ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಇಂದು ರಾತ್ರಿ ಕಾರಿನಲ್ಲಿ ಬಂದ ಆಗಂತುಕರು ಸಿನಿಮೀಯ ರೀತಿಯಲ್ಲಿ ಉದ್ಯಮಿಯನ್ನು ಅಪಹರಿಸಿದ ಘಟನೆ ನಡೆದಿದೆ.
ಮುಂಡಗೋಡು ಪಟ್ಟಣದ ಜಮೀರಅಹ್ಮದ್ ದರ್ಗಾವಾಲೆ ಎಂಬಾತ ಅಪಹರಣಕ್ಕೊಳಗಾದ ವ್ಯಕ್ತಿ. ಪಟ್ಟಣ ಮಾದರಿ ಶಾಲೆಯ ಎದುರು ಸ್ಕೂಟಿಯಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಬಿಳಿ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು ಈತನನ್ನು ಬೀಳಿಸಿದ್ದಾರೆ.
ಬಿದ್ದಾಗ ಈತನ ಮೇಲೆ ಹಲ್ಲೆ ಮಾಡಿ ಕಾರಿನೊಳಗೆ ಹಾಕಿಕೊಂಡಿದ್ದು, ಇನ್ಬೊಬ್ಬನಿಗೆ ಚಾಕು ತೋರಿಸಿ ಓಡಿಸಿದ್ದಾರೆ. ನಂತರ ಹಾವೇರಿ ಮಾರ್ಗವಾಗಿ ಟೋಲ್ ದಾಟಿ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಅಪಹರಣಕ್ಕೊಳಗಾದ ಜಮೀರಅಹ್ಮದ್ ದರ್ಗಾವಾಲೆ ಬಡ್ಡಿ ವ್ಯವಹಾರ ಹಾಗೂ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದು ಕ್ರಿಕೆಟ್ (cricket) ಬೆಟ್ಟಿಂಗ್ ಸಹ ಮಾಡುತಿದ್ದ ಎನ್ನಲಾಗಿದ್ದು, ಈತ ನಾಳೆ ಕ್ರಿಕೆಟ್ ಕ್ರೀಡಾಕೂಟ ಸಹ ಆಯೋಜಿಸಿದ್ದು ತಂಡ ಸಹ ಸಿದ್ಧಪಡಿಸಿದ್ದನು.
ಈತನನ್ನು ಅಪಹರಣ ಮಾಡಲು ಕಾರಣ ತಿಳಿಯಬೇಕಿದ್ದು, ಅಪಹರಣ ಮಾಡಿದವರು ಹಾವೇರಿ ಭಾಗದವರೆಂದು ಶಂಕಿಸಲಾಗಿದೆ. ಪೊಲೀಸರು ಸಹ ವಾಹನದ ಟ್ರಾಕ್ ಮಾಡಿ ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಇಂದಿನ ಯುವ ಪೀಳಿಗೆಯವರು ನಾನು ಡಾಕ್ಟರ್, ಎಂಜಿನಿಯರ್, ಲಾಯರ್, ಟೀಚರ್ ಹೀಗೆ ಏನೇನೋ ಆಗಬೇಕು ಎಂಬ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ. ತಾನೊಬ್ಬ ಯೋಧನಾಗಬೇಕು ಎಂದು ಆಸೆ ಪಡುವವರ ಸಂಖ್ಯೆ ಕಡಿಮೆ. ಆದರೆ ಮುಂಡಗೋಡು ನಗರದ ಹಳೂರಿನ ನಿವಾಸಿ ಅಭಯ್ ಪಂಡಿತ್ ತಾನು ಯೋಧನಾಗಬೇಕು ಎಂದು ಸತತ ಎಂಟು ಬಾರಿ ಲೆಫ್ಟಿನೆಂಟ್ ಹುದ್ದೆಯ ಪರೀಕ್ಷೆ ಬರೆದು ಕೊನೆಗೂ ತನ್ನ ಗುರಿ ಸಾಧಿಸಿದ್ದಾರೆ.
ಅಭಯ್ ಓದಿದ್ದು ಎಂಜಿಜಿನಿಯರಿಂಗ್. ಮನಸ್ಸು ಮಾಡಿದ್ರೆ ಕೈತುಂಬ ಸಂಬಳದ ಜೊತೆ ಐಷಾರಾಮಿ ಜೀವನ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಸೈನ್ಯ ಸೇರಿ ದೇಶಸೇವೆ ಮಾಡಬೇಕು ಎಂಬ ತುಡಿತವಿತ್ತು. ಈ ಕಾರಣಕ್ಕೆ ಎಂಜಿನಿಯರಿಂಗ್ ಓದಿ ಕೆಲಸ ಸಿಕ್ಕರೂ ಬಿಡುವಿನ ಸಮಯ ಸೈನ್ಯ ಸೇರಲು ದೇಹ ಹುರಿಗೊಳಿಸಿ ಸತತ ಅಭ್ಯಾಸದಲ್ಲಿ ನಿರತರಾಗಿದ್ದರು. ಪ್ರತಿ ಭಾರಿ ಸೈನಿಕ ಪರೀಕ್ಷೆ ಬರೆದಾಗಲೂ ಸೋಲು ಕಾಣುತಿದ್ದರು. ಆದರೆ ಛಲ ಬಿಡದ ಇವರು ಎಂಟನೇ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಆರು ಜನರಲ್ಲಿ ಲೆಫ್ಟಿನೆಂಟ್ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಚೆನ್ನೈನಲ್ಲಿರುವ ಭಾರತೀಯ ಸೈನಿಕ ಅಕಾಡಮಿಯಲ್ಲಿ ತರಬೇತಿ ಮುಗಿಸಿರುವ ಇವರು ನ.21 ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿದ್ದು, ರಾಜಸ್ಥಾನದ ವೆಸ್ಟರ್ನ್ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಡಿ.10 ರಂದು ತೆರಳಲಿದ್ದಾರೆ.
ಸಾಧನೆ ಇಲ್ಲದೇ ಜೀವನದಲ್ಲಿ ಏನೂ ಸಿಗುವುದಿಲ್ಲ. ನನಗೆ ಕೆಲಸ ಸಿಗಲಿಲ್ಲ ಎಂದುಕೊಳ್ಳುವ ಬದಲು ಆ ಕೆಲಸಕ್ಕೆ ನಾನು ಎಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಬ ಆತ್ಮಾವಲೋಕನ ಅಗತ್ಯ. ಸಾಧಿಸುವ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಲೆಫ್ಟಿನೆಂಟ್ ಅಭಯ್.
ಕಾರವಾರ: ಹೋರಿ ಹೆದರಿಸುವ ಸ್ಪರ್ಧೆಯಲ್ಲಿ ಯುವಕ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.
ಮಂಜು ನೊರಜಪ್ಪನವರ (32) ಮೃತ ಯುವಕ. ಮಂಡಗೊಡ ತಾಲೂಕಿನ ಇಂದೂರು ಗ್ರಾಮದಲ್ಲಿ ಭಾನುವಾರ ಘಟನೆ ನಡೆದಿದೆ. ರೈತ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಹೋರಿ ಸ್ಪರ್ಧೆ ನಡೆಸಲಾಗಿತ್ತು. ಈ ವೇಳೆ ಹೋರಿ ಹಿಡಿಯಲು ಹೋದಾಗ ಹೋರಿಯುವ ಯುವಕನ ಎದೆ ಹಾಗೂ ತಲೆ ಭಾಗಕ್ಕೆ ಗುದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಒಪ್ಪದ ಸಂಸದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದ ಪ್ರಸಂಗ ಇಂದು ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆಯಿತು.
ಚಿಗಳ್ಳಿ ಚೆಕ್ ಡ್ಯಾಂ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂಡಗೋಡ ತಾಲೂಕಿನ ಕೆಲ ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು, ಸರ್ ನಮ್ಮ ಗ್ರಾಮಕ್ಕೆ ಬಂದು ಪರಿಸ್ಥಿತಿ ನೋಡಿ. ಚಿಗಳ್ಳಿ ಚೆಕ್ ಡ್ಯಾಂ ಒಡೆದು ಜಮೀನು, ಮನೆ ಎಲ್ಲವೂ ನೀರು ಪಾಲಾಗಿದೆ. ಬದುಕು ತುಂಬಾ ಕಷ್ಟವಾಗಿದೆ ಎಂದು ಮನವಿ ಮಾಡಿಕೊಂಡರು. ಆಗ ಸಂಸದರು, ನಾನು ಬರುವುದು ಮುಖ್ಯವಲ್ಲ ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ ಎಂದು ಜಾರಿಕೊಂಡರು.
ಅನಂತ್‍ಕುಮಾರ್ ಹೆಗಡೆ ಅವರ ಮಾತಿನಿಂದ ಕೋಪಗೊಂಡ ಗ್ರಾಮಸ್ಥರು ಸಂಸದರನ್ನು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದರು. ಆದರೆ ಅನಂತ್‍ಕುಮಾರ್ ಹೆಗಡೆ ಅವರು ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಬೇರೆ ಕಡೆಗೆ ಪ್ರಯಾಣ ಬೆಳೆಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು, ವೋಟ್ ಕೇಳುವಾಗ ನಾವು ಬೇಡ ಅಂದ್ರೂ ಕಾಲು ಮುಗಿಯುತ್ತಾರೆ. ವೋಟ್‍ಗಾಗಿ ಏನ್ ಬೇಕಾದರೂ ಮಾಡುತ್ತಾರೆ. ಈಗ ಪ್ರವಾಹದಿಂದ ಜನರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಸಂಸದರಿಗೆ ಅರ್ಥವಾಗೊಲ್ವಾ? ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಂಸದ ಅನಂತ್‍ಕುಮಾರ್ ಹೆಗಡೆ ಅವರು ನಿನ್ನೆಯಷ್ಟೇ ಸಂತ್ರಸ್ತರ ಮಾತು ಕೇಳದೆ ಅವರನ್ನು ನಿರ್ಲಕ್ಷಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದರು. ಈ ವೇಳೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು, ದೂರದಿಂದ ನೋಡಲು ಮನೆಗಳು ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಮನೆಗಳ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿದ್ದರು. ಆದರೆ ಜನರ ಮಾತನ್ನು ಕೇಳದೆ, ಸರಿಯಾಗಿ ಸ್ಪಂದಿಸದ ಅನಂತ್‍ಕುಮಾರ್ ಅವರು ನಿರ್ಲಕ್ಷಿಸಿದ್ದ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೂಡ ಅನಂತ್‍ಕುಮಾರ್ ಅವರು ಕಿಡಿಕಾರಿದ್ದರು. ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಸಂಸದರ ನಡವಳಿಕೆಯಿಂದ ಸಿಟ್ಟಲಿದ್ದ ಸಂತ್ರಸ್ತ ಮಹಿಳೆಯರು ನಿನಗೆ ವೋಟ್ ಹಾಕುವುದಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದ್ದರು. ಆದರೆ ಸಂಸದರು ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ ಕುಳಿತ್ತಿದ್ದರು. ಹೀಗೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಬೇರೆ ಪರಿಹಾರ ಕೇಂದ್ರಕ್ಕೆ ಅನಂತ್‍ಕುಮಾರ್ ಹೆಗಡೆ ತೆರಳಿದ್ದರು.
ಕಾರವಾರ: ಸೇವಾದಳದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ದೈಹಿಕ ಶಿಕ್ಷಕರೊಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದರಿಂದ ಸುಮಾರು 10 ಕಿ.ಮೀ ದೂರ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಮನೆ ಸೇರಿರುವ ಘಟನೆ ಜಿಲ್ಲೆಯ ಮುಂಡಗೋಡು ಪಟ್ಟಣದ ಕಾತೂರು ತಾಲೂಕಿನಲ್ಲಿ ನಡೆದಿದೆ.
ಕಾತೂರಿನಲ್ಲಿ ತಾಲೂಕು ಮಟ್ಟದ ಸೇವಾದಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದ್ದರಿಂದ ಸರ್ಕಾರಿ ಜೂನಿಯರ್ ಕಾಲೇಜಿನ 14ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ದೀಪಕ್ ಲೋಕಣ್ಣವರ್ ಕರೆದುಕೊಂದು ಹೋಗಿದ್ದರು. ಹೋಗುವಾಗ ಮಕ್ಕಳನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕ, ವಾಪಾಸ್ ಬರುವಾಗ ಮಕ್ಕಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಮಕ್ಕಳ ಶಿಕ್ಷಕರ ಬಳಿ ಊಟದ ಚೀಟಿಯನ್ನು ನೀಡಲಾಗಿತ್ತು. ಆದ್ರೆ ದೀಪಕ್ ಅವರು ಮಕ್ಕಳ ಊಟದ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾರ್ಯಕ್ರಮದಿಂದ ಹಾಗೆಯೇ ಮುಂಡಗೋಡಿಗೆ ತೆರೆಳಿದ್ದಾರೆ. ಇತ್ತ ಮಕ್ಕಳು ಊಟವನ್ನೂ ಮಾಡದೆ ಶಿಕ್ಷಕರು ಬರುತ್ತಾರೆ ಎಂದು ಕಾದು ಕೂತಿದ್ದಾರೆ. ಆದ್ರೆ ಸಂಜೆಯಾದರೂ ಶಿಕ್ಷಕ ಬರದಿದ್ದಾಗ ಮಕ್ಕಳು ಆತಂಕಗೊಂಡಿದ್ದಾರೆ.
ಬಳಿಕ ಮನೆ ಸೇರಲು ಬಸ್ಸಿಗೆ ಹೋಗಲು ಕೈಯಲ್ಲಿ ಹಣವಿಲ್ಲದೆ ನಡೆದುಕೊಂಡೇ ಸುಮಾರು 10 ಕಿ.ಮೀ ದೂರ ಬಂದಿದ್ದಾರೆ. ಬಳಿಕ ಮಕ್ಕಳನ್ನು ನೋಡಿದ ಗ್ರಾಮಸ್ಥರೊಬ್ಬರು ಹಣ ನೀಡಿ ಎಲ್ಲರನ್ನೂ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದಾರೆ. ಈ ವಿಷಯ ಪೋಷಕರಿಗೆ ತಿಳಿಯುತ್ತಿದಂತೆ ಶಿಕ್ಷಕರ ಮೇಲೆ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಮರುದಿನ ಶಾಲೆಗೆ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ಶಿಕ್ಷಕ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ.