Tag: Mumtaz Zahra Baloch

  • ಮೋದಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ – ಮಾಧ್ಯಮಗಳ ಪ್ರಶ್ನೆಗೆ ಪಾಕ್‌ ಕೊಟ್ಟ ಉತ್ತರ ಏನು?

    ಮೋದಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ – ಮಾಧ್ಯಮಗಳ ಪ್ರಶ್ನೆಗೆ ಪಾಕ್‌ ಕೊಟ್ಟ ಉತ್ತರ ಏನು?

    – ಮಾತುಕತೆ ಮೂಲಕ ಎಲ್ಲಾ ವಿವಾದ ಬಗೆಹರಿಸಲು ಪಾಕ್‌ ಸಿದ್ಧವಾಗಿದೆ ಎಂದ ವಕ್ತಾರೆ

    ಇಸ್ಲಾಮಾಬಾದ್/ನವದೆಹಲಿ: ನರೇಂದ್ರ ಮೋದಿ (Narendra Modi) ಅವರು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಇನ್ನೊಂದು ದಿನ ಬಾಕಿಯಿದೆ. ಭಾನುವಾರ ಸಂಜೆ 7:15ಕ್ಕೆ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಿಂದ ಹಿಡಿದು ವಿದೇಶಿ ಗಣ್ಯರು ಕೂಡ ಸಾಕ್ಷಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ 5 ಹಂತದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಈ ಹೊತ್ತಿನಲ್ಲೇ ಮೋದಿ ಅವರ ಪ್ರಮಾಣವಚನ ಸ್ವೀಕಾರದ ಬಗ್ಗೆ ಪಾಕಿಸ್ತಾನ (Pakistan) ಪ್ರತಿಕ್ರಿಯೆ ನೀಡಿದೆ.

    ಚುನಾವಣೆಯಲ್ಲಿ ಗೆದ್ದಿರುವ ಮೋದಿ ಅವರಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್‌ (Mumtaz Zahra Baloch), ತಮ್ಮ ನಾಯಕನನ್ನು ಮತ್ತು ನಾಯಕತ್ವದ ಬಗ್ಗೆ ನಿರ್ಧರಿಸುವುದು ಭಾರತೀಯ ನಾಗರಿಕರ ಹಕ್ಕು. ಮೋದಿ ಆಯ್ಕೆಯಾದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ಪಾಕ್‌ ಹೊಂದಿಲ್ಲ. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸದ ಕಾರಣ, ಭಾರತದ ಪ್ರಧಾನಿಯನ್ನು (Prime Minister) ಅಭಿನಂದಿಸುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

    ಮುಂದುವರಿದು ಮಾತನಾಡಿದ ಬಲೋಚ್‌, ಪಾಕಿಸ್ತಾನವು ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳೊಂದಿಗೆ ಪರಸ್ಪರ ಸಹಕಾರ ಹಾಗೂ ಸೌಹಾರ್ಧಯುತ ಬಾಂಧವ್ಯದಿಂದಿರಲು ಬಯಸುತ್ತದೆ. ಎಲ್ಲಾ ವಿವಾದಗಳನ್ನು ರಚನಾತ್ಮಕ ಮಾತು-ಕತೆಯ ಮೂಲಕ ಪರಿಹರಿಸಲು ಪ್ರಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲ ವಿವಾಗಳನ್ನು ಮಾತುಕತೆಯೊಂದಿಗೆ ಬಗೆಹರಿಸಲು ಪಾಕ್‌ ಸಿದ್ಧವಾಗಿದೆ. ಈ ವಿಷಯವನ್ನು ಪಾಕ್‌ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ ಎಂದು ಒತ್ತಿ ಹೇಳಿದ್ದಾರೆ.

    ಪಾಕ್‌ಗೆ ಎಚ್ಚರಿಕೆ ನೀಡಿದ್ದ ಜೈಶಂಕರ್‌:
    ಎರಡು ತಿಂಗಳ ಹಿಂದೆಯಷ್ಟೇ ಪಾಕ್‌ ಉಗ್ರರಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಖಡಕ್‌ ಎಚ್ಚರಿಕೆ ನೀಡಿದ್ದರು. ಗಡಿಯಾಚೆಯಿಂದ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಭಾರತ ಬದ್ಧವಾಗಿದೆ ಎಂದಿದ್ದರು.

    2008 ರಲ್ಲಿ ಮುಂಬೈನಲ್ಲಿ ದಾಳಿ ನಡೆಯಿತು. ಈ ದಾಳಿಯ ನಂತರ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಾ ಬೇಡವೇ ಎಂಬುದರ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಕೊನೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡದೇ ಇರುವುದಕ್ಕಿಂತ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಆ ಸಮಯದಲ್ಲಿ ತೀರ್ಮಾನಕ್ಕೆ ಬರಲಾಯಿತು. ನರೇಂದ್ರ ಮೋದಿ (Narendra Modi) ಅವರು 2014 ರಲ್ಲಿ ಪ್ರಧಾನಿಯಾಗಿ ಬಂದರು. ಈ ಸಮಸ್ಯೆ 2014ರಿಂದ ಆರಂಭವಾಗಿಲ್ಲ. ಇದು 1947 ರಿಂದ ಆರಂಭವಾಗಿದೆ. ಮೊದಲು ಪಾಕಿಸ್ತಾನದಿಂದ ಬಂದು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇದು ಭಯೋತ್ಪಾದನೆ. ಪಟ್ಟಣಗಳಿಗೆ ಬೆಂಕಿ ಹಚ್ಚಿ ಜರನ್ನು ಕೊಲ್ಲುತ್ತಿದ್ದರು. ಉಗ್ರರಲ್ಲಿ ಮೊದಲು ನೀವು ಹೋಗಿ ನಂತರ ನಾವು ಬರುತ್ತೇವೆ ಎಂದು ಪಾಕ್‌ ಸೇನೆ ಹೇಳಿತ್ತು ಎಂಬುದಾಗಿಯೂ ತಿಳಿಸಿದ್ದರು.

    ಉಗ್ರ ನಾಯಕನ್ನ ಹಸ್ತಾಂತರಿಸಲ್ಲ ಎಂದಿದ್ದ ಬಲೋಚ್‌:
    ಈ ಹಿಂದೆ ಬಲೂಚ್‌, 2008ರ ನವೆಂಬರ್‌ 26ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೈಬಾ ಉಗ್ರ ಸಂಘಟನೆ (Lashkar-e-Taiba) ಸಂಸ್ಥಾಪಕ ಹಫೀಜ್‌ ಸಯೀದ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದರು.

  • ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌, ಉಗ್ರ ನಾಯಕ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲ್ಲ: ಪಾಕ್‌ ಪ್ರತಿಕ್ರಿಯೆ

    ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌, ಉಗ್ರ ನಾಯಕ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲ್ಲ: ಪಾಕ್‌ ಪ್ರತಿಕ್ರಿಯೆ

    ಇಸ್ಲಾಮಾಬಾದ್: 2008ರ ನವೆಂಬರ್‌ 26ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೈಬಾ ಉಗ್ರ ಸಂಘಟನೆ (Lashkar-e-Taiba) ಸಂಸ್ಥಾಪಕ ಹಫೀಜ್‌ ಸಯೀದ್‌ನನ್ನ (Hafiz Saeed) ಹಸ್ತಾಂತರಿಸಬೇಕು ಎಂದು ಭಾರತ ಕೇಳಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

    ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರೆ (Foreign Affairs spokesperson) ಮುಮ್ತಾಜ್ ಝಹ್ರಾ ಬಲೂಚ್ (Mumtaz Zahra Baloch) ಅವರು, ಹಫೀಜ್ ಸಯೀದ್ ಹಸ್ತಾಂತರಕ್ಕೆ ಭಾರತದ ಮನವಿ ಬಂದಿದೆ. ಆದರೆ, ಹಸ್ತಾಂತರಿಸಲು ಸಾಧ್ಯವಿಲ್ಲ, ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ ಚುನಾವಣೆ; ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಹಫೀಜ್‌ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಿಂದ ಕಣಕ್ಕೆ

    ಮುಮ್ತಾಜ್ ಝಹ್ರಾ ಬಲೂಚ್ ಅವರು ತಮ್ಮ ಹೇಳಿಕೆಯಲ್ಲಿ, ಹಫೀಜ್ ಸಯೀದ್‌ನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಸ್ತಾಂತರಿಸುವಂತೆ ಪಾಕಿಸ್ತಾನವು ಭಾರತೀಯ ಅಧಿಕಾರಿಗಳಿಂದ ಮನವಿ ಸ್ವೀಕರಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಹಫೀಜ್‌ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಮೊದಲಿನಿಂದಲೂ ಕೇಂದ್ರ ಸರ್ಕಾರ ಆಗ್ರಹಿಸುತ್ತಿದೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ 2019ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್‌ ಸಯೀದ್‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ ಇದುವರೆಗೆ ಹಫೀಜ್‌ ಸಯೀದ್‌ಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಯಾವುದು? ವಿಚಾರಣೆ ಯಾವ ಹಂತಕ್ಕೆ ಬಂದಿದೆ? ಆತ ಎಲ್ಲಿದ್ದಾನೆ ಎಂಬುದರ ಕುರಿತು ಪಾಕಿಸ್ತಾನ ಮಾಹಿತಿ ನೀಡಿಲ್ಲ ಎನ್ನಲಾಗುತ್ತದೆ. ಆದ್ರೆ ಕೆಲ ಮೂಲಗಳ ಪ್ರಕಾರ, ಹಫೀಜ್‌ ಸಯೀದ್‌ ಪಾಕಿಸ್ತಾನದ ಜೈಲಿನಲ್ಲಿಲ್ಲ. ಆತ ಅಡಗುತಾಣದಲ್ಲಿ ಸುರಕ್ಷಿತವಾಗಿದ್ದಾನೆ ಹಾಗೂ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ. 2020ರ ಬಳಿಕ ಉಗ್ರರಿಗೆ ಹಣಕಾಸು ನೆರವು ಸೇರಿ ಐದು ಕೃತ್ಯಗಳಲ್ಲಿ ಅಪರಾಧಿ ಎಂದು ಸಾಬೀತಾದರೂ ಆತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈಗ ಭಾರತವು ಆತನನ್ನು ಹಸ್ತಾಂತರಿಸಬೇಕು ಎಂದು ಆಗ್ರಹಿಸಿದೆ.

    ಇತ್ತೀಚಿನ ಬೆಳವಣಿಗೆಯಲ್ಲಿ ಹಫೀಜ್ ಸಯೀದ್ ಬೆಂಬಲಿತ ಪಕ್ಷ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಾಗಿ ತಿಳಿದುಬಂದಿದೆ.