Tag: municipality election

  • ವಲಸಿಗರಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ: ಪ್ರಿಯಾಂಕ್ ಖರ್ಗೆ

    ವಲಸಿಗರಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಈ ಬಾರಿ ಮಹಾನಗರ ಪಾಲಿಕೆಯ ಚುನಾವಣೆ ಕಾವು ತೀವ್ರತರವಾಗಿದ್ದು, ಪ್ರಸ್ತುತ ಪಕ್ಷಾಂತರಿಗಳ ಪರ್ವ ಶುರುವಾಗಿದೆ. ಇದೇ ವೇಳೆ ವಲಸಿಗರಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ಶಾಕ್ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿಗರಿಗೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಸಮಿತಿ ನಿರ್ಧರಿಸಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಾರುಪಥ್ಯ ಸ್ಥಾಪಿಸಲು ಪಕ್ಷ ಸೂತ್ರಗಳನ್ನು ಹೆಣಿದಿದೆ ಎಂದು ಸುಳಿವು ನೀಡಿದರು.

    ಕಳೆದ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್, ಮಹಾನಗರ ಪಾಲಿಕೆಯೆಂದರೆ ತಮ್ಮ ಜೀವ ಎಂಬಂತೆ ಕಾಪಾಡಿಕೊಂಡು ಬಮದಿದ್ದರು. ಮಾಜಿ ಸಚಿವರಾಗಿದ್ದ ದಿ.ಖಮರುಲ್ ಇಸ್ಲಾಂ ಅವರು ಮಹಾನಗರ ಪಾಲಿಕೆಯ ಟಿಕೆಟ್ ನೀಡುವಲ್ಲಿ ಯಾರೂ ಮೂಗು ತೂರಿಸಬಾರದು, ಬೇಕಿದ್ದರೆ ಶಿಫಾರಸು ಮಾಡಿ, ಗೆಲ್ಲುವ ಯೋಗ್ಯ ಅಭ್ಯರ್ಥಿಯಾಗಿದ್ದರೆ ಅವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎನ್ನುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಎಷ್ಟು ಬಾರಿ ಮಹಾನಗರಪಾಲಿಕೆಗೆ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತಿತ್ತು.

    ಈಗ ಬದಲಾದ ಸನ್ನಿವೇಶದಲ್ಲಿ ಖಮರುಲ್ ಇಸ್ಲಾಂ ಇಲ್ಲದ ಪಾಲಿಕೆ ಎಂಬಾಂತಾಗಿದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಪಾಲಿಕೆಯ ಚುಕ್ಕಾಣಿ ಹಿಡಿಯಲು ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡುತ್ತಿದ್ದು, ಗೆಲುವಿನ ಕಾರ್ಯತಂತ್ರವನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ರೂಪಿಸುತ್ತಿದ್ದಾರೆ.

  • ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    – ಎಐಎಂಐಎಂ ಸೋತ್ರೂ ಪರವಾಗಿಲ್ಲ ಬಿಜೆಪಿ ಗೆಲ್ಲಬಾರದು

    ಹೈದರಾಬಾದ್: ಮುಂಬರುವ ತೆಲಂಗಾಣ ಪುರಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ, ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತರೂ ಪರವಾಗಿಲ್ಲ ಬಿಜೆಪಿ ಗೆಲುವು ಸಾಧಿಸಬಾರದು. ಎಐಎಂಐಎಂ ಮುಖಂಡರು ನಿಜಾಮಾಬಾದ್‍ನ ಉಪಮೇಯರ್ ಆಗಿದ್ದ ಕಾಲವೊಂದಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ನಿಜಾಮಾಬಾದ್ ಕ್ಷೇತ್ರದಿಂದ ಬಿಜೆಪಿ ಆಯ್ಕೆಯಾಗಿದೆ. ಎಐಎಂಐಎಂ ಗೆಲ್ಲುವುದು ನಿಮಗೆ ಇಷ್ಟವಿಲ್ಲದಿದ್ದರೆ ಪರವಾಗಿಲ್ಲ, ಬಿಜೆಪಿಯನ್ನು ಸೋಲಿಸಿ ಎಂದು ಮುಸ್ಲಿಂ ಸಮುದಾಯದ ಜೊತೆ ಮನವಿ ಮಾಡಿಕೊಂಡಿದ್ದಾರೆ.

    ನಿಜಾಮಾಬಾದ್ ಸಂಸದೀಯ ಸ್ಥಾನವನ್ನು ಗೆದ್ದ ಬಿಜೆಪಿ ಮೇಯರ್ ಹುದ್ದೆಯನ್ನೂ ಅಲಂಕರಿಸುವ ಸಾಧ್ಯತೆ ಇದೆ. ಹೀಗಾಗಿ ನೀವು ಒಗ್ಗಟ್ಟಾಗಿ ನಿಲ್ಲಬೇಕಿದೆ. ಈ ಮೂಲಕ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಬೇಕು ಎಂದು ಮತದಾರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ ಜನರ ಆಶೀರ್ವಾದವನ್ನು ಬಯಸುತ್ತೇನೆ. ನೀವು ಒಗ್ಗಟ್ಟಿನಿಂದ ಇರುವುದನ್ನು ನೋಡಲು ಇಷ್ಟಪಡುತ್ತಿರುವೆ ಎಂದು ಮತದಾರರ ಮನವೊಲಿಸಲು ಪ್ರಯತ್ನಿಸಿದರು.

    ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಸಿಕಂದರಾಬಾದ್, ನಿಜಾಮಾಬಾದ್, ಕರೀಂನಗರ ಹಾಗೂ ಆದಿಲಾಬಾದ್ ಕ್ಷೇತ್ರಗಳಿಂದ ಗೆಲುವು ಸಾಧಿಸಿದೆ. ಆದರೆ ಎಐಎಂಐಎಂ ಕೇವಲ ಒಂದೇ ಒಂದು ಕ್ಷೇತ್ರವಾದ ಹೈದರಾಬಾದ್‍ನಿಂದ ಜಯಗಳಿಸಿದೆ.