Tag: Mumbai Indians

  • ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

    ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

    ಮುಂಬೈ: ಮುಂಬೈ ಭದ್ರಕೋಟೆ ವಾಂಖೆಡೆ ಕ್ರೀಡ ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿದ್ದಾ ಜಿದ್ದಿ ಕಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ 10 ವರ್ಷಗಳ ಬಳಿಕ ಗೆಲುವು ಸಾಧಿಸಿದ್ದು, ಮುಂಬೈನ ಭದ್ರ ಕೋಟೆಯನ್ನ ಛಿದ್ರಗೊಳಿಸಿದೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯವು ಕೊನೆಯವರೆಗೂ ರೋಚಕವಾಗಿತ್ತು. ಕ್ಷಣಕ್ಷಣಕ್ಕೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಲೇ ಇತ್ತು. ಅತ್ತ ಉತ್ಸಾಹ ಕಳೆದುಕೊಳ್ಳದ ಉಭಯ ತಂಡಗಳ ಅಭಿಮಾನಿಗಳು ತಮ್ಮಿಷ್ಟದ ಆಟಗಾರರನ್ನ ಊರಿದುಂಬಿಸಿ ಘೋಷಣೆ ಕೂಗುತ್ತಲೇ ಇದ್ದರು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 221 ರನ್‌ ಬಾರಿಸಿತ್ತು. 222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಕೊನೇ ಓವರ್‌ ಥ್ರಿಲ್ಲರ್‌
    ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕೃನಾಲ್‌ ಪಾಂಡ್ಯ ಬೌಲಿಂಗ್‌ನಲ್ಲಿದ್ದರೆ, ಮಿಚೆಲ್‌ ಸ್ಯಾಂಟ್ನರ್‌ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲೇ ಸ್ಯಾಂಟ್ನರ್‌ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಬೌಂಡರಿ ಲೈನ್‌ ಬಳಿ ಕ್ಯಾಚ್‌ ಕೊಟ್ಟರು. ಮರು ಎಸೆತದಲ್ಲಿ ದೀಪಕ್‌ ಚಹಾರ್‌ ಸಹ ಟಿಮ್‌ ಡೇವಿಡ್‌-ಫಿಲ್‌ ಸಾಲ್ಟ್‌ ಅವರ ಸ್ಟನ್ನಿಂಗ್‌ ಕ್ಯಾಚ್‌ಗೆ ವಿಕೆಟ್‌ ಒಪ್ಪಿಸಬೇಕಾಯಿತು. ಅಲ್ಲಿಗೆ ಮುಂಬೈ ಗೆಲುವಿನ ಆಸೆ ಕಮರಿತು. 3ನೇ ಎಸೆತದಲ್ಲಿ 1 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ನಮನ್‌ ಧೀರ್‌ ಬೌಂಡರಿ ಬಾರಿಸಿದರು. ಇನ್ನೂ 5ನೇ ಎಸೆತದಲ್ಲಿ ನಮನ್‌ ಕ್ಯಾಚ್‌ ನೀಡಿದ್ರೆ, ಕೊನೆಯ ಎಸೆತದಲ್ಲಿ ಯಾವುದೇ ರನ್‌ ಬರದ ಕಾರಣ ಆರ್‌ಸಿಬಿ 12 ರನ್‌ ಗೆಲುವು ಸಾಧಿಸಿರು.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಹಾರ್ದಿಕ್‌ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಿತ್ತು. ಆದ್ರೆ ಸ್ಫೋಟಕ ಆಟವಾಡುತ್ತಿದ್ದ ತಿಲಕ್‌ ವರ್ಮಾ 18ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಬಳಿಕ 19ನೇ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್‌ ಪಾಂಡ್ಯ ಸಹ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. ಇದು ರನ್‌ ಮೇಲೆ ಪರಿಣಾಮ ಬೀರಿತು.

    222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಹಾಗೂ ವಿಲ್‌ ಜಾಕ್ಸ್‌ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಸಂಕಷ್ಟ ಎದುರಾಗಿತ್ತು. 12 ಓವರ್‌ ಮುಕ್ತಾಯಗೊಂಡರೂ 100 ರನ್‌ಗಳ ಗಡಿಯೂ ದಾಟಿರಲಿಲ್ಲ. ಇದರಿಂದ ಮುಂಬೈ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಅವರ ಸ್ಫೋಟಕ ಆಟ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಜೀವ ತುಂಬಿತ್ತು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಗೆಲುವಿನ ಆಸೆ ನುಚ್ಚುನೂರಾಯ್ತು.

    ಮುಂಬೈ ಪರ ಹಾರ್ದಿಕ್‌ ಪಾಂಡ್ಯ 42 ರನ್‌ (15 ಎಸೆತ, 4 ಸಿಕ್ಸರ್‌, 3 ಬೌಂಡರಿ), ತಿಲಕ್‌ ವರ್ಮಾ 56 ರನ್‌ (29 ಎಸೆತ, 4 ಸಿಕ್ಸರ್‌, 45 ಬೌಂಡರಿ) ಗಳಿಸಿದ್ರೆ, ಸೂರ್ಯಕುಮಾರ್‌ ಯಾದವ್‌ 28 ರನ್‌, ವಿಲ್‌ ಜಾಕ್ಸ್‌ 22 ರನ್‌, ರೋಹಿತ್‌ ಶರ್ಮಾ, ರಿಕಲ್ಟನ್‌ ತಲಾ 17 ರನ್‌ ಗಳಿಸಿದ್ರೆ, ಮಿಚೆಲ್‌ ಸ್ಯಾಂಟ್ನರ್‌ 8 ರನ್‌, ಬೋಲ್ಟ್‌ 1 ರನ್‌ ಗಳಿಸಿದರು. ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ 4 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌, ಜೋಶ್‌ ಹೇಜಲ್ವುಡ್‌ ತಲಾ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮುಂಬೈ ಬೌಲರ್‌ಗಳ ವಿರುದ್ಧ ಪರಾಕ್ರಮ ಮೆರೆಯಿತು. ಅತ್ತ ವಿಕೆಟ್‌ ಬೀಳುತ್ತಿದ್ದರೂ ಇತ್ತ ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಜಿತೇಶ್‌ ಶರ್ಮಾ ಅವರ ಬ್ಯಾಟಿಂಗ್‌ ಆರ್ಭಟ ಮುಂದುವರಿಯುತ್ತಲೇ ಸಾಗಿತು.

    ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿ
    ಆರ್‌ಸಿಬಿ ಪರ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 67 ರನ್‌ (8 ಬೌಂಡರಿ, 2 ಸಿಕ್ಸರ್‌) ಗಳಿಸಿದ್ರೆ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಜತ್‌ ಪಾಟೀದಾರ್‌ 32 ಎಸೆತಗಳಲ್ಲಿ ಸ್ಪೋಟಕ 64 ರನ್‌ (5 ಬೌಂಡರಿ, 4 ಸಿಕ್ಸರ್‌) ಚಚ್ಚಿದರು. ಇನ್ನೂ 11 ಕೋಟಿ ಮೊತ್ತಕ್ಕೆ ಆರ್‌ಸಿಬಿ ಪಾಲಾದ ಜಿತೇಶ್‌ ಶರ್ಮಾ 19 ಎಸೆತಗಳಲ್ಲಿ ಸ್ಫೋಟಕ 40 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸುವ ಮೂಲಕ ತಂಡದ ಮೊತ್ತ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ದೇವದತ್‌ ಪಡಿಕಲ್‌ 37 ರನ್‌, ಫಿಲ್‌ ಸಾಲ್ಟ್‌ 4 ರನ್‌, ಟಿಮ್‌ ಡೇವಿಡ್‌ 1 ರನ್‌ ಗಳಿಸಿ ಮಿಂಚಿದರು.

  • ಮುಂಬೈಗೆ ಮರಳಿದ ಬುಮ್ರಾ – ಆರ್‌ಸಿಬಿಗೆ ಶುರುವಾಯ್ತು ಟೆನ್ಶನ್‌

    ಮುಂಬೈಗೆ ಮರಳಿದ ಬುಮ್ರಾ – ಆರ್‌ಸಿಬಿಗೆ ಶುರುವಾಯ್ತು ಟೆನ್ಶನ್‌

    ಮುಂಬೈ: ಗಾಯದ ಸಮಸ್ಯೆಯಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ (Jasprit Bumrah) ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಿದ್ದಾರೆ. ಬುಮ್ರಾ ಆಗಮನದ ಸಂತಸ ಸುದ್ದಿಯನ್ನು ಮುಂಬೈ ಇಂಡಿಯನ್ಸ್‌ (Mumbai Indians) ತಂಡ ಖಚಿತಪಡಿಸಿದ್ದು, ತನ್ನ ಎಕ್ಸ್‌ ಖಾತೆಯಲ್ಲಿ ʻThe King of the jungle is back in his kingdomʼ ಎಂದು ಮಾಹಿತಿ ಹಂಚಿಕೊಂಡಿದೆ.

    ಕಳೆದ ವರ್ಷ ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ 5ನೇ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಬುಮ್ರಾ, ಆಸೀಸ್‌ನ ದ್ವಿತೀಯ ಇನಿಂಗ್ಸ್‌ ವೇಳೆ ಬೌಲಿಂಗ್‌ ಮಾಡಿರಲಿಲ್ಲ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಒಟ್ಟು 32 ವಿಕೆಟ್‌ ಪಡೆದ ನಂತರ ಬುಮ್ರಾ, ಸ್ಪರ್ಧೆಯಿಂದ ಹೊರಗಿದ್ದರು. ಹೀಗಾಗಿ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಭಾಗವಹಿಸಿರಲಿಲ್ಲ. ಇದೀಗ ಬುಮ್ರಾ ಮುಂಬೈ ತಂಡಕ್ಕೆ ವಾಪಸ್‌ ಆಗಿದ್ದಾರೆ. ನಾಳೆ ಆರ್‌ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

    ಜಸ್ಪ್ರೀತ್‌ ಬುಮ್ರಾ ಪುನರಾಗಮನದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ ಬಂದಂತಾಗಿದ್ದು, ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬುಮ್ರಾ ಬಿಸಿಸಿಐ (BCCI) ತರಬೇತಿ ಕೇಂದ್ರದಲ್ಲಿ ಚೇತರಿಸಿಕೊಳ್ಳುತ್ತಿದರು. ಹೀಗಾಗಿ ಹಾಲಿ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಆಡಿರಲಿಲ್ಲ. ಅವರ ಮರಳುವಿಕೆಗಾಗಿ ಹಾರ್ದಿಕ್‌ ಪಾಂಡ್ಯ ಪಡೆ ಕಾತರದಿಂದ ಕಾಯುತ್ತಿತ್ತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡುತ್ತಾ, ‘ಜಸ್ಪ್ರೀತ್‌ ಬುಮ್ರಾ ಬೇಗನೆ ಹಿಂತಿರುಗಬೇಕುʼ ಎಂದು ಹೇಳಿದ್ದರು. ಅವರ ಆ ಮಾತು ಈಗ ನಿಜವಾಗಿದೆ.

    ಬುಮ್ರಾ ಮರಳಿ ಬಂದಿರುವುದು ಮುಂಬೈ ಇಂಡಿಯನ್ಸ್‌ಗೆ ಸಹಾಯವಾಗಲಿದೆ. ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದೀಗ ಬುಮ್ರಾ ಆಗಮನ ತಂಡದ ಬೌಲಿಂಗ್‌ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬುಮ್ರಾ, ಕಠಿಣ ಸಂದರ್ಭಗಳಲ್ಲಿ ತನ್ನು ಬೌಲಿಂಗ್‌ ಮೂಲಕವೇ ತಂಡಕ್ಕೆ ಜಯ ತಂದಕೊಡುವ ಸಾಮರ್ಥ್ಯ ಹೊಂದಿದ್ದಾರೆ.

    ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ:
    ಮುಂಬೈ ಇಂಡಿಯನ್ಸ್ ತಂಡ ಸೋಮವಾರ (ಏ.7) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತವರು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಪ್ಲೇಯಿಂಗ್‌-11 ಘೋಷಣೆಯಾದ ಬಳಿಕ ಖಚಿತಗೊಳ್ಳಲಿದೆ. ಒಂದು ವೇಳೆ ಬುಮ್ರಾ ಕಣಕ್ಕಿಳಿದ್ರೆ ಆರ್‌ಸಿಬಿಗೆ ಟಫ್‌ ಫೈಟ್‌ ಎದುರಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

    ಐಪಿಎಲ್ ಇತಿಹಾಸದಲ್ಲಿ ಲಸಿತ್ ಮಾಲಿಂಗ ನಂತರ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್‌ ಜಸ್ಪ್ರೀತ್ ಬುಮ್ರಾ.‌ 2013ರಲ್ಲಿ MI ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ, 133 ಪಂದ್ಯಗಳಲ್ಲಿ 165 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

  • ಪಾಂಡ್ಯ ಪಡೆಗೆ ಲಗಾಮು ಹಾಕಿದ ಲಕ್ನೋ – ಸೂಪರ್‌ ಜೈಂಟ್ಸ್‌ಗೆ 12 ರನ್‌ಗಳ ರೋಚಕ ಜಯ

    ಪಾಂಡ್ಯ ಪಡೆಗೆ ಲಗಾಮು ಹಾಕಿದ ಲಕ್ನೋ – ಸೂಪರ್‌ ಜೈಂಟ್ಸ್‌ಗೆ 12 ರನ್‌ಗಳ ರೋಚಕ ಜಯ

    – ಮುಂಬೈಗೆ ಮೂರನೇ ಸೋಲು

    ಲಕ್ನೋ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ ಕಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಿಷಬ್‌ ಪಂತ್‌ ನಾಯಕತ್ವದ‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 12‌ ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಲಕ್ನೋ ತಂಡ ನಾಲ್ಕು ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿದ್ರೆ, ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ 4 ಪಂದ್ಯಗಳಲ್ಲಿ 3ನೇ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದೆ.

    ಕೊನೇ ಓವರ್‌ ಥ್ರಿಲ್ಲರ್‌
    ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ಅತ್ತ ಹಾರ್ದಿಕ್‌ ಪಾಂಡ್ಯ ಸ್ಟ್ರೈಕ್‌ನಲ್ಲಿದ್ದರೆ, ಅವೇಶ್‌ ಖಾನ್‌ ಬೌಲಿಂಗ್‌ನಲ್ಲಿದ್ದರು. ಕೊನೇ ಓವರ್‌ ಮೊದಲ ಎಸೆತವನ್ನೇ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಚಚ್ಚಿದಾಗ ಮುಂಬೈ ಗೆದ್ದೇ ಬಿಟ್ಟಿತು ಎನ್ನುವಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು, ಮರು ಎಸೆತದಲ್ಲಿ 2 ರನ್‌ ಕದ್ದಾಗ ಈ ಹುಮ್ಮಸ್ಸು ಇನ್ನಷ್ಟು ಹೆಚ್ಚಾಯ್ತು. ಆದ್ರೆ ಪಾಂಡ್ಯನ ಪರಾಕ್ರಮಕ್ಕೆ ಬ್ರೇಕ್‌ ಹಾಕಿದ ಅವೇಶ್‌ ಖಾನ್‌ ಮುಂದಿನ ಎರಡೂ ಎಸೆತಗಳಲ್ಲಿ ರನ್‌ ಕೊಡದೇ ಬಿಗಿ ಹಿಡಿತ ಸಾಧಿಸಿದ್ರು. 5ನೇ ಎಸೆತದಲ್ಲಿ ಕೇವಲ 1 ರನ್‌ ಮುಂಬೈಗೆ ಸೇರ್ಪಡೆ ಆಯಿತು. ಕೊನೇ ಎಸೆತದಲ್ಲೂ ಯಾವುದೇ ರನ್‌ ಬಾರದ ಕಾರಣ ಲಕ್ನೋ ತಂಡ 12 ರನ್‌ಗಳ ಗೆಲುವು ಸಾಧಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 203 ರನ್‌ ಕಲೆಹಾಕಿತು. ಈ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಓವರ್‌ಗಳಲ್ಲಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ರನ್‌ಗಳಿಸಿ ಸೋಲು ಕಂಡಿತು. ಕೊನೇ ಓವರ್‌ ಥ್ರಿಲ್ಲರ್‌ ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು.

    ಮುಂಬೈ ಪರ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 1 ಸಿಕ್ಸರ್‌, 9 ಬೌಂಡರಿ ನೆರವಿಂದ 67 ರನ್‌, ನಮನ್ ಧೀರ್ 24 ಎಸೆತಗಳಲ್ಲಿ 3 ಸಿಕ್ಸರ್‌, 4 ಬೌಂಡರಿ ಸಿಡಿಸಿ 46 ರನ್‌ ಕಲೆಹಾಕಿದರು. ತಿಲಕ್‌ ವರ್ಮ 25 ರನ್, ಹಾರ್ದಿಕ್‌ ಪಾಂಡ್ಯ 28 ರನ್‌ ಕೊಡುಗೆ ಕೊಟ್ಟರು.

    ಲಕ್ನೋ ಪರ ಆಕಾಶ್ ದೀಪ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

    ಲಕ್ನೋ ಪರ ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 9 ಬೌಂಡರಿ, ಎರಡು ಸಿಕ್ಸರ್‌ ನೆರವಿನಿಂದ 60 ರನ್‌, ಏಡೆನ್ ಮಾರ್ಕ್ರಾಮ್ 38 ಎಡೆತಗಳಲ್ಲಿ ನಾಲ್ಕು ಸಿಕ್ಸರ್‌, 2 ಬೌಂಡರಿ ನೆರವಿಂದ 53 ರನ್‌, ಆಯುಷ್ ಬಡೋನಿ 19 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 30 ರನ್‌, ಡೆವಿಡ್‌ ಮಿಲ್ಲರ್‌ 14 ಎಸೆತಗಳಲ್ಲಿ 27 ರನ್‌ ಕಲೆ ಹಾಕಿದರು.

    ಮುಂಬೈ ಪರ ಹಾರ್ದಿಕ್ ಪಾಂಡ್ಯ 5 ವಿಕೆಟ್‌, ವಿಘ್ನೇಶ್ ಪುತ್ತೂರು, ಅಶ್ವನಿ ಕುಮಾರ್ ಹಾಗೂ ಟ್ರೆಂಟ್ ಬೌಲ್ಟ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

  • ಅಶ್ವನಿ ವೇಗಕ್ಕೆ ಕೊನೆಯ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ – ಮುಂಬೈಗೆ ಭರ್ಜರಿ ಜಯ

    ಅಶ್ವನಿ ವೇಗಕ್ಕೆ ಕೊನೆಯ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ – ಮುಂಬೈಗೆ ಭರ್ಜರಿ ಜಯ

    ಮುಂಬೈ: ಚೊಚ್ಚಲ ಪಂದ್ಯವಾಡಿದ ಅಶ್ವನಿ ಕುಮಾರ್‌ (Ashwani Kumar) ಅವರ ಮಾರಕ ಬೌಲಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ (Kolkata Knight Riders) 16.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಮುಂಬೈ 12.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 121 ರನ್‌ ಹೊಡೆದು ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು. ಇದನ್ನೂ ಓದಿ: ಮುಂಬೈ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ರೋಹಿತ್‌ಗೆ ಇಲ್ಲ ಸ್ಥಾನ

    ಈ ಸೋಲಿನೊಂದಿಗೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 10ನೇ ಸ್ಥಾನಕ್ಕೆ ಜಾರಿದರೆ, ಕೊನೆಯ ಸ್ಥಾನದಲ್ಲಿದ್ದ ಮುಂಬೈ ಉತ್ತಮ ನೆಟ್‌ ರನ್‌ ರೇಟ್‌ನಿಂದ 6ನೇ ಸ್ಥಾನಕ್ಕೆ ಜಿಗಿದಿದೆ.

    ಸುಲಭ ಸವಾಲನ್ನು ಬೆನ್ನಟ್ಟಿದ ಮುಂಬೈ 13 ರನ್‌ ಗಳಿಸಿದ ರೋಹಿತ್‌ ವಿಕೆಟ್‌ ಆರಂಭದಲ್ಲೇ ಕಳೆದುಕೊಂಡರೂ ರಯಾನ್ ರಿಕಲ್ಟನ್ ಔಟಾಗದೇ 62 ರನ್‌(41 ಎಸೆತ, 4 ಬೌಂಡರಿ, 5 ಸಿಕ್ಸ್‌), ವಿಲ್‌ ಜಾಕ್ಸ್‌ 16 ರನ್‌, ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌ 27 ರನ್‌(9 ಎಸೆತ, 3 ಬೌಂಡರಿ, 2 ಸಿಕ್ಸ್‌) ನೆರವಿನಿಂದ ಜಯಗಳಿಸಿತು. ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌


    ಕೋಲ್ಕತ್ತಾ ಆರಂಭದಲ್ಲೇ 2 ವಿಕೆಟ್‌ ಕಳೆದುಕೊಂಡಿತ್ತು. 74 ರನ್‌ಗಳಿಸುವಷ್ಟರಲ್ಲೇ 6 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಇಂಪ್ಯಾಕ್ಟ್‌ ಪ್ಲೇಯರ್‌ ರಘುವಂಶಿ 26 ರನ್‌, ರಮನ್‌ದೀಪ್‌ ಸಿಂಗ್‌ 22 ರನ್‌ ಹೊಡೆದು ಔಟಾದರು.

    ಐಪಿಎಲ್‌ ಪಾದಾರ್ಪಣೆ ಮಾಡಿದ ಅಶ್ವನಿ ಕುಮಾರ್‌ 3 ಓವರ್‌ ಎಸೆದು 4 ವಿಕೆಟ್‌ ಕಿತ್ತು ಕೋಲ್ಕತ್ತಕ್ಕೆ ದೊಡ್ಡ ಹೊಡೆತ ನೀಡಿದರು. ದೀಪಕ್‌ ಚಹರ್‌ 2 ವಿಕೆಟ್‌ ಕಿತ್ತರೆ ಬೌಲ್ಟ್‌, ದೀಪಕ್‌ ಚಹರ್‌, ಪಾಂಡ್ಯ, ವಿಘ್ನೇಶ್‌ ಪುತೂರ್‌, ಸ್ಯಾಂಟ್ನರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಸುದರ್ಶನ್‌ ಫಿಫ್ಟಿ ಆಟ; ಮುಂಬೈ ವಿರುದ್ಧ ಗುಜರಾತ್‌ಗೆ 36 ರನ್‌ಗಳ ಜಯ

    ಸುದರ್ಶನ್‌ ಫಿಫ್ಟಿ ಆಟ; ಮುಂಬೈ ವಿರುದ್ಧ ಗುಜರಾತ್‌ಗೆ 36 ರನ್‌ಗಳ ಜಯ

    ಅಹ್ಮದಾಬಾದ್: ಸಾಯಿ ಸುದರ್ಶನ್‌ ಅರ್ಧಶತಕ ಆಟ ಹಾಗೂ ಸಂಘಟಿತ ಬೌಲಿಂಗ್‌ ನೆರವಿನಿಂದ ಮುಂಬೈ ವಿರುದ್ಧ ಟೈಟನ್ಸ್‌ 36 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಜಯದ ಹಳಿಗೆ ಗುಜರಾತ್ ಮರಳಿದೆ. ಆದರೆ, ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಮುಂಬೈ ಮುಖಭಂಗ ಅನುಭವಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗೆ 6 ವಿಕೆಟ್‌ ನಷ್ಟಕ್ಕೆ 140 ರನ್‌ ಅಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

    ಕಳೆದ ಪಂದ್ಯದಲ್ಲೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ರೋಹಿತ್‌ ಶರ್ಮಾ ಇಂದು ಕೂಡ ಮಂಕಾದರು. ಕೇವಲ 8 ರನ್‌ ಗಳಿಸಿ ಪೆವಿಲಿಯನ್‌ ಕಡೆ ಮುಖ ಮಾಡಿದರು. ರಯಾನ್ ರಿಕೆಲ್ಟನ್ ಕೂಡ 6 ರನ್‌ ಗಳಿಸಿ ಔಟಾದರು. ತಿಲಕ್‌ ವರ್ಮಾ 39 ರನ್‌ ಗಳಿಸಲಷ್ಟೇ ಶಕ್ತರಾದರು.

    ಈ ನಡುವೆ ಸೂರ್ಯಕುಮಾರ್‌ ಯಾದವ್‌ (48 ರನ್‌, 28 ಬಾಲ್‌, 1 ಫೋರ್‌, 4 ಸಿಕ್ಸರ್‌) ಜವಾಬ್ದಾರಿಯುತ ಆಟ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ಹೊರನಡೆದಿದ್ದು, ನಿರಾಸೆ ಮೂಡಿಸಿತು. ರಾಬಿನ್ ಮಿಂಜ್ 3, ಹಾರ್ದಿಕ್ ಪಾಂಡ್ಯ 11, ನಮನ್ ಧೀರ್ 18, ಮಿಚೆಲ್ ಸ್ಯಾಂಟ್ನರ್ 18 ರನ್‌ ಗಳಿಸಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

    ಗುಜರಾತ್‌ ಪರ ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ತಲಾ 2, ಕಗಿಸೊ ರಬಾಡ ಹಾಗೂ ಸಾಯಿ ಕಿಶೋರ್ ತಲಾ 1 ವಿಕೆಟ್‌ ಕಿತ್ತು ಗೆಲುವಿಗೆ ಸಹಕಾರಿಯಾದರು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಉತ್ತಮ ಪ್ರದರ್ಶನ ನೀಡಿತು. ಸಾಯಿ ಸುದರ್ಶನ್‌ ಅರ್ಧಶತಕ (63 ರನ್‌, 41 ಬಾಲ್‌, 4 ಫೋರ್‌, 2 ಸಿಕ್ಸರ್‌) ಗಳಿಸಿ ಮಿಂಚಿದರು. ಶುಭಮನ್‌ ಗಿಲ್‌ 38, ಜೋಶ್‌ ಬಟ್ಲರ್‌ 39 ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾದರು.

  • IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

    IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

    ದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2025) 18ನೇ ಆವೃತ್ತಿಯಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲಾರಂಭಿಸಿವೆ. ಅತ್ತ ಬಿಸಿಸಿಐನಿಂದ (BCCI) ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಶಾನ್ ‌ಕಿಶನ್‌ ಶತಕ ಸಿಡಿಸಿ ಅಬ್ಬರಿಸಿದ್ರೆ, ಇದೇ ಚೊಚ್ಚಲ ಐಪಿಎಲ್‌ ಪಂದ್ಯವನ್ನಾಡಿದ ಕೇರಳ ಮೂಲದ ಯುವಕ ಸದ್ಯ ಕ್ರಿಕೆಟ್‌ ಲೋಕದಲ್ಲಿ ಸುದ್ದಿಯಲ್ಲಿದ್ದಾರೆ.

    ಸೂಪರ್‌ ಸಂಡೇ ಚೆಪಾಕ್‌ನಲ್ಲಿ ನಡೆದ ಐಪಿಎಲ್‌ನ 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ (CKS) 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಗೆಲುವಿನ ಶುಭಾರಂಭ ಮಾಡಿತು. ಆದ್ರೆ ಈ ಪಂದ್ಯದಲ್ಲಿ ಮಿಂಚಿದ್ದು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಕೇರಳ ಮೂಲದ ಯುವಕ ʻವಿಘ್ನೇಶ್‌ ಪುತ್ತೂರುʼ (Vignesh Puthur).

    ಹೌದು. ಕೇರಳದ ಮಲಪ್ಪುರಂನ 24 ವರ್ಷದ ವಿಘ್ನೇಶ್‌, ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ. ಸೂಪರ್‌ ಸಂಡೇ ರೋಹಿತ್ ಶರ್ಮಾ (Rohit Sharma) ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ವಿಘ್ನೇಶ್ ತಮ್ಮ ಸ್ಪಿನ್‌ ಮೋಡಿಯಿಂದ ಆಕರ್ಷಿಸಿದರು. ಸ್ವಾರಸ್ಯವೆಂದರೆ ವಿಘ್ನೇಶ್‌ ಕೇರಳ ಪರ ಹಿರಿಯರ ಮಟ್ಟದಲ್ಲಿ ಈ ವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿದವರಲ್ಲ. ಆದರೂ ಘಟಾನುಘಟಿಗಳ ಅಖಾಡಕ್ಕೆ ಧುಮುಕಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು, ಫೀಲ್ಡಿಂಗ್‌ನಲ್ಲೂ ವಿಘ್ನೇಶ್‌ ಗಮನ ಸೆಳೆದಿದ್ದು ವಿಶೇಷ.

    ಮುಂಬೈ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಕೇರಳದ ಮೂಲದ ವಿಘ್ನೇಶ್‌ ಪುತ್ತೂರು, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಉತ್ತಮವಾಗಿ ಬೌಲಿಂಗ್ ಮಾಡಿದ ವಿಘ್ನೇಶ್ ಅವರ ಬಳಿ ಸ್ವತಃ ಧೋನಿಯೇ ಹೋಗಿ ಭುಜ ತಟ್ಟಿ ಶ್ಲಾಘಿಸಿದರು. ಧೋನಿಯಿಂದ ಮೆಚ್ಚುಗೆ ಪಡೆದು ವಿಘ್ನೇಶ್‌ ಸಂತಸಗೊಂಡರು.

    ಯಾರು ಈ ವಿಘ್ನೇಶ್‌ ಪುತ್ತೂರು?
    ವಿಘ್ನೇಶ್‌ ಪುತ್ತೂರು ಬಲಗೈ ಬ್ಯಾಟರ್‌ ಹಾಗೂ ಎಡಗೈ ಸ್ಪಿನ್ ಬೌಲರ್‌. 2001ರ ಮಾರ್ಚ್‌ 2 ರಂದು ಜನಿಸಿದ ವಿಘ್ನೇಶ್ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. 14 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ಮಟ್ಟದಲ್ಲಿ ಕೇರಳ ಪರ ಮಾತ್ರ ಆಡಿದ್ದಾರೆ. ಇನ್ನೂ ಹಿರಿಯರ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪ್ಪಲ್ಸ್ ಪರ ಆಡಿದ್ದು, ಮೂರು ಪಂದ್ಯಗಳಿಂದ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದರು. ಈ ಮಧ್ಯೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ಆಡಿದ್ದಾರೆ.

    ಹೆತ್ತವರ ಪ್ರೋತ್ಸಾಹವೇ ಶ್ರೀರಕ್ಷೆ
    ವಿಘ್ನೇಶ್ ಬೆಳವಣಿಗೆ ಹಿಂದೆ ಹೆತ್ತವರ ಪ್ರೋತ್ಸಾಹವಿದೆ. ಆರ್ಥಿಕ ಸವಾಲುಗಳನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ವಿಘ್ನೇಶ್‌, ಎಂದಿಗೂ ಕ್ರೀಡೆಯ ಮೇಲಿನ ತನ್ನ ಆಸಕ್ತಿ ಕಡಿಮೆ ಮಾಡಿಕೊಂಡಿರಲಿಲ್ಲ. ತಂದೆ ಸುನಿಲ್ ಕುಮಾರ್ ಆಟೋ ಚಾಲಕರಾಗಿದ್ದರೆ, ತಾಯಿ ಕೆ.ಪಿ. ಬಿಂದು ಗೃಹಿಣಿ. ಆರಂಭದಲ್ಲಿ ಮಧ್ಯಮ ವೇಗ ಮತ್ತು ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳುತ್ತಲೇ ಇದ್ದರು. ನಂತರ ಅವರು ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತ್ರಿಶೂರ್‌ಗೆ ತೆರಳಿದರು. ಅಲ್ಲಿ ಸೇಂಟ್ ಥಾಮಸ್ ಕಾಲೇಜಿನ ಪರ ಕೇರಳ ಕಾಲೇಜು ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಪಾದಾರ್ಪಣೆ ಮಾಡುವ ಮೊದಲು 2025ರ ಟಾಟಾ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷ ರೂ.ಗೆ ಹರಾಜಾದರು.

    ದಕ್ಷಿಣ ಆಫ್ರಿಕಾಗೆ ತೆರಳಿದ್ದ ವಿಘ್ನೇಶ್‌
    ವಿಘ್ನೇಶ್ ಪುತ್ತೂರು ಅವರನ್ನು SA T20 ಲೀಗ್‌ಗಾಗಿ ಮುಂಬೈ ಕೇಪ್‌ಟೌನ್‌ನೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು. ಈ ಟೂರ್ನಿಯಲ್ಲಿ ರಶೀದ್‌ ಖಾನ್‌, ಟ್ರೆಂಟ್‌ ಬೌಲ್ಡ್‌ ಅವರಂತಹ ದಿಗ್ಗಜ ಬೌಲರ್‌ಗಳೊಂದಿಗೆ ಸಮಯ ಕಳೆದ ವಿಘ್ನೇಶ್‌ ಬೌಲಿಂಗ್‌ ಟ್ರಿಕ್ಸ್‌ ಕಲಿತು ದೇಶಕ್ಕೆ ಮರಳಿದ್ದರು. ಇದೇ ಅವಕಾಶ ಇಂದು ಅವರನ್ನು ದೇಶಾದ್ಯಂತ ಮೆಚ್ಚುಗೆ ಗಳಿಸುವಂತೆ ಮಾಡಿದೆ. ಸೋಷಿಯಲ್‌ ಮಿಡಿಯಾ ಎಕ್ಸ್‌ನಲ್ಲೂ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದಾರೆ.

  • IPL 2025: ಗಾಯಕ್ವಾಡ್‌, ರಚಿನ್‌ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

    IPL 2025: ಗಾಯಕ್ವಾಡ್‌, ರಚಿನ್‌ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

    – ಚೆನ್ನೈನ ಮೂವರು ಘಟಾನುಘಟಿಗಳ ವಿಕೆಟ್‌ ಕಿತ್ತು ಗಮನ ಸೆಳೆದ 23ರ ಯುವಕ

    ಚೆನ್ನೈ: ಋತುರಾಜ್‌ ಗಾಯಕ್ವಾಡ್, ರಚಿನ್‌ ರವೀಂದ್ರ ಫಿಫ್ಟಿ ಆಟ ಮತ್ತು ನೂರ್‌ ಅಹ್ಮದ್‌ ಬೆಂಕಿ ಬೌಲಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು. 156 ರನ್‌ ಗುರಿ ಬೆನ್ನತ್ತಿದ ಚೆನ್ನೈ 19.1 ಓವರ್‌ಗಳಿಗೆ 158 ರನ್‌ಗಳೊಂದಿಗೆ 4 ವಿಕೆಟ್‌ಗಳ ಜಯಗಳಿಸಿತು.

    ಮೊದಲು ಬ್ಯಾಟ್‌ ಮಾಡಿದ ಮುಂಬೈ ಕಳೆದ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಶೂನ್ಯ ಸುತ್ತಿ ಪೆವಿಲಿಯನ್‌ಗೆ ಸೇರಿದ್ದು, ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತು. ತಿಲಕ್‌ ವರ್ಮಾ (31), ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (29), ದೀಪಕ್‌ ಚಹಾರ್‌ (28) ಸಮಾಧಾನಕರ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, ಬಿಟ್ಟರೆ ಉಳಿದವರು ನಿರಾಸೆ ಮೂಡಿಸಿದರು. ಚೆನ್ನೈ ಪರ ನೂರ್ ಅಹ್ಮದ್ 4 ವಿಕೆಟ್‌ ಕಿತ್ತು ಮಿಂಚಿದರು. ಖಲೀಲ್ ಅಹ್ಮದ್ 3, ನಾಥನ್ ಎಲ್ಲಿಸ್, ಆರ್‌.ಅಶ್ವಿನ್‌ ತಲಾ 1 ವಿಕೆಟ್‌ ಕಿತ್ತರು.

    ಮುಂಬೈ ನೀಡಿದ 156 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು.‌ ಕ್ಯಾಪ್ಟನ್ ಋತುರಾಜ್‌ ಗಾಯಕ್ವಾಡ್‌(53 ರನ್‌, 26 ಬಾಲ್‌, 6 ಫೋರ್‌, 3 ಸಿಕ್ಸರ್‌) ಹಾಗೂ ರಚಿನ್‌ ರವೀಂದ್ರ (65 ರನ್‌, 45 ಬಾಲ್‌, 2 ಫೋರ್‌, 4 ಸಿಕ್ಸರ್‌) ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾದರು.

    ಚೆನ್ನೈನ ಘಟಾನುಘಟಿಗಳ ವಿಕೆಟ್‌ ಕಿತ್ತ ವಿಘ್ನೇಶ್‌ ಪುತ್ತೂರು
    ಐಪಿಎಲ್‌ ಹರಾಜಿನಲ್ಲಿ 30 ಲಕ್ಷಕ್ಕೆ ಬಿಡ್‌ ಆಗಿರುವ ಮುಂಬೈ ತಂಡದ 23ರ ಯುವಕ ವಿಘ್ನೇಶ್‌ ಪುತ್ತೂರು ಇಂದಿನ ಪಂದ್ಯದಲ್ಲಿ ಗಮನ ಸೆಳೆದರು. ಸ್ಪಿನ್‌ ಜಾದು ಮಾಡಿದ ಯುವಕ ಚೆನ್ನೈನ ಮೂವರು ಘಟಾನುಘಟಿಗಳ ಗಾಯಕ್ವಾಡ್‌, ದುಬೆ, ಹೂಡಾ) ವಿಕೆಟ್‌ ಉದುರಿಸಿದರು. 4 ಓವರ್‌ಗೆ 32 ರನ್‌ ನೀಡಿದ ಯುವಕ 3 ವಿಕೆಟ್‌ ಕಿತ್ತು ಮಿಂಚಿದರು.

  • ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಮುಂಬೈ: ಹೇಲಿ ಮ್ಯಾಥ್ಯೂಸ್ (Hayley Matthews) ಆಲ್‌ರೌಂಡರ್‌ ಆಟದಿಂದಾಗಿ ಎಲಿಮಿನೆಟರ್‌ (Eliminator) ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ (Mumbai Indians) ಡಬ್ಲ್ಯೂಪಿಎಲ್‌ ಫೈನಲ್‌ ಪ್ರವೇಶಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 4 ವಿಕೆಟ್‌ ನಷ್ಟಕ್ಕೆ 213 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು.

    ಈ ಗೆಲುವಿನೊಂದಿಗೆ ಮುಂಬೈ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದಂತಾಯಿತು. 2023 ರಲ್ಲಿ ನಡೆದ ಮೊದಲ ಆವೃತ್ತಿ ಮುಂಬೈ ಡೆಲ್ಲಿಯನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಶನಿವಾರ ಫೈನಲ್‌ನಲ್ಲಿ ಅದೇ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

    ಗುಜರಾತ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 43 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ 3 ವಿಕೆಟ್‌, ಅಮೆಲಿಯಾ ಕೆರ್ 2 ವಿಕೆಟ್‌ ಪಡೆದರು.

    ಮುಂಬೈ ಪರ ಯಸ್ತಿಕಾ ಭಾಟಿಯಾ 15 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ 71 ಎಸೆತಗಳಲ್ಲಿ 133 ರನ್‌ ಜೊತೆಯಾಟವಾಡಿದರು.

    ಹೇಲಿ ಮ್ಯಾಥ್ಯೂಸ್ 77 ರನ್‌(50 ಎಸೆತ, 10 ಬೌಂಡರಿ, 3 ಸಿಕ್ಸರ್‌) ಹೊಡೆದರೆ ನ್ಯಾಟ್ ಸಿವರ್-ಬ್ರಂಟ್ 77 ರನ್‌( 41 ಎಸೆತ, 10 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 36 ರನ್‌( 12 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸಿಡಿಸಿದ ಪರಿಣಾಮ ಮುಂಬೈ ತಂಡ 200 ರನ್‌ಗಳ ಗಡಿಯನ್ನು ದಾಟಿತ್ತು.

     

  • WPL | ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ರೋಷಾವೇಷ – ಗೆದ್ದು ಆಟ ಮುಗಿಸಿದ ಆರ್‌ಸಿಬಿ!

    WPL | ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ರೋಷಾವೇಷ – ಗೆದ್ದು ಆಟ ಮುಗಿಸಿದ ಆರ್‌ಸಿಬಿ!

    – ಫೈನಲ್‌ಗೆ ಡೆಲ್ಲಿ, ಸೆಮಿಸ್‌ಗೆ ಮುಂಬೈ

    ಮುಂಬೈ: 2025ರ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಅಭಿಯಾನಕ್ಕೆ ವಿದಾಯ ಹೇಳಿದೆ.‌‌ ಸತತ 5 ಸೋಲುಗಳಿಂದ ಲೀಗ್‌ ಸುತ್ತಿನಲ್ಲೇ ಹೊರಬಿದ್ದ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಇಲ್ಲಿನ ಬ್ರಬೋರ್ನ್‌ ಸ್ಟೇಡಿಯಂನಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 199 ರನ್‌ ಸಿಡಿಸಿತ್ತು. 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 188 ರನ್‌ ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿದೆ. ಆದ್ರೆ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ ತಂಡ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈಗಾಗಲೇ 10 ಅಂಕಗಳೊಂದಿಗೆ ಉತ್ತಮ ರನ್‌ರೇಟ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡ ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ.

    ಮುಂಬೈ ಪರ ನ್ಯಾಟ್‌ ಸಿವರ್‌ ಬ್ರಂಟ್‌ 35 ಎಸೆತಗಳಲ್ಲಿ 2 ಸಿಕ್ಸರ್‌, 9 ಬೌಂಡರಿ ನೆರವಿನಿಂದ 69 ರನ್‌ ಕಲೆಹಾಕಿದರು. ಹರ್ಮನ್‌ ಪ್ರೀತ್‌ ಕೌರ್‌ 18 ಎಸೆತಗಳಲ್ಲಿ 20 ರನ್‌, ಹೇಲಿ ಮ್ಯಾಥ್ಯೂಸ್‌ 16 ಎಸೆತಗಳಲ್ಲಿ 19 ರನ್‌ ಕಲೆಹಾಕಿದರು.

    ಆರ್‌ಸಿಬಿ ಪರ ಎಲಿಸ್‌ ಪೆರ್ರಿ 2 ವಿಕೆಟ್‌ , ಕಿಮ್ ಗಾರ್ತ್ 2 ವಿಕೆಟ್‌, ಸ್ನೇಹ್ ರಾಣಾ‌ 3 ವಿಕೆಟ್‌, ಜಾರ್ಜಿಯಾ 1 ವಿಕೆಟ್‌, ಹೀದರ್ ಗ್ರಹಾಂ 1 ವಿಕೆಟ್‌ ಕಬಳಿಸಿದರು.

    ಆರ್‌ಸಿಬಿ ಪರ ಸ್ಮೃತಿ ಮಂಧಾನ 37 ಎಸೆತಗಳಲ್ಲಿ 3 ಸಿಕ್ಸರ್‌, 6 ಬೌಂಡರಿ ನೆರವಿಂದ 53 ರನ್‌, ಎಲಿಸ್‌ ಪೆರ್ರಿ ಔಟಾಗದೆ 38 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ಸಿಡಿಸಿ 49 ರನ್‌, ರಿಚಾ ಘೋಷ್‌ 22 ಎಸೆತಗಳಲ್ಲಿ 1 ಸಿಕ್ಸರ್‌, 5 ಬೌಂಡರಿ ನೆರವಿಂದ 36 ರನ್‌, ಜಾರ್ಜಿಯಾ 10 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್‌ ನೆರವಿಂದ 31 ಕಲೆ ಹಾಕಿದರು.

    ಮುಂಬೈ ಪರ ಹೇಲಿ ಮ್ಯಾಥ್ಯೂಸ್‌ 2 ವಿಕೆಟ್‌, ಅಮೆಲಿಯಾ ಕೇರ್ 1 ವಿಕೆಟ್‌ ಕಬಳಿಸಿದರು.

  • ಯುಪಿ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌

    ಯುಪಿ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌

    ಲಕ್ನೋ: ಯುಪಿ ವಾರಿಯರ್ಸ್‌ (UP Warriorz) ತಂಡದ ವಿರುದ್ಧ ಅಟಲ್‌ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) 6 ವಿಕೆಟ್‌ಗಳ ಜಯ ಸಾಧಿಸಿದೆ ಗೆದ್ದು ಬೀಗಿದೆ.

    ಮೊದಲು ಬ್ಯಾಟ್‌ ಬೀಸಿದ ಯುಪಿ ವಾರಿಯರ್ಸ್‌ 20 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 150 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 18.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 153 ರನ್‌ ಕಲೆ ಹಾಕಿ ಜಯ ಮುಡಿಗೇರಿಸಿಕೊಂಡಿತು.

    4 ಜಯ ಸಾಧಿಸುವುದರೊಂದಿಗೆ ಮುಂಬೈ ಇಂಡಿಯನ್ಸ್‌ 8 ಅಂಕ ಪಡೆಯುವುದರ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಲ್ಲಿದ್ದರೆ ಯುಪಿ ವಾರಿಯರ್ಸ್‌ 5 ಪಂದ್ಯ ಸೋಲುವ ಮೂಲಕ 4 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದೆ.

    ಮುಂಬೈ ಇಂಡಿಯನ್ಸ್‌ ಪರ ಹೇಲಿ ಮ್ಯಾಥ್ಯೂಸ್‌ 46 ಎಸೆತಗಳಲ್ಲಿ 2 ಸಿಕ್ಸರ್‌, 8 ಬೌಂಡರಿ ನೆರವಿನಿಂದ 68 ರನ್‌, ನ್ಯಾಟ್‌ ಸಿವರ್‌ ಬ್ರಂಟ್‌ 23 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 37 ರನ್‌ ಕಲೆ ಹಾಕಿದರು.

    ಯುಪಿ ಪರ ಗ್ರೇಸ್‌ ಹ್ಯಾರಿಸ್‌ 2 ವಿಕೆಟ್‌, ಕ್ರಾಂತಿ ಗೌಡ್ 1 ವಿಕೆಟ್‌, ಚಿನೆಲ್ಲೆ ಹೆನ್ರಿ 1 ವಿಕೆಟ್‌ ಪಡೆದರು.

    ಯುಪಿ ಪರ ಜಾರ್ಜಿಯಾ ವೋಲ್ 33 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 55 ರನ್‌, ಗ್ರೇಸ್‌ ಹ್ಯಾರಿಸ್‌ 25 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ನೆರವಿನಿಂದ 28 ರನ್‌, ತಂಡದ ನಾಯಕಿ ದೀಪ್ತಿ ಶರ್ಮಾ 25 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 27 ರನ್‌ ಕಲೆ ಹಾಕಿದರು.

    ಮುಂಬೈ ಇಂಡಿಯನ್ಸ್‌ ಪರ ಅಮೆಲಿಯಾ ಕೆರ್‌ 5 ವಿಕೆಟ್‌, ಹೇಲಿ ಮ್ಯಾಥ್ಯೂಸ್‌ 2 ವಿಕೆಟ್‌ , ನ್ಯಾಟ್‌ ಸಿವರ್‌ ಬ್ರಂಟ್‌ 1 ವಿಕೆಟ್‌, ಪರುಣಿಕಾ ಸಿಸೋಡಿಯಾ 1 ವಿಕೆಟ್‌ ಕಬಳಿಸಿದರು.