Tag: MP Renukaacharya

  • ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್: ರೇಣುಕಾಚಾರ್ಯ

    ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್: ರೇಣುಕಾಚಾರ್ಯ

    ಶಿವಮೊಗ್ಗ: ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಕೈ ಪಕ್ಷಕ್ಕೆ ಮತ್ತೊಂದು ಹೆಸರೇ ಭ್ರಷ್ಟಾಚಾರ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಬಿಜೆಪಿ 40% ಕಮಿಷನ್ ಸರ್ಕಾರ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಕೈ ಪಕ್ಷಕ್ಕೆ ಮತ್ತೊಂದು ಹೆಸರೇ ಭ್ರಷ್ಟಾಚಾರ. ಅವರ ಒಳ ಜಗಳ, ಗುಂಪುಗಾರಿಕೆಯಿಂದ ಕಾಂಗ್ರೆಸ್ ಸಂಪೂರ್ಣ ನಶಿಸಿ ಹೋಗಿದೆ. ಅದನ್ನು ಮರೆ ಮಾಚುವ ಸಲುವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್‌ ಯಾದವ್‌ ಲೇವಡಿ

    ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಈ ಘಟನೆಯನ್ನು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಖಂಡಿಸುತ್ತದೆ. ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಇದೇ ರೀತಿ ನಿಮ್ಮ ಪುಂಡಾಟಿಕೆ ಮಾಡಿದರೆ, ಕನ್ನಡಿಗರಿಗೆ ತಾಳ್ಮೆ, ಸಂಸ್ಕೃತಿ, ಸಂಸ್ಕಾರ ಇದೆ. ಇದನ್ನು ಮೀರಿದರೆ ಬೇರೆ ರೀತಿ ಉತ್ತರ ಕೊಡಬೇಕಾಗುತ್ತದೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿಕೃತಿಸಿದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಸಚಿವ ಭೈರತಿ ಬಸವರಾಜ್ ಭೂಮಿ ಖರೀದಿಯ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಸವರಾಜ್ ಅವರು 19 ವರ್ಷದ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಈ ಹಿಂದೆ ಈ ಪ್ರಕರಣಕ್ಕೆ ಬಿ-ರಿಪೋರ್ಟ್ ಹಾಕಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಸಚಿವರುಗಳನ್ನ ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

    ಬಿಜೆಪಿ ಸೇರಿರುವವರನ್ನು ವಾಪಸ್ ಕಾಂಗ್ರೆಸ್ ಗೆ ಕರೆತರುವ ಸಲುವಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಈ ರೀತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವವರು ಯಾವುದೇ ಕಾರಣಕ್ಕೂ ಅವರು ವಾಪಸ್ ಹೋಗುವುದಿಲ್ಲ. ಬಿಜೆಪಿಯ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರಿದ್ದಾರೆ. ಶಾಸಕರಾಗಿ, ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಿಡಿದರು. ಇದನ್ನೂ ಓದಿ: ಲಕ್ನೋ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ

    ಡಿ.ಕೆ.ರವಿ ಕೇಸ್ ಏನಾಯ್ತು, ಡಿವೈಎಸ್ ಪಿ ಗಣಪತಿ ಅವರು ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಆ ಕೇಸ್ ಏನಾಯ್ತು? ಈ ಪ್ರಕರಣದಲ್ಲಿ ಸಾಕ್ಷ್ಯವನ್ನು ಸಂಪೂರ್ಣವಾಗಿ ನಾಶ ಮಾಡಿ ಸಿಬಿಐಗೆ ವಹಿಸಿದರು. ನಿಮ್ಮ ದೌರ್ಜನ್ಯ, ಭ್ರಷ್ಟಾಚಾರದಿಂದ ಎಷ್ಟೋ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು. ನಿಮ್ಮ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನುಡಿದರು.

    ಗುತ್ತಿಗೆದಾರರ ಭ್ರಷ್ಟ ಸರ್ಕಾರ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರು ದಾಖಲೆ ಬಿಡುಗಡೆ ಮಾಡಲಿ. ನಮ್ಮ ಸರ್ಕಾರ ಇದ್ದಾಗ ಪಾರದರ್ಶಕ ಆಡಳಿತ ಕೊಟ್ಟಿದ್ದು, ಮುಂದೆಯೂ ಕೊಡುತ್ತೇವೆ. 2023ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಉತ್ತರ ಕರ್ನಾಟಕದ ವಿರೋಧಿಗಳು, ರೈತರ ವಿರೋಧಿಗಳು. ಅಧಿವೇಶನದಲ್ಲಿ ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕಿತ್ತು. ಅದರ ಬದಲಾಗಿ ನೀವು ಧರಣಿ ಮಾಡುತ್ತೀರಿ, ಬಾವಿಗಿಳಿದು ಪ್ರತಿಭಟನೆ ಮಾಡ್ತೀರಿ ಅಂದರೆ ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ. ನಾಳೆ ಅಧಿವೇಶನದಲ್ಲಿ ಏನು ಮಾತನಾಡ್ತಾರೋ, ಅದಕ್ಕೆ ತಕ್ಕ ಉತ್ತರ ನಾವು ಕೊಡುತ್ತೇವೆ ಎಂದು ತಿರುಗೇಟು ನೀಡಿದರು.

    ಸಿ.ಟಿ.ರವಿ ವಿರುದ್ಧ ಡಿಕೆಶಿ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರ ಮೇಲೆ ಏನೇನು ಆರೋಪ ಇದೆ ಅಂತಾ ಆತ್ಮಾವಲೋಕನ ಮಾಡಿಕೊಂಡ ಮತ್ತೊಬ್ಬರ ಬಗ್ಗೆ ಮಾತನಾಡಿಕೊಳ್ಳಲಿ ಎಂದು ನುಡಿದರು.

     

    ಶಾಸಕ ಯತ್ನಾಳ್ ಅವರು ತನಗೆ ಗೃಹ ಸಚಿವ ನೀಡಲಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರು ನಮ್ಮ ಸ್ನೇಹಿತರು. ನಾವು ರಾಜಕಾರಣದಲ್ಲಿ ಒಂದೇ ಪಕ್ಷದಲ್ಲಿ ಇದ್ದೇವೆ. ಯತ್ನಾಳ್ ನನ್ನ ಆತ್ಮೀಯ ಸ್ನೇಹಿತರು. ಕೇಂದ್ರ ಸಚಿವರಾಗಿದ್ದವರು. ಅವರಿಗೆ ಮಂತ್ರಿ ಆಗಬೇಕು ಎಂಬ ಬಗ್ಗೆ ಆಸೆ, ಅಪೇಕ್ಷೆ ಇದೆ. ಅದನ್ನು ತಪ್ಪು ಎಂದು ಹೇಳುವುದಿಲ್ಲ. ಅವರಿಗೆ ನಾಳೆ ನೇರವಾಗಿಯೇ ಹೇಳುತ್ತೇನೆ ಎಂದರು.

    ಯತ್ನಾಳ್ ಅವರೇ ಈ ರೀತಿ ಮಾಧ್ಯಮದ ಎದುರು ಹೇಳಿಕೆ ಕೊಡಬೇಡಿ. ಈ ರೀತಿ ಆರೋಪ ಮಾಡಿದರೆ ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಆಗುತ್ತದೆ. ನೀವು ಮಂತ್ರಿ ಆಗಬೇಕೆ, ನಾನು ಸಪೋರ್ಟ್ ಮಾಡುತ್ತೇನೆ ಇನ್ನು ಮುಂದೆ ಈ ರೀತಿ ಮಾತನಾಡಬಾರದು ಅಂತಾ ವಿನಂತಿ ಮಾಡುತ್ತೇನೆ ಎಂದು ಹೇಳಿದರು.

  • ಜೀವಂತವಾಗಿದೆ ಮೌಢ್ಯ ಆಚರಣೆ- ಹಾಲಿ, ಮಾಜಿ ಶಾಸಕರಿಂದಲೇ ಮೌಢ್ಯತೆಗೆ ಚಾಲನೆ

    ಜೀವಂತವಾಗಿದೆ ಮೌಢ್ಯ ಆಚರಣೆ- ಹಾಲಿ, ಮಾಜಿ ಶಾಸಕರಿಂದಲೇ ಮೌಢ್ಯತೆಗೆ ಚಾಲನೆ

    ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವದ ಮೌಢ್ಯತೆ ಇನ್ನು ಜೀವಂತವಾಗಿದೆ. ಈ ಆಚರಣೆಗೆ ಹಾಲಿ ಮತ್ತು ಮಾಜಿ ಶಾಸಕರು ಚಾಲನೆ ನೀಡಿದ್ದಾರೆ.

    ಕೆಂಚಿಕೊಪ್ಪ ಗ್ರಾಮದಲ್ಲಿ 10 ವರ್ಷಗಳ ಬಳಿಕ ಮಾಯಮ್ಮ ಹಾಗೂ ಗುಳ್ಳಮ್ಮ ದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ನಿಷೇಧಿತ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ಉತ್ಸವಕ್ಕಾಗಿ ಎರಡು ಬಂಡಿಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದು ರೈತರದ್ದು ಮತ್ತೊಂದು ಗೌಡರದ್ದು. ಈ ಎರಡು ಬಂಡಿಗೆ ದಲಿತ ಮಹಿಳೆಯರಿಬ್ಬರನ್ನು ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ಬಳಿಕ ಮಹಿಳೆಯರನ್ನು ಮೇಲಕ್ಕೆ ಏರಿಸಿ ಸುತ್ತಿಸಲಾಗುತ್ತದೆ. ಒಂದು ಬಂಡಿಗೆ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಇನ್ನೊಂದು ಬಂಡಿಗೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಜಿ.ಶಾಂತನಗೌಡರ ಚಾಲನೆ ನೀಡಿದರು.

    ಇಂತಹ ಅನಿಷ್ಠ ಪದ್ಧತಿಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ, ಇಬ್ಬರು ನಾಯಕರು ಸಿಡಿ ಉತ್ಸವಕ್ಕೆ ಚಾಲನೆ ನೀಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

  • ಬಸ್ ಚಾಲಕನಾದ ಶಾಸಕ ರೇಣುಕಾಚಾರ್ಯ

    ಬಸ್ ಚಾಲಕನಾದ ಶಾಸಕ ರೇಣುಕಾಚಾರ್ಯ

    ದಾವಣಗೆರೆ: ಸದಾ ಸುದ್ದಿಯಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಈಗ ಸಾರಿಗೆ ಬಸ್ ಚಾಲನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಿಂದ ಉಜನಿಪುರ, ರಾಂಪುರ ಸೇರಿದಂತೆ ಹಲವು ಗ್ರಾಮಗಳಿಗೆ ಇಂದು ಹೊಸದಾಗಿ ಸಾರಿಗೆ ಬಸ್ ಗೆ ಚಾಲನೆ ನೀಡಿದರು. ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ರೇಣುಕಾಚಾರ್ಯ ಸ್ವತಃ ತಾವೇ ಚಾಲಕನ ಯೂನಿಫಾರಂ ಹಾಕಿ ಬಸ್ ಚಲಾಯಿಸಿದರು. ಶಾಸಕರ ಬಸ್ ಚಲಾಯಿಸುತ್ತಿದ್ದಂತೆ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕುತ್ತ ಹೊನ್ನಾಳಿ ಹುಲಿ ರೇಣುಕಾಚಾರ್ಯಗೆ ಜಯವಾಗಲಿ ಎಂದು ಜೈಕಾರ ಹಾಕಿದರು.

    ಪ್ರವಾಹ ಸಂದರ್ಭ ನಿಂತ ನೀರಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿ ವಿವಾದ ಮೇಲೆಳೆದುಕೊಂಡಿದ್ದರು. ಈ ಬಾರಿ ಚಾಲಕನ ಯೂನಿಫಾರಂ ಹಾಕಿಕೊಂಡು ಬಸ್ ಚಾಲನೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  • ಡಿಸಿಎಂ ಹುದ್ದೆ ಕುರಿತು ಶಾಸಕರ ಸಹಿ ಸಂಗ್ರಹ ವಿಚಾರ- ರೇಣುಕಾಚಾರ್ಯಗೆ ಸಿಎಂ ಕ್ಲಾಸ್

    ಡಿಸಿಎಂ ಹುದ್ದೆ ಕುರಿತು ಶಾಸಕರ ಸಹಿ ಸಂಗ್ರಹ ವಿಚಾರ- ರೇಣುಕಾಚಾರ್ಯಗೆ ಸಿಎಂ ಕ್ಲಾಸ್

    ಬೆಂಗಳೂರು: ಡಿಸಿಎಂ ಹುದ್ದೆಗಳು ಬೇಕಾ ಬೇಡವಾ ಅನ್ನೋ ವಿಚಾರ ಬಿಜೆಪಿಯಲ್ಲಿ ಚರ್ಚೆಯ ಕೇಂದ್ರವಾಗಿಯೇ ಇನ್ನೂ ಗಿರಕಿ ಹೊಡೆಯುತ್ತಿದೆ. ಡಿಸಿಎಂ ಹುದ್ದೆಗಳು ಬೇಕಾ ಬೇಡವಾ ಅನ್ನೋ ವಿಚಾರ ಕುರಿತು ಶಾಸಕ ಎಂ.ಪಿ.ರೇಣುಕಾಚಾರ್ಯ ಪಕ್ಷದ ಶಾಸಕರಿಂದ ರಹಸ್ಯ ಸಹಿ ಸಂಗ್ರಹ ಕಾರ್ಯಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಈ ಕುರಿತು ಸಿಎಂ ಯಡಿಯೂರಪ್ಪಗೆ ಮಾಹಿತಿ ಕೊಡಲು ಬಂದಿದ್ದ ಶಾಸಕ ರೇಣುಕಾಚಾರ್ಯ ಸಿಎಂ ಸಿಟ್ಟಿಗೆ ಗುರಿಯಾದ ಪ್ರಸಂಗ ನಡೆಯಿತು ಎಂದು ಮೂಲಗಳು ತಿಳಿಸಿವೆ.

    ಇವತ್ತು ಬೆಳಗ್ಗೆ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಆಗಮಿಸಿದ ರೇಣುಕಾಚಾರ್ಯ, ಮುಖ್ಯಮಂತ್ರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದರು. ಇದೇ ವೇಳೆ ಡಿಸಿಎಂ ಹುದ್ದೆಗಳ ಕುರಿತು ಸಹಿ ಸಂಗ್ರಹ ವಿಚಾರವನ್ನೂ ರೇಣುಕಾಚಾರ್ಯ ಎತ್ತಿದ್ರಂತೆ. ಆಗ ಸಿಎಂ ರೇಣುಕಾಚಾರ್ಯ ಮೇಲೆ ಸಿಡುಕು ತೋರಿದರು ಎನ್ನಲಾಗಿದೆ. ಡಿಸಿಎಂ ಹುದ್ದೆ ಕುರಿತು ಬಹಿರಂಗ ಹೇಳಿಕೆ ಕೊಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ರೇಣುಕಾಚಾರ್ಯರಿಗೆ ಸಿಎಂ ಯಡಿಯೂರಪ್ಪ ಕ್ಲಾಸ್ ತಗೊಂಡ್ರು ಎಂದು ಹೇಳಲಾಗ್ತಿದೆ. ಡಿಸಿಎಂ ಹುದ್ದೆ ಬಗ್ಗೆ ಮಾತಾಡದಂತೆ ರೇಣುಕಾಚಾರ್ಯಗೆ ಸಿಎಂ ಸೂಚನೆ ಕೊಟ್ರಂತೆ. ಹೈಕಮಾಂಡ್ ಇದೆ, ಡಿಸಿಎಂ ಹುದ್ದೆಗಳ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. ನೀನು ಯಾಕೆ ಬಹಿರಂಗ ಹೇಳಿಕೆ ಕೊಡ್ತಿದೀಯ? ಸಹಿ ಸಂಗ್ರಹ ಮಾಡ್ತೀದಿಯ ಅಂತೆಲ್ಲ ಮಾದ್ಯಮಗಳಲ್ಲಿ ವರದಿ ಬಂದಿದೆ. ಇದೆಲ್ಲ ಯಾಕೆ ಬೇಕು ನಿನಗೆ, ಸುಮ್ಮನಿರು ಎಂದು ರೇಣುಕಾಚಾರ್ಯಗೆ ಸಿಎಂ ಕ್ಲಾಸ್ ತೆಗೆದುಕೊಂಡರು ಎನ್ನಲಾಗಿದೆ.

    ಇನ್ನು ಇದೇ ವೇಳೆ ಸಹಿ ಸಂಗ್ರಹ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಸಹ ಮಾತಾಡಿದ್ರು. ಡಿಸಿಎಂ ಸ್ಥಾನದ ಬಗ್ಗೆ ಬಹಿರಂಗವಾಗಿ ನಾನು ಮಾತಾಡಲ್ಲ. ಇದು ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯ ಅಲ್ಲ. ಇಂಥ ವಿಷಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ಮಾತಾಡ್ತೇನೆ ಅಂತ ಸವದಿ ಹೇಳಿದ್ರು. ರೇಣುಕಾಚಾರ್ಯ ಸಹಿ ಸಂಗ್ರಹ ಮಾಡುತ್ತಿರುವ ವಿಷಯ ನನಗೆ ಗೊತ್ತಿಲ್ಲ ಅಂದ ಲಕ್ಷ್ಮಣ ಸವದಿ, ಕಾಲಕಾಲಕ್ಕೆ ಏನಾಗ್ಬೇಕೋ ಅದಾಗುತ್ತೆ, ಕಾಲ ಬಂದಾಗ ನಾನು ಎಂಎಲ್‍ಸಿ ಆಗುತ್ತೇನೆ ಅಂತ ಹೇಳಿದರು.