Tag: Municipal Elections

  • ಸಿಂದಗಿ ಪುರಸಭಾ ಚುನಾವಣಾ ಫಲಿತಾಂಶ ಪ್ರಕಟ

    ಸಿಂದಗಿ ಪುರಸಭಾ ಚುನಾವಣಾ ಫಲಿತಾಂಶ ಪ್ರಕಟ

    ವಿಜಯಪುರ: ಜಿಲ್ಲೆಯ ಸಿಂದಗಿ ಪುರಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಒಟ್ಟು 23 ಸದಸ್ಯ ಬಲ ಹೊಂದಿದ್ದ ಪುರಸಭೆಯಲ್ಲಿ ಕಾಂಗ್ರೆಸ್ 11, ಜೆಡಿಎಸ್ 6, 3 ಬಿಜೆಪಿ ಮತ್ತು 3 ಪಕ್ಷೇತರರಪಾಲಾಗಿದೆ.

    ಬಹುತೇಕ ಕಾಂಗ್ರೆಸ್ ಮಡಿಲಿಗೆ ಸಿಂದಗಿ ಪುರಸಭೆ ಬಿದ್ದಿದ್ದು, ಬಹುಮತಕ್ಕೆ ಕೇವಲ ಒಂದು ಸ್ಥಾನ ಕಡಿಮೆಯಾಗಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

    ಹಾಲಿ ಸಿಂದಗಿ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಪುತ್ರ ಶಾಂತವೀರ ಮನಗೂಳಿ 13 ನೇ ವಾರ್ಡಿನಿಂದ ಸ್ಪರ್ಧಿಸಿದ್ದರು. ಅವರು ಕೂಡ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಬಿಜೆಪಿಗೆ ಮಾತ್ರ ಭಾರೀ ಮುಖಭಂಗವಾಗಿದೆ.

  • ಹುಣಸೂರು ನಗರಸಭಾ ಚುನಾವಣೆ- 31ರಲ್ಲಿ ಕಾಂಗ್ರೆಸ್‍ಗೆ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2, ಪಕ್ಷೇತರ 5

    ಹುಣಸೂರು ನಗರಸಭಾ ಚುನಾವಣೆ- 31ರಲ್ಲಿ ಕಾಂಗ್ರೆಸ್‍ಗೆ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2, ಪಕ್ಷೇತರ 5

    – ಪ್ರತಿ ವಾರ್ಡ್ ಗೆ ಬಿಜೆಪಿಯಿಂದ 50 ಲಕ್ಷ ಖರ್ಚು-ಕೈ ಶಾಸಕ
    – ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು ಎಂದ ಶಾಸಕ ಮಂಜುನಾಥ್

    ಮೈಸೂರು: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಹೊರ ಬಂದಿದ್ದು, 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2 ಮತ್ತು ಪಕ್ಷೇತರರು 5 ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಇಲ್ಲಿ ಕೇವಲ 22 ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು.

    ಬಿಜೆಪಿಯಿಂದ ವಾರ್ಡ್ ಗೆ 50 ಲಕ್ಷ ರೂ: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಬಗ್ಗೆ ಶಾಸಕ ಹೆಚ್.ಪಿ. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಹಣದಿಂದಲೇ ಹುಣಸೂರು ನಗರಸಭೆ ಚುನಾವಣೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ವಾರ್ಡಿಗೆ 50 ಲಕ್ಷ ಹಣ ಖರ್ಚು ಮಾಡಲಾಗಿದೆ. ಇತ್ತೀಚಿಗೆ ನಡೆದ ಹುಣಸೂರು ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಾಗಲೇ ಇದರ ಸೂಚನೆ ಸಿಕ್ಕಿತ್ತು. ಹೀಗಾಗಿಯೇ ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಬಿಜೆಪಿ ಗೆ ಮೂರು ಸ್ಥಾನ ಬಂದಿದೆ. ಇಲ್ಲವಾದಲ್ಲಿ ಇನ್ನಷ್ಟು ಸ್ಥಾನ ಕಾಂಗ್ರೆಸ್ ಪಾಲಾಗುತ್ತಿತ್ತು ಎಂದು ಹೇಳಿದ್ದಾರೆ.

    ಈಗ ಅಧಿಕಾರ ಹಿಡಿಯಲು ಯಾರನ್ನು ಮನವೊಲಿಸಲು ಹೋಗೋಲ್ಲ. ಮನವೊಲಿಕೆ ಮಾಡೋದು ತಮಾಷೆಯ ವಿಚಾರವೂ ಅಲ್ಲ. ಯಾರು ಬೇಷರತ್ ಬೆಂಬಲ ಕೊಡುತ್ತಾರೆ ಅಂತವರನ್ನ ಸೇರಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ. ಈ ನಗರಸಭೆ ನನಗೆ ಯುಗಾದಿ ರೀತಿ ಬೇವು-ಬೆಲ್ಲ ಎರಡು ನೀಡಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

    ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು: ಹುಣಸೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿಯದ್ದು ಸಾಧನೆಯಲ್ಲ. ನಗರಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಎಸ್‍ಡಿಪಿಐ ಪಕ್ಷದ್ದು ದೊಡ್ಡ ಸಾಧನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು 7 ಸಾವಿರ ಇದ್ದ ಮತಗಳನ್ನ 50 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದೇನೆ ಅಂತಾರೆ. ಆ ಮತಗಳಿಗೆ ಈ ಸ್ಥಾನಗಳಿಗೆ ಸಾಟಿಯೆ? ಆದರೆ ಏನು ಇಲ್ಲದ ಎಸ್‍ಡಿಪಿಐ 2 ಸ್ಥಾನ ಗೆದ್ದಿರುವುದು ಸಾಧನೆ. 3 ಸ್ಥಾನ ಗೆದ್ದ ಬಿಜೆಪಿ ಗಿಂತಾ 2 ಸ್ಥಾನ ಗೆದ್ದ ಎಸ್‍ಡಿಪಿಐರದ್ದು ಸಾಧನೆ ದೊಡ್ಡದು ಎಂದ್ರು.

    ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಹೋಗಲ್ಲ: ಹುಣಸೂರು ನಗರಸಭೆ ಚುನಾವಣಾ ಫಲಿತಾಂಶದ ಬಗ್ಗೆ ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಮಾಧಾನಕರ ಸಾಧನೆ ಮಾಡಿದೆ. ಹಿಂದೆ ಜಿಟಿಡಿ ಹಾಗೂ ಚಿಕ್ಕಮಾದು ಅವರಂಥ ಘಟಾನುಘಟಿ ನಾಯಕರಿದ್ದು 9 ಸ್ಥಾನ ಗೆದ್ದಿದ್ದೇವು. ಈಗ ಯಾವ ನಾಯಕರು ಇಲ್ಲದೆ 7 ಸ್ಥಾನ ಗೆದ್ದಿದ್ದೇವೆ. ಉಪಚುನಾವಣೆ ಮತಗಳಿಗೂ ನಗರಸಭೆ ಚುನಾವಣೆಗು ವ್ಯತ್ಯಾಸ ಇದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ. ಪಕ್ಷೇತರರ ಸಹಾಯ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ. ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಸಂಪೂರ್ಣ ವಿವರ.

    1ನೇ ವಾರ್ಡ್-ದೇವರಾಜ್- ಜೆಡಿಎಸ್
    2ನೇ ವಾರ್ಡ್- ಆಶಾರಾಣಿ- ಪಕ್ಷೇತರ
    3ನೇ ವಾರ್ಡ್- ಅನಿಷಾ- ಕಾಂಗ್ರೆಸ್
    4ನೇ ವಾರ್ಡ್- ಭವ್ಯ- ಕಾಂಗ್ರೆಸ್
    5ನೇ ವಾರ್ಡ್- ಸ್ವಾಮಿಗೌಡ- ಕಾಂಗ್ರೆಸ್
    6ನೇ ವಾರ್ಡ್- ದೇವನಾಯ್ಕ- ಕಾಂಗ್ರೆಸ್
    7ನೇ ವಾರ್ಡ್- ಶರವಣ- ಜೆಡಿಎಸ್
    8ನೇ ವಾರ್ಡ್- ಸತೀಶ್- ಪಕ್ಷೇತರ
    9ನೇ ವಾರ್ಡ್- ಸಮೀನಾ ಪರ್ವೇಜ್- ಕಾಂಗ್ರೆಸ್
    10ನೇ ವಾರ್ಡ್- ರಮೇಶ್- ಪಕ್ಷೇತರ
    11ನೇ ವಾರ್ಡ್- ಹರೀಶ್ ಕುಮಾರ್- ಬಿಜೆಪಿ
    12ನೇ ವಾರ್ಡ್- ವಿವೇಕ್- ಬಿಜೆಪಿ
    13ನೇ ವಾರ್ಡ್- ಮಾಲಕ್ ಪಾಷಾ- ಪಕ್ಷೇತರ
    14ನೇ ವಾರ್ಡ್- ಸಾಯಿಂತಾಜ್- ಜೆಡಿಎಸ್
    15ನೇ ವಾರ್ಡ್- ಸೌರಭ ಸಿದ್ದರಾಜು- ಕಾಂಗ್ರೆಸ್
    16ನೇ ವಾರ್ಡ್- ಕೃಷ್ಣರಾಜ ಗುಪ್ತ- ಜೆಡಿಎಸ್
    17ನೇ ವಾರ್ಡ್- ಮನು- ಕಾಂಗ್ರೆಸ್
    18ನೇ ವಾರ್ಡ್- ಹೆಚ್.ಎನ್.ರಮೇಶ್- ಕಾಂಗ್ರೆಸ್
    19ನೇ ವಾರ್ಡ್- ಶ್ರೀನಾಥ್- ಜೆಡಿಎಸ್
    20ನೇ ವಾರ್ಡ್- ಫರ್ವಿನ್ ತಾಜ್- ಪಕ್ಷೇತರ
    21ನೇ ವಾರ್ಡ್- ರಾಣಿ ಪೆರುಮಾಳ್- ಜೆಡಿಎಸ್
    22ನೇ ವಾರ್ಡ್- ಜೆಬಿವುಲ್ಲಾ ಖಾನ್- ಕಾಂಗ್ರೆಸ್
    23ನೇ ವಾರ್ಡ್- ರಂಜಿತಾ- ಕಾಂಗ್ರೆಸ್
    24ನೇ ವಾರ್ಡ್- ಗೀತಾ- ಕಾಂಗ್ರೆಸ್
    25ನೇ ವಾರ್ಡ್- ಮಂಜ- ಕಾಂಗ್ರೆಸ್
    26ನೇ ವಾರ್ಡ್- ಗಣೇಶ್ ಕುಮಾರಸ್ವಾಮಿ- ಬಿಜೆಪಿ
    27ನೇ ವಾರ್ಡ್- ರಾಧಾ- ಜೆಡಿಎಸ್
    28 ನೇ ವಾರ್ಡ್- ಶ್ವೇತಾ ಮಂಜು- ಕಾಂಗ್ರೆಸ್
    29ನೇ ವಾರ್ಡ್- ಪ್ರಿಯಾಂಕ ಥಾಮಸ್- ಕಾಂಗ್ರೆಸ್
    30ನೇ ವಾರ್ಡ್- ಸಮೀನಾಭಾನು- ಎಸ್‍ಡಿಪಿಐ
    31ನೇ ವಾರ್ಡ್- ಸೈಯದ್ ಯೂನಸ್- ಎಸ್‍ಡಿಪಿಐ

  • ಕಾಂಗ್ರೆಸ್ ಪಾಲಾದ ಚಿಕ್ಕಬಳ್ಳಾಪುರ ನಗರಸಭೆ- ಸಚಿವ ಸುಧಾಕರ್‌ಗೆ ಮುಖಭಂಗ

    ಕಾಂಗ್ರೆಸ್ ಪಾಲಾದ ಚಿಕ್ಕಬಳ್ಳಾಪುರ ನಗರಸಭೆ- ಸಚಿವ ಸುಧಾಕರ್‌ಗೆ ಮುಖಭಂಗ

    ಚಿಕ್ಕಬಳ್ಳಾಪುರ: ಜಿಲ್ಲೆಯ ನಗರಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ನಗರಸಭೆ ಕಾಂಗ್ರೆಸ್ ಪಕ್ಷದ ಪಾಲಾಗಿದೆ.

    31 ವಾರ್ಡುಗಳ ಪೈಕಿ 16 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದು, 09 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಲ್ಲದೆ 02 ವಾರ್ಡುಗಳಲ್ಲಿ ಜೆಡಿಎಸ್ ಹಾಗೂ 04 ವಾರ್ಡುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ.

    31 ವಾರ್ಡುಗಳ ವಿಜೇತರ ಪಟ್ಟಿ:
    ಕಾಂಗ್ರೆಸ್:
    ರತ್ನಮ್ಮ, ಶಕೀಲಾ ಭಾನು, ಸತೀಶ್, ನಿರ್ಮಲಾಪ್ರಭು, ದೀಪಕ್, ಅಂಬರೀಶ್, ರಫೀಕ್, ಅಂಬಿಕಾ, ನರಸಿಂಹಮೂರ್ತಿ, ಅಪ್ಜಲ್, ಸ್ವಾತಿ.ಎಂ, ನೇತ್ರಾವತಿ, ಚಂದ್ರಶೇಖರ್, ವೆಂಕಟೇಶ್, ಮೀನಾಕ್ಷಿ, ಜಯಲಕ್ಷ್ಮೀ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳು.

    ಬಿಜೆಪಿ:
    ಸುಮ ಶಶಿಶೇಖರ್, ಗಜೇಂದ್ರ, ನಾಗರಾಜ್, ದೀಪ.ಬಿ.ಕೆ, ಮಂಜುಳ.ಆರ್, ಯತೀಶ್, ಎ.ಬಿ.ಮಂಜುನಾಥ್, ಬಿ.ಎನ್.ರಾಜೇಶ್ವರಿ, ಭಾರತಿದೇವಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು.

    ಜೆಡಿಎಸ್ ಹಾಗೂ ಪಕ್ಷೇತರ:
    ಮಠಮಪ್ಪ, ವೀಣಾರಾಮು ಅವರು ಜೆಡಿಎಸ್‍ನಿಂದ ಗೆದ್ದ ಅಭ್ಯರ್ಥಿಗಳಾದರೆ, ಪಕ್ಷೇತರವಾಗಿ ರುಕ್ಮಿಣಿ ಮುನಿರಾಜು, ಸುಬ್ರಮಣ್ಯಂ, ಮಹಮದ್ ಜಾಫರ್, ಡಿ.ಎಸ್.ಆನಂದ್ ರೆಡ್ಡಿ ಬಾಬು ಜಯಗಳಿಸಿದ್ದಾರೆ.

    ಈ ಮೂಲಕ ಸದ್ಯ ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಾಲಾಗಿದೆ. ಇತ್ತ ನೂತನ ಸಚಿವ ಡಾ.ಕೆ ಸುಧಾಕರ್ ಬಿಜೆಪಿ ಪಕ್ಷದಿಂದ ನಗರಸಭೆ ಚುನಾವಣಾ ಉಸ್ತುವಾರಿ ವಹಿಸಿದ್ದರು. ವಾರ್ಡುವಾರು ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರವನ್ನ ಸಹ ನಡೆಸಿದ್ದರು. ಇದಲ್ಲದೇ ನಗರಸಭೆ ಚುನಾವಣೆ ಹಿನ್ನೆಲೆ ವಿಶೇಷ ಪ್ರಣಾಳಿಕೆಯನ್ನ ಸಹ ಸುಧಾಕರ್ ಬಿಡುಗಡೆ ಮಾಡಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹವಾ ಕ್ರಿಯೇಟ್ ಮಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಿ ಗೆದ್ದು ಬೀಗಿ ಸಚಿವರಾದ ಸುಧಾಕರ್ ಸದ್ಯ ನಗರಸಭೆಯಲ್ಲೂ ಕಮಾಲ್ ಮಾಡಲಿದ್ದಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ ಎಲ್ಲವೂ ಉಲ್ಟಾ ಎಂಬಂತಾಗಿದ್ದು, ಬಿಜೆಪಿಯ ಅಧಿಕಾರ ಹಿಡಿಯುವ ಕನಸು ನುಚ್ಚು ನೂರಾಗಿದೆ.

    20ರಿಂದ 22 ವಾರ್ಡುಗಳಲ್ಲಿ ಗೆಲುವಿನ ನೀರಿಕ್ಷೆಯಲ್ಲಿದ್ದ ಸಚಿವ ಸುಧಾಕರ್‍ಗೆ ನಗರಸಭೆ ಚುನಾವಣೆ ಫಲಿತಾಂಶ ತೀವ್ರ ನಿರಾಸೆ ತಂದಿದೆ. ನೂತನ ಸಚಿವರಾದ ನಂತರ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸುವ ಹಾಗೂ ನಗರಸಭೆಯಲ್ಲಿ ತಮ್ಮದೇ ಪಕ್ಷದ ಸಾರ್ವಭೌಮತ್ವ ಸಾಧಿಸುವ ಇರಾದೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ನಗರಸಭೆಯಲ್ಲೂ ಬಿಜೆಪಿ ಅರಳಿಸಿ ಚಿಕ್ಕಬಳ್ಳಾಪುರ ನಗರಸಭೆಯನ್ನ ಕೇಸರಿಮಯ ಮಾಡುವ ಕನಸು ನನಸಾಗಿಲ್ಲ. ಎಲ್ಲರೂ ಬಿಜೆಪಿ 15-16 ಸ್ಥಾನಗಳಿಸುವ ನಿರೀಕ್ಷೆಯಲ್ಲಿದ್ದರೂ ಮತದಾರ ಪ್ರಭುಗಳು ಮಾತ್ರ ಎಲ್ಲರ ನಿರೀಕ್ಷೆ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಆಶೀರ್ವಾದ ಮಾಡಿದ್ದಾರೆ. ಇದರಿಂದ ನೂತನ ಸಚಿವ ಸುಧಾಕರ್ ಅವರಿಗೆ ಮುಖಭಂಗ ಎದುರಾಗಿದೆ.

  • ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನಗರಸಭೆ ಚುನಾವಣೆಗೆ ಅವಕಾಶ: ಶರತ್ ಬಚ್ಚೇಗೌಡ

    ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನಗರಸಭೆ ಚುನಾವಣೆಗೆ ಅವಕಾಶ: ಶರತ್ ಬಚ್ಚೇಗೌಡ

    ಬೆಂಗಳೂರು: ತಾಲೂಕಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗು ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದವರನ್ನು ಗುರುತಿಸಿ ಅವರಿಗೆ ನಗರಸಭೆ ಚುನಾವಣೆಯ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

    ಹೊಸಕೋಟೆ ಕ್ಷೇತ್ರದಲ್ಲಿ ನಗರಸಭೆ ಚುನಾವಣೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಬಳಿಕ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ನೀರು ಸರಬರಾಜುಗುತ್ತಿದ್ದ ಪೈಪನ್ನು ಒಡೆದು ಕೋರ್ ಕಮುಟಿಯಲ್ಲಿ ವಾರ್ಡ್‍ನವರು ವ್ಯವಸ್ಥೆಯನ್ನು ಕೆಡಿಸುತ್ತಿದ್ದಾರೆ. ಇದನ್ನೆಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಮಾಡುತ್ತಿರುವುದು ನಮಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಈ ಬಗ್ಗೆ ಈ ಸಮಿತಿಯಲ್ಲಿ ತಿರ್ಮಾನಿಸಲಾಗುವುದು. ಇದಕ್ಕೆಲ್ಲ ನಾವು ಹೆದರದೆ ಕೆಲಸ ಒಗ್ಗಟ್ಟಿನಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಕೆಲಸ ಮಾಡಬೇಕು. ನಗರಸಭೆಯ ಚುನಾವಣೆಯಲ್ಲಿ ಸರ್ವಸಮ್ಮತವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ತಂದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತರಬೇಕು. ಹೊಸಕೋಟೆ ಕ್ಷೇತ್ರದಲ್ಲಿ ಷಡ್ಯಂತರ ಮಾಡುತ್ತಿರುವವರಿಗೆ ತಕ್ಕ ಪಾಠವನ್ನು ತಾಲೂಕಿನ ಮತದಾರರು ಸ್ವಾಭಿಮಾನದ ಪಕ್ಷಕ್ಕೆ ಮತ ನೀಡಿ ಅಭಿವೃದ್ಧಿಯ ಮೂಲಕ ತೋರಿಸಬೇಕಾಗಿದೆ ಎಂದರು.

  • ಎರಡು ವರ್ಷ ಏನು ಮಾಡ್ತಿದ್ರಿ?: ಶಾಸಕಿ ರೂಪಕಲಾಗೆ ಸಾರ್ವಜನಿಕರಿಂದ ತರಾಟೆ

    ಎರಡು ವರ್ಷ ಏನು ಮಾಡ್ತಿದ್ರಿ?: ಶಾಸಕಿ ರೂಪಕಲಾಗೆ ಸಾರ್ವಜನಿಕರಿಂದ ತರಾಟೆ

    ಕೋಲಾರ: ಎರಡು ವರ್ಷ ಏನು ಮಾಡುತ್ತಿದ್ರಿ ಎಂದು ಕೆಜಿಎಫ್ ನಿವಾಸಿಗಳು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ, ಶಾಸಕಿ ರೂಪಕಲಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಕೆಜಿಎಫ್ ನಗರಸಭೆ ಚುನಾವಣೆ ನವೆಂಬರ್ 12ರಂದು ನಡೆಯಲಿದೆ. ಹೀಗಾಗಿ ಶಾಸಕಿ ರೂಪಕಲಾ ಅವರು ಕಾಂಗ್ರೆಸ್ ಅಭ್ಯರ್ಥಿ ಸೇಂದಿಲ್ ಪರ ಪ್ರಚಾರ ಮಾಡಲು 30ನೇ ವಾರ್ಡ್ ಗೆ ಶನಿವಾರ ಸಂಜೆ ಬಂದಿದ್ದರು. ಈ ವೇಳೆ ಸ್ಥಳೀಯರು ಶಾಸಕರನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ರೂಪಕಲಾ ಫಜೀತಿಗೆ ಸಿಲುಕಿದರು.

    ಎರಡು ವರ್ಷಗಳ ಬಳಿಕ ಮತ ಕೇಳುವುದಕ್ಕೆ ಬಂದಿದ್ದೀರ. ಇಲ್ಲಿವರೆಗೂ ಏನು ಮಾಡುತ್ತಿದ್ರಿ? ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡುತ್ತೇನೆ ಅಂತ ಭರವಸೆ ನೀಡಿದ್ರಿ. ನಿಮ್ಮ ಭರವಸೆ ಮಾತ್ರ ಹಾಗೆ ಉಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿರುವವರಿಗೆ ಕೈ ಕೊಟ್ಟು, ಇನ್ನೊಬ್ಬರಿಗೆ ಟಿಕೆಟ್ ಕೊಟ್ಟಿದ್ದೀರ. ನೀವು ನಮ್ಮ ವಾರ್ಡ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಮಹಿಳೆಯರು, ಪುರುಷರು ತರಾಟೆ ತೆಗೆದುಕೊಂಡರು.

    ಕುಡಿಯುವುದಕ್ಕೆ ನೀರಿಲ್ಲ, ಶಾಲೆ ಕಟ್ಟಡ ಬಿದ್ದು ಹೋಗಿವೆ. ಮಕ್ಕಳು ಭಯದಲ್ಲಿ ಪಾಠ ಕೇಳುತ್ತಿವೆ. ಇದನ್ನೆಲ್ಲ ನೋಡಿದರೆ ನಮ್ಮ ವಾರ್ಡ್ ಗೆ ಶಾಲೆ ಬೇಡವೇ ಬೇಡ ಎನ್ನುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದರು.

    ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕಿ ರೂಪಕಲಾ ಅವರು, ನನ್ನಿಂದ ಸಣ್ಣ-ಪುಟ್ಟ ಲೋಪದೋಷವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ನಾನು ಶಾಸಕಿಯಾಗಿ ಆಯ್ಕೆಯಾಗಿ ಒಂದೂವರೆ ವರ್ಷವಾಗಿದೆ. ನಿತ್ಯವೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಮಾಧಾನ ಮಾಡಲು ಯತ್ನಿಸಿದರು. ಆದರೆ ಇದಕ್ಕೆ ಜಗ್ಗದ ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಇದಕ್ಕೆ ಉತ್ತರಿಸಲಾಗದೆ ಶಾಸಕಿ ರೂಪಕಲಾ ಅವರು ಸಾರ್ವಜನಿಕರಿಗೆ ಕೈ ಮುಗಿದು ಅಲ್ಲಿಂದ ಹೊರಟು ಹೋದರು.

  • ನಗರಸಭೆ ಚುನಾವಣೆಗೂ ಮುನ್ನವೇ ಖಾತೆ ತೆರೆದ ಜೆಡಿಎಸ್!

    ನಗರಸಭೆ ಚುನಾವಣೆಗೂ ಮುನ್ನವೇ ಖಾತೆ ತೆರೆದ ಜೆಡಿಎಸ್!

    ಚಿತ್ರದುರ್ಗ: ಚುನಾವಣೆಗೂ ಮುನ್ನವೇ ಹಿರಿಯೂರು ನಗರಸಭೆಯಲ್ಲಿ ಜೆಡಿಎಸ್ ಖಾತೆ ತೆರೆದಿದ್ದು, ಜೆಡಿಎಸ್ ಅಭ್ಯರ್ಥಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

    ಏಳನೇ ವಾರ್ಡಿನ ಪಾಂಡುರಂಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 29 ರಂದು ನಗರಸಭೆ ಚುನಾವಣೆ ನಡೆಯಬೇಕಿತ್ತು. ಈ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಪಾಂಡುರಂಗ ಅವರು ನಾಮಪತ್ರ ಸಲ್ಲಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು.

    ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾವಾಗಿತ್ತು. ಈರಲಿಂಗೆಗೌಡ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಹೇಳಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಪಾಂಡುರಂಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಒಬ್ಬರೇ ಅಭ್ಯರ್ಥಿ ಇರುವ ಕಾರಣ ಮೇ 29 ರಂದು ನಡೆಯಬೇಕಿದ್ದ ನಗರಸಭೆ ಚುನಾವಣೆ ರದ್ದಾಗಿದೆ. ನಗರಸಭಾ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಪಾಂಡುರಂಗ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

  • ವೋಟ್ ಹಾಕದವರು ಮತ ಕೇಳಲು ಅರ್ಹರಲ್ಲ: ರಮ್ಯಾ ವಿರುದ್ಧ ಕೈ ಕಾರ್ಯಕರ್ತರ ಕಿಡಿ

    ವೋಟ್ ಹಾಕದವರು ಮತ ಕೇಳಲು ಅರ್ಹರಲ್ಲ: ರಮ್ಯಾ ವಿರುದ್ಧ ಕೈ ಕಾರ್ಯಕರ್ತರ ಕಿಡಿ

    ಮಂಡ್ಯ: ಮತದಾನ ಮಾಡದವರು, ಚುನಾವಣೆಗೆ ನಿಲ್ಲಲು ಅಥವಾ ಮತ ಕೇಳಲು ಅರ್ಹರಲ್ಲ ಎಂದು ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಂಸದೆ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

    ಇಂದು ನಡೆದ ನಗರಸಭೆ ಚುನಾವಣೆಯಲ್ಲಿ ಕೊನೆಗೂ ಮತದಾನ ಮಾಡದ ರಮ್ಯಾ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

    ಮಂಡ್ಯ ನಗರಸಭೆಯ 11 ನೇ ವಾರ್ಡ್ ವ್ಯಾಪ್ತಿಯಲ್ಲಿ ಸಂಸದೆ ರಮ್ಯಾ ಮನೆಯಿದೆ. ಆ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕೂಡಾ ಬಂದು ಮತದಾನ ಮಾಡುವಂತೆ ಕೇಳಿಕೊಂಡಿದ್ದರು. ಆಗ ಬರುವುದಾಗಿ ರಮ್ಯಾ ಭರಸೆ ನೀಡಿದ್ದರು. ಮತಗಟ್ಟೆ ಬಳಿ ಸಂಜೆವರೆಗೂ ಕಾದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ನಿರಾಶರಾಗಿದ್ದು, ಅವರು ಬರಲು ಸಾಧ್ಯವಾಗದಷ್ಟು ಕೆಲಸ ಇತ್ತೇನೋ ಎಂದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

    ರಮ್ಯಾ ಕಳೆದ ಬಾರಿ ವಿಧಾನಸಭೆ ಚುನಾವಣೆಯ ವೇಳೆಯಲ್ಲಿಯೂ ಬಂದು ಮತ ಚಲಾಯಿಸಿರಲಿಲ್ಲ. ಆಗ ರಮ್ಯಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಖಂಡಿತ ಬಂದು ಮತದಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಮ್ಯಾ ಬೆಂಬಲಿಗರು ನಿರೀಕ್ಷೆಯಿಟ್ಟಿದ್ದರು.

    ಮಂಡ್ಯದಿಂದಲೇ ರಮ್ಯಾ ಕಾಂಗ್ರೆಸ್‍ನಿಂದ ಮತ್ತೊಮ್ಮೆ 2019ರ ಲೋಕಸಭಾ ಚುನಾವಣೆಗೆ ಸ್ಪಧಿಸುತ್ತಾರೆಂದು ಅವರ ತಾಯಿ ರಂಜಿತಾ ಮಾಧ್ಯಮಗಳಿಗೆ ಈ ಹಿಂದೆ ಹೇಳಿಕೆ ನೀಡಿದ್ದರು. ರಾಜ್ಯ ಮಟ್ಟದಲ್ಲಿ ಜೆಡಿಎಸ್ ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ಹೊಂದಿರಬಹುದು, ಆದರೆ ಯಾವುದೇ ಕಾರಣಕ್ಕೂ ಜಿಡಿಎಸ್ ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೆಡಿಎಸ್‍ಗೆ ಬಿಡಲ್ಲ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ರಮ್ಯಾ ಕಣಕ್ಕೆ: ತಾಯಿ ರಂಜಿತಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv