Tag: Mr. Dalit

  • ವಾಟ್ಸಪ್‍ನಲ್ಲಿ ಮೀಸೆ ತಿರುವೋ dp ಹಾಕಿ Mr. ದಲಿತ್ ಪ್ರತಿಭಟನೆ

    ವಾಟ್ಸಪ್‍ನಲ್ಲಿ ಮೀಸೆ ತಿರುವೋ dp ಹಾಕಿ Mr. ದಲಿತ್ ಪ್ರತಿಭಟನೆ

    ಅಹಮದಾಬಾದ್: ಗುಜರಾತ್‍ನಲ್ಲಿ ಮೀಸೆ ಬಿಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ವಿನೂತನ ಪ್ರತಿಭಟನೆಯೊಂದು ಶುರುವಾಗಿದೆ. ಅಕ್ಕಪಕ್ಕದ ಗ್ರಾಮದ ನೂರಾರು ಯುವಕರು ಮೀಸೆ ತಿರುವೋ ಫೋಟೋವನ್ನ ವಾಟ್ಸಪ್ ಪ್ರೊಫೈಲ್ ಫೋಟೋ ಮಾಡಿಕೊಳ್ಳೋ ಮೂಲಕ ಪ್ರತಿಭಟಿಸುತ್ತಿದ್ದಾರೆ. ಫೋಟೋ ಅಡಿಯಲ್ಲಿ ಮಿಸ್ಟರ್ ದಲಿತ್ ಎಂದು ಬರೆಯಲಾಗಿದೆ.

    ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಈ ಅಭಿಯಾನ ಶುರುವಾಗಿದ್ದು, ದಲಿತ ಯುವಕರು ಮೀಸೆ ತಿರುವೋ ಫೋಟೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಈ ನಡುವೆ ಮಂಗಳವಾರದಂದು 17 ವರ್ಷದ ಯುವಕ ದಿಂಗತ್ ಶಾಲೆಯಿಂದ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಬಂದು ಬ್ಲೇಡ್‍ನಿಂದ ದಿಗಂತ್ ಬೆನ್ನಿಗೆ ಇರಿದಿದ್ದಾರೆ. ಕಳೆದ ವಾರ ದಿಗಂತ್ ಸಹೋದರ ಪಿಯೂಶ್ ಪಾರ್ಮರ್(24)ಗೆ ಇದೇ ಗ್ರಾಮದಲ್ಲಿ ಮೀಸೆ ಬಿಟ್ಟಿದ್ದಾರೆಂಬ ಕಾರಣಕ್ಕೆ ಥಳಿಸಲಾಗಿತ್ತು. ದಾಳಿ ಮಾಡಿದವರು ರಜಪುತ್ ವ್ಯಕ್ತಿಗಳಾಗಿದ್ದು ದಲಿತರು ಮೀಸೆ ಬಿಡಬಾರದು ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ದಿಗಂತ್ ದಾಳಿ ಮಾಡಿದ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಿದರೆಂಬ ಕಾರಣಕ್ಕೆ ನಿನ್ನೆ ದಾಳಿ ನಡೆದಿದೆ ಎಂದು ವರದಿಯಾಗಿದೆ.

    ದಿಗಂತ್ ಮೇಲೆ ದಾಳಿ ಮಾಡಿದವರು ಮುಸುಕು ಧರಿಸಿದ್ದು, ಎಫ್‍ಐಆರ್ ದಾಖಲಿಸಿದವರ ಮೇಲೆ ಹಲ್ಲೆ ಮಾಡಲು ನಮಗೆ 1.5 ಲಕ್ಷ ರೂ. ನೀಡಿದ್ದಾರೆ ಎಂದು ಹೇಳಿದ್ದಾಗಿ ದಿಗಂತ್‍ನ ಸಂಬಂಧಿಕರಾದ ಕಿರೀಟ್ ಮಹೇರಿಯಾ ಹೇಳಿದ್ದಾರೆ. ದಿಗಂತ್‍ಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪೊಲೀಸರು ಎಫ್‍ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ.

    ಕಳೆದ ವಾರ ಆನಂದ್ ಜಿಲ್ಲೆಯ ಗ್ರಾಮವೊಂದರಲ್ಲಿ ದೇವಸ್ಥಾನದ ಹೊರಗೆ ಗರ್ಬಾ ನೃತ್ಯ ವೀಕ್ಷಿಸಿದ್ದಕ್ಕೆ ದಲಿತ ಯುವಕನ ಮೇಲೆ ಪಟೇಲ್ ಸಮುದಾಯದವರು ಹಲ್ಲೆಗೈದು ಹತ್ಯೆ ಮಾಡಿದ್ದರು.