Tag: Municipal Commissioner

  • ಆಟೋದಲ್ಲಿ ಸುತ್ತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ ಆಯುಕ್ತ

    ಆಟೋದಲ್ಲಿ ಸುತ್ತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ ಆಯುಕ್ತ

    ಚಿಕ್ಕಮಗಳೂರು:  ನಗರಸಭೆ ಆಯುಕ್ತ ಚಂದ್ರಶೇಖರ್ ಅವರು ಧ್ವನಿವರ್ಧಕ ಹಾಕಿಕೊಂಡು ಆಟೋದಲ್ಲಿ ಕುಳಿತು ನಗರದ ಪ್ರಮುಖ ಬೀದಿ, ಬೀದಿ ಸುತ್ತಿ ಕೊರೊನಾ ವೈರಸ್ ಬಗ್ಗೆ  ಜನಜಾಗೃತಿ ಮೂಡಿಸಿದ್ದಾರೆ.

    ರಾಜ್ಯ ಸರ್ಕಾರ ಒಂಬತ್ತು ದಿನಗಳ ಕಾಲ ರಾಜ್ಯವನ್ನು ಲಾಕ್‍ಡೌನ್ ಮಾಡುತ್ತೆಂಬ ಸುದ್ದಿ ತಿಳಿಯುತ್ತಿದ್ದಂತೆ ದಿನಬಳಕೆ ಹಾಗೂ ಅಗತ್ಯ ವಸ್ತುಗಳನ್ನ ಖರೀದಿಸುವುಕ್ಕೆ ನಗರದಾದ್ಯಂತ ಜನ ಮುಗಿ ಬಿದ್ದಿದ್ದರು. ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಯಲ್ಲಿ ಜನಗಳ ಸಂತೆಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ನಗರಸಭೆ ಆಯುಕ್ತ ಚಂದ್ರಶೇಖರ್ ಅವರು ಆಟೋಗೆ ಮೈಕ್ ಕಟ್ಟಿಕೊಂಡು ನಗರದಾದ್ಯಂತ ಸಂಚರಿಸಿ ಜನಜಾಗೃತಿ ಮೂಡಿಸಿದರು.

    ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಆಟೋದಲ್ಲಿ ಅನೌನ್ಸ್ ಮಾಡುತ್ತಾ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿದರು. ನಗರದ ಎಂ.ಜಿ.ರಸ್ತೆ ಮಧ್ಯೆ ಆಟೋ ನಿಲ್ಲಿಸಿ ಮೈಕ್‍ನಲ್ಲಿ ಜೋರಾಗಿ ಜನರಿಗೆ ಮನೆಯಿಂದ ಹೊರಬಾರದಂತೆ ಮನವಿ ಮಾಡಿಕೊಂಡರು.

    50 ವರ್ಷ ದಾಟಿದ ಯಾರೂ ಮನೆಯಿಂದ ಹೊರಬರಬೇಡಿ. ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಿತ್ತು ತಿನ್ನುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಶಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಈ ಮಹಾಮಾರಿಯನ್ನ ನಿಯಂತ್ರಿಸಲು ಸಾಧ್ಯ. ಒಂದು ವಾರಗಳ ಕಾಲ ಯಾರೂ ಮನೆಯಿಂದ ಹೊರಬೇಡಿ ಎಂದು ತಿಳಿಸಿದರು.

  • ‘ಮೋದಿ ಬಂದ್ರೂ ನನ್ನೇನು ಮಾಡಲ್ಲ, ನೀನ್ ಯಾವ್ ಲೆಕ್ಕ’ – ನಗರಸಭೆ  ಕಮಿಷನರ್‌ಗೆ ಕುಂಚ ಕಲಾವಿದನಿಂದ ಅವಾಜ್

    ‘ಮೋದಿ ಬಂದ್ರೂ ನನ್ನೇನು ಮಾಡಲ್ಲ, ನೀನ್ ಯಾವ್ ಲೆಕ್ಕ’ – ನಗರಸಭೆ ಕಮಿಷನರ್‌ಗೆ ಕುಂಚ ಕಲಾವಿದನಿಂದ ಅವಾಜ್

    ಯಾದಗಿರಿ: ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಬಂದರೂ ನನ್ನನ್ನು ಏನು ಮಾಡಲ್ಲ, ನೀನು ಯಾವ ಲೆಕ್ಕ ಅಂತ ನಗರಸಭೆ ಕಮಿಷನರ್‌ಗೆ ಯಾದಗಿರಿ ಕುಂಚ ಕಲಾವಿದನೋರ್ವ ತರಾಟೆಗೆ ತೆಗೆದುಕೊಂಡಿದ್ದಾನೆ.

    ಕೆಲಸ ಕೊಡದಕ್ಕೆ ಕೋಪಗೊಂಡ ಕುಂಚ ಕಲಾವಿದ, ಯಾದಗಿರಿ ನಗರಸಭೆ ಕಮಿಷನರ್ ರಮೇಶ್‍ಗೆ ನಗರದ ಡಿಸಿ ಸರ್ಕಾರಿ ಮನೆ ಎದುರು ನಡು ರಸ್ತೆಯಲ್ಲಿ ಮಲ್ಲು ಆರ್ಟ್ಸ್ ಮಾಲೀಕ ಮಲ್ಲಿಕಾರ್ಜುನ ಅವಾಜ್ ಹಾಕಿದ್ದಾನೆ.

    ನಗರ ಸುಂದರವಾಗಿ ಕಾಣಲು ಪ್ರವಾಸೋದ್ಯಮ, ನಗರಸಭೆ ಮತ್ತು ಜಿಲ್ಲಾಡಳಿತದಿಂದ ಸರ್ಕಾರಿ ಕಟ್ಟಡಗಳ ಗೋಡೆಗಳಿಗೆ ಕಲಾಕೃತಿಗಳನ್ನು ಬಿಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಖಾಸಗಿ ಕುಂಚ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತೆ ಎನ್ನುವುದು ಕಲಾವಿದನ ಆರೋಪವಾಗಿದೆ. ಹೀಗಾಗಿ ನಡು ರಸ್ತೆಯಲ್ಲಿ ನಗರದ ಸಭೆ ಕಮಿಷನರ್ ರಮೇಶ್‍ಗೆ ಬೈದು ಕುಂಚ ಕಲಾವಿದ ತನ್ನ ಆಕ್ರೋಶ ಹೊರಹಾಕಿದ್ದಾನೆ.

  • ಆರ್‌ಟಿಐ ಕಾರ್ಯಕರ್ತರಿಗೆ ತಪ್ಪು ಮಾಹಿತಿ – ನಗರಸಭೆ ಆಯುಕ್ತರಿಗೆ ಬಿತ್ತು ದಂಡ

    ಆರ್‌ಟಿಐ ಕಾರ್ಯಕರ್ತರಿಗೆ ತಪ್ಪು ಮಾಹಿತಿ – ನಗರಸಭೆ ಆಯುಕ್ತರಿಗೆ ಬಿತ್ತು ದಂಡ

    ಚಾಮರಾಜನಗರ: ತಪ್ಪು ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.

    ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗಶೆಟ್ಟಿಗೆ ದಂಡ ವಿಧಿಸಲಾಗಿದೆ. ಕೊಳ್ಳೇಗಾಲದಲ್ಲಿನ ಕಲ್ಯಾಣಮಂಟಪಗಳ ಸಂಖ್ಯೆ, ಮಾಂಸದಂಗಡಿಗಳ ಸಂಖ್ಯೆ ಕುರಿತು ಆರ್‌ಟಿಐ ಕಾರ್ಯಕರ್ತ ದಶರಥ ಅವರು ಕೇಳಿದ್ದ ಪ್ರಶ್ನೆಗೆ ಆಯುಕ್ತರು ತಪ್ಪು ಮಾಹಿತಿ ನೀಡಿದ್ದಲ್ಲದೆ ವಿಳಂಬ ನೀತಿಯನ್ನು ಅನುಸರಿಸಿದ್ದರು. ಈ ಬಗ್ಗೆ ದಶರಥ್ ಅವರು ಸಾರ್ವಜನಿಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ಆಧಾರದ ಮೇರೆಗೆ ಸಾರ್ವಜನಿಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಮಂಜುನಾಥ್ ಅವರು ನಾಗಶೆಟ್ಟಿ ಅವರಿಗೆ 10 ಸಾವಿರ ರೂ. ದಂಡ ಕಟ್ಟುವಂತೆ ಆದೇಶಿಸಿದ್ದಾರೆ.

    ಈ ಸಂಬಂಧ ಎರಡು ಪ್ರಕರಣಗಳನ್ನೂ ಕೈಗೆತ್ತಿಕೊಂಡ ಆಯುಕ್ತ ಮಂಜುನಾಥ್ ಅವರು ವಾದ-ವಿವಾದ ಆಲಿಸಿ ಎರಡೂ ಪ್ರಕರಣಗಳಿಗೆ ತಲಾ 5 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಒಟ್ಟು 10 ಸಾವಿರ ರೂ. ದಂಡವನ್ನು ನಾಗಶೆಟ್ಟಿ ಅವರ ಮಾಸಿಕ ಸಂಬಳದಲ್ಲಿ 2 ಕಂತುಗಳಾಗಿ ಪಡೆಯಲು ಸೂಚಿಸಲಾಗಿದೆ.