Tag: Municipal Corporation

  • ದೂರು ನೀಡಲು ಹೋಗಿದ್ದ ವ್ಯಕ್ತಿಯ ಮೇಲೆ ಕಾಂಗ್ರೆಸ್ ಸದಸ್ಯನಿಂದ ಹಲ್ಲೆ

    ದೂರು ನೀಡಲು ಹೋಗಿದ್ದ ವ್ಯಕ್ತಿಯ ಮೇಲೆ ಕಾಂಗ್ರೆಸ್ ಸದಸ್ಯನಿಂದ ಹಲ್ಲೆ

    ಕೋಲಾರ: ಸಮಸ್ಯೆ ಕುರಿತು ದೂರು ನೀಡಲು ಹೋಗಿದ್ದ ವ್ಯಕ್ತಿಯ ಮೇಲೆ ಕೆಜಿಎಫ್ ನಗರಸಭೆಯ ಕಾಂಗ್ರೆಸ್ ಸದಸ್ಯನೋರ್ವ ಹಲ್ಲೆ ಮಾಡಿ ಗೂಂಡಾ ವರ್ತನೆ ತೋರಿದ ಘಟನೆ ನಗರಸಭೆ ಆಯುಕ್ತರ ಕಚೇರಿಯಲ್ಲಿ ನಡೆದಿದೆ.

    ಸ್ಥಳೀಯ ನಿವಾಸಿ ಭಾಸ್ಕರ್ ಹಲ್ಲೆಗೊಳಗಾದ ವ್ಯಕ್ತಿ. ಕಾಲುವೆ ತೆರವುಗೊಳಿಸುವಂತೆ ಕೆಜಿಎಫ್ ನಗರಸಭೆಗೆ ಭಾಸ್ಕರ್ ದೂರು ನೀಡಲು ತೆರಳಿದ್ದರು. ಈ ವೇಳೆ ನಗರಸಭೆ ವಾರ್ಡ್ ನಂ 33 ರ ಕಾಂಗ್ರೆಸ್ ಸದಸ್ಯ ಸ್ಟಾನ್ಲಿ ದೂರು ನೀಡಲು ಬಂದಿದ್ದ ಭಾಸ್ಕರ್ ಮೇಲೆ ಮನಬಂದತೆ ಹಲ್ಲೆ ನಡೆಸಿದ್ದಾನೆ. ಇದಲ್ಲದೇ ಆತನ ಸಹಚರರು ಕೂಡ ನಗರಸಭೆ ಆವರಣದಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್ ರನ್ನು ಕೆಜಿಎಫ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಸಹ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಪೊಲೀಸರ ನಡೆಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಘಟನೆ ರಾಬರ್ಟ್‍ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸ್ಟಾನ್ಲಿಯು ಭಾಸ್ಕರ್ ಗೆ ನಗರಸಭೆಯ ಆಯುಕ್ತ ಶ್ರೀಕಾಂತ್ ಎದುರಲ್ಲೆ ಹಲ್ಲೆ ನಡೆಸಿದ್ದ ಸಿಸಿಟಿಯ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿಯಾದ್ರೂ ಪೊಲೀಸರು ಗೂಂಡಾಗಿರಿ ಮೆರೆದ ಕಾಂಗ್ರೆಸ್ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಡೋದರಾದಲ್ಲಿ ಪಾನಿಪುರಿ ಬ್ಯಾನ್!

    ವಡೋದರಾದಲ್ಲಿ ಪಾನಿಪುರಿ ಬ್ಯಾನ್!

    ಗಾಂಧಿನಗರ: ಪಾನಿಪುರಿ ಮಾರಾಟ ಮಾಡದಂತೆ ಗುಜರಾತಿನ ವಡೋದರಾದ ಮುನ್ಸಿಪಲ್ ಕಾರ್ಪೋರೇಷನ್ ಆದೇಶ ಹೊರಡಿಸಿದೆ.

    ಸ್ಥಳೀಯರ ಆರೋಗ್ಯ ದೃಷ್ಟಿಯಿಂದ ಇಂತಹದೊಂದು ನಿರ್ಧಾರವನ್ನು ವಡೋದರಾ ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡಿದೆ. ಆದೇಶವನ್ನು ಮೀರಿ ಅಕ್ರಮವಾಗಿ ಪಾನಿ ತಯಾರಿಸುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿ ಅವರಿಂದ ತ್ಯಾಜ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    ಮುಂಗಾರು ಸಮಯದಲ್ಲಿ ಪಾನಿಪುರಿ ಪ್ರಿಯರ ದಂಡು ರಸ್ತೆ ಬದಿಯ ಮಳಿಗೆಗಳಲ್ಲಿ ಬೇಲ್‍ಪುರಿ, ಪಾನಿಪುರಿ ತಿನ್ನಲು ಸರದಿಯಲ್ಲಿ ನಿಂತಿರುತ್ತಾರೆ. ಹೀಗಾಗಿ ಪಾನಿಪುರಿ ಸೇವನೆ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ವಡೋದರಾ ಸ್ಥಳೀಯ ನಿವಾಸಿಗಳು ಕಳೆದ ಕೆಲವು ದಿನಗಳಿಂದ ಟೈಫಾಯಿಡ್, ಜಾಂಡಿಸ್ ಹಾಗೂ ಫುಡ್ ಪಾಯಿಸನ್‍ಗೆ ತುತ್ತಾಗಿದ್ದರು. ಇದಕ್ಕೆ ಪಾನಿಪುರಿ ಸೇವನೆಯೇ ಕಾರಣ ಎಂದು ಅರಿತ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಹಾಗೂ ಸದಸ್ಯರು ಪಾನಿಪುರಿ ಮಾರಾಟಕ್ಕೆ ತಡೆ ಹಾಕಿದ್ದಾರೆ.

    ನಗರದಲ್ಲಿ ಪಾನಿಪುರಿ ತಯಾರಿಸುತ್ತಿದ್ದ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಶಾಕಿಂಗ್ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ಹಾಳಾದ ಹಿಟ್ಟು, ಕಂದುಬಣ್ಣದ ಅಡುಗೆ ಎಣ್ಣೆ, ಕೊಳೆತ ಆಲೂಗಡ್ಡೆ ಕೊಳಚೆ ನೀರು ಸೇರಿದಂತೆ ಸಾವಿರಾರು ಕೆಜಿ ಸಾಮಗ್ರಿಗಳನ್ನು ವಶಕ್ಕೆ ಪಡೆದು ನಗರದ ಹೊರವಲಯದಲ್ಲಿ ಪಾಲಿಕೆ ಬೀಸಾಡಿದೆ.

    ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ವಡೋದಾರದಲ್ಲಿ ಪಾನಿಪುರಿ ತಯಾರಿಸುತ್ತಿದ್ದ 50 ತಯಾರಿಕಾ ಮಳಿಗೆಗಳ ಮೇಲೆ ದಾಳಿ ಮಾಡಿದ್ದವು. ಇದರಿಂದಾಗಿ 4 ಸಾವಿರ ಕೆಜಿ ಪುರಿ, 3.5 ಸಾವಿರ ಕೆಜಿ ಆಲೂಗಡ್ಡೆ ಹಾಗೂ 1.2 ಸಾವಿರ ಲೀಟರ್ ಆಮ್ಲೀಯ ನೀರು (ಆಸಿಡಿಕ್ ವಾಟರ್) ವಶಪಡಿಸಿಕೊಳ್ಳಲಾಗಿದೆ.

  • ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ- ದಶಕದ ಬಳಿಕ ಕನ್ನಡಿಗರ ಪಾಲಾದ ಮೇಯರ್ ಹುದ್ದೆ

    ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ- ದಶಕದ ಬಳಿಕ ಕನ್ನಡಿಗರ ಪಾಲಾದ ಮೇಯರ್ ಹುದ್ದೆ

    ಬೆಳಗಾವಿ: ದಶಕಗಳ ನಂತರ ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನ ಕನ್ನಡಿಗರ ಪಾಲಾಗಿದೆ.

    ಸರ್ಕಾರದ ಮೀಸಲಾತಿ ಆದೇಶದಿಂದಾಗಿ ಈ ಬಾರಿ ಬೆಳಗಾವಿ ಮೇಯರ್ ಪಟ್ಟ ಕನ್ನಡಿಗರ ಪಾಲಿಗೆ ಒಲಿದು ಬಂದಿದೆ. ಈ ಬಾರಿ ಮೇಯರ್ ಹುದ್ದೆಯನ್ನು ಎಸ್‍ಟಿ ಸಮುದಾಯಕ್ಕೆ ಮೀಸಲಿರಿಸಲಾಗಿತ್ತು. ಎಂಇಎಸ್ ಗುಂಪಿನಲ್ಲಿ ಎಸ್ಟಿ ಸಮುದಾಯಕ್ಕೆ ಸೇರಿದ ಯಾವ ಪಾಲಿಕೆ ಸದಸ್ಯರು ಇರದ ಕಾರಣ ಕನ್ನಡ ಪರ ಪಾಲಿಕೆ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.

    ಕನ್ನಡಪರ ಪಾಲಿಕೆ ಸದಸ್ಯರಲ್ಲಿ ಇಬ್ಬರು ಎಸ್‍ಟಿ ಅಭ್ಯರ್ಥಿಗಳಿದ್ದೂ, ಬಸವರಾಜ್ ಚಿಕ್ಕಲದಿನ್ನಿ ಮತ್ತು ಸುಚೇತನಾ ಗಂಡಗದರಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಸವರಾಜ್ ಚಿಕ್ಕಲದಿನ್ನಿಯವರ ಪರವಾಗಿ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ರೆ, ಸುಚೇತನಾರ ಪರವಾಗಿ ಶಾಸಕ ಫಿರೋಜ್ ಶೇಠ್ ಬ್ಯಾಟಿಂಗ್ ಬೀಸಿದ್ದರು. ಬಸವಾರಜ್ ಚಿಕ್ಕಲದಿನ್ನಿ ಪರ ಸದಸ್ಯರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿ ನೇರವಾಗಿ ಇಂದು ಪಾಲಿಕೆಗೆ ಆಗಮಿಸಿದ್ದಾರೆ.

    ಬಸವರಾಜ್ ಚಿಕ್ಕಲದಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಪಾಲಿಕೆ ಒಟ್ಟು 58 ಸದಸ್ಯರನ್ನು ಒಳಗೊಂಡಿದ್ದು, 32 ಎಂಇಎಸ್ ಪಕ್ಷದ ಸದಸ್ಯರಿದ್ದಾರೆ. ಕನ್ನಡ ಮತ್ತು ಉರ್ದು ಪರ 26 ಸದಸ್ಯ ಬಲವನ್ನು ಹೊಂದಿದೆ.

    https://www.youtube.com/watch?v=Qe6R5_8c_l8

  • ಜೆಡಿಎಸ್‍ಗೆ ಮತ ಹಾಕಿ ಕಾಂಗ್ರೆಸ್ ಸೋಲಿಸಿದ ಪ್ರತಾಪ್ ಸಿಂಹ

    ಜೆಡಿಎಸ್‍ಗೆ ಮತ ಹಾಕಿ ಕಾಂಗ್ರೆಸ್ ಸೋಲಿಸಿದ ಪ್ರತಾಪ್ ಸಿಂಹ

    ಮೈಸೂರು: ಜಿಲ್ಲೆಯ ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ವಲಸೆ ಹೋಗಿದ್ದ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.

    ನಗರಸಭೆ ಸಭಾಂಗಣದಲ್ಲಿ ಹಿಂದಿನ ಅಧ್ಯಕ್ಷ ಲಕ್ಷ್ಮಣ್ ಅವರ ಪದಚ್ಯುತಿಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಸದ ಪ್ರತಾಪ್ ಸಿಂಹ ಅವರು ಚುನಾವಣೆಯಲ್ಲಿ ಭಾಗಿಯಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿದ್ದರಿಂದ 15 ಮತ ಪಡೆದ ಶಿವಕುಮಾರ್ ಗೆಲುವು ಸಾಧಿಸಿದರು.

    ಹುಣಸೂರು ನಗರಸಭೆಯಲ್ಲಿ 15 ಕಾಂಗ್ರೆಸ್, 9 ಜೆಡಿಎಸ್, 3 ಪಕ್ಷೇತರ ಸದಸ್ಯರು, ಒಬ್ಬರು ಶಾಸಕರು ಹಾಗೂ ಲೋಕಸಭಾ ಸದಸ್ಯರು ಸೇರಿ ಒಟ್ಟು 29 ಸಂಖ್ಯಾಬಲ ಹೊಂದಿತ್ತು. ಕಾಂಗ್ರೆಸ್ ನ ಮೊದಲ ವಾರ್ಡ್ ಸದಸ್ಯ ಶಿವಕುಮಾರ್ ಹಾಗೂ 5ನೇ ವಾರ್ಡ್ ಶಿವರಾಜು, 3ನೇ ವಾರ್ಡ್‍ನ ಮಂಜುಳಾ, 9ನೇ ವಾರ್ಡ್ ಸುನೀತಾ, 10ನೇ ವಾರ್ಡ್‍ನ ಯೋಗಾನಂದ, 18 ವಾರ್ಡ್‍ನ ರವಿಕುಮಾರ್ ಜೆಡಿಎಸ್ ಗೆ ವಲಸೆ ಬಂದಿದ್ದರು.

    ಸಂಸದರ ವೋಟಿನಿಂದ ಜಯ: ಒಟ್ಟು 29 ಸದಸ್ಯ ಬಲದ ನಗರಸಭೆ ಚುನಾವಣೆಯಲ್ಲಿ ಎರಡೂ ಕಡೆಯೂ ತಲಾ 14 ಸದಸ್ಯರಿದ್ದರು. ಒಂದು ವೇಳೆ ಸಂಸದರು ಭಾಗವಹಿಸದೇ ಇದ್ದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ನಡೆಯಬೇಕಿತ್ತು. ಈ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಪರ ವೋಟು ಚಲಾಯಿಸಿದರು.

    ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು. ಶಿವಕುಮಾರ್ ವಿಜೇತರಾಗಿದ್ದಾರೆಂದು ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಕೆ.ನಿತಿನ್ ಘೋಷಿಸಿದರು. ಈ ಮೂಲಕ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿದೆ.

    ಮತಹಾಕಿದ್ದಕ್ಕೆ ಪ್ರತಾಪ್ ಸಿಂಹ ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ:
    ಮೈಸೂರಿನಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ವಿವಿಧ ಪುರಸಭೆ ಹಾಗು ನಗರಸಭೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿದೆ. ಹಾಗಾಗಿ ನಮಗೆ 3 ಸಲ ಉಪಮೇಯರ್, ಕೆಲ ಕಡೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಸಿಕ್ಕಿದೆ. ಹುಣಸೂರಿನಲ್ಲಿ ಪಕ್ಷಾಂತರದ ಪಿಡುಗು ಹೆಚ್ಚಿದ್ದು ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಎರಡು ಸಲವೂ ಮೈತ್ರಿಕೂಟದ ಪರವಾಗಿ ವೋಟು ಹಾಕಿದ್ದೇನೆ.

    ಈ ಬಾರಿ ಜೆಡಿಎಸ್ ಬಣದ ಪರವಾಗಿ ನಿಂತ ಶಿವಕುಮಾರ್ ಹಾಗು ಕಾಂಗ್ರೆಸ್ ಬಣದ ಅಭ್ಯರ್ಥಿ ಸೌರಭ ಸಿದ್ದರಾಜು ಇಬ್ಬರೂ ಕಾಂಗ್ರೆಸ್ಸಿಗರೇ! ಈ ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ನಮ್ಮ ಹನುಮ ಭಕ್ತರರಿಗೆ ಎಂಥ ಉಪದ್ರವ ಕೊಟ್ಟಿದ್ದರು ಎಂಬುದು ಹುಣಸೂರಿಗೆ ಗೊತ್ತು. ಹಾಗಾಗಿ ಕುಷ್ಟಗಿಯಿಂದ ರಾತ್ರಿ ಹೊರಟು ಬೆಳಗಿನ ಜಾವ ಕಸಾಯಿಖಾನೆಗೆ ತೆರಳುತ್ತಿದ್ದ 16 ಪಶುಗಳನ್ನು ನಮ್ಮ ಯುವಮೋರ್ಚಾದ ಶೇಖರ್, ದರ್ಶನ, ಡ್ರೈವರ್ ಸಹಾಯದಿಂದ ರಕ್ಷಿಸಿ ನೇರವಾಗಿ ಹುಣಸೂರಿಗೆ ಬಂದು ಹನುಮಭಕ್ತರ ವಿರೋಧಿಗಳಿಗೆ ವೋಟಿನ ಮೂಲಕ ಪಾಠ ಕಳಿಸಿ ಹೊರಬಂದಾಗ, “ಪ್ರತಾಪ್ ಸಿಂಹನಿಗೆ ಜೈ” ಎಂಬ ಘೋಷಣೆ ಮೊಳಗಿತು. ಮುಂದೆ ಬರುತ್ತಿರುವಾಗ ಮಾಜಿ ಸಂಸದ ವಿಶ್ವನಾಥರು ಎದುರಾದರು, ಕಾಲು ಮುಟ್ಟಿ ಸಮಸ್ಕರಿಸಿದೆ (ಸಂಘದ ಸಂಸ್ಕಾರ). ನನ್ನನ್ನು ತಬ್ಬಿಕೊಂಡರು. ಆ ಫೋಟೋ ಹಾಕಿ ಇಲ್ಲದ ಗುಲ್ಲೆಬ್ಬಿಸಬೇಡಿ. ಮೋದಿಜಿಯನ್ನು ಹೊಗಳಿ, ಸತತವಾಗಿ ಅವರ ಪರವಾಗಿ ಬರೆದ (2004, ಜೂನ್ 19 ರಿಂದ) ಮೊದಲ ಕನ್ನಡ ಬರಹಗಾರ ಹಾಗು ಮೋದಿಜಿ ಆತ್ಮಚರಿತ್ರೆ ಬರೆದ ಮೊಟ್ಟಮೊದಲ ಲೇಖಕ ನಾನು. ಸಾಯುವವರೆಗೂ ನಾನು ಮೋದಿಜಿ ನಿಷ್ಠ. ಜನವರಿ 27ಕ್ಕೆ ಹನುಮ ಜಯಂತಿ ಮೆರವಣಿಗೆ ಇದೆ. ಬಂದು ಕಣ್ಣಾರೆ ಕಂಡು ಆನಂದಿಸಿರಂತೆ. ವದಂತಿ ಬಿಡಿ.

  • ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮವಾಗಿ ಕಟ್ಟಿಕೊಂಡಿದ್ದ ಅಂಗಡಿಗಳ ತೆರವು

    ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮವಾಗಿ ಕಟ್ಟಿಕೊಂಡಿದ್ದ ಅಂಗಡಿಗಳ ತೆರವು

    ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳು ಘರ್ಜಿಸಿವೆ. ಮಂಡ್ಯ ನಗರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಅಂಗಡಿ ಮಳಿಗೆಗಳನ್ನ ತೆರವುಗೊಳಿಸಲಾಗಿದೆ.

    ನಗರಸಭೆ ಆಯುಕ್ತ ನರಸಿಂಹಮೂರ್ತಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ, ನಗರದ ಕಲಾಮಂದಿರ ರಸ್ತೆಯಲ್ಲಿದ್ದ ಹಲವು ಅಕ್ರಮ ಅಂಗಡಿ ಮಳಿಗೆಗಳನ್ನು ನೆಲಸಮ ಮಾಡಲಾಯಿತು.

    ಈ ಸಂದರ್ಭ ಅಂಗಡಿ ಮಾಲೀಕರು ಆಯುಕ್ತರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಜೀವನಾಧಾರವಾಗಿದ್ದ ಅಂಗಡಿಗಳನ್ನ ಕೆಡವಿದ್ರಿಂದ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.

     

  • ವಿಡಿಯೋ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರ

    ವಿಡಿಯೋ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರ

    ಮೈಸೂರು: ನಗರದ ಮಹಾ ನಗರಪಾಲಿಕೆಯಲ್ಲಿ ಲಂಚಾವತಾರದ ಸದ್ದು ಜೋರಾಗಿದೆ. ಪಾಲಿಕೆಯ ವ್ಯಾಪ್ತಿಯ ರೋಜ್ ಗಾರ್ ಯೋಜನೆಯಲ್ಲಿ ಸಾಲ ಕೊಡಿಸಲು ಪಾಲಿಕೆಯ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರನೊಬ್ಬ ಲಂಚ ಸ್ವೀಕರಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಪಾಲಿಕೆಯಲ್ಲಿ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರ ಶಿವಕುಮಾರ್ ಎಂಬಾತ ಲಂಚ ಸ್ವೀಕರಿಸಿದ್ದಾನೆ. ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾನೆ. ಮೂಲ ಹುದ್ದೆಯಲ್ಲಿ ಮಾಲಿ ಎಂದು ಉಲ್ಲೇಖವಾಗಿದ್ದರು ತಾನೂ ಕ್ಲರ್ಕ್ ಎಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾನೆ.

    ತೇಜಸ್‍ಕುಮಾರ್ ಎಂಬವರಿಂದ 10 ಸಾವಿರ ಲಂಚ ಕೇಳಿ 3 ಸಾವಿರ ರೂ. ಹಣ ಸ್ವೀಕರಿಸಿದ್ದಾನೆ. 15 ದಿನದಲ್ಲಿ ಸಾಲ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದಾನೆ. ಪ್ರಶಾಂತ್ ಎಂಬ ಮಧ್ಯವರ್ತಿಯನ್ನ ಬಳಸಿಕೊಂಡು ಶಿವಕುಮಾರ್ ಲಂಚಾವತಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

    ಸಾಲ ಕೇಳಿ ಬರುವವರಿಗೆ ಪುಸಲಾಯಿಸಿ ಲಂಚ ಪಡೆಯುವ ಈತನ ಅಸಲಿ ಬಣ್ಣವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಣ ಕಳೆದುಕೊಂಡು ಸಾಲವು ದೊರೆಯದ ಸಾರ್ವಜನಿಕರು ಈತನ ವಿರುದ್ಧ ಧ್ವನಿ ಎತ್ತಿದ್ದಾರೆ.

    https://www.youtube.com/watch?v=WmC832D4pDw

  • ಉಡುಪಿ ನಗರಸಭೆಯಲ್ಲಿ ಫೈಟಿಂಗ್: ಕಾಂಗ್ರೆಸ್ ಸದಸ್ಯರಿಂದಲೇ ಸಾರ್ವಜನಿಕನ ಮೇಲೆ ಹಲ್ಲೆ

    ಉಡುಪಿ ನಗರಸಭೆಯಲ್ಲಿ ಫೈಟಿಂಗ್: ಕಾಂಗ್ರೆಸ್ ಸದಸ್ಯರಿಂದಲೇ ಸಾರ್ವಜನಿಕನ ಮೇಲೆ ಹಲ್ಲೆ

    ಉಡುಪಿ: ನಗರಸಭೆ ಸಾಮಾನ್ಯ ಸಭೆಯಲ್ಲಿ ತನ್ನ ವಾರ್ಡ್ ಸದಸ್ಯೆಯ ಪರ ಹೇಳಿಕೆ ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರು ಹಲ್ಲೆ ನಡೆಸಿದ್ದಾರೆ.

    ಕಾರ್ಯಕ್ರಮ ನಡೆಯುವ ವೇಳೆ ಬ್ಯಾನರ್‍ನಲ್ಲಿ ನನ್ನ ಭಾವಚಿತ್ರ ಹಾಕುತ್ತಿಲ್ಲ. ಶಾಸಕರಿಗೆ ಮಾಹಿತಿ ನೀಡದೆ ರಸ್ತೆಯೊಂದನ್ನು ಉದ್ಘಾಟನೆ ಮಾಡಲಾಗಿದೆ ಎಂದು ಪಕ್ಷದವರೇ ಕೆಲವರು ಆರೋಪ ಮಾಡಿದ್ದಾರೆ. ಅಲ್ಲದೆ ಕಡಿಯಾಳಿ ದೇವಸ್ಥಾನದ ಗೇಟ್ ಬಂದ್ ಮಾಡಿರುವುದರಿಂದ ಅಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಹಾಗಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸದಸ್ಯೆ ಗೀತಾ ಶೇಟ್ ಹೇಳಿದರು.

    ಈ ವೇಳೆ ಗೀತಾ ಅವರ ಪರವಾಗಿ ಹೇಳಿಕೆ ನೀಡಲು ರೋನಿ ಡೀಮೆಲ್ಲೊ ಎಂಬುವರು ಸದನದ ಒಳಗೆ ನುಗ್ಗಿದರು. ಹೀಗಾಗಿ ಕಾಂಗ್ರೆಸ್ ಸದಸ್ಯರು ಸೇರಿ ಅವರನ್ನು ತಡೆದು ಹಲ್ಲೆಮಾಡಿ ಹೊರ ದಬ್ಬಿದರು.

    ರಮೇಶ್ ಕಾಂಚನ್, ರಮೇಶ್ ಪೂಜಾರಿ, ಸುಕೇಶ್ ಹೆರ್ಗ ಎಂಬವರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    https://youtu.be/0Lb4iGpcf30