿದಂತೆ ಸುಮಾರು 72 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮದುವೆ ದಿಬ್ಬಣ ಹೊರಟಿದ್ದ ಟಾಟಾ ಏಸ್ ಪೊಲೀಸರ ವಶಕ್ಕೆ

    ನಂತರ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಕಚ್ಚಾವಸ್ತು ಭೂಮಿ, ನೀರು, ವಾಹನ ಸೌಕರ್ಯ, ಕೆಲಸ ಮಾಡುವ ಪರಿಣಿತ ನೌಕರರು ಇದ್ದರೆ ಮಾತ್ರ ಉದ್ಯಮವನ್ನು ಪ್ರಾರಂಭ ಮಾಡಲು ಸಾಧ್ಯವಾಗುತ್ತದೆ. ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಏನು ಸಾಧಿಸಬೇಕು ಎಂಬುದನ್ನು ನಿರಾಣಿ ಅವರು ಉದ್ಯಮದ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದರು.

    ಶಾಸಕ ನಿಂಬಣ್ಣವರ್ ಮಾತನಾಡಿ ಮತಕ್ಷೇತ್ರದ ದೀರ್ಘಕಾಲದ ಬೇಡಿಕೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬುದು, ಈ ಕನಸು ಈಗ ಸಾಕಾರಗೊಳ್ಳಲಿದೆ. ತಾಲೂಕಿನ ರೈತರು ಸಹಕಾರ ಅಗತ್ಯವಾಗಿದೆ ಇದರಿಂದ ತಾಲೂಕಿನ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಯಾಗುತ್ತದೆ. ನನ್ನ ಅವಧಿ ಮುಗಿಯುವುದರೊಳಗೆ ಮತಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕು ಎಂಬುದು ನನ್ನ ಆಶಯ ಎಂದು ನುಡಿದರು.

    ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ನಿಂಗಪ್ಪ ಸುತ್ತುಗಟ್ಟಿ, ಗೀತಾ ಮರಲಿಂಗಣ್ಣವರ, ಚಂದ್ರಗೌಡ ಪಾಟೀಲ್, ನರೇಶ್ ಮಲ್ನಾಡ, ಸೋಮು ಕೂಪ್ಪದ, ಮಹಾಂತೇಶ್ ಹೆಂಬ್ಲಿ, ಎಸ್ ಎಂ ಚಿಕ್ಕಣ್ಣವರ, ವಿ.ಎಸ್ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

  • ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ – ಮುಖ್ಯಮಂತ್ರಿಗಳ ಸಂತಾಪ

    ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ – ಮುಖ್ಯಮಂತ್ರಿಗಳ ಸಂತಾಪ

    – ಎಸ್‍ಟಿಎಸ್, ಮುರುಗೇಶ್ ನಿರಾಣಿಯಿಂದಲೂ ಸಂತಾಪ

    ಬೆಂಗಳೂರು/ಮೈಸೂರು: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಪೂರ್ವಾಶ್ರಮದ ಮಾತೃಶ್ರೀ ಶಿವನಾಗಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಸ್.ಟಿ ಸೋಮಶೇಖರ್, ಮುರುಗೇಶ್ ನಿರಾಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಧ್ಯಾತ್ಮಿಕ ಸಾಧನೆಯಲ್ಲಿ ಶಿವವನಾಗಮ್ಮ ಅವರು ಗಾಢ ಪ್ರಭಾವ ಬೀರಿದ್ದರು. ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ತಮ್ಮ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದರು. ಮತೃರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಸೋಮಶೇಖರ್ ಸಂತಾಪ:
    ಸುತ್ತೂರು ಶ್ರೀಗಳ ಪೂರ್ವಶ್ರಮದ ಮಾತೃಶ್ರೀ ಶಿವನಾಗಮ್ಮನವರು ಲಿಂಗೈಕ್ಯರಾದದ್ದು ತುಂಬಾ ನೋವಿನ ಸಂಗತಿ. ಸುಮಾರು 90 ವರ್ಷಗಳು ಸಾರ್ಥಕವಾಗಿ ಬದುಕಿ ಬಾಳಿದವರು ಅವರು. ವಕೀಲರಾಗಿದ್ದ ದಿವಂಗತ ಎಸ್.ಎಂ. ಪ್ರಭುಸ್ವಾಮಿಯವರ ಶ್ರೀಮತಿಯಾಗಿ ತಮ್ಮ 6 ಜನ ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟು ಸಮಾಜಕ್ಕೆ ಆಸ್ತಿಯಾಗಿ ಬೆಳೆಸಿದರು. ಶಿವನಾಗಮ್ಮ ಅವರ ಲಿಂಗೈಕ್ಯದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಎಸ್‍ಟಿ ಸೋಮಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಹೇಶ್ವರಯ್ಯ ನಿಧನ

    ಮುರುಗೇಶ್ ನಿರಾಣಿ ಸಂತಾಪ:
    ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ಮಾತೃಶೀ ಶ್ರೀಮತಿ ಶಿವನಾಗಮ್ಮ ಅವರಿಂದ ಪ್ರೇರೇಪಣೆ ಪಡೆದು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಾರಣೀಭೂತರಾಗಿದ್ದರು ಎಂದು ಸ್ಮರಿಸಿದ್ದಾರೆ. ಸುತ್ತೂರು ಶ್ರೀಗಳು ಶಿಕ್ಷಣ, ಅನ್ನದಾಸೋಹ, ಆರೋಗ್ಯ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗೆ ಶಿವವನಾಗಮ್ಮ ಅವರ ಮಾರ್ಗದರ್ಶನ ಕಾರಣವಾಗಿತ್ತು. ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ಶ್ರೀಗಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದ ಅಪರೂಪದ ಮಹಾನ್ ತಾಯಿ ಎಂದು ಬಣ್ಣಿಸಿದ್ದಾರೆ. ಮತೃರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ನಿರಾಣಿ ಅವರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

    ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ಶಿವನಾಗಮ್ಮ(90) ಇಂದು ಮುಂಜಾನೆ ಮೈಸೂರಿನ JSS ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.

  • ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸಲು ಸಿಎಂಗೆ ನಿರಾಣಿ ಮನವಿ

    ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸಲು ಸಿಎಂಗೆ ನಿರಾಣಿ ಮನವಿ

    ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ನಾಲ್ವಡಿ ಕೃಷ್ಣರಾಜ ಒಡೆಯರ್ ‌ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ನಿರಾಣಿ ಅವರು, ಮುಂದಿನ ಯುವಜನಾಂಗಕ್ಕೆ ಇದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ‌ಪದವಿ ಕಾಲೇಜುಗಳ ಪಠ್ಯ ಪುಸ್ತಕದಲ್ಲಿ ಅವರ ಚರಿತ್ರೆಯನ್ನು ಆಳವಡಿಸಲು ಕ್ರಮಕೈಗೊಳ್ಳಬೇಕು. ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ಎಂಜಿನಿಯರ್ ‌ ದಿನಾಚರಣೆ ಮಾಡಿದಂತೆ ಇನ್ನು ಮುಂದೆ ಜೂನ್ 4 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ‌ದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಅನೇಕ ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದ ಅವರ ದಿನಾಚರಣೆಯನ್ನು ‘ಕೈಗಾರಿಕಾ ದಿನಾಚರಣೆ’ ಎಂದು ಆಚರಿಸಲು ಸೂಕ್ತವಾದ ‌ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದ ಪೆಟ್ರೋಲ್ ಬೆಲೆ

    ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆ, ಪಠ್ಯಪುಸ್ತಕಗಳಲ್ಲಿ ಜೀವನ ಚರಿತ್ರೆ ಅಳವಡಿಕೆ, ಕೈಗಾರಿಕಾ ಹಾಗೂ ಪ್ರತಿ ವರ್ಷ ಜೂನ್ 4 ರಂದು ಜ‌ನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಣೆ ಮಾಡುವಂತೆ ಕೋರಿದ್ದಾರೆ.

    ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ‌ಅವರ ಪ್ರತಿಮೆಯನ್ನು ನಿರ್ಮಿಸಿರುವುದರಿಂದ ದೇಶ – ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅವರ ವ್ಯಕ್ತಿತ್ವವನ್ನು ಪರಿಚಯಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ 1905ರ ಆಗಸ್ಟ್ 3 ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು. ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದು ಒಡೆಯರ್ ಅವರ ಮತ್ತೊಂದು ಮೈಲಿಗಲ್ಲು ಎಂದು ನಿರಾಣಿ ಅವರು ಬಣ್ಣಿಸಿದ್ದಾರೆ. ಇದನ್ನೂ ಓದಿ: ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ 

    ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 27೦ ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗಿ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ನಿರಾಣಿ ಅವರು ಮನವಿ ಮಾಡಿದ್ದಾರೆ.

  • ಕಲಬುರಗಿ ವಿಜನ್-2050: 30 ವರ್ಷದೊಳಗೆ ಕಲಬುರಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ

    ಕಲಬುರಗಿ ವಿಜನ್-2050: 30 ವರ್ಷದೊಳಗೆ ಕಲಬುರಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ

    ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ಜಿಲ್ಲೆಯನ್ನು ಮುಂದಿನ 30 ವಷ9ದೊಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಸದುದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ “ಕಲಬುರಗಿ ವಿಜನ್-2050” ಎಂಬ ವಿನೂತನ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದಿರುವ ಕಲಬುರಗಿ ಜಿಲ್ಲೆಯನ್ನು ಇನ್ನು ಮೂರು ದಶಕದೊಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಪಡಿಸಲು ಕಲಬುರಗಿ ವಿಜನ್-2050 ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಒಂದು ಜಿಲ್ಲೆಯನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಲು ಹಾಕಿಕೊಂಡಿರುವ ಯೋಜನೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಕಲಬುರಗಿಯಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.

    “ಕಲಬುರಗಿ ವಿಜನ್-2050” ನಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮುಂತಾದ ಕ್ಷೇತ್ರಗಳ 15 ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಸ್ಥಳೀಯ ಶಾಸಕರು, ನಿವೃತ್ತಿ ಹೊಂದಿದವರು, ಆಯಾ ಕ್ಷೇತ್ರಗಳಲ್ಲಿ ಅನುಭವ-ಪರಿಣತಿ ಹೊಂದಿರುವವರು ಸೇರಿಸಿಕೊಳ್ಳಲಾಗುವುದು. ಆಯಾ ಇಲಾಖೆಯ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ಆಯಾ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳನ್ನಾಗಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

    ಈ ಎಲ್ಲಾ ಸಮಿತಿಯ ಅಧ್ಯಕ್ಷರುಗಳು ಪ್ರಧಾನ ಸಮಿತಿ ಸದಸ್ಯರಾಗಿರುತ್ತಾರೆ. ಪ್ರಧಾನ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಮುಂತಾದವರು ಸದಸ್ಯರಿರುತ್ತಾರೆ ಎಂದು ವಿವರಿಸಿದರು.

    ಎಲ್ಲಾ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸುವುದರ ಜೊತೆಗೆ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜಿಲ್ಲೆಗೆ ಪೂರಕವಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಅನುಷ್ಠಾನ ಮಾಡುವುದು ಇದರ ಉದ್ದೇಶ ಎಂದರು.

    ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಗುಡಿ, ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತದೆ ಎಂದರು ನಿರಾಣಿ.

    ಯಾವುದೇ ಫಲಾಪೇಕ್ಷೆ ಬಯಸದ ಕಲಬುರಗಿ ಜಿಲ್ಲೆಯ ಬುದ್ಧಿಜೀವಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ರಂಗನಾಥ್, ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಅವರು ಈ ಕಾರ್ಯಕ್ಕೆ ನೆರವಾಗಲು ಮುಂದೆ ಬಂದಿದ್ದಾರೆ ಎಂದು ಸಚಿವರು ಹೇಳಿದರು. ಸಮಿತಿ ರಚನೆಯಾದ ಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖರಿಂದ ಸದಸ್ಯರಿಗೆ ತರಬೇತಿ ಕೊಡಿಸಲಾಗುವುದು ಎಂದರು.

    “ಕಲಬುರಗಿ ವಿಜನ್-2050” ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡುವುದಿದೆ. ಭಾರತ ಸೇರಿದಂತೆ 154 ದೇಶಗಳಲ್ಲಿ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತಿರುವ ಐಎಲ್‍ಅಂಡ್‍ಎಫ್‍ಎಸ್‍ಎಲ್ ಮತ್ತು ಅಮೆರಿಕಾ ಮೂಲದ ಇ ಅಂಡ್ ವೈ ಕಂಪನಿಗಳಿಂದ ಕಲಬುರಗಿ ಅಭಿವೃದ್ಧಿ ಸಲುವಾಗಿ ಸೇವೆ ಪಡೆಯುವ ನಿಟ್ಟಿನಲ್ಲಿ ಅಲೋಚಿಸಲಾಗಿದೆ ಎಂದು ಅವರು ಹೇಳಿದರು.

    ಕಲಬುರಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸರಿಸಬೇಕಿದೆ. ಕಲ್ಯಾಣ ಕರ್ನಾಟಕ ಎಂಬ ಹೆಸರು ಕೇವಲ ನಾಮಕರಣ ಎಂಬುದಕ್ಕೆ ಸೀಮಿತವಾಗದೆ, ಅಭಿವೃದ್ಧಿಯ ವಸ್ತುಸ್ಥಿತಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು. ತಮ್ಮ ಸ್ವಕ್ಚೇತ್ರ ಬಾಗಲಕೋಟೆಯ ಬೀಳಗಿಯಲ್ಲಿ ಶಿಕ್ಷಣ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದ ಅವರು, “ಕಲಬುರಗಿ ವಿಜನ್-2050”ಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಏಳ್ಗೆ ಸಾಧಿಸಬಹುದಾಗಿದೆ ಎಂದು ಒತ್ತಿ ಹೇಳಿದರು.

    ನೀರಿನ ವ್ಯವಸ್ಥೆ, ಲೈಮ್ ಸ್ಟೋನ್ ಗಳಿಂದ ಕಲಬುರಗಿ ಜಿಲ್ಲೆ ಶ್ರೀಮಂತವಾಗಿದೆ. ಆದರೆ, ಉದ್ದಿಮೆಗಳಿಗೆ ಇವುಗಳನ್ನು ಬಳಸಿಕೊಂಡು ಕರ್ನಾಟಕದ ಹೊರಗಿನವರು ಇಲ್ಲಿ ಅಭಿವೃದ್ಧಿಯಾಗುತ್ತಿದ್ದಾರೆ. ಜಿಲ್ಲೆಯ ಎಂಬಿಎ, ಎಂಟೆಕ್, ಪಿಎಚ್‍ಡಿ ಪದವೀಧರರಿಗೆ ಸಣ್ಣ-ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಕೊಟ್ಟರೆ, ಮುಂದಿನ ದಿನ 10-20 ವರ್ಷಗಳಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಲಿದ್ದಾರೆ ಎಂದು ಹೇಳಿದರು.

  • ಕೋವಿಡ್ -19 ಪರಿಹಾರ ನಿಧಿಗೆ 5 ಕೋಟಿ ದೇಣಿಗೆ ನೀಡಿದ ಸಿಮೆಂಟ್ ಉದ್ಯಮಿಗಳು

    ಕೋವಿಡ್ -19 ಪರಿಹಾರ ನಿಧಿಗೆ 5 ಕೋಟಿ ದೇಣಿಗೆ ನೀಡಿದ ಸಿಮೆಂಟ್ ಉದ್ಯಮಿಗಳು

    – ಸಚಿವ ನಿರಾಣಿ ಮನವಿಗೆ ಸ್ಪಂದಿಸಿದ ಉದ್ದಿಮೆದಾರರು
    – ಅಗತ್ಯ ವೈದ್ಯಕೀಯ ಸೌಲಭ್ಯಕ್ಕೆ ಬಳಕೆ

    ಕಲಬುರಗಿ: ಕೋವಿಡ್ -19 ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಜಿಲ್ಲೆಯ ಸೋಂಕಿತರ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು 5 ಕೋಟಿ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.

    ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು, ಜಿಲ್ಲೆಯ ಸಿಮೆಂಟ್ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದರು.

    ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಸೋಂಕಿನ ಸ್ಥಿತಿಗತಿ, ಸೋಂಕು ತಗಲಿರುವ ಪ್ರಮಾಣ, ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರು, ಹೋಂ ಕ್ವಾರೆಂಟೆನ್ ಗೆ ಒಳಗಾಗಿರುವವರು, ಆಕ್ಸಿಜನ್ ಪೂರೈಕೆ, ಐಸಿಯು ಬೆಡ್ ಸಾಮಾನ್ಯ ಬೆಡ್ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೋಂಕಿತರಿಗೆ ಅಗತ್ಯವಾಗಿರುವ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು ಮುಂದೆ ಬರುವಂತೆ ಸಚಿವ ನಿರಾಣಿ ಅವರು ಮನವಿ ಮಾಡಿಕೊಂಡರು.

    ಇದಕ್ಕೆ ತಕ್ಷಣ ಸ್ಫಂದಿಸಿದ ವಿವಿಧ ಸಿಮೆಂಟ್ ಉದ್ಯಮಿದಾರರು ಸೋಂಕಿತರ ಚಿಕಿತ್ಸಾ ನೆರವಿಗೆ 5 ಕೋಟಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

  • ದಲಿತ ಮಹಿಳೆಯನ್ನು ಮ್ಯಾನ್ ಹೋಲ್‍ಗೆ ಇಳಿಸಿದ PSSK ಕಾರ್ಖಾನೆ ಅಧಿಕಾರಿಗಳು

    ದಲಿತ ಮಹಿಳೆಯನ್ನು ಮ್ಯಾನ್ ಹೋಲ್‍ಗೆ ಇಳಿಸಿದ PSSK ಕಾರ್ಖಾನೆ ಅಧಿಕಾರಿಗಳು

    – ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಕಾರ್ಖಾನೆ

    ಮಂಡ್ಯ: ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಪಾಂಡವಪುರದ ಪಿಎಸ್‍ಎಸ್‍ಕೆ ಕಾರ್ಖಾನೆಯ ಅಧಿಕಾರಿಗಳು ದಲಿತ ಮಹಿಳೆಯನ್ನು ಬಲವಂತವಾಗಿ ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛ ಮಾಡಿಸಲಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್‍ಎಸ್‍ಕೆ ಕಾರ್ಖಾನೆಯ ಕ್ವಾಟರ್ಸ್ ನಲ್ಲಿನ ಒಣ ಮಲ ಗುಂಡಿಗೆ ಇಳಿದು ಸ್ವಚ್ಛ ಮಾಡು ಎಂದು ಕಾರ್ಖಾನೆಯ ಸಿವಿಲ್ ಇಂಜಿನಿಯರ್ ನಾಗೇಶ್ ಹೇಳಿದ್ದಾರೆ ಎನ್ನಲಾಗಿದೆ. ಮಂಜುಳಾ ಅಧಿಕಾರಿಗಳ ಒತ್ತಡಕ್ಕೆ ಮಣಿದು ಮ್ಯಾನ್ ಹೋಲ್‍ಗೆ ಇಳಿದು ಸ್ವಚ್ಛಗೊಳಿಸಿದ್ದಾರೆ.

    ಇದೀಗ ದಲಿತ ಮಹಿಳೆ ಅಧಿಕಾರಿಗಳು ನನ್ನ ಬಲಂವತವಾಗಿ ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛ ಮಾಡಿಸಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಸಿ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

  • ಕಲಬುರಗಿಯಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ: ನಿರಾಣಿ

    ಕಲಬುರಗಿಯಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ: ನಿರಾಣಿ

    – 2 ಎಕರೆ ಜಮೀನಿನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ
    – ಯೋಜನೆಗೆ ಒಟ್ಟು 26.30 ಕೋಟಿ ವೆಚ್ಚ

    ಬೆಂಗಳೂರು: ಕಲಬುರಗಿ ಜಿಲ್ಲೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ಎಂಎಸ್‍ಕೆ ವಾಣಿಜ್ಯ ಬಡಾವಣೆಯಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿಯವರ ‘ವಿಶೇಷ ಆಸಕ್ತಿಯ’ ಪರಿಣಾಮವಾಗಿ ನಗರದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

    ಈ ಕುರಿತು ಮಾಹಿತಿ ನೀಡಿದ ಸಚಿವ ನಿರಾಣಿ, ಕಲಬುರಗಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಗೊಳಿಸಿರುವ ಎಂಎಸ್‍ಕೆಎಲ್ ವಾಣಿಜ್ಯ ಬಡಾವಣೆಯಲ್ಲಿ ಕಾಯ್ದಿರಿಸಲಾದ ಅಂದಾಜು 2 ಎಕರೆ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನದಲ್ಲಿ ಸುವರ್ಣ ಕರ್ನಾಟಕ ವಾಣಿಜ್ಯ ಮಳಿಗೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

    ನವೆಂಬರ್ 27, 2012ರನ್ವಯ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಕೆಲವು ಕಾರಣಗಳಿಂದ ಯೋಜನೆಯನ್ನು ರದ್ದುಗೊಳಿಸಿ ನಾಗರಿಕ ಸೌಲಭ್ಯದ ನಿವೇಶನದಲ್ಲಿ ಹಲವು ವರ್ಷಗಳಿಂದ ತರಕಾರಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಈಗ ನೂತನ ಮಾದರಿಯ ತರಕಾರಿ ಮಾರುಕಟ್ಟೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ವತಿಯಿಂದ ನೀಡಲಾಗುವ ಅನುದಾನ ಮತ್ತು ಪ್ರಾಧಿಕಾರದ ವತಿಯಿಂದ 26.30 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಲು ಆಯುಕ್ತರು ಸಮ್ಮತಿಸಿದ್ದರು ಎಂದರು.

    ಎಂಎಸ್‍ಕೆ ಮಿಲ್ (ವಾಣಿಜ್ಯ) ಬಡಾವಣೆಗೆ ಹೊಂದಿಕೊಂಡಿರುವ ಅಫ್ಜಲ್‍ಪುರಗೆ ಹೋಗುವ ರಸ್ತೆಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಪ್ರಸ್ತುತ ಕೊರೊನಾ ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ. ರಸ್ತೆ ಬದಿಯ ಚಿಲ್ಲರೆ ವ್ಯಾಪಾರಸ್ಥರನ್ನು ಪ್ರಾಧಿಕಾರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.

    ಈ ಬಡಾವಣೆ ತುಂಬಾ ದೂರವಿದ್ದು, ಸಾರ್ವಜನಿಕರಿಗೆ ಅನಾನೂಕೂಲವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಸುತ್ತಲಿನ ಹಳ್ಳಿಗಳಿಂದ ಬರುವ ರೈತರ ತರಕಾರಿಯನ್ನು ರಸ್ತೆಬದಿ ಮಾರಾಟ ಮಾಡುತ್ತಿರುವುದರಿಂದ ನೂತನವಾಗಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು. 60 ದ್ವಿಚಕ್ರ, 150 ನಾಲ್ಕು ಚಕ್ರ ವಾಹನಗಳ ನಿಲುಗಡೆ, ಲಿಫ್ಟ್, ಸ್ಟೇರ್ ಕೇಸ್, ಟ್ಯಾಂಕ್, ಎಲೆಕ್ಟ್ರಿಕಲ್, ಪೆನೆಲ್ ಕೋಣೆಯನ್ನು ಅಳವಡಿಸಲಾಗಿದೆ. ನೆಲಮಹಡಿಯಲ್ಲಿ ದೊಡ್ಡ, ಸಣ್ಣ ಅಂಗಡಿ, ಫ್ಲಾಟ್‍ಫಾರಂ, ಸಗಟು ವ್ಯಾಪಾರದ ಹರಾಜು ಪ್ರಕ್ರಿಯೆ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಕೋಲ್ಟ್ ಸ್ಟೋರೆಜ್, ಬ್ಯಾಂಕ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.