Tag: MP Prajwal Revanna

  • ಮತ್ತೆ ನಾನೇ ಹಾಸನ ಸಂಸದನಾಗುವ ಭರವಸೆ ಇದೆ: ಎ.ಮಂಜು

    ಮತ್ತೆ ನಾನೇ ಹಾಸನ ಸಂಸದನಾಗುವ ಭರವಸೆ ಇದೆ: ಎ.ಮಂಜು

    ಹಾಸನ: 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ವರದಿ ನೀಡುವಂತೆ ಚುನಾವಣಾ ಆಯೋಗ ಹಾಸನ ಜಿಲ್ಲಾಧಿಕಾರಿಗೆ ನೋಟೀಸ್ ನೀಡಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಎ.ಮಂಜು ಅವರು, ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ನೀಡುವಂತೆ ಇದೀಗ ಚುನಾವಣಾ ಆಯೋಗದಿಂದ ಹಾಸನ ಜಿಲ್ಲಾಧಿಕಾರಿಗೆ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಯವರು ಸರಿಯಾಗಿ ವರದಿ ನೀಡುವಂತೆ ಮಾಜಿ ಸಚಿವ ಎ.ಮಂಜು ಮನವಿ ಮಾಡಿದ್ದಾರೆ.

    ಮತ್ತೆ ನಾನೇ ಸಂಸದನಾಗುತ್ತೇನೆ ಎಂದು ಈಗಲೂ ನನಗೆ ಭರವಸೆ ಇದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಓರ್ವ ಶಾಸಕರು ಇದೇ ರೀತಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದು, ಮಹಾರಾಷ್ಟ್ರ ಚುನಾವಣಾ ಆಯೋಗವೇ ಕ್ರಮ ಕೈಗೊಂಡು ಆ ಶಾಸಕರ ಸದಸ್ಯತ್ವ ವಜಾಗೊಳಿಸಿದೆ. ಅದೇ ರೀತಿ ಈ ಪ್ರಕರಣದಲ್ಲಿ ನನಗೆ ನ್ಯಾಯ ಸಿಗಲಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ನಾನು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದೇನೆ. ಅಲ್ಲಿ ನಾನು ಗೆಲ್ಲುವ ಭರವಸೆ ಇದೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಶೀಘ್ರವೇ ಹಾಸನಕ್ಕೆ ಹೊಸ ಸಂಸದ- ಪ್ರಜ್ವಲ್ ರೇವಣ್ಣಗೆ ವಕೀಲ ತಿರುಗೇಟು

    ಶೀಘ್ರವೇ ಹಾಸನಕ್ಕೆ ಹೊಸ ಸಂಸದ- ಪ್ರಜ್ವಲ್ ರೇವಣ್ಣಗೆ ವಕೀಲ ತಿರುಗೇಟು

    ಹಾಸನ: ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವಕೀಲರೊಬ್ಬರು ನ್ಯಾಯಾಲಯ ಮೆಟ್ಟಿಲೇರಿದ್ದರು. ಸದ್ಯ ಈ ಪ್ರಕರಣ ಮತ್ತೆ ಚರ್ಚೆಗೆ ಬಂದಿದ್ದು, ಇದೇ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಕೀಲ ದೇವರಾಜೇಗೌಡರ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಕಾರಣವಾಗಿದೆ.

    ನಗರದಲ್ಲಿ ಸೋಮವಾರ ಮಾತನಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು, ಯಾರೋ ಒಬ್ಬ ಏನೋ ಸುಳ್ಳು ಹೇಳಿದ್ದ. ಅದನ್ನು ಮಾಧ್ಯಮದವರು ತೋರಿಸಿದ್ದರು. ಮೂರು ತಿಂಗಳಲ್ಲಿ ಪ್ರಜ್ವಲ್ ಸ್ಥಾನ ಕಿತ್ತು ಹಾಕುತ್ತೇನೆ ಎಂದು ಹೇಳಿದವನು ಈಗ ಪತ್ತೇನೆ ಇಲ್ಲ. ಎಲ್ಲೋ ಓಡಿ ಹೋಗಿದ್ದಾನೆ ಎಂದು ಕಿಡಿಕಾರಿದ್ದರು.

    ಜನರು ನನ್ನನ್ನು 1 ಲಕ್ಷದ 41 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನಾನು ಜನರ ಪರ ಕೆಲಸ ಮಾಡುತ್ತೇನೆ. ಇಂತಹ ಆರೋಪಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ವೈಯಕ್ತಿಕ ಇಮೇಜ್ ಬೆಳೆಸಿಕೊಳ್ಳಲು ಮುಂದಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಅಲ್ಲದೇ ಸಂಸದರ ಸಭೆಗೆ ಗೈರು ಹಾಜರಿ ಆಗಿದ್ದ ಅಧಿಕಾರಿಗಳ ವಿರುದ್ಧವೂ ಬೇಸರ ವ್ಯಕ್ತಪಡಿಸಿದ್ದರು.

    ಪ್ರಜ್ವಲ್ ರೇವಣ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ವಕೀಲ ದೇವರಾಜೇಗೌಡ ಅವರು, 5 ಬಾರಿ ನ್ಯಾಯಾಲಯದಿಂದ ಸಮನ್ಸ್ ಆದಾಗ ಸಂಸದರಾದ ತಾವು ಊರು ಬಿಟ್ಟು ಓಡಿ ಹೋಗಿದ್ರಿ. ಪೇಪರ್ ಪಬ್ಲಿಕೇಷನ್ ಹಾಕಿದ ನಂತರ ನೀವು ಆಗಮಿಸಿದ್ರಿ. ಪೇಪರ್ ಪಬ್ಲಿಕೇಷನ್ ಹಾಕೋದು ಕದ್ದು ಹೋಗುವವರಿಗೆ. ದಾಖಲೆ ಸಮೇತ ನಾನು ಕೇಸ್ ಹಾಕಿದ್ದೇನೆ. ನಾನು ಎಲ್ಲೂ ಹೋಗಲ್ಲ, ನಾನು ರಣಹೇಡಿಯಲ್ಲ. ನಾನೊಬ್ಬ ಹೀರೋ. ಕದ್ದು ಹೋದವರು ನೀವು. ಅತೀ ಶೀಘ್ರದಲ್ಲೇ ಜಿಲ್ಲೆಗೆ ಹೊಸ ಸಂಸದರು ಬರುತ್ತಾರೆ ಎಂದು ಸವಾಲು ಹಾಕಿದ್ದಾರೆ.

  • ಖಂಡಿತ ಮೈತ್ರಿ ಸರ್ಕಾರ ಉಳಿಯುತ್ತೆ: ಪ್ರಜ್ವಲ್ ರೇವಣ್ಣ

    ಖಂಡಿತ ಮೈತ್ರಿ ಸರ್ಕಾರ ಉಳಿಯುತ್ತೆ: ಪ್ರಜ್ವಲ್ ರೇವಣ್ಣ

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಉಳಿಯುತ್ತೋ, ಉರುಳುತ್ತೋ ಅಂತ ಎಲ್ಲರಿಗೂ ಟೆನ್ಷನ್ ಶುರುವಾಗಿದೆ. ಆದರೆ ಹಾಸನ ಸಂಸದ, ಜೆಡಿಎಸ್ ಪಕ್ಷದ ಯುವನಾಯಕ ಪ್ರಜ್ವಲ್ ರೇವಣ್ಣ ಅವರು ಖಂಡಿತ ಸರ್ಕಾರ ಉಳಿಯತ್ತದೆ. ನಾಳೆ ಕಾದು ನೋಡಿ ಅಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

    ಸಂಸದರು ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟಿಗೆ ಇಂದು ಭೇಟಿ ನೀಡಿ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಎಲ್ಲಾ ಅತೃಪ್ತ ಶಾಸಕರೊಂದಿಗೆ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಫೋನ್ ಮುಖಾಂತರ ಮಾತನಾಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಎಲ್ಲಾ ಶಾಸಕರು ಸೋಮವಾರ ಸದನಕ್ಕೆ ಆಗಮಿಸುತ್ತಾರೆ. ವಿಶ್ವಾಸ ಮತಯಾಚನೆಯಲ್ಲಿ ನಮಗೆ ಜಯ ಸಿಗಲಿದೆ ಎಂದು ಹೇಳಿದರು.

    ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದರು, ಆ ವಿಚಾರಗಳನ್ನ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಸೋಮವಾರ ಕಾದು ನೋಡಿ ಎಂದರು.

    ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುತ್ತೇವೆ ಎನ್ನುವ ಪ್ರಸ್ತಾಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಹೈಕಮಾಂಡ್ ಹಾಗೂ ಸಿಎಂ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆಲ್ಲಾ ನಾವು ಬದ್ಧವಾಗಿರುತ್ತೇವೆ. ರೆಸಾರ್ಟ್ ರಾಜಕಾರಣ ತಪ್ಪು. ಆದರೆ ಇದಕ್ಕೆಲ್ಲಾ ನೇರ ಕಾರಣ ಬಿಜೆಪಿಯವರೇ. ಅವರ ಆಪರೇಷನ್ ಕಮಲದಿಂದ ನಾವು ರೆಸಾರ್ಟ್ ಸೇರಿದ್ದೇವೆಯೇ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.