Tag: mudhol

  • 88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    – ಸಚಿವ ತಿಮ್ಮಾಪೂರ್ ವಿರುದ್ಧ ವಿದ್ಯಾರ್ಥಿನಿ‌ ಬಹಿರಂಗ ಅಸಮಾಧಾನ
    – ಅನರ್ಹರಿಗೆ ಬಿಸಿಎಂ ಹಾಸ್ಟೆಲ್ ಸೀಟ್‌ ಸಿಕ್ಕಿದ್ದು ಹೇಗೆ?
    – ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು

    ಬಾಗಲಕೋಟೆ: ಉತ್ತಮ ಅಂಕ ಪಡೆದರೂ ಬಿಸಿಎಂ ಹಾಸ್ಟೆಲ್‌ (BCM Hostel) ಸಿಗದ್ದಕ್ಕೆ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಸಚಿವರ ಸ್ವಕ್ಷೇತ್ರ ಮುಧೋಳ (Mudhol) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

    ಪೆಟ್ಲೂರ ಗ್ರಾಮದ ಬಡ ಕುಟುಂಬದ ಐಶ್ವರ್ಯ ಪಾಯಗೊಂಡ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ 88% ಅಂಕ ಪಡೆದಿದ್ದಳು. ನಂತರ ಪ್ರಥಮ ಪಿಯು ವಿಜ್ಞಾನ ವಿಭಾಗಕ್ಕೆ ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು.

    ಮನೆಯಿಂದ ಕಾಲೇಜಿಗೆ ಹೋಗಲು ದೂರ ಇರುವ ಕಾರಣ ಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಹಾಕಿದ್ದಾಳೆ. ಆದರೆ ಅಧಿಕಾರಿಗಳು ಆಕೆಗೆ ಪ್ರವೇಶ ನೀಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿ ಪೆಟ್ಟೂರ್‌ನಿಂದ ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡಿ ಕಾಲೇಜಿಗೆ ಹೋಗುತ್ತಿದ್ದಳು.

    ಕೆಲ ದಿನಗಳ ಹಿಂದೆ ಮುಧೋಳ ತಾಲೂಕಿನ ಹೆಬ್ಬಾಳದ ಪಿಕೆಪಿಎಸ್ ವಾರ್ಷಿಕ ಸಾಧಾರಣ ಸಭೆಯಲ್ಲಿ ಐಶ್ವರ್ಯಾಗೆ ಸನ್ಮಾನವನ್ನು ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸುವ ಮೊದಲು ತನ್ನ ಸಾಧನೆಯ ಬಗ್ಗೆ ಮಾತನಾಡಲು ಐಶ್ವರ್ಯಾ ವೇದಿಕೆಗೆ ಆಗಮಿಸಿದ್ದಾಳೆ. ವೇದಿಕೆ ಆಗಮಿಸಿದ ಆಕೆ ಹಾಸ್ಟೆಲ್‌ ರಾಜಕೀಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸಿಟ್ಟು ಹೊರ ಹಾಕಿದ್ದಾಳೆ. ಈಕೆಯ ಭಾಷಣದ ವಿಡಿಯೋ ಈಗ ವೈರಲ್‌ ಆಗುತ್ತಿದ್ದಂತೆ ವಿದ್ಯಾರ್ಥಿನಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ:  ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ

     

    ವಿದ್ಯಾರ್ಥಿನಿ ಹೇಳಿದ್ದೇನು?
    ನಾನು ಅತ್ಯಂತ ಬಡಕುಟುಂಬದ ಮಗಳು, ಅಂತಹ ಬಡ ಕುಟುಂಬದಲ್ಲಿ ಓದಿ ಒಳ್ಳೆಯ ಅಂಕ ಪಡೆದಿದ್ದೇನೆ. ಆದರೂ ನನಗೆ ಹಾಸ್ಟೆಲ್‌ ಸೀಟ್ ಸಿಗಲಿಲ್ಲ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ.

    ಹಾಸ್ಟೆಲ್‌ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ ತಿಮ್ಮಾಪುರ ಸಾಹೇಬ್ರು ಹೇಳಿದ್ರೆ ಮಾತ್ರ ಆಯ್ಕೆ ಮಾಡುತ್ತೇವೆ. ತಿಮ್ಮಾಪುರ ಸಾಹೇಬರ ಆಫೀಸಿಗೆ ಹೋದರೆ ನಮ್ಮನ್ನು ಮಾತನಾಡಿಸಲೇ ಇಲ್ಲ. 50- 55% ಅಂಕ ಪಡೆದವರಿಗೆ ಹಾಸ್ಟೆಲ್‌ ಸಿಕ್ಕಿದೆ. ಆದರೆ 90-95% ಅಂಕ ಪಡೆದವರು ಬಸ್ಸಿನಲ್ಲಿ ಹೋಗುತ್ತಿದ್ದೇವೆ.

    ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಕನಸು ಕನಸಾಗಿಯೇ ಉಳಿಯುತ್ತಿದೆ. ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು ಎಂದು‌ ಸನ್ಮಾನ ತಿರಸ್ಕರಿಸಿದ್ದಾಳೆ.

  • ಅಮೆರಿಕದಲ್ಲಿ ಕುಳಿತು ಮುಧೋಳದ ಮನೆ ಕಳ್ಳತನ ತಪ್ಪಿಸಿದ ಟೆಕ್ಕಿ ಪುತ್ರಿ!

    ಅಮೆರಿಕದಲ್ಲಿ ಕುಳಿತು ಮುಧೋಳದ ಮನೆ ಕಳ್ಳತನ ತಪ್ಪಿಸಿದ ಟೆಕ್ಕಿ ಪುತ್ರಿ!

    ಬಾಗಲಕೋಟೆ: ಟೆಕ್ಕಿ ಯುವತಿಯೊಬ್ಬರು ಅಮೆರಿಕದಲ್ಲಿ ಕುಳಿತೇ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿ ಸುದ್ದಿಯಾಗಿದ್ದಾರೆ.

    ಮುಧೋಳ ನಗರದ ಸಿದ್ರಾಮೇಶ್ವರ ಕಾಲೋನಿಯಲ್ಲಿ ನೆಲೆಸಿರುವ ನಿವೃತ್ತ ಎಂಜಿನಿಯರ್‌ ಹನಮಂತಗೌಡ ಅವರ ಪುತ್ರಿ ಶೃತಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ವಿದೇಶದಲ್ಲಿದ್ದರೂ ಸಮಯಪ್ರಜ್ಞೆ ಮೆರೆಯುವ ಮೂಲಕ ಮನೆಗೆ ನುಗ್ಗಿದ್ದ ಕಳ್ಳರನ್ನು ಓಡಿಸುವಲ್ಲಿ ಶೃತಿ ಯಶಸ್ವಿಯಾಗಿದ್ದಾರೆ.  ಇದನ್ನೂ ಓದಿ: ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

     

    ಏನಿದು ಘಟನೆ?
    ಕೆಲ ವರ್ಷಗಳ ಹಿಂದೆ ಸ್ವದೇಶ ಆಗಮಿಸಿದ್ದಾಗ ಶೃತಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಳವಡಿಸಿದ್ದು ಮಾತ್ರವಲ್ಲ ಅದರ ದೃಶ್ಯ ತನ್ನ ಮೊಬೈಲಿಗೆ ಬರುವಂತೆ ಸಿಂಕ್‌ ಮಾಡಿದ್ದರು.

    ಮಂಗಳವಾರ ತಡರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಚಡ್ಡಿ ಗ್ಯಾಂಗ್ ಇಬ್ಬರು ಹನಮಂತಗೌಡ ಸಂಕಪ್ಪನವರ್ ಮನೆಗೆ ನುಗ್ಗಿದ್ದಾರೆ. ಮುಧೋಳದಲ್ಲಿ ಮಧ್ಯರಾತ್ರಿ ಆಗಿದ್ದರೆ ಅಮೆರಿಕದಲ್ಲಿ ಮಧಾಹ್ನದ 3:30ರ ಸಮಯವದು. ಹೀಗೆ ಮೊಬೈಲ್‌ ನೋಡುತ್ತಿದ್ದಾಗ ಮನೆಗೆ ಕಳ್ಳರು ನುಗ್ಗಿದ ದೃಶ್ಯವನ್ನು ನೋಡಿ ಕೂಡಲೇ ಶೃತಿ ಪೋಷಕರಿಗೆ ಕರೆ ಮಾಡಿದ್ದಾರೆ.

    ತಕ್ಷಣ ಎಚ್ಚೆತ್ತ ಪೋಷಕರು ಬಾಗಿಲು ತೆರೆಯದೇ ಮನೆಯ ಎಲ್ಲಾ ದೀಪ ಆನ್‌ ಮಾಡಿ ಕೂಗಾಡಿದ್ದಾರೆ. ದಿಢೀರ್‌ ಮನೆಯ ಲೈಟ್‌ ಆನ್‌ ಆಗಿದ್ದನ್ನು ಕಂಡು ಕಳ್ಳರು ಶಾಕ್‌ಗೆ ಒಳಗಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ.  ಇದನ್ನೂ ಓದಿ: ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

    ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಜೋರಾಗಿದೆ. ಕಳ್ಳರನ್ನ ಹುಡುಕಿ ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

  • ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!

    ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!

    – ಮುಧೋಳ  ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಗೆ ಬರುತ್ತಿಲ್ಲ ಜನ
    – ನಗರದಿಂದ 3 ಕಿ.ಮೀ ದೂರದಲ್ಲಿದೆ ಆಫೀಸ್‌

    ಬಾಗಲಕೋಟೆ: ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಎನ್ನುವ ಕನಸು, ಆಸೆ ಎಲ್ಲ ಹಿಂದುಳಿದ ವರ್ಗದವರಿಗೂ ಇರುತ್ತದೆ. ಆದರೆ ಮೂರು ಮೈಲಿ ದೂರದಲ್ಲಿರುವ ಕಚೇರಿ ತಲುಪುವುದೇ ಹರಸಾಹಸ. ಕಚೇರಿ ಮೆಟ್ಟಿಲು ಹತ್ತುವುದೊರಳಗೆ ಸಾಕಪ್ಪ ಸಾಕು ಎನಿಸಿ ಬಿಡುತ್ತದೆ.

    ಹೌದು, ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ, ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಅದರಲ್ಲೂ ಹಿಂದುಳಿದವರಿಗಾಗಿ ಮೀಸಲಿರುವ ಹಿಂದುಳಿದ ವರ್ಗಗಳ ತಾಲೂಕ ಕಚೇರಿಯ ಕಥೆ-ವ್ಯಥೆ ಇದು. ಮುಧೋಳ (Mudhol) ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCM Office) ಕಛೇರಿಯ ಸ್ಥಿತಿ ಇದು. ನಗರದ ಪ್ರಮುಖ ಜನ ವಸತಿ ಪ್ರದೇಶ, ಪ್ರಮುಖ ಬೀದಿಗಳಲ್ಲಿ ಇರಬೇಕಿದ್ದ ಇಲಾಖೆ ಕಚೇರಿ, ನಗರದಿಂದ ಬರೋಬ್ಬರಿ 3 ಕಿ.ಮೀ ದೂರದಲ್ಲಿದೆ. ಇದು ಸಾರ್ವಜನಿಕರಿಗೆ ವರದಾನ ಆಗುವ ಬದಲು ನತದೃಷ್ಟ ಇಲಾಖೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ.

    ಅತೀ ಹೆಚ್ಚಿನ ಪ್ರಮಾಣದಲ್ಲಿ ಯೋಜನೆಗಳು ಇರುವುದೇ ಹಿಂದುಳಿದ ವರ್ಗಗಗಳ ಇಲಾಖೆಯಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣ, ವಸತಿ, ರೈತರಿಗೆ ಗಂಗಾ ಕಲ್ಯಾಣ ಸೇರಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಮುಧೋಳ ತಾಲೂಕಿನಲ್ಲಿ ಹತ್ತಾರು ಸರ್ಕಾರಿ ವಸತಿ ನಿಲಯಗಳು ಈ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಸ್ವಂತ ಜಾಗ, ಕಟ್ಟಡ ಹೊಂದಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎನ್ನುವುದೇ ದುರಂತದ ಸಂಗತಿ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

    ಬೀಳಗಿ, ಗಲಗಲಿ ರಸ್ತೆ ಪಕ್ಕದ ಸೈಯದಸಾಬ ದರ್ಗಾ ಹಿಂಭಾಗದಲ್ಲಿರುವ ದೇವರಾಜ ಅರಸು ಭವನ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅದು ಕೂಡ ಕಳಪೆ ಕಟ್ಟಡ ಎನ್ನುವುದು ಕಚೇರಿ ಒಳಗೆ ಕಾಲಿಟ್ಟರೆ ಸಾಕು ಗೋಡೆಗಳೇ ಸಾರಿ ಸಾರಿ ಹೇಳುತ್ತವೆ. ಈ ಕಚೇರಿ ತಲುಪಬೇಕಾದರೆ ಸ್ವಂತ ವಾಹನ ಖಂಡಿತ ಬೇಕು. ಇಲ್ಲವಾದಲ್ಲಿ ಕಾಲ್ನಡಿಗೆಯಲ್ಲಿ ಕನಿಷ್ಠ ಮೂರು ಕಿಲೋ ಮೀಟರ್ ನಡೆದೇ ಸಾಗಬೇಕು. ಕಚೇರಿ ತಲುಪಬೇಕಾದ್ರೆ ಸರ್ಕಾರಿ ಬಸ್, ವಾಹನದ ಸೌಲಭ್ಯ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ಈ ಕಚೇರಿಯನ್ನೇ ಅವಲಂಬಿಸಿದ್ದಾರೆ.

    ಕಚೇರಿ ಸ್ಥಳ ಪತ್ತೆ ಮಾಡಲು ಪರದಾಡುವುದನ್ನು ನೋಡಿದರ ಅಯ್ಯೋ ಭಗವಂತ ಯಾಕ ಬೇಕು ಹರಸಾಹಸ ಅಂತ ಅನಿಸಿ ಬಿಡುತ್ತದೆ. ನಿರ್ಜನ ಪ್ರದೇಶವಾಗಿರುವುದರಿಂದ ಆಟೋ ಸಂಚಾರ ದುರ್ಲಭ. ಜನಸಂದಣಿ ಇಲ್ಲದಿರುವುದು ಮತ್ತು ಪಕ್ಕದಲ್ಲಿ ಸ್ಮಶಾನ, ಕಲ್ಲಿನ ಕಣಿವೆಗಳು ಇರುವುದರಿಂದ ಒಂಟಿಯಾಗಿ ಮಹಿಳೆಯರು, ವಯೋವೃದ್ಧರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಚೇರಿಗೆ ಹೋಗಲು ಭಯ ಪಡುತ್ತಿದ್ದಾರೆ. ಕಚೇರಿ ಒಳಪ್ರವೇಶ ಮಾಡಲು ಅಂಗವಿಕಲರಿಗೆ ಬಹಳಷ್ಟು ತೊಂದರೆ ಎದುರಾಗುತ್ತದೆ. ಅವರ ಗೋಳಾಟ ದೇವರೇ ಬಲ್ಲ. ಕಚೇರಿಗೆ ದೂರವಾಣಿ ಸಂಪರ್ಕವೂ ಇಲ್ಲ. ಕಚೇರಿಯಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ನಿಷ್ಕಾಳಜಿ, ಅಸಮರ್ಪಕ ಕಾರ್ಯನಿರ್ವಹಣೆ ಬೇಸರ ಉಂಟು ಮಾಡುತ್ತದೆ. ಆಡಳಿತ ವ್ಯವಸ್ಥೆ ಜನರಿಗೆ ಹತ್ತಿರವಿರಲಿ ಅಂತ ಸರ್ಕಾರ ಬಯಸುತ್ತಿದೆ. ಆದರೆ ಮುಧೋಳ ಹಿಂದುಳಿದ ವರ್ಗಗಳ ಇಲಾಖೆ ಜನರ ಸೇವೆಯಿಂದ ಬಹು ದೂರವಾಗುತ್ತಿದೆ.

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಚೇರಿ ನಗರದಿಂದ ಮೂರು ಕಿ.ಮೀ. ದೂರದಲ್ಲಿದೆ. ಪಕ್ಕದಲ್ಲಿ ಸ್ಮಶಾನ, ಕಲ್ಲಿನ ಕ್ವಾರಿ ಇದೆ. ಜನರ ಓಡಾಟ ಇಲ್ಲವೇ ಇಲ್ಲ. ಸೌಲಭ್ಯ ಪಡೆಯಲು ಹರಸಾಹಸ ಪಡಬೇಕು. ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವೆ ಬಂದ್ ಮಾಡುವುದು ಒಳಿತು ಎಂದು ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.

  • ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆಗಳು ಜಲಾವೃತ

    ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆಗಳು ಜಲಾವೃತ

    ಬಾಗಲಕೋಟೆ: ಮಹಾರಾಷ್ಟ್ರ (Maharashtra) ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ (Ghataprabha River) ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿ ದಡದ ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ.

    ಮುಧೋಳ (Mudhol) ತಾಲೂಕಿನ ಘಟಪ್ರಭಾ ನದಿ ದಡದ ಅಂತಾಪುರ ಕಿರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಬಂದ್ ಆಗಿದೆ. ಕಿರು ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದು ಅಂತಾಪುರದಿಂದ ನದಿ ಆಚೆಗಿನ ಬೇರೆ ಗ್ರಾಮಗಳಿಗೆ ಓಡಾಡಲು ಜನರಿಗೆ ಸಮಸ್ಯೆಯಾಗಿದೆ. ಇದನ್ನೂ ಓದಿ: ದಾವಣಗೆರೆ | ಕಡಿಮೆ ಬೆಲೆಗೆ ಕಾಲು ಕೆಜಿ ಚಿನ್ನದ ನಾಣ್ಯ ನೀಡುವುದಾಗಿ 5 ಲಕ್ಷ ವಂಚಿಸಿ ಪರಾರಿ

    ನದಿ ದಡದ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು ರೈತರು ಬೆಳೆದ ಬೆಳೆಗಳು ನೀರಿಗೆ ಆಹುತಿಯಾಗುತ್ತಿವೆ. ಒಟ್ಟು ಘಟಪ್ರಭಾ ನದಿದಡದ11 ಕಿರು ಸೇತುವೆಗಳು ಮುಳುಗಡೆಯಾಗಿ ಆ ಭಾಗದ ಜನರಿಗೆ ಪ್ರವಾಹದ ಆತಂಕ ಮನೆ ಮಾಡಿದೆ.

  • ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆಗಳು ಜಲಾವೃತ ಸಾಧ್ಯತೆ

    ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆಗಳು ಜಲಾವೃತ ಸಾಧ್ಯತೆ

    ಬಾಗಲಕೋಟೆ: ಘಟಪ್ರಭಾ ನದಿಗೆ (Ghataprabha River) ಅಪಾರ ನೀರು ಹರಿದುಬರುತ್ತಿದ್ದು, ಮುಧೋಳ (Mudhol) ತಾಲೂಕಿನ ಸೇತುವೆಗಳು ಜಲಾವೃತವಾಗುವ ಸಾಧ್ಯತೆ ಇದೆ.

    ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ (Belagavi District) ಸುರಿಯುತ್ತಿರುವ ಭಾರೀ ಮಳೆಯಿಂದ (Rain) ಘಟಪ್ರಭಾ ನದಿ ಮೈದುಂಬಿ ಹರಿಯು ತ್ತಿದೆ. ಬೆಳಗಾವಿ ಜಿಲ್ಲೆಯಿಂದ ನದಿಗೆ 17 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಇದನ್ನೂ ಓದಿ: ಕೃಷ್ಣೆಯಲ್ಲಿ ಒಳ ಹರಿವು ಹೆಚ್ಚಳ – ನದಿ ತೀರದಲ್ಲಿ ಪ್ರವಾಹ ಭೀತಿ

     

    ಬುಧವಾರ 10 ಸಾವಿರ ಕ್ಯೂಸೆಕ್‌ ಬರುತ್ತಿದ್ದರೆ ಗುರುವಾರ ಇದು 17 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ ನಂದಗಾಂವ ಸೇತುವೆ ಜಲಾವೃತವಾಗಿದ್ದು, ಮಿರ್ಜಿ ಬಳಿಯ ಸೇತುವೆ ಜಲಾವೃತವಾಗುವ ಸಾಧ್ಯತೆಯಿದೆ. ಮುಧೋಳ ತಾಲೂಕಿನ 12 ಸೇತುವೆಗಳಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.

    ಘಟಪ್ರಭಾ ನದಿಗೆ 25 ಸಾವಿರ ಕ್ಯುಸೆಕ್‌ಗಿಂತ ಹೆಚ್ಚಿನ ನೀರು ಹರಿದುಬಂದರೆ ಎರಡ್ಮೂರು ದಿನಗಳಲ್ಲಿ ಪ್ರವಾಹ ಎದುರಾಗಲಿದೆ. ಮಾಚಕನೂರ, ಮಿರ್ಜಿ, ಚನಾಳ, ಜಾಲಿಬೇರಿ, ಯಡಹಳ್ಳಿ, ಇಂಗಳಗಿ ಗ್ರಾಮ ಗಳು ಮೊದಲ ಹಂತದಲ್ಲಿ ಜಲಾವೃತವಾಗಲಿವೆ. ತಾಲೂಕು ಆಡಳಿತದಿಂದ ನೀರಿನ ಮಟ್ಟದ ಮೇಲೆ ನಿಗಾ ವಹಿಸಲಾಗಿದ್ದು, ಪ್ರವಾಹ ಸ್ಥಿತಿ ಎದುರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

  • ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

    ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

    ಬಾಗಲಕೋಟೆ: ವಿಜ್ಞಾನ ಪರೀಕ್ಷೆಯಲ್ಲಿ (Science Exam) ವಿದ್ಯಾರ್ಥಿನಿ ನಕಲು ಮಾಡಿ ಸಿಕ್ಕು ಬಿದ್ದು, ಪೋಷಕರ‌ ಸಮ್ಮುಖದಲ್ಲಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ (Student) ಕೆರೆ ನೀರಿಗೆ ಬಿದ್ದು ಜೀವ ಬಿಟ್ಟಿರುವ ಘಟನೆ ಮುಧೋಳ (Mudhol) ನಗರದಲ್ಲಿ ನಡೆದಿದೆ.

    ಶಾರದಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷ ಓದುತ್ತಿದ್ದ ತೇಜಸ್ವಿನಿ ದೊಡಮನಿ ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಜಾತ್ರೆಯಲ್ಲಿ ಕೇಂದ್ರ ಸಚಿವರ ಮಗಳಿಗೆ ಕಿರುಕುಳ – ಓರ್ವ ಆರೋಪಿ ಬಂಧನ

     

    ಫೆ.27 ರಂದು ಕಾಲೇಜಿನಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ನಕಲು (Copy) ಮಾಡುವ ತೇಜಸ್ವಿನಿ ಸಿಕ್ಕಿ ಬಿದ್ದಿದ್ದಳು. ಕೂಡಲೇ ಸಿಬ್ಬಂದಿ ತೇಜಸ್ವಿನಿಯನ್ನು ಪ್ರಶ್ನೆ ಮಾಡಿ ಬುದ್ಧಿವಾದ ಹೇಳಿದ್ದರು.

    ಬುದ್ಧಿವಾದ ಹೇಳಿದ ವಿಚಾರವನ್ನು ತೇಜಸ್ವಿನಿ ಮನೆಗೆ ಬಂದು ತಿಳಿಸಿದ್ದಾಳೆ. ವಿಚಾರ ತಿಳಿದ ಪೋಷಕರು ಮರುದಿನ ಶಾಲೆಗೆ ಬಂದು ಮಗಳನ್ನು ಪ್ರಶ್ನಿಸಿದ್ದು ಯಾಕೆ ಎಂದು ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ಪರೀಕ್ಷೆಯಲ್ಲಿ ಆಕೆ ನಕಲು ಮಾಡುತ್ತಿದ್ದಳು ಎಂಬ ವಿಚಾರವನ್ನು ತಿಳಿಸುತ್ತಾರೆ.

     

    ಸಿಬ್ಬಂದಿ ಹೇಳಿದರೂ ತೇಜಸ್ವಿನಿ ನಾನು ನಕಲು ಮಾಡಿಲ್ಲ ಎಂದು ವಾದಿಸಿದ್ದಾಳೆ. ಈ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮೆರಾ ಪರೀಕ್ಷಿಸಲು ಮುಂದಾದಾಗ ಕಾಲೇಜಿನಿಂದಲೇ ತೇಜಸ್ವಿನಿ ಓಡಿ ಹೋಗಿದ್ದಳು. ಈ ಬಗ್ಗೆ ತೇಜಸ್ವಿನಿ ಪೋಷಕರು ಮುಧೋಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

    ಇಂದು ತೇಜಸ್ವಿನಿ ನಗರದ ಮಹಾರಾಣಿ ಕರೆಯಲ್ಲಿ ಶವವಾಗಿ‌ ಪತ್ತೆಯಾಗಿದ್ದಾಳೆ. ತನಿಖೆ ನಡೆಸಿದ ಪೊಲೀಸರು ಕಾಲೇಜಿನಿಂದ ಹೊರಹೋದ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ತೇಜಸ್ವಿನಿ ವೇಗವಾಗಿ ಕೆರೆ ಕಡೆ ಹೆಜ್ಜೆ ಹಾಕುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗ ತೇಜಸ್ವಿನಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

     

  • ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ

    ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ

    ಬಾಗಲಕೋಟೆ: ಮನೆಗಳ್ಳರ ಹಾವಳಿ‌ಗೆ ಬೇಸತ್ತ ಮಹಿಳೆಯರು ಒನಕೆ ಓಬವ್ವನ (Onake Obavva) ರೂಪ ತಾಳಿ ಗಮನ ಸೆಳೆದಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ‌ ಮುಧೋಳ ನಗರದಲ್ಲಿ ನಡೆದಿದೆ.

    ನಗರದ ಜಯನಗರ ನಿವಾಸಿಗಳೇ ಓಬವ್ವನ ರೂಪ ತಾಳಿದ ಮಹಿಳೆಯರು. ಕಳ್ಳರ‌ ಕಾಟದಿಂದ ಬೇಸತ್ತ ಮಹಿಳೆಯರು, ರಾತ್ರಿಪೂರ್ತಿ ಬಡಿಗೆ ಹಿಡಿದು ಬಡಾವಣೆಯಲ್ಲಿ ಗಸ್ತು ತಿರುಗಿ ಗಮನ ಸೆಳೆದಿದ್ದಾರೆ.

     

    ಕಳೆದ ಒಂದು ತಿಂಗಳಲ್ಲಿ ಜಯನಗರದಲ್ಲಿ ಎರಡು ಮನೆಗಳ ಕಳ್ಳತನವಾಗಿದ್ದರೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕಳ್ಳತನದ (Theft) ಪ್ರಕರಣಗಳು ದಾಖಲಾಗಿವೆ. ಇದರಿಂದ ಅಲರ್ಟ್ ಆದ ಮಹಿಳೆಯರು ಪೊಲೀಸರನ್ನು ನಂಬದೇ, ರಾತ್ರಿ ಪೂರ್ತಿ ಬಡಿಗೆ ಹಿಡಿದು ತಮ್ಮ ಬಡಾವಣೆ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ಬಡಾವಣೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಬಂದರೆ ವಿಚಾರಿಸಿ ನಂತರ ಅವರನ್ನು ಬಡಾ ವಣೆ ಒಳಗಡೆ ಬಿಟ್ಟುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಜಯನಗರ ಬಡಾವಣೆಯಲ್ಲಿ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳ ಥಳಿಸಿ ಪೊಲೀಸರಿಗೂ ಒಪ್ಪಿಸಿದ್ದಾರೆ.

  • 3ರ ಬಾಲೆಯ ಕೆನ್ನೆಗೆ ಸೌಟ್‌ನಲ್ಲಿ ಬರೆ – ಅಂಗನವಾಡಿ ಸಿಬ್ಬಂದಿ ಅಮಾನತು

    3ರ ಬಾಲೆಯ ಕೆನ್ನೆಗೆ ಸೌಟ್‌ನಲ್ಲಿ ಬರೆ – ಅಂಗನವಾಡಿ ಸಿಬ್ಬಂದಿ ಅಮಾನತು

    ಬಾಗಲಕೋಟೆ: ಮೂರು ವರ್ಷದ ‌ಬಾಲಕಿಯ ಕೆನ್ನೆಗೆ ಬರೆ ಹಾಕಿದ್ದಕ್ಕೆ ಮುಧೋಳ (Mudhol) ತಾಲೂಕಿನ ಗುಲಗಾ ಜಂಬಗಿ ಗ್ರಾಮದ ಅಂಗನವಾಡಿ (Anganwadi) ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿದೆ.

    ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಪುಟಾಣಿ ಮಗುವಿನ ಕೆನ್ನೆಯ ಮೇಲೆ ಶಾರವ್ವ ಪಂಚಗಾವಿ ಅಡುಗೆ ಮಾಡುವ ಸೌಟಿನಿಂದ ಕೆನ್ನೆಗೆ ಬರೆ ಎಳೆದಿದ್ದಳು. ಮನೆಗೆ ಬಂದ ಮಗಳ ಮುಖವನ್ನು ನೋಡಿ ಸಿಟ್ಟಾದ ತಂದೆ ಪ್ರದೀಪ್ ಬಾಗಲಿ ಅವ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಇದನ್ನೂ ಓದಿ: ಶೃಂಗೇರಿ ಅರಣ್ಯದಲ್ಲಿ ಹೂತಿಟ್ಟಿದ್ದ ಬಂದೂಕು, ಸಜೀವ ಗುಂಡುಗಳು ಪತ್ತೆ!

    ಈ ದೂರು ಆಧರಿಸಿ ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗುಲಗಾ ಜಂಬಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಬಾಲಕಿ ಕೆನ್ನೆಗೆ ಬರೆ ಎಳೆದಿದ್ದು ದೃಢಪಟ್ಟಿದೆ.

    ಕರ್ತವ್ಯ ನಿರ್ಲಕ್ಷ್ಯ ಎಸಗಿದ ಕಾರಣ ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಅಮಾನತು ಮಾಡಲಾಗಿದೆ.

  • ಮಕ್ಕಳೇ ನಮ್ಮನ್ನು ಕ್ಷಮಿಸಿ – ಘಟಪ್ರಭಾ ಸೇತುವೆಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

    ಮಕ್ಕಳೇ ನಮ್ಮನ್ನು ಕ್ಷಮಿಸಿ – ಘಟಪ್ರಭಾ ಸೇತುವೆಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

    ಬಾಗಲಕೋಟೆ: ಸಾಲಭಾದೆ ತಾಳಲಾರದೇ ದಂಪತಿ (Couple) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಜರುಗಿದೆ.

    ಮೃತರನ್ನ ಮಲ್ಲಪ್ಪ ಲಾಳಿ(56), ಮಹಾದೇವಿ(51) ಆತ್ಮಹತ್ಯೆಗೆ ಶರಣಾದ ದಂಪತಿಗಳು. ಘಟಪ್ರಭಾ ನದಿಗೆ (Ghataprabha River) ಅಡ್ಡಲಾಗಿ ನಿರ್ಮಿಸಿರುವ ಯಾದಬಾಡ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

     

    ದಂಪತಿ ಒಂದು ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ‌ ನಡೆಸುತ್ತಿದ್ದರು. ಈ ಮೃತ ದಂಪತಿಗೆ ಇಬ್ಬರು‌ ಮಕ್ಕಳಿದ್ದರು. ಮಕ್ಕಳ ಮದುವೆಗಾಗಿ ದಂಪತಿ ಅಲ್ಲಲ್ಲಿ ಸಾಲ ಮಾಡಿದ್ದರು. ಸಾಲ ನೀಡಿದವರ ಕಿರುಕುಳ ತಾಳಲಾರದೇ ದಂಪತಿ ಬುಧವಾರ ರಾತ್ರಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗೆ ಹಗ್ಗಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್‌ ಅಲಿಗೆ ಹೇಳಿದ್ದೇನು?

    ಡೆತ್‌ ನೋಟ್ ಮುಧೋಳ ಪೊಲೀಸರ ಕೈ ಸೇದಿದೆ. ಇದರಲ್ಲಿ ಸಾಲ ಕೊಟ್ಟು ಕಿರುಕುಳ ನೀಡಿದವರ ಹೆಸರುಗಳ‌ ಮಾಹಿತಿ ನೀಡಿದ್ದಾರೆ. ಕೊನೆಗೆ ಮಕ್ಕಳಿಗೆ “ನಮ್ಮನ್ನು ಕ್ಷಮಿಸಿ” ಎಂದು ಬರೆದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮುಧೋಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

     

  • ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು

    ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು

    – ನ.17 ರಂದು ನಿಗದಿಯಾಗಿದೆ ಸಹಕಾರ ಸಪ್ತಾಹ ಕಾರ್ಯಕ್ರಮ
    – 5ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ

    ಬಾಗಲಕೋಟೆ: ಕಬ್ಬಿಗೆ ಏಕರೂಪ ಬೆಲೆ ನಿಗದಿ (Uniform Price For Sugarcane) ಹಾಗೂ ಬಾಕಿ ಹಣ ಪಾವತಿಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ (Mudhol) ತಾಲೂಕಿನ ರೈತರು (Farmers) ನಡೆಸುತ್ತಿರುವ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದೆ.

    ಬೆಲೆ ನಿಗದಿ ಮಾಡಿ ಕಾರ್ಖಾನೆಗಳನ್ನು ಆರಂಭಮಾಡಿ ಎಂಬ ರೈತರ ಅಗ್ರಹಕ್ಕೆ ಮಣಿಯದ ಕಾರ್ಖಾನೆ ಮಾಲೀಕರು ಇದೇ ತಿಂಗಳ 8 ರಿಂದಲೇ ಕಾರ್ಯಾರಂಭ ಶುರುಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು‌ 4 ದಿನಗಳಿಂದ ಮುಧೋಳ ನಗರದ ರಾಯಣ್ಣ ಸರ್ಕಲ್‌ ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

     

    ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ (Bagalkot) ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಪ್ರತಿಭಟನೆ ಮಾಡಿದ್ದ ರೈತರು, ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದರು. ಆದರೆ ರೈತರ ಪ್ರತಿಭಟನೆಗೆ ಜಗ್ಗದೇ ಕೆಲ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸ ಶುರುಮಾಡಿಕೊಂಡಿವೆ. ಹೀಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿದ್ದಾರೆ.

    ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಡುವು ನೀಡಿರುವ ರೈತರು ಇನ್ನೆರಡು ದಿನಗಳಲ್ಲಿ ರೈತರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ನ.17ರಂದು ಸಹಕಾರ ಸಪ್ತಾಹ ಕಾರ್ಯಕ್ರಮಕ್ಕಾಗಿ ಜಿಲ್ಲೆಗೆ ಆಗಮಿಸುತ್ತಿರುವ ಸಿಎಂಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಬಾಗಲಕೋಟೆಗೆ ಬರುತ್ತಿರುವ ಸಿಎಂ ಸಿದ್ದರಾಮಯ್ಯಗೆ (CM Siddaramaiah) ನಾವು ಘೇರಾವ್ ಹಾಕಬೇಕಾಗುತ್ತದೆ. ಕಾರ್ಖಾನೆಯ ಮಾಲೀಕರು ಮೊಂಡುತನ ಪ್ರದರ್ಶಿಸುವುದನ್ನು ಬಿಟ್ಟು, ರೈತರ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಅಂದೇ ಬಾಗಲಕೋಟೆಯ ಗದ್ದನಕೇರಿ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಅಂದು ವೇದಿಕೆಗೆ ಹೋಗುವ ಮುನ್ನ ಸಿದ್ದರಾಮಯ್ಯ ರೈತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಅಲ್ಲಿಂದಲೇ ರೈತರು ನೇರವಾಗಿ ವೇದಿಕೆಗೆ ತೆರಳಿ ಘೇರಾವ್ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಪ್ರತೀ ಟನ್ ಕಬ್ಬಿಗೆ ಜಿಲ್ಲೆಯ ಕಾರ್ಖಾನೆಗಳು 3,000 ರೂ. ಘೋಷಿಸಿವೆ. ಆದರೆ ನಾವು ಪ್ರತೀ ಟನ್‌ಗೆ 3,500 ರೂ. ನಗದಿ‌ಮಾಡಿ ಎಂದು ಆಗ್ರಹಿಸುತ್ತೇವೆ. ಅಲ್ಲದೇ ಹಿಂದಿನ ವರ್ಷದ ಟನ್ ಗೆ 62 ರೂ. ಎರಡನೇ ಕಂತು ಮೊದಲು ಬಾಕಿ ಚುಕ್ತಾ ಆಗಬೇಕು ಎಂದು ಆಗ್ರಹಿಸಿದ್ದಾರೆ.