Tag: Mundina Nildana

  • ಅಮೇಜಾನ್ ಪ್ರೈಮ್‍ನಲ್ಲಿ ಖುಷಿಯಿಂದ ಕಿಕ್ಕಿರಿದ ‘ಮುಂದಿನ ನಿಲ್ದಾಣ’!

    ಅಮೇಜಾನ್ ಪ್ರೈಮ್‍ನಲ್ಲಿ ಖುಷಿಯಿಂದ ಕಿಕ್ಕಿರಿದ ‘ಮುಂದಿನ ನಿಲ್ದಾಣ’!

    ಹುಪಾಲು ಜನರ ಖುಷಿಗೆ, ಬೇಸರಕ್ಕೆ, ಥರ ಥರದ ಭಾವಗಳಿಗೆ ಸರಿಕಟ್ಟಾಗಿ ಸಾಥ್ ಕೊಡುತ್ತಿದ್ದ ಚಿತ್ರಮಂದಿರಗಳೀಗ ಬೀಗ ಜಡಿದುಕೊಂಡಿವೆ. ಅದೇನೇ ಬ್ಯುಸಿ, ಕಷ್ಟ ಕಾರ್ಪಣ್ಯಗಳಿದ್ದರೂ ಸಿನಿಮಾ ಮಂದಿರಗಳಿಗೆ ತೆರಳಿ ಸಿನಿಮಾ ನೋಡಿ ನಿರಾಳವಾಗುತ್ತಿದ್ದ ಜನರೆಲ್ಲ ಆ ಅವಕಾಶವಿಲ್ಲದೆ ಏನೋ ಕಳೆದುಕೊಂಡಾಗ ಕಸಿವಿಸಿಗೊಳಗಾಗಿದ್ದಾರೆ. ಆ ನೀರವವನ್ನು ಕೊಂಚ ನೀಗಿರೋದು ಅಮೇಜಾನ್ ಪ್ರೈಮ್‍ನ ಆನ್‍ಲೈನ್ ಮೂಲಗಳು. ಇದೀಗ ಹಲವಾರು ಕನ್ನಡ ಸಿನಿಮಾಗಳು ಈ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತಲುಪಿಕೊಳ್ಳುತ್ತಿದೆ. ಸಿನಿಮಾ ಮಂದಿರಗಳಲ್ಲಿ ತೆರೆಕಂಡು ಯಶ ಕಂಡಿದ್ದ ಮುಂದಿನ ನಿಲ್ದಾಣ ಚಿತ್ರವೂ ಇದೀಗ ಅಮೇಜಾನ್ ಪ್ರೈಮ್‍ಗೆ ಅಡಿಯಿರಿಸಿದೆ.

    ಯುವಪ್ರತಿಭೆ ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿರೋ ಮುಂದಿನ ನಿಲ್ದಾಣದ ನವಿರಾದ ಕಥೆಗೆ, ಯುವ ಸಮುದಾಯದ ಸೂಕ್ಷ್ಮ ತಲ್ಲಣಗಳನ್ನು ದೃಶ್ಯಗಳಲ್ಲಿ ಹಿಡಿದಿಟ್ಟ ಕಲಾತ್ಮಕತೆಗೆ ಮತ್ತು ಅದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿಯೇ ಪ್ರೇಕ್ಷಕರಿಗೆ ಮುಟ್ಟಿಸಿದ ಜಾಣ್ಮೆಯ ಬಗ್ಗೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರ ಕಡೆಯಿಂದಲೂ ಈ ಸಿನಿಮಾಗೆ ಮೆಚ್ಚುಗೆಗಳು ಸಿಕ್ಕಿದ್ದವು. ಹೊಸ ಅಲೆಯ, ಹೊಸ ಆಲೋಚನೆಯ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ಕೈ ಹಿಡಿದೇ ತೀರುತ್ತಾರೆಂಬುದಕ್ಕೆ ಉದಾಹರಣೆ ಎಂಬಂತೆ ಮುಂದಿನ ನಿಲ್ದಾಣ ಗೆದ್ದು ಬೀಗಿತ್ತು.

    ಇದೀಗ ಕೊರೊನಾ ಕಾಲದಲ್ಲಿ ಮುಂದಿನ ನಿಲ್ದಾಣ ಚಿತ್ರ ಅಮೇಜಾನ್ ಪ್ರೈಮ್‍ಗೆ ಅಡಿಯಿರಿಸಿದೆ. ಹೀಗೆ ಆಗಮಿಸಿದ ಕ್ಷಣದಿಂದಲೇ ಈ ಚಿತ್ರ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಅಮೇಜಾನ್ ಪ್ರೈಮ್‍ನಲ್ಲಿಯೇ ಲಾಕ್‍ಡೌನ್ ಅವಧಿಯ ತುಂಬಾ ಕನ್ನಡದ ನಾನಾ ಸಿನಿಮಾಗಳು ಮತ್ತೆ ಹಿಟ್ ಆಗಿವೆ. ಮುಂದಿನ ನಿಲ್ದಾಣ ಕೂಡ ಆ ಆದಿಯಲ್ಲಿ ಸೇರ್ಪಡೆಗೊಳ್ಳೋ ಲಕ್ಷಣಗಳೇ ದಟ್ಟವಾಗಿವೆ. ಈ ವಿದ್ಯಮಾನ ವಿಶಿಷ್ಟವಾದ ಆಲೋಚನಾ ಕ್ರಮದಿಂದ ಜೀವ ಪಡೆದ ಸಿನಿಮಾಗಳು ಎಲ್ಲ ಕಾಲದಲ್ಲಿಯೂ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಳ್ಳುತ್ತದೆಂಬುದಕ್ಕೊಂದು ತಾಜಾ ಉದಾಹರಣೆ.

    ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಮುಂದಿನ ನಿಲ್ದಾಣ ಸಾಫ್ಟ್‍ವೇರ್ ಜಗತ್ತಿನ ಮನಸ್ಥಿತಿಗಳ ಕಥೆ ಹೇಳುತ್ತಲೇ ನಾನಾ ದಿಕ್ಕುಗಳನ್ನು ಕಾಣಿಸಿತ್ತು. ನವಿರಾದ ತ್ರಿಕೋನ ಪ್ರೇಮಕಥೆ, ಅದಕ್ಕೆ ಪಟವಿಟ್ಟಂತಹ ಸದಾ ಗುನುಗಿಸಿಕೊಳ್ಳುತ್ತಿರೋ ಚೆಂದದ ಹಾಡುಗಳೊಂದಿಗೆ ಮುಂದಿನ ನಿಲ್ದಾಣದಲ್ಲಿ ಸಿನಿಮಾಸಕ್ತ ಮನಸುಗಳು ಸದಾ ತಂಗುತ್ತಲೇ ಬರುತ್ತಿವೆ. ಇದೀಗ ಅಮೇಜಾನ್ ಪ್ರೈಮ್ ಮೂಲಕ ಮತ್ತೆ ಮುಂದಿನ ನಿಲ್ದಾಣದಲ್ಲಿ ನಿಂತು ಮತ್ತೊಮ್ಮೆ ಮುದಗೊಳ್ಳೋ ಸದವಕಾಶ ಸಿನಿಮಾ ಪ್ರೇಮಿಗಳಿಗೆ ಸಿಕ್ಕಿದೆ. ನೀವೂ ಕೂಡ ಮಿಸ್ ಮಾಡಿಕೊಳ್ಳದೆ ಮುಂದಿನ ನಿಲ್ದಾಣದ ಮುದಗಳಿಗೆ ಮನಸೊಡ್ಡಿಕೊಳ್ಳಿ.

  • ಸದ್ಗುರುವಿನೊಂದಿಗೆ ‘ಮುಂದಿನ ನಿಲ್ದಾಣ’ ತಂಡ

    ಸದ್ಗುರುವಿನೊಂದಿಗೆ ‘ಮುಂದಿನ ನಿಲ್ದಾಣ’ ತಂಡ

    ಬೆಂಗಳೂರು: ತೆರೆ ಕಾಣುವ ಮುನ್ನವೇ ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಮುಂದಿನ ನಿಲ್ದಾಣ ಚಿತ್ರವು ಎಲ್ಲೆಡೆಯೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಮೊನ್ನೆಯಷ್ಟೇ ರಿಲೀಸ್ ಆದ ಈ ಚಿತ್ರದ ಮನಸೇ ಮಾಯ ಹಾಡು ಯೂಟ್ಯೂಬ್, ಟಿಕ್ ಟಾಕ್ ಗಳಲ್ಲಿ ವೈರಲ್ ಆಗಿದ್ದು ದಿನದಿಂದ ದಿನಕ್ಕೆ ಅದರ ಕಾವು ಏರುತ್ತಾ ಇದೆ. ಇದರ ಜೊತೆಯಲ್ಲಿಯೇ, ಕಾವೇರಿ ತಾಯಿಯ ಒಡಲಿನ ಕಾವನ್ನು ತಗ್ಗಿಸುವ ಪ್ರಯತ್ನಕ್ಕೂ ಚಿತ್ರ ತಂಡವು ಕೈಜೋಡಿಸಿದೆ!

    ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡವು ಕಾವೇರಿ ಕೂಗು ಅಭಿಯಾನ ಮಾಡುತ್ತಿರುವ ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿತು.

    ಮುಂದಿನ ನಿಲ್ದಾಣ ಚಿತ್ರ ತಂಡವು ಸದಾ ಕಾವೇರಿಯ ಹಾಗೂ ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧವಾಗಿದೆ ಎಂಬ ಮಾತನ್ನು ಸದ್ಗುರುವಿನ ಜೊತೆ ಹಂಚಿಕೊಳ್ಳುತ್ತಾ, ಚಿತ್ರ ತಂಡವು ಬೆಂಗಳೂರಿಗೆ ಮರಳಿತು.

  • ಮುಂದಿನ ನಿಲ್ದಾಣದಲ್ಲಿ ಮನಸು ಮಾಯವಾದಂಥಾ ಮೋಹಕ ಹಾಡು!

    ಮುಂದಿನ ನಿಲ್ದಾಣದಲ್ಲಿ ಮನಸು ಮಾಯವಾದಂಥಾ ಮೋಹಕ ಹಾಡು!

    ಈಗಾಗಲೇ ಡಿಫರೆಂಟ್ ಆಗಿರೋ ಪೋಸ್ಟರ್‌ಗಳು ಮತ್ತು ಹಾಡುಗಳ ಮೂಲಕ ‘ಮುಂದಿನ ನಿಲ್ದಾಣ’ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಈವರೆಗೂ ಪ್ರತೀ ಹಂತದಲ್ಲಿಯೂ ಹೊಸತನದೊಂದಿಗೆ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಒಂದಷ್ಟು ಹಾಡುಗಳು ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿಕೊಂಡಿವೆ. ಇದೀಗ ಮನಸೇ ಮಾಯ ಎಂಬ ಮೆಲೋಡಿ ವೀಡಿಯೋ ಸಾಂಗ್ ಒಂದು ಅನಾವರಣಗೊಂಡಿದೆ. ಒಂದೇ ಸಲಕ್ಕೆ ಮನಸಿಗಿಳಿಯುವಷ್ಟು ಮುದ್ದಾಗಿ ಮೂಡಿ ಬಂದಿರೋ ಈ ಹಾಡೂ ಸಹ ವ್ಯಾಪಕ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

    ಮನಸೇ ಮಾಯ ಎಂಬ ಈ ಹಾಡನ್ನು ಸೂರಜ್ ಸಂತೋಷ್ ಹಾಗೂ ವರುಣ್ ಸುನಿಲ್ ಹಾಡಿದ್ದಾರೆ. ಕಿರಣ್ ಕಾವೇರಪ್ಪ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಈ ಹಾಡನ್ನು ಮಸಾಲಾ ಕಾಫಿ ಹೆಸರಿನ ತಂಡ ರೂಪಿಸಿದೆ. ಒಂದೇ ಕೇಳುವಿಕೆಯಲ್ಲಿ ಭಿನ್ನವಾದ ಸಂಗೀತದ ಪಟ್ಟುಗಳು ಮತ್ತು ಸೌಂಡಿಂಗ್‍ನಿಂದ ಗಮನ ಸೆಳೆಯುವಂಥಾ ಈ ಹಾಡು ವ್ಯಾಪಕ ಮೆಚ್ಚುಗೆ ಗಳಿಸಿಕೊಂಡು ಸದ್ಯ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದೆ. ಈ ಮೂಲಕವೇ ಮುಂದಿನ ನಿಲ್ದಾಣ ಚಿತ್ರವೂ ಮತ್ತೆ ಪ್ರೇಕ್ಷಕರ ನಡುವೆ ಹರಿದಾಡಲಾರಂಭಿಸಿದೆ.

    ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿರೋ ಈ ಚಿತ್ರದ ಟೀಸರ್ ಮತ್ತು ಪೋಸ್ಟರ್‍ಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಈ ಮೂಲಕವೇ ಸದರಿ ಚಿತ್ರ ಬಹನಿರೀಕ್ಷಿತ ಸಿನಿಮಾವಾಗಿಯೂ ನೆಲೆ ಕಂಡುಕೊಂಡಿದೆ. ವಿಶಿಷ್ಟವಾದ ಪ್ರೇಮ ಕಥಾನಕದ ಜೊತೆ ಜೊತೆಗೇ ಗಹನವಾದುದ್ದೇನನ್ನೋ ಹೇಳಲು ಮುಂದಾಗಿರೋ ಈ ಚಿತ್ರದಲ್ಲಿ ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಮತ್ತು ಅನನ್ಯಾ ಕಶ್ಯಪ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮನಸೇ ಮಾಯ ಎಂಬ ಹಾಡಿನ ಮೂಲಕ ಸೆಳೆದುಕೊಂಡಿರೋ ಮುಂದಿನ ನಿಲ್ದಾಣ ಇಷ್ಟರಲ್ಲಿಯೇ ತೆರೆಗಾಣಲಿದೆ.