Tag: Murthy

  • ತಮ್ಮದೇ ಮೂರ್ತಿ ಅನಾವರಣಕ್ಕೆ ಒಪ್ಪದ ಸುದೀಪ್

    ತಮ್ಮದೇ ಮೂರ್ತಿ ಅನಾವರಣಕ್ಕೆ ಒಪ್ಪದ ಸುದೀಪ್

    ಕಿಚ್ಚ ಸುದೀಪ್ ಇಂದು ರಾಯಚೂರಿನ ಸಿರಿವಾರ ತಾಲೂಕಿನ ಕುರಕುಂದದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕ ಪ್ರತಿಮೆಗಳ ಅನಾವಣರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಮೂರ್ತಿಯನ್ನು ಅನಾವರಣ ಮಾಡಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.  ಆದರೆ, ಅದು ಈಡೇರಲಿಲ್ಲ.  ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕರ ಪ್ರತಿಮೆಯನ್ನು ಅನಾವರಣ ಮಾಡಿದ ಸುದೀಪ್, ತಮ್ಮ ಮೂರ್ತಿಯನ್ನು ಅನಾವರಣ ಮಾಡುವುದಕ್ಕೆ ಒಪ್ಪಲಿಲ್ಲ. ಹಾಗಂತ ಅಭಿಮಾನಿಗಳಿಗೆ ಅವಮಾನ ಮಾಡಲಿಲ್ಲ. ಪ್ರೀತಿಯನ್ನು ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೊರಟವರಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದು ಅಭಿಮಾನದಿಂದಲೇ ಮಾತನಾಡಿದರು. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಜಗತ್ತಿನಲ್ಲಿ ತುಂಬಾ ಜನ ಸಾಧನೆ ಮಾಡಿದವರು ಇದ್ದಾರೆ. ನಾನೇನೂ ಸಾಧನೆ ಮಾಡಿಲ್ಲ. ಮಾಡಬೇಕಾದ ಕೆಲಸ ತುಂಬಾ ಇದೆ. ನಾನು ಸಾಧನೆ ಮಾಡಿದ್ದೇನೆ ಎಂದು ಅನಿಸಿದ ದಿನ ನಾನೇ ಬಂದು ಮೂರ್ತಿ ಅನಾವರಣ ಮಾಡುತ್ತೇನೆ. ಈ ಮೊದಲೇ ಮೂರ್ತಿಯ ವಿಷಯ ಗೊತ್ತಿದ್ದರೆ ನಾನೇ ಬೇಡ ಎನ್ನುತ್ತಿದ್ದೆ. ಪ್ರೀತಿ ತೋರಿಸಿದ ಎಲ್ಲ ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ ಎಂದರು ಸುದೀಪ್. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಈ ಹಿಂದೆಯೂ ಸುದೀಪ್ ಇಂತಹ ಕೆಲಸಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ತರುವ ಕೇಕ್, ಹಾರ, ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವುದನ್ನು ವಿರೋಧಿಸುತ್ತಲೇ ಬಂದಿರುವ ಅವರು, ಆ ಹಣವನ್ನು ನಿರ್ಗತಿಕರಿಗೆ, ಬಡವರಿಗೆ, ಹಸಿದವರಿಗೆ ನೀಡಿ ಎಂದು ಕರೆಕೊಟ್ಟಿದ್ದರು. ಅಭಿಮಾನಿಗಳು ಕೂಡ ಅದನ್ನು ಪಾಲಿಸುತ್ತಾ ಬಂದಿದ್ದಾರೆ.

  • 500 ವರ್ಷ ಹಳೆಯ ಭಾರೀ ಬೆಲೆಯುಳ್ಳ ಉತ್ಸವ ಮೂರ್ತಿ ಕಳ್ಳತನ

    500 ವರ್ಷ ಹಳೆಯ ಭಾರೀ ಬೆಲೆಯುಳ್ಳ ಉತ್ಸವ ಮೂರ್ತಿ ಕಳ್ಳತನ

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಪಂಚಲೋಹ ಉತ್ಸವ ಮೂರ್ತಿ ಕಳ್ಳತನವಾಗಿದೆ.

    ಶ್ರೀಮಾರಟೇಶ್ವರ ದೇವಾಲಯದಲ್ಲಿದ್ದ ಶಿವಪಾರ್ವತಿಯರ ಉತ್ಸವ ಮೂರ್ತಿ ಕಳ್ಳತನವಾಗಿದ್ದು ಭಕ್ತರು ಗ್ರಾಮಕ್ಕೆ ಕೇಡು ಕಾದಿದೆ ಅಂತ ಆತಂಕಗೊಂಡಿದ್ದಾರೆ.

    ಸುಮಾರು 15 ಕೆ.ಜಿ ತೂಕದ 500 ವರ್ಷಗಳಷ್ಟು ಹಳೆಯದಾದ ಪಂಚಲೋಹದ ಉತ್ಸವ ಮೂರ್ತಿಯನ್ನ ದೇವಾಲಯದ ಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹಳೆಯ ಕಾಲದ ಪಂಚಲೋಹ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣಕ್ಕೆ ಕಳ್ಳತನ ಮಾಡಿರುಬಹುದು ಎಂಬ ಶಂಕಿಸಲಾಗಿದೆ.

    ಹಳೆಯ ಪಂಚಲೋಹದ ಮೂರ್ತಿಗಳ ಬಗ್ಗೆ ಹಲವಾರು ನಂಬಿಕೆಗಳಿದ್ದು ಸುಮಾರು ಒಂದು ಕೋಟಿ ರೂಪಾಯಿವರೆಗೆ ಬೆಲೆ ಇರಬಹುದು ಎಂಬ ಅಂದಾಜಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರಣವಾಡಿ ಗ್ರಾಮದಲ್ಲಿನ ಸಂಗೋಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಸ್ಥಾಪನೆಗೆ ಆಗ್ರಹಿಸಲಾಯಿತು.

    ಸಂಕೇಶ್ವರ ಪಟ್ಟಣದ ಬೀರದೇವರ ದೇವಸ್ಥಾನದಿಂದ ಸಂಗೋಳಿ ರಾಯಣ್ಣ ವೃತ್ತದವರೆಗೆ ರಾಯಣ್ಣ ಅಭಿಮಾನಿಗಳು ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಪೀರಣವಾಡಿಯಲ್ಲಿ ರಾಯಣ್ಣ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಕನ್ನಡಿಗರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಪಮಾನ ಮಾಡಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತಕೊಂಡು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ವಾಲ್ಮೀಕಿ ಸಂಘ, ಹಾಲುಮತ ಸಮಾಜ ಸೇರಿದಂತೆ ರಾಯಣ್ಣ ಅಭಿಮಾನಿಗಳು ಪಾಲ್ಗೊಂಡಿದ್ದರು.