Tag: MP KH Muniyappa

  • ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಕೋಲಾರ: ಏಳು ಬಾರಿ ಕೋಲಾರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸಂಸದ ಕೆಎಚ್ ಮುನಿಯಪ್ಪ ಅವರಿಗೆ ಈ ಬಾರಿ ಸ್ವಪಕ್ಷಿಯ ಶಾಸಕರೇ ಟಿಕೆಟ್ ನೀಡದಂತೆ ಬಂಡಾಯ ಹೂಡಿದ್ದಾರೆ. ಜಿಲ್ಲೆಯ ನಾಲ್ಕು ಜನ ಕಾಂಗ್ರೆಸ್ ಶಾಸಕರು, ಸ್ವಾತಂತ್ರ್ಯ ಅಭ್ಯರ್ಥಿ ಸೇರಿದಂತೆ ಹಲವು ಮುಖಂಡರು ಹಾಲಿ ಸಂಸದ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ದೆಹಲಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದಂತೆ ಜಿಲ್ಲೆಯ ರಾಜಕಾರಣ ರಂಗೇರಿದ್ದು, ಮುನಿಯಪ್ಪ ಅವರ ವಿರೋಧಿ ಬಣದ ಜಿಲ್ಲೆಯ ನಾಯಕರು ಪಕ್ಷಾತೀತವಾಗಿ ಒಂದಾಗಿದ್ದಾರೆ. ಅಲ್ಲದೇ ಅವರಿಗೆ ಟಿಕೆಟ್ ತಪ್ಪಿಸಲು ಸ್ವಪಕ್ಷಿಯವರೇ ಅಖಾಡಕ್ಕೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

    ವಿಶೇಷತೆ ಎಂದರೆ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಶಿಢ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮುಳಬಾಗಲು ಪಕ್ಷೇತರ ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮುನಿಯಪ್ಪಗೆ ಬಿಸಿ ತುಪ್ಪವಾಗ ಪರಿಣಮಿಸಿದ್ದಾರೆ. ಈಗಾಗಲೇ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಾರಿ ಕೆ.ಎಚ್ ಮುನಿಯಪ್ಪಗೆ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ವಿರೋಧ ಇರುವುದರಿಂದ ಇವರ ಬದಲಿಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕೋಲಾರದಿಂದ ಟಿಕೆಟ್ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಸಮ್ಮಿಶ್ರ ಸರ್ಕಾರ ಮೈತ್ರಿ ಧರ್ಮದಂತೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಗಿದ್ದು, ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಎಂದಿನಂತೆ ಹೈಕಮಾಂಡ್‍ನಿಂದ ತಮ್ಮ ಹೆಸರು ಶಿಫಾರಸ್ಸು ಮಾಡಿಕೊಂಡು ಬಂದು ತಮ್ಮ ವಿರೋಧಿಗಳಿಗೆ ಟಾಂಗ್ ಕೊಡಲು ಸಂಸದರು ದೆಹಲಿ ಸೇರಿದಂತೆ ಬೆಂಗಳೂರಿನಲ್ಲಿ ಠಿಕ್ಕಾಣಿ ಹೂಡಿದ್ದಾರೆ.

    ಇತ್ತ ಸಂಸದರ ವಿರುದ್ಧ ಕ್ಷೇತ್ರದಲ್ಲಿ ಸೇರಿದಂತೆ ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಕೆ.ಹೆಚ್ ಹಠಾವೋ ಕೋಲಾರ ಬಚಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ ಮುಖಂಡರು ಇತ್ತೀಚಿಗೆ ಪರೋಕ್ಷವಾಗಿ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮುನಿಯಪ್ಪರ ರಾಜಕೀಯ ವಿರೋಧಿಗಳನ್ನು ಒಟ್ಟುಗೂಡಿಸಿ ಬಹಿರಂಗವಾಗಿ ವಿರೋಧಿ ಬಣ ತಯಾರಿ ನಡೆಸಿತ್ತು. ಆದರೆ ಎಲ್ಲೂ ವಿರೋಧಿ ನಾಯಕರ ವಿರುದ್ಧ ಮಾತನಾಡದ ಮುನಿಯಪ್ಪ ತಮ್ಮದೇ ಶೈಲಿಯಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ಬಂದಾಗ ಇವೆಲ್ಲಾ ಸಹಜ, ಅವರು ಯಾರು ಕೂಡ ನಮ್ಮ ವಿರೋಧಿಗಳಲ್ಲ ಎಂದು ಮೃದು ಮಾತನಾಡಿದ್ದಾರೆ. ಕಳೆದ ಏಳು ಚುನಾವಣೆಗಳಲ್ಲಿ ವಿರೋಧಿಗಳನ್ನು ಕಟ್ಟಿ ಹಾಕಿ, ಭಿನ್ನಾಭಿಪ್ರಾಯ, ಬಂಡಾಯ, ಹೋರಾಟಗಳ ಶಮನ ಮಾಡುವ ತಂತ್ರಗಳಲ್ಲಿಂದಲೇ ಜಯಗಳಿಸಿರುವ ಮುನಿಯಪ್ಪ ಅವರಿಗೆ ಇದು ಸಾಮಾನ್ಯ ಎಂಬಂತೆ ಆಗಿದೆ. ಆದರೆ ಬಾರಿ ಸ್ವಪಕ್ಷಿಯರೇ ಆಗಿರುವ ಬಂಡಾಯ ಶಾಸಕರನ್ನು ಹೇಗೆ ನಿಭಾಯಿಸುತ್ತಾರೆ ಎಂಬುವುದು ಮಾತ್ರ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಾಕತ್ ಇದ್ರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕಿಸಿ- ಕಾಂಗ್ರೆಸ್ ಸಂಸದ ಸವಾಲ್

    ತಾಕತ್ ಇದ್ರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕಿಸಿ- ಕಾಂಗ್ರೆಸ್ ಸಂಸದ ಸವಾಲ್

    ಚಿಕ್ಕಬಳ್ಳಾಪುರ: ತಾಕತ್ ಇದ್ದರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕೆ ಮಾಡಿ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕೆ ಎಚ್ ಮುನಿಯಪ್ಪ ತಮ್ಮ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.

    ಜಿಲ್ಲೆಯ ಚಿಂತಾಮಣಿಯಲ್ಲಿ ಕಾಂಗ್ರೆಸ್ ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೀಕೆ ಮಾಡುವುದಾದರೆ ಬಹಿರಂಗವಾಗಿ ನನ್ನ ಹೆಸರೇಳಿ ಟೀಕೆ ಮಾಡಿ. ಆಗ ನಾನು ಅದಕ್ಕೆ ಉತ್ತರ ಕೊಡುತ್ತೇನೆ. ಆದರೆ ಹೊರಗೊಂದು, ಒಳಗೊಂದು ಹೆಸರು ಹೇಳದೆ ಟೀಕೆ ಮಾಡಿದರೆ ನಾನು ಮಾತಾಡಲ್ಲ ಎಂದು ಗುಡುಗಿದ್ದಾರೆ.

    ಮನುಷ್ಯತ್ವ ಇದ್ದರೆ ಬಹಿರಂಗವಾಗಿ ಮಾತನಾಡಿ, ನಿಮ್ಮ ಟೀಕೆಗಳಿಗೆ ನಾನು ಪ್ರತ್ಯುತ್ತರ ನೀಡುತ್ತೇನೆ. ಮುಸುಕಿನಲ್ಲಿ ಗುದ್ದಾಡಬೇಡಿ ಹೊರಗೆ ಬನ್ನಿ ನಾನು ಎಂದೂ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದರೆ ಜನರೇ ನನಗೆ ತೀರ್ಪು ಕೊಡ್ತಾರೆ. ನಾನು ರೈತರ ಪರ, ಜನರ ಪರ, ಅಲ್ಪ ಸಂಖ್ಯಾತರ ಪರ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಎಲ್ಲಾ ಭಾಗಗಳಿಗೂ ಸಮಾನವಾಗಿ ಕೆಲಸ ಮಾಡಿದ್ದೇನೆ. ನಾನು ಸರಿಯಾಗಿ ಇರುವುದರಿಂದಲೇ ಜನರು ನನ್ನ ಪರ ಇದ್ದಾರೆ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಸ್ವಪಕ್ಷದವರೇ ಆದ ಶ್ರೀನಿವಾಸಪುರ ಕ್ಷೇತ್ರದ ಶಾಸಕ, ಸ್ಪೀಕರ್ ರಮೇಶ್ ಕುಮಾರ್ ಹಾಗೂ ಚಿಂತಾಮಣಿ ಮಾಜಿ ಶಾಸಕ ಎಂ ಸಿ ಸುಧಾಕರ್ ಸೇರಿದಂತೆ ಕೆಲ ಸಂಘಟನೆಗಳ ವಿರೋಧಿಗಳಿಗೆ ಎಚ್ ಮುನಿಯಪ್ಪ ಟಾಂಗ್ ಕೊಟ್ಟಂತೆ ಭಾಸವಾಗಿತ್ತು. ಆದ್ರೆ ಈ ಬಗ್ಗೆ ಅವರು ಯಾರು ಎಂಬ ಕೇಳಿದ ಪ್ರಶ್ನೆಗೆ ಕೆ ಎಚ್ ಮುನಿಯಪ್ಪ ಪ್ರತಿಕ್ರಿಯಿಸಲು ನಿರಾಕರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com