ಬೆಳಗಾವಿ: ಮುಡಾ ಅಕ್ರಮದ (MUDA Scam) ಬಗ್ಗೆ ಜಾರಿ ನಿರ್ದೇಶನಾಲಯ (ED) ಲೋಕಾಯುಕ್ತಕ್ಕೆ ಬರೆದ ಪತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಗರಂ ಆಗಿದ್ದಾರೆ.
ಇಡಿ ಪತ್ರದ ಬಳಿಕ ಮಾಧ್ಯಮಗಳ ಕೈಗೆ ಸಿಗದೇ ನಾಪತ್ತೆಯಾಗಿದ್ದ ಬೈರತಿ ಸುರೇಶ್ ಇಂದು ಬೆಳಗಾವಿ ಅಧಿವೇಶನದಲ್ಲಿ ಪಬ್ಲಿಕ್ ಟಿವಿಗೆ ಸಿಕ್ಕಿದರು.
ಇಡಿ ಪತ್ರದ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಸುಳ್ಳು. ನನ್ನ ವಿರುದ್ಧ ವರದಿ ಕೊಟ್ಟಿಲ್ಲ. ಯಾವ ಅಧಿಕಾರಿ 144 ಫೈಲ್ ತಗೆದುಕೊಂಡು ಹೋಗಿದ್ದಾರೆ? ನಾನು ಅಲ್ಲಿಗೆ ಹೋಗಿದ್ದೆ ಅಂತ ಯಾರು ಹೇಳಿದ್ದಾರೆ? ಮುಡಾ ಅಕ್ರಮದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿ ಕೆಂಡಾಮಂಡಲವಾದರು.
ಇದೇ ವೇಳೆ ಯಾರು ಯಾವುದೇ ಪತ್ರ ಬರೆದಿಲ್ಲ. ಅಧಿಕೃತವಾಗಿ ಇಡಿ ಪತ್ರ ಬರೆದಿದ್ಯಾ? ಪತ್ರ ಎಲ್ಲವೂ ಮಾಧ್ಯಮ ಸೃಷ್ಟಿ ಎಂದು ಹೇಳಿ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದರು.
– ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿಗೆ ಅಧಿಕಾರವಿಲ್ಲ: ಸಿಬಲ್ ವಾದ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ (High Court) ಜ.25ಕ್ಕೆ ಮುಂದೂಡಿಕೆ ಮಾಡಿದೆ.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜರಿಯಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಿತು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಏಕಸದಸ್ಯ ಪೀಠದಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಏಕಸದಸ್ಯ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ.
ಮತ್ತೊಂದು ಕಡೆ ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ದೇವರಾಜು ಎಂಬುವವರು ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ಪರವಾಗಿ ಕಪಿಲ್ ಸಿಬಲ್ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ಹಾಜರಾಗಿದ್ದರು. ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ರಾಜ್ಯಪಾಲರ ಪರ ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು. ಇನ್ನೂ ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ ವಾದ ಮಂಡಿಸಿದ್ದು, ದೇವರಾಜು ವಿರುದ್ಧ ಯಾವುದೇ ಆರೋಪ ಇಲ್ಲ. ಆದರೂ 4ನೇ ಆರೋಪಿಯನ್ನಾಗಿ ಮಾಡಲಾಗಿದೆ. ಅವರಿಗೆ ಕಾನೂನಿನ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಜಿ ವಿಚಾರಣೆಯನ್ನು 10ನೇ ತಾರೀಖಿನ ಒಳಗೆ ಇತ್ಯರ್ಥ ಮಾಡಿ. ಏಕಸದಸ್ಯ ಪೀಠದಲ್ಲಿ ಪ್ರಕರಣ ಸಿಬಿಐಗೆ ವರ್ಗಾವಣೆ ಮಾಡುವ ಅರ್ಜಿ ವಿಚಾರಣೆ ನಡೆಯುತ್ತಾ ಇದೆ. 2004 ರಲ್ಲಿ ದೇವರಾಜು ಜಮೀನು ಮಾರಾಟ ಮಾಡಿದ್ದಾರೆ. ಆತನನ್ನೇ ಮೋಸ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. 80ನೇ ವಯಸ್ಸಿನಲ್ಲಿ ದೇವರಾಜು ಈ ರಾಜಕೀಯ ದಾಳಿಯಲ್ಲಿ ಸಿಲುಕಿದ್ದಾರೆ. ಏಕಸದಸ್ಯ ಪೀಠದಲ್ಲಿ ನನ್ನ ವಾದವನ್ನು ಆಲಿಸದೇ ಆದೇಶ ನೀಡಲಾಗಿದೆ ಎಂದು ಅವರು ನ್ಯಾಯ ಪೀಠದ ಗಮನಕ್ಕೆ ತಂದಿದ್ದಾರೆ.
ಈ ವೇಳೆ ನ್ಯಾಯಾಲಯ, ನಾವು ಏಕಸದಸ್ಯ ಪೀಠ ಅಥವಾ ಬೇರೊಂದು ಪೀಠದಲ್ಲಿನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅದಕ್ಕೆ ಪ್ರತಿಯಾಗಿ ನಮಗೆ ರಕ್ಷಣೆ ಒದಗಿಸಬೇಕು. ನಾವು ಮಧ್ಯಪ್ರವೇಶ ಮಾಡಬೇಕು ಎಂದು ಕೇಳುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಏಕಸದಸ್ಯ ಪೀಠದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಬೇಕೆ ಅಥವಾ ಬೇಡವೇ ಎಂಬ ವಿಚಾರ ಮಾತ್ರ ಇತ್ತು. ಆದರೆ, ನಮ್ಮ ಬಗ್ಗೆ ಏಕಸದಸ್ಯ ಪೀಠ ಅಭಿಪ್ರಾಯ ನೀಡಿ, ತನಿಖೆಗೆ ಆದೇಶಿಸಿದೆ. ನಮ್ಮ ವಾದವನ್ನು ಆಲಿಸಲಾಗಿಲ್ಲ. ಭೂಮಿಯನ್ನ ಮುಡಾ ವಶಕ್ಕೆ ಪಡೆಯುವಾಗ ದೇವರಾಜ್ ಹೆಸರಲ್ಲಿಯೇ ಇತ್ತು. ಹೀಗಾಗಿ ಡಿನೋಟಿಫೀಕೇಷನ್‍ಗೆ ಅರ್ಜಿ ಹಾಕಲಾಗಿತ್ತು. ಇನ್ನೂ ಡಿನೋಟಿಫಿಕೇಷನ್ ಅನ್ನೋದು ಅಪರಾಧ ಅಲ್ಲ ಎಂದು ಅವರು ವಾದಿಸಿದ್ದಾರೆ.
ಇದಕ್ಕೆ ನ್ಯಾಯಪೀಠ ನಿಮ್ಮ ಅರ್ಜಿಯನ್ನ ಮೆರಿಟ್ ಮೇಲೆ ವಾದ ಆಲಿಸಿ ಆದೇಶ ಮಾಡಲಾಗುವುದು. ಯಾವುದೇ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಏಕಸದಸ್ಯ ಪೀಠ ಆದೇಶದ ಮಧ್ಯೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕೆ ದುಷ್ಯಂತ್ ದವೆ ಅವರು, ಸಿಬಿಐ ತನಿಖೆಗೆ ಕೋರಿರುವ ಅರ್ಜಿಯಲ್ಲಿ ನಮಗೆ ರಕ್ಷಣೆ ಬೇಕಿದೆ. ನೀವು ನಮಗೆ ರಕ್ಷಣೆ ಕೊಡಲು ಬಯಸದಿದ್ದರೆ ಅದನ್ನು ಆದೇಶದಲ್ಲಿ ದಾಖಲಿಸಿ. ನಾವು ಸುಪ್ರೀಂ ಕೋರ್ಟ್‍ನಲ್ಲಿ ರಕ್ಷಣೆ ಕೋರುತ್ತೇವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಮನುಸಿಂಘ್ವಿ ಸಿಎಂ ಪರ ವಾದ ಮಂಡನೆ ಮಾಡಿದ್ದು, ಏಕಸದಸ್ಯ ಪೀಠದ ಆದೇಶದ ತಪ್ಪುಗಳನ್ನು ವಾದಿಸಬೇಕಿದೆ. 17 ಎ ಅನುಮತಿಯನ್ನು ನೀಡಿರುವುದು ತಪ್ಪಾಗಿದೆ. 17ಎ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿ ಕಾಣುತ್ತಾ ಇದೆ. ಇದನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ರಾಜ್ಯಪಾಲರು ಸಂಪುಟ ಸಲಹೆಯ ಅನುಸಾರ ನಡೆಯಬೇಕು. ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ವಾದಿಸಿದರು. ಇದಕ್ಕೆ ನ್ಯಾಯಾಲಯ ತುಂಬಾ ದೊಡ್ಡದಾಗಿ ವಾದ ಮಾಡ್ತಾ ಇದ್ದೀರಿ ಈಗ ಅವಕಾಶ ಇಲ್ಲ ಎಂದು ತಿಳಿಸಿತು.
ಬಳಿಕ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಾಮಾನ್ಯವಾಗಿ ಪ್ರಾಥಮಿಕ ತನಿಖೆ ಮುಗಿದ ಬಳಿಕ ಅನುಮತಿ ನೀಡಬೇಕಿತ್ತು. ಯಾವುದೇ ಪ್ರಾಥಮಿಕ ತನಿಖೆಯನ್ನು ಮಾಡದೇ ಅನುಮತಿ ನೀಡಲಾಗಿದೆ. ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರವೇ ಇಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ಅಧಿಕಾರ ವ್ಯಾಪ್ತಿ ಹೊಂದಿಲ್ಲ. ಸಾಂವಿಧಾನಿಕ ಪೀಠದ ತೀರ್ಪಿನ ಪ್ರಕಾರ ಮುಖ್ಯಮಂತ್ರಿಯನ್ನು ತೆಗೆಯುವ ಅಧಿಕಾರ ಇರುವುದು ಸ್ಪೀಕರ್‌ಗೆ. ರಾಜ್ಯಪಾಲರಿಗೆ ತನಿಖೆ ನಡೆಸಲು ಯಾವ ಅಧಿಕಾರವಿದೆ? ರಾಜ್ಯಪಾಲರು ರಾಷ್ಟ್ರಪತಿಗೆ ಪ್ರಕರಣ ವರ್ಗಾಯಿಸಬಹುದಿತ್ತು ಎಂದು ವಾದಿಸಿದರು.
ವಾದವನ್ನು ಆಲಿಸಿದ ಹೈಕೋರ್ಟ್, ಪ್ರತಿವಾದಿಗಳಿಗೆ ನೋಟಿಸ್ ನೀಡಿ ಜ.25ಕ್ಕೆ ವಿಚಾರಣೆ ಮುಂದೂಡಿದೆ.
ಮೈಸೂರು: ಮುಡಾದಲ್ಲಿ (MUDA Case) ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರಿಯಾಗಿ ತನಿಖೆ ಮಾಡಿದರೆ ಎಲ್ಲರ ಹೆಸರು ಹೊರಬರುತ್ತದೆ. ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದಿಂದ 48 ಜನರಿಗೆ ನಿವೇಶನ ನೀಡಲಾಗಿದೆ. ಇದರಲ್ಲಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಬಿಲ್ಡರ್‌ಗಳಿಗೆ ನಿವೇಶನ ಕೊಟ್ಟಿದ್ದಾರೆ. ರಾಜಕಾರಣಿಗಳ ಹೆಸರನ್ನು ನಾನು ಹೇಳುವುದಿಲ್ಲ. ತನಿಖಾ ಸಂಸ್ಥೆಗಳು ಸರಿಯಾಗಿ ತನಿಖೆ ಮಾಡಿದ್ರೆ ರಾಜಕಾರಣಿಗಳ ಹೆಸರು ಹೊರಬರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್ – ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ಇವರೆಲ್ಲರೂ ಸೇರಿ ಮಾಡಿದ ಹಗರಣವನ್ನು ನಿವಾರಣೆ ಮಾಡುವ ಕೆಲಸ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಆಗುತ್ತಿದೆ. ಮುಡಾ ಬೋರ್ಡ್ ಹಾಕಿಸಿ ಆಸ್ತಿಯನ್ನು ರಕ್ಷಣೆ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
14 ನಿವೇಶನಗಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಯವರ ಪಾತ್ರ ಇಲ್ಲ. ಸಹೋದರ ಕೊಟ್ಟಿದ್ದ ಜಮೀನಿಗೆ ಸಿಗಬೇಕಿದ್ದ ಪರಿಹಾರವನ್ನು 50:50 ಅನುಪಾತದಲ್ಲಿ ಪಡೆದುಕೊಂಡಿದ್ದಾರೆ. ಅದು ಬಿಟ್ಟು ಯಾವುದೇ ರೀತಿಯ ಪ್ರಭಾವವನ್ನು ಅವರು ಬೀರಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿ: ರಾಜ್ಯದಲ್ಲಿ ಮುಡಾ (MUDA) ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಹೊಸ ಬಾಂಬ್ ಸಿಡಿಸಿದ್ದಾರೆ.
ಶಾಸಕ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತಿನ ಸಂಘರ್ಷದ ನಡುವೆ ವಿಪಕ್ಷ ನಾಯಕ ಅಶೋಕ್ ಬುಧವಾರ ಬೆಳಗ್ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಪಕ್ಷದ ಬೆಳವಣಿಗೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಹಣ ಡಬಲ್, ಬಿಎಂಡಬ್ಲ್ಯೂ ಕಾರು ಕೊಡಿಸುವ ಆಸೆ ತೋರಿಸಿ ವಂಚನೆ – ಯುವತಿ ಆತ್ಮಹತ್ಯೆ
ರಾಜ್ಯದಲ್ಲಿ ಮುಡಾ ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ಸ್ವಾಭಿಮಾನ ಸಮಾವೇಶ ಹೋಗಿ ಡಿಕೆ ಶಿವಕುಮಾರ್ ಸಮಾವೇಶ ಆಗಿದೆ. ಅಗ್ರಿಮೆಂಟ್ ಬಗ್ಗೆಯೂ ಚರ್ಚೆ ಆಗುತ್ತಿದೆ. ದೇವೇಗೌಡರಿಗೆ ಟಾಂಗ್ ಕೊಡಲು ಹೋಗಿ ಪರಸ್ಪರ ಟಾಂಗ್ ಕೊಡ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ಬಾಂಬ್ ಸಿಡಿಸಿದ್ದಾರೆ.
17 ತಿಂಗಳ ಆಡಳಿತ ಕಾಂಗ್ರೆಸ್ ಸರ್ಕಾರದ ಹದಿನೇಳು ಅವತಾರ ಆಗಿದೆ. 18ನೇ ತಿಂಗಳಿಗೆ ಹೊರ ಅವತಾರ ಬರಲಿದೆ. ದಾಖಲೆಗಳು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಹಂಚಿಕೊಳ್ಳುವುದು ಪರಸ್ಪರ ಪ್ರಕ್ರಿಯೆ. ಯಾವುದು ಅಕ್ರಮವಾಗಿ ಹಂಚಿಕೆಯಾಗಿದೆ ಅದನ್ನು ಸೀಜ್ ಮಾಡಿ. ಯಾರೇ ಮಾಡಿದರೂ ಸೀಜ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Ballari | ಐವಿ ದ್ರಾವಣ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕೇಸ್ ದಾಖಲಿಸಲು ತಾಕೀತು
ಇನ್ನೂ ಯತ್ನಾಳ್ ವಿಚಾರ ಕುರಿತು ಮಾತನಾಡಿ, ಯತ್ನಾಳ್ ವಿಚಾರ ಹೈಕಮಾಂಡ್ ಅಂಗಳದಲ್ಲಿದೆ, ಇದು ಸುಖಾಂತ್ಯವಾಗಲಿದೆ. ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಪಾಲಿಸುವುದು ನನ್ನ ಕೆಲಸ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಸೆಕ್ಯೂರಿಟಿಯಿಂದ ಶೂಟ್
ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Scam) ಅಕ್ರಮ ಆಗಿರುವುದು ನಿಜ ಎಂದು ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವುದು ದುರುದ್ದೇಶದಿಂದ ಕೂಡಿದೆ ಎಂದು ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿ ಯಾರು? ದೇಶದಲ್ಲಿ ಎಲ್ಲಾ ಕಡೆ ಹೀಗೆ ಇಡಿ ತನಿಖೆ ಮಾಡ್ತಿದೆಯಾ? ತನಿಖೆ ಪ್ರಾರಂಭ ಮಾಡಿ ಯರ‍್ಯಾರು ಬಿಜೆಪಿಗೆ ಸೇರುತ್ತಾರೊ? ಅವರ ಮೇಲಿನ ತನಿಖೆ ಪ್ರಗತಿ ಯಾವ ರೀತಿ ಆಗುತ್ತಿದೆ? ಇಡಿ ವರ್ತನೆ ದುರುದ್ದೇಶದಿಂದ ಕೂಡಿದೆ. ಇಡಿ ಅವರು ಮುಡಾ ಕೇಸ್‌ನಲ್ಲಿ ಬಂದಿರುವುದೇ ದುರುದ್ದೇಶ ಎಂದು ಕಿರಿಕಾರಿದ್ದಾರೆ.ಇದನ್ನೂ ಓದಿ: ಸಿಎಂ ಹೇಳಿದ್ದೇ ಫೈನಲ್, ಯಾವುದೇ ತಕರಾರು ಇಲ್ಲ: ಡಿಕೆಶಿ
ಬಿಜೆಪಿಯವರಿಗೆ (BJP) ಮುಡಾದಲ್ಲಿ ಹಿಂದೆ ಏನಾಗಿತ್ತು ಎಂದು ಗೊತ್ತಿರಲಿಲ್ಲವಾ? ಬಿಜೆಪಿ, ಜೆಡಿಎಸ್ ಶಾಸಕರು ಇದರಲ್ಲಿ ಭಾಗಿಯಾಗಿರಲಿಲ್ವಾ? ಮುಡಾ ಕೇಸ್ ಇಂದಿನದಾ? ಸಿದ್ದರಾಮಯ್ಯರ ಪ್ರಕರಣಕ್ಕೆ ಜೋಡಣೆ ಮಾಡಲು ಇಡಿ ಬಂದಿದೆ. ಇಡಿ ಅವರಿಗೆ ಲೋಕಾಯುಕ್ತದವರು ವರದಿ ಕೊಡಿ ಎಂದು ಕೇಳಿದ್ದರಾ? ಲೋಕಾಯುಕ್ತ ತನಿಖೆ ಮಾಡಿ ಎಂದು ಕೋರ್ಟ್ ಹೇಳಿದೆ. ಲೋಕಾಯುಕ್ತವೇ ಒಂದು ತನಿಖಾ ಸಂಸ್ಥೆ. ಲೋಕಾಯುಕ್ತದವರು ಅವರ ತನಿಖೆ ನಿಷ್ಪಕ್ಷಪಾತವಾಗಿ ಮಾಡಿ, ವರದಿ ಕೊಡಬೇಕು. ನಮ್ಮ ಸರ್ಕಾರದ ಮೇಲೆ ಪ್ರತ್ಯೇಕವಾಗಿ ಇಡಿಯವರು ತನಿಖೆ ಮಾಡಿ ಗೂಬೆ ಕೂರಿಸಲು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್ ಅವರೆಲ್ಲ ಸೇರಿ ಇದನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಡಿ ಅವರು ಪ್ರತ್ಯೇಕವಾಗಿ ತನಿಖೆ ಮಾಡಲಿ ನಾವೇನು ಬೇಡ ಎನ್ನುವುದಿಲ್ಲ. ಇಡಿ ಅವರು ನ್ಯಾಯಾಲಯದ ಮುಂದೆ ಸಾಕ್ಷಿ ಕೊಡಲಿ. 3 ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ವಿಪಕ್ಷದವರು ಹತಾಶೆಯಾಗಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ಇಡಿ ಅವರು ಪತ್ರ ಬರೆದಿದ್ದಾರೆ. ಇಡಿ ಯಾಕೆ ಲೋಕಾಯುಕ್ತಗೆ ಪತ್ರ ಬರೆಯಬೇಕು. ಲೋಕಾಯುಕ್ತದವರು ಅವರ ಕೆಲಸ ಅವರು ಮಾಡುತ್ತಾರೆ. ಇಡಿ ಅವರು ನಿಮ್ಮ ಕೆಲಸ ನೀವು ಮಾಡಿ ಎಂದಿದ್ದಾರೆ.
ಇಡಿ ಅವರು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರನ್ನು ಬಿಟ್ಟು ಬಿಡಿ. ದೇವೇಗೌಡ ಕುಟುಂಬದವರು 48 ಸೈಟ್ ತೆಗೆದುಕೊಂಡಿರುವುದನ್ನ ಬಿಟ್ಟು ಬಿಡಿ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಮಾತ್ರ ನೀವು ಮಾತಾಡಿ. ದೇಶದ ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ರಾಜಕೀಯ ದುರುದ್ದೇಶದಿಂದ ಇಡಿ ಹೀಗೆ ಮಾಡುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ನಮ್ಮ ಲೀಗಲ್ ಟೀಂ ಇದನ್ನು ನೋಡುತ್ತದೆ. ಜನರ ಗಮನ ಬೇರೆಡೆಗೆ ಸೆಳೆಯಲು ಹೀಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅವರು ವಕ್ಫ್ ವಿಚಾರ ತಂದರು ಅದರಲ್ಲಿ ಯಶಸ್ವಿಯಾಗಲಿಲ್ಲ. ಅವರಲ್ಲಿಯೇ ಕಿತ್ತಾಟ ಶುರುವಾಗಿದೆ. ಅವರಲ್ಲಿಯೇ ಮನೆಯೊಂದು ಮೂರು ಬಾಗಿಲು ಆಗಿದೆ. ಅವರ ಗಾಯಕ್ಕೆ ಔಷಧಿ ಹಾಕಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ ಒಡಕಿನ ಚರ್ಚೆ ಆಗುವುದನ್ನು ದಾರಿ ತಪ್ಪಿಸಲು ಇಡಿ ಹೀಗೆ ಮಾಡಿದೆ. ಲೋಕಾಯುಕ್ತ ಮೇಲೆ ಇಡಿ ಯಾಕೆ ಪ್ರಭಾವ ಬೀರುತ್ತದೆ? ಲೋಕಾಯುಕ್ತ ಸ್ವತಂತ್ರ ಸಂಸ್ಥೆ ನೀವು ಯಾಕೆ ಪ್ರಭಾವ ಬೀರುತ್ತೀರಾ? ಇಡಿ ಅವರು ನಿಮ್ಮ ಕೆಲಸ ನೀವು ಮಾಡಿ. ಲೋಕಾಯುಕ್ತ ವರದಿ ಕೇಳಿಲ್ಲ ನೀವು ಯಾಕೆ ವರದಿ ಕೊಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪವರ್ ಶೇರಿಂಗ್: ಡಿಕೆಶಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸ್ಪಷ್ಟನೆ
– ತನಿಖೆ ಪ್ರಗತಿ ಬಗ್ಗೆ ಲೋಕಾಯುಕ್ತಕ್ಕೆ ಇಡಿ ಪತ್ರ – ಮಾಲೀಕ ದೇವರಾಜು ನಡೆಯೇ ಅನುಮಾನಾಸ್ಪದ – ಮಲ್ಲಿಕಾರ್ಜುನ ಸ್ವಾಮಿ ಹೇಳಿಕೆ ಸುಳ್ಳು
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್ ಹಂಚಿಕೆ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) ಭೂ ಸ್ವಾಧೀನ ಪ್ರಕ್ರಿಯೆಯೇ ಅಕ್ರಮ ಎಂದು ಹೇಳಿದೆ.
ಮುಡಾ ಅಕ್ರಮದ ತನಿಖೆ ನಡೆಸುತ್ತಿರುವ ಇಡಿ ಲೋಕಾಯುಕ್ತ ಎಡಿಜಿಪಿಗೆ (Lokayukta ADGP) ತನಿಖೆಯ ಪ್ರಗತಿಯ ಬಗ್ಗೆ ಪತ್ರ ಬರೆದು ಬ್ರಹ್ಮಾಂಡ ಭ್ರಷ್ಟಾಚಾರವನ್ನು (Corruption) ಎಳೆಎಳೆಯಾಗಿ ಬಿಡಿಸಿದೆ. ಸಿಎಂ ಪತ್ನಿಗೆ ಕೊಟ್ಟಿರುವ 14 ಸೈಟ್‌ಗಳು ಸಹ ಅಕ್ರಮ ಎಂದು ಇಡಿ ಉಲ್ಲೇಖಿಸಿದೆ.
ಜಮೀನಿನ ಮಾಲೀಕ ಜೆ.ದೇವರಾಜು ನಡೆಯೇ ಅನುಮಾನಾಸ್ಪದವಾಗಿದೆ. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ವರ್ಕ್ ಆರ್ಡರ್ ಆದ ಜಾಗದಲ್ಲಿ ಬಡಾವಣೆ ನಿರ್ಮಿಸಿ ಫಲಾನುಭವಿಗಳಿಗೆ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ದೇವನೂರು ಬಡಾವಣೆಯಲ್ಲೇ 352 ಸೈಟ್‌ಗಳು ಖಾಲಿ ಇದ್ದರೂ ಅಲ್ಲಿ 60:40 ಅನುಪಾತದಲ್ಲಿ ಸೈಟ್ ಮಂಜೂರು ಮಾಡದೇ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 14 ಸೈಟ್‌ಗಳನ್ನು ಹಂಚಿಕೆ ಮಾಡಿದ್ದನ್ನು ನೋಡಿದಾಗ ಭಾರೀ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ದೃಢವಾಗುತ್ತದೆ ಎಂದು ಇಡಿ ಹೇಳಿದೆ.
ಇಡಿ ತನ್ನ ತನಿಖಾ ವರದಿಯ ಸಾರಾಂಶ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಅದನ್ನು ಇಲ್ಲಿ ನೀಡಲಾಗಿದೆ.
ಇಡಿ ಪತ್ರದಲ್ಲಿ ಏನಿದೆ? ತನಿಖೆ ಅಂಶ -1 ಜೆ.ದೇವರಾಜು ನಡೆಯೇ ಅನುಮಾನಾಸ್ಪದ
ಕೆಸರೆ ಗ್ರಾಮದ ವಿವಾದಿತ ಜಮೀನು ಭೂಸ್ವಾಧೀನದಿಂದ ಕೈಬಿಡುವ ಪ್ರಕ್ರಿಯೆಯೇ ಅಕ್ರಮವಾಗಿದೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಜಮೀನಿನ ಮೂಲ ಮಾಲೀಕ ಜೆ.ದೇವರಾಜು ನಡೆಯೇ ಅನುಮಾನಾಸ್ಪದವಾಗಿದೆ.
3 ಎಕರೆ 16 ಗುಂಟೆ ಜಮೀನು ಭೂಸ್ವಾಧೀನದಿಂದ ಕೈ ಬಿಡುವಂತೆ ಮುಡಾಗೆ ಅವರು ಪತ್ರ ಬರೆದಿಲ್ಲ. ಬದಲಾಗಿ 1997ರ ನಗರಾಭಿವೃದ್ಧಿ ಸಚಿವರಾಗಿದ್ದ ಬಚ್ಚೇಗೌಡರಿಗೆ ನೇರ ಮನವಿ ಸಲ್ಲಿಸಿದ್ದರು. ಜುಲೈ 24, 1997 ರಂದು ಮುಡಾ ಸಾಮಾನ್ಯ ಸಭೆಯಲ್ಲಿ ಡಿನೋಟಿಫಿಕೇಷನ್ ಬಗ್ಗೆ ಚರ್ಚೆ ನಡೆದಿದೆ. ದೇವರಾಜು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು.
ದೇವರಾಜು ಜಮೀನು ಬಡಾವಣೆ ಮುಖ್ಯದ್ವಾರದಿಂದ ಕೇವಲ 200 ಮೀಟರ್ ದೂರದಲ್ಲಿದೆ. ಉಪಗ್ರಹ ಆಧಾರಿತ ದೃಶ್ಯವನ್ನು ಪರಿಶೀಲಿಸಿದಾಗ ಆ ಜಮೀನು ಬಡಾವಣೆಯ ಮಧ್ಯ ಭಾಗದಲ್ಲಿರುತ್ತದೆ. ಡಿನೋಟಿಫಿಕೇಷನ್ ಪ್ರಕ್ರಿಯೆ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಡಿನೋಟಿಫಿಕೇಷನ್ ನಿರ್ಧಾರ ಕೈಗೊಂಡ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ.
3 ಎಕರೆ ಭೂಮಿಯೇ ಜೀವನಾಧಾರ, ಬೇರೆ ಆದಾಯ ನನಗೆ ಇಲ್ಲ. ಸರ್ಕಾರಿ ನೌಕರ, ಜಮೀನಿನ ಮೇಲೆ ಅವಲಂಬಿತರಾಗಿರುವುದಿಲ್ಲ ಎಂದಿದ್ದ ದೇವರಾಜು ವಿವಾದಿತ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಲ್ಲ ಎಂದು ಇಡಿಗೆ ತಿಳಿಸಿದ್ದಾರೆ. 2003ರಲ್ಲಿ ಎ3 ಆರೋಪಿ ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಜೊತೆ ಒಮ್ಮೆ ಮಾತ್ರ ಜಮೀನಿಗೆ ಭೇಟಿ ನೀಡಿದ್ದರು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದಾಗ ಅದು ಕೃಷಿ ಭೂಮಿ ಎಂದಿದ್ದರು. ಆದರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದ ಬಗ್ಗೆ ದೇವರಾಜು ಸರಿಯಾದ ವಿವರಣೆ ನೀಡಿಲ್ಲ.
ತನಿಖೆ ಅಂಶ – 2 ಮಲ್ಲಿಕಾರ್ಜುನ ಸ್ವಾಮಿ ಹೇಳಿಕೆ ಸುಳ್ಳು
ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ದೇವರಾಜುರಿಂದ 5,95,000 ರೂ.ಗಳಿಗೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. 2004ರಲ್ಲಿ ಜಮೀನು ಖರೀದಿ ಮಾಡಿದಾಗ ಅದು ಕೃಷಿ ಭೂಮಿಯೇ ಆಗಿತ್ತು. ಆದರೆ ಮುಡಾದಿಂದ ಬಡಾವಣೆ ಅಭಿವೃದ್ಧಿ ಕಾರ್ಯ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಆದರೆ ಅದಾಗಲೇ ಬಡಾವಣೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ರಸ್ತೆಗಳು ನಿರ್ಮಾಣವಾಗಿದ್ದವು ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.
2001ರಲ್ಲೇ ಎಲ್& ಟಿ ಕಂಪನಿಗೆ ಬಡಾವಣೆ ನಿರ್ಮಾಣಕ್ಕೆಂದು ವರ್ಕ್ ಆರ್ಡರ್ ಆಗಿತ್ತು. 2003ರಲ್ಲೇ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಸಹ ಆಗಿತ್ತು.
ಡಿಸೆಂಬರ್ 1, 20024 ರಂದು ರಂದು ಮೈಸೂರು ತಹಶೀಲ್ದಾರ್‌ಗೆ ಕೃಷಿಯೇತರ ಭೂಮಿ ಎಂದು ಪರಿವರ್ತಿಸುವಂತೆ ಮನವಿ ಮಾಡಲಾಗುತ್ತದೆ. ತಹಶೀಲ್ದಾರ್, ಡಿಸಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆದಿಲ್ಲವೆಂದು ನಮೂದು ಮಾಡುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ಕಾನೂನು ಉಲ್ಲಂಘಿಸಿ ಭೂ ಪರಿವರ್ತನೆ ಮಾಡಲಾಗಿದೆ. ಈ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ಧರಂ ಸಿಂಗ್ ಸರ್ಕಾರದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.
ತನಿಖೆಯ ಅಂಶ- 3 ಸಿದ್ದರಾಮಯ್ಯ ಪತ್ನಿಗೆ ದಾನಪತ್ರ
2010ರಲ್ಲಿ ಪಾರ್ವತಿಗೆ ದಾನದ ರೂಪದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಜಾಗವನ್ನು ನೀಡಿದ್ದರು. 6 ವರ್ಷಗಳ ಕಾಲ ಆ ಭೂಮಿ ಸ್ಥಿತಿಗತಿ ಮಲ್ಲಿಕಾರ್ಜುನ ಸ್ವಾಮಿಗೆ ಮಾಹಿತಿಯೇ ಇರಲಿಲ್ಲವೇ? ಒಂದು ವೇಳೆ ಗೊತ್ತಿದ್ದರೆ ಯಾಕೆ ಆಕ್ಷೇಪ ಸಲ್ಲಿಸಲಿಲ್ಲ? ಈ ಎಲ್ಲಾ ಪ್ರಕ್ರಿಯೆಗಳನ್ನು ಹಗರಣದ ಭಾಗವಾಗಿಯೇ ಮಾಡಿದ್ದರಿಂದ ಆಕ್ಷೇಪ ಸಲ್ಲಿಸಿಲ್ಲ ಎನ್ನುವುದು ತಿಳಿಯುತ್ತಿದೆ. ಕೆಸರೆ ಜಾಗದ ಬದಲಾಗಿ ಪ್ರಮುಖ ಸ್ಥಳದಲ್ಲಿ ಬೆಲೆಬಾಳುವ ಸೈಟ್ ಪಡೆಯುವ ದುರುದ್ದೇಶದಿಂದಲೇ ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗಿದೆ ಎನ್ನುವುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ.
ತನಿಖೆಯ ಅಂಶ- 4 ಸಿದ್ದರಾಮಯ್ಯ ಪತ್ನಿ ಪಾತ್ರ ಏನು?
2014ರಲ್ಲಿ ಪಾರ್ವತಿ ಅವರು ಪರಿಹಾರ ಕೋರಿ ಮುಡಾಗೆ ಅರ್ಜಿ ಸಲ್ಲಿಸುತ್ತಾರೆ. ಕೆಸರೆ ಗ್ರಾಮದ ತಮ್ಮ ಜಮೀನನ್ನು ಬಡಾವಣೆ ನಿರ್ಮಾಣಕ್ಕೆ ಮುಡಾ ಬಳಸಿಕೊಂಡಿದೆ. ಸೂಕ್ತ ಪರಿಹಾರ ಕೊಡುವಂತೆ ಕೋರುತ್ತಾರೆ. ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿ ಆದ ಬಳಿಕ 2014ರಲ್ಲಿ ಪರಿಹಾರ ಕೋರಿ ಅರ್ಜಿ ಹಾಕುತ್ತಾರೆ.
ಪಾರ್ವತಿ ಅವರ ಅರ್ಜಿ ಪರಿಗಣಿಸಿದ ಮುಡಾ 60:40ರ ಅನುಪಾತದಲ್ಲಿ ಪರಿಹಾರ ಕೊಡಲು ಒಪ್ಪಿಗೆ ಸೂಚಿಸುತ್ತದೆ. ಅಂದು ನಟೇಶ್ ಮುಡಾ ಆಯುಕ್ತರಾಗಿರುತ್ತಾರೆ. ವಿನಾಕಾರಣ ವ್ಯಾಜ್ಯ ತಪ್ಪಿಸಲು ಹಾಗೂ ಮುಡಾಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ ಪಾರ್ವತಿ ಅವರಿಗೆ 60:40ರ ಅನುಪಾತದಲ್ಲಿ ಪರಿಹಾರ ಕೊಡಬಹುದು ಎಂದು ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಷರಾ ಬರೆಯುತ್ತಾರೆ.
ಪಾರ್ವತಿ ಅವರ ಅರ್ಜಿಗೆ ವಿಶೇಷ ಮನ್ನಣೆ ನೀಡಿರುವುದು ಇದರಿಂದ ಗೊತ್ತಾಗುತ್ತದೆ. ಖುದ್ದು ನಟೇಶ್ ಅವರೇ ವೈಯಕ್ತಿಕ ಹಿತಾಸಕ್ತಿಯಿಂದ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಪರಿಹಾರ ರೂಪದ ಸೈಟ್‌ಗಳನ್ನು ಗುರುತಿಸಿರುತ್ತಾರೆ.
ಪರಿಹಾರ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಅಂತ ಗುರುತಿಸಿಕೊಳ್ಳುವ ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಹಸ್ತಕ್ಷೇಪ ಎದ್ದು ಕಾಣುತ್ತದೆ. ಖಾತೆ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿ ಹಾಗೂ ಇತರೆ ಅರ್ಜಿಗಳಲ್ಲಿ ಪಾರ್ವತಿ ಅವರ ಸಹಿಯನ್ನು ದಿನೇಶ್ ಕುಮಾರ್ ನಕಲು ಮಾಡಿರುವುದು ಕಂಡುಬಂದಿದೆ. ದಿನೇಶ್ ಕುಮಾರ್ ಅವರ ಪ್ರಭಾವದ ಬಗ್ಗೆ ಮುಡಾ ಮಾಜಿ ಆಯುಕ್ತ ನಟೇಶ್ ಕೂಡ ಹೇಳಿದ್ದಾರೆ. ಮುಡಾ ಆಯುಕ್ತರ ಪಿಎ ಜೊತೆ ದಿನೇಶ್ ಕುಮಾರ್ ನಿರಂತರ ಸಂಪರ್ಕದಲ್ಲಿದ್ದರು. ಒಟ್ಟಾರೆ ಸೈಟ್ ಹಂಚಿಕೆಯಲ್ಲಿ ಪ್ರಭಾವ ನಡೆದಿರುವುದು ಕಂಡುಬಂದಿದೆ.
ತನಿಖೆಯ ಅಂಶ- 5 ಪರಿಹಾರ ಸೈಟ್ ಹಂಚಿಕೆಯಲ್ಲೂ ಅಕ್ರಮ
ಮೂರು ಎಕರೆ ಜಮೀನು ಇದ್ದ ದೇವನೂರು ಬಡಾವಣೆಯಲ್ಲೇ 352 ಸೈಟ್‌ಗಳು ಖಾಲಿ ಇದ್ದರೂ ಅಲ್ಲೇಕೆ 60:40 ಅನುಪಾತದಲ್ಲಿ ಸೈಟ್ ಕೊಡಲಿಲ್ಲ ಎಂಬ ಗಂಭೀರ ಪ್ರಶ್ನೆ ಕಾಣುತ್ತದೆ. ಕಾಯ್ದೆ ಕಾನೂನಿನ ಪ್ರಕಾರ ಪರಿಹಾರ ರೂಪದಲ್ಲಿ ಕಮರ್ಷಿಯಲ್ ಸೈಟ್‌ಗಳನ್ನು ಕೊಡುವಂತಿಲ್ಲ. ಹೀಗಿದ್ದರೂ ಪಾರ್ವತಿಯವರಿಗೆ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆ ಮಾಡಲಾಗಿದೆ.
ಸೈಟ್ ಮಂಜೂರು ಮಾಡಿದಾಗ ಪಾರ್ವತಿ ಅವರ ಮಗ ಯತೀಂದ್ರ ವರುಣ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಮುಡಾ ಮಂಡಳಿಯ ಸದಸ್ಯರಾಗಿದ್ದರು. ಪಾರ್ವತಿ ಅವರ ಪತಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಇದೇ ವೇಳೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಅಂತ ಹೇಳಿಕೊಳ್ಳುವ ದಿನೇಶ್ ಕುಮಾರ್ ಅವರು ಮುಡಾದಲ್ಲಿ ಪ್ರಭಾವ ಬಳಸಿರುವ ಸಾಧ್ಯತೆಯಿದೆ.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆ ಚುರುಕುಗೊಂಡಿದ್ದು ಈಗ ಬೈರತಿ ಸುರೇಶ್ (Byrathi Suresh) ಅವರ ಸಚಿವಾಲಯದ ಸಿಬ್ಬಂದಿಗೂ ನೋಟಿಸ್ ನೀಡಲಾಗಿದೆ.
ವಿಧಾನಸೌಧದ ನಗಾರಭಿವೃದ್ಧಿ ಸಚಿವಾಲಯದ ಅಧಿಕಾರಿಗಳಿಗೆ ನೋಟಿಸ್ ನೀಡಿದ ಇಡಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಮನ್ಸ್ ನೀಡಿದ ಇಡಿ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮುಡಾ ನಗರಾಭಿವೃದ್ದಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ.
ಮೈಸೂರು: ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಸಿಎಂ ಪತ್ನಿ ಹಾಗೂ ಸಿಎಂ ಭಾಮೈದ ಸೇರಿ ಒಟ್ಟು 10 ಜನರ ಮೇಲೆ ಈಗ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ (Mysuru Civil Court) ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ.
ಸಿದ್ದರಾಮಯ್ಯ (Siddaramaiah) ಅವರ ಪತ್ನಿ ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಭಾಗದ ಮೂರುವರೆ ಎಕರೆ ಜಮೀನಿಂದ ಈಗ ಕಾನೂನಿನ ದೊಡ್ಡ ಸಂಕಷ್ಟ ಸೃಷ್ಟಿಯಾಗಿದೆ. ಕಳೆದ 4 ತಿಂಗಳಿಂದ ರಾಜ್ಯ ರಾಜಕೀಯದಲ್ಲಿ ಇದೇ ಜಮೀನು ಹಾಗೂ ಜಮೀನಿನಿಂದ ಸಿಕ್ಕ ಪರಿಹಾರ ರೂಪದ 14 ಸೈಟ್‌ಗಳು ಬಿರುಗಾಳಿ ಎಬ್ಬಿಸಿವೆ. ಹಲವು ತನಿಖೆಗಳು ಇದರಿಂದ ನಡೆಯುತ್ತಿವೆ. ಈಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಪ್ರಕರಣದ ಮೂಲ ಭೂಮಿಯ ಬಗ್ಗೆಯೆ ಈಗ ವಿವಾದ ಹುಟ್ಟಿಕೊಂಡಿದೆ.
ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜ್ ಕೆಸರೆ ಭಾಗದಲ್ಲಿ ಮೂರುವರೆ ಎಕರೆ ಜಮೀನು ಮಾರಿದ್ದರು. ಈಗ ಆ ಜಮೀನು ದೇವರಾಜ್ ಅವರದ್ದಲ್ಲ. ಆ ಜಮೀನು ತಮ್ಮದ್ದು ಎಂದು ದೇವರಾಜ್ ಸಹೋದರ ಮೈಲಾರಯ್ಯನ ಮಗಳು ಜಮುನಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದನ್ನೂ ಓದಿ: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ
ನನ್ನ ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ. ಇದನ್ನೂ ಓದಿ: ಟ್ರಕ್‌ಗೆ ಸ್ಕಾರ್‌ಪಿಯೊ ಡಿಕ್ಕಿ – ಭೀಕರ ಅಪಘಾತಕ್ಕೆ ಐವರು ವೈದ್ಯರ ದುರ್ಮರಣ
ಈ ಬಗ್ಗೆ ಜಮುನಾ ಸಹೋದರ ಮಂಜುನಾಥ್ ಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು, ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿ ನಮ್ಮ ಜಮೀನನ್ನು ತಮ್ಮದ್ದು ಎಂದು ಮಾರಾಟ ಮಾಡಿದ್ದಾರೆ. ಹೀಗಾಗಿ ನಾವು ತಮ್ಮ ಚಿಕ್ಕಪ್ಪ ದೇವರಾಜ್ ಸೇರಿದಂತೆ ಅವರು ಜಮೀನು ಮಾರಾಟ ಮಾಡಿರುವ ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಸಿಎಂ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಮೇಲೂ ಕೇಸ್ ಹಾಕಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್ ಕಳ್ಳಿಯರು ಅರೆಸ್ಟ್
ಖಾತೆ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ನನ್ನ ಚಿಕ್ಕಪ್ಪ ಮೂವತ್ತು ವರ್ಷಗಳ ಹಿಂದೆ ನನ್ನ ಹಾಗೂ ನನ್ನ ತಾಯಿ ಬಳಿ ಸಹಿ ಮಾಡಿಸಿಕೊಂಡಿದ್ದರು. ಆ ಜಮೀನು ನನ್ನ ತಂದೆಗೆ ಭಾಗವಾಗಿ ಬಂದ ಪಿತ್ರಾರ್ಜಿತ ಆಸ್ತಿ. ಆ ಆಸ್ತಿಯನ್ನೆ ಮೋಸದಿಂದ ನನ್ನ ಚಿಕ್ಕಪ್ಪ ಪಡೆದು ಅದನ್ನು ಸಿಎಂ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರದಲ್ಲಿ ನಾನೇನು ತಪ್ಪು ಮಾಡಿಲ್ಲ. ಐ ಡೋಂಟ್ ಕೇರ್ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.
ಮುಡಾ (MUDA Scam) ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಚ್ ವಾರಂಟ್ ಕೊಟ್ಟವರು ಯಾರು? ದಾಳಿ ಮಾಡಬೇಡಿ ಅಂತ ಲೋಕಾಯುಕ್ತವನ್ನು ತಡೆದವರು ಯಾರು? ಲೋಕಾ ಮೇಲೆ ಯಾರಾದ್ರೂ ಪ್ರೆಷರ್ ಹಾಕಲು ಆಗುತ್ತಾ? ಸಿಎಂ ಮೇಲೆ ಲೋಕಾಯುಕ್ತ ನೋಟಿಸ್ ಕೊಟ್ಟಿಲ್ವಾ? ಸಿಎಂ ಪತ್ನಿ ಪಾರ್ವತಿಗೆ, ಬಾಮೈದನಿಗೆ, ಅಧಿಕಾರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿಲ್ವಾ? ಏನು ನಡೆಯುತ್ತಿದೆ ನನಗೆ ಅರ್ಥವಾಗುತ್ತಿಲ್ಲ ಎಂದರು. ಇದನ್ನೂ ಓದಿ: ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ
ನಮ್ಮ ಕೆಳಗಡೆ ಲೋಕಾಯುಕ್ತ ಇದೆಯಾ? ಯಾವ ಐಎಎಸ್ ಅಧಿಕಾರಿ ಯಾಕೆ ಫೈಲ್ ತೆಗೆದುಕೊಂಡು ಹೋಗಿದ್ದಾರೆ? ಅದಕ್ಕೇನಾದರೂ ಸಾಕ್ಷಿ ಇದೆಯಾ? ದೂರುದಾರನ ಪ್ರಶ್ನೆ ಏನು? ಲೋಕಾಯುಕ್ತ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಅವರನ್ನು ಹೋಗಿ ಕೇಳಲಿ. ದಿನ ಬೆಳಗಾದರೆ ತನಿಖೆಯೊಳಗೆ ಮೂಗು ತೂರಿಸೋದು ಸರಿಯಾ? ನಮ್ಮದೇ ಅಧಿಕಾರಿ ಮೇಲೆ ನಂಬಿಕೆ ಇಲ್ಲ ಅಂದರೆ ಇನ್ಯಾರಿಂದ ತನಿಖೆ ಮಾಡಿಸಬೇಕು? ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್. ಲೋಕಾಯುಕ್ತವೇ ಸರಿ ಇಲ್ಲ ಅಂದರೆ ತನಿಖೆ ಯಾರಿಗೆ ಕೊಡೋಣ. ಇದು ಕೊನೆ ಇಲ್ಲದ ಪ್ರಶ್ನೆ. ದೂರುದಾರರೇ ಎಲ್ಲವನ್ನೂ ಊಹೆ ಮಾಡಿಕೊಂಡು ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 10.75 ಕೋಟಿ ಬಿಡ್ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ
ನಗರಾಭಿವೃದ್ಧಿಗೂ ಲೋಕಾಯುಕ್ತಕ್ಕೂ ಏನು ಸಂಬಂಧ? ಲೋಕಾಯುಕ್ತಕ್ಕೆ ಅವರದ್ದೇ ಆದ ನಿಯಮವಿದೆ. ಯಾರಿಗೆ ಶಿಕ್ಷೆ ಕೊಡಬೇಕು ಎಂಬುದು ಅವರಿಗೆ ಗೊತ್ತಿದೆ. ಹಿಂದೆ ಮಾಜಿ ಸಿಎಂ ಅವರನ್ನು ಜೈಲಿಗೆ ಕಳಹಿಸಿದ್ದು ಅದೇ ಲೋಕಾಯುಕ್ತ ಅಲ್ವಾ? ದೂರುದಾರ ಅನುಮಾನಪಟ್ಟರೆ ಅವರು ಪಕ್ಷಪಾತಿಯಾಗಿದ್ದಾರೆ ಎಂದು ಅರ್ಥ. ಇದರಲ್ಲಿ ನನ್ನ ಹೆಸರು ಯಾಕೆ ಬರುತ್ತದೆ? ನಾನು ಮುಡಾ ಸಚಿವ. ನಮ್ಮ ಇಲಾಖೆಯ ನಮ್ಮ ಕಚೇರಿಗೆ ಹೋಗಲು ಯಾರದ್ದೋ ಅನುಮತಿ ತೆಗೆದುಕೊಂಡು ಹೋಗಬೇಕಾ? ಮುಡಾದಲ್ಲಿ ಏನೋ ಆಯ್ತು ಎಂದು ದೊಡ್ಡ ಸೀನ್ ಆಯಿತು. ಅದಕ್ಕಾಗಿ ನಾನು ಮುಡಾ ಕಚೇರಿಗೆ ಹೋದೆ. ನಾನು ನನ್ನ ಕಚೇರಿಗೆ ಹೋಗಲು ನನಗೆ ಯೋಗ್ಯತೆ ಇಲ್ವಾ? ಯಾರನ್ನೋ ಕೇಳಿಕೊಂಡು ಹೋಗಬೇಕಾ? ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಿದರೆ ನಮಗೂ ಉತ್ತರ ಕೊಡಲು ಬರುತ್ತದೆ. ಅದು ಯಾರೇ ಆಗಿರಲಿ ನನಗೂ ಸ್ವಾಭಿಮಾನ ಇದೆ. ಐ ಡೋಂಟ್ ಕೇರ್ ಎಂದು ಹರಿಹಾಯ್ದರು. ಇದನ್ನೂ ಓದಿ: ಬಣ ಬಡಿದಾಟ ಜೋರು – ಯತ್ನಾಳ್ ಟೀಂ ವಿರುದ್ಧವೇ ಬಿಜೆಪಿಯಿಂದ ಪೊಲೀಸ್ ದೂರು
ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ತಪ್ಪಾ? ಅಕ್ರಮ ಆಗಿದೆ ಎಂದು ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದ್ದು ನನ್ನ ತಪ್ಪಾ? ಯಾರನ್ನ ಕೇಳಿ ಮಾಡಬೇಕಿತ್ತು ನಾನು? ನಾನು 2021ರಲ್ಲಿ ಮಂತ್ರಿಯೇ ಅಲ್ಲ. ಕೆಲವರು ಪ್ರೆಸ್‌ಗಳ ಮುಂದೆ ದೊಡ್ಡದಾಗಿ ಹೀರೋ ತರಹ ಬಿಲ್ಡಪ್ ಕೊಡುತ್ತಿದ್ದಾರೆ. ಅವರು ಹೋಗಿ ಲೋಕಾಯುಕ್ತ ಮುಖ್ಯಸ್ಥರ ಮುಂದೆ ದೂರು ಕೊಡಲಿ. ಅವರಿಗೆ ಏನು ಮಾಡಬೇಕೋ ಲೋಕಾಯುಕ್ತದವರೇ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ
ಬೆಂಗಳೂರು: ಬಿಜೆಪಿ ಅಧಿಕಾರ ಅವಧಿಯಲ್ಲಿ 2,900 ಎಕರೆಗೆ ವಕ್ಫ್ ನೋಟಿಸ್ (Waqf Notice) ಜಾರಿಯಾಗಿದೆ. ಇದು ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಆಗಿತ್ತು. ಅದಕ್ಕಾಗಿ ಶಾಸಕ ಯತ್ನಾಳ್ ಅವರು ಬಿಜೆಪಿ ಹಾಗೂ ಯಡಿಯೂರಪ್ಪ, ಬೊಮ್ಮಾಯಿಗೆ ಮುಜುಗರ ಉಂಟುಮಾಡಲು ಹೋರಾಟಕ್ಕೆ ಹೊರಟಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwar) ಕುಟುಕಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿರುವ ವಿಚಾರ ಹಾಗೂ ವಕ್ಫ್ ವಿರೋಧಿಸಿ ಬಿಜೆಪಿ ರೆಬಲ್ಸ್ ಟೀಂ ಹೋರಾಟಕ್ಕೆ ಪ್ರತಿಕ್ರಿಯಿಸಿದರು. ಜಾಸ್ತಿ ದಿನ ಸತ್ಯ ಮುಚ್ಚಿಡಲು ಆಗಲ್ಲ. ಬಿಜೆಪಿಯವರು ನಮ್ಮ ಮೇಲೆ ನೊಟೀಸ್ ಕೊಟ್ಟಿರೋ ಬಗ್ಗೆ ಆರೋಪ ಮಾಡ್ತಿದ್ರು. ಇವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ರು? ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ವಕ್ಫ್ ನೊಟೀಸ್ ಜಾರಿ ಮಾಡಿದ್ದಾರೆ. ಈ ಸಮಿತಿ 2,900 ಎಕರೆಗೆ ನೊಟೀಸ್ ಜಾರಿ ಮಾಡಿದೆ. ಸಿದ್ದರಾಮಯ್ಯ (Siddaramaiah) ಅವಧಿಯಲ್ಲಿ 300 ಎಕರೆಗೆ ನೊಟೀಸ್ ಜಾರಿ ಆಗಿದೆ. ಯಾರ ಅವಧಿಯಲ್ಲಿ ನೊಟೀಸ್ ಜಾಸ್ತಿ ಜಾರಿ ಮಾಡಿದ್ದಾರೆ ಅಂತ ಗೊತ್ತಾಯ್ತಲ್ಲ. ನಾವು ಯಾರ ಮೇಲೆ ಆರೋಪ ಮಾಡಬೇಕು? ಈಗ ಬಿಜೆಪಿಯವರು ವಕ್ಫ್ ವಿಚಾರದಲ್ಲಿ ರಾಜ್ಯ ಪ್ರವಾಸ ಮಾಡಲು ಹೊರಟಿದ್ದಾರಲ್ಲ, ಇದು ಮೊದಲು ಅವರಿಗೆ ಅರ್ಥ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ | ಗೆಳೆಯನಿಗೆ ಥಳಿಸಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಟ್ರಕ್ ಚಾಲಕ
ಬಹುಶಃ ಯತ್ನಾಳ್ ಟೀಮ್ ಹೊರಟಿರೋದು ಬಿಜೆಪಿಯವರಿಗೆ ಮುಖಭಂಗ ಮಾಡೋದಕ್ಕೆ. ಬಿಜೆಪಿಯವರು ಹೆಚ್ಚು ನೊಟೀಸ್ ಕೊಟ್ಟಿದ್ದಾರೆ ಎಂದು ಗೊತ್ತಾದ ಮೇಲೂ ಇವರು ಪ್ರವಾಸ ಹೊರಟಿದ್ದಾರೆ ಅಂದ್ರೆ, ಬಿಜೆಪಿಯವರಿಗೆ ಮುಜುಗರ ಮಾಡಲು ಹೊರಟಿದ್ದಾರೆ ಅಂತ ನನಗನ್ನಿಸುತ್ತೆ. ಇಲ್ಲ ಅಂದ್ರೆ ಯಾಕ್ ಹೋಗ್ತಾರೆ ಅವರು? ಬಿಜೆಪಿ ಕಾಲದಲ್ಲೇ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿದ್ದಾರಲ್ಲ, ಅದನ್ನೆಲ್ಲ ಎಕ್ಸ್‌ಪೋಸ್ ಮಾಡಲು ಯತ್ನಾಳ್ ಹೋಗ್ತಿದ್ದಾರೆ ಅಂತ ಅರ್ಥ. ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಆಗಿತ್ತು ಅಂತ ಇದೆಯಲ್ಲ, ಆದ್ದರಿಂದ ಅವರಿಬ್ಬರನ್ನೂ ಎಕ್ಸ್‌ಪೋಸ್ ಮಾಡಲು ಹೊರಟಿದ್ದಾರೆ ಅನಿಸುತ್ತೆ. ಹಿಂದೆ ಬಿಜೆಪಿ ವಕ್ಫ್ ನೊಟೀಸ್ ಕೊಟ್ಟಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ ಆ ಸಂಧರ್ಭದಲ್ಲಿ. ಅದನ್ನ ನಾವು ಇಶ್ಯೂ ಆಗಿ ತೆಗೆದುಕೊಂಡಿರಲಿಲ್ಲ. ಈಗ ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ.
ಇವಿಎಂ ಹ್ಯಾಕ್ ಸಮರ್ಥಿಸಿಕೊಂಡ ಸಚಿವರು:
ಇದೇ ವೇಳೆ ಗೆದ್ದರೆ ಜನಾದೇಶ, ಸೋತರೆ ಇವಿಎಂ ದೋಷ ಎಂಬ ಸಿ.ಟಿ.ರವಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಮೊದಲಿಂದಲೂ ಇದನ್ನು ಹೇಳಿಕೊಂಡೇ ಬರುತ್ತಿದ್ದೇವೆ. ಸೆಲೆಕ್ಟಿವ್ ಆಗಿ ರಾಜ್ಯ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡ್ತಾರೆ. 2014 ರಿಂದಲೂ ಇದು ನಡೆದುಕೊಂಡು ಬರ್ತಿದೆ. ಮಹಾರಾಷ್ಟ್ರದಲ್ಲೂ ಆರೀತಿ ಆಗಿದೆ ಅಂತ ಚರ್ಚೆ ಆಗ್ತಿದೆ, ಅದನ್ನೇ ನಾನು ಹೇಳಿದ್ದು. ಬಿಜೆಪಿಯವರಿಗೆ ನನ್ನ ಹೇಳಿಕೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಹೇಳಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ
ಮುಡಾದಲ್ಲಿ ಐಎಎಸ್ ಅಧಿಕಾರಿಯೊಬ್ರು 144 ದಾಖಲೆ ತೆಗೆದುಕೊಂಡು ಹೋದ ವಿಚಾರಕ್ಕೆ ಉತ್ತರಿಸಿದ ಅವರು, ಮುಡಾ ಪ್ರಕರಣದಲ್ಲಿ ತನಿಖೆ ನಡೀತಿದೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತೆ, ದಾಖಲೆ ತಗೊಂಡು ಹೋಗಿದ್ದಾರಾ? ಯಾರು ತಗೊಂಡು ಹೋದ್ರು? ಐಎಎಸ್ಸಾ? ಐಪಿಎಸ್ಸಾ? ಎಲ್ಲವೂ ತನಿಖೆಯಲ್ಲಿ ಬಯಲಾಗುತ್ತೆ. ತಪ್ಪು ಮಾಡಿದ್ರೆ ಕ್ರಮ ಆಗುತ್ತೆ ಎಂದು ಸಹಜವಾಗಿಯೇ ಹಾರಿಕೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: MUDA Case | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕಿತ್ತಾ ಐಎಎಸ್ ಅಧಿಕಾರಿಯ ಶ್ರೀರಕ್ಷೆ?