Tag: MRPL

  • ಮಂಗಳೂರು | MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿ ಸಾವು

    ಮಂಗಳೂರು | MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿ ಸಾವು

    ಮಂಗಳೂರು: ವಿಷಾನಿಲ ಸೋರಿಕೆಯಿಂದ (Toxic Gas Leak) ಮಂಗಳೂರು ಹೊರವಲಯದ ಸುರತ್ಕಲ್‌ನ (Surathkal) ಎಂಆರ್‌ಪಿಎಲ್ (MRPL) ಘಟಕದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

    ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಸಾವನ್ನಪ್ಪಿದ ಸಿಬ್ಬಂದಿ. ಮಂಗಳೂರು ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ಘಟನೆ ನಡೆದಿದೆ. ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಪರಿಶೀಲನೆಗೆಂದು ಸಿಬ್ಬಂದಿ ತೆರಳಿದ್ದರು. ಟ್ಯಾಂಕ್ ಮೇಲ್ಛಾವಣಿಗೆ ಹೋದ ಬೆನ್ನಲ್ಲೇ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ತಕ್ಷಣದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮಾಡುವಾಗ ಹೃದಯಾಘಾತ – ನರ್ಸಿಂಗ್ ಹೋಮ್ ಮಾಲೀಕ ಸಾವು

    ಇಬ್ಬರ ರಕ್ಷಣೆಗೆ ಮುಂದಾಗಿದ್ದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಎಂಬವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಆರ್‌ಪಿಎಲ್ ಆಡಳಿತ ಘಟನೆಯ ತನಿಖೆಗೆ ಸಮಿತಿ ರಚಿಸಿದೆ. ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

  • ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ – ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

    ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ – ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

    ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (MV Pranjal) ಸೇರಿದ್ದಾರೆ.

    ಹುತಾತ್ಮ ಯೋಧ (Soldier) ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಬಂಧು-ಬಳಗದವರು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಪೋಷಕರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕ ಮೂಲದ ಕ್ಯಾಪ್ಟನ್‌ ಸೇರಿ ನಾಲ್ವರು ಯೋಧರು ಹುತಾತ್ಮ

    ಸದ್ಯ ಪ್ರಾಂಜಲ್‌ ಪಾರ್ಥೀವ ಶರೀರ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇದೆ. ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಕುಟುಂಬಸ್ಥರಿಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಪ್ರಾಂಜಲ್‌ ಹುತಾತ್ಮನಾದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಆಪ್ತರು ಮನೆಯ ಬಳಿ ಜಮಾಯಿಸಿದ್ದಾರೆ. ಗುರುವಾರ (ನ.23) ಬೆಂಗಳೂರಿಗೆ ಪಾರ್ಥಿವ ಶರೀರ ಬರುವುದು ಬಹುತೇಕ ಅನುಮಾನ, ಶುಕ್ರವಾರ ಮುಂಜಾನೆ ವೇಳೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಮನೆಯ ಸಮೀಪ ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಮನೆಯ ಮುಂಭಾಗ ಸ್ವಚ್ಛತಾ ಕಾರ್ಯವೂ ನಡೆಯುತ್ತಿದೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿ ನಿವಾಸವಿದ್ದು, 2014ರಿಂದ ಪ್ರಾಂಜಲ್ ಪೋಷಕರು ಅಲ್ಲಿ ವಾಸವಿದ್ದಾರೆ. ಕಳೆದ 6 ತಿಂಗಳ ಹಿಂದೆ ದಸರಾ ಹಬ್ಬಕ್ಕೆ ಮನೆಗೆ ಬಂದಿದ್ದ ಪ್ರಾಂಜಲ್‌, ಮನೆಯ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು. ಒಂದು ವಾರ ಪೋಷಕರ ಜೊತೆಯಿದ್ದು ಮತ್ತೆ ಕರ್ತವ್ಯಕ್ಕೆ ಮರಳಿದ್ದದರು. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ – ನೀರು ನಿಯಂತ್ರಣ ಸಮಿತಿ ಹೇಳಿದ್ದೇನು?

    2 ವರ್ಷಗಳ ಹಿಂದೆ ಮದುವೆಯಾಗಿತ್ತು: ಮೂಲತಃ ಮೈಸೂರಿನವರಾದ ಪ್ರಾಂಜಲ್‌ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಏಕೈಕ ಪುತ್ರ. ಮಂಗಳೂರಿನ MRPL ಶಾಲೆಯಲ್ಲಿ, ಪಿಯು ಶಿಕ್ಷಣವನ್ನು ಮಹೇಶ್ ಪಿ.ಯು ಕಾಲೇಜಿನಲ್ಲಿ ಮುಗಿಸಿದ್ದರು. ಉನ್ನತ ಶಿಕ್ಷಣಕ್ಕಾಗಿ ಮಧ್ಯ ಪ್ರದೇಶದ ಆರ್ಮಿ ಕಾಲೇಜಿಗೆ ಸೇರಿಕೊಂಡರು. ಪ್ರಾಂಜಲ್‌ 2 ವರ್ಷಗಳ ಹಿಂದೆ ಕಾಶ್ಮೀರಕ್ಕೆ ತೆರಳಿದ್ದರು, ತೆರಳುವುದಕ್ಕೂ ಮುನ್ನ ಬೆಂಗಳೂರಿನ ಅದಿತಿ ಎಂಬವರ ಜೊತೆ ವಿವಾಹವಾಗಿತ್ತು. ಪತಿ ಕಾಶ್ಮೀರಕ್ಕೆ ತರಳಿದ್ದು, ಅದಿತಿ ಚೆನ್ನೈ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪತಿ ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.

  • ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

    ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

    ನವದೆಹಲಿ: ರಷ್ಯಾ ಭಾರೀ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡುತ್ತಿದ್ದು, ಭಾರತ ಸಿಕ್ಕ ಅವಕಾಶವನ್ನು ತಕ್ಕ ಸಮಯದಲ್ಲೇ ಚೆನ್ನಾಗಿ ಸದುಪಯೋಗಪಡಿಸಿಕೊಳ್ಳುತ್ತಿದೆ.

    ರಷ್ಯಾ ಭಾರೀ ರಿಯಾಯಿತಿ ಬೆಲೆಯಲ್ಲಿ ಭಾರತಕ್ಕೆ ತೈಲವನ್ನು ನೀಡುವುದಾಗಿ ಭರವಸೆ ನೀಡಿದ್ದು, ಈಗಾಗಲೇ ಭಾರತದ ಹಲವು ಕಂಪನಿಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ರಷ್ಯಾದಿಂದ ಭಾರೀ ರಿಯಾಯಿತಿ ಬೆಲೆಯಲ್ಲಿ 30 ಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದರೆ, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಹೆಚ್‌ಪಿಸಿಎಲ್) 20 ಲಕ್ಷ ಬ್ಯಾರೆಲ್ ತೈಲ ಖರೀದಿಗೆ ಮುಂದಾಗಿದೆ.

    ಇದೀಗ ಮಂಗಳೂರು ಮೂಲದ ಕಂಪನಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್(ಎಂಆರ್‌ಪಿಎಲ್) ಕೂಡಾ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಗೆ ಮುಂದಾಗಿದೆ. ಇದನ್ನೂ ಓದಿ: ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ

    ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುತ್ತಿದ್ದಂತೆ ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಎಲ್ಲಾ ವಸ್ತುಗಳ ಮೇಲೂ ನಿರ್ಭಂದ ಹೇರಿವೆ. ಇದರಿಂದ ರಷ್ಯಾದಿಂದ ಕಚ್ಚಾ ತೈಲ ಸೇರಿದಂತೆ ಹಲವು ವಸ್ತುಗಳು ಇತರ ದೇಶಗಳಿಗೆ ರಫ್ತಾಗುವಲ್ಲಿ ತಡೆಯಾಗಿದೆ. ಹೀಗಾಗಿ ಇದೀಗ ರಷ್ಯಾ ಭಾರೀ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡಲು ಮುಂದಾಗಿದೆ.

    ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 140 ಡಾಲರ್‌ನಿಂದ 99 ಡಾಲರ್‌ಗೆ ಇಳಿಕೆಯಾಗಿದೆ. ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತಿರುವ ತೈಲವನ್ನು ಖರೀದಿ ಮಾಡುತ್ತಿರುವ ಭಾರತ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ.

    ಭಾರತ ಇದೀಗ ಭಾರೀ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆಯಾದರೂ ಇದರ ಸಾಗಣೆ ಭಾರತಕ್ಕೆ ದೊಡ್ಡ ಹೊರೆಯಾಗಿದೆ. ಇದಕ್ಕೆ ರಷ್ಯಾ ಭಾರತಕ್ಕೆ ಸಾಗಣೆ ಹಾಗೂ ವಿಮೆಯ ಜವಾಬ್ದಾರಿಯನ್ನು ಖುದ್ದಾಗಿ ವಹಿಸುತ್ತದೆ ಎಂಬುದಾಗಿ ಭರವಸೆ ನೀಡಿದೆ. ಇದನ್ನೂ ಓದಿ: ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

    ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದ ನಂತರ ತೈಲ ಬೆಲೆಗಳ ದರವು ಸತತ 5 ಬಾರಿ ಇಳಿಮುಖವಾಗಿದೆ. ಇದೀಗ ಮುಂದೆ ಸವಾಲುಗಳು ಎದುರಾಗಲಿದ್ದು, ಕಚ್ಚಾತೈಲದರ ಏರಿಕೆಯಾಗುವ ಸಾಧ್ಯತೆಯು ಇದೆ. ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಅದರ ನಿರ್ಬಂಧವನ್ನು ಉಲ್ಲಂಘಿಸುವುದಿಲ್ಲ. ಹಾಗಾಗಿಯೇ ಉಕ್ರೇನ್ ಮೇಲಿನ ದಾಳಿಯನ್ನು ಅದು ಬೆಂಬಲಿಸುವಂತೆ ಮಾಡುತ್ತಿದೆ ಎಂದು ಯುಎಸ್ ಶುಕ್ರವಾರ ಹೇಳಿದೆ.

    ಭಾರತದ ಅವಲಂಬನೆ ಎಷ್ಟು?
    ಭಾರತಕ್ಕೆ ಇರಾಕ್‌ನಿಂದ ಶೇ.23, ಸೌದಿ ಅರೇಬಿಯಾದಿಂದ ಶೇ.18 ಹಾಗೂ ಯುಎಇಯಿಂದ ಶೇ.11 ರಷ್ಟು ತೈಲ ಆಮದಾಗುತ್ತಿದ್ದು, ಯುಎಸ್‌ಎ ನಿಂದ ಶೇ.7.3ರಷ್ಟು ಕಚ್ಚಾತೈಲ ಆಮದಿನ ಮೂಲವಾಗಿದೆ. ದೇಶದ ಅಗ್ರ ತೈಲ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಈಗಾಗಲೇ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ಭಾರತವು ತನ್ನ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದ್ದರಿಂದ ಕಚ್ಚಾ ತೈಲದ ಅಗತ್ಯತೆಯ ಸುಮಾರು ಶೇ.85 (ದಿನಕ್ಕೆ 5 ಮಿಲಿಯನ್ ಬ್ಯಾರೆಲ್‌ಗಳು) ಆಮದು ಮಾಡಿಕೊಳ್ಳಬೇಕಾಗಿದೆ. ಆದರೆ, ಪ್ರಸ್ತುತ ವರ್ಷದಲ್ಲೇ ಯುಸ್‌ನಿಂದ ಆಮದುಗಳು ಶೇ.11ರಷ್ಟು ಗಣನೀಯವಾಗಿ ಹೆಚ್ಚಾಗಲಿದ್ದು, ಇದರಲ್ಲಿ ಮಾರುಕಟ್ಟೆಯ ಪಾಲು ಶೇ.8ರಷ್ಟಿದೆ ಎಂದು ಹೇಳಲಾಗಿದೆ.

  • ಉದ್ಯೋಗದ ಹಕ್ಕಿಗಾಗಿ ಧ್ವನಿ ಎತ್ತರಿಸಿದ ತುಳುನಾಡು – ಸಮಾನ ಮನಸ್ಕರ ಮನೆ ಮನೆ ಪ್ರತಿಭಟನೆ ಕರೆಗೆ ಅಭೂತಪೂರ್ವ ಬೆಂಬಲ

    ಉದ್ಯೋಗದ ಹಕ್ಕಿಗಾಗಿ ಧ್ವನಿ ಎತ್ತರಿಸಿದ ತುಳುನಾಡು – ಸಮಾನ ಮನಸ್ಕರ ಮನೆ ಮನೆ ಪ್ರತಿಭಟನೆ ಕರೆಗೆ ಅಭೂತಪೂರ್ವ ಬೆಂಬಲ

    ಮಂಗಳೂರು: ಎಂಆರ್ ಪಿಎಲ್(MRPL) ಉದ್ಯೋಗ ನೇಮಕಾತಿಯಲ್ಲಿ ತುಳುನಾಡು ಸೇರಿದಂತೆ ಕನ್ನಡಿಗರನ್ನು ಹೊರಗಿಟ್ಟಿರುವುದನ್ನು ಖಂಡಿಸಿ ತುಳುನಾಡಿನ ಉದ್ಯಮಗಳಲ್ಲಿ ತುಳುವರಿಗೆ ದೊಡ್ಡ ಪಾಲು ಸಿಗಬೇಕು, ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿ ತುಳುನಾಡಿನ ಸಮಾನ ಮನಸ್ಕ ಸಂಘಟನೆಗಳು ಕರೆ ನೀಡಿದ್ದ “ಮನೆ ಮನೆ ಪ್ರತಿಭಟನೆ” ಅಭೂತಪೂರ್ವ ಯಶಸ್ಸು ಕಂಡಿದೆ.

    ತುಳುನಾಡಿಗೆ ಉದ್ದಿಮೆ, ಉದ್ಯೋಗದಲ್ಲಿ ಸತತವಾಗಿ ಆಗುತ್ತಿರುವ ಅನ್ಯಾಯವನ್ನು ಕಂಡು ಮೌನವಾಗಿರುವ ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ, ಕಂಪೆನಿಗಳ ಆಡಳಿತಗಳಿಗೆ ಇದು ಎಚ್ಚರಿಕೆಯ ಗಂಟೆ. ಇದರ ಯಶಸ್ಸು ಇಂದಿನ ಪ್ರತಿಭಟನೆಯನ್ನು ಮನೆ ಮನೆಗಳಿಗೆ ತಲುಪಿಸಿದ, ಧ್ವನಿ ಎತ್ತರಿಸಿ ಪ್ರತಿಭಟಿಸಿದ ಜನತೆಗೆ ಸಲ್ಲುತ್ತದೆ. ಹಾಗೂ ಸಮಾನ ಮನಸ್ಕ ಸಂಘಟನೆಗಳು ಈ ಯಶಸ್ಸಿಗಾಗಿ ಜನತೆಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

    ಐದು ದಿನಗಳ ಹಿಂದೆ ಸಮಾನ ಮನಸ್ಕ ಸಂಘಟನೆಗಳು ಮೇಲ್ಕಂಡ ವಿಷಯಗಳನ್ನು ಮುಂದಿಟ್ಟು ಮನೆ ಮನೆ ಪ್ರತಿಭಟನೆ ಗೆ ಕರೆ ನೀಡಿದ್ದವು. ಈ ಕರೆಗೆ ಅವಳಿ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ದೊರಕತೊಡಗಿತು. ಡಿವೈಎಫ್‍ಐ ನೇತೃತ್ವದ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಯುವ ಕಾಂಗ್ರೆಸ್, ಯುವ ಜನತಾ ದಳ, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ಕಾರ್ಮಿಕ, ಮಹಿಳಾ ಸಂಘಟನೆಗಳು ಮಾತ್ರ ವಲ್ಲದೆ ಜಿಲ್ಲೆಯ ವಿವಿಧ ಯುವಕ ಮಂಡಲಗಳು, ಕ್ರೀಡಾ ತಂಡಗಳು, ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಸೇರಿಕೊಂಡವು.

    “ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್” ಎಂಬ ಘೋಷಣೆ ಸಾಮಾನ್ಯ ಜನತೆಯನ್ನು ಆಕರ್ಷಿಸಿತು. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಇಂದಿನ ಪ್ರತಿಭಟನೆ ಅಭೂತಪೂರ್ವ ಜನ ಬೆಂಬಲದೊಂದಿಗೆ ಯಶಸ್ಸು ಸಾಧಿಸಿತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಇಂದು ಪ್ರತಿಭಟನೆ ನಡೆದಿದೆ. ಬೆಳಗ್ಗೆ ಮುನೀರ್ ಕಾಟಿಪಳ್ಳ ನೇತೃತ್ವದ ತಂಡ ಎಮ್ ಆರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ಪೋಸ್ಟರ್ ಪ್ರದರ್ಶಿಸಿ ಪ್ರತಿಭಟಿಸಿದರೆ, ಮಾಜಿ ಸಚಿವ ರಮಾನಾಥ ರೈ, ಶಾಸಕರಾದ ಯು ಟಿ ಖಾದರ್, ಹರೀಶ್ ಕುಮಾರ್, ದಲಿತ ನಾಯಕರಾದ ಎಂ ದೇವದಾಸ್, ರಘು ಎಕ್ಕಾರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ ಮಾನ್ ಬಂಟ್ವಾಳ, ಹಿರಿಯ ವಿಚಾರವಾದಿಗಳಾದ ಪ್ರೊ ನರೇಂದ್ರ ನಾಯಕ್, ಶ್ಯಾಮ ಸುಂದರ ರಾವ್, ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಡಿವೈಎಫ್‍ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಅಶ್ರಫ್ ಕೆಸಿ ರೋಡ್, ನವೀನ್ ಕೊಂಚಾಡಿ, ಸಿಪಿಎಂ ನಾಯಕರಾದ ವಸಂತ ಆಚಾರಿ, ಕೃಷ್ಣಪ್ಪ ಸಾಲ್ಯಾನ್, ಯಾದವ ಶೆಟ್ಟಿ, ಜಾತ್ಯಾತೀತ ಜನತಾ ದಳದ ನಾಯಕರಾದ ಎಂ ಬಿ ಸದಾಶಿವ, ಅಕ್ಷಿತ್ ಸುವರ್ಣ, ಸಾಮಾಜಿಕ ಕಾರ್ಯಕರ್ತರಾದ ಎಂ ಜಿ ಹೆಗ್ಡೆ, ದಿಲ್ ರಾಜ್ ಆಳ್ವ,ಬಿ ಎಂ ಮಾಧವ, ರಾಘವೇಂದ್ರ ರಾವ್ ಸುರತ್ಕಲ್, ಮಾಜಿ ಉಪ ಮೇಯರ್ ಗಳಾದ ಪುರುಶೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ ಬೈಲ್, ಹರೀಶ್ ಪುತ್ರನ್ ಮೂಲ್ಕಿ,ಶೇಖರ ಹೆಜಮಾಡಿ, ಧನಂಜಯ ಮಟ್ಟು ಮತ್ತಿತರ ಪ್ರಮುಖರು ವಿವಿದೆಡೆ ಪೋಸ್ಟರ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.

    ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಸೇರಿಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮೂಲೆ ಮೂಲೆಗಳಲ್ಲೂ ಪ್ರತಿಭಟನೆ ನಡೆದಿದ್ದರೂ, ಮಂಗಳೂರು ನಗರ, ಉಳ್ಳಾಲ, ಮೂಡಬಿದ್ರೆ ಭಾಗಗಳಲ್ಲಿ ವ್ಯಾಪಕವಾಗಿ ಪ್ರತಿಭಟನೆಗಳು ಮನೆ ಮನೆಯಲ್ಲಿ ನಡೆದವು. ಅದರಲ್ಲೂ ಎಂ ಆರ್ ಪಿ ಎಲ್ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹತ್ತಿರ ಇರುವ ಕಂಪೆನಿಯ ಸುತ್ತಲಿನ ಸುರತ್ಕಲ್,ಬಜಪೆ, ಕಾವೂರು, ಕಟೀಲು ಹೋಬಳಿಗಳಲ್ಲಿ ಮತ್ತಷ್ಟು ತೀವ್ರವಾಗಿ ಪ್ರತಿಭಟನೆಗಳು ನಡೆದಿದ್ದು ಸಾವಿರಾರು ಜನ ಮನೆಮನೆ ಪ್ರತಿಭಟನೆ ನಡೆಸಿದ್ರು.

    ಇಂದಿನ ಪ್ರತಿಭಟನೆಗೆ ದೊರಕಿರುವ ಅಭೂತಪೂರ್ವ ಜನಬೆಂಬಲ ಬೃಹತ್ ಕಂಪೆನಿಗಳ ಹಾಗೂ ಬೇಜವಾಬ್ದಾರಿ ಜನಪ್ರತಿನಿಧಿಗಳ ವಿರುದ್ಧ ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶದ ಪ್ರತಿಫಲನ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರು ಮಾತು ಕೊಟ್ಟಂತೆ ಎಮ್ ಆರ್ ಪಿ ಎಲ್ ನೇಮಕಾತಿಯನ್ನು ರದ್ದುಗೊಳಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ ಮರು ಪ್ರಕ್ರಿಯೆ ನಡೆಸಬೇಕು, ಸರೋಜಿನಿ ಮಹಿಷಿ ವರದಿಯ ಆಧಾರದಲ್ಲಿ ರಾಜ್ಯ ಸರಕಾರ ಕಾಯ್ದೆ ರಚಿಸಬೇಕು, ತುಳುನಾಡಿನ ಸಾರ್ವಜನಿಕ ವಲಯ ಹಾಗೂ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಎಲ್ಲಾ ಹಂತಗಳಲ್ಲಿ ನ್ಯಾಯೋಚಿತ ಪಾಲು ದೊರಕಬೇಕು. ಈ ಎಲ್ಲಾ ಬೇಡಿಕೆಗಳಿಗೆ ಸ್ಪಂದನೆ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರತರದ ಪ್ರತಿಭಟನೆಗಳು ಎದ್ದು ಬರಲಿವೆ. ಇಂದಿನ ಪ್ರತಿಕ್ರಿಯೆ ಎಚ್ಚರಿಕೆಯ ಘಂಟೆ, ಬೇಡಿಕೆ ಈಡೇರದೆ ವಿರಮಿಸುವುದಿಲ್ಲ, ಮತ್ತಷ್ಟು ಒಗ್ಗಟ್ಟಿನಿಂದ ಹೋರಾಟವನ್ಜು ಸಮಾನ ಮನಸ್ಕ ಸಂಘಟನೆಗಳು ಮುಂದಕ್ಕೊಯ್ಯಲಿವೆ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  • ಎಂಆರ್‌ಪಿಎಲ್ ದೋಣಿ ದುರಂತ – ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ ಕರಾವಳಿ ಕಾವಲುಪಡೆ

    ಎಂಆರ್‌ಪಿಎಲ್ ದೋಣಿ ದುರಂತ – ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ ಕರಾವಳಿ ಕಾವಲುಪಡೆ

    ಉಡುಪಿ: ಮಂಗಳೂರಿನ ಎಂಆರ್‌ಪಿಎಲ್ ಕಂಪನಿಯ ಟಗ್ ದೋಣಿ ಮುಳುಗಿರುವ ಘಟನೆಗೆ ಸಂಬಂಧಿಸಿದಂತೆ 9 ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕರಾವಳಿ ಕಾವಲುಪಡೆ ಪೊಲೀಸರ ತಂಡ ಕೂಡಾ ರಕ್ಷಣಾ ಕೆಲಸದಲ್ಲಿ ಕೈಜೋಡಿಸಿದ್ದಾರೆ.

    ಬೋಟ್ ನಲ್ಲಿವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಸತತ 8 ಗಂಟೆಯಿಂದ ಟ್ಯೂಬ್ ನಲ್ಲಿ ಈಜಿ ಜೀವ ಉಳಿಸಿಕೊಂಡ ಇಬ್ರು ಉಡುಪಿಯ ಪಡುಕೆರೆ ಮಟ್ಟು ಕೊಪ್ಲಕ್ಕೆ ಬಂದಿದ್ದಾರೆ. ಬದುಕುಳಿದವರನ್ನು ಮೊಮಿರುಲ್ ಮುಲ್ಲಾ, ಕರೀಮುಲ್ಲಾ ಶೇಕ್ ಎಂದು ಗುರುತಿಸಲಾಗಿದೆ.

    ಈ ನಡುವೆ ಮಗುಚಿಬಿದ್ದ ಟಗ್ ಬೋಟಿನಲ್ಲಿದ್ದ ಒಬ್ಬ ವ್ಯಕ್ತಿಯದ್ದು ಎನ್ನಲಾದ ಶವಪತ್ತೆಯಾಗಿದೆ. ಹೇಮಚಂದ್ರ ಜಾ ಎಂಬಾತನ ಶವ ಪಡುಬಿದ್ರೆಯಲ್ಲಿ ಸಿಕ್ಕಿದೆ. ಒಟ್ಟು ಒಂಬತ್ತು ಜನರು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿಯಿದೆ. ದಡ ಸೇರಿದ ಇಬ್ಬರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಯುವಕ ಬಂದು ತಲುಪಿದ್ದಾನೆ. ನಸೀಮ್ ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ಬದುಕಿ ಬಂದವನು. ಹರಿಯಾಣ ಮೂಲದ ನಸೀಮ್ ಮಂಗಳೂರು ಎಂಆರ್ ಪಿಎಲ್ ಕಂಪನಿಯ ನೌಕರನಾಗಿದ್ದು, ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭ ನೀರುಪಾಲಾಗಿದ್ದರು.

    ಸದ್ಯ ಬೋಟ್‍ನಲ್ಲಿ ಸುರಕ್ಷಿತವಾಗಿರುವ 9 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡುತ್ತಿದೆ. ಸೆಲ್ಫಿ ವಿಡಿಯೋ ಮಾಡಿ ರಕ್ಷಣೆಗೆ ಮೊರೆ ಹೋಗಿದ್ದಾರೆ. ಕರಾವಳಿ ಕಾವಲುಪಡೆ ಪೊಲೀಸರಿಗೆ ವೀಡಿಯೋ ರವಾನೆ ಮಾಡಲಾಗಿದೆ. ರಕ್ಷಣಾ ಕಾರ್ಯಚರಣೆ ಕಡಲ ಅಲೆಗಳ ಅಬ್ಬರ ಅಡ್ಡಿಯಾಗಿದೆ.

    ಸಮುದ್ರ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್‍ಪಿ ಎಸ್ ವಿಷ್ಣುವರ್ಧನ್ ಭೇಟಿ ನೀಡಿದ್ದಾರೆ.

  • ಎಂಆರ್‌ಪಿಎಲ್ ಕಂಪನಿಯ ನಿರ್ಲಕ್ಷ್ಯ – ಜನವಸತಿ ಪ್ರದೇಶಕ್ಕೆ ನುಗ್ಗಿದ ಸಮುದ್ರದ ನೀರು

    ಎಂಆರ್‌ಪಿಎಲ್ ಕಂಪನಿಯ ನಿರ್ಲಕ್ಷ್ಯ – ಜನವಸತಿ ಪ್ರದೇಶಕ್ಕೆ ನುಗ್ಗಿದ ಸಮುದ್ರದ ನೀರು

    ಮಂಗಳೂರು: ನಗರದ ಪಣಂಬೂರು ಸಮೀಪದ ತಣ್ಣೀರುಬಾವಿ ಎಂಬಲ್ಲಿ ಸಮುದ್ರದ ನೀರು ದಡಕ್ಕೆ ನುಗ್ಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

    ಎಂಆರ್‌ಪಿಎಲ್ ಪೆಟ್ರೋಲಿಯಂ ಕಂಪನಿಗೆ ಕಡಲಿನ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಘಟಕ ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸಮುದ್ರದ ನೀರನ್ನು ಪೈಪ್ ಮೂಲಕ ಸ್ಥಾವರಕ್ಕೆ ತರುವ ಕಾಮಗಾರಿ ನಡೆಯುತ್ತಿದ್ದು, ಪೈಪ್ ಅಳವಡಿಸಲು ಸಮುದ್ರ ತೀರದ ಮರಳನ್ನು ತೆಗೆಯಲಾಗಿದೆ.

    ಇದೀಗ ಕಡಲಿನ ಅಬ್ಬರ ಹೆಚ್ಚಾಗಿದ್ದರಿಂದ ಸಮುದ್ರದ ನೀರು ಮರಳು ತೆಗೆದ ಪ್ರದೇಶದಿಂದ ಜನ ವಸತಿ ಸ್ಥಳಕ್ಕೆ ನುಗ್ಗಿ ಬಂದಿದೆ.ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದರೆ ಇನ್ನೂ ತೊಂದರೆಗಳಾಗಬಹುದು ಅನ್ನೋ ಹಿನ್ನೆಲೆಯಲ್ಲಿ ಸ್ಥಳೀಯ 15 ಕುಟುಂಬಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ. ಎಂಆರ್‌ಪಿಎಲ್ ನ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಹೀಗಾಗಿ ಇಲ್ಲಿ ಸ್ಥಾವರದ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್, ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ- ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

    ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ- ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

    ಮಂಗಳೂರು: ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನಿಂದ ಭಾರೀ ಪ್ರಮಾಣ ಅನಿಲ ಸೋರಿಕೆಯಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅನಿಲ ಸೋರಿಕೆಯಾಗಿದೆ.

    ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕರವೇಲು ಬಳಿ ಗ್ಯಾಸ್ ಸಿಲಿಂಡರ್ ನ ಕ್ಯಾಪ್ ಏಕಾಏಕಿ ಓಪನ್ ಆಗಿದ್ದರಿಂದ ಅನಿಲ ಸೋರಿಕೆಯಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಅಧಿಕಾರಿಗಳು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

    ಸ್ಥಳಕ್ಕೆ ಎಂಆರ್‌ಪಿಎಲ್ (Mangalore Refinery and Petrochemicals Limited) ತಜ್ಞರು ಆಗಮಿಸಿ ಅನಿಲ ಸೋರಿಕೆ ತಡೆದಿದ್ದಾರೆ. ಗ್ಯಾಸ್ ಟ್ಯಾಂಕರ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು. ಅನಿಲ ಹೇಗೆ ಸೋರಿಕೆ ಆಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

  • ಎಂಆರ್‌ಪಿಎಲ್ ಸ್ಥಾವರದಿಂದ ಮತ್ತೆ ತ್ಯಾಜ್ಯ ಸೋರಿಕೆ-  ಆತಂಕದಲ್ಲಿ ಸ್ಥಳೀಯರು

    ಎಂಆರ್‌ಪಿಎಲ್ ಸ್ಥಾವರದಿಂದ ಮತ್ತೆ ತ್ಯಾಜ್ಯ ಸೋರಿಕೆ- ಆತಂಕದಲ್ಲಿ ಸ್ಥಳೀಯರು

    ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸ್ಥಾವರದಿಂದ ಮತ್ತೆ ತ್ಯಾಜ್ಯ ಸೋರಿಕೆಯ ಆರೋಪ ಕೇಳಿಬಂದಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.

    ಎಂಆರ್‌ಪಿಎಲ್ ಸ್ಥಾವರ ಬಳಿಯ ಕುತ್ತೆತ್ತೂರು ಗ್ರಾಮದ ಕೆಂಗಲ್ ಮತ್ತು ಅತ್ರುಕೋಡಿ ಭಾಗದಲ್ಲಿ ತ್ಯಾಜ್ಯ ಸೋರಿಕೆಯಾಗುತ್ತಿದ್ದು, ತೊರೆಗಳ ನೀರಿನಲ್ಲಿ ಬಿಳಿ ನೊರೆ ಕಾಣಿಸಿಕೊಂಡಿದೆ. ಮಳೆ ನೀರಿಗೆ ಸ್ಥಾವರದ ತ್ಯಾಜ್ಯ ಸೇರಿಕೊಂಡಿದೆ. ಇದೇ ತೊರೆಯ ನೀರು ಹರಿದು ಮುಂದೆ ನಂದಿನಿ ನದಿಯನ್ನು ಸೇರುತ್ತಿದ್ದು, ಮಾಲಿನ್ಯದಿಂದಾಗಿ ಮೀನು ಸಂತತಿ ನಾಶವಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

    ತ್ಯಾಜ್ಯ ಸೋರಿಕೆಯಿಂದ ಬಿಳಿ ನೊರೆ ಕಾಣಿಸಿಕೊಂಡಿಲ್ಲ. ಪರಿಸರದಲ್ಲಿ ಕಾಂಕ್ರೀಟ್ ಕೆಲಸ ನಡೆಯುತ್ತಿದೆ. ಕಾಂಕ್ರೀಟ್ ಮಿಕ್ಸಿಂಗ್ ವೇಳೆ ಮಳೆಯಾಗಿದ್ದು, ನೀರಿಗೆ ಸೇರಿಕೊಂಡು ಬಿಳಿನೊರೆ ಉಂಟಾಗಿರಬೇಕು ಎಂದು ಎಂಆರ್‌ಪಿಎಲ್ ಆಡಳಿತ ಮಂಡಳಿ ಹೇಳುತ್ತಿದೆ.

    ಯಾವುದೇ ಕಾಂಕ್ರೀಟ್ ನೀರು ಸೇರಿದರೆ ಬಿಳಿನೊರೆ ಕಾಣಿಸಿಕೊಳ್ಳುವುದಿಲ್ಲ. ತ್ಯಾಜ್ಯ ಸೋರಿಕೆ ಆಗುತ್ತಿರುವುದನ್ನು ಮುಚ್ಚಿ ಹಾಕಲು ಎಂಆರ್‍ಪಿಎಲ್ ಕುಂಟು ನೆಪ ಹೇಳುತ್ತಿದೆ. ಸ್ಥಾವರದ ತಾಂತ್ರಿಕ ವೈಫಲ್ಯದಿಂದ ತ್ಯಾಜ್ಯ ಸೋರಿಕೆಯಾಗುತ್ತಿದೆ. ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಎಂಆರ್‌ಪಿಎಲ್ ಜೊತೆಗೆ ಶಾಮೀಲಾಗಿ ನೈಜ ವರದಿ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಎಂಆರ್‍ಪಿಎಲ್ ಸ್ವಾರ್ಥಕ್ಕೆ ಲಕ್ಷ-ಲಕ್ಷ ಮೀನು ಬಲಿ – ವಿಷ ತ್ಯಾಜ್ಯದಿಂದ ಫಲ್ಗುಣಿ ನದಿ ನೀರೆಲ್ಲಾ ಕಪ್ಪು

    ಎಂಆರ್‍ಪಿಎಲ್ ಸ್ವಾರ್ಥಕ್ಕೆ ಲಕ್ಷ-ಲಕ್ಷ ಮೀನು ಬಲಿ – ವಿಷ ತ್ಯಾಜ್ಯದಿಂದ ಫಲ್ಗುಣಿ ನದಿ ನೀರೆಲ್ಲಾ ಕಪ್ಪು

    ಮಂಗಳೂರು: ನದಿಯ ದಡದಲ್ಲಿ ರಾಶಿ ರಾಶಿಯಾಗಿ ಸತ್ತು ಬಿದ್ದಿರೋ ಮೀನುಗಳು. ಕಪ್ಪು ಕಪ್ಪಾಗಿರೋ ನದಿಯ ನೀರು. ಉಸಿರಾಡಲು ಸಾಧ್ಯವಾಗದಷ್ಟು ದುರ್ವಾಸನೆ. ಇದು ಮಂಗಳೂರಿನ ಮಳವೂರಿನಲ್ಲಿರುವ ಫಲ್ಗುಣಿ ನದಿಯ ಕರುಣಾಜನಕ ಸ್ಥಿತಿ.

    ಹೌದು. ಈ ನದಿಯಲ್ಲಿದ್ದ ಲಕ್ಷಾಂತರ ಮೀನುಗಳು ದಿನಬೆಳಗಾಗುವುದರೊಳಗೆ ನದಿಯಲ್ಲೇ ಸತ್ತು ದಡಕ್ಕೆ ಬಿದ್ದಿದೆ. ಮಾತ್ರವಲ್ಲ ಮೀನುಗಳು ಅಲ್ಲೇ ಕೊಳೆತು ಹೋದ ಪರಿಣಾಮ ಊರಿಡೀ ದುರ್ವಾಸನೆ ಹಬ್ಬಿದೆ. ಇದಕ್ಕೆಲ್ಲ ಕಾರಣ ಆಗಿರೋದು ಎಂಆರ್‍ಪಿಎಲ್ ಅನ್ನೋ ಪೆಟ್ರೋಲಿಯಂ ಕಂಪನಿ. ಎಂಆರ್‍ಪಿಎಲ್‍ನ ವಿಷಯುಕ್ತ ನೀರೆಲ್ಲಾ ನದಿ ಸೇರ್ತಿರೋದ್ರಿಂದ ನೀರೆಲ್ಲಾ ಕಲುಷಿತಗೊಂಡು ಭಾರೀ ಅನಾಹುತ ಸಂಭವಿಸಿದೆ.

    ಕೇವಲ ಜಲಚರಗಳು ಮಾತ್ರವಲ್ಲ, ನದಿ ನೀರು ಕುಡಿದ ದನಕರುಗಳೂ ಸಾವನ್ನಪ್ಪಿದ್ದು ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಅಲ್ಲದೆ ನದಿ ಅಸುಪಾಸಿನ ಬಾವಿ ನೀರು ಕೂಡ ಕಪ್ಪಾಗಿದ್ದು ಕುಡಿಯಲು ಬಾರದಂತಾಗಿದೆ. ಈ ಬಗ್ಗೆ ಸ್ಥಳೀಯರು ಎಷ್ಟೇ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಎಲ್ಲರೂ ಎಂಆರ್‍ಪಿಎಲ್ ಲಾಬಿಗೆ ಮಣಿದಂತಿದೆ ಅಂತಾ ಮೀನುಗಾರ ಶ್ರೀನಿವಾಸ್ ಆರೋಪಿಸಿದ್ದಾರೆ.