Tag: Mundaragi

  • ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

    ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

    ಗದಗ: ಹೈಟೆಕ್ ದರೋಡೆ ಗ್ಯಾಂಗ್ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುವ ವೇಳೆ ಪೊಲೀಸರಿಂದ ಗುಂಡೇಟು ತಿಂದ ಘಟನೆ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡಂಬಳ (Dambala) ಹಾಗೂ ಡೋಣಿ ಗ್ರಾಮದ ಮಧ್ಯೆ ನಡೆದಿದೆ.

    ಆರೋಪಿ ಜಯಸಿಂಹ ಮೊಡಕೆರ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಎರಡು ಸುತ್ತು ಗುಂಡೇಟು ಹಾರಿಸಿದ್ದಾರೆ. ಇದನ್ನೂ ಓದಿ: ಮೋದಿ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್‌ಎಸ್‌ ಅಧಿಕಾರಿ ನಿಧಿ ತಿವಾರಿ ನೇಮಕ

    ಈ ನಟೋರಿಯಸ್ ಗ್ಯಾಂಗ್ ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾದ ಮೂಲಕ ಸಂಪರ್ಕ ಹೊಂದಿದ್ದರು. ಕಳ್ಳತನ, ದರೋಡೆ ಮಾಡಿ ಮಾಹಿತಿ ಸಿಗದಂತೆ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನುಸುತ್ತಿದ್ದ ಗ್ಯಾಂಗ್‌ನನ್ನು ಬಂಧಿಸುವಲ್ಲಿ ಕೊನೆಗೂ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

    ಆರೋಪಿ ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್ ಹಾಗೂ ಜಯಸಿಂಹ ಮೊಡಕೆರ್‌ರನ್ನು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆತರುತ್ತಿದ್ದರು. ಜಯಸಿಂಹ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ ಅವರು ಆರೋಪಿ ಜಯಸಿಂಹನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ದರೋಡೆ, ಮನೆ ಕಳ್ಳತನ ಸೇರಿದಂತೆ ಹಲವು ಪ್ರಕರಣದ ಮೋಸ್ಟ್ ವಾಟೆಂಡ್ ನಟೋರಿಯಸ್ ದರೋಡೆಕೋರ ಗ್ಯಾಂಗ್ ಇದಾಗಿತ್ತು. ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    ಗಾಯಾಳು ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಎಸ್.ಪಿ, ಬಿ.ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದರು. ಆರೋಪಿ ಜಯಸಿಂಹ ಮೊಡಕೆರ್ ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಆರೋಗ್ಯ ವಿಚಾರಿಸಿದರು.

  • ಬಾಲಕನ ಮೇಲೆ ಬೀದಿ ನಾಯಿ ದಾಳಿ – ಹರಿದು ಹೋಯ್ತು ತುಟಿ

    ಬಾಲಕನ ಮೇಲೆ ಬೀದಿ ನಾಯಿ ದಾಳಿ – ಹರಿದು ಹೋಯ್ತು ತುಟಿ

    ಗದಗ: ಮನೆ‌ ಮುಂದೆ ಆಟವಾಡುತ್ತಿದ್ದ ಬಾಲಕನ (Boy) ಮೇಲೆ ಬೀದಿ ನಾಯಿ (Stray Dogs) ಮನಬಂದಂತೆ ದಾಳಿಮಾಡಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಮುಂಡರಗಿ (Mundargi) ಪಟ್ಟಣದ ವಾರ್ಡ್ ‌ನಂಬರ್ 20 ದರ್ಗಾ ಬಳಿ ನಡೆದಿದೆ.

    ಎರಡೂವರೆ ವರ್ಷದ ರುದ್ರೇಶ್ ದೊಡ್ಡಕಾಳೆಯ ತಲೆ, ಮುಖ, ತುಟಿ ಕಚ್ಚಿ ಗಾಯಗೊಳಿಸಿದೆ. ನಾಯಿ ಕಚ್ಚಿದ್ದರಿಂದ ತುಟಿ ಹರಿದುಹೋಗಿದೆ. ಹಲ್ಲು ಮುರಿತವಾಗಿದೆ. ಬಾಲಕನ ಚಿರಾಟ, ನರಳಾಟ ನೋಡಿದ ಮನೆಯವರು ಓಡಿಬಂದು ಬಿಡಿಸುವಷ್ಟರಲ್ಲಿ ಸಾಕಷ್ಟು ಗಾಯಗೊಳಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎಸ್‌ಪಿ ಬಿಜೆಪಿಯ ಬಿ ಟೀಂ – ಆದಿತ್ಯ ಠಾಕ್ರೆ ಆಕ್ರೋಶ

     

    ಈ ಬೀದಿ ನಾಯಿ ಹಾವಳಿಯಿಂದ ಸ್ಥಳಿಯರು ಬೇಸತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಸುಮಾರು ನಾಲ್ಕೈದು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.

    ಗಾಯಾಳು ಬಾಲಕನಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕೇಳಿ ರೊಚ್ಚಿಗೆದ್ದ ಜನರು ಬಾಲಕನ ಮೇಲೆ ದಾಳಿ ಮಾಡಿದ ನಾಯಿಯನ್ನು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದಾರೆ.

    ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿರುವ ಕುರಿತು ಮಾಧ್ಯಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಿಯ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈಗ ಇತರೇ ಬೀದಿ ನಾಯಿಗಳ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪುರಸಭೆ ಸಿಬ್ಬಂದಿ, ಸ್ಥಳಿಯರು ಒಟ್ಟಾಗಿ ಬಲೆಯ ಮೂಲಕ ಬೀದಿ ನಾಯಿ ಹಿಡಿಯುತ್ತಿದ್ದಾರೆ.

    ರವಿವಾರ ಮಧ್ಯಾಹ್ನದಿಂದ ನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದು, ಇಂದು ಸುಮಾರು ಹತ್ತಾರು ಬೀದಿ ಕಾಯಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

     

  • ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮ ಕಟ್ಟಡ ಮಾಲಿಕರಿಗೆ ಶಾಕ್ ನೀಡಿದ ಅಧಿಕಾರಿಗಳು

    ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮ ಕಟ್ಟಡ ಮಾಲಿಕರಿಗೆ ಶಾಕ್ ನೀಡಿದ ಅಧಿಕಾರಿಗಳು

    ಗದಗ: ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯ ಮೂಲಕ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿದೆ. ಅಕ್ರಮ ಕಟ್ಟಡ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಶಿಂಗಟಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೆ ಬಜಾರ್ ಹಾಗೂ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಅಕ್ರಮವಾಗಿ ಮನೆ, ಅಂಗಡಿಗಳನ್ನು ನಿರ್ಮಿಸಲಾಗಿತ್ತು. ನಕ್ಷೆಯ ಪ್ರಕಾರ 30 ಅಡಿ ರಸ್ತೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಸರಿಯಾದ ರಸ್ತೆ ಇಲ್ಲದ ಕಾರಣ, ಆ ಅಕ್ರಮ ಕಟ್ಟಡಗಳ ತೆರವಿಗೆ ಗ್ರಾಮ ಪಂಚಾಯತ್, ತಹಶಿಲ್ದಾರ್, ತಾಲೂಕು ಪಂಚಾಯತ್, ಜಿಲ್ಲಾಡಳಿತಕ್ಕೆ ದಲಿತ ಕಾಲೋನಿ ಜನರಿಂದ ಮನವಿ ಸಲ್ಲಿಸಲಾಗಿತ್ತು. ಎಲ್ಲವನ್ನೂ ಪರಿಶೀಲಿಸಿ ಸಂಬಂಧಿಸಿದ ಕಟ್ಟಡ ಮಾಲಿಕರಿಗೆ ತೆರವು ಬಗ್ಗೆ ನೋಟೀಸ್ ನೀಡಲಾಯಿತು. ಆದರೂ ತೆರವುಗೊಳ್ಳದ ಹಿನ್ನೆಲೆ, ಇಂದು ಮುಂಡರಗಿ ತಹಶಿಲ್ದಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದರು. ಇದನ್ನೂ ಓದಿ: ಸರ್ವರ್ ಸಮಸ್ಯೆಯಿಂದ ಅಕ್ಕಿ ಪಡೆಯಲು ಪರದಾಟ – ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

    ಸಂತೆ ಬಜಾರ, ಪ್ರಾಥಮಿಕ ಶಾಲೆ ಸಂಪರ್ಕಿಸುವ ರಸ್ತೆ 30 ಅಡಿ ಅಗಲ ವಿಸ್ತೀರ್ಣದ ಅಕ್ಕ ಪಕ್ಕದ ಮನೆ, ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಇದಕ್ಕೆ ಕಟ್ಟಡ ಮಾಲಿಕರು, ಕೆಲ ಸ್ಥಳಿಯರು ವಿರೋಧ ವ್ಯಕ್ತಪಡಿಸಿದರು. ವಸ್ತುಗಳ ಸ್ಥಳಾಂತರಕ್ಕೆ ಇನ್ನು ಕೆಲವು ದಿನ ಕಾಲಾವಕಾಶ ಕೊಡಿ ಎಂದು ಕೇಳಿದರು. ಇನ್ನು ಕೆಲವರು ತೆರವುಗೊಳಿಸುವುದಾದರೆ ಗ್ರಾಮದ ಎಲ್ಲಾ ರಸ್ತೆಗಳ ತೆರವು ಕಾರ್ಯ ನಡೆಯಲಿ ಅಂತ ಪಟ್ಟು ಹಿಡಿದರು. ಇದನ್ನೂ ಓದಿ: ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ: ಆರ್ ಅಶೋಕ್

    ಕೆಲಕಾಲ ಮಾತಿನ ಚಕಮಕಿ ನಡೆಯಿತು. ಒಟ್ಟಿನಲ್ಲಿ ವಾದ-ವಿವಾದಗಳ ನಡುವೆ ತೆರವು ಕಾರ್ಯಾಚರಣೆ ನಡೆಯಿತು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ, ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿಗಳು, ಪೊಲೀಸರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ, ಮರಳಿ ಮನೆಗೆ ಬಂದಿದ್ದೇನೆ: ಸಿಪಿ ಯೋಗೇಶ್ವರ್‌

  • ತುಂಗಭದ್ರಾ ನದಿಗೆ ಹಾರಿದ್ದ ಯುವಕ ಶವವಾಗಿ ಪತ್ತೆ

    ತುಂಗಭದ್ರಾ ನದಿಗೆ ಹಾರಿದ್ದ ಯುವಕ ಶವವಾಗಿ ಪತ್ತೆ

    ಗದಗ: ಸಾಲದ ಬಾಧೆಗೆ ತುಂಗಭದ್ರಾ ನದಿಗೆ (Tungabhadra River ) ಹಾರಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

    ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಮುರಡಿ ತಾಂಡ ನಿವಾಸಿ ದಿನೇಶ್ ಅಕ್ಕಸಾಲಿ ಎಂಬ ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಮುಂಡರಗಿಯ ಹಮ್ಮಗಿ ಬ್ಯಾರೇಜ್ ಬಳಿ ತುಂಗಭದ್ರಾ ನದಿಗೆ ಯುವಕ ಹಾರಿದ್ದ. ಸಾಲಬಾಧೆ ಹಾಗೂ ಕೌಟುಂಬಿಕ ಕಲಹ ಹಿನ್ನೆಲೆ ಆತ ಮನನೊಂದಿದ್ದ. ಮೂರು ದಿನಗಳ ಹಿಂದೆ ಬ್ರಿಡ್ಜ್ ಮೇಲೆ ಬೈಕ್, ಮೊಬೈಲ್, ಚಪ್ಪಲಿ ಬಿಟ್ಟು ರಾತ್ರಿ ವೇಳೆ ಹಾರಿದ್ದ ಎನ್ನಲಾಗ್ತಿದೆ.

    ಈ ಬಗ್ಗೆ ಮೂರು ದಿನಗಳಿಂದ ಅಗ್ನಿಶಾಮಕ ದಳ, ಈಜು ತಜ್ಞರು, ಸ್ಥಳಿಯರು ಶೋಧಕಾರ್ಯ ನಡೆಸಿದ್ದರು. ಇಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಬಳಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಚಿತ್ರದುರ್ಗ| ಮಳೆರಾಯನ ಅಟ್ಟಹಾಸಕ್ಕೆ 65 ಲಕ್ಷಕ್ಕೂ ಅಧಿಕ ಮೌಲ್ಯದ 25,000 ಕೋಳಿಗಳ ಮಾರಣಹೋಮ

    ಸಾಲದ ಸುಳಿಗೆ ಸಿಲುಕಿದ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲ. ಕುಲ ಕಸುಬು ಮಾಡುವ ಸಾಮಗ್ರಿಗಳನ್ನು ಮಾರಾಟ ಮಾಡಿದ್ದಾನೆ. ದಿಕ್ಕು ತೋಚದೇ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಮನೆಯ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿ

    ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿತ್ತು. ಈಗ ಮೃತದೇಹ ಪತ್ತೆಯಾದ್ದರಿಂದ ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತುಮಕೂರು| ಸಾಲಬಾಧೆ ತಾಳಲಾರದೆ ಮಾತ್ರೆ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ – ಪತಿ ಸಾವು, ಪತ್ನಿ ಗಂಭೀರ

  • ಗದಗ| ಧಾರಾಕಾರ ಮಳೆಗೆ ಬಸ್ ಛಾವಣಿಯಲ್ಲಿ ಸೋರಿಕೆ; ಛತ್ರಿ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು

    ಗದಗ| ಧಾರಾಕಾರ ಮಳೆಗೆ ಬಸ್ ಛಾವಣಿಯಲ್ಲಿ ಸೋರಿಕೆ; ಛತ್ರಿ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು

    ಗದಗ: ಬಸ್ ಛಾವಣಿ ಸೋರುತ್ತಿದ್ದು, ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡುತ್ತಿರುವ ಘಟನೆ ಗದಗ (Gadaga) ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ರಾತ್ರಿ ಸುರಿದ ಮಳೆಗೆ ಗದಗದಿಂದ ಮುಂಡರಗಿಗೆ ಹೊರಟಿದ್ದ ಬಸ್‌ನ ಛಾವಣಿ ಸೋರಿದ್ದು, ಕೆಲವು ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡಿದ್ರೆ ಇನ್ನು ಕೆಲವರು ಪರದಾಡುವಂತಾಯಿತು. ಅದರಲ್ಲೂ ಗುಡುಗು, ಸಿಡಿಲು ಸಹಿತ ಜೋರಾದ ಮಳೆ ಸುರಿಯುತ್ತಿತ್ತು. ಇಂತಹ ಸಂದರ್ಭದಲ್ಲೂ ಬಸ್‌ನ ಬಾಗಿಲು ಸಹ ಇಲ್ಲ ಎಂದು ಪ್ರಯಾಣಿಕನೋರ್ವ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ದತ್ತಪೀಠ ಮಾರ್ಗದಲ್ಲಿ 250 ಅಡಿ‌ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಕಾರು, ಐವರು ಪಾರು

    ಡಕೋಟಾ ಬಸ್‌ಗಳ ಅವ್ಯವಸ್ಥೆ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಗ್ಯಾರಂಟಿ ಬಂದಾಗಿನಿಂದ ಬಸ್‌ನಲ್ಲಿ ಸುರಕ್ಷಿತವಾಗಿ ಊರು ತಲುಪುತ್ತೇವೋ ಇಲ್ಲವೋ ಎಂಬ ಗ್ಯಾರಂಟಿ ಇಲ್ಲದಂತಾಗಿದೆ. ಸುಸಜ್ಜಿತ ಬಸ್ ಬಿಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

    ಬಸ್‌ನಲ್ಲಿ ನೆನೆದುಕೊಂಡು ಪ್ರಯಾಣ ಮಾಡುವುದು ತುಂಬಾ ಸಮಸ್ಯೆ. ಅದು ಯಾವ ಘಟಕದ ಬಸ್ ಎಂದು ಪರಿಶೀಲನೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತೇನೆ ಎಂದು ಗದಗ ಸಾರಿಗೆ ಘಟಕದ ಜಿಲ್ಲಾ ನಿಯಂತ್ರಣಾಧಿಕಾರಿ ದೇವರಾಜ ಅವರು ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬರೋಬ್ಬರಿ 1.51 ಲಕ್ಷ ರೂ.ಗೆ ಮೂರು ತಿಂಗಳ ಕರು ಮಾರಾಟ

  • ಬರಗಾಲದ ನಡುವೆಯೂ ಭರ್ಜರಿ ಹುಟ್ಟುಹಬ್ಬ ಆಚರಿಸಿ ಪೇಚಿಗೆ ಸಿಲುಕಿದ ತಹಶೀಲ್ದಾರ್

    ಬರಗಾಲದ ನಡುವೆಯೂ ಭರ್ಜರಿ ಹುಟ್ಟುಹಬ್ಬ ಆಚರಿಸಿ ಪೇಚಿಗೆ ಸಿಲುಕಿದ ತಹಶೀಲ್ದಾರ್

    ಗದಗ: ಬರದ ನಾಡಿನಲ್ಲಿ ತಹಶೀಲ್ದಾರ್ (Tehsildar) ಭರ್ಜರಿ ಹುಟ್ಟುಹಬ್ಬ (Birthday) ಆಚರಿಸಿಕೊಂಡು ಪೇಚಿಗೆ ಸಿಲುಕಿದ ಘಟನೆ ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ನಡೆದಿದೆ.

    ಮುಂಡರಗಿ ತಹಶೀಲ್ದಾರ್ ಧನಂಜಯ್ ಮಾಲಗಿತ್ತಿ ಗುರುವಾರ ರಾತ್ರಿ ಭರ್ಜರಿ ಬರ್ತ್‌ಡೇ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಕಚೇರಿ ಒಳಗಡೆ ಹಾಗೂ ತಹಶೀಲ್ದಾರ್ ಕ್ವಾಟರ್ಸ್ ಆವರಣದಲ್ಲಿ ಬರ್ತ್‌ಡೇ ಸಂಭ್ರಮ ನಡೆದಿದೆ.

    ಜಿಲ್ಲೆಯಲ್ಲಿ ಬರಗಾಲ (Drought) ತಾಂಡವವಾಡುತ್ತಿದ್ದು, ಜನ ಗುಳೆ ಹೋಗುತ್ತಿದ್ದಾರೆ. ಪರಿಹಾರವಿಲ್ಲದೆ ರೈತರು ಜಾನುವಾರುಗಳೊಂದಿಗೆ ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಬೆನ್ನೆಲುಬಾಗಿ ನಿಲ್ಲಬೇಕಾದ ತಹಶೀಲ್ದಾರ್ ಧನಂಜಯ್ 48ನೇ ವರ್ಷದ ಬರ್ತ್‌ಡೇಯನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸುಮಲತಾ ಬೆಂಗಳೂರು ಉತ್ತರಕ್ಕೆ ಬಂದ್ರೆ ಸ್ವಾಗತ- ಸದಾನಂದಗೌಡ

    ಮಹಾರಾಜ ಕುರ್ಚಿಯಲ್ಲಿ ಸೂಟು-ಬೂಟು ಹಾಕಿಕೊಂಡು ಫುಲ್ ಮಿಂಚಿದ್ದು, ಕೆಂಪು, ಹಳದಿ ಬಣ್ಣದ ಬಲೂನ್‌ಗಳಿಂದ ತುಂಬಿದ ವೇದಿಕೆ ಅಲಂಕಾರ, ವೇದಿಕೆ ಸುತ್ತ ಮುತ್ತ ಕಲರ್ ಫುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಇಲಾಖೆ ಅಧಿಕಾರಿಗಳು ಸೇರಿ ನೂರಾರು ಜನರು ಭಾಗಿಯಾಗಿದ್ದರು.

    ಕ್ಷೇತ್ರದ ಜನರು ಸಂಕಷ್ಟದ ಸ್ಥಿತಿಯಲ್ಲಿದ್ದಾಗ ತಹಶೀಲ್ದಾರ್ ಧನಂಜಯ್ ಅದ್ದೂರಿ ಬರ್ತ್‌ಡೇ ಆಚರಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಹಶೀಲ್ದಾರ್ ಅದ್ದೂರಿ ಬರ್ತ್‌ಡೇ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ತಮ್ಮ ಫೋನ್ ಅನ್ನು ಸ್ವಿಚ್‌ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮೋದಿ ಲಕ್ಷ ರೂಪಾಯಿ ಸೂಟ್‌ ಧರಿಸ್ತಾರೆ.. ಆದ್ರೆ ನಾನು ಬಿಳಿ ಟೀ-ಶರ್ಟ್‌ ಮಾತ್ರ ಧರಿಸುತ್ತೇನೆ: ರಾಹುಲ್‌ ಗಾಂಧಿ

  • ಕಾರ ಹುಣ್ಣಿಮೆ ತಡವಾಗಿ ಹೋಗು ಅಂದ್ರು ಮನೆಯವ್ರು – ಮಾತು ಲೆಕ್ಕಿಸದೇ ಹೊರಟ ವ್ಯಕ್ತಿ ಅಪಘಾತದಲ್ಲಿ ಸಾವು

    ಕಾರ ಹುಣ್ಣಿಮೆ ತಡವಾಗಿ ಹೋಗು ಅಂದ್ರು ಮನೆಯವ್ರು – ಮಾತು ಲೆಕ್ಕಿಸದೇ ಹೊರಟ ವ್ಯಕ್ತಿ ಅಪಘಾತದಲ್ಲಿ ಸಾವು

    ಗದಗ: ಓವರ್ ಟೇಕ್ (Over Take) ಮಾಡುವ ವೇಳೆ ಸರ್ಕಾರಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಗದಗ (Gadag) ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ನಡೆದಿದೆ.

    ಬೈಕ್ ಸವಾರ ಬ್ಯಾಲವಾಡಗಿ ನಿವಾಸಿ ಮಂಜುನಾಥ ಬಂಡಿಯವರ್ (44) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಂಜುನಾಥ ಮುಂಡರಗಿನಲ್ಲಿ ಚಿಕನ್ ವ್ಯಾಪಾರಿಯಾಗಿದ್ದರು. ಕೆಇಬಿ (KEB) ಬಳಿ ನೀರು ತುಂಬಿಕೊಂಡು ಅಂಗಡಿ ಕಡೆಗೆ ಹೊರಟಿದ್ದ ಸಂದರ್ಭ ಅದೇ ಮಾರ್ಗವಾಗಿ ಶಿರಹಟ್ಟಿಗೆ ಸರ್ಕಾರಿ ಬಸ್ ಹೊರಟಿತ್ತು. ಬಸ್ ಓವರ್ ಟೇಕ್ ಮಾಡುವ ವೇಳೆ ಬಸ್‌ಗೆ ಟಚ್ ಆಗಿ ಹಿಂಬದಿ ಚಕ್ರದಡಿ ಬಿದ್ದಿದ್ದಾರೆ. ಬಸ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಟ್ರ್ಯಾಪ್ ಕೇಸ್‌ನಲ್ಲಿ ಹೆಸರು – ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತು

    ಇವತ್ತು ಕಾರ ಹುಣ್ಣಿಮೆ ತಡವಾಗಿ ಹೋಗು ಎಂದು ಮನೆಯವರು ಹೇಳಿದ್ದಾರೆ. ಆದರೂ ಮನೆಯವರ ಮಾತು ಧಿಕ್ಕರಿಸಿ ಅಂಗಡಿ ಪೂಜೆ ಮಾಡಬೇಕು ಎಂದು ಬೇಗ ಬಂದಿದ್ದಾರೆ. ಪೂಜೆಗಾಗಿ ನೀರು ತರಲು ಹೋದ ವೇಳೆ ಬಸ್ ಚಕ್ರದಡಿ ಸಿಲುಕಿ ಪ್ರಾಣ ಬಿಟ್ಟಿರುವುದು ನಿಜಕ್ಕೂ ದುರಂತವೇ ಸರಿ. ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಅರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರಕ್ಕೆ ಗಲಾಟೆ – ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

  • ಕಪ್ಪತ್ತಗುಡ್ಡದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ

    ಕಪ್ಪತ್ತಗುಡ್ಡದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ

    ಗದಗ: ಎದುರಿಗೆ ಬಂದ ಚಿರತೆಯನ್ನು (Leopard) ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾದ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡೋಣಿ ಗ್ರಾಮದ ಬಳಿಯ ಕಪ್ಪತ್ತಗುಡ್ಡದಲ್ಲಿ (Kappatagudda) ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಪ್ಪತ್ತಗುಡ್ಡದ ಗಾಳಿಗುಂಡಿ ಬಸವಣ್ಣ ದೇವಸ್ಥಾನದ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಚಿರತೆ ಕಂಡುಬಂದಿದೆ. ರಸ್ತೆಮಧ್ಯ ಚಿರತೆ ಅಲ್ಲಾಡದಂತೆ ಗಾಂಭೀರ್ಯವಾಗಿ ನಿಂತುಕೊಂಡಿದ್ದರಿಂದ ಒಂದು ಕ್ಷಣ ವಾಹನ ಸವಾರರು ಭಯಭೀತರಾಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ  

    ಘಟನೆಯಿಂದ ಕಪ್ಪತ್ತಗುಡ್ಡ ಸೆರಗಿನ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಕಪ್ಪತ್ತಗುಡ್ಡಕ್ಕೆ ಬರುವ ಜನರಿಗೆ ಚಿರತೆ ನೋಡಿದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ (Forest Department) ಸ್ಥಳೀಯರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನದ ಬಳಿ, ಕಡಕೋಳ ಭಾಗ ಹಾಗೂ ಮೈನಿಂಗ್ ಪ್ರದೇಶಲ್ಲಿ ಚಿರತೆ ಸೆರೆಹಿಡಿಯಲಾಗಿದೆ. ಗಾಳಿಗುಂಡಿ ಬಸವಣ್ಣ ಬಳಿ ಪ್ರತ್ಯಕ್ಷವಾದ ಚಿರತೆ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಅರೆಸ್ಟ್

  • ಸೋಶಿಯಲ್ ಮೀಡಿಯಾದಲ್ಲಿ ಪರಿಚಯ – ಮದ್ವೆ ಭರವಸೆ ನೀಡಿ ಶಿಕ್ಷಕಿಯಿಂದ ಹಣ ಪಡೆದವ ಅರೆಸ್ಟ್

    ಸೋಶಿಯಲ್ ಮೀಡಿಯಾದಲ್ಲಿ ಪರಿಚಯ – ಮದ್ವೆ ಭರವಸೆ ನೀಡಿ ಶಿಕ್ಷಕಿಯಿಂದ ಹಣ ಪಡೆದವ ಅರೆಸ್ಟ್

    ಗದಗ: ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಶಿಕ್ಷಕಿಯ ಬಳಿ 7 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದ ಮೋಸಗಾರನನ್ನು ಮುಂಡರಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ ಕೊಡಮಗ್ಗಿ ಗ್ರಾಮದ ನೇತಾಜಿ ಮದ್ದನೇರ ಬಂಧಿತ ವ್ಯಕ್ತಿ.

    ನೇತಾಜಿಗೆ ಫೇಸ್‍ಬುಕ್ ನಲ್ಲಿ ಮುಂಡರಗಿ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕಿಯ ಪರಿಚಯ ಆಗುತ್ತದೆ. ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಒಂದು ಬಾರಿ ಹುಬ್ಬಳ್ಳಿಯಲ್ಲಿಯೂ ಭೇಟಿಯಾಗಿದ್ದಾರೆ. ನೇತಾಜಿ ಸಹ ಮದುವೆ ಮಾಡಿಕೊಳ್ಳುವ ಮಾತು ಸಹ ನೀಡಿದ್ದನು. ಶಿಕ್ಷಕಿ ತನ್ನನ್ನು ಬಲವಾಗಿ ನಂಬುತ್ತಿದ್ದಂತೆ ಅನಾರೋಗ್ಯ ಕಾರಣಗಳನ್ನ ಹೇಳಿ ಹಣ ಪಡೆದಿದ್ದಾನೆ.

    ಮದುವೆಯಾಗುವ ಹುಡುಗ ಎಂದು ಸಹೋದ್ಯೋಗಿಗಳ ಬಳಿ ಸಾಲ ಪಡೆದು ಲಕ್ಷ ಲಕ್ಷ ಹಣ ಹಾಕಿದ್ದಾರೆ. ನಂತರ ಕೆಲಸದ ನೆಪಗಳನ್ನು ಹೇಳಿ ಬರೋಬ್ಬರಿ ಏಳು ಲಕ್ಷ ರೂಪಾಯಿಯನ್ನ ಉಪಾಯವಾಗಿ ಪಡೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಶಿಕ್ಷಕಿಗೆ ಅನುಮಾನ ಬಂದು ಹಣ ನೀಡಿಲ್ಲ. ಶಿಕ್ಷಕಿ ಹಣ ನೀಡದಿದ್ದಾಗ, ನೇತಾಜಿ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ.

    ನೇತಾಜಿ ಹಿನ್ನೆಲೆ ಪತ್ತೆ ಮಾಡಿದಾಗ ಇದೇ ರೀತಿ ಮಹಿಳೆಯರಿಗೆ ಮೋಸ ಮಾಡಿರುವ ವಿಚಾರ ಶಿಕ್ಷಕಿಗೆ ತಿಳಿದಿದೆ. ತಾನು ಮೋಸ ಹೋಗಿರುವ ವಿಷಯ ತಿಳಿಯುತ್ತಲೇ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

  • ಕಟಾವ್ ಮಾಡಿದ್ದ ಕಬ್ಬು ನಿರಾಕರಿಸಿದ್ದಕ್ಕೆ ಫ್ಯಾಕ್ಟರಿಯಲ್ಲೇ ರೈತ ಆತ್ಮಹತ್ಯೆ!

    ಕಟಾವ್ ಮಾಡಿದ್ದ ಕಬ್ಬು ನಿರಾಕರಿಸಿದ್ದಕ್ಕೆ ಫ್ಯಾಕ್ಟರಿಯಲ್ಲೇ ರೈತ ಆತ್ಮಹತ್ಯೆ!

    ಗದಗ: ಕಟಾವ್ ಮಾಡಿ ಫ್ಯಾಕ್ಟರಿಗೆ ತಂದಿದ್ದ ಕಬ್ಬನ್ನು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ತಿಗರಿ ಗ್ರಾಮದ ಸಣ್ಣಹನುಮಪ್ಪ ತಿಗರಿ(55) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಮುಂಡರಗಿ ತಾಲೂಕಿನ ಗಂಗಾಪುರ ವಿಜಯನಗರ ಶುಗರ್ ಫ್ಯಾಕ್ಟರಿ ಆವರಣದಲ್ಲಿ ಸಣ್ಣಹನುಮಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನೆಯ ವಿವರ:
    ತಿಗರಿ ಗ್ರಾಮದ ಸಣ್ಣಹನುಮಪ್ಪ ಅವರು ಕಬ್ಬು ಬೆಳೆದಿದ್ದರು. ಬೆಳೆ ಕಟಾವ್‍ಗೆ ಬಂದಿದ್ದರಿಂದ ಹಾಗೂ ಸಾಲದ ಹಣ ಪಾವತಿ ಮಾಡುವ ಉದ್ದೇಶದಿಂದ ಫ್ಯಾಕ್ಟರಿ ಮಾಲೀಕರಿಗೆ ಕಟಾವ್ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಮಾಲೀಕರು ವಿಳಂಬ ಮಾಡಿದ್ದರಿಂದ ಸಣ್ಣಹನುಮಪ್ಪ ಅವರು ತಮ್ಮ ಕಾರ್ಮಿಕರನ್ನು ಬಳಸಿಕೊಂಡು ಕಬ್ಬು ಕಟಾವ್ ಮಾಡಿದ್ದರು. ಬಳಿಕ ಲೋಡ್ ಮಾಡಿಕೊಂಡು ಗಂಗಾಪುರ ವಿಜಯನಗರ ಶುಗರ್ ಫ್ಯಾಕ್ಟರಿ ತಂದಿದ್ದಾರೆ.

    ನಾವೇ ಕಬ್ಬು ಕಟಾವ್ ಮಾಡುತ್ತಿದ್ದೇವು. ಹೀಗಾಗಿ ನೀವು ಕಟಾವ್ ಮಾಡಿಕೊಂಡು ತಂದ ಕಬ್ಬನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮನನೊಂದ ಸಣ್ಣಹುನುಮಪ್ಪ ಕಾರ್ಖಾನೆಯ ಆವರಣದಲ್ಲಿ ವಿಷ ಸೇವಿಸಿ, ಪ್ರಾಣ ಬಿಟ್ಟಿದ್ದಾರೆ ಎಂದು ಸಣ್ಣಹನುಮಪ್ಪ ಮಗ ವಿರೇಶ್ ಹಾಗೂ ಮುಂಡರಗಿ ರೈತ ಮುಖಂಡ ವೀರಣ್ಣಗೌಡ ದೂರಿದ್ದಾರೆ.

    ಈ ಘಟನೆಯಿಂದಾಗಿ ವಿಜಯನಗರ ಶುಗರ್ ಫ್ಯಾಕ್ಟರಿ ಅಧಿಕಾರಿಗಳ ವಿರುದ್ಧ ರೈತರು ಕಿಡಿಕಾರಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಮುಂಡರಗಿ ಠಾಣಾ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv