Tag: movie

  • ವಿಶ್ವಾದ್ಯಂತ ‘ಯಜಮಾನ’ನ ಹವಾ ಶುರು

    ವಿಶ್ವಾದ್ಯಂತ ‘ಯಜಮಾನ’ನ ಹವಾ ಶುರು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಇಂದು ವಿಶ್ವಾದ್ಯಂತ ಬಿಡುಗಡೆ ಆಗಿದೆ. ಪ್ರೇಕ್ಷಕರು ಯಜಮಾನನ್ನು 18 ತಿಂಗಳ ಬಳಿಕ ಭರ್ಜರಿ ಸ್ವಾಗತ ಮಾಡಿದ್ದಾರೆ.

    ಇಂದು ಬೆಳಗ್ಗೆ 6 ಗಂಟೆಗೆ ಚಿತ್ರ ಬಿಡುಗಡೆ ಆಗಿದೆ. ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಅಭಿಮಾನಿಗಳು ಜಮಾಯಿದ್ದು, ಬಹುತೇಕ ಎಲ್ಲಾ ಶೋ ಟಿಕೆಟ್ ಸೋಲ್ಡೌಟ್ ಆಗಿದೆ. ಚಿತ್ರಮಂದಿರದ ಹೊರಗೆ ದರ್ಶನ್ ಅವರ 80 ಅಡಿ ಕಟೌಟ್ ನಿಲ್ಲಿಸಲಾಗಿದೆ.

    ದರ್ಶನ್ ಅವರ 80 ಅಡಿ ಎತ್ತರದ ಕಟೌಟ್‍ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಕಟೌಟ್ ಜೊತೆಗೆ ಮೊದಲ ಬಾರಿಗೆ ದರ್ಶನ್ ಪುತ್ರ ವಿನೀಶ್ ಕಟೌಟನ್ನು ಕೂಡ ಹಾಕಲಾಗಿದ್ದು, ಆ ಕಟೌಟ್ ಸುಮಾರು 30 ಅಡಿ ಎತ್ತರದಲ್ಲಿದೆ.

    ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರ ಮಗ ವಿನೀಶ್ ಅವರು ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ದರ್ಶನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಮಿಂಚಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ರವಿಶಂಕರ್, ಡಾಲಿ ಧನಂಜಯ್, ದತ್ತಣ್ಣ, ಶಿವರಾಜ್. ಕೆ.ಆರ್ ಪೇಟೆ, ಸಾಧುಕೋಕಿಲ ಸೇರಿದಂತೆ ಅತಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ತುಂಬಿದೆ.

    ಈ ಚಿತ್ರವನ್ನು ಪೋನ್‍ಕುಮಾರ್ ಹಾಗೂ ವಿ. ಹರಿಕೃಷ್ಣ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಬಜಾರ್‍ನಲ್ಲಿ ಮಿನುಗುತ್ತಿರುವ ಹರಿಕೃಷ್ಣ, ಯಜಮಾನನಿಗಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿದ್ದಾರೆ. ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊರಬಂತು ಒಂದು ಕಥೆ ಹೇಳ್ಲಾ ಚಿತ್ರದ ನಶೆಯ ಸೋಬಾನೆ!

    ಹೊರಬಂತು ಒಂದು ಕಥೆ ಹೇಳ್ಲಾ ಚಿತ್ರದ ನಶೆಯ ಸೋಬಾನೆ!

    ಚಿತ್ರೀಕರಣದ ಹಂತದಿಂದ ಇಲ್ಲಿಯವರೆಗೂ ಭರ್ಜರಿ ಕುತೂಹಲದ ಒಡ್ಡೋಲಗದಲ್ಲಿಯೇ ಸಾಗಿ ಬಂದಿರೋ ಚಿತ್ರ ಒಂದು ಕಥೆ ಹೇಳ್ಲಾ. ಇದೇ ಮಾರ್ಚ್ 8ರಂದು ಅದ್ಧೂರಿಯಾಗಿ ತೆರೆ ಕಾಣಲಿರೋ ಈ ಸಿನಿಮಾದ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಹೊರ ಬಂದ ಮರುಕ್ಷಣದಿಂದಲೇ ವೇಗವಾಗಿ ಎಲ್ಲರನ್ನು ತಲುಪಿಕೊಂಡು ಮೆಚ್ಚುಗೆಯನ್ನೂ ಗಳಿಸಿಕೊಳ್ಳುತ್ತಿದೆ.

    ಸೋಬಾನೆಂಬೋದೇ ಶಿವನೀಗೆ ಎಂದು ಶುರುವಾಗೋ ಈ ಹಾಡು ಯುವ ಸಮುದಾಯಕ್ಕೆ ನಶೆಯೇರಿಸೋ ರೀತಿಯಲ್ಲಿ ಮೂಡಿ ಬಂದಿದೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿಗೆ ಶಿವಕುಮಾರ್ ಶೆಟ್ಟಿ ಯುವ ಆವೇಗದ ಸಾಹಿತ್ಯ ಬರೆದಿದ್ದಾರೆ. ತಮಿಳಿನ ವಿಕ್ರಂ ವೇದಾ ಫೇಮಿನ ಶಿವಂ ನಶೆಯೇರಿಸುವಂಥಾ ಕಂಠಸಿರಿಯಲ್ಲಿ ಇದನ್ನು ಹಾಡಿದ್ದಾರೆ. ಈ ಮೂಲಕ ಒಂದ ಕಥೆ ಹೇಳ್ಲಾ ಎಂಬ ಹಾರರ್ ಚಿತ್ರದ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದೆ.

    ಹಾರರ್ ಕಥೆಗಳತ್ತ ಪ್ರೇಕ್ಷಕರಲ್ಲೊಂದು ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ಅದರಲ್ಲಿಯೂ ತುದಿ ಸೀಟಲ್ಲಿಯೂ ಕೂರಲು ಬಿಡದಂಥಾ ಚಿತ್ರವೊಂದು ಬರುತ್ತಿದೆ ಅಂದರೆ ಸಹಜವಾಗಿಯೇ ಕುತೂಹಲ ನೂರ್ಮಡಿಸುತ್ತದೆ. ಅಂಥಾದ್ದೊಂದು ಕ್ರೇಜ್ ಹುಟ್ಟುಹಾಕುವಲ್ಲಿ ಒಂದು ಕಥೆ ಹೇಳ್ಲಾ ಟ್ರೈಲರ್ ಈಗಾಗಲೇ ಸಫಲವಾಗಿದೆ. ಯಾಕೆಂದರೆ, ಟ್ರೈಲರ್ ಅಷ್ಟೊಂದು ಅತ್ಯಾಕರ್ಷಕವಾಗಿ ಮೂಡಿ ಬಂದಿತ್ತು. ಇದೀಗ ಆ ಹವಾವನ್ನು ಈ ನಶೆಯ ಹಾಡು ಮುಂದುವರೆಸಿದೆ.

    ಇದೊಂದು ಪಕ್ಕಾ ಮನೋರಂಜನಾತ್ಮಕ, ಹಾರರ್ ಸಿನಿಮಾ. ಹಾಗಂತ ಅದು ಅಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿ ಹೊಸ ಪ್ರಯೋಗ, ನವೀನ ತಂತ್ರಜ್ಞಾನಗಳೂ ಅಷ್ಟೇ ಮಹತ್ವದ ಪಾತ್ರ ವಹಿಸಿವೆ. ಒಂದಲ್ಲ ಎರಡಲ್ಲ ಐದು ಕಥೆಗಳನ್ನ ಒಂದು ಚಿತ್ರದ ಮೂಲಕ ಹೇಳಲಾಗಿದೆ. ಸತ್ಯ ಘಟನೆಯಾಧಾರಿತವಾದ ಈ ಐದೂ ಕಥೆಗಳು ಕ್ಲೈಮ್ಯಾಕ್ಸ್ ಹೊತ್ತಿಗೆ ಕನೆಕ್ಟ್ ಆಗುತ್ತವಂತೆ. ಈ ಐದೂ ಕಥೆಗಳೂ ಕೂಡಾ ಬೇರೆ ಬೇರೆ ಥರದವುಗಳು. ಸೈನ್ಸ್ ಬೇಸ್ಡ್ ಕಥೆಯೂ ಇದೆ. ಮೂಢನಂಬಿಕೆಗಳ ಸುತ್ತ ಗಿರಕಿ ಹೊಡೆಯೋ ಕಥೆಗಳೂ ಇಲ್ಲಿವೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಸಿನಿಮಾದಲ್ಲಿ ಯಶ್-ಪುನೀತ್..!

    ಒಂದೇ ಸಿನಿಮಾದಲ್ಲಿ ಯಶ್-ಪುನೀತ್..!

    ಬೆಂಗಳೂರು: ‘ನಟಸಾರ್ವಭೌಮ’ ಸಿನಿಮಾ ಸಕ್ಸಸ್ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವುದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಫೇಸ್‍ಬುಕ್ ಲೈವ್‍ಗೆ ಬಂದಿದ್ದರು.

    ಪುನೀತ್ ರಾಜ್‍ಕುಮಾರ್ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ವೇಳೆ ಸ್ಟಾರ್ ನಟರುಗಳ ಅಭಿಮಾನಿಗಳು ಮಲ್ಟಿಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಪುನೀತ್ ರಾಜ್‍ಕುಮಾರ್ ಅವರು ಒಂದು ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಒಟ್ಟಿಗೆ ಸಿನಿಮಾ ಮಾಡುವ ಸೂಚನೆ ಸಿಕ್ಕಿದೆ. ಟಿ.ಎಸ್ ನಾಗಾಭರಣ ನಿರ್ದೇಶನದ `ಜುಗಾರಿ ಕ್ರಾಸ್’ ಮುಹೂರ್ತಕ್ಕೆ ಶುಭ ಹಾರೈಸಲು ಬಂದಿದ್ದ ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ಒಟ್ಟಿಗೆ ಸಿನಿಮಾ ಮಾಡುವುದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಜುಗಾರಿ ಕ್ರಾಸ್ ಮುಹೂರ್ತಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರು ಪುನೀತ್ ಹಾಗೂ ಯಶ್ ಅವರನ್ನು ಒಟ್ಟಿಗೆ ಸಿನಿಮಾ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯಶ್, ಅಪ್ಪು ಓಕೆ ಎಂದರೆ ನಾನು ಸಿನಿಮಾ ಮಾಡಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ. ಆಗ ಪುನೀತ್ ಅವರು ನಾನು ಯಾವಾಗಲೂ ರೆಡಿ ಆಗಿರುತ್ತೇನೆ. ಒಟ್ಟಿಗೆ ಸಿನಿಮಾ ಮಾಡೋಣ ಎಂದು ಯಶ್‍ಗೆ ಹೇಳಿದ್ದಾರೆ.

    ಮಲ್ಟಿಸ್ಟಾರ್ ಸಿನಿಮಾ ಯಶ್ ಹಾಗೂ ಪುನೀತ್ ರಾಜ್‍ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಇಬ್ಬರು ನಟರು ಯಾವಾಗ ಸಿನಿಮಾ ಮಾಡಲು ಶುರು ಮಾಡುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದಿನಿಂದ ಮೊಬೈಲಿನಲ್ಲೇ ನೋಡಬಹುದು ಬ್ಲಾಕ್‍ಬಸ್ಟರ್ ಕೆಜಿಎಫ್ ಚಿತ್ರ

    ಇಂದಿನಿಂದ ಮೊಬೈಲಿನಲ್ಲೇ ನೋಡಬಹುದು ಬ್ಲಾಕ್‍ಬಸ್ಟರ್ ಕೆಜಿಎಫ್ ಚಿತ್ರ

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿದ ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಚಿತ್ರ ಈಗ ಮೊಬೈಲಿನಲ್ಲೇ ವೀಕ್ಷಿಸಬಹುದು. ಕೆಜಿಎಫ್ ಚಿತ್ರ ಅಮೆಜಾನ್ ಪ್ರೈಂನಲ್ಲಿ ಹಿಂದಿ ಹೊರತುಪಡಿಸಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿರುವ ಚಿತ್ರವನ್ನು ವೀಕ್ಷಿಸಬಹುದು.

    ಅಮೆಜಾನ್ ಪ್ರೈಂ ವಿಡಿಯೋ ಭಾನುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೆಬ್ರವರಿ 5ರಂದು ಕೆಜಿಎಫ್ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಅಲ್ಲದೇ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು.

    ಅಮೆಜಾನ್ ಪ್ರೈಂ ವಿಡಿಯೋ ಈ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ರೀ-ಟ್ವೀಟ್ ಮಾಡಲು ಶುರು ಮಾಡಿದ್ದರು. ಇದುವರೆಗೂ ಒಟ್ಟು 11 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್ ಆಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಹಿಂದಿಯ ಖಾಸಗಿ ಚಾನೆಲ್‍ನಲ್ಲಿ ಕೆಜಿಎಫ್ ಚಿತ್ರ ಅತೀ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ಪ್ರೋಮೋವನ್ನು ಹರಿಬಿಟ್ಟಿದ್ದಾರೆ. ಹಿಂದಿಯಲ್ಲಿ ಈ ಚಿತ್ರ ಗರಿಷ್ಠ ಬೆಲೆಗೆ ಸೇಲ್ ಆಗಿದೆ. ಮೂಲಗಳ ಪ್ರಕಾರ ಈ ಚಿತ್ರ ಹಿಂದಿಯಲ್ಲಿ ಇದೇ ತಿಂಗಳು ಪ್ರಸಾರವಾಗಲಿದೆ.

    ಕೆಜಿಎಫ್ ಸಿನಿಮಾ ಕಳೆದ ವರ್ಷ ಡಿಸೆಂಬರ್ 21ರಂದು ಬಿಡುಗಡೆ ಆಗಿತ್ತು. ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡಿದೆ. ಈ ಚಿತ್ರ ದೇಶ್ಯಾದ್ಯಂತ 2,400 ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಕೆಜಿಎಫ್ ಚಿತ್ರ ಬಾಲಿವುಡ್ ಬಾದ್‍ಶಾ ನಟಿಸಿದ ‘ಝೀರೋ’ ಚಿತ್ರವನ್ನು ಹಿಂದಿಕ್ಕಿ 200 ಕೋಟಿ ರೂ. ಕ್ಲಬ್ ಸೇರಿತ್ತು.

    ಏನಿದು ಅಮೆಜಾನ್ ಪ್ರೈಂ ಮೆಂಬರ್ಸ್?
    ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ ಸೇವೆ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ(ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾಗಳನ್ನು ಇದರಲ್ಲಿ ನೋಡಬಹುದು. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005ರ ಜನವರಿ 2ರಂದು ಆರಂಭಿಸಲಾಗಿತ್ತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರನ್ನು ಅಮೆಜಾನ್ ಸಂಸ್ಥೆ ಹೊಂದಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. ಸದ್ಯ ಈಗ ತಿಂಗಳಿಗೆ 129 ರೂ., ವರ್ಷಕ್ಕೆ 999 ರೂ. ಪಾವತಿಸಿದರೆ ಅಮೇಜಾನ್ ಪ್ರೈಂ ಮೆಂಬರ್ ಆಗಬಹುದು. ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಮೆಂಬರ್ ಆದರೆ 30 ದಿನಗಳ ಕಾಲ ಉಚಿತ ಟ್ರಯಲ್ ಮೂಲಕ ಸಿನಿಮಾಗಳನ್ನು ವೀಕ್ಷಿಸಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುನೀತ್ ಅಭಿನಯದ ನಟಸಾರ್ವಭೌಮ ಟ್ರೇಲರ್ ಸಖತ್ ಹಿಟ್

    ಪುನೀತ್ ಅಭಿನಯದ ನಟಸಾರ್ವಭೌಮ ಟ್ರೇಲರ್ ಸಖತ್ ಹಿಟ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ‘ನಟಸಾರ್ವಭೌಮ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಖತ್ ಹಿಟ್ ಆಗಿದೆ.

    ಟ್ರೇಲರ್ ಬಿಡುಗಡೆಯಾದ ಕೇವಲ 15 ನಿಮಿಷದಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂ ಕಂಡಿತ್ತು. ಅಲ್ಲದೇ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. 2 ಗಂಟೆಗಳಲ್ಲಿ ಟ್ರೇಲರ್ ಬರೋಬ್ಬರಿ ನಾಲ್ಕೂವರೆ ಲಕ್ಷಗಳಿಗಿಂತ ಹೆಚ್ಚು ವ್ಯೂ ಕಂಡಿದ್ದು, ಟ್ರೇಲರ್ ಸ್ಯಾಂಡಲ್ ವುಡ್‍ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸ ಮೂಡಿಸಿದೆ. ಸದ್ಯ 9 ಗಂಟೆಯಲ್ಲಿ 9.07 ಲಕ್ಷ ವ್ಯೂ ಕಂಡಿದೆ.

    ಟ್ರೇಲರ್ ನೋಡಿದ ಹಲವು ಮಂದಿ ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿನ್ನೆಲೆ ಸಂಗೀತ ಹಾಗೂ ಪುನೀತ್ ಲುಕ್ ಸಖತ್ ಭಿನ್ನವಾಗಿ ಕಂಡಿದೆ. ಟ್ರೇಲರ್ ಆರಂಭದಲ್ಲೇ ಚಿತ್ರ ಹಾರರ್ ಥ್ರಿಲ್ಲರ್ ಎನ್ನುವುದನ್ನು ಖಚಿತ ಪಡಿಸುತ್ತದೆ. ಅಲ್ಲದೇ ಪುನೀತ್ ಆಕ್ಷನ್ ದೃಶ್ಯ, ಡಾನ್ಸ್ ನೋಡುಗರಿಗೆ ಕಿಕ್ ಕೊಡುತ್ತದೆ. ಉಳಿದಂತೆ ಚಿತ್ರದ ತಾರಾಗಣ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

    ಇದೇ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಅವರು ಹಾರರ್ ಹಿನ್ನೆಲೆಯ ಚಿತ್ರಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಶುಭಕೋರಿದ್ದಾರೆ. ಅಲ್ಲದೇ ಕನ್ನಡ ಸಿನಿಮಾದ ಟ್ರೇಲರ್ ಟ್ರೆಂಡಿಂಗ್‍ನಲ್ಲಿರುವುದಕ್ಕೆ ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪವನ್ ಒಡೆಯರ್ ಸಿನಿಮಾ ನಿರ್ದೇಶಿಸಿದ್ದು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಪವನ್ ಒಡೆಯರ್, ಪುನೀತ್ ಜೋಡಿ ಎಂದ ಕೂಡಲೇ ಸಾಕಷ್ಟು ನಿರೀಕ್ಷೆಗಳಿದ್ದು, ನಟಸಾರ್ವಭೌಮ ಟೈಟಲ್ ಘೋಷಣೆ ಆಗುತ್ತಿದಂತೆ ಅಭಿಮಾನಿಗಳು ಕಾತುರಾಗಿದ್ದರು. ಕುಟುಂಬದ ಎಲ್ಲಾ ಸದಸ್ಯರು ಕುಳಿತು ನೋಡವಂತಹ ಸಿನಿಮಾ ಎಂದು ಈಗಾಗಲೇ ಚಿತ್ರತಂಡ ಭರವಸೆ ನೀಡಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.

    ಕೆಲ ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಆಡಿಯೋ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ಟ್ರೇಲರ್ ಮೂಲಕ ಅಭಿಮನಿಗಳಿಗೆ ಮತ್ತೊಂದು ಉಡುಗೊರೆ ನೀಡಿದೆ. ಪವನ್ ಅವರ 4ನೇ ಸಿನಿಮಾ ಇದಾಗಿದ್ದು, ರಣವಿಕ್ರಮ ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಂದಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಪುನೀತ್ ಜೊತೆ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ.ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದು, ಫೆಬ್ರವರಿ 9 ರಂದು ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ಚಿರಂಜೀವಿ ಪುತ್ರನ ಅಭಿಮಾನಿಗಳಿಗೆ ಶಾಕ್

    ನಟ ಚಿರಂಜೀವಿ ಪುತ್ರನ ಅಭಿಮಾನಿಗಳಿಗೆ ಶಾಕ್

    ಚಿಕ್ಕಬಳ್ಳಾಪುರ: ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಬಹುನೀರೀಕ್ಷಿತ ‘ವಿನಯ್ ವಿಧೇಯ ರಾಮ್’ ಚಿತ್ರದ ಮೊದಲ ಫ್ಯಾನ್ಸ್ ಶೋ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ.

    ಖ್ಯಾತ ನಟ ಚಿರಂಜೀವಿ ಪುತ್ರ ರಾಮ್ ಚರಣ್ ಅಭಿನಯದ ತೆಲುಗು ಭಾಷೆಯ ಚಿತ್ರ ಇಂದು ಬಿಡುಗಡೆಯಾಗಿದೆ. ಚಿಕ್ಕಬಳ್ಳಾಪುರ ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆ 6 ಗಂಟೆ 30 ನಿಮಿಷಕ್ಕೆ ಫ್ಯಾನ್ಸ್ ಶೋ ನಿಗದಿಯಾಗಿತ್ತು. ಹೀಗಾಗಿ ಮೊದಲೇ 150 ಹಾಗೂ 200 ರೂ. ಕೊಟ್ಟ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ.

    ತಾಲೂಕಿನ ವಿವಿಧ ಕಡೆಗಳಿಂದ ಮುಂಜಾನೆ 3 ಹಾಗೂ 4 ಗಂಟೆಗೆ ಆಗಮಿಸಿದ್ದ ಅಭಿಮಾನಿಗಳು ಚಿತ್ರ ನೋಡಿ ಕಣ್ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಅಭಿಮಾನಿಗಳ ಆಸಗೆ ಬ್ರೇಕ್ ಹಾಕಿದ್ದಾರೆ. ಹೆಚ್ಚುವರಿ ಪ್ರದರ್ಶನಕ್ಕೆ ಚಿತ್ರಮಂದಿರದ ಮಾಲೀಕರು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

    ಪ್ರತಿದಿನ ನಿಗದಿಯಂತೆ ಬೆಳಗ್ಗೆ 10, ಮಧ್ಯಾಹ್ನ 01, ಸಂಜೆ 4 ಹಾಗೂ 7 ಗಂಟೆಗೆ ಮಾತ್ರ ಚಿತ್ರ ಪದರ್ಶನ ಮಾಡಲು ಅನುಮತಿ ಪಡೆದಿದ್ದರು. ಆದರೆ ಇಂದು ಬಿಡುಗಡೆಯಾಗಿರುವ ವಿವಿಆರ್ ಚಿತ್ರವನ್ನ ಹೆಚ್ಚುವರಿಯಾಗಿ ಪ್ರದರ್ಶನ ಮಾಡಲು ಚಿತ್ರಮಂದಿರ ಮಾಲೀಕರು ಮುಂದಾಗಿದ್ದರು. ಹೀಗಾಗಿ ಚಿತ್ರ ನೋಡಲು ಆಗಮಿಸಿದ್ದ ಅಭಿಮಾನಿಗಳನ್ನು ಚಿತ್ರಮಂದಿರದಿಂದ ಪೊಲೀಸರು ಹೊರಕಳುಹಿಸಿದ್ದರು.

    ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳನ್ನು ಹೊರಕಳುಹಿಸಲು ಪೊಲೀಸರು ಹರಸಾಹಸಪಟ್ಟರು. ಮತ್ತೊಂದೆಡೆ ಫ್ಯಾನ್ಸ್ ಶೋ ರದ್ದಾದ ಹಿನ್ನೆಲೆಯಲ್ಲಿ ಟಿಕೆಟ್ ವಾಪಾಸ್ ಪಡೆದ ಚಿತ್ರಮಂದಿರದ ಮಾಲೀಕರು ನಿಗದಿತ ಟಿಕೆಟ್ ಕೊಟ್ಟು ಎಂದಿನಂತೆ 10 ಗಂಟೆಗೆ ಮೊದಲ ಪ್ರದರ್ಶನ ನಡೆಸಲು ಮುಂದಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅಂದ್ರು ದೇವೇಗೌಡ್ರು

    ನಾನು ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅಂದ್ರು ದೇವೇಗೌಡ್ರು

    ಬೆಂಗಳೂರು: ದೇಶದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ನಿರ್ಮಾಣವಾಗಿರುವ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಬಗ್ಗೆ ಪ್ರತಿಕ್ರಿಯಿಸುತ್ತ ನಾನು ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅಂತ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹೇಳಿದ್ದಾರೆ.

    `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ದೇಶದೆಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಈ ಚಿತ್ರದ ಕುರಿತು ರಾಜಕೀಯ ವಲಯದಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿದೆ. ಶನಿವಾರ ಸಿಎಂ ಕುಮಾರಸ್ವಾಮಿಯನ್ನು ರಾಜ್ಯ ಬಿಜೆಪಿ ಪಕ್ಷದವರು ಆಕ್ಸಿಡೆಂಟಲ್ ಸಿಎಂ ಎಂದು ವ್ಯಂಗ್ಯವಾಡಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಚಿತ್ರ ನಿರ್ಮಾಣ ಮಾಡಲು ಯಾಕೆ ಅವಕಾಶ ಕೊಟ್ಟರೋ ಗೊತ್ತಿಲ್ಲ. ಬಹುಶಃ ಈ ಚಿತ್ರ ಸುಮಾರು ನಾಲ್ಕೈದು ತಿಂಗಳ ಹಿಂದಿನಿಂದ ಸಿದ್ಧವಾಗುತ್ತಿರಬಹುದು. ನಾನು ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ, ನಾನೂ ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ದೇವೇಗೌಡರು ಹೇಳಿದರು.

    1996ರ ಲೋಕಸಭೆ ಚುನಾವಣೆ ಫಲಿತಾಂಶ ಬಂದಾಗ ದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಸಂಯುಕ್ತ ರಂಗವು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ನಿರ್ಧರಿಸಿತು. ಆಗ ಸಂಯುಕ್ತ ರಂಗದ ನೇತೃತ್ವವನ್ನು ವಹಿಸಿಕೊಂಡ ದೇವೆಗೌಡರು ಪ್ರಧಾನಿ ಆಗಿದ್ದರು. 1996ರ ಜೂನ್ 1 ರಿಂದ, 1997ರ ಏಪ್ರಿಲ್ 21ರ ವರೆಗೆ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಇದನ್ನೂ ಓದಿ: ಎಚ್ಡಿಕೆ ‘ಆಕ್ಸಿಡೆಂಟಲ್ ಸಿಎಂ’ ಸಿನಿಮಾದ ಹೀರೋ ಯಾರು? ಬಿಜೆಪಿ ಟ್ವೀಟ್

    ಸದ್ಯ ದೇಶದಲ್ಲಿ ಚರ್ಚೆಗೆ ಗುರಿಯಾಗಿರುವ `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ, ಅದೇ ಹೆಸರಿನ ಕೃತಿ ಆಧಾರಿತವಾಗಿದೆ. 2004ರಿಂದ 2008ರ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಈ ಕೃತಿ ಬರೆದಿದ್ದರು. ಈ ಕೃತಿಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಅವರು ಚಿತ್ರ ಮಾಡಿ ಮುಗಿಸಿದ್ದಾರೆ. 2019ರ ಜ.11 ರಂದು ಸಿನಿಮಾ ತೆರೆ ಕಾಣಲಿದ್ದು, ಸದ್ಯ ಅದರ ಟ್ರೇಲರ್ ಮೂಲಕವೇ ದೇಶದಲ್ಲಿ ಸದ್ದು ಮಾಡುತ್ತಿದೆ. ಗುರುವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಕಾಂಗ್ರೆಸ್‍ನ ಒಳ ರಾಜಕೀಯಕ್ಕೆ ಮನಮೋಹನ್ ಸಿಂಗ್ ಬಲಿಪಶು ಆಗಿದ್ದರು ಎಂಬ ಅರ್ಥವನ್ನು ಹೋಲುವ ದೃಶ್ಯಗಳಿವೆ ಎನ್ನುವ ಆರೋಪಗಳು ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ನಟಿಗೆ ಮಾಲಿವುಡ್‍ನಲ್ಲಿ ಕಿರುಕುಳ

    ಸ್ಯಾಂಡಲ್‍ವುಡ್ ನಟಿಗೆ ಮಾಲಿವುಡ್‍ನಲ್ಲಿ ಕಿರುಕುಳ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಕ್ಷತಾ ಶ್ರೀಧರ್ ತಮಗೇ ಮಾಲಿವುಡ್ ಚಿತ್ರ ಕಿರುಕುಳ ನೀಡಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಲ್ಲಿ ದೂರು ನೀಡಿದ್ದಾರೆ.

    ‘ಕೊಚ್ಚಿನ್ ಶಾದಿ ಚೆನ್ನೈ 03’ ಹೆಸರಿನಲ್ಲಿ ನಿರ್ಮಾಣವಾಗಲಿರುವ ಚಿತ್ರದಲ್ಲಿ ಅಭಿನಯಿಸಲು ಚಿತ್ರತಂಡ ನನಗೆ ಆಹ್ವಾನ ನೀಡಿತ್ತು. ಆದರೆ ಅಲ್ಲಿಗೆ ತೆರಳಿದ ಮೇಲೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಅಕ್ಷತಾ ಶ್ರೀಧರ್ ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ನಟಿ ಅಕ್ಷತಾ ಶ್ರೀಧರ್ ಅವರಿಗೆ ಮಾಲಿವುಡ್ ಚಿತ್ರತಂಡ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿತ್ತು. ಅದರಂತೆ ಶೂಟಿಂಗ್ ಗಾಗಿ ಕಳೆದ ವಾರ ಕೇರಳಕ್ಕೆ ಹೋಗಿದ್ರು. ಆದರೆ ಆ ವೇಳೆ ನಟಿಗೆ ನೀಡಿದ್ದ ಹೋಟೆಲ್ ಕೊಠಡಿ ಕ್ಲೀನ್ ಮಾಡಿರಲಿಲ್ಲ. ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಅವರೊಂದಿಗೆ ಜಗಳ ಮಾಡಿದ್ದಾರೆ. ಅಲ್ಲದೇ ಜಗಳ ಅತಿರೇಕಕ್ಕೆ ಹೋಗಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಶೂಟಿಂಗ್ ಕರೆಯಿಸಿಕೊಂಡ ಚಿತ್ರತಂಡ ಕೂಡ ಬೆಂಬಲ ನೀಡದೇ ನಟಿ ವಿರುದ್ಧವೇ ತಿರುಗಿ ಬಿದ್ದಿತ್ತು ಎಂದು ಆರೋಪ ಮಾಡಿದ್ದಾರೆ.

    ಚಿತ್ರತಂಡದ ವರ್ತನೆಯಿಂದ ಭಯಗೊಂಡ ಅಕ್ಷತಾ ಅವರು ಹೋಟೆಲ್ ನೀಡಬೇಕಿದ್ದ 56 ಸಾವಿರ ರೂ. ಹಣವನ್ನು ಪಾವತಿ ಮಾಡಿ ಚಿತ್ರೀಕರಣದಿಂದ ಹಿಂದಿರುಗಿದ್ದಾರೆ. ಬಳಿಕ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೇ ಈಗಾಗಲೇ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೂ ಮೌಖಿಕ ದೂರು ದಾಖಲು ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮಾಲಿವುಡ್‍ನಲ್ಲಿ ತಮಗಾದ ಅನುಭವದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಕ್ಷತಾ ಅವರು ಶೀಘ್ರವೇ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಅಂದಹಾಗೇ ಅಕ್ಷತಾ ಅವರು ಕನ್ನಡ ತ್ರಾಟಕ, ಪಾನಿಪುರಿ, ರಾಜೀವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕನ್ನಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿತ್ಯಾ ಮೆನನ್

    ಕನ್ನಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿತ್ಯಾ ಮೆನನ್

    ಬೆಂಗಳೂರು: ತನ್ನ ವಿಭಿನ್ನ ಪಾತ್ರಗಳ ಮೂಲಕವೇ ಹೆಸರು ಮಾಡಿದ್ದ ನಟಿ ನಿತ್ಯಾ ಮೆನನ್ ಮತ್ತೊಂದು ವಿಭಿನ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.

    ಹೌದು, ನಟಿ ನಿತ್ಯಾ ಮೆನನ್ ಅಭಿನಯಿಸುವ ಚಿತ್ರಗಳು ಒಂದಿಲ್ಲೊಂದು ವಿಶೇಷತೆಗಳಿಂದಲೇ ಕೂಡಿರುತ್ತವೆ. ಅಲ್ಲದೇ ಅವರ ಸಿನಿಮಾಗಳು ವಿಭಿನ್ನ ಶೈಲಿಯಲ್ಲಿರುವುದು ಮಾಮೂಲಿ. ಈ ಮೊದಲು ಅವರು ಕಿಚ್ಚ ಸುದೀಪ್ ಅಭಿನಯದ `ಕೋಟಿಗೊಬ್ಬ-2′ ಸಿನಿಮಾದ ಮೂಲಕ ಕನ್ನಡದ ಅಭಿಮಾನಿಗಳಲ್ಲಿ ಹುಚ್ಚು ಹಬ್ಬಿಸಿದ್ದರು. ಸಿನಿಮಾದ `ಸಾಲುತಿಲ್ಲವೇ, ಸಾಲುತಿಲ್ಲವೇ’ ಹಾಡಿನಲ್ಲಿ ನಟ ಸುದೀಪ್ ರೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಹಾಡು ಸಾಕಷ್ಟು ಸದ್ದು ಮಾಡಿತ್ತು. ಮತ್ತೆ ಪುನಃ ನಟಿ ನಿತ್ಯಾ ಮೆನನ್ ಕನ್ನಡಕ್ಕೆ ಕಾಲಿಡುತ್ತಿದ್ದಾರೆ.

    `ಪ್ರಾಣ’ ಎಂಬ ಹೊಸ ಸಿನಿಮಾದಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ. ಥ್ರಿಲ್ಲರ್ ಚಿತ್ರವಾಗಿರುವ ಪ್ರಾಣದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಚಿತ್ರವು ಅಂತಿಮ ಘಟಕ್ಕೆ ಬಂದು ತಲುಪಿದೆ. ಈಗಾಗಲೇ ಸಿನಿಮಾದ ಮೊದಲನೇ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದು, ಈಗ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ಸಖತ್ ವಿಶೇಷವಾಗಿದ್ದು, ಅಭಿಮಾನಿಗಳಿಗೆ `ಪ್ರಾಣ’ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಪೋಸ್ಟರ್ ನಲ್ಲೆ ವಿಭಿನ್ನ ರೀತಿಯಲ್ಲಿ ನಿತ್ಯಾ ಕಾಣಿಸಿಕೊಂಡಿರುವುದರಿಂದ ಚಿತ್ರ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

     

    ಪ್ರಾಣ ಚಿತ್ರವು ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಸಂಪೂರ್ಣ ಚಿತ್ರವು ಸಿಂಕ್ ಸೌಂಡ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರಕ್ಕೆ ವಿ.ಕೆ.ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೇ ಆಸ್ಕರ್ ಪ್ರಶಸ್ತಿ ವಿಜೇತ ರೆಸುಲ್ ಪುಕುಟ್ಟಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಹವಾ ಶುರು- ಸ್ಟಾರ್ ನಟರ ಜೊತೆ ಕೊಡಗಿನ ಬೆಡಗಿ ಸ್ಕ್ರೀನ್ ಶೇರ್

    ಟಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಹವಾ ಶುರು- ಸ್ಟಾರ್ ನಟರ ಜೊತೆ ಕೊಡಗಿನ ಬೆಡಗಿ ಸ್ಕ್ರೀನ್ ಶೇರ್

    ಬೆಂಗಳೂರು: ಟಾಲಿವುಡ್ ಅಂಗಳದಲ್ಲಿ ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ಹವಾ ಶುರುವಾಗಿದೆ. ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿಗೂ ರಶ್ಮಿಕಾನೇ ಬೇಕು ಎನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ.

    ಸದ್ಯ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಸುದ್ದಿ ಅಂದರೆ, ರಶ್ಮಿಕಾ ಜೂ. ಎನ್‍ಟಿಆರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈಗಾಗಲೇ ಜೂ. ಎನ್‍ಟಿಆರ್ ಪ್ರೊಡಕ್ಷನ್ ಹೌಸ್‍ನಿಂದ ರಶ್ಮಿಕಾರನ್ನು ಸಂಪರ್ಕ ಮಾಡಿದ್ದು ಮಾತುಕತೆ ಹಂತದಲ್ಲಿದೆಯಂತೆ. ಶೀಘ್ರದಲ್ಲೇ ಆ ಸಿನಿಮಾದ ಅಧಿಕೃತ ಮಾಹಿತಿಯನ್ನು ರಶ್ಮಿಕಾ ರಿವೀಲ್ ಮಾಡಲಿದ್ದಾರೆ.

    ರಶ್ಮಿಕಾ ಈಗಾಗಲೇ ‘ಚಲೋ’ ಹಾಗೂ ‘ಗೀತಾ ಗೋವಿಂದಂ’ ಸಿನಿಮಾ ಮೂಲಕ ತೆಲುಗು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸದ್ಯ ಗೀತಾ ಗೋವಿಂದಂ ಸಿನಿಮಾ ನೋಡಿ ರಶ್ಮಿಕಾರನ್ನು ಹಾಡಿ ಹೊಗಳಿರುವ ಮಹೇಶ್ ಬಾಬು ಹಾಗೂ ರಾಮ್‍ಚರಣ್ ಶೀಘ್ರದಲ್ಲೇ ತಮ್ಮ ಪ್ರೊಡಕ್ಷನ್ ಹೌಸ್ ಕಡೆಯಿಂದ ರಶ್ಮಿಕಾಗೆ ಕಾಲ್ ಮಾಡಿಸಿ ಕಾಲ್‍ಶೀಟ್ ಪಡೆಯುವ ಸಾಧ್ಯತೆ ಇದೆ.

    ಸದ್ಯ ರಶ್ಮಿಕಾ `ದೇವದಾಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಕಿನೇನಿ ನಾಗಾರ್ಜುನ್ ಹಾಗೂ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅರ್ಜುನ್ ರೆಡ್ಡಿ ಜೊತೆ `ಡಿಯರ್ ಕಾಮ್ರೇಡ್’ ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರರಂಗದಿಂದಲೂ ರಶ್ಮಿಕಾರನ್ನು ಅಪ್ರೋಚ್ ಮಾಡುತ್ತಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ಡೈರೆಕ್ಟರ್ ಗಳು ರಶ್ಮಿಕಾ ಕಾಲ್‍ಶೀಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv