Tag: Mukambika Temple

  • ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಉಡುಪಿ: ಇಲ್ಲಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ತನ್ನ ಪತ್ನಿಯ ಬಹು ವರ್ಷದ ಹರಕೆ ತೀರಿಸಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಜೊತೆ ಆಗಮಿಸಿದರು. ಎರಡು ತಿಂಗಳಿಂದ ಕೊಲ್ಲೂರಿಗೆ ಬರಲು ಪ್ರಯತ್ನಿಸುತ್ತಿದ್ದ ಲಂಕಾ ಪ್ರಧಾನಿಗೆ ಇಂದು ಮೂಕಾಂಬಿಕೆಯ ಸನ್ನಿಧಿಗೆ ಬರಲು ಕಾಲ ಕೂಡಿ ಬಂದಿದೆ.

    ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶೀರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಆಗಮಿಸಿದ ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು.

    ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ – ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು.

    ಪ್ರಧಾನಿ ಪತ್ನಿ ಡಾ. ಮೈತ್ರಿ ಕೇರಳ ಮೂಲದವರು. ಕೊಲ್ಲೂರಿನಲ್ಲಿ ಡಾ. ಮೈತ್ರಿಯ ಹಿಂದಿನ ಹರಕೆ ತೀರಿಸಲು ಬಾಕಿಯಿತ್ತು. ಹೀಗಾಗಿ ಆಗಸ್ಟ್ 26 ಮತ್ತು 27ರಂದು ಕೊಲ್ಲೂರಿಗೆ ಬರಲು ಯತ್ನಿಸಿದ್ದರು. ಆದ್ರೆ ಸಿಕ್ಕಾಪಟ್ಟೆ ಮಳೆ ಮತ್ತು ಮೋಡ ಕವಿದ ಕಾರಣ ಕೊಲ್ಲೂರು ಭೇಟಿ ರದ್ಧಾಗಿತ್ತು. ಇದೀಗ ಕೊಲ್ಲೂರು ಬಂದು ದೇವಿ ದರ್ಶನ ಮಾಡಿ ಹರಕೆ ತೀರಿಸುವ ಬಯಕೆ ಪೂರ್ಣಗೊಂಡಿದೆ.

  • ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಉಡುಪಿ: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಭಾನುವಾರದ ಉಡುಪಿ ಪ್ರವಾಸ ರದ್ದಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಲಂಕಾ ಪ್ರಧಾನಿಯವರ ಪ್ರವಾಸ ರದ್ದಾಗಿದೆ.

    ಬೆಂಗಳೂರಿನಲ್ಲಿ ಶನಿವಾರದಿಂದ ತಂಗಿರುವ ರಾನಿಲ್ ವಿಕ್ರಮಸಿಂಘೆ ಅವರು ಇಂದು ಕೊಲ್ಲೂರು ದೇವಿಯ ದರ್ಶನ ಮಾಡಿ, ನವಚಂಡಿ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಕಳೆದ ರಾತ್ರಿ ನವಚಂಡಿಯಾಗಕ್ಕೆ ದೇವಳದ ಅರ್ಚಕರು ಸಿದ್ಧತೆ ಮಾಡಿದ್ದು ಪಾರಾಯಣ- ಹೋಮಗಳನ್ನು ತಯಾರಿ ಮಾಡಿದ್ದರು.

    ಇಂದು ಪೂರ್ಣಾಹುತಿಗೆ ಎಲ್ಲಾ ಸಿದ್ಧತೆ ನಡೆದಿತ್ತು. ಹೆಲಿಪ್ಯಾಡ್‍ನಿಂದ 15 ಕಿಮೀ ದೂರದ ಕೊಲ್ಲೂರಿನವರೆಗೆ ಹೈ ಸೆಕ್ಯೂರಿಟಿ ನೀಡಲಾಗಿತ್ತು. ಆದರೆ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಕುಂದಾಪುರದ ಅರೆ ಶಿರೂರಿನಲ್ಲಿ ಹೆಲಿಕಾಪ್ಟರ್ ಇಳಿಯಲು ಏರ್ ಫೋರ್ಸ್ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿರಲಿಲ್ಲ.

    ಇತ್ತ ಕೊಲ್ಲೂರಿನಲ್ಲಿ ಪ್ರಧಾನ ಅರ್ಚಕರೇ ಶ್ರೀಲಂಕಾ ಪ್ರಧಾನಿಗಳ ಹೆಸರಿನಲ್ಲಿ ಪೂರ್ಣಾಹುತಿ ಮಾಡಿದರು. ರಾನಿಲ್ ವಿಕ್ರಮ್‍ಸಿಂಘೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು ಸೋಮವಾರ ಕೊಲ್ಲೂರಿಗೆ ಬರುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಳಿದ್ದಾರೆ ಎನ್ನಲಾಗಿದೆ.

    ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದೆರಡು ದಿನಗಳಿಂದ ಸಿದ್ಧತೆ ಮಾಡಿ ಇಂದು ಮಧ್ಯಾಹ್ನದವರೆಗೆ ಕಾದು ವಾಪಸ್ ಆದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ನಾವು ಎಲ್ಲಾ ಭದ್ರತಾ ವ್ಯವಸ್ಥೆ ಮಾಡಿದ್ದೆವು. ಮೋಡ, ಮಳೆಯ ಕಾರಣ ಏರ್ ಫೋರ್ಸ್ ಅಧಿಕಾರಿಗಳು ಸಮ್ಮತಿ ಸೂಚಿಸಲಿಲ್ಲ ಎಂದರು.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಉಪ್ಪುಂದ ಮಾತನಾಡಿ, ಪ್ರಧಾನಿಗಳ ಪರವಾಗಿ ಹೋಮ, ನವಚಂಡಿ ಮಹಾಯಾಗ ದೇವಿಗೆ ಸಲ್ಲಿಕೆಯಾಗಿದೆ. ವಿಶೇಷ ಪೂಜೆಯನ್ನೂ ಸಮರ್ಪಿಸಲಾಗಿದೆ ಎಂದು ಹೇಳಿದರು.