Tag: MP Maneka Gandhi

  • ಕೋತಿಯನ್ನು ತೆಗೆದುಕೊಂಡು ಹೋಗಲು ಕಾರು ಕಳುಹಿಸುತ್ತೇನೆ – ಸಹಾಯ ಕೇಳಿದ್ದಕ್ಕೆ ಮನೇಕಾ ಉತ್ತರ

    ಕೋತಿಯನ್ನು ತೆಗೆದುಕೊಂಡು ಹೋಗಲು ಕಾರು ಕಳುಹಿಸುತ್ತೇನೆ – ಸಹಾಯ ಕೇಳಿದ್ದಕ್ಕೆ ಮನೇಕಾ ಉತ್ತರ

    ನವದೆಹಲಿ: ಸಂಸದೆ ಹಾಗೂ ಪರಿಸರವಾದಿ ಮನೇಕಾ ಗಾಂಧಿ ಅವರ ಪ್ರಾಣಿ ಪ್ರೀತಿಗೆ ನೆಟ್ಟಿಗರು ಮನಸೋತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಂಸತ್ತಿನಲ್ಲಿ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ಆಕ್ಟಿವ್ ಆಗಿದ್ದು, ಶೀಘ್ರವಾಗಿ ಪ್ರತಿಕ್ರಿಯಿಸುವ ಮನೇಕಾ ಗಾಂಧಿ ಅವರನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪತ್ರಕರ್ತೆ ಮಾಡಿದ ಟ್ವೀಟ್‍ಗೆ ಮನೇಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

    ಪತ್ರಕರ್ತೆ ಭಾರತಿ ಜೈನ್ ಗಂಭೀರವಾಗಿ ಗಾಯಗೊಂಡಿರುವ ಕೋತಿಯ ಚಿತ್ರ ಹಾಕಿ ಸಹಾಯ ಮಾಡುವಂತೆ ಟ್ವೀಟ್ ಮಾಡಿದ್ದರು. ಇದಕ್ಕೆ ಮನೇಕಾ ಗಾಂಧಿಯವರನ್ನು ಟ್ಯಾಗ್ ಮಾಡಿದ್ದರು. ಅಲ್ಲದೆ ಗಂಭೀರ ಗಾಯಗೊಂಡಿದ್ದ ಕೋತಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಕೋತಿ ಚಿತ್ರವನ್ನು ಹಾಕಿ ಈ ಕೋತಿ ಗಾಯಗೊಂಡಿದೆ, ಗಂಭೀರ ಸ್ಥಿತಿಯಲ್ಲಿದೆ. ದಯವಿಟ್ಟು ಯಾವುದಾದರೂ ಎನ್‍ಜಿಓ ಅಥವಾ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಇದನ್ನು ಕಾಪಾಡಲು ಧಾವಿಸಬೇಕು. ಇದು ನವದೆಹಲಿಯ ರೈಸಿನಾ ರಸ್ತೆಯಲ್ಲಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಳಿ ಇದೆ ಎಂದು ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ನೋಡಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಶೀಘ್ರವಾಗಿ ಸ್ಪಂದಿಸಿ ಕೋತಿಗೆ ಸಹಾಯ ಮಾಡಲು ಧಾವಿಸಿದರು.

    ಈ ಟ್ವೀಟಿಗೆ ಮನೇಕಾ ಗಾಂಧಿ ಅವರು ನಂತರ ಮರು ಟ್ವೀಟ್ ಮಾಡಿ, ನನ್ನನ್ನು ಟ್ಯಾಗ್ ಮಾಡಿದ್ದಕ್ಕೆ ಧನ್ಯವಾದಗಳು. ಕೋತಿಯನ್ನು ಸಂಜಯ್ ಗಾಂಧಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲು ಕಾರನ್ನು ಕಳುಹಿಸಿದ್ದೇನೆ. ಕೆಲವೇ ಹೊತ್ತಿನಲ್ಲಿ ಕಾರು ಸ್ಥಳವನ್ನು ತಲುಪುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಇದಕ್ಕೆ ಜೈನ್ ಅವರು ಮತ್ತೆ ಪ್ರತಿಕ್ರಿಯಿಸಿ, ಕೋತಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಸೂಕ್ತ ಸ್ಥಳದಲ್ಲಿದೆ ಎಂದು ನನಗೆ ಖಾತ್ರಿ ಇದೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಮನೇಕಾ ಗಾಂಧಿ ಅವರ ಈ ತ್ವರಿತ ಪ್ರತಿಕ್ರಿಯೆ ಹಾಗೂ ಪ್ರಾಣಿಯ ಮೇಲಿರುವ ಕಾಳಜಿ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಹಲವು ಜನ ಟ್ವೀಟ್ ಹಾಗೂ ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಶೇರ್ ಮಾಡಿದ್ದಾರೆ.

    ಬಳಕೆದಾರರೊಬ್ಬರು, ಇದು ದೊಡ್ಡ ಕೆಲಸ ಮೇಡಮ್, ಇಂತಹ ಎಲ್ಲ ಪ್ರಯತ್ನಗಳಿಗೆ ನಾವು ನಿಮ್ಮನ್ನು ಪ್ರಾಮಾಣಿಕವಾಗಿ ಗೌರವಿಸುತ್ತೇವೆ ಹಾಗೂ ಪ್ರಶಂಸಿಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.