Tag: Murugesh nirani

  • ಚಿಕ್ಕಮಗಳೂರಿನಲ್ಲಿ ತಲೆ ಎತ್ತಲಿದೆ ಸಾಂಬಾರ್ ಪಾರ್ಕ್

    ಚಿಕ್ಕಮಗಳೂರಿನಲ್ಲಿ ತಲೆ ಎತ್ತಲಿದೆ ಸಾಂಬಾರ್ ಪಾರ್ಕ್

    ಬೆಂಗಳೂರು: ಮಲೆನಾಡು ಜನತೆಯ ಬಹುದಿನಗಳ ಬೇಡಿಕೆಯಾದ ಸಾಂಬಾರ್(ಸ್ಪೈಸ್) ಪಾರ್ಕ್ ಸದ್ಯದಲ್ಲೇ ತಲೆ ಎತ್ತಲಿದ್ದು, ದಶಕಗಳ ಕನಸು ಕೊನೆಗೂ ನನಸಾಗುವ ದಿನ ಸಮೀಪಿಸಿದೆ.

    ಶುಕ್ರವಾರ ರೇಸ್‍ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

    ಚಿಕ್ಕಮಗಳೂರು ಜಿಲ್ಲೆಯ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ ಸಾಂಬಾರು ಪಾರ್ಕ್ ನಿರ್ಮಿಸಲು ಸಭೆ ಒಮ್ಮತದ ತೀರ್ಮಾನವನ್ನು ಕೈಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರವೇಶಾಭಿವೃದ್ಧಿ ನಿಗಮ(ಕೆಐಎಡಿಬಿ)ವು 20,35,665 ರೂ. ಆರ್ಥಿಕ ನೆರವು ನೀಡಲಿದ್ದು, 10 ಎಕರೆ ಜಮೀನನಿನಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಇದನ್ನೂ ಓದಿ: ಈ ಬಾರಿಯೂ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು: ಬಿಎಸ್‍ವೈ

    ಚಿಕ್ಕಮಗಳೂರಿನಲ್ಲಿ ಸಾಂಬಾರ್ ಪಾರ್ಕ್ ನಿರ್ಮಾಣವಾಗಬೇಕೆಂಬುದು ದಶಕಗಳ ಬೇಡಿಕೆಯಾಗಿತ್ತು. ಅದು ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಇತ್ತು. ಇತ್ತೀಚೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಜೊತೆ ಶೋಭಾ ಕರಂದ್ಲಾಜೆ ಅವರು ಮಾತುಕತೆ ನಡೆಸಿದ್ದರು. ಜೊತೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಿಗೆ ಮಾರುಕಟ್ಟೆಯ ದರದಂತೆ ಜಾಗದ 20,35,665 ರೂ. ಪಾವತಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ನಿರಾಣಿಯವರು ಚಿಕ್ಕಮಗಳೂರಿನ ಸೂಕ್ತ ಸ್ಥಳದಲ್ಲಿ ಕೆಐಎಡಿಬಿಯಿಂದ ಜಾಗ ಗುರುತಿಸುವಂತೆ ಸೂಚನೆ ನೀಡಿದ್ದರು.

    ರಾಜ್ಯದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ವಿಶೇಷ ಘಟಕ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಶೋಭಾ ಕರಂದ್ಲಾಜೆ ಅವರ ಮುಂದಿಟ್ಟರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುರುಗೇಶ್ ನಿರಾಣಿ ಅವರು, ಶೀಘ್ರದಲ್ಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ವಿಶೇಷ ಘಟಕವನ್ನು ಆರಂಭಿಸಲಾಗುವುದು. ರೈತರಿಗೆ ಅನುಕೂಲವಾಗಲು ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ ಎಂದು ಪ್ರಕಟಿಸಿದರು.

    ಇದೇ ಸಂದರ್ಭದಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು, ತಮ್ಮ ತವರು ಜಿಲ್ಲೆ ಬಾಗಲಕೋಟೆಯ ಜಮಖಂಡಿ ಉಪವಿಭಾಗದಲ್ಲಿ ಕೃಷ್ಣಾನದಿ ಪ್ರವಾಹದಿಂದ ಉಂಟಾಗಿರುವ ಸವಕಳಿ-ಜವಕಳಿ ಮಣ್ಣು ಕುಸಿದ ಬಗ್ಗೆ ಸಚಿವರ ಗಮನ ಸೆಳೆದರು. ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಬಂದರೆ ಕೃಷ್ಣನದಿ ಉಕ್ಕಿ ಹರಿದು ಜಮಖಂಡಿ ಉಪವಿಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಇದರಿಂದ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಹೋಗಿ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಅವರಿಗೆ ಮನವರಿಕೆ ಮಾಡಿದರು.

    ಅತಿವೃಷ್ಟಿ ಮತ್ತು ಪ್ರವಾಹ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಆಗಬಹುದಾದ ಕೊರಕಲು, ಭೂ ಸವಕಳಿಯಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಹೊಲ ಸಮತಟ್ಟು ಉಳಿಸಲು ರೈತರಿಗೆ ಕೇಂದ್ರದಿಂದ ಅಗತ್ಯ ಪರಿಹಾರ ಒದಗಿಸಲು ಎನ್‍ಡಿಆರ್ ಎಪ್ ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರ ನೀಡುತ್ತಿರುವ ಪರಿಹಾರವು ರೈತರಿಗೆ ಸಾಕಾಗುತ್ತಿಲ್ಲ. ಇದೊಂದು ಶಾಶ್ವತ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರ ಈಗಿರುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಶೋಭಾ ಕರಂದ್ಲಾಜೆ ಅವರು, ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಜೊತೆ ಚರ್ಚಿಸಿ ರೈತರಿಗೆ ಪರಿಹಾರ ಹೆಚ್ಚಳ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

  • ಕೈತಪ್ಪುತ್ತಿರುವ ಪ್ರತಿಷ್ಠಿತ ಯೋಜನೆಗಳು – ಬಿಜೆಪಿಗರಿಗೆ ಚಾಟಿ ಬೀಸಿದ್ರು ಪ್ರಿಯಾಂಕ್ ಖರ್ಗೆ

    ಕೈತಪ್ಪುತ್ತಿರುವ ಪ್ರತಿಷ್ಠಿತ ಯೋಜನೆಗಳು – ಬಿಜೆಪಿಗರಿಗೆ ಚಾಟಿ ಬೀಸಿದ್ರು ಪ್ರಿಯಾಂಕ್ ಖರ್ಗೆ

    ಕಲಬುರಗಿ: ಜಿಲ್ಲೆಯಿಂದ ಒಂದೊಂದೇ ಪ್ರಮುಖ ಹಾಗೂ ಪ್ರತಿಷ್ಠಿತ ಯೋಜನೆಗಳು ಕೈ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರ್‍ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರಕ್ಕೆ ಹಾಗೂ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ರೈಲ್ವೆ ಡಿವಿಷನ್, ಏಮ್ಸ್, ಟೆಕ್ಸ್ ಟೈಲ್ಸ್ ಪಾರ್ಕ್, ಆಹಾರ ಪ್ರಯೋಗಾಲಯ ಹಾಗೂ ಇಂಧನ ಪ್ರಾದೇಶಿಕ ಕಚೇರಿ ಹೋಗಿವೆ. ಇದೀಗ ದಶಕಗಳ ಕಾಲ ಇತಿಹಾಸ ಹೊಂದಿರುವ ದೂರದರ್ಶನ ಕೇಂದ್ರವನ್ನೂ ಕೂಡಾ ಕಲಬುರಗಿಯಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ – 130 ಕೋಟಿ ರೂ. ನಿರೀಕ್ಷೆ

    ರಾಜ್ಯ ಮತ್ತು ಜಿಲ್ಲೆಯಲ್ಲಿ ಇಷ್ಟೆಲ್ಲ ಆಗುತ್ತಿರುವುದು ಯಾರ ಸೋಂಬೇರಿತನದಿಂದ? ಜಿಲ್ಲೆಯು ಜನರದ್ದಾ? ಅಥವಾ ಬಿಜೆಪಿಗರದ್ದಾ? ಎಂದು ಪ್ರಶ್ನಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರ “ಕಲಬುರಗಿ ಜಿಲ್ಲೆಯ ಜನರು ಸೋಂಬೇರಿಗಳು” ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ

  • ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿದೆ  ರೆಸಿಡೆನ್ಶಿಯಲ್ ಟೌನ್‍ಶಿಪ್: ನಿರಾಣಿ

    ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿದೆ ರೆಸಿಡೆನ್ಶಿಯಲ್ ಟೌನ್‍ಶಿಪ್: ನಿರಾಣಿ

    -ಶೇ.10ರಿಂದ 15ರಷ್ಟು ಪ್ರದೇಶವನ್ನು ಮೀಸಲಿಡಲು ಸೂಚನೆ
    -ಸಮಗ್ರ ಕೈಗಾರಿಕಾ ನಿವಾಸಿಗಳ ನಗರ ಪರಿಕಲ್ಪನೆ
    -ವಾಕ್-ಟು-ವರ್ಕ್ ಎಂಬ ಪರಿಕಲ್ಪನೆ

    ಬೆಂಗಳೂರು: ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ ( ರೆಸಿಡೆನ್ಶಿಯಲ್ ಟೌನ್‍ಶಿಪ್)ಗಳ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್ ನಿರಾಣಿ ಅವರು ನಿರ್ಧರಿಸಿದ್ದಾರೆ.

    ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಕಾರ್ಯ ನಿರ್ವಹಣಾಕಾರಿ(ಸಿಇಒ) ಎನ್.ಶಿವಶಂಕರ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಗುರುವಾರ ನಡೆಸಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಸದ್ಯದಲ್ಲೇ ಕೆಜಿಎಫ್ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್‍ಶಿಪ್

    ಮೀಸಲಿರಿಸಿದ ಜಾಗದಲ್ಲಿ ಶಾಲಾ-ಕಾಲೇಜುಗಳು, ಆರೋಗ್ಯ ಕೇಂದ್ರ, ವಾಣಿಜ್ಯ ಸಂಕೀರ್ಣಗಳು, ಉದ್ಯಾನವನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.

    ಸಮಗ್ರ ಕೈಗಾರಿಕಾ ನಿವಾಸಿಗಳ ನಗರ (ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ರೆಸಿಡೆನ್ಶಿಯಲ್ ಟೌನ್‍ಶಿಪ್) ಪರಿಕಲ್ಪನೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಜಾಗವನ್ನು ಶೇ.10ರಿಂದ 15ರಷ್ಟು ವಸತಿ ಬಡಾವಣೆಯ ಉದ್ದೇಶಕ್ಕಾಗಿ ಕಾಯ್ದಿರಿಸಬೇಕೆಂದು ಸೂಚಿಸಿದ್ದು, ವಾಕ್-ಟು-ವರ್ಕ್ ಎಂಬ ಪರಿಕಲ್ಪನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ.

    ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಾವು ವಾಸಿಸುವ ಪ್ರದೇಶದಿಂದ ಬಂದುಹೋಗಲು ಸಂಚಾರ ದಟ್ಟಣೆ, ವಾಹನಗಳ ಸಮಸ್ಯೆ, ಸಮಯದ ಅಭಾವ ಹೀಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕೈಗಾರಿಕೆಗಳಿದ್ದರೆ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಸೇರಿದಂತೆ ದೂರದಿಂದ ಬರಲು ಸಿಬ್ಬಂದಿಗಳಿಗೆ ಅನಾನುಕೂಲವಾಗಲಿವೆ. ಕೈಗಾರಿಕಾ ಪ್ರದೇಶದಲ್ಲೇ ವಸತಿಗಳನ್ನು ನಿರ್ಮಿಸಿಕೊಟ್ಟರೆ ಸಮಯದ ಉಳಿತಾಯ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದನ್ನೂ ಓದಿ: ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಅಗತ್ಯ: ನಟಿ ನೇಹಾ ಪಾಟೀಲ್

    ಕೈಗಾರಿಕಾ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ವಸತಿ ಸಮ್ಮುಚ್ಚಯಗಳು, ಆಸ್ಪತ್ರೆ, ಮಾಲ್‍ಗಳು, ಶಾಲಾ-ಕಾಲೇಜುಗಳು, ನೀರಿನ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಸೌಲಭ್ಯವು ಇದರಲ್ಲಿ ಸಿಗಲಿವೆ. ಗುರುವಾರ ಬೆಂಗಳೂರಿನ ಚೇಂಬರ್ ಆಫ್ ಇಂಡಸ್ಟ್ರೀಸ್ ಮತ್ತು ಕಾಮರ್ಸ್(ಬಿಸಿಐಸಿ)ಯ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ನಿರಾಣಿ, ಶೀಘ್ರದಲ್ಲಿಯೇ ಉನ್ನತ ಕೈಗಾರಿಕೋದ್ಯಮಿಗಳಿಗೆ ಮತ್ತು ಅವರ ಸಂಘಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸುವುದಾಗಿ ಹೇಳಿದರು.

    ಶೀಘ್ರದಲ್ಲೇ ಉನ್ನತ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲಾಗುವುದು. ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ವಿಷಯಗಳ ಬಗ್ಗೆ ಚರ್ಚಿಸುಲಾಗುವುದು. ಕೈಗಾರಿಕಾ ವಲಯ ಮತ್ತು ಹೂಡಿಕೆದಾರರ ಸ್ನೇಹಿ ವಾತಾವರಣದಲ್ಲಿ ರಾಜ್ಯವನ್ನು ಮುಂಚೂಣಿಯ ಸ್ಥಾನದಲ್ಲಿ ಕಾಯ್ದುಕೊಳ್ಳುವಲ್ಲಿ ಸರ್ಕಾರ ಬದ್ದವಾಗಿದೆ ಎಂದು ಆಶ್ವಾಸನೆ ನೀಡಿದರು. ಕೈಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುವುದಾಗಿ ಭರವಸೆ ನೀಡಿದ ನಿರಾಣಿ, ಕರ್ನಾಟಕವು ಹೂಡಿಕೆದಾರರಿಗೆ ಆದ್ಯತೆಯ ತಾಣವಾಗಿದೆ. ಮುಂದಿನ ದಿನಗಳಲ್ಲಿ ಹೂಡಿಕೆದಾರ ಸ್ನೇಹಿ ಮತ್ತು ವ್ಯಾಪಾರ ಸ್ನೇಹಿ ಹಂತಗಳೊಂದಿಗೆ ನಾವು ಮತ್ತಷ್ಟು ಪ್ರಗತಿಯನ್ನು ಖಚಿತಪಡಿಸುತ್ತೇವೆ ಎಂದು ಭರವಸೆ ಕೊಟ್ಟರು.

    ಕೈಗಾರಿಕೆಗಳ ಉದ್ದೇಶಕ್ಕಾಗಿ ರಾಜ್ಯಾದ್ಯಂತ ಒಟ್ಟು 82 ಸಾವಿರಕ್ಕೂ ಅಧಿಕ ಎಕರೆ ಜಮೀನು ಇದೆ. ಇದರಲ್ಲಿ 188 ಕೈಗಾರಿಕಾ ಘಟಕಗಳಿದ್ದು, 20 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ 2ರಿಂದ 3 ವರ್ಷಗಳಲ್ಲಿ 9 ಸಾವಿರ ಎಕರೆ ಜಮೀನನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಡೀತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಆರಗ ಜ್ಞಾನೇಂದ್ರ

    ಕಾರ್ಯಕ್ರಮದಲ್ಲಿ ಬಾಷ್ ಲಿಮಿಟೆಡ್ ವ್ಯವಸ್ಥಾಪಕ ನಿದೇರ್ಶಕ ಹಾಗೂ ಭಾರತದ ಬಾಷ್ ಸಮೂಹ ಸಂಸ್ಥೆಯ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಹಾಗೂ ಬ್ರಿಗೇಡ್ ಎಂಟಪ್ರ್ರೈಸಸ್ ನ ವ್ಯವಸ್ಥಾಪಕ ನಿದೇರ್ಶಕ ಮತ್ತು ಅಧ್ಯಕ್ಷ ಎಂ.ಆರ್ ಜೈಶಂಕರ್, ಬಿಸಿಐಸಿ ಅಧ್ಯಕ್ಷರಾದ ಟಿ.ಆರ್.ಪರಶುರಾಮನ್ ಉಪಸ್ಥಿತರಿದ್ದರು.

    ಸ್ವಾಧೀನಪಡಿಸಿಕೊಂಡಿರುವ ಭೂಮಿಯ ವಿವರ
    ಒಟ್ಟು ಕೈಗಾರಿಕಾ ಪ್ರದೇಶಗಳು- 188
    ಒಟ್ಟು ಎಕರೆ- 81,864
    ಘಟಕಗಳು- 20,972

    ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಭೂಮಿಯ ವಿವರ
    ಒಟ್ಟು ಭೂಮಿ-9,010 ಎಕರೆ
    ಕೋಲಾರ ಜಿಲ್ಲೆ -ವೇಮಗಲ್ 2ನೇ ಹಂತ-511 ಎಕರೆ
    ರಾಮನಗರ -ಹಾರೋಹಳ್ಳಿ 5ನೇ ಹಂತ-912 ಎಕರೆ
    ಹಾವೇರಿ-ಗಣಚೂರು- 407 ಎಕರೆ
    ಮಂಡ್ಯ- ಕುದುರುಗುಂಡೆ-109 ಎಕರೆ
    ವಿಜಯಪುರ-ಮುಲವಾಡ-2,500 ಎಕರೆ
    ತುಮಕೂರು-ಶಿರಾ 2ನೇ ಹಂತ-1,200

  • ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ನಿರಾಣಿ

    ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ನಿರಾಣಿ

    – ಸಬೂಬು ಹೇಳಿದರೆ ಸಹಿಸುವುದಿಲ್ಲ
    – ಆಗುವುದಿಲ್ಲ ಹೋಗುವುದಿಲ್ಲ ಎಂಬ ಮಾತೇ ಬೇಡ

    ಬೆಂಗಳೂರು: ಆಗುವುದಿಲ್ಲ, ಬರುವುದಿಲ್ಲ ಎಂಬ ಸಬೂಬು ಹೇಳದೆ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡದಿದ್ದರೆ, ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಸಿದರು.

    ರೇಸ್‍ಕೋರ್ಸ್ ರಸ್ತೆಯ ಖನಿಜ ಭವನದ ಉದ್ಯೋಗ ಮಿತ್ರದಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಅಕಾರಿಗಳ ಜೊತೆ ಶುಕ್ರವಾರ ಔಪಚಾರಿಕ ಸಭೆ ನಡೆಸಿದ ಅವರು, ಇನ್ನು ಮುಂದೆ ನನ್ನ ಇಲಾಖೆಯಲ್ಲಿ ಆಗುವುದಿಲ್ಲ, ಬರುವುದಿಲ್ಲ ಎಂಬ ಕಾರಣಗಳನ್ನು ನೀಡಲೇಬಾರದು. ಕೆಲಸ ಮಾಡುವುದಷ್ಟೇ ನಿಮ್ಮ ಗುರಿಯಾಗಿರಬೇಕೆಂದು ತಾಕೀತು ಮಾಡಿದರು.

    ಏನೋ ಒಂದು ಮಾಡಬೇಕೆಂಬ ಅಸಡ್ಡೆ ಬೇಡ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇರಬೇಕು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಯು ಅತ್ಯಂತ ಮಹತ್ವದ ಇಲಾಖೆಯಾಗಿರುವುದರಿಂದ ಇನ್ನು ಮುಂದೆ ಶಿಸ್ತುಬದ್ಧವಾಗಿ ಕೆಲಸ ಮಾಡಲೇಬೇಕೆಂದು ಸೂಚಿಸಿದರು.

    ನಮ್ಮ ಉದ್ದಿಮೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ಮೊದಲ ಪ್ರಾಶಸ್ತ್ಯ ಕೊಡಬೇಕು. ನೆರೆಯ ರಾಜ್ಯಗಳಲ್ಲಿ ಅಲ್ಲಿನವರಿಗೆ ಆದ್ಯತೆ ಕೊಡುತ್ತಾರೆ. ಹೊರರಾಜ್ಯದವರಿಗೆ ಬಂಡವಾಳ ಹೂಡಿಕೆ ಮಾಡಿಕೊಂಡು ಲಾಭ ಮಾಡುವವರು ಪುನಃ ಇತ್ತ ಕಡೆ ಬರುವುದಿಲ್ಲ. ಹೀಗಾಗಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸಲಹೆ ಮಾಡಿದರು. ಇನ್ನು ಮುಂದೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ರೋಗಗ್ರಸ್ಥ ನಿಗಮಗಳನ್ನು ಗುರುತಿಸುವ ಕೆಲಸ ಮಾಡಬೇಕು. ಇವುಗಳ ಪುನಶ್ಚೇತನಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.

  • ರೈತರಿಗೆ ಪರಿಹಾರದ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ

    ರೈತರಿಗೆ ಪರಿಹಾರದ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ

    – ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭೇಟಿಯಾದ ನಿರಾಣಿ
    – ಪರಿಹಾರ ಹೆಚ್ಚಳ ಮಾಡಿದರೆ, ಸಾವಿರಾರು ರೈತರಿಗೆ ಅನುಕೂಲ
    – ಕೇಂದ್ರದಿಂದ ಸೂಕ್ತ ನ್ಯಾಯ ಒದಗಿಸುವ ಭರವಸೆ

    ನವದೆಹಲಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಕೃಷ್ಣ ನದಿಯ ಪ್ರವಾಹದಿಂದಾಗಿ ಕೃಷಿ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡಿದ್ದು, ರೈತರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಇಂದು ನವದೆಹಲಿಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆಯನ್ನು ಭೇಟಿಯಾದ ನಿರಾಣಿ ಅವರು, ತಕ್ಷಣವೇ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

    ಜಮಖಂಡಿ ತಾಲೂಕಿನ ಉಪವಿಭಾಗದಲ್ಲಿ ಕೃಷ್ಣ ನದಿಯಿಂದ ಪದೇ ಪದೇ ಪ್ರವಾಹ ಉಂಟಾಗುವ ಕಾರಣ, ರೈತರ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತದೆ. ಪರಿಣಾಮ ಸರಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಒಂದು ಕಡೆ ರೈತರು ಪ್ರವಾಹದಿಂದ ತಮ್ಮ ಬೆಳೆಗಳನ್ನು ನಾಶವಾದರೆ ಮತ್ತೊಂದು ಕಡೆ ಕೃಷಿ ಜಮೀನು ಫಲವತ್ತತೆಯನ್ನು ಕಳೆದುಕೊಂಡಿದ್ದರಿಂದ ಮಣ್ಣಿನ ಸವಕಳಿ ಹೆಚ್ಚಿದೆ. ಇದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

    ತಾಲೂಕಿನ ಒಟ್ಟು 14,051 ಹೆಕ್ಟೇರ್ ಪ್ರದೇಶದಲ್ಲಿ 5,994 ಪ್ರದೇಶವು ಸವಕಳಿಗೆ ತುತ್ತಾಗಿದೆ. ಪ್ರಸ್ತುತ 1 ಹೆಕ್ಟೇರ್ ಗೆ 65,000 ಪರಿಹಾರವನ್ನು ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಸಣ್ಣ, ಅತಿ ಸಣ್ಣ ಮತ್ತು ಕಡಿಮೆ ಆದಾಯ ಹೊಂದಿರುವ ರೈತರಿದ್ದು, ಕೃಷಿಯೇ ಜೀವನದ ಆಧಾರವಾಗಿದೆ. ಸರ್ಕಾರ ನೀಡುತ್ತಿರುವ ಪರಿಹಾರದ ಮೊತ್ತ ಜೀವನ ನಿರ್ವಹಣೆಗೆ ಸಾಕಾಗದ ಕಾರಣ, ಪರಿಹಾರದ ಮೊತ್ತ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ಯಾರಿಗೆ ಗೌರವ ಕೊಡಬೇಕು ಅನ್ನೋದು ಸಿಟಿ ರವಿಗೆ ಗೊತ್ತಿಲ್ಲ: ಸಿದ್ದರಾಮಯ್ಯ

    ಪರಿಶೀಲಿಸಿ ಸೂಕ್ತ ಕ್ರಮ
    ನಿರಾಣಿ ಅವರ ಮನವಿಗೆ ಸೂಕ್ತವಾಗಿ ಸ್ಪಂಧಿಸಿದ ಶೋಭಾ ಕರಂದ್ಲಾಜೆ ಅವರು, ರೈತರ ಹಿತಕಾಪಾಡಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂಬ ಭರವಸೆಯನ್ನು ನೀಡಿದ್ದಾರೆ. ಪ್ರತಿವರ್ಷ ಮಳೆಗಾಲದ ವೇಳೆ ಕೃಷ್ಣ ನದಿಯ ಪ್ರವಾಹ ಹಾಗೂ ಹಿನ್ನೀರಿನ ಕಾರಣ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರೈತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಸದ್ಯದಲ್ಲಿಯೇ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸೂಕ್ತ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

  • ಯಾದಗಿರಿಯ ಕಡೆಚೂರು ಬಳಿ ವಿಶ್ವದರ್ಜೆಯ ಔಷಧಿ ಪಾರ್ಕ್ ನಿರ್ಮಾಣ

    ಯಾದಗಿರಿಯ ಕಡೆಚೂರು ಬಳಿ ವಿಶ್ವದರ್ಜೆಯ ಔಷಧಿ ಪಾರ್ಕ್ ನಿರ್ಮಾಣ

    – ಕೇಂದ್ರ ಸಚಿವ ಭಗವಂತ ಖೂಬಾರನ್ನು ಭೇಟಿಯಾದ ಸಚಿವ ನಿರಾಣಿ

    ನವದೆಹಲಿ: ಕೇಂದ್ರ ಸರ್ಕಾರವು ಯಾದಗಿರಿ ಜಿಲ್ಲೆಯ ಕಡೆಚೂರುನಲ್ಲಿ ವಿಶ್ವದರ್ಜೆಯ ಬೃಹತ್ ಔಷಧ ಪಾರ್ಕ್ ಅಭಿವೃದ್ಧಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮನವಿ ಮಾಡಿದ್ದಾರೆ.

    ಬುಧವಾರ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಅವರು, ಯಾದಗಿರಿ ಜಿಲ್ಲೆಯ ಕಡೆಚೂರಿನಲ್ಲಿ ಬೃಹತ್ ಔಷಧ ಪಾರ್ಕ್ ನಿರ್ಮಿಸಿದ್ರೆ, ಈ ಭಾಗಕ್ಕೆ ಹೆಚ್ಚಿನ ನ್ಯಾಯ ಸಿಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದರು. ಯಾದಗಿರಿ ಜಿಲ್ಲೆಯು ಹಿಂದುಳಿದ ಕರ್ನಾಟಕ ಜಿಲ್ಲಾ ವ್ಯಾಪ್ತಿಗೆ ಒಳಪಡಲಿದೆ. 2 ಮತ್ತು 3ನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಿ ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಹೂಡಿಕೆದಾರರನ್ನು ಆಕರ್ಷಿಸಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂಬುದನ್ನು ಸಚಿವರಿಗೆ ವಿವರಿಸಿದರು.

    ಯೋಜನೆ ಅನುಷ್ಟಾನಗೊಂಡರೆ ಸುಮಾರು 6 ಸಾವಿರ ಕೋಟಿ ಬಂಡವಾಳವನ್ನು ಆಕರ್ಷಣೆ ಮಾಡಬಹುದು. ಅಂದಾಜು 10 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ. ಪ್ರಧಾನಿನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ್ ಯೋಜನೆಯಡಿ ಇದನ್ನು ಕೈಗೆತ್ತಿಕೊಂಡರೆ ಉದ್ಯೋಗ ಕ್ರಾಂತಿಯೇ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಯಾದಗಿರಿ ಜಿಲ್ಲೆಯು ಕಲಬರುಗಿ ನಗರಕ್ಕೆ ಸಮೀಪದಲ್ಲಿದ್ದು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಸೇರಿಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದೆ. ರಾಜ್ಯ ಸರ್ಕಾರವು ಔಷಾಧಾಲಯ ಕಾರ್ಖಾನೆಗಳಿಗೆ ಎಲ್ಲ ರೀತಿಯ ನೆರವು ನೀಡಲಿದೆ. ಈ ಯೋಜನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಸಚಿವರಿಗೆ ನಿರಾಣಿ ಮನವರಿಕೆ ಮಾಡಿದರು. ತುಮಕೂರು ಮಿಷನ್ ಟೂಲ್ ಪಾರ್ಕ್, ರಾಜ್ಯದಲ್ಲಿ ಈಗಾಗಲೇ ತುಮಕೂರು ಮಿಷನರಿ ಟೋಲ್ ಪಾರ್ಕ್, ಹೈಟೆಕ್ ರಕ್ಷಣಾ ಮತ್ತು ವೈಮಾನಿಕ ಪಾರ್ಕ್, ಜಪಾನೀಸ್ ಕೈಗಾರಿಕಾ ಟೌನ್‍ಶಿಪ್ ಸೇರಿದಂತೆ ಹತ್ತು ಹಲವು ಯೋಜನೆಗಳು ನಿರ್ಮಾಣವಾಗಿದೆ.

    ಯಾದಗಿರಿಯ ಕಡೆಚೂರಿನಲ್ಲಿ ವಿಶ್ವದರ್ಜೆಯ ಔಷಧಾಲಯ ಪಾರ್ಕ್ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ಆರ್ಥಿಕ ನೆರವು ನೀಡಲು ಸಿದ್ದವಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಯೋಜನೆ ಪ್ರಾರಂಭಿಸುವಂತೆ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಭಗವಂತ ಕೂಬ, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಯೋಜನೆಯನ್ನು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸುವ ಭರವಸೆಯನ್ನು ನೀಡಿದರು. ಇದನ್ನೂ ಓದಿ: ಸದ್ಯದಲ್ಲೇ ಕೆಜಿಎಫ್ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್‍ಶಿಪ್

  • ಸದ್ಯದಲ್ಲೇ ಕೆಜಿಎಫ್ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್‍ಶಿಪ್

    ಸದ್ಯದಲ್ಲೇ ಕೆಜಿಎಫ್ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್‍ಶಿಪ್

    – ಪ್ರಹ್ಲಾದ್ ಜೋಶಿ ಜೊತೆ ಮುರುಗೇಶ್ ನಿರಾಣಿ ಚರ್ಚೆ

    ನವದೆಹಲಿ: ಕೋಲಾರ ಜಿಲ್ಲೆ ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಯಲ್ಲಿ ಬಳಕೆಯಾಗದೇ ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ (ಇಂಡಸ್ಟ್ರಿಯಲ್ ಟೌನ್‍ಶಿಪ್) ಪ್ರಾರಂಭಿಸಲು ಅನುಮತಿ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಈ ಸಂಬಂಧ ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಿರಾಣಿಯವರು, ಕೆಜಿಎಪ್ ನಲ್ಲಿ ಟೌನ್‍ಶಿಪ್ ನಿರ್ಮಾಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಗೆ ಬರುವ ಸುಮಾರು 3,212 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಡ್ರೋಣ್ ಮೂಲಕ ಸಮೀಕ್ಷೆ ನಡೆಸಿದ್ದು, ಇಲ್ಲಿ ಗಣಿಗಾರಿಕೆ ನಡೆಸಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

    ಈ ಹಿನ್ನೆಲೆಯಲ್ಲಿ ಬಳಕೆಯಾಗದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಸಚಿವರಿಗೆ ವಸ್ತುಸ್ಥಿತಿಯನ್ನು ನಿರಾಣಿ ಅವರು ವಿವರಿಸಿದರು. ಟೌನ್‍ಶಿಪ್ ನಿರ್ಮಾಣವಾದರೆ ಈ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಕೂಲವಾಗುತ್ತದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಕೆಜಿಎಫ್ ನಗರವು ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುತ್ತಮ ರೈಲ್ವೆ ಸಂಪರ್ಕ ಹೊಂದಿದೆ. ಅಲ್ಲದೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಇಲ್ಲಿಯೇ ಹಾದು ಹೋಗುವುದರಿಂದ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಲಿದೆ. ಟೌನ್‍ಶಿಪ್ ನಿರ್ಮಾಣ ಮಾಡಲು ಯೋಗ್ಯವಾಗಿರುವುದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಕೋರಿದರು.

    ಕೆಜಿಎಫ್ ಚಿನ್ನದ ಗಣಿಯು ಅತ್ಯಂತ ಪುರಾತನವಾದ ಗಣಿ ಪ್ರದೇಶವಾಗಿತ್ತು. ಬ್ರಿಟಿಷರ ಕಾಲದಿಂದಲೇ ಇಲ್ಲಿ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಕಳೆದ ಹಲವಾರು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಭಾರತೀಯ ಪರಂಪರೆಯಲ್ಲಿ ಚಿನ್ನಕ್ಕೆ ಅಗ್ರಸ್ಥಾನ. ದೇಶದಲ್ಲಿ ಚಿನ್ನದ ಉತ್ಪಾದನೆ ಪ್ರಮಾಣ ಕಡಿಮೆಯಿರುವುದರಿಂದ ವಿದೇಶಗಳಿಂದ ಪ್ರತಿವರ್ಷ 30 ಬಿಲಿಯ ಡಾಲರ್ (ಅಂದಾಜು 2 ಲಕ್ಷ ಕೋಟಿ ರೂ.ಗೂ ಹೆಚ್ಚು) ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶೀಯವಾಗಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕ 2ರಿಂದ 3 ಟನ್ ಉತ್ಪಾದಿಸಲಾಗುತ್ತಿದೆ. 19 ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್)ಗಳಲ್ಲಿ ಮತ್ತೆ ಚಿನ್ನದ ಗಣಿಗಾರಿಕೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ ಎಂದು ತಿಳಿಸಿದರು.

    12,500 ಎಕರೆಯಲ್ಲಿ ಚಿನ್ನ
    ಬಿಜಿಎಂಎಲ್‍ಗೆ ಸೇರಿದ ಗಣಿ ಪ್ರದೇಶ ಸುಮಾರು 12,500 ಎಕರೆಗಳಿದ್ದು, ಈ ಪ್ರದೇಶದಲ್ಲಿ ಚಾಂಪಿಯನ್ ರೀಫ್, ಮಾರಿಕುಪ್ಪಂ, ಗೋಲ್ಕೊಂಡ, ಚಿಗರಿಗುಂಟೆ, ಬಿಸಾನತ್ತಂ, ಮೈಸೂರು ಮೈನ್ಸ್, ನಂದಿದುರ್ಗ್, ಹೆನ್ರೀಸ್ ಸೇರಿದಂತೆ 30ಕ್ಕೂ ಹೆಚ್ಚು ಭಾಗಗಳಲ್ಲಿ ಚಿನ್ನವನ್ನು ಹೊರ ತೆಗೆಯಲಾಗಿದೆ ಎಂದು ವಿವರಿಸಿದರು.

    ಕೆಜಿಎಫ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಹಳೆಯದು. ಕೆಜಿಎಫ್ ಭಾಗದಲ್ಲಿ ಚೋಳರ ಕಾಲದಲ್ಲಿ ಚಿನ್ನದ ನಿಕ್ಷೇಪ ಶೋಧಿಸಿದ್ದರ ಬಗ್ಗೆ ಇತಿಹಾಸದ ದಾಖಲೆಗಳಿವೆ. ನಂತರ ಭೂಗರ್ಭ ಶಾಸಜ್ಞರ ಸಹಾಯದಿಂದ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಕಾಲದಲ್ಲಿ ಚಿನ್ನವನ್ನು ಹೊರ ತೆಗೆಯಲಾಗುತ್ತಿತ್ತು ಎಂದು ಈಸ್ಟ್ ಇಂಡಿಯಾ ಕಂಪನಿ ದಾಖಲೆಗಳಲ್ಲಿಉಲ್ಲೇಖವಿದೆ.

    ಕೆಜಿಎಫ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಆಳವಾದ ಗಣಿ. ಸುಮಾರು 3,200 ಮೀಟರ್ (10,500 ಅಡಿಗಳು) ಆಳದ ಗಣಿಗಳಿವೆ. ಜತೆಗೆ ಚಿನ್ನದ ಅದಿರು ಹೊರತೆಗೆಯಲು ಸುಮಾರು 1,400 ಕಿ.ಮೀ.ಗಳಷ್ಟು ಉದ್ದದ ಸುರಂಗ ಕೊರೆಯಲಾಗಿದೆ. ಕಾರ್ಮಿಕರು ಗಣಿಯ ಆಳಕ್ಕೆ ಇಳಿಯಲು 30ಕ್ಕೂ ಹೆಚ್ಚು ಶಾಪ್ಟ್ ಗಳನ್ನು ನಿರ್ಮಿಸಲಾಗಿತ್ತು. ಕಂಪನಿ ಉತ್ತುಂಗದಲ್ಲಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

    ಈ ಗಣಿಯಲ್ಲಿ ಒಂದು ಟನ್ ನಿಕ್ಷೇಪದಿಂದ ಸುಮಾರು 3.07 ಗ್ರಾಂ.ನಿಂದ 4.09 ಗ್ರಾಂ.ಗಳಷ್ಟು ಚಿನ್ನ ಲಭಿಸುತ್ತಿತ್ತು. ಹಾಗಾಗಿ ಗಣಿಯನ್ನು ಮುಚ್ಚುವವರೆಗೆ ಬಿಜಿಎಂಎಲ್‍ನ ಅಧಿಕೃತ ದಾಖಲೆಗಳ ಮಾಹಿತಿ ಪ್ರಕಾರ ಒಟ್ಟು 800 ಟನ್ ಚಿನ್ನವನ್ನು ಉತ್ಪಾದಿಸಲಾಗಿದೆ. ಇದಕ್ಕೂ ಮೊದಲು, ಚೋಳರ ಕಾಲದಲ್ಲಿ ಮತ್ತು ಹೈದರಾಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಸುಮಾರು 6,200 ಕೆ.ಜಿ.ಗಳಷ್ಟು ಚಿನ್ನವನ್ನು ಉತ್ಪಾದಿಸಲಾಗಿತ್ತು ಎಂಬುದನ್ನು ದಾಖಲೆಗಳ ಸಮೇತ ವಿವರಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಅಮಾನತು ಮಾಡಿ, ಅವರ ವಿರುದ್ಧ ತನಿಖೆ ನಡೆಸಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ಸೂಕ್ತ ಭರವಸೆ
    ಸಚಿವ ನಿರಾಣಿಯವರ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು ಸದ್ಯದಲ್ಲಿಯೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಸೂಚನೆ ನೀಡಲಾಗುವುದು. ಕೆಜಿಎಫ್ ನಲ್ಲಿ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆ ಮಾಡಲು ಕೇಂದ್ರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು. ಇದನ್ನೂ ಓದಿ: ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ: ಬೇಳೂರು ಗೋಪಾಲಕೃಷ್ಣ

  • ನಿರಾಣಿ, ಬೆಲ್ಲದ್‍ಗೆ ಸಿಎಂ ಕುರ್ಚಿ ತಪ್ಪಿದ್ದು ಹೇಗೆ?

    ನಿರಾಣಿ, ಬೆಲ್ಲದ್‍ಗೆ ಸಿಎಂ ಕುರ್ಚಿ ತಪ್ಪಿದ್ದು ಹೇಗೆ?

    ಬೆಂಗಳೂರು: ಸಿಎಂ ರೇಸ್‍ನಲ್ಲಿದ್ದ ಬೆಲ್ಲದ್, ನಿರಾಣಿ ಪೈಕಿ ಒಬ್ಬರನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಇವರಿಬ್ಬರಿಗೂ ಸಿಎಂ ಪಟ್ಟ ತಪ್ಪಿದ್ದು ಲಾಬಿ ಮಾಡದ ಬೊಮ್ಮಾಯಿ ಅವರಿಗೆ ಒಲಿದಿದೆ.

    ಮುಖ್ಯಮಂತ್ರಿ ರೇಸ್‍ನಲ್ಲಿದ್ದ ನಿರಾಣಿ ಮತ್ತು ಬೆಲ್ಲದ್ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರೂ ವಾರಣಾಸಿಗೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದರು. ಹೀಗಾಗಿ ನಿರಾಣಿ ಮತ್ತು ಬೆಲ್ಲದ್ ಮಧ್ಯೆ ಒಬ್ಬರಿಗೆ ಪಟ್ಟ ಸಿಗಬಹುದು ಎಂಬ ಮಾತು ಬಿಜೆಪಿ ಮೂಲಗಳಿಂದ ತಿಳಿದುಬಂದಿತ್ತು.

    ನಿರಾಣಿಗೆ ಸಿಎಂ ಕುರ್ಚಿ ಕೈತಪ್ಪಿದ್ದೇಗೆ?
    ನಿರಾಣಿಗೆ ಮಾಸ್ ಇಮೇಜ್ ಇಲ್ಲ. ಇದರ ಜೊತೆ ಯಡಿಯೂರಪ್ಪ ಕೃಪಾಕಟಾಕ್ಷ ಸಿಗಲಿಲ್ಲ. ಪಕ್ಷದಲ್ಲಿನ ಶೀತಲ ಸಮರದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಬಗ್ಗೆ ಹೈಕಮಾಂಡ್‍ಗೆ ಅನುಮಾನ ಬಂದಿದೆ. ಇದರ ಜೊತೆ ಕೇಳಿ ಬಂದ ಒಂದಿಷ್ಟು ಆರೋಪಗಳಿಂದ ನಿರಾಣಿಗೆ ಹಿನ್ನಡೆಯಾಗಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಂಬಲ ಸಿಗದ ಕಾರಣ ಹೈಕಮಾಂಡ್ ಬೊಮ್ಮಾಯಿಗೆ ಮಣೆ ಹಾಕಿದೆ. ಇದನ್ನೂ ಓದಿ : ಲಾಬಿ ಮಾಡದ ಬೊಮ್ಮಾಯಿಗೆ ಒಲಿಯಿತು ಅದೃಷ್ಟ

    ಬೆಲ್ಲದ್‍ಗೆ ಸಿಎಂ ಕುರ್ಚಿ ಕೈತಪ್ಪಿದ್ದೇಗೆ?
    ಅರವಿಂದ್ ಬೆಲ್ಲದ್ ಅವರಿಗೆ ಮಾಸ್ ಇಮೇಜ್ ಇಲ್ಲ. ಬೆಲ್ಲದ್ ಪರವಾಗಿ ಬಿಎಸ್‍ವೈ ಆಸಕ್ತಿ ತೋರಿಸಿರಲಿಲ್ಲ. ಕ್ಲೀನ್ ಇಮೇಜ್ ಇದ್ದರೂ ಬೆಲ್ಲದ್ ಅವರಿಗೆ ಅನುಭವದ ಕೊರತೆಯಿದೆ. ಹಿರಿಯರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಅಷ್ಟೇ ಅಲ್ಲದೇ ಇನ್ನು ಎರಡು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಪ್ರಯೋಗ ಮಾಡುವುದು ಬೇಡ.  ಮುಂದಿನ ದಿನಗಳಲ್ಲಿ ಅವಕಾಶ ಕೊಡಬಹುದು ಎಂಬ ಆಲೋಚನೆ ಮಾಡಿದ ಹೈಕಮಾಂಡ್ ಆಡಳಿತ ಅನುಭವ ಇರುವ  ಬೊಮ್ಮಾಯಿ ಅವರನ್ನೇ ಅಂತಿಮಗೊಳಿಸಿದೆ.

    ಮುಂದೇನು?
    ಬೆಲ್ಲದ್, ನಿರಾಣಿಗೆ ಸಿಎಂ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡೀತಾರಾ ಎಂಬ ಪ್ರಶ್ನೆ ಎದ್ದಿದೆ. ಇಬ್ಬರೂ ಲಿಂಗಾಯತ ಸಮುದಾಯದವರಾದ ಕಾರಣ ಇಬ್ಬರನ್ನೂ ಡಿಸಿಎಂ ಮಾಡುವುದು ಅನುಮಾನ. ಹೀಗಾಗಿ ಹಠ ಬಿಟ್ಟು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗ್ತಾರಾ? ಇಲ್ಲ ಉನ್ನತ ಸ್ಥಾನಕ್ಕಾಗಿ ಲಾಬಿ ಮಾಡುತ್ತಾರಾ ಎಂಬ ಪ್ರಶ್ನೆಗಳಿಂಂದ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣ ಅವರ ಮುಂದಿನ ನಡೆದ ಕುತೂಹಲ ಕೆರಳಿಸಿದೆ.

  • ನಿರಾಣಿಯಂತವರೇ ಸಿಎಂ ಆಗಬೇಕು: ಕೈ ಶಾಸಕ ಪುಟ್ಟರಂಗಶೆಟ್ಟಿ

    ನಿರಾಣಿಯಂತವರೇ ಸಿಎಂ ಆಗಬೇಕು: ಕೈ ಶಾಸಕ ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಮಾಜಿ ಸಚಿವ ಮುರುಗೇಶ್ ನಿರಾಣಿಯಂತವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದ ಮುಂದಿನ ಸಿಎಂ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದರು. ಯಡಿಯೂರಪ್ಪ ಚಾಮರಾಜನಗರಕ್ಕೆ ಬಾರದೆ ಅಧಿಕಾರ ಕಳೆದುಕೊಂಡಿದ್ದಾರೆ. ಬಂದಿದ್ದರೆ ಅಧಿಕಾರದಲ್ಲಿಯೇ ಉಳಿಯುತ್ತಿದ್ದರು. ಕೆಲ ದಿನಗಳ ಹಿಂದೆ ನಿರಾಣಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಅವರಿಗೆ ಚಾಮರಾಜೇಶ್ವರನ ಕೃಪೆ ಇದೆ ಎಂದರು. ಇದನ್ನೂ ಓದಿ: ಬಿಜೆಪಿಯ ಅದೃಷ್ಟದ ಹೋಟೆಲ್‍ನಲ್ಲಿ ನೂತನ ಸಿಎಂ ಆಯ್ಕೆ

    ಶೆಟ್ರೆ..ನಿಮ್ಮ ಜಿಲ್ಲಾ ಉಸ್ತುವಾರಿ ಸಪ್ಪೆ, ಅವರಿಂದ ಏನೂ ಆಗುವುದಿಲ್ಲ. ನನ್ನನ್ನು ಕೇಳಿ ನಿಮಗೆ ಏನು ಬೇಕು ಮಾಡಿಕೊಡುತ್ತೇನೆ ಎಂದಿದ್ದರು. ನಿಜವಾಗಿಯೂ ನಿರಾಣಿಯಂತಹವರು ಸಿಎಂ ಆಗಬೇಕು. ಅವರು ಸಿಎಂ ಆದರೆ ಖಂಡಿತವಾಗಿಯೂ ಚಾಮರಾಜನಗರಕ್ಕೆ ಬರುತ್ತಾರೆ. ಬಂದರೆ ಹೆಚ್ಚು ಕಾಲ ಅಧಿಕಾರದಲ್ಲಿರುತ್ತಾರೆ. ಅವರನ್ನು ಚಾಮರಾಜನಗರಕ್ಕೆ ಕರೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ : ಯಡಿಯೂರಪ್ಪನವರ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದೆ: ಅರುಣ್ ಸಿಂಗ್

  • ಒತ್ತಡದ ತಂತ್ರ ಬಿಜೆಪಿಯಲ್ಲಿ ನಡೆಯಲ್ಲ: ಮುರುಗೇಶ್ ನಿರಾಣಿ

    ಒತ್ತಡದ ತಂತ್ರ ಬಿಜೆಪಿಯಲ್ಲಿ ನಡೆಯಲ್ಲ: ಮುರುಗೇಶ್ ನಿರಾಣಿ

    ಬೆಂಗಳೂರು: ಬಿಜೆಪಿಯಲ್ಲಿ ಯಾವುದೇ ರೀತಿಯ ಒತ್ತಡ ತಂಡ ನಡೆಯಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮುರುಗೇಶ್ ನಿರಾಣಿ, ನನ್ನ ವೈಯಕ್ತಿಕ ಭೇಟಿ ಆಗಿತ್ತು. ಬಿಜೆಪಿಯಲ್ಲಿ ಯಾವುದೇ ಒತ್ತಡದ ತಂತ್ರಗಳು ನಡೆಯಲ್ಲ. ಮಾಧ್ಯಮದಲ್ಲಿ ಬರುತ್ತಿರುವ ವಿಷಯ ಸತ್ಯಕ್ಕೆ ದೂರವಾದದ್ದು. ನಾನೊಬ್ಬ ಆರ್‍ಎಸ್‍ಎಸ್ ಕಟ್ಟಾಳು. ಆರ್‍ಎಸ್‍ಎಸ್ ಜೊತೆಗೆ ಕಳೆದ 30 ವರ್ಷದಿಂದ ಸಂಬಂಧವಿದೆ. ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿರೋದರಿಂದ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ನಾಯಕರು ಸಂಪರ್ಕದಲ್ಲಿದ್ದಾರೆ ಎಂದರು.

    ಹೈಕಮಾಂಡ್‍ಗೆ ಒಂದೂವರೆ ಸಾವಿರ ಕೋಟಿ ಹಣ ನೀಡಿ ಮುರಗೇಶ್ ನಿರಾಣಿ ಸಿಎಂ ಆಗ್ತಾರಾ ಅನ್ನೋ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ರೈತನ ಮಗ. ನಾನು ಕಾರ್ಮಿಕರಿಗೆ ಸಂಬಳ ನೀಡಿಕೊಂಡು ಬಂದಿದ್ದೇನೆ. ಸಾವಿರ ಕೋಟಿ ಕೊಟ್ಟು ಸಿಎಂ ಅಗುವದೆಲ್ಲ ಸತ್ಯಕ್ಕೆ ದೂರವಾದ ವಿಷಯ. ವಿಜಯೆಂದ್ರ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆ ಆದಾಗ ಅವರಿಗೆ ಅಭಿನಂದನೆ ಸಲ್ಲಿಸಿದ್ದ ಫೋಟೋ ಒಂದು ವೈರಲ್ ಮಾಡಲಾಗಿದೆ. ಬಿಜೆಪಿಯಲ್ಲಿ ಹಣ ತಗೆದುಕೊಳ್ಳೊದು ಕೊಡೋದು ಸಂಸ್ಕೃತಿ ಇಲ್ಲ. ಸಿಎಂ ಯಾರು ಅಗ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.

    ರಾಜ್ಯಕ್ಕೆ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಿಯೋಗ ಬರುತ್ತಿದೆ. ಅವರು ಬಿಎಸ್‍ವೈ ಸೇರಿದಂತೆ ಶಾಸಕರ ಒಲವು ನೋಡಿಕೊಂಡು ಸಿಎಂ ಆಯ್ಕೆ ಮಾಡ್ತಾರೆ. ನಾನು ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಯಾರ ಅಪಾಯಿಂಟ್ಮೆಂಟ್ ಕೂಡ ಪಡೆದಿರಲಿಲ್ಲ. ನಾನು ಸಿಎಂ ಮಾಡುವಂತೆ ಯಾರ ಬಳಿ ಲಾಬಿಯೂ ಮಾಡಿಲ್ಲ. ಬಿಜೆಪಿಯಲ್ಲಿ ಆ ಪ್ರವೃತ್ತಿ ಇಲ್ಲ ಎಂದು ಮುರಗೇಶ್ ನಿರಾಣಿ ತಿಳಿಸಿದರು. ಇದನ್ನೂ ಓದಿ: ದೆಹಲಿಯಿಂದ ಒತ್ತಡ ಇಲ್ಲ, ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ: ಬಿಎಸ್‍ವೈ

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಮುಂದಿನ ಸಿಎಂ ಪಟ್ಟಕ್ಕಾಗಿ ದೊಡ್ಡಮಟ್ಟದಲ್ಲಿ ಲಾಬಿ ಮಾಡಲಾಗುತ್ತಿದೆ. ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಚಿವ ಮುರಗೇಶ್ ನಿರಾಣಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಲಾಗುತ್ತಿದ್ದಾರೆ ಏನ್ನಲಾಗಿದೆ. ಆ ಕಾರಣಕ್ಕೆ ಮುರಗೇಶ್ ನಿರಾಣಿ ಬಿಎಸ್‍ವೈ ರಾಜಿನಾಮೆ ಕೊಡುತ್ತಿದ್ದಂತೆ ಹೈಕಮಾಂಡ್ ನಾಯಕರ ಭೇಟಿಗೆ ಹೋಗಿದ್ದರು ಏನ್ನಲಾಗಿದೆ. ಇದನ್ನೂ ಓದಿ: ಯಡಿಯೂರಪ್ಪ ಸಂಪುಟ ವಿಸರ್ಜನೆ – ಸಚಿವರೆಲ್ಲ ಮಾಜಿ

    ಸೋಮವಾರ ಸರ್ಕಾರ ಎರಡನೇ ವರ್ಷದ ಸಂಭ್ರಮಾಚರಣೆ ವೇದಿಕೆಯಲ್ಲಿ ಯಡಿಯೂರಪ್ಪನವರು ರಾಜೀನಾಮೆ ನೀಡುವದಾಗಿ ಘೋಷಣೆ ಮಾಡಿದ್ದರು. ತಮ್ಮ ಭಾಷಣದ ವೇಳೆ ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು. ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿ, ಮುಂದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವದಾಗಿ ತಿಳಿಸಿದರು. ಇದೇ ವೇಳೆ ರಾಜೀನಾಮೆಗೆ ದೆಹಲಿಯಿಂದ ಒತ್ತಡ ಬಂದಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಸಿಎಂ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಬಿಎಸ್‍ವೈ ರಾಜೀನಾಮೆ – ಯೋಗೇಶ್ವರ್, ಯತ್ನಾಳ್ ಭಾವಚಿತ್ರ ದಹಿಸಿ ಆಕ್ರೋಶ