Tag: Mukesh Rishi

  • ಜೇಮ್ಸ್ ಅಡ್ಡಾಗೆ ಬಾಲಿವುಡ್ ನಟ ಎಂಟ್ರಿ

    ಜೇಮ್ಸ್ ಅಡ್ಡಾಗೆ ಬಾಲಿವುಡ್ ನಟ ಎಂಟ್ರಿ

    ಬೆಂಗಳೂರು: ಯುವರತ್ನ ಸಿನಿಮಾ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿರುವ ನಟ ಪುನೀತ್ ರಾಜ್‍ಕುಮಾರ್. ಇದೀಗ ಜೇಮ್ಸ್ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದು, ಬಳ್ಳಾರಿ ಭಾಗದಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಹೀಗಾಗಿ ಸಿನಿಮಾ ಕುರಿತು ಹೆಚ್ಚು ಅಪ್‍ಡೇಟ್ ಸಿಗುತ್ತಿದೆ.

    ಇತ್ತೀಚೆಗಷ್ಟೇ ಚಿತ್ರದ ನಾಯಕಿಯಾಗಿ ಪ್ರಿಯಾ ಆನಂದ್ ಆಯ್ಕೆಯಾಗಿರುವುದು, ಅನು ಪ್ರಭಾಕರ್ ಚಿತ್ರತಂಡ ಸೇರಿರುವುದು ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ನಟ ಚಿತ್ರ ಸೇರಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬಾಲಿವುಡ್ ನಟರೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಲೆಜೆಂಡ್ ನಟರ ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಮುಖೇಶ್ ರಿಷಿ ಇದೀಗ ಮತ್ತೆ ಸ್ಯಾಂಡಲ್‍ವುಡ್‍ಗೆ ಕಮ್‍ಬ್ಯಾಕ್ ಆಗಿದ್ದು, ಜೇಮ್ಸ್ ಸಿನಿಮಾದಲ್ಲಿ ನಟಿಸಲಿದ್ದಾರೆ.

    ಬಹದ್ದೂರ್, ಭರ್ಜರಿ ಸಿನಿಮಾಗಳ ಖ್ಯಾತಿಯ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ವರ್ಷದ ಆರಂಭದಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿ ಚಿಕ್ಕ ಆ್ಯಕ್ಷನ್ ದೃಶ್ಯದ ಚಿತ್ರೀಕರಣ ನಡೆಸಿತ್ತು. ಬಳಿಕ ಕೊರೊನಾ ಹಿನ್ನೆಲೆ ಲಾಕ್‍ಡೌನ್ ಘೋಷಣೆಯಾಯಿತು. ಇದೀಗ ಮತ್ತೆ ಚಿತ್ರೀಕರಣ ಆರಂಭವಾಗಿದ್ದು, ಬಳ್ಳಾರಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

    ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಅವರೇ ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಈಗಾಗಲೇ ಶ್ರೀಕಾಂತ್, ಆದಿತ್ಯ ಮೆನನ್ ಹಾಗೂ ಅನು ಪ್ರಭಾಕರ್ ಚಿತ್ರ ತಂಡ ಸೇರಿದ್ದು, ಇದೀಗ ಮುಖೇಶ್ ರಿಷಿ ಅವರು ತಮ್ಮ ಚಿತ್ರೀಕರಣವನ್ನು ಆರಂಭಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಭಾಗವಹಿಸುತ್ತಿದ್ದಾರೆ.

    ಮುಖೇಶ್ ರಿಷಿ ವಿಲನ್ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದು, ತಮ್ಮ ರೌದ್ರ ನಟನೆಯಿಂದಲೇ ಜನಪ್ರಿಯರಾಗಿದ್ದಾರೆ. ಬಹುಭಾಷಾ ನಟರಾದ ರಿಷಿ, ಈ ಹಿಂದೆ ಹಲವು ಕನ್ನಡ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ.ವಿಷ್ಣುವರ್ಧನ್, ದರ್ಶನ್, ಗಣೇಶ್, ದುನಿಯಾ ವಿಜಯ್ ಹಾಗೂ ಕೋಮಲ್ ನಟನೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಅಪ್ಪು ಜೇಮ್ಸ್ ಶೂಟಿಂಗ್‍ನಲ್ಲಿ ತೊಡಗಿದ್ದಾರೆ. ಚೇತನ್ ಕುಮಾರ್ ಅವರು ಕೆಲ ವರ್ಷಗಳಿಂದ ಜೇಮ್ಸ್ ಕಥೆ ಬರೆಯುತ್ತಿದ್ದು, ಇದೀಗ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರ ಹೇಗೆ ಮೂಡಿ ಬರಲಿದೆ, ಯಾವ ರೀತಿಯ ಕಥೆ ಎಂಬ ಕುರಿತು ಅಪ್ಪು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದ ಬಿಡುಗಡೆ ಬಳಿಕವೇ ಇದಕ್ಕೆ ಉತ್ತರ ಸಿಗಲಿದೆ.