Tag: Municipal Elections

  • ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ವಿಜಯನಗರ (ಬಳ್ಳಾರಿ): ಬಿಜೆಪಿಯ ಮಾಜಿ ಶಾಸಕ ನೇಮಿರಾಜನಾಯ್ಕ್ ಮೇಲೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾ ನಾಯಕ್ ಚಪ್ಪಲಿಯಿಂದ ಹಲ್ಲೆಗೆ ಯತ್ನಸಿದ್ದಾರೆ.

    ನಿನ್ನೆ ನಡೆದ ಪುರಸಭೆಯ ಚುನಾವಣೆಯ ಮತದಾನದ ವೇಳೆ ಮತಕೇಂದ್ರದ ಒಳಗೆ ನೇಮಿರಾಜ್ ನಾಯಕ್, ಅವರು ಹೋಗಿದ್ದ ಕಾರಣ ಆರಂಭವಾದ ಜಗಳವು, ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಭರಾಟೆಯಲ್ಲಿ ಭೀಮಾ ನಾಯಕ್ ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಹಾಲಿ ಶಾಸಕ ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆ ಮಾಡಲು ಮುಂದಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಂದು ವೈರಲ್ ಆಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆ ಇಲ್ಲ: ಸುನಿಲ್ ಕುಮಾರ್

    ಪುರಸಭೆ ಚುನಾವಣೆಯಲ್ಲಿ ಮತದಾನ ಕೇಂದ್ರದ ಮುಂದೆ ಪರಸ್ಪರ ಈ ವಾಗ್ವಾದ ನಡೆದಿದ್ದು, ನೇಮಿರಾಜ್ ನಾಯಕ್ ಹಾಗೂ ಅವರ ಬೆಂಬಲಿಗರ ಮೇಲೆ ಹಾಲಿ ಶಾಸಕ ಹಲ್ಲೆ ಮಾಡಲು ಮುಂದಾಗಿದ್ದರು. ಈ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ

  • ಮಡಿಕೇರಿ ನಗರಸಭೆ ಚುನಾವಣೆ- ಕೋವಿಡ್ ನಿಯಮ ಪಾಲಿಸಿ ಶಾಂತಿಯುತ ಮತದಾನ

    ಮಡಿಕೇರಿ ನಗರಸಭೆ ಚುನಾವಣೆ- ಕೋವಿಡ್ ನಿಯಮ ಪಾಲಿಸಿ ಶಾಂತಿಯುತ ಮತದಾನ

    ಮಡಿಕೇರಿ: ನಗರಸಭೆ ಚುನಾವಣೆ ಸಂಬಂಧ 23 ವಾರ್ಡ್‍ಗಳ 27 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಪುರುಷರು ಮತ್ತು ಮಹಿಳೆಯರು ಕೊರೊನಾ ನಿಯಮ ಪಾಲಿಸಿ, ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

    ವಿದ್ಯಾನಗರ, ಕಾವೇರಿ ಬಡಾವಣೆ, ಗದ್ದಿಗೆ, ಆಜಾದ್ ನಗರ, ದೇಚೂರು, ಕನ್ನಂಡಬಾಣೆ, ಗಣಪತಿ ಬೀದಿ, ಮಹದೇವಪೇಟೆ, ಅಂಬೇಡ್ಕರ್ ಬಡಾವಣೆ, ಕನಕದಾಸ ರಸ್ತೆ, ದಾಸವಾಳ ರಸ್ತೆ, ಪುಟಾಣಿ ನಗರ, ಜಯನಗರ, ರೇಸ್‍ಕೋರ್ಸ್ ರಸ್ತೆ, ಗೌಳಿಬೀದಿ, ಕಾನ್ವೆಂಟ್ ರಸ್ತೆ, ಹೊಸ ಬಡಾವಣೆ, ಸುಬ್ರಹ್ಮಣ್ಯ ನಗರ, ಜ್ಯೋತಿ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಅಶೋಕ ಪುರ ಸೇರಿದಂತೆ ಹಲವು ವಾರ್ಡ್‍ಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು.

    ಹಲವು ಮತಗಟ್ಟೆಗಳಲ್ಲಿ ಹಿರಿಯರು ತಮ್ಮ ಮಕ್ಕಳ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಬೆಳಗ್ಗೆ ಬಿರುಸಿನ ಮತದಾನ ನಡೆಯಿತು. ಕೋವಿಡ್-19 ಹಿನ್ನೆಲೆ ನಗರಸಭೆ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಥರ್ಮೋಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುವ ದೃಶ್ಯ ಕಂಡುಬಂದಿತು. ಜೊತೆಗೆ ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಲಾಗಿತ್ತು. ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೋವಿಡ್ ಸೋಂಕಿತರು ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಮಹೇಶ್, ಇತರರು ಇದ್ದರು.

  • ನಗರಸಭೆ ಚುನಾವಣೆ – ಬಿಜೆಪಿ ಕಾರ್ಯಕರ್ತರಿಂದ ಕೋವಿಡ್ ನಿಯಮ ಉಲ್ಲಂಘನೆ

    ನಗರಸಭೆ ಚುನಾವಣೆ – ಬಿಜೆಪಿ ಕಾರ್ಯಕರ್ತರಿಂದ ಕೋವಿಡ್ ನಿಯಮ ಉಲ್ಲಂಘನೆ

    ಮಡಿಕೇರಿ: ನಗರಸಭೆ ಚುನಾವಣೆ ಹಿನ್ನೆಲೆ ಮತಗಟ್ಟೆಗಳ ಬಳಿ ಬಿಜೆಪಿ ಕಾರ್ಯಕರ್ತರು ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ದಿನಗಳೆದಂತೆ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶದ ಜನರೇ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂದು ಮಡಿಕೇರಿ ನಗರಸಭೆ ಚುನಾವಣೆ ನಡೆಸಲು ಸರ್ಕಾರ ಅದೇಶ ಮಾಡಿದೆ.

    ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಜನರು ಬೆಳಗ್ಗೆಯಿಂದಲೂ ಉತ್ಸಾಹದಿಂದ ಮತಗಟ್ಟೆಗಳತ್ತ ಹೋಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಮತ ಹಾಕುತ್ತಿದ್ದಾರೆ. ಅದರೆ ಜನರಿಗೆ ಬುದ್ಧಿ ಹೇಳುವ ಜನ ನಾಯಕರೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ.

    ಮಡಿಕೇರಿ ನಗರದ ಜ್ಯೂನಿಯರ್ ಕಾಲೇಜು ಮತಗಟ್ಟೆ ಹೊರಗೆ ಕೋವಿಡ್ ನಿಯಮವನ್ನು ಬಿಜೆಪಿ ಎಂಎಲ್‍ಸಿ ಸುನೀಲ್ ಸುಬ್ರಹ್ಮಣಿ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಹಾಗೂ ಮತದಾರರೊಂದಿಗೆ ಗುಂಪು ಗುಂಪಾಗಿ ನಿಂತು ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಮತದಾರದ ಕೈ ಹಿಡಿದು ಪಕ್ಷದ ಅಭ್ಯರ್ಥಿಪರ ಮತ ಹಾಕುವಂತೆ ಮನವಿಯನ್ನು ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.

    ಮಡಿಕೇರಿ ನಗರಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಸಕ ಬೋಪಯ್ಯ ಸ್ವಕುಟುಂಬ ಸಮೇತರಾಗಿ ಬಂದು ಮಡಿಕೇರಿ ಜೂನಿಯರ್ ಕಾಲೇಜಿನ ಮತಗಟ್ಟೆ ಸಂಖ್ಯೆ ಆರರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮಾತಾನಾಡಿದ ಅವರು ನಗರದಲ್ಲಿ 23 ವಾಡ್9 ಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ಇದರಲ್ಲಿ 15 ವಾಡ್9 ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಬಾರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಬಿಜೆಪಿ ಪರವಾಗಿರುತ್ತದೆ ಎಂದರು.

    ಕೋವಿಡ್ ನಿಯಂತ್ರಣಕ್ಕೆ ರಾಜ್ಯಕ್ಕೆ ಟಫ್ ರೂಲ್ಸ್ ಅಗತ್ಯವಿತ್ತು ಎಂದ ಬೋಪಯ್ಯ ಬೆಂಗಳೂರಿಗೆ ಯಾವೆಲ್ಲಾ ರಾಜ್ಯಗಳಿಂದ ಜನರು ಬರುತ್ತಿದ್ದರು. ಬೆಂಗಳೂರಿಂದ ಹಳ್ಳಿಗಳಿಗೂ ಜನರ ಓಡಾಟವಿತ್ತು. ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿರುವುದು ಸೂಕ್ತ. ಬೆಂಗಳೂರಿಂದ ಕೊಡಗಿಗೆ ಬಂದಿರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಬೇಕು. ಅಂತಹವರಿಗೆ ಹೋಂ ಕ್ವಾರಂಟೈನ್ ಮಾಡಬೇಕಾಗಿರುವುದು ಕಡ್ಡಾಯ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಕೆ.ಜಿ ಬೋಪಯ್ಯ ಸಲಹೆ ನೀಡಿದ್ರು.

  • ಬಿಜೆಪಿ ಅಭ್ಯರ್ಥಿಗಳ ಪರ ಅಶ್ವಥ್ ನಾರಾಯಣ್ ಪ್ರಚಾರ

    ಬಿಜೆಪಿ ಅಭ್ಯರ್ಥಿಗಳ ಪರ ಅಶ್ವಥ್ ನಾರಾಯಣ್ ಪ್ರಚಾರ

    ರಾಮನಗರ: ಚನ್ನಪಟ್ಟಣ- ರಾಮನಗರ ನಗರಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಬ್ಯುಸಿಯಾಗಿದ್ದರು.

    ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಸಿಎಂ, ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿದರು. ರಾಮನಗರದ ಮದ್ದೂರಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅಶ್ವಥ್ ನಾರಾಯಣ್ ಅವರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸಾರ್ವಜನಿಕರೊಂದಿಗೆ ಮನವಿ ಮಾಡಿಕೊಂಡರು.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಮಧ್ಯದಲ್ಲೇ ನಗರಸಭೆ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ ಡಿಸಿಎಂ ಅವರೊಂದಿಗೆ ನೂರಾರು ಜನರು ಸೇರಿದರು. ಪ್ರಮುಖವಾಗಿ ಮಕ್ಕಳೊಂದಿಗೆ ಸೇರಿಕೊಂಡು ಡಿಸಿಎಂ ಪ್ರಚಾರ ಮಾಡಿದರು. ಇವರಿಗೆ ಬಿಜೆಪಿ ಜಿಲ್ಲಾ ಮುಖಂಡರು ಸಾಥ್ ನೀಡಿದರು.

  • ಗುಜರಾತ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಕಾಂಗ್ರೆಸ್‌ ಕಳಪೆ ಸಾಧನೆ

    ಗುಜರಾತ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಕಾಂಗ್ರೆಸ್‌ ಕಳಪೆ ಸಾಧನೆ

    – ಮೊದಲ ಪ್ರಯತ್ನದಲ್ಲೇ ಆಪ್‌ ಉತ್ತಮ ಸಾಧನೆ

    ಗಾಂಧಿನಗರ: ಗುಜರಾತ್‌ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಸಾಧನೆ ಮಾಡಿದ್ದರೆ ಕಾಂಗ್ರೆಸ್‌ ಕಳಪೆ ಪ್ರದರ್ಶನ ನೀಡಿದೆ. ಮೊದಲ ಪ್ರಯತ್ನದಲ್ಲೇ ಆಮ್‌ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಿದೆ.

    6 ಮಹಾನಗರ ಪಾಲಿಕೆಗಳ ಒಟ್ಟು 576 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 449 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಅಹಮಾದಾಬಾದ್‌, ಸೂರತ್‌, ವಡೋದರ, ರಾಜ್‌ಕೋಟ್‌, ಜಾಮ್‌ನಗರ, ಭಾವಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

    ಕಾಂಗ್ರೆಸ್‌ ಕೇವಲ 44 ಕ್ಷೇತ್ರಗಳನ್ನು ಗೆದ್ದುಕೊಂಡರೆ, 470 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್‌ 27 ಸ್ಥಾನಗಳನ್ನು ಗೆದ್ದುಕೊಂಡಿದೆ. ಸೂರತ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮೂರನೇ ಸ್ಥಾನಕ್ಕೆ ಆಪ್‌ ತಳ್ಳಿದೆ. ಹೀನಾಯ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಾಜ್‌ಕೋಟ್‌, ಸೂರತ್‌, ಭಾವಾನಗರದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಈ ಗೆಲುವು ನನ್ನ ಪಾಲಿಗೆ ವಿಶೇಷವಾಗಿದೆ. ಅಭಿವೃದ್ಧಿಗೆ ಜನ ಮತ ಹಾಕಿದ್ದಾರೆ. 2 ದಶಕಗಳಿಂದ ಜನ ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಗೆಲುವಿಗೆ ಕಾರಣರಾದ ಬಿಜೆಪಿಯ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

    ಕಳೆದ ವಾರ ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಬಿಜೆಪಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಆಗ ಇದು ಕೃಷಿ ಕಾಯ್ದೆಗಳ ಪರಿಣಾಮದಿಂದಾಗಿ ಜನತೆ ಬಿಜೆಪಿ ನಡೆಗೆ ಅಸಮಾಧಾನಗೊಂಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿತ್ತು.

  • ಸಿಎಂ ಅಸಹಾಯಕ ಸ್ಥಿತಿಗೆ ತಂದು, ಆಡಿಸುತ್ತಿರುವ ಶಕ್ತಿ ಬಗ್ಗೆ ಕಾಲ ಬಂದಾಗ ತಿಳಿಸ್ತೇನೆ: ಶಿವಲಿಂಗೇಗೌಡ

    ಸಿಎಂ ಅಸಹಾಯಕ ಸ್ಥಿತಿಗೆ ತಂದು, ಆಡಿಸುತ್ತಿರುವ ಶಕ್ತಿ ಬಗ್ಗೆ ಕಾಲ ಬಂದಾಗ ತಿಳಿಸ್ತೇನೆ: ಶಿವಲಿಂಗೇಗೌಡ

    ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಹಾಯಕ ಸ್ಥಿತಿ ತಲುಪಿದ್ದು, ಅವರನ್ನು ಈ ಸ್ಥಿತಿಗೆ ತಂದ ಶಕ್ತಿ ಹೆಸರನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.

    ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಳಿಕ ಮಾತನಾಡಿದ ಅವರು, ಅರಸೀಕೆರೆ ನಗರದ ಅಭಿವೃದ್ಧಿ ಕುಲಗೆಡಿಸಲು ಮಾಡಿದ ಅನೈತಿಕ ಮೀಸಲಾತಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದೆ. ಅವರು ರಾಜಕೀಯದ ಒತ್ತಡದಿಂದ ಇದೆಲ್ಲ ಆಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು. ಅವರನ್ನು ಅಸಹಾಯಕ ಸ್ಥಿತಿಗೆ ತಂದು, ಹಿಡಿದು ಆಡಿಸುತ್ತಿರುವ ಶಕ್ತಿ ಯಾವುದು ಎಂದು ಕಾಲ ಬಂದಾಗ ತಿಳಿಸುತ್ತೇನೆ ಎಂದರು.

    ಅರಸೀಕೆರೆ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದೆ. ಒಟ್ಟು 31 ಸದಸ್ಯರಿದ್ದು, ಜೆಡಿಎಸ್ ನಿಂದ 22, ಬಿಜೆಪಿ 5, ಕಾಂಗ್ರೆಸ್ 1, ಪಕ್ಷೇತರ 3 ಮಂದಿ ಸದಸ್ಯ ಬಲವಿದೆ. ಬಿಜೆಪಿಯಲ್ಲಿ ಮಾತ್ರ ಎಸ್‍ಟಿ ಸಮುದಾಯದ ಅಭ್ಯರ್ಥಿ ಗೆದ್ದಿದ್ದು, ಕೇವಲ 5 ಮಂದಿ ಸದಸ್ಯರಿರುವ ಬಿಜೆಪಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಹೀಗಾಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯುವ ಉದ್ದೇಶದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಕಾನೂನು ಬಾಹಿರವಾಗಿ ಎಸ್‍ಟಿ ಜನಾಂಗಕ್ಕೆ ಅಧ್ಯಕ್ಷಗಾದಿ ಮೀಸಲಾತಿ ನೀಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿಯ ಅನಂತಕುಮಾರ್ ಹೆಗಡೆ ನಾವು ಮೀಸಲಾತಿ ತೆಗೆಯಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದರು. ಅಂತಹ ಮೀಸಲಾತಿ ವಿರೋಧಿ ಸರ್ಕಾರ ಮೀಸಲಾತಿ ಪರ ಎಂದು ಹೇಳಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ನಾನು ಮೀಸಲಾತಿ ಸ್ವಾಗತಿಸುವವರಲ್ಲಿ ಮೊದಲಿಗ. ಆದರೆ ಕಾನೂನಿಗೆ ವಿರುದ್ಧವಾಗಿ ಮೀಸಲಾತಿ ಮಾಡಿದಕ್ಕೆ ವಿರೋಧವಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಗಿರೀಶ್, ಇಂದು ಚುನಾವಣೆ ನಡೆದರೂ ಫಲಿತಾಂಶ ಪ್ರಕಟಿಸದಂತೆ ಶಾಸಕ ಶಿವಲಿಂಗೇಗೌಡ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ. ಅವರ ನಡೆ ಮೀಸಲಾತಿ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ನಗರಸಭೆ ಚುನಾವಣೆ – ಅಪರೇಷನ್ ಕಮಲ ಸಕ್ಸಸ್

    ಚಿಕ್ಕಬಳ್ಳಾಪುರದಲ್ಲಿ ನಗರಸಭೆ ಚುನಾವಣೆ – ಅಪರೇಷನ್ ಕಮಲ ಸಕ್ಸಸ್

    – ಅಧ್ಯಕ್ಷರಾಗಿ ಸುಧಾಕರ್ ಬೆಂಬಲಿಗ ಆನಂದ್ ರೆಡ್ಡಿ ಆಯ್ಕೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ನೂತನ ಅಧ್ಯಕ್ಷರಾಗಿ ಸಚಿವ ಸುಧಾಕರ್ ಬೆಂಬಲಿಗ ಆನಂದ್ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‍ನ ವೀಣಾರಾಮು ಆಯ್ಕೆಯಾಗಿದ್ದು, ಸಚಿವ ಸುಧಾಕರ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಂದ್ ರೆಡ್ಡಿಯನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಚಿವ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುವಂತೆ ಮಾಡಿದ್ದಾರೆ.

    ಅಂದಹಾಗೆ 31 ಮಂದಿ ಸಂಖ್ಯಾ ಬಲದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 16 ಮಂದಿ ಕಾಂಗ್ರೆಸ್ ಸದಸ್ಯರಿದ್ದು, 9 ಮಂದಿ ಬಿಜೆಪಿ ಹಾಗೂ 4 ಪಕ್ಷೇತರರು ಸೇರಿ ಇಬ್ಬರು ಜೆಡಿಎಸ್ ಸದಸ್ಯರಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯರೇ ಅಧ್ಯಕ್ಷರಾಗುವ ತಯಾರಿಯಲ್ಲಿದ್ದರು. ಆದರೆ ಅದೆಲ್ಲದ್ದಕ್ಕೂ ಪುಲ್ ಸ್ಟಾಪ್ ಇಟ್ಟಿರೋ ಕ್ಷೇತ್ರದ ಸಚಿವ ಸುಧಾಕರ್ 7 ಮಂದಿ ಕಾಂಗ್ರೆಸ್ ಸದಸ್ಯರನ್ನೇ ತಮ್ಮತ್ತ ಸೆಳೆದುಕೊಳ್ಳುವ ಮೂಲಕ ತಮ್ಮ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಂದ್ ರೆಡ್ಡಿ ಬಾಬು ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

    ಕಾಂಗ್ರೆಸ್ ಪಕ್ಷದಿಂದ 9 ಮಂದಿ ಸದಸ್ಯರಿದ್ದರೂ 7 ಮಂದಿ ಸದಸ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸಚಿವ ಸುಧಾಕರ್, ಅಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್ಸಿನಿಂದ ಅಧ್ಯಕ್ಷ ಸ್ಥಾನಕ್ಕೆ ಅಂಬಿಕಾರವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರದ್ದೇ ಪಕ್ಷದ ಸದಸ್ಯರಾದ ರಫೀಕ್, ಮೀನಾಕ್ಷಿ, ಚಂದ್ರ ಹಾಗೂ ಅಫ್ಜಲ್ ಪಕ್ಷದ ವಿರುದ್ಧ ಮತ ಚಲಾಯಿಸಿದ್ರೇ, ಕಾಂಗ್ರೆಸ್ಸಿನ ಉಳಿದ ಮೂವರು ಸದಸ್ಯರಾದ ಸ್ವಾತಿ, ರತ್ನಮ್ಮ ಹಾಗೂ ಶಕೀಲಾಭಾನು ಚುನಾವಣೆಗೆ ಗೈರು ಹಾಜರಾಗಿದ್ದರು.

    ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಕೇವಲ 9 ಮತ ಬಂದಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಂದ್ ರೆಡ್ಡಿ ಬಾಬುಗೆ ಬಿಜೆಪಿಯ 9 ಹಾಗೂ ಜೆಡಿಎಸ್‍ನ ಇಬ್ಬರು, ನಾಲ್ವರು ಪಕ್ಷೇತರರರು ಸೇರಿದಂತೆ 04 ಕಾಂಗ್ರೆಸ್ ಮತಗಳು ಹಾಗೂ ಶಾಸಕ ಸುಧಾಕರ್, ಸಂಸದ ಬಿಎನ್ ಬಚ್ಚೇಗೌಡ, ಹಾಗೂ ವಿಧಾನಪರಿಷತ್ ಸದಸ್ಯ ವೈಎ ನಾರಾಯಣಸ್ವಾಮಿ ಮತಗಳು ಬಿದ್ದಿದ್ದು ಒಟ್ಟು 22 ಮತಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ವೀಣಾರಾಮು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  • ಕಾಂಗ್ರೆಸ್ ಮುಖಂಡರಿಂದ ಜೆಡಿಎಸ್ ಕಾರ್ಯಕರ್ತರಿಗೆ ಬಾಡೂಟ

    ಕಾಂಗ್ರೆಸ್ ಮುಖಂಡರಿಂದ ಜೆಡಿಎಸ್ ಕಾರ್ಯಕರ್ತರಿಗೆ ಬಾಡೂಟ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮುಖಂಡರೊಬ್ಬರು ಜೆಡಿಎಸ್ ಕಾರ್ಯಕರ್ತರಿಗೂ ಬಾಡೂಟ ಹಾಕಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಕಾಂಗ್ರೆಸ್ ಮುಖಂಡಾರದ ಜಿ.ಎಚ್.ನಾಗರಾಜ್ ಹಾಗೂ ಅವರ ಮಗ ವಿನಯ್ ಶ್ಯಾಂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದರು.

    ನಂದಿ ಬೆಟ್ಟದ ತಪ್ಪಲಿನ ತಮ್ಮ ತೋಟದ ಮನೆಯಲ್ಲಿ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಸುಮಾರು 3 ರಿಂದ 4 ಸಾವಿರ ಮಂದಿ ಕಾರ್ಯಕರ್ತರು ಭರ್ಜರಿ ಬಾಡೂಟ ಸವಿದಿದ್ದಾರೆ.

    ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗಟ್ಟಾಗಿ ಎದುರಿಸಿದ್ದವು. ಇದರಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಅಲ್ಲದೆ ಭಾನುವಾರ ನಡೆದ ಪಿಎಲ್‍ಡಿ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಒಂದಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಸೆಣಸಾಡಿದ್ದರು. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ ಹಿನ್ನೆಲೆ, ಕಾಂಗ್ರೆಸ್ ಮುಖಂಡ ಜಿ.ಎಚ್.ನಾಗರಾಜ್ ಭರ್ಜರಿ ಬಾಡೂಡ ಆಯೋಜಿಸಿದ್ದು, ಬಾಡೂಟದಲ್ಲಿ ಜೆಡಿಎಸ್ ಮಾಜಿ ಶಾಸಕ ಬಚ್ಚೇಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

  • ಹೊಸಕೋಟೆಯಲ್ಲಿ ಅರಳಿದ ಕಮಲ – ಕೂಗದ ಕುಕ್ಕರ್, ಶೂನ್ಯ ಸಾಧಿಸಿದ ಕಾಂಗ್ರೆಸ್

    ಹೊಸಕೋಟೆಯಲ್ಲಿ ಅರಳಿದ ಕಮಲ – ಕೂಗದ ಕುಕ್ಕರ್, ಶೂನ್ಯ ಸಾಧಿಸಿದ ಕಾಂಗ್ರೆಸ್

    ಬೆಂಗಳೂರು: ಉಪಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಹೊಸಕೋಟೆ ಕ್ಷೇತ್ರ ಮತ್ತೊಂದು ಚುನಾವಣೆಯಲ್ಲಿ ಗಮನಸೆಳೆದಿದ್ದು, ಈ ಬಾರಿ ನಗರಸಭೆಯ ಚುನಾವಣೆಯಲ್ಲೂ ಕಳೆದ ಬಾರಿಯಂತೆ ಸ್ವಾಭಿಮಾನ ಹಾಗೂ ಬಿಜೆಪಿ ನಡುವೆ ಚುನಾವಣೆ ನಡೆದಿದೆ. ಆದರೆ ಈ ಬಾರಿ ಎಂಟಿಬಿ ನಾಗರಾಜು ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

    ಉಪಚುನಾವಣೆಯಲ್ಲಿ ಸದ್ದು ಮಾಡಿದ್ದ ಕುಕ್ಕರ್, ನಗರಸಭೆ ಚುನಾವಣೆಯಲ್ಲಿ ಅಷ್ಟೇನು ಸದ್ದುಮಾಡಿಲ್ಲ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಇಂದು ಬೆಳಿಗ್ಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ನಗರಸಭೆಯ 31 ಸ್ಥಾನಗಳಲ್ಲಿ 114 ಅಭ್ಯರ್ಥಿಗಳಿದ್ದ 31 ವಾರ್ಡ್ ಗಳಲ್ಲಿ ಬಿಜೆಪಿ 22 ವಾರ್ಡುಗಳಲ್ಲಿ ಗೆಲುವು ಸಾಧಿಸುವ ಮೂಲಕ ನಗರಸಭೆಯನ್ನು ತೆಕ್ಕೆಗೆ ಹಾಕಿಕೊಂಡಿದೆ.

    ಈ ಮೂಲಕ ಉಪಚುನಾವಣೆಯಲ್ಲಿನ ಸೇಡನ್ನು ಎಂಟಿಬಿ ತೀರಿಸಿಕೊಂಡಿದ್ದು, ಶಾಸಕ ಶರತ್ ಬಚ್ಚೇಗೌಡ ನಿರೀಕ್ಷಿಸಿದಷ್ಟು ಸ್ಥಾನ ಪಡೆಯದಿರುವುದು ಅವರಿಗೆ ನಿರಾಸೆಯನ್ನುಂಟುಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಒಂದೇ ಒಂದು ಸ್ಥಾನ ಪಡೆಯದೆ ಸೋಲುಂಡಿದೆ.

    ಹೊಸಕೋಟೆ ನಗರಸಭೆ 31 ವಾರ್ಡುಗಳ ಚುನಾವಣಾ ಫಲಿತಾಂಶ:
    ಹೊಸಕೋಟೆ ನಗರಸಭೆ 31 ವಾರ್ಡುಗಳಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶರತ್ ಬಚ್ಚೇಗೌಡ ಬೆಂಬಲಿಗರು ಏಳು ವಾರ್ಡುಗಳಲ್ಲಿ ಗೆದ್ದಿದ್ದಾರೆ. ಉಳಿದಂತೆ ಎಸ್.ಡಿ.ಪಿ.ಐ ಒಂದು ಮತ್ತು ಪಕ್ಷೇತರರು ಒಂದು ವಾರ್ಡುಗಳಲ್ಲಿ ಗೆಲುವು ಪಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್‍ಗೆ ಈ ಬಾರಿ ಮುಖಭಂಗವಾಗಿದೆ. ಯಾಕೆಂದರೆ 21 ವಾರ್ಡುಗಳಲ್ಲಿ ಒಂದು ವಾರ್ಡಿನಲ್ಲೂ ಕಾಂಗ್ರೆಸ್ ಗೆಲವು ಸಾಧಿಸಿಲ್ಲ.

  • ಸತತ 7ನೇ ಬಾರಿಯೂ ಗೆದ್ದು ಬೀಗಿದ ನಗರಸಭಾ ಸದಸ್ಯ

    ಸತತ 7ನೇ ಬಾರಿಯೂ ಗೆದ್ದು ಬೀಗಿದ ನಗರಸಭಾ ಸದಸ್ಯ

    ಚಿಕ್ಕಬಳ್ಳಾಪುರ: ಜಿಲ್ಲೆಯ ನಗರಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಕ್ಷದ ಪಾಲಾಗಿದೆ.

    31 ವಾರ್ಡುಗಳ ನಗರಸಭೆಯಲ್ಲಿ 16 ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. 9 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಉಳಿದಂತೆ 2 ರಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹಾಗೂ 4 ವಾರ್ಡುಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯ ಕಮಲ ಆರಳಿಸಿ ಗೆದ್ದು ಬೀಗಿ ಶಾಸಕರಾಗಿದ್ದ ಸುಧಾಕರ್ ಸದ್ಯ ಸಚಿವರಾಗಿ ಚಿಕ್ಕಬಳ್ಳಾಪುರ ನಗರಸಭೆಯಲ್ಲೂ ಬಿಜೆಪಿಯ ಕಮಲ ಅರಳಿಸೋಕೆ ಪ್ಲಾನ್ ಮಾಡಿದ್ದರು.

    ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿ, 20 ರಿಂದ 22 ಸ್ಥಾನಗಳನ್ನ ಗೆಲ್ಲುವ ನೀರಿಕ್ಷೆ ಹೊಂದಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಸ್ಥಾನಗಳನ್ನ ಗಳಿಸುವ ಮೂಲಕ ಸರಳ ಬಹುಮತ ಪಡೆದು ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಹೊಂದಿದೆ. ನಗರಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ನೂತನ ಸದಸ್ಯರು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಸಚಿವ ಸುಧಾಕರ್‌ಗೆ ಕಾಂಗ್ರೆಸ್ ಮುಖಂಡ ಹಾಗೂ ನೂತನ ನಗರಸಭಾ ಸದಸ್ಯ ಟಾಂಗ್ ನೀಡಿದರು.

    ಸತತ 7 ನೇ ಬಾರಿಗೆ ಗೆದ್ದ ನಗರಸಭಾ ಸದಸ್ಯ:
    ನಗರದ 17ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಮಾಜಿ ನಗರಸಭಾ ಸದಸ್ಯ ಎಸ್.ಎಂ.ರಫೀಕ್ ಈ ಬಾರಿಯೂ ಗೆಲ್ಲುವ ಮೂಲಕ ಸತತ 7ನೇ ಬಾರಿಗೆ ಗೆದ್ದು ನಗರಸಭಾ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. 801 ಮತಗಳನ್ನ ಪಡೆದು ಗೆದ್ದು ಬೀಗಿದರೆ, ಅವರ ಸಮೀಪ ಪ್ರತಿಸ್ಪರ್ಧಿ ಪಕ್ಷೇತರ ಆಭ್ಯರ್ಥಿ ಶ್ರೀನಿವಾಸ್ 747 ಮತಗಳನ್ನ ಪಡೆದುಕೊಂಡಿದ್ದಾರೆ.

    ಮಾಜಿ ನಗರಸಭಾ ಅಧ್ಯಕ್ಷರಿಗೆ ಸೋಲು:
    ಕಳೆದ ಬಾರಿ ನಗರಸಭಾ ಅಧ್ಯಕ್ಷರಾಗಿದ್ದ ಲೀಲಾವತಿ ಶ್ರೀನಿವಾಸ್ ಹಾಗೂ ಮುನಿಕೃಷ್ಣ ಸೋಲು ಅನುಭವಿಸಿದ್ದಾರೆ. 31 ವಾರ್ಡಿನಿಂದ ಸ್ಪರ್ಧೆ ಮಾಡಿದ್ದ ಮಾಜಿ ನಗರಸಭಾ ಅಧ್ಯಕ್ಷೆ ಸುಧಾಕರ್ ಬೆಂಬಲಿಗರಾದ ಲೀಲಾವತಿ ಶ್ರೀನಿವಾಸ್ ಹಾಗೂ ಮತ್ತೊಬ್ಬ ಬೆಂಬಲಿಗರಾದ ಮುನಿಕೃಷ್ಣ ಸೋಲು ಅನುಭವಿಸಿದ್ದಾರೆ. 9ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಮುನಿಕೃಷ್ಣ ರವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‍ನ ಅಭ್ಯರ್ಥಿ ವಕೀಲ ಮಠಮಪ್ಪ ಎದುರು ಸೋಲು ಅನುಭವಿಸಿದ್ದಾರೆ. ಮತ್ತೊಂದಡೆ 16ನೇ ವಾರ್ಡಿನಿಂದ ಸ್ಪರ್ಧೆ ಮಾಡಿದ್ದ ಎಂ.ವಿ.ಭಾಸ್ಕರ್ ಸಹ ಸೋಲುಂಡಿದ್ದಾರೆ.