Tag: Municipal Council

  • ಬಿಜೆಪಿ ಅಭ್ಯರ್ಥಿ ಎಸ್‍ಟಿ ಅಲ್ಲ, ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ: ರೇವಣ್ಣ

    ಬಿಜೆಪಿ ಅಭ್ಯರ್ಥಿ ಎಸ್‍ಟಿ ಅಲ್ಲ, ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ: ರೇವಣ್ಣ

    – ಆರೋಪಕ್ಕೆ ತಿರುಗೇಟು ನೀಡಿದ ನಗರಸಭಾ ಅಧ್ಯಕ್ಷ ಆಕಾಂಕ್ಷಿ

    ಹಾಸನ: ಹಾಸನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್‍ಟಿ ಅಭ್ಯರ್ಥಿ ಮೀಸಲಾಗಿದ್ದು, ಬಿಜೆಪಿಯಲ್ಲಿ ಮಾತ್ರ ಎಸ್‍ಟಿ ಸದಸ್ಯ ಆಯ್ಕೆಯಾಗಿದ್ದಾರೆ. ಆದರೆ ಆತನು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು ಅಧ್ಯಕ್ಷರ ಚುನಾವಣೆಯು ನಾಳೆ ನಡೆಯಲಿದೆ. ಆದರೆ ಬಿಜೆಪಿ ಸದಸ್ಯ ಮೋಹನ್ ಮಾತ್ರ ಎಸ್‍ಟಿ ಪಂಗಡದವರಾಗಿದ್ದು, ಬಿಜೆಪಿಯವರು ಅಭ್ಯರ್ಥಿಯ ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ. ಈ ಸರ್ಕಾರವು ಯಾವುದನ್ನು ಬೇಕಾದರೂ ಬದಲಾವಣೆ ಮಾಡುತ್ತದೆ. ಈಗಾಗಲೇ ಈ ಪ್ರಕರಣ ತನಿಖೆಯಲ್ಲಿದ್ದು, ಈ ಕೇಸ್ ಇನ್ನೂ ಪೆಂಡಿಂಗ್ ಇದೆ. ಹೀಗಾಗಿ ಈ ಸ್ಥಾನ ಖಾಲಿ ಉಳಿಸಿಕೊಂಡು ಉಳಿದ ಸ್ಥಾನಕ್ಕೆ ಚುನಾವಣೆ ಮಾಡಬೇಕೆಂದು ಒತ್ತಾಯಿಸಿದರು.

    ಈ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ದೂರು ಬರೆದರೂ ಇದುವರೆಗೂ ಯಾವ ಕ್ರಮ ಜರುಗಿಸಿರುವುದಿಲ್ಲ. ಬಿಜೆಪಿ ಅಭ್ಯರ್ಥಿ ಮೋಹನ್ ಸನ್ ಆಫ್ ರಘುಪತಿ ರಾವ್ ಮರಾಠ ಇದ್ದುದನ್ನು ಗೋಂಡ ಎಂದು ಬದಲಾಯಿಸಲಾಗಿದೆ. ಈ ಬಗ್ಗೆ ಇಷ್ಟೊತ್ತಿಗೆ ಕೇಸು ದಾಖಲಿಸಬೇಕಾಗಿತ್ತು. ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟರೂ ಏನು ಮಾಡುತ್ತಿದ್ದಾರೆ? ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಾಗೂ ಎಸಿಗೆ ಪತ್ರ ಬರೆಯಲಾಗಿದ್ದರೂ ಯಾವ ಪ್ರಯೋಜವಾಗಿರುವುದಿಲ್ಲ. ಕಳೆದ 6 ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕಾಗಿತ್ತು. ಆದರೇ ಇಷ್ಟು ತಡವಾಗಿದೆ. ರಾಜ್ಯದಲ್ಲಿರುವ ಚುನಾವಣಾ ಆಯೋಗ ಕೂಡ ರಬ್ಬರ್ ಸ್ಟಾಂಪ್ ಇದ್ದಂತೆ ಎಂದು ರೇವಣ್ಣ ಕಿಡಿಕಾರಿದರು.

    ರೇವಣ್ಣ ಆರೋಪಕ್ಕೆ ತಿರುಗೇಟು ನೀಡಿರುವ ನಗರಸಭಾ ಅಧ್ಯಕ್ಷ ಆಕಾಂಕ್ಷಿ ಮೋಹನ್, ಚುನಾವಣೆ ನಡೆದು 25 ತಿಂಗಳ ನಂತರ ಎಸ್‍ಟಿ ಅಲ್ಲ ಅಂತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು. ನಾನು 30 ವರ್ಷದಿಂದ ಜೆಡಿಎಸ್‍ನಲ್ಲಿದ್ದೆ. ಎಸ್‍ಟಿ ಸಮುದಾಯದಿಂದ ನನಗೆ ಟಿಕೆಟ್ ಕೊಡಲು ಜೆಡಿಎಸ್‍ನವರು ಮುಂದೆ ಬಂದಿದ್ದರು. ಆದರೆ ನಾನು ಜೆಡಿಎಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿದ್ದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈಗ ಅಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಸಿಗುತ್ತಿಲ್ಲ ಎಂದು ಹತಾಶರಾಗಿ ಈ ರೀತಿ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ

    ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ

    ಹಾಸನ: ಹಾಸನ ಜಿಲ್ಲೆಯಲ್ಲಿ ಜೆಡಿಎಸ್‍ಗೆ ಮೀಸಲಾತಿ ಮೂಲಕ ಟಾಂಗ್ ನೀಡಿರುವ ಬಿಜೆಪಿ ಸರ್ಕಾರ, ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಗೆ ಎಸ್.ಟಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಾತಿ ನೀಡಿ ಪಟ್ಟಿ ಪ್ರಕಟಿಸಿದೆ.

    ಈ ಕಾರಣದಿಂದ ಹಾಸನ ಮತ್ತು ಅರಸೀಕೆರೆ ಎರಡೂ ಕಡೆ ಬಹಮತವಿದ್ದರೂ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನ ವಂಚಿತರಾಗಿದ್ದಾರೆ. ಹಾಸನ ಮತ್ತು ಅರಸೀಕೆರೆ ಎರಡು ನಗರಸಭೆಯಲ್ಲಿ ಬಿಜೆಪಿಯಿಂದ ಮಾತ್ರ ಎಸ್.ಟಿ ಸದಸ್ಯರು ಆಯ್ಕೆಯಾಗಿರುವುದರಿಂದ, ನಗರಸಭೆಗಳ ಅಧ್ಯಕ್ಷಗಾದಿ ನಿರಾಯಾಸವಾಗಿ ಬಿಜೆಪಿ ಸದಸ್ಯರ ಪಾಲಾಗಲಿದೆ.

    ಹಾಸನ ನಗರಸಭೆ ಒಟ್ಟು 35 ಸದಸ್ಯರ ಸಂಖ್ಯಾ ಬಲ ಹೊಂದಿದ್ದು ಜೆಡಿಎಸ್‍ನಿಂದ 17, ಕಾಂಗ್ರೆಸ್ಸಿನಿಂದ 02, ಬಿಜೆಪಿಯಿಂದ 13, ಹಾಗೂ 3 ಜನ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿರುವ 34ನೇ ವಾರ್ಡ್ ಮೋಹನ್ ಕುಮಾರ್ ಮಾತ್ರ ಎಸ್‍ಟಿ ಪಂಗಡದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಹಾಸನ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೀಸಲಾತಿ ಕಾರಣದಿಂದ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾದಂತಾಗಿದೆ.

    ಅರಸೀಕೆರೆ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಜೆಡಿಎಸ್ 21, ಕಾಂಗ್ರೆಸ್ 01, ಬಿಜೆಪಿ 05, ಮೂವರು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ 22ನೇ ವಾರ್ಡ್ ಬಿಜೆಪಿ ಸದಸ್ಯ ಗಿರೀಶ್ ಮಾತ್ರ ಎಸ್‍ಟಿ ಪಂಗಡಕ್ಕೆ ಸೇರಿದ್ದು, ಮೀಸಲಾತಿ ಕಾರಣದಿಂದ ಅರಸೀಕೆರೆಯಲ್ಲಿ ಕೇವಲ ಐವರು ಸದಸ್ಯರನ್ನು ಹೊಂದಿರೋ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಂತಾಗಿದೆ. ಇದರಿಂದ ಹಾಸನ ಜೆಡಿಎಸ್ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ.

    ಹಾಸನ ಶಾಸಕ ಪ್ರೀತಂಗೌಡ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಕೈವಾಡದಿಂದಾಗಿ ಈ ರೀತಿಯ ಮೀಸಲಾತಿ ಪ್ರಕಟವಾಗಿದೆ ಎಂದು ಜೆಡಿಎಸ್ ನಾಯಕರು ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.

  • ಬಡಾವಣೆಯ ಮನೆಗಳನ್ನು ನೋಡಿ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ!

    ಬಡಾವಣೆಯ ಮನೆಗಳನ್ನು ನೋಡಿ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ!

    – ಶಿಡ್ಲಘಟ್ಟ ಪಟ್ಟಣದ ರಾಜೀವ್ ಗಾಂಧಿ ಬಡಾವಣೆ ಜನರ ಗೋಳು
    – ಮದುವೆ ಆಗಲ್ಲವೆಂದು ಮನೆಯನ್ನೇ ಖಾಲಿ ಮಾಡಿದ್ರು

    ಚಿಕ್ಕಬಳ್ಳಾಪುರ: ಮದುವೆ ಆಗೋಕೆ ಮುಂಚೆ ಮನೆ ನೋಡೋಕೆ ವಧುವಿನ ಕಡೆಯವರು ಬರುತ್ತಾರೆ. ಆದರೆ ನಮ್ಮ ಮನೆ, ನಮ್ಮ ಬಡಾವಣೆ ನೋಡಿದರೆ ಹೆಣ್ಣು ಕೊಡಬೇಕು ಅಂತ ಬಂದವರು ನಂತರ ನಮ್ಮ ಮನೆಯತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಈ ಬಡಾವಣೆಯ ಯುವಕರ ಗೋಳು.

    ಶಿಡ್ಲಘಟ್ಟ ನಗರ ಹೊರವಲಯದ ರಾಜೀವ್ ಗಾಂಧಿ ಆಶ್ರಯ ಬಡಾವಣೆಯ ಜನರ ಗೋಳು ಇದಾಗಿದ್ದು, ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ದಶಕದ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೂರಾರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ದಶಕ ಕಳೆದರೂ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕುಡಿಯುವ ನೀರು, ಸಮರ್ಪಕ ಚರಂಡಿ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಅಲ್ಲಿನ ನಿವಾಸಿಗಳನ್ನು ಕಾಡುತ್ತಿವೆ.

    ವಿಧಿಯಿಲ್ಲದೆ ಕೆಲವರು ಬಾಗಿಲು ತೆಗೆದು ಇದೇ ಮನೆಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಉಳಿದಂತೆ ಬಹುತೇಕ ಮನೆಗಳಿಗೆ ಬೀಗ ಜಡಿದು ಹಲವರು ನಗರ ಸೇರಿಕೊಂಡಿದ್ದಾರೆ. ನಗರದಿಂದ 5 ಕಿ.ಮೀ. ದೂರದಲ್ಲಿರುವ ಬೆಂಗಾಡಿನ ರೀತಿಯ ಈ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಕುಟುಂಬಗಳ ಯುವಕರಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಾರಂತೆ.

    ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳೇ ಇಲ್ಲ. ಇಂತಹ ವಾತಾವರಣದಲ್ಲಿರುವವರಿಗೆ ಹೇಗೆ ಹೆಣ್ಣು ಕೊಡುವುದು ಎಂದು ಹೆಣ್ಣಿನ ಕಡೆಯವರು ಪ್ರಶ್ನಿಸುತ್ತಾರೆ. ಆಶ್ರಯ ಬಡಾವಣೆಯ ಎದುರಲ್ಲೇ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗಳಿದ್ದು, ಅಲ್ಲಿಂದ ಬರುವ ಕೆಟ್ಟ ವಾಸನೆಯಿಂದ ಜನ ನಿತ್ಯ ನರಕ ನೋಡುವಂತಾಗಿದೆ.

    ಅಲ್ಲದೆ ನಮ್ಮ ಸಂಬಂಧಿಕರು ಸಹ ಮನೆಗಳಿಗೆ ಬರದಂತಾಗಿದ್ದಾರೆ. ಈ ಮೂಲಕ ಬಡವರಿಗೆ ಮನೆ ಕಟ್ಟಿಕೊಟ್ಟರೂ ಇದು ಪ್ರಯೋಜನವಿಲ್ಲದಂತಾಗಿದೆ. ನಗರಸಭೆಯವರು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ಆಶ್ರಯ ಬಡಾವಣೆಯ ಬಡವರು ಇದ್ದ ಸೂರನ್ನು ಬಿಟ್ಟು ಪಟ್ಟಣದ ಬಾಡಿಗೆ ಮನೆಗಳಿಗೆ ತೆರಳಿ ನೆಲಸುವಂತಾಗಿದೆ.

  • ಮಡಿಕೇರಿ ನಗರದ ಜನತೆಗೆ ಟಾಯ್ಲೆಟ್ ನೀರು ಕುಡಿಸಿದ ನಗರಸಭೆ

    ಮಡಿಕೇರಿ ನಗರದ ಜನತೆಗೆ ಟಾಯ್ಲೆಟ್ ನೀರು ಕುಡಿಸಿದ ನಗರಸಭೆ

    ಮಡಿಕೇರಿ: ಪ್ರತಿ ಜನರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂದು ಎಲ್ಲೆಡೆ ಸರ್ಕಾರವೇ ಕುಡಿಯುವ ನೀರಿನ ಘಟಕಗಳನ್ನು ಮಾಡುತ್ತಿದೆ. ಆದರೆ ಮಡಿಕೇರಿ ನಗರ ಸಭೆ ಮಾತ್ರ ನಗರದ ಜನರಿಗೆ ಕುಡಿಯುವ ನೀರಿನ ಬದಲಿಗೆ ಟಾಯ್ಲೆಟ್ ನೀರು ಪೂರೈಕೆ ಮಾಡುತ್ತಿದೆ.

    ಹೌದು ಮಡಿಕೇರಿ ನಗರದ ಹೊಸಬಡಾವಣೆಯ 50 ಕ್ಕೂ ಹೆಚ್ಚು ಮನೆಗಳಿಗೆ ಟಾಯ್ಲೆಟ್ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ಇದನ್ನು ನಗರಸಭೆಯ ಗಮನಕ್ಕೂ ತರಲಾಗಿತ್ತು. ಇದರಿಂದ ನಗರಸಭೆ ಅಧಿಕಾರಿಗಳೇನು ಹೆಚ್ಚೆತ್ತುಕೊಂಡಂತೆ ಕಂಡಿಲ್ಲ.

    ಕಳೆದ ಎರಡು ದಿನಗಳಿಂದ ಟಾಯ್ಲೆಟ್ ನೀರು ಮನೆಯ ನಲ್ಲಿಗಳಲ್ಲಿ ಪೂರೈಕೆಯಾಗುತ್ತಿದೆ. ಇದಕ್ಕೆ ಮುಖ್ಯಕಾರಣ ನಗರದಲ್ಲಿ 60 ವರ್ಷಗಳ ಹಿಂದೆ ಅಳವಡಿಸಿರುವ ನೀರು ಪೂರೈಕೆ ಪೈಪುಗಳು ಹೊಡೆದು ಹೋಗಿರುವುದು. ಇತ್ತೀಚಿನ ವರ್ಷಗಳಲ್ಲಿ ಒಳಚರಂಡಿ ನಿರ್ಮಾಣದ ಸಂದರ್ಭ ಪೈಪುಗಳು ಡ್ಯಾಮೇಜ್ ಆಗಿ ಇದೀಗ ಟಾಯ್ಲೆಟ್ ಮಿಶ್ರಿತ ನೀರು ಮನೆಗಳಿಗೆ ಪೂರೈಕೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ನಡೆಸಿ ಸರಿಪಡಿಸಬೇಕು. ಇಲ್ಲದಿದ್ದರೆ ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಮಡಿಕೇರಿ ನಗರಕ್ಕೆ ಕೂಟ್ಟು ಹೊಳೆಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ನಗರದ ಸ್ಟೋನ್ ಹಿಲ್‍ನಲ್ಲಿ ಇರುವ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಮಾಡಿ, ಬಳಿಕ ಪೂರೈಕೆ ಮಾಡಲಾಗುತ್ತದೆ. ಆದರೆ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಹೊಸಬಡಾವಣೆಯ ಕ್ರಿಶ್ಚಿಯನ್ ಸ್ಮಶಾನದ ರಸ್ತೆಯ 50 ಕ್ಕೂ ಹೆಚ್ಚು ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈಗಾಗಲೇ ನಗರಸಭೆ ಸಿಬ್ಬಂದಿಗಳು ಎಲ್ಲಿಂದ ಟಾಯ್ಲೆಟ್ ನೀರು ಮನೆಗಳಿಗೆ ಪೂರೈಕೆ ಆಗುತ್ತಿದೆ ಎಂದು ಹುಡುಕಾಡುತ್ತಿದ್ದಾರೆ. ಹಲವೆಡೆ ಅಗೆದು, ಹೊಸದಾಗಿ ಪೈಪುಗಳನ್ನು ಜೋಡಿಸಲಾಗುತ್ತಿದೆ. ಆದರೂ ಇಂದಿಗೂ ಎಲ್ಲಿಂದ ಈ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನೋದು ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

    ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

    – ದಿನಕ್ಕೆ 1,200 ರೂ. ದುಡಿಯುತ್ತಿದ್ದಾರೆ ಬಡ ಮಹಿಳೆಯರು

    ಕಾರವಾರ: ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧವನ್ನು ಕಠಿಣವಾಗಿ ಜಾರಿಗೆ ತಂದಿದೆ. ಪರಿಣಾಮ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿ ಬಟ್ಟೆ ಹಾಗೂ ಪೇಪರ್ ಬ್ಯಾಗ್‍ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬ್ಯಾಗುಗಳು ಅಂಗಡಿಗಳಿಂದ ಕೊಂಡುಕೊಳ್ಳುವ ಗ್ರಾಹಕರಿಗೆ ಹಾಗೂ ಅಂಗಡಿಯವರಿಗೆ ತುಟ್ಟಿಯಾಗುತಿತ್ತು. ಇದರಿಂದಾಗಿ ಕದ್ದುಮುಚ್ಚಿ ಪ್ಲಾಸ್ಟಿಕ್ ಬ್ಯಾಗ್‍ಗಳು ಬಿಕರಿಯಾಗುತಿತ್ತು. ಇದನ್ನು ಮನಗಂಡ ಕಾರವಾರ ನಗರಸಭೆ ಆಡಳಿತ ಪ್ರತಿ ದಿನ ಅಂಗಡಿಗಳಿಗೆ ದಾಳಿ ನಡೆಸಿ ಈ ವರೆಗೆ ಎರಡು ಕ್ವಿಂಟಾಲ್ ಪ್ಲಾಸ್ಟಿಕ್ ಬ್ಯಾಗ್ ವಶಪಡಿಸಿಕೊಂಡರೆ, ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ ಈಗಾಗಲೇ 40 ಟನ್ ಪ್ಲಾಸ್ಟಿಕ್ ಅನ್ನು ರೀ ಸೈಕ್ಲಿಂಗ್ ಮಾಡಿ ದಾಲ್ಮಿಯ ಸಿಮೆಂಟ್ ಕಾರ್ಖಾನೆಗೆ ಕಳುಹಿಸಿದೆ.

    ಪ್ರತಿ ದಿನ ಏಳು ಕ್ವಿಂಟಾಲ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕೇವಲ ಕಾರವಾರ ನಗರದಿಂದ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಾರವಾರ ನಗರಸಭೆ ಆಯುಕ್ತ ಯೋಗೀಶ್ವರ್ ರವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೂ ಹೋಟೆಲ್, ಬೀದಿ ಬದಿಯ ಅಂಗಡಿಗಳು ಕದ್ದುಮುಚ್ಚಿ ಪ್ಲಾಸ್ಟಿಕ್ ಮಾರಾಟವನ್ನು ಮಾಡಿ ಪ್ರತಿ ಬಾರಿ ಸಿಕ್ಕಿಕೊಂಡು ದಂಡ ತೆತ್ತುತಿದ್ದುದನ್ನು ಹಾಗೂ ಅವರ ಅನಿವಾರ್ಯತೆಯನ್ನು ಮನಗಂಡು ಬಟ್ಟೆ ಬ್ಯಾಗ್‍ಗಳನ್ನು ಅವರಿಗೆ ನೀಡುವ ನಿರ್ಧಾರ ತೆಗೆದುಕೊಂಡರು. ಇದರ ಪ್ರತಿಫಲವಾಗಿ ಹಾಗೂ ಬಡ ಮಹಿಳೆಯರಿಗೆ ಸಹಾಯ ಆಗುವಂತೆ ಕಾರವಾರ ನಗರದ ಮಹಿಳಾ ಸಹಕಾರ ಸಂಘ ಸಂಸ್ಥೆಯನ್ನು ಬ್ಯಾಗ್ ತಯಾರಿಕೆಗೆ ಪ್ರೇರೇಪಿಸಿದ್ದಲ್ಲದೇ ಅವರ ಮೂಲಕ ಬಟ್ಟೆ ಬ್ಯಾಗ್ ತಯಾರಿಸಿ ನೇರವಾಗಿ ನಗರಸಭೆಯೇ ಹೋಟೆಲ್ ಗಳಿಗೆ ಸೇರಿದಂತೆ ಅಂಗಡಿ ಮುಂಗಟ್ಟುಗಳಿಗೆ ಪ್ರತಿ ಬ್ಯಾಗಿಗೆ 3 ರೂ. ನಂತೆ ಕೊಂಡುಕೊಳ್ಳುವ ವೇದಿಕೆ ಒದಗಿಸಿಕೊಟ್ಟಿತು.

    ಇದರ ಪ್ರತಿಫಲವಾಗಿ ಕಾರವಾರದ ಜೈ ಸಂತೋಷಿನಿ ಮಾತಾ ಮಹಿಳಾ ಸಹಕಾರ ಸಂಘದ ಮಹಿಳೆಯರು ಬ್ಯಾಗ್‍ಗಳನ್ನು ಹೊಲಿಯುವ ಕಾರ್ಯ ಆರಂಭಿಸಿದ್ದಾರೆ. ಒಂಬತ್ತು ಜನರಿರುವ ಈ ಚಿಕ್ಕ ಸಂಘದಲ್ಲಿ ಏಳು ಜನ ಮಹಿಳೆಯರು ಹೊಲಿಗೆ ಯಂತ್ರ ಹೊಂದಿದ್ದು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಬಟ್ಟೆ ಚೀಲವನ್ನು ಹೋಲಿದು ಕೊಡುತ್ತಿದ್ದಾರೆ.

    ಸದ್ಯ ಹೋಟಲ್ ಹಾಗೂ ಅಂಗಡಿಗೆ ಬಟ್ಟೆ ಬ್ಯಾಗ್‍ಗಳನ್ನು ತಯಾರಿಸಿ ನೀಡುತ್ತಿದ್ದು, ಪ್ರತಿ ದಿನ ನೂರು ಬಟ್ಟೆಯ ಒಂದು ಬಂಡಲ್‍ನಂತೆ ನಾಲ್ಕು ಬಂಡಲ್ ಬಟ್ಟೆಯನ್ನು ಒಬ್ಬರು ತಯಾರಿಸಿ ದಿನಕ್ಕೆ 1,200 ರೂ.ಗಳಿಗೂ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬ್ಯಾಗ್ ತಯಾರಿಸುತ್ತಿರುವ ಸಂಘದ ಪೂಜಾ ಸಂಜೀವ್ ಅರ್ಗೆಕರ್ ಹೇಳುವಂತೆ, ಗೃಹಿಣಿಯಾಗಿ ಮನೆಯ ಕೆಲಸ ಮುಗಿಸಿ ಸಂಜೆ ವೇಳೆ ಬಟ್ಟೆ ಚೀಲವನ್ನು ಹೊಲಿಯುತ್ತೇನೆ. ಇದರಿಂದ ನನ್ನ ಗಳಿಕೆ ಹೆಚ್ಚಾಗಿದ್ದು ಕುಟುಂಬಕ್ಕೆ ಸಹಕಾರವಾಗುತ್ತಿದೆ. ನಗರಸಭೆಯೇ ನೇರವಾಗಿ ಹೋಟಲ್ ಮತ್ತು ಅಂಗಡಿಗಳ ನಡುವೆ ನಮ್ಮ ಬಟ್ಟೆ ಬ್ಯಾಗ್ ತೆಗೆದುಕೊಳ್ಳುವಂತೆ ಒಪ್ಪಂದ ಮಾಡಿಸಿದೆ. ಇದರಿಂದಾಗಿ ನಾವು ಗ್ರಾಹಕರನ್ನು ಹುಡುಕಿ ಅಲೆಯುವುದು ತಪ್ಪಿದೆ, ಬ್ಯಾಗ್‍ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ.

    ಎನಿಟೈಮ್ ಬ್ಯಾಗ್ ಮಿಷನ್‍ಗಳು: ಕೆಲವೇ ದಿನದಲ್ಲಿ ಈ ಮಹಿಳೆಯರು ತಯಾರಿಸಿದ ಬಟ್ಟೆ ಬ್ಯಾಗ್‍ಗಳನ್ನು ನೇರವಾಗಿ ನಗರಸಭೆ ಖರೀದಿಸಿ ಎಟಿಎಮ್ ಗಳು ಹೇಗಿವೆಯೋ ಅದೇ ಮಾದರಿಯಲ್ಲಿ ಎನಿಟೈಮ್ ಬ್ಯಾಗ್ ಮಿಷನ್‍ಗಳನ್ನು ನಗರದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದೆ. ಈ ಮಿಷನ್‍ನಲ್ಲಿ ಐದು ರೂ. ನಾಣ್ಯ ಹಾಕಿದರೆ ಒಂದು ಬಟ್ಟೆ ಬ್ಯಾಗ್ ಬರುವಂತೆ ವ್ಯವಸ್ಥೆ ರೂಪಿಸಿದ್ದು, ಸಿದ್ಧತೆ ನಡೆದಿದೆ ಎಂದು ನಗರಸಭಾ ಆಯುಕ್ತ ಯೋಗೀಶ್ವರ್ ತಿಳಿಸಿದ್ದಾರೆ.

    ಹೀಗಾಗಿ ಈಗಾಗಲೇ ಹಲವು ಮಹಿಳೆಯರು ಬಟ್ಟೆ ಬ್ಯಾಗ್ ತಯಾರಿಸುವಲ್ಲಿ ನಿರತರಾಗಿದ್ದು, ತಮ್ಮ ಬಿಡುವಿನ ಸಮಯದಲ್ಲಿ ಬಟ್ಟೆ ಬ್ಯಾಗ್ ಹೊಲಿಯುವ ಮೂಲಕ ಕೈತುಂಬ ಹಣ ಗಳಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿಷೇಧ ಈ ಬಡ ಮಹಿಳೆಯರ ಬಾಳಲ್ಲಿ ಬೆಳಕಾಗುತ್ತಿದೆ.

  • ಬಂಡೆ ಕ್ಷೇತ್ರದಲ್ಲಿ ಅರಳಿದ ಕಮಲ – ಕನಕಪುರದಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ

    ಬಂಡೆ ಕ್ಷೇತ್ರದಲ್ಲಿ ಅರಳಿದ ಕಮಲ – ಕನಕಪುರದಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ

    ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರದ ಕನಕಪುರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೊಬ್ಬರು ಗೆಲವು ಸಾಧಿಸಿದ್ದಾರೆ.

    ಕನಕಪುರದ ನಗರಸಭೆಯ 26 ನೇ ವಾರ್ಡ್ ವಿವೇಕಾನಂದ ನಗರದ ಬಿಜೆಪಿ ಅಭ್ಯರ್ಥಿ ಮಾಲತಿ ಗೆಲುವು ಸಾಧಿಸಿದ್ದಾರೆ. ತಮ್ಮ ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಅಭ್ಯರ್ಥಿ ಗೌರಮ್ಮ ವಿರುದ್ಧ 136 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಅದರಲ್ಲೂ ಡಿಕೆ ಶಿವಕುಮಾರ್ ರವರ ಅಡ್ಡದಲ್ಲಿ ಕಮಲದ ಅಭ್ಯರ್ಥಿ ಗೆಲುವು ಸಾಧಿಸಿರುವುದು ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ. ವಾರ್ಡ್ ನಂಬರ್ 26 ರಲ್ಲಿ ಹೆಚ್ಚಿನದಾಗಿ ನೇಕಾರರು ಹಾಗೂ ಲಿಂಗಾಯತ ಮತದಾರರೇ ಇರುವುದು ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ.

    ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಾಲತಿಯವರು, ಕಾಂಗ್ರೆಸ್ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿದ್ದು ನನಗೆ ಬಹಳ ಸಂತೋಷವಾಗಿದೆ. ನಾನು ಜನ ಸೇವೆ ಮಾಡಲು ಚುನಾವಣೆಗೆ ನಿಂತಿದ್ದೆ. ಜನರು ಆಶೀರ್ವಾದ ಮಾಡಿದ್ದಾರೆ. ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತೇನೆ ನನ್ನ ನಂಬಿ ಗೆಲ್ಲಿಸಿದ ಜನರಿಗೆ ಧನ್ಯವಾದಗಳೂ ಎಂದು ಹೇಳಿದ್ದಾರೆ.

  • ಸಚಿವ ಕೃಷ್ಣ ಬೈರೇಗೌಡ ವಿರುದ್ಧ ನಗರಸಭಾ ಅಧ್ಯಕ್ಷ ಗರಂ!

    ಸಚಿವ ಕೃಷ್ಣ ಬೈರೇಗೌಡ ವಿರುದ್ಧ ನಗರಸಭಾ ಅಧ್ಯಕ್ಷ ಗರಂ!

    -ನಾನ್ ನಿಮ್ಮಪ್ಪನ ಕಾಲದಿಂದಲೂ ಕೆಲಸ ಮಾಡಿರೋದು – ನರಗಸಭೆ ಅಧ್ಯಕ್ಷ ಕಿಡಿ

    ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಮುಖಂಡ, ನಗರಭೆ ಅಧ್ಯಕ್ಷ ಪ್ರಭುದೇವ್ ಹಾಗೂ ಸಚಿವ ಕೃಷ್ಣಬೈರೇಗೌಡ ನಡುವೆ ಜಟಾಪಟಿ ನಡೆಯಿತು.

    ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರು ಮರಳುತ್ತಿದ್ದಾಗ ಗದ್ದಲವಾಗಿದೆ. ಈ ವೇಳೆ ಸಚಿವರನ್ನು ಫ್ರಭುದೇವ್ ಅವರು ತಳ್ಳಿದ್ದಾರೆ. ಇದರಿಂದ ಕೋಪಕೊಂಡ ಸಚಿವರು ಕಣ್ಣು ಮಿಟುಕಿಸದೇ ಸಿಟ್ಟಿನಿಂದ ನೋಡಿದ್ದಾರೆ.

    ಸಚಿವರ ನಡೆಯಿಂದ ಬೇಸಗೊಂಡ ಪ್ರಭುವರು ಹಿಂದಿನಿಂದ ಯಾರೋ ದೂಡಿದರು, ಹೀಗಾಗಿ ನಿಮ್ಮನ್ನ ತಳ್ಳಿದೆ ಎಂದು ತಿಳಿಸಿದ್ದಾರೆ. ಏಯ್ ನಡೆಯಯ್ಯ ಎಂದು ಸಚಿವರು ಏಕವಚನದಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ನಗರಸಭೆ ಅಧ್ಯಕ್ಷ, ನಾನ್ ನಿಮ್ಮಪ್ಪನ ಕಾಲದಿಂದಲೂ ಕೆಲಸ ಮಾಡಿರೋದು ಎಂದು ಕಿಡಿಕಾರಿದರು.

    ಇಬ್ಬರು ನಾಯಕರು ಸಮಾಧಾನ ಪಡಿಸಲು ಪೊಲೀಸರು ಹಾಗೂ ಸ್ಥಳದಲ್ಲಿ ಸೇರಿದ್ದ ಅನೇಕರು ಹರಸಾಹಸ ಪಡಬೇಕಾಯಿತು. ಸಚಿವರ ತೆರಳಿದ ಮೇಲೂ ಪ್ರಭುದೇವ್ ಅಸಮಾಧಾನ ಹೊರಹಾಕಿದರು. ಪ್ರಭುದೇವ್ ಅವರು ನಗರ ಸಭೆ ಅಧ್ಯಕ್ಷರಷ್ಟೇ ಅಲ್ಲದೆ ಕನ್ನಡ ಪರ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಯ್ಲೆಟ್‍ನಿಂದಾಗಿ ಮಗುವಿನೊಂದಿಗೆ ಮನೆ ತೊರೆದ ಪತ್ನಿ

    ಟಾಯ್ಲೆಟ್‍ನಿಂದಾಗಿ ಮಗುವಿನೊಂದಿಗೆ ಮನೆ ತೊರೆದ ಪತ್ನಿ

    ಕಾರವಾರ: ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂದು ಹೆಂಡತಿ ಗಂಡನನ್ನು ಬಿಟ್ಟು ಹೋದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಕಾರವಾರದ ಸುಂಕೇರಿ ಗ್ರಾಮದ ಗೀತಾ ಪ್ರೇಮಾನಂದ ಮಾಹಲೆ ಪತಿಯನ್ನು ಬಿಟ್ಟು ಹೋಗಿದ್ದಾರೆ. ಐದು ವರ್ಷದ ಹಿಂದೆ ಗೀತಾ ಅವರು ಕ್ಷೌರಿಕ ವೃತ್ತಿ ಮಾಡುವ ಯುವಕನನ್ನು ಮದುವೆಯಾಗಿದ್ದರು. ಮನೆಯಲ್ಲಿ ಟಾಯ್ಲೆಟ್ ಇರಲಿಲ್ಲ. ಹೇಗೂ ಹೊಂದಾಣಿಕೆ ಮಾಡಿಕೊಂಡು ಆತನೊಂದಿಗೆ ಸಂಸಾರ ಮಾಡುತ್ತಿದ್ದರು. ಬಳಿಕ ಪತ್ನಿ ಗಂಡನಿಗೆ ಟಾಯ್ಲೆಟ್ ಕಟ್ಟಿಸುವಂತೆ ಮನವೊಲಿಸಿದ್ದಾರೆ.

    ಇದಕ್ಕೆ ಒಪ್ಪಿದ ಆಕೆಯ ಪತಿ ಕಾರವಾರದ ನಗರಸಭೆಗೆ ಅರ್ಜಿ ಸಹ ನೀಡಿದ್ದಾರೆ. ಆದರೆ ಅರ್ಜಿ ಕೊಟ್ಟು 2 ವರ್ಷಗಳು ಕಳೆದರೂ ಟಾಯ್ಲೆಟ್ ಮಾತ್ರ ನಗರಸಭೆಯಿಂದ ಮಂಜೂರಾಗಲಿಲ್ಲ. ಇದಕ್ಕೆ ಸಾಲದೆಂಬಂತೆ ಈ ಬಾರಿಯ ಮಳೆಗೆ ಇದ್ದ ಒಂದು ಮನೆಯೂ ಕುಸಿದು ಹೋಗಿದ್ದು, ಇರಲು ಸೂರು ಕೂಡ ಇಲ್ಲದಂತಾಗಿದೆ. ಆದರೂ ಆಕೆ ಆತನೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ ಬಯಲು ಶೌಚಕ್ಕೆ ಹೋಗಲು ಇಷ್ಟವಾಗದೇ ತನ್ನ ಪುಟ್ಟ ಮಗುವಿನೊಂದಿಗೆ ಮನೆಬಿಟ್ಟು ತೆರಳಿದ್ದು, ಮನೆ ಕಟ್ಟಿಸಲಾಗದಿದ್ದರೂ ಕೊನೆ ಪಕ್ಷ ಟಾಯ್ಲೆಟ್ ಕಟ್ಟುವಂತೆ ಹೇಳಿ ತೆರಳಿದ್ದಾರೆ.

    ಇದರಿಂದ ಮನನೊಂದ ಪತಿ ನಗರಸಭೆಗೆ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಅವರ ಮನವಿಗೆ ಸ್ಪಂದಿಸದೇ ಅಸಡ್ಡೆ ತೋರುತ್ತಿದ್ದಾರೆ. ಒಂದು ಟಾಯ್ಲೆಟ್ ಈತನ ಕುಟುಂಬವನ್ನೇ ಬೇರ್ಪಡಿಸಿದ್ದು, ಯಾತನೆಯ ಬದುಕು ಸಾಗಿಸುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಇಬಿ ನೌಕರನ ಮೇಲೆ ಕೈ ನಗರಸಭೆ ಸದಸ್ಯೆಯಿಂದ ಮಾರಣಾಂತಿಕ ಹಲ್ಲೆ!

    ಕೆಇಬಿ ನೌಕರನ ಮೇಲೆ ಕೈ ನಗರಸಭೆ ಸದಸ್ಯೆಯಿಂದ ಮಾರಣಾಂತಿಕ ಹಲ್ಲೆ!

    ಚಿಕ್ಕಬಳ್ಳಾಪುರ: ಕೆಇಬಿ ನೌಕರನ ಮೇಲೆ ಕಾಂಗ್ರೆಸ್ ನಗರಸಭೆ ಸದಸ್ಯೆ, ಆಕೆಯ ಪತಿ ಮಾರಣಾಂತಿಕ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

    ಮಂಜುನಾಥ್ ಹಲ್ಲೆಗೊಳಗಾದ ಕೆಇಬಿ ನೌಕರ. ವಿವಿಪುರಂ ಬಡಾವಣೆಯಲ್ಲಿ ಗೌರಿಬಿದನೂರು ನಗರಸಭೆಯ ಕಾಂಗ್ರೆಸ್ ನಗರಸಭಾ ಸದಸ್ಯೆ ಕಲ್ಪನಾ ಹಾಗೂ ಆಕೆಯ ಪತಿ ರಮೇಶ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

    ಕ್ಷುಲ್ಲಕ ಕಾರಣಕ್ಕಾಗಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗಾಯಾಳು ಮಂಜುನಾಥ್ ಗೌರಿಬಿದನೂರು ಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಜುನಾಥ್ ಅಸಭ್ಯವಾಗಿ ವರ್ತಿಸಿ, ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನಗರಸಭೆ ಸದಸ್ಯೆ ಕಲ್ಪನಾ ಕೂಡಾ ಎಂದು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ನಗರಸಭೆ ಸದಸ್ಯೆ ಕಲ್ಪನಾ ಅವರ ಪತಿ ರಮೇಶ್ ಮೈಮೇಲೆ ಮಂಜುನಾಥ್ ಎಂಜಲು ಉಗುಳಿದ್ದಾನೆ. ಇದರಿಂದ ಕೋಪಕೊಂಡ ರಮೇಶ್ ಮಂಜುನಾಥ್ ವಾದಕ್ಕೆ ಮುಂದಾಗಿದ್ದಾರೆ. ವಾದ ವಿಕೋಪಕ್ಕೆ ಹೋಗಿ ಪರಸ್ಪರ ಕಿತ್ತಾಡಿದ್ದಾರೆ. ಈ ಕುಟುಂಬದ ಮಧ್ಯೆ ಇದೇ ಮೊದಲ ಜಗಳವಲ್ಲ. ಕಳೆದ 10 ವರ್ಷಗಳಲ್ಲಿ ಅನೇಕ ಬಾರಿ ಜಗಳ ನಡೆದಿದ್ದು, ಹಿಂದೆಯೂ ಕೆಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರಂತೆ.

    ಗಾಯಾಳು ಮಂಜುನಾಥ್ ಸದಾ ವಿಚಿತ್ರವಾಗಿ ವರ್ತಿಸುತ್ತಾನೆ. ನೆರೆಹೊರೆಯವರ ಜೊತೆ ಹೊಂದಿಕೊಳ್ಳದ ಮಂಜುನಾಥ್ ಹಾಗೂ ಆತನ ಪತ್ನಿ ಸಣ್ಣ-ಪುಟ್ಟ ಕಾರಣಗಳಿಗೂ ಪದೇ ಪದೇ ಅಕ್ಕಪಕ್ಕದ ಮನೆಯವರೊಂದಿಗೆ ಜಗಳಕ್ಕೆ ಮುಂದಾಗುತ್ತಾನೆ ಎನ್ನುವ ಆರೋಪ ಕೇಳಿ ಬಂದಿದೆ.