Tag: MultiSpeciality Hospital

  • ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಹೋರಾಟ – ಸರ್ಕಾರದಿಂದ ವರ್ಷದ ನಂತರ ಕೈಗೊಂಡ ಕ್ರಮದ ಬಗ್ಗೆ ವಿವರ ನೀಡಲು KIMSಗೆ ಪತ್ರ

    ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಹೋರಾಟ – ಸರ್ಕಾರದಿಂದ ವರ್ಷದ ನಂತರ ಕೈಗೊಂಡ ಕ್ರಮದ ಬಗ್ಗೆ ವಿವರ ನೀಡಲು KIMSಗೆ ಪತ್ರ

    ಕಾರವಾರ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಜನರ ದಶಕದ ಬೇಡಿಕೆ. ಆದರೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಮಾಡಿ ನೀಡಿದ ಮನವಿ ಅರ್ಜಿಗೆ ಬರೋಬ್ಬರಿ ಒಂದು ವರ್ಷದ ನಂತರ ಇದೀಗ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸರ್ಕಾರ ಪತ್ರ ಬರೆದು ಮಾಹಿತಿ ಕೇಳಿದೆ.

    ಹೌದು, ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ಹೋರಾಟಗಾರ ಅನಂತಮೂರ್ತಿಯವರು 2023ರ ನವೆಂಬರ್‌ ತಿಂಗಳಲ್ಲಿ ಪಾದಯಾತ್ರೆ ನಡೆಸಿ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಲವು ಸಂಘಟನೆಗಳೊಂದಿಗೆ ಮನವಿ ನೀಡಿದ್ದರು.

    ಈ ಮನವಿ ಅಂದೇ ಜಿಲ್ಲಾಧಿಕಾರಿ ಮೂಲಕ ಸ್ವೀಕೃತವಾಗಿ ಸಂಬಂಧಪಟ್ಟ ಇಲಾಖೆಗೆ ತಲುಪಿತ್ತು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ ಎಷ್ಟಿದೆ ಎಂದರೆ, ಒಂದು ವರ್ಷದ ನಂತರ ಇದೀಗ 2025 ಜ.6 ರಂದು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪತ್ರ ಬರೆದು 15 ದಿನದೊಳಗೆ ಅರ್ಜಿದಾರರಿಗೆ ಹಾಗೂ ಸಂಬಂಧಪಟ್ಟ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲು ಸೂಚಿಸಿದೆ.

    ಹಿಂದೆ ಏನಾಗಿತ್ತು?
    ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಪರಿಣಾಮ ಪ್ರತಿನಿತ್ಯ ಚಿಕಿತ್ಸೆಗಾಗಿ ಹೊರ ಜಿಲ್ಲೆ, ಹೊರ ರಾಜ್ಯದ ಆಸ್ಪತ್ರೆಗಳಿಗೆ ಓಡಾಡುವ ಪರಿಸ್ಥಿತಿ ಇದ್ದು, ಜಿಲ್ಲೆಯಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಈ ಹಿಂದೆ ಅನೇಕ ಹೋರಾಟಗಳು ನಡೆದಿತ್ತು.

    ಅದರಲ್ಲಿ ಮುಖ್ಯವಾಗಿ, ಸಾಮಾಜಿಕ ಜಾಲತಾಣದ ಹ್ಯಾಷ್ ಟ್ಯಾಗ್ ಹೋರಾಟ, ರಕ್ತದಲ್ಲಿ ಪತ್ರ ಬರೆದು ಹೋರಾಟ, ಪಾದಯಾತ್ರೆ ಹಾಗೂ ಉಪವಾಸ ಕುಳಿತು ಜಿಲ್ಲೆಯ ಹಲವು ಸಂಘಟನೆಗಳು ಹೋರಾಟ ನಡೆಸಿದ್ದವು. ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಈ ಸಂಬಂಧ ದೊಡ್ಡ ಅಭಿಯಾನವೇ ನಡೆದಿತ್ತು. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ವಿಚಾರವನ್ನ ರಾಜಕೀಯವಾಗಿ ಬಳಸಿಕೊಂಡಿತ್ತು.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹೋರಾಟದ ಪರಿಣಾಮವಾಗಿ ಸ್ವತಃ ಆರೋಗ್ಯ ಸಚಿವರೇ ಜಿಲ್ಲೆಗೆ ಬಂದು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿ ತೆರಳಿದ್ದರು. ಆದರೆ, ಇದು ಕೇವಲ ನೋಡಿ ಪರಿಶೀಲನೆ ಮಾಡುವ ಹಂತದಲ್ಲೇ ಮುಗಿಯಿತೇ ವಿನಾ ಆಸ್ಪತ್ರೆ ನಿರ್ಮಾಣದ ಕಾರ್ಯವಾಗಿರಲಿಲ್ಲ. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ವಿಚಾರವನ್ನ ರಾಜಕೀಯವಾಗಿ ಬಳಸಿಕೊಂಡು, ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ದಿನದಲ್ಲಿ ಶಂಕುಸ್ಥಾಪನೆ ಮಾಡುವುದಾಗಿ ಹೇಳಿತ್ತು.

    ಹೋರಾಟದ ತೀವ್ರತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿ ಜಾಗ ನಿಗದಿ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ಶಂಕುಸ್ಥಾಪನೆ ಮಾಡುವ ಹೇಳಿಕೆ ನೀಡಿದ್ದರು‌. ಆದರೆ, ಮಂಡನೆಯಾದ ಬಜೆಟ್‌ನಲ್ಲಿ ಸಹ ಇದಕ್ಕಾಗಿ ಹಣ ಮೀಸಲಿಡಲಿಲ್ಲ. ಇನ್ನು, ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡದೇ ಇರುವುದು ವಿಧಾನಸಭಾ ಚುನಾವಣೆಯ ಸೋಲಿಗೂ ಕಾರಣವಾಗಿತ್ತು.

    ಜನಪ್ರತಿನಿಧಿಗಳ ಕಿತ್ತಾಟ! ಕೊನೆಗೂ ಮರೀಚಿಕೆಯಾಯ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
    ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳೂ ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿಷಯವನ್ನು ಬಳಸಿಕೊಂಡರು. ಗ್ಯಾರಂಟಿ ಆಶ್ವಾಸನೆ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕಾರವಾರದ ಶಾಸಕ ಸತೀಶ್ ಸೈಲ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ತಮ್ಮ ಭೂಮಿಯನ್ನು ಕೊಡಲು ಸಿದ್ಧವಾಗಿದ್ದು, ಹೂಡಿಕೆಗಾಗಿ ಉದ್ಯಮಿ ಬಿ.ಆರ್.ಶಟ್ಟಿ ಅವರು ಸಹ ಕಾರವಾರಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದರು. ಶಾಸಕ ಆರ್.ವಿ ದೇಶಪಾಂಡೆ ಸಹ ಹಳಿಯಾಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲವೇ, ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಹೇಳಿದ್ದರು.

    ಕೆಲವು ಜನಪ್ರತಿನಿಧಿಗಳು ಕಾರವಾರದಲ್ಲಿ ಆಗಲಿ ಎಂದರೆ, ಇನ್ನು ಕೆಲವರು ಶಿರಸಿ, ಕುಮಟಾ, ಹೊನ್ನಾವರ ಎಂದು ಗೊಂದಲ ಸೃಷ್ಟಿಸಿದ್ದರು. ಕುದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕುಮಟಾ ಅಥವಾ ಹೊನ್ನಾವರದಲ್ಲಿ ಮಾಡ್ಬೇಕು ಎಂದು ಗಲಾಟೆ ಮಾಡ್ತಿದ್ದಾರೆ. ಅಲ್ಲಿ ನಾವು ಮಾಡ್ತೇವೆ ಎಂದು ಅವರಿಗೆ ಆಶ್ವಾಸನೆ ಕೊಟ್ಟಿದ್ದೇವೆ. ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಹೀಗೆ ಗೊಂದಲದಲ್ಲಿ ಜಿಲ್ಲೆಯ ಜನರಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮೂಗಿಗೆ ತುಪ್ಪ ಸವರಿ ಜನರನ್ನು ತ್ರಿಶಂಕು ಸ್ಥಿತಿಗೆ ತಳ್ಳಿದರೇ ವಿನಃ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕನಸು ಮಾತ್ರ ಗಗನ ಕುಸುಮವಾಗಿದೆ. ಸದ್ಯ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿದ್ದು, ಈ ಬಜೆಟ್‌ನಲ್ಲಿಯಾದರೂ ನಿಗದಿ ಮಾಡಿದ ಸ್ಥಳದಲ್ಲಿ ಮಂಜೂರಾರಿ ನೀಡಿ ಹಣ ಬಿಡುಗಡೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • 4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

    4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

    ಧಾರವಾಡ: ಆಸ್ಪತ್ರೆ ಸಹಾಯಕಿಯೊಬ್ಬಳು ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‍ನಲ್ಲಿ ಕೂರಿಸಿ ಸುಟ್ಟ ಗಾಯ ಮಾಡಿದ್ದು ತಪ್ಪು ಎಂದು ಪರಿಗಣಿಸಿ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ (Multi Speciality) ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು 10 ಲಕ್ಷ ದಂಡ ವಿಧಿಸಿ ಆದೇಶ ಮಾಡಿದೆ.

    ಹುಬ್ಬಳ್ಳಿಯ (Hubballi) ವಿನಯ ಹಂಜಿ ಅವರ ಪತ್ನಿ ರೇಖಾ ಅವರು 2019ರ ಡಿ.10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಿಸಿನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಈ ವಿಚಾರವನ್ನು ಮಗುವಿನ ಪೋಷಕರು ಆಸ್ಪತ್ರೆ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೆ ಅದು ಚರ್ಮ ರೋಗ ಎಂದು ಹೇಳಿ ಆಸ್ಪತ್ರೆಯ ವೈದ್ಯರು ಅದನ್ನ ಮರೆ ಮಾಚಿದ್ದರು.

    ವಿನಯ ಹಂಜಿಯವರು ಪತ್ನಿ ಮತ್ತು ಆ ಮಗುವನ್ನು ಸಿಟಿ ಕ್ಲಿನಿಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಧಾರವಾಡದ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಆಸ್ಪತ್ರೆಯಲ್ಲಿ ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದರು. ಆಗ ಮಗು ಗುಣಮುಖವಾಯಿತು. ಈ ಬಗ್ಗೆ ವಿನಯ ಹಂಜಿಯವರು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಹಾಗೂ ಅಲ್ಲಿನ 7 ಮಂದಿ ವೈದ್ಯರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ಸದ್ಯ ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ 75% ಭಾಗ ಮತ್ತು ಬಾಕಿ 25% ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗೆ 10 ಲಕ್ಷ ಪರಿಹಾರ ನೀಡಬೇಕು, ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ 8% ಬಡ್ಡಿ ಲೆಕ್ಕಹಾಕಿ ಕೊಡಬೇಕು ಎಂದು ಆಯೋಗ ಆದೇಶದಲ್ಲಿ ತಿಳಿಸಿದೆ.

  • ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ – ಸರ್ಕಾರ ಆಸ್ಪತ್ರೆ ಗ್ಯಾರಂಟಿ ನೀಡಲಿ: ಶಾಸಕ ದಿನಕರ ಶೆಟ್ಟಿ

    ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ – ಸರ್ಕಾರ ಆಸ್ಪತ್ರೆ ಗ್ಯಾರಂಟಿ ನೀಡಲಿ: ಶಾಸಕ ದಿನಕರ ಶೆಟ್ಟಿ

    ಉತ್ತರ ಕನ್ನಡ: ಜಿಲ್ಲೆಯಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದ ವರೆಗೆ ಜಿಲ್ಲೆಯ ಜನರಿಗಾಗಿ ಪಾದಯಾತ್ರೆ ಮಾಡುತ್ತಿರುವ ಅನಂತಮೂರ್ತಿ ಹೆಗಡೆಯವರ ಕೆಲಸ ಪುಣ್ಯದ ಕೆಲಸ. ಇಂತಹ ಕೆಲಸವನ್ನು ನಾವೆಲ್ಲರೂ ಬೆಂಬಲಿಸಬೇಕು ಎಂದು ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ (Dinakara Shetty) ಹೇಳಿದರು.

    ಇಂದು (ಭಾನುವಾರ) ಸಮಾಜ ಸೇವಕ ಶಿರಸಿ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹಮ್ಮಿಕೊಂಡ ಶಿರಸಿಯಿಂದ ಕಾರವಾರದ ವರೆಗೆ (Karawara) ಪಾದಯಾತ್ರೆಯೂ ಕುಮಟಾ ನಗರವನ್ನು ಪ್ರವೇಶಿಸಿದೆ. ಪಾದಯಾತ್ರೆಯನ್ನು ಸ್ವಾಗತಿಸಿ ಇಲ್ಲಿನ‌ ಮಹಾಸತಿ ದೇವಾಲಯದ ಮುಂಭಾಗ ಆಯೋಜಿಸಿದ ಸಭೆಯಲ್ಲಿ ದಿನಕರ ಶೆಟ್ಟಿ ಮಾತನಾಡುತ್ತಾ, ಶಿರಸಿಯಿಂದ ಕಾರವಾರದ ವರೆಗೆ ಪಾದಯಾತ್ರೆ ಮಾಡುವುದು ಸುಲಭದ ಮಾತಲ್ಲ. ಅವರು ಒಂದು‌ ದಿಟ್ಟ ನಿರ್ಧಾರ ಮಾಡಿದ್ದಾರೆ. ಈ ಕೆಲಸ ಯಾರಿಂದಾದರೂ ಆಗಲಿ. ಆದರೆ ಒಂದು ಒಳ್ಳೆಯ ಕೆಲಸ ಆಗಿ ಜನರಿಗೆ ಅನುಕೂಲವಾಗಲಿ. ನಮ್ಮ‌‌ ನಿಮ್ಮೆಲ್ಲರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಪಕ್ಕದ ಜಿಲ್ಲೆಯ ಜನಪ್ರತಿನಿಧಿಗಳ ಹಾಗೆ ನಾವೆಲ್ಲ ಪಕ್ಷ ಭೇದ ಮರೆತು ಆಸ್ಪತ್ರೆ ಸ್ಥಾಪನೆಗೆ ಒಗ್ಗಟ್ಟು ಪ್ರದರ್ಶನ ಮಾಡೋಣ. ಯಾವ ಸರ್ಕಾರ ಮಾಡಿದರೇನು? ಒಟ್ಟಿನಲ್ಲಿ ಆಸ್ಪತ್ರೆಯಾಗಿ ಜನರಿಗೆ ಅನುಕೂಲ ಆಗಲಿ. ಕಾಂಗ್ರೆಸ್ ಸರ್ಕಾರ ಆಸ್ಪತ್ರೆ ನೀಡುವ ಗ್ಯಾರಂಟಿ ನೀಡಲಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ: ಬಿ.ಸಿ ಪಾಟೀಲ್

    ನಂತರ ಮಾತನಾಡಿದ ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ, ಹಿಂದಿನ‌ ಬಿಜೆಪಿ ಸರ್ಕಾರ ಇದ್ದಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರ ಜಾಗವನ್ನು ಪರಿಶೀಲನೆ ‌ಮಾಡಿತ್ತು. ನಂತರ ಬಿಜೆಪಿ‌ ಸರ್ಕಾರ ಅಧಿಕಾರ ಕಳೆದುಕೊಂಡಿತು. ಮುಂದೆ ಹಣವು ಕೂಡ ಬಿಡುಗಡೆಯಾಗಿಲ್ಲ. ಯಾವುದೇ ಪ್ರಕ್ರಿಯೆಯೂ ಮುಂದುವರೆಯಲಿಲ್ಲ. ಶಾಸಕರು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಎಲ್ಲಿಯಾದರೂ ಕೂಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಡೆಯಬೇಕು ಎಂದರೆ ಅಲ್ಲಿ ಮೆಡಿಕಲ್ ಕಾಲೇಜು ಇರಬೇಕು. ಕಾಲೇಜೂ ಇಲ್ಲ ಎಂದರೆ ವೈದ್ಯಾಧಿಕಾರಿಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಗಲೇಬೇಕು. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟನ್ನು ತೋರಿಸಬೇಕು ಎಂದು ಒತ್ತಾಯಿಸಿದರು.

    ಕುಮಟಾದ ಹಿರಿಯ ವಕೀಲ ಆರ್.ಜಿ.ನಾಯ್ಕ ಮಾತನಾಡಿ, ಅನಂತಮೂರ್ತಿ ಹೆಗಡೆಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇವರು ಶಕ್ತಿ ನೀಡಲಿ. ನಾನು, ಶಾಸಕ ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಒಂದು ಮಾತನ್ನು ಹೇಳುತ್ತೇನೆ. ಈ ಆಸ್ಪತ್ರೆ ವಿಚಾರವಾಗಿ ತಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡಿ. ಉಸ್ತುವಾರಿ ಸಚಿವರು ಒಂದು ಸಭೆ ಕರೆದು ನಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸಿದರು. ಇದನ್ನೂ ಓದಿ: ಬರ ಪರಿಸ್ಥಿತಿಯ ಅಧ್ಯಯನ ಮಾಡಿ, ವರದಿ ನೀಡುವಂತೆ ಸಚಿವರಿಗೆ ಸಿಎಂ ಪತ್ರ

    ಈ ವೇಳೆ ಸ್ಥಳೀಯ ಮುಖಂಡರು ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಂತರ ದಿವಗಿ ಮೂಲಕ ಸಾಗಿದ ಪಾದಯಾತ್ರೆಗೆ ಮಿರ್ಜಾನನಲ್ಲಿ ಭವ್ಯ ಸ್ವಾಗತ‌ ನೀಡಿ ಅಲ್ಲಿನ‌ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸ್ಥಳೀಯರು ಪಾದಯಾತ್ರೆಗೆ ಬೆಂಬಲ ನೀಡಿದರು. ಇಂದು ತಾಲೂಕಿನ ಬಗ್ರಿಯಲ್ಲಿ‌ ಪಾದಯಾತ್ರೆ ವಾಸ್ತವ್ಯವಾಗಲಿದೆ.

    ಕುಮಟಾ ಆಟೋ ರಿಕ್ಷಾ ಚಾಲಕರ ಬೆಂಬಲ
    ಕುಮಟಾ ನಗರಕ್ಕೆ ಆಗಮಿಸುತ್ತಿದ್ದಂತೆ ನೂರಾರು ಆಟೋ ಚಾಲಕರು ತಮ್ಮ ಆಟೋದೊಂದಿಗೆ ಸ್ಥಳಕ್ಕೆ ಧಾವಿಸಿ ಕುಮಟಾ ಪಟ್ಟಣದಿಂದ ಸ್ವಯಂಪ್ರೇರಿತರಾಗಿ ದಿವಗಿ ವರೆಗೆ ಆಗಮಿಸಿ ಭವ್ಯ ಸ್ವಾಗತ ಕೋರಿ ಅಭೂತಪೂರ್ವ ಬೆಂಬಲ ಸೂಚಿಸಿದರು.‌

  • ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

    ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

    – ಆದಿಚುಂಚನಗಿರಿ ಶ್ರೀಗಳ ಪರಿಸರ ಕಾಳಜಿಗೆ ಪ್ರಶಂಸೆ

    ಮಂಡ್ಯ: ಆಧುನೀಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಹಾಗೂ ದೇಶದಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಮಾನವನ ಆರೋಗ್ಯವೂ ಸಹ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಮರಗಳನ್ನು ಕಡಿಯದೇ ಅಭಿವೃದ್ಧಿ ಮಾಡುವುದು ಹೇಗೆ ಎಂದು ಆದಿಚುಂಚನಗಿರಿಯ ಶ್ರೀಗಳು ನಿರೂಪಿಸಿದ್ದಾರೆ.

    ರಸ್ತೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ ಹಾಗೂ ಆಧುನಿಕತೆಯ ಹೆಸರನ್ನು ಹೇಳಿಕೊಂಡು ಸರ್ಕಾರ ಹಾಗೂ ಖಾಸಗಿಯವರು ಲಕ್ಷಾಂತರ ಮರಗಳನ್ನು ಮಾರಣ ಹೋಮ ಮಾಡಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಮರಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಗಳು ಮರಗಳನ್ನು ಕಡಿಯದೆ ಅಭಿವೃದ್ಧಿ ಮಾಡುವುದು ಹೇಗೆ ಎಂದು ಸಮಾಜಕ್ಕೆ ತಿಳಿಸಲು ಮುಂದಾಗಿದ್ದಾರೆ.

    ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರ ಕಡಿಯದೆ ಅವುಗಳನ್ನು ಸಂರಕ್ಷಣೆ ಮಾಡುವ ಮೂಲಕ ಸಾಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಬಿಜಿ ನಗರದ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಎದುರು ಇದೀಗ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣ ಮಾಡುವ ಜಾಗದಲ್ಲಿ 250 ಕ್ಕೂ ಹೆಚ್ಚು ಬೆಳೆದು ನಿಂತಿರುವ ಮರಗಳು ಇವೆ. ಈ ಮರಗಳನ್ನು ಏನು ಮಾಡುವುದು ಎಂದು ಯೋಚನೆ ಮಾಡುವಾಗ ಶ್ರೀಗಳಿಗೆ ಹೊಳೆದಿರುವುದು ಮರಗಳನ್ನು ಸ್ಥಳಾಂತರ ಮಾಡುವ ಪ್ಲಾನ್.

    ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬಡವರಿಗೆ ಉಪಯೋಗವಾಗಬೇಕು ಎಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದು, ಅಲ್ಲಿ ಬೆಳೆದು ನಿಂತಿರುವ ಮರಗಳ ಜೀವವನ್ನು ಕಾಪಾಡಿದ್ದಾರೆ. ಈ ಮರಗಳನ್ನು ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಪೋಷಣೆ ಮಾಡಿದ್ದರು. ಆದ್ದರಿಂದ ಈ ಮರಗಳನ್ನು ಕಡಿಯುವುದು ಬೇಡಾ, ಈ ಮರಗಳನ್ನು ಸ್ಥಳಾಂತರ ಮಾಡೋಣ ಎಂದು ಹೇಳಿದ್ದಾರೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರು ಶ್ರೀಗಳು, ಯಂತ್ರದ ಸಹಾಯದಿಂದ ಮರಕ್ಕೆ ಪೆಟ್ಟು ಆಗದಂತೆ ಇಡೀ ಮರವನ್ನು ಬೇರು ಸಹಿತ ಕಿತ್ತು ಎರಡು ಎಕರೆ ಪ್ರದೇಶದಲ್ಲಿ ಪ್ಲಾಂಟ್ ಮಾಡಿಸುತ್ತಿದ್ದಾರೆ.

    ಆದಿಚುಂಚನಗಿರಿ ಶ್ರೀಗಳ ಈ ಪರಿಸರ ಕಾಳಜಿಗೆ ಎಲ್ಲರೂ ಸಹ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಹಾಗೂ ಖಾಸಗಿ ಅವರು ಮರಗಳ ಮಾರಣಹೋಮ ಮಾಡದೇ ಶ್ರೀಗಳ ಹಾದಿ ತುಳಿದು ಪರಿಸರ ರಕ್ಷಣೆಗೆ ಮುಂದಾಗಬೇಕಿದೆ.