Tag: movie

  • ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ: ಆರೋಪಿ ರಾಕೇಶ್

    ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ: ಆರೋಪಿ ರಾಕೇಶ್

    ಬೆಂಗಳೂರು: ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ ಎಂದು ಆರೋಪಿ ರಾಕೇಶ್ ಪೈಲ್ವಾನ್ ಸಿನಿಮಾ ಪೈರಸಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

    ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ರಾಕೇಶ್ ಸಿಸಿಬಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾನೆ. ಇದನ್ನೂ ಓದಿ: ಪೈಲ್ವಾನ್ ಪೈರಸಿ ಮಾಡಿದ ಆರೋಪಿ ಬಂಧನ

    ವಿಚಾರಣೆ ವೇಳೆ ರಾಕೇಶ್, ನಾನು ದರ್ಶನ್ ಅಭಿಮಾನಿ. ಇದೇ ಕಾರಣಕ್ಕೆ ನಾನು ಸಿನಿಮಾವನ್ನು ಲೀಕ್ ಮಾಡಿದೆ. ನನಗೆ ನಮ್ಮ ಡಿ-ಬಾಸ್ ಸಿನಿಮಾನೇ ಗ್ರೇಟು. ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಮೊದಲು ನಾನು ನನ್ನ ಇಬ್ಬರ ಸ್ನೇಹಿತರಿಗೆ ಶೇರ್ ಮಾಡಿದೆ. ನಂತರ ಅದು ಯಾರಿಗೆಲ್ಲಾ ಹೋಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ಹಣಕ್ಕಾಗಿ ಸಿನಿಮಾವನ್ನು ಲೀಕ್ ಮಾಡಿಲ್ಲ. ದರ್ಶನ್ ಅವರ ಅಭಿಮಾನಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಚಿತ್ರದ ಲಿಂಕ್ ಹೇಗೆ ಸಿಕ್ತು ಎಂಬ ವಿಷಯವನ್ನು ಹೇಳುತ್ತಿಲ್ಲ. ಹಾಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದಕ್ಕೆ ಗುರುವಾರ ರಾತ್ರಿ ದಾಬಸ್‍ಪೇಟೆಯಲ್ಲಿ ರಾಕೇಶ್‍ನನ್ನು ಬಂಧಿಸಿದ್ದೇವೆ. ಕಾಪಿ ರೈಟ್ ಉಲ್ಲಂಘನೆ ಮಾಡಿ ಚಿತ್ರದ ಲಿಂಕ್ ಫೇಸ್‍ಬುಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಅಪರಾಧ. ಚಿತ್ರದ ನಿರ್ಮಾಪಕರ ದೂರಿನ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು, ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ರಾಕೇಶ್ ಹಿಂದೆ ಯಾರಾದರೂ ಇದ್ದರಾ ಎಂಬ ವಿಷಯ ತಿಳಿಯಬೇಕಿದೆ ಎಂದು ಹೇಳಿದ್ದಾರೆ.

    ಸೋಮವಾರ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ದೂರು ನೀಡಿದ ಬಳಿಕ ಸ್ವಪ್ನಕೃಷ್ಣ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3,500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

    ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಸೆ.18ರಂದು ‘ದಮಯಂತಿ’ ಚಿತ್ರದ ಟೀಸರ್ ಬಿಡುಗಡೆ

    ಸೆ.18ರಂದು ‘ದಮಯಂತಿ’ ಚಿತ್ರದ ಟೀಸರ್ ಬಿಡುಗಡೆ

    ಶ್ರೀಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನವರಸನ್ ಅವರು ನಿರ್ಮಿಸಿರುವ, ರಾಧಿಕಾ ಕುಮಾರಸ್ವಾಮಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ‘ದಮಯಂತಿ’ ಚಿತ್ರದ ಟೀಸರ್ ಇದೇ ತಿಂಗಳ 18ರಂದು ಬಿದುಗಡೆಯಾಗಲಿದೆ.


    ನವರಸನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆ ಸೇರಿ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾರರ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣವಾಗಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ ಮುಂತಾದ ಕಡೆ 67 ದಿನಗಳ ಚಿತ್ರೀಕರಣ ನಡೆದಿದೆ.


    ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಧಿಕಾ ಕುಮಾರಸ್ವಾಮಿ, ಭಜರಂಗಿ ಲೋಕಿ, ಸಾಧು ಕೋಕಿಲ, ತಬಲನಾಣಿ, ಮಿತ್ರ, ನವೀನ್ ಕೃಷ್ಣ, ಹೊನ್ನವಳ್ಳಿ ಕೃಷ್ನ, ರವಿಗೌಡ, ಬಲರಾಜವಾಡಿ, ವೀಣಾಸುಂದರ್, ಕೆಂಪೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ನನ್ನಪ್ರಕಾರ: ಕನ್ನಡ ಚಿತ್ರದ ಕಸುವಿನ ಮುಂದೆ ಸೈಡಿಗೆ ಸರಿದ ಸಾಹೋ!

    ನನ್ನಪ್ರಕಾರ: ಕನ್ನಡ ಚಿತ್ರದ ಕಸುವಿನ ಮುಂದೆ ಸೈಡಿಗೆ ಸರಿದ ಸಾಹೋ!

    ವ್ಯಾವಹಾರಿಕವಾಗಿ ಪರಭಾಷಾ ಚಿತ್ರಗಳು ಎಂಥಾ ಸವಾಲೊಡ್ಡಿದರೂ ಕಸುವು ಹೊಂದಿರೋ ಕನ್ನಡ ಚಿತ್ರಗಳು ಅದರ ವಿರುದ್ಧ ಹೋರಾಡಿ ಗೆಲ್ಲತ್ತವೆಂಬುದಕ್ಕೆ ಒಂದಷ್ಟು ಉದಾಹರಣೆಗಳಿವೆ. ವಿನಯ್ ಬಾಲಾಜಿ ನಿರ್ದೇಶನದ ನನ್ನಪ್ರಕಾರ ಚಿತ್ರವೂ ಇದೀಗ ಆ ಸಾಲಿಗೆ ಸೇರಿಕೊಂಡಿದೆ. ಕುರುಕ್ಷೇತ್ರದಂಥಾ ಬಿಗ್ ಬಜೆಟ್ಟಿನ ಚಿತ್ರವೇ ಸಾಹೋ ಆರಂಭಿಕ ಅಬ್ಬರಕ್ಕೆ ಸಿಕ್ಕಿ ನಲುಗಿತ್ತು. ನನ್ನಪ್ರಕಾರ ಚಿತ್ರ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದ್ದ ಹೊತ್ತಿನಲ್ಲಿಯೇ ಸಾಹೋ ಬಿರುಗಾಳಿಯಂತೆ ಬಂದಪ್ಪಳಿಸಿತ್ತು. ಆದರೂ ಕೂಡ ಈ ಸಿನಿಮಾ ತನ್ನ ಕಸುವಿನಿಂದಲೇ ಅಸ್ತಿತ್ವ ಉಳಿಸಿಕೊಂಡು ಗೆದ್ದು ಬೀಗಿದೆ.

    ವಿನಯ್ ಬಾಲಾಜಿ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ತನ್ನ ಕ್ರಿಯೇಟಿವಿಟಿ ಮತ್ತು ಹೊಸತನದ ಹೊಳಹಿನೊಂದಿಗೇ ಪ್ರೇಕ್ಷಕರನ್ನು ಸೆಳೆದುಕೊಂಡು ಬಂದಿತ್ತು. ಅದಕ್ಕೆ ತಕ್ಕುದಾದ ಕಥಾ ಹಂದರ ಹೊಂದಿದ್ದ ನನ್ನಪ್ರಕಾರವನ್ನು ಮೊದಲ ದಿನದಿಂದಲೇ ಪ್ರೆಕ್ಷಕರು ಮೆಚ್ಚಿಕೊಳ್ಳಲಾರಂಭಿಸಿದ್ದರು. ಹೀಗೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾ ಪಾಲಿಗೆ ಮಹಾ ಕಂಟಕವಾಗಿ ಬಂದೊಕ್ಕರಿಸಿಕೊಂಡಿದ್ದು. ಆದರೆ ಸಾಹೋ ಅತಿ ಹೆಚ್ಚು ಚಿತ್ರಮಂದಿರಗಳನ್ನು ಆವರಿಸಿಕೊಂಡು ಪ್ರದರ್ಶನಕ್ಕೆ ತೊಂದರೆಯಾದರೂ ಕೂಡಾ ನನ್ನಪ್ರಕಾರ ಸಾವರಿಸಿಕೊಂಡು ನಿಂತಿದೆ. ಮತ್ತೆ ಈ ಚಿತ್ರಕ್ಕೆ ಹೆಚ್ಚಿನ ಥಿಯೇಟರುಗಳು ಸಿಗುತ್ತಿವೆ. ಮಲ್ಟಿಫ್ಲೆಕ್ಸ್ ಗಳಲ್ಲಿಯೂ ಇದರ ಪ್ರದರ್ಶನಕ್ಕೆ ಹೊಸ ವೇಗ ಸಿಕ್ಕಿದೆ. ಇದನ್ನು ಓದಿ: ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

    ಸಾಹೋದಂಥಾ ಭಾರೀ ಬಜೆಟ್ಟಿನ ಚಿತ್ರಗಳ ಮುಂದೆ ಹೀಗೆ ಕನ್ನಡ ಚಿತ್ರ ಕಾಲೂರಿ ನಿಂತು ಸೆಣೆಸೋದೇನು ಸಾಮಾನ್ಯ ಸಂಗತಿಯಲ್ಲ. ಅದು ಸಾಧ್ಯವಾಗೋದು ಇಡೀ ಚಿತ್ರ ಪ್ರೇಕ್ಷಕರನ್ನು ಮೋಡಿಗೀಡು ಮಾಡುವಂತೆ ಮೂಡಿ ಬಂದಿದ್ದಾಗ ಮಾತ್ರ. ನನ್ನಪ್ರಕಾರ ಚಿತ್ರವನ್ನು ನಿರ್ದೇಶಕ ವಿನಯ್ ಬಾಲಾಜಿ ಅದೇ ರೀತಿ ರೂಪಿಸಿದ್ದಾರೆ. ಕಿಶೋರ್, ಪ್ರಿಯಾಮಣಿ ಮತ್ತು ಮಯೂರಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿರೋ ನನ್ನಪ್ರಕಾರ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಇದನ್ನೀಗ ಕನ್ನಡಿಗರು ಪ್ರೀತಿಯಿಂದ ಗೆಲ್ಲಿಸಿದ್ದಾರೆ. ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಗೆದ್ದ ಖುಷಿ ಚಿತ್ರತಂಡದಲ್ಲಿದೆ.

  • ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

    ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

    ಬೆಂಗಳೂರು: ಹೊಸಾ ಅಲೆಯ, ಹೊಸಾ ಪ್ರಯೋಗದ ಚಿತ್ರವಾಗಿ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಬಿತ್ತಿದ್ದ ಚಿತ್ರ ನನ್ನಪ್ರಕಾರ. ಕಥೆಯ ಸುಳಿವು, ತಾರಾಗಣದ ಮೆರುಗು ಮತ್ತು ಪೋಸ್ಟರ್, ಟ್ರೇಲರ್ ಗಳಿಂದಲೇ ಏರಿಕೊಂಡಿದ್ದ ಕ್ಯೂರಿಯಾಸಿಟಿ… ಇಂಥಾ ಸಕಾರಾತ್ಮಕ ವಶಾತಾವರಣದಲ್ಲಿಯೇ ಈ ಸಿನಿಮಾವೀಗ ತೆರೆಗೆ ಬಂದಿದೆ. ಅಷ್ಟಕ್ಕೂ ಇಂಥಾ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಕಥೆಗಳ ಮೇಲೆ ಪ್ರೇಕ್ಷಕರಲ್ಲೊಂದು ಮೋಹ ಇದ್ದೇ ಇರುತ್ತದೆ. ಅಂಥಾದ್ದೇ ಪ್ರೀತಿಯಿಂದ ಬಂದು ನನ್ನಪ್ರಕಾರವನ್ನು ನೋಡಿದವರೆಲ್ಲ ಬೆರಗಾಗಿ ಮೆಚ್ಚಿಕೊಳ್ಳುವಂತೆ ಈ ಚಿತ್ರ ಮೂಡಿ ಬಂದಿದೆ.

    ಈ ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಕಿಶೋರ್ ಇಲ್ಲಿ ಅಶೋಕ್ ಎಂಬ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಚ್ಚಿಕೊಳ್ಳೋದೇ ಒಂದು ಅಪಘಾತ ಮತ್ತು ಕೊಲೆಯ ಘಾಟಿನಿಂದ. ಅಪಘಾತವಾಗಿ ಹೊತ್ತಿ ಉರಿಯುತ್ತಿರೋ ಕಾರು ಮತ್ತು ಅದರ ಪಕ್ಕದಲ್ಲೊಂದು ಶವ… ಸಸ್ಪೆನ್ಸ್ ಥ್ರಿಲ್ಲ ಕಥೆಯೊಂದು ಟೇಕಾಫ್ ಆಗೋದೇ ಇಲ್ಲಿಂದ. ಆ ಜಾಗಕ್ಕೆ ಸೂಪರ್ ಕಾಪ್ ಆಗಿ ಕಿಶೋರ್ ಎಂಟ್ರಿ ಕೊಟ್ಟ ನಂತರದಲ್ಲಿ ಇದು ಚಿತ್ರವಿಚಿತ್ರವಾದ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಈ ಮೂಲಕವೇ ನೋಡುಗರೆದೆಯಲ್ಲಿ ಕೌತುಕದ ಕಂದೀಲು ಸದಾ ಹೊತ್ತಿ ಉರಿಯುವಂತೆ ಮಾಡುತ್ತದೆ.

    ಒಂದರೆ ಕ್ಷಣವೂ ಇಲ್ಲಿ ಬೇರೆ ಆಲೋಚಿಸಲು ಪುರಸೊತ್ತೇ ಇಲ್ಲ. ಅಂಥಾ ಆವೇಗ, ಚುರುಕುತನದೊಂದಿಗೆ ಕಥೆ ಚಲಿಸುತ್ತದೆ. ಇನ್ನೇನು ಸತ್ಯ ಬಯಲಾಯ್ತೆಂಬಷ್ಟರಲ್ಲಿ ಅದು ಸುಳ್ಳಾಗಿ ಮತ್ತೊಂದು ಸತ್ಯ ಮಿಣುಕಿದಂತಾಗಿ ರೋಚಕ ಹಾದಿಯಲ್ಲಿಯೇ ಕ್ಲೈಮ್ಯಾಕ್ಸ್ ತಲುಪಿಕೊಳ್ಳುತ್ತದೆ. ಇಂಥಾ ಹತ್ತಾರು ತಿರುವಿನ ಕಥೇಯನ್ನು ಗೊಂದಲವೇ ಇಲ್ಲದಂತೆ ರೂಪಿಸಿರುವಕ್ಸ್ನಿರ್ದೇಶಕ ವಿನಯ್ ಬಾಲಾಜಿಯ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕೆ ಕಿಶೋರ್, ಪ್ರಿಯಾಮಣಿ, ಮಯೂರಿ ಸೇರಿದಂತೆ ಎಲ್ಲ ನಟನಟಿಯರೂ ಸಾಥ್ ಕೊಟ್ಟಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಹೊಸತನ ಹೊಂದಿರೋ, ಹೊಸಾ ಪ್ರಯೋಗಗಳ ಚಿತ್ರವಾಗಿ ಮನಸೆಳೆಯುತ್ತದೆ.

    ರೇಟಿಂಗ್: 4/5

  • ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ರಾಂಧವ. ಯಾರೇ ಆದರೂ ಮೊದಲ ಹೆಜ್ಜೆಯಲ್ಲಿಯೇ ನಿರ್ವಹಿಸಲು ಹಿಂದೇಟು ಹಾಕುವಂಥಾ ಪಾತ್ರಗಳೊಂದಿಗೇ ಭುವನ್ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಸುನಿಲ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಮೂರು ಶೇಡ್‍ಗಳ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಪಾತ್ರಗಳಿಗೆ ಅವರು ರೆಡಿಯಾದ ರೀತಿಯೇ ಒಂದು ಮಜವಾದ ಕಥೆ.

    ಹಾಗಂತ ಭುವನ್ ಹೀಗೆ ಇಂಥಾ ಪಾತ್ರಗಳಿಗೆ ಅಣಿಗೊಂಡಿದ್ದರ ಹಿಂದೆ ಬರೀ ಚೇತೋಹಾರಿ ಅನುಭವಗಳು ಮಾತ್ರವೇ ಇಲ್ಲ. ಅಲ್ಲಿ ಸಂಕಟದ, ಮನೋವ್ಯಾಕುಲದ ಅನುಭವಗಳೂ ದಂಡಿಯಾಗಿವೆ. ಇಂಥಾ ಒಂದಷ್ಟು ಅನುಭವಗಳನ್ನು ಖುದ್ದು ಭುವನ್ ಹಂಚಿಕೊಂಡಿದ್ದಾರೆ. ರಾಂಧವದಲ್ಲಿ ಭುವನ್ ಪಾತ್ರಕ್ಕೆ ಒಟ್ಟು ಮೂರು ಶೇಡುಗಳಿವೆ. ಅದರಲ್ಲಿ ರಾಬರ್ಟ್, ರಾಜ ರಾಂಧವ ಮತ್ತು ರಾಣಾ ಎಂಬ ಶೇಡುಗಳಿಗೆ ಭುವನ್ ತಿಂಗಳ ಕಾಲ ರೆಡಿಯಾಗಿದ್ದಾರೆ.

    ಅದರಲ್ಲಿಯೂ ರಾಬರ್ಟ್ ಪಾತ್ರ ಭುವನ್ ನಿಜವಾದ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ. ರಾಬರ್ಟ್ ಪಕ್ಷಿ ಶಾಸ್ತ್ರಜ್ಞ. ಆತ ಮಾತಾಡೋದೇ ಕಡಿಮೆ. ಎಲ್ಲ ಭಾವನೆಗಳನ್ನೂ ಕೂಡಾ ಎಕ್ಸ್ ಪ್ರೆಷನ್ ಮೂಲಕವೇ ತೋರಿಸಿ ಮೌನವಾಗಿರೋದು ಆ ಪಾತ್ರದ ವಿಶೇಷತೆ. ಅದನ್ನು ಸೀದಾ ಸೆಟ್ಟಿಗೆ ಹೋಗಿ ನಿರ್ವಹಿಸೋದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕೆಂಬುದು ಭುವನ್‍ಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಮೌನವನ್ನು ಮನನ ಮಾಡಿಕೊಳ್ಳಲು ತಿಂಗಳುಗಳ ಕಾಲ ಏಕಾಂತದಲ್ಲಿರಲು ಅವರು ನಿರ್ಧರಿಸಿದ್ದರು.

    ಇದರನ್ವಯ ಮನೆಯೊಳಗೆ ಬಂಧಿಯಾದ ಭುವನ್ ಮೂರೂವರೆ ತಿಂಗಳ ಕಾಲ ಹೊರಗೇ ಬಂದಿರಲಿಲ್ಲ. ಹೆಚ್ಚಾಗಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಅಡುಗೆ ಮಾಡಿ ಹಾಕುವವರೊಬ್ಬರು ಬಿಟ್ಟರೆ ಬೇರ್ಯಾರೂ ಅವರ ಸಂಪರ್ಕದಲ್ಲಿರಲಿಲ್ಲ. ಪ್ರತೀ ದಿನ ಗೆಳೆಯರೊಂದಿಗೆ ಕಲೆತು ಖುಷಿಗೊಳ್ಳುತ್ತಿದ್ದ ಭುವನ್‍ಗೆ ಮೂರೂವರೆ ತಿಂಗಳಾಗೋ ಹೊತ್ತಿಗೆಲ್ಲ ಹುಚ್ಚು ಹಿಡಿಯುವಂಥಾ ಪರಿಸ್ಥಿತಿ ಬಂದೊದಗಿತ್ತು. ಆದರೆ ಹಾಗೆ ಹೊರ ಬರೋ ಹೊತ್ತಿಗೆಲ್ಲ ಭುವನ್ ರಾಬರ್ಟ್ ಪಾತ್ರವಾಗಿ ಬದಲಾಗಿದ್ದರಂತೆ. ಇಂಥಾ ತಯಾರಿಯೊಂದಿಗೇ ರಾಬರ್ಟ್ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.

  • ಸಾರ್ವಜನಿಕರಲ್ಲಿ ವಿನಂತಿ: ಇಲ್ಲಿದೆ ಯೋಗಿಯೊಂದಿಗೆ ಸಿನಿಮಾ ನೋಡೋ ಯೋಗ!

    ಸಾರ್ವಜನಿಕರಲ್ಲಿ ವಿನಂತಿ: ಇಲ್ಲಿದೆ ಯೋಗಿಯೊಂದಿಗೆ ಸಿನಿಮಾ ನೋಡೋ ಯೋಗ!

    ಬೆಂಗಳೂರು: ಪ್ರೇಕ್ಷಕರಲ್ಲೊಂದು ತುಂಬು ಭರವಸೆ ತುಂಬುತ್ತಲೇ ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಚಿತ್ರ ಸಾರ್ವಜನಿಕರಲ್ಲಿ ವಿನಂತಿ. ಈ ಚಿತ್ರವೀಗ ಬಿಡುಗಡೆಯಾಗಿ ವಾರಗಳು ಕಳೆಯುತ್ತಾ ಬಂದಿವೆ. ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿರೋ ಸಾರ್ವಜನಿಕರಲ್ಲಿ ವಿನಂತಿ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರವನ್ನು ವೀಕ್ಷಿಸಲು ಲೂಸ್ ಮಾದ ಯೋಗಿ ಉತ್ಸಾಹದಿಂದಲೇ ತಯಾರಾಗಿದ್ದಾರೆ.

    ಲೂಸ್ ಮಾದ ಯೋಗಿ ಒಂಬತ್ತನೇ ತಾರೀಕು ಅಂದರೆ ನಾಳೆ ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಬೆಂಗಳೂರಿನ ಮಲ್ಲೇಶ್ವರ ಸವಿತ ಚಿತ್ರಮಂದಿರದಲ್ಲಿ ವೀಕ್ಷಿಸಲಿದ್ದಾರೆ. ಇಂದೇ ನೀವು ಟಿಕೆಟ್ ಬುಕ್ ಮಾಡಿದರೆ ನಾಳೆ ಯೋಗಿಯೊಂದಿಗೇ ಕೂತು ಚಿತ್ರ ನೋಡುವ ಯೋಗವೊಂದು ನಿಮ್ಮದಾಗುತ್ತೆ. ಯೋಗಿ ಹೊಸಾ ಪ್ರಯತ್ನಗಳತ್ತ ಸದಾ ಕಣ್ಣು ನೆಟ್ಟಿರುವವರು. ಒಂದು ಸಿನಿಮಾ ಟಾಕ್ ಕ್ರಿಯೇಟ್ ಮಾಡಿದರೆ ಅದೆಷ್ಟೇ ಬ್ಯುಸಿಯಾಗಿದ್ದರೂ ವೀಕ್ಷಿಸಿ ಉತ್ತೇಜನ ನೀಡುತ್ತಾರೆ. ಅದೇ ಕಾರಣದಿಂದಲೇ ಅವರು ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ವೀಕ್ಷಿಸಲು ತಯಾರಾಗಿದ್ದಾರೆ.

    ಬಿಡುಗಡೆಯಾದಂದಿನಿಂದಲೇ ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಇದರಲ್ಲಿರೋ ಮಹತ್ವದ ಸಂದೇಶ ಮತ್ತು ಕಥೆ ಹೇಳಿರೋ ನವೀನ ಶೈಲಿಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಇಂಥಾ ಸದಾಭಿಪ್ರಾಯಗಳೇ ವ್ಯಾಪಕವಾಗಿ ಹರಡಿಕೊಂಡು ಸಾರ್ವಜನಿಕರಲ್ಲಿ ವಿನಂತಿ ಗೆಲುವಿನತ್ತ ಮುನ್ನಡೆಯುತ್ತಿದೆ. ಇದು ಖಂಡಿತಾ ಅಪರೂಪದ ಅನುಭವವೊಂದನ್ನು ನಿಮಗೆ ನೀಡುತ್ತೆ. ಈ ಸಿನಿಮಾವನ್ನು ಯೋಗಿಯೊಂದಿಗೆ ಕೂತು ನೋಡೋ ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

  • ಬೆಳ್ಳಿತೆರೆಗೆ ಹಳ್ಳಿಹೈದ ಹನುಮಂತನ ಕಹಾನಿ

    ಬೆಳ್ಳಿತೆರೆಗೆ ಹಳ್ಳಿಹೈದ ಹನುಮಂತನ ಕಹಾನಿ

    ಉಡುಪಿ: ದೇಸಿ ಸ್ಟೈಲ್‍ನಲ್ಲಿ ಹಾಡು ಹೇಳಿ ಜನರನ್ನು ಮೋಡಿ ಮಾಡಿರುವ ಹನುಮಂತ ಮತ್ತೆ ಸುದ್ದಿಯಾಗ್ತಿದ್ದಾನೆ. ಏಕೆಂದರೆ ನಮ್ ಹನುಮಣ್ಣನ ಜೀವನಗಾಥೆ ಸಿನಿಮಾ ಆಗುತ್ತಿದೆ.

    ಉಡುಪಿ ಜಿಲ್ಲೆ ಕುಂದಾಪುರದ ಸಂದೇಶ್ ಶೆಟ್ಟಿ ಆಜ್ರಿ ಹನುಮಂತನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಕತ್ತಲೆ ಕೋಣೆ’ ಎಂಬ ಹಾರರ್ ಕಂ ಸಸ್ಪೆನ್ಸ್ ಮೂವಿ ನಿರ್ದೇಶನ ಮಾಡಿದ್ದ ಸಂದೇಶ್ ಶೆಟ್ಟಿ ಹನುಮನ ಚರಿತ್ರೆ ಬರೆಯೋಕೆ ಶುರು ಮಾಡಿದ್ದಾರೆ.

    ಸ್ವತಃ ಹನುಮಂತಣ್ಣನ ಜೊತೆ ಒಂದು ಸಿಟ್ಟಿಂಗ್ ಆಗಿದೆ. ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಒಂದೂವರೆ ಕೋಟಿ ಬಜೆಟ್‍ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ತಸ್ಮಯ್ ಪ್ರೊಡಕ್ಷನ್ ನಂಬರ್ 2 ಬ್ಯಾನರ್ ಅಡಿಯಲ್ಲಿ ಇಸ್ರೇಲ್‍ನಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಮತ್ತು ಪವಿತ್ರ ದಂಪತಿ ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ.

    ಈ ಮಳೆಗಾಲ ಮುಗಿದ ಕೂಡಲೇ ಶೂಟಿಂಗ್ ಶುರುವಾಗುತ್ತೆ. ಹನುಮಂತನ ಹುಟ್ಟಿನಿಂದ ‘ಸರಿಗಮಪ’ ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗುವವರೆಗೂ ಆ ನಂತರದ ಬದುಕು ಚಿತ್ರಕಥೆ ಆಗುತ್ತಿದೆ. ಹನುಮಂತನ ಊರು ಹಾವೇರಿಯ ಸುತ್ತಮುತ್ತಲೇ ಶೂಟಿಂಗ್ ನಡೆಯುತ್ತೆ. ಚಿತ್ರಕ್ಕೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಒಟ್ಟಿನಲ್ಲಿ ಹನುಮಂತ ಬೆಳ್ಳಿತೆರೆ ಮೇಲೆ ಸಿನಿಮಾ ಆಗಿ ಬರುತ್ತಿದ್ದಾನೆ.

  • ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರದಲ್ಲಿ ನಟನೆ ಮಾಡಲು ನಾನು ರೆಡಿ: ತಾರಾ

    ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರದಲ್ಲಿ ನಟನೆ ಮಾಡಲು ನಾನು ರೆಡಿ: ತಾರಾ

    ಬೆಳಗಾವಿ: ‘ನಿಖಿಲ್ ಎಲ್ಲಿದ್ದೀಯಪ್ಪ’ ಚಿತ್ರದಲ್ಲಿ ನಟನೆ ಮಾಡಲು ನಾನು ರೆಡಿ ಎಂದು ಬಿಜೆಪಿ ಮಾಜಿ ಎಂಎಲ್‍ಸಿ ನಟಿ ತಾರಾ ಹೇಳಿದ್ದಾರೆ.

    ನನಗೆ ಪಾತ್ರ ಚೆನ್ನಾಗಿ ಇದೆ ಅನಿಸಿದರೆ ಹಾಗೂ ಕಥಾಹಂದರ ಇಷ್ಟ ಆದರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ. ಚಿತ್ರದ ನಿರ್ದೇಶಕರು ಕಥೆ ಹಂದರ ಹೇಗೆ ಕಟ್ಟಿದ್ದಾರೆ ಎಂಬುದು ಮುಖ್ಯ. ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವನೆ ಸಿಕ್ಕರೆ ಚಿತ್ರ ಮಾಡುತ್ತೇನೆ. ಪಾತ್ರ ಹೇಗಿದೆ ಎಂಬುದನ್ನು ನೋಡುತ್ತೇನೆ ಎಂದರು.

    ಇತ್ತೀಚೆಗೆ ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದಾರೆ. ಒಟ್ಟು 7 ರಿಂದ 8 ಚಿತ್ರತಂಡಗಳು ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದೆ. ಆದರೆ ಇದೆಲ್ಲ ರಾಜಕೀಯಕ್ಕೆ ಸಂಬಂಧಿಸುವುದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ನೀಡಲು ನಿರಾಕರಿಸಿದೆ.

    ಸಿನಿಮಾ ನಟರ ಕುರಿತು ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ತಾರಾ ಅವರು, ಸಿಎಂ ಮಗ ಸೋಲುವ ಭಯದಲ್ಲಿ ಈ ರೀತಿ ಮಾತಾಡುತ್ತಿದ್ದಾರೆ. ಯಾರೇ ಆಗಲಿ ವೈಯಕ್ತಿಕ ತೇಜೋವಧೆ ಮಾಡಬಾರದು ಎಂದು ನಟಿ ತಾರಾ ಹೇಳಿದರು.

    ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಹೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

  • ರಿಷಬ್ ಶೆಟ್ಟಿ ಚಿತ್ರ ಸ್ಫೂರ್ತಿ – ಸರ್ಕಾರಿ ಶಾಲೆ ದತ್ತು ಪಡೆದ ಅಕುಲ್ ಬಾಲಾಜಿ

    ರಿಷಬ್ ಶೆಟ್ಟಿ ಚಿತ್ರ ಸ್ಫೂರ್ತಿ – ಸರ್ಕಾರಿ ಶಾಲೆ ದತ್ತು ಪಡೆದ ಅಕುಲ್ ಬಾಲಾಜಿ

    ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಈ ಚಿತ್ರವನ್ನು ನೋಡಿ ಟಿವಿ ನಿರೂಪಕ ಅಕುಲ್ ಬಾಲಾಜಿ ಅವರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

    ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ಎಂದು ರಿಷಬ್ ಶೆಟ್ಟಿ ತಮ್ಮ ಚಿತ್ರದಲ್ಲಿ ತಿಳಿಸಿದ್ದರು. ಈ ಚಿತ್ರವನ್ನು ವೀಕ್ಷಿಸಿದ್ದ ಅಕುಲ್ ಅವರು ಇದರಿಂದ ಸ್ಫೂರ್ತಿ ಪಡೆದು, ಬೆಂಗಳೂರಿನ ಹೊರವಲಯದ ಲಗುಮೇನಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಸಿನಿಮಾ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ, ಒಬ್ಬರ ಜೀವನಕ್ಕೆ ಸ್ಫೂರ್ತಿ ನೀಡುವ ಶಕ್ತಿ ಸಿನಿಮಾಕ್ಕಿದೆ ಎನ್ನುವುದು ಈ ಮೂಲಕ ಸಾಬೀತಾಗಿದೆ.

    ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವ ಬಗ್ಗೆ ತಮ್ಮ ಗೆಳೆಯರು ಮತ್ತು ಕುಟುಂಬದ ಜತೆಗೆ ಚರ್ಚಿಸಿ ಅಕುಲ್ ಅದರ ಉಳಿವಿಗೆ ನೆರವಾಗಿದ್ದಾರೆ. ಈ ನಿರ್ಧಾರಕ್ಕೆ ಬರಲು ಸರ್ಕಾರಿ ಹಿ.ಪ್ರಾ. ಶಾಲೆ ಸಿನಿಮಾ ಕಾರಣ. ಸಿನಿಮಾ ನೋಡಿದ ಬಳಿಕ ಸರ್ಕಾರಿ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ತಿಳಿದು ಬೇಜಾರಾಯಿತು. ಆದರಿಂದ ಲಗುಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ.

    ನಾನು ಆಗಾಗ ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತೇನೆ. ಆದರಿಂದ ಶಾಲೆಯ ಬಗ್ಗೆ ಗಮನ ಹರಿಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ, ದತ್ತು ಪಡೆಯಲು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

    ಈ ಶಾಲೆಯಲ್ಲಿ 66 ಮಂದಿ ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಈ ಇಬ್ಬರು ಶಿಕ್ಷಕರಲ್ಲಿ ಒಬ್ಬರು ವೈಯಕ್ತಿಕ ಕಾರಣಗಳಿಂದ ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದಾರೆ. ಇಲ್ಲಿ ಶೌಚಾಲಯ ಹಾಗೂ ಇತರೇ ಸೌಲಭ್ಯಗಳಿಲ್ಲದ ಕಾರಣ ಬಹುತೇಕ ವಿದ್ಯಾರ್ಥಿಗಳ ಶಾಲೆಗೆ ಬರುತ್ತಿರಲಿಲ್ಲ ಎಂದರು.

    ಈ ಶಾಲೆಗೆ ಭೇಟಿ ನೀಡಿದ ಬಳಿಕ ಸ್ವತಃ ಅಕುಲ್ ಅವರೇ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ, ತಾವೇ ಇನ್ನೊಬ್ಬ ಶಿಕ್ಷಕರನ್ನು ಶಾಲೆಗೆ ನೇಮಿಸಿ, ಅವರಿಗೆ ಸಂಬಳ ಕೂಡ ನೀಡುತ್ತಿದ್ದಾರೆ. ಸದ್ಯ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.  ಇದೇ ಮಾರ್ಚ್ ಕೊನೆಗೆ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು,  ಆ ದಿನವೇ ಅಧಿಕೃತವಾಗಿ ಅಕುಲ್ ಶಾಲೆಯನ್ನು ದತ್ತು ಪಡೆಯಲಿದ್ದಾರೆ.

  • ಯಜಮಾನ ಗಳಿಕೆ ಎಷ್ಟು ಎಂದು ಕೇಳಿದ್ದಕ್ಕೆ ದರ್ಶನ್ ಗರಂ

    ಯಜಮಾನ ಗಳಿಕೆ ಎಷ್ಟು ಎಂದು ಕೇಳಿದ್ದಕ್ಕೆ ದರ್ಶನ್ ಗರಂ

    ಮೈಸೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿದ್ದಾರೆ. ಯಜಮಾನ ಚಿತ್ರದ ಗಳಿಕೆ ಎಷ್ಟಾಗಿದೆ ಎಂಬ ಪ್ರಶ್ನೆಯೇ ದರ್ಶನ್ ಕಣ್ಣು ಕೆಂಪಾಗುವಂತೆ ಮಾಡಿತ್ತು.

    ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಟ ದರ್ಶನ್, ಸಿನಿಮಾ ಯಶಸ್ವಿನ ಬಗ್ಗೆ ಸಂತಸ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪರೀಕ್ಷೆ, ಜನರಿಗೆ ಕ್ರಿಕೆಟ್ ಪಂದ್ಯ ಇದ್ದರೂ ಸಿನಿಮಾ ಸಕ್ಸಸ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ರಾಜಕೀಯ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ದರ್ಶನ್, ಇದು ಕೇವಲ ಯಜಮಾನ ಚಿತ್ರದ ಸುದ್ದಿಗೋಷ್ಠಿ. ಸಿನಿಮಾ ಬಗ್ಗೆ ಏನಾದರೂ ಕೇಳಿ ಹೇಳುತ್ತೇನೆ. ಇಲ್ಲಿಗೆ ಬಂದಿರೋದು ನಾನು ಯಜಮಾನನಾಗಿ, ಬೇರೆ ವಿಚಾರಗಳನ್ನು ಬೇರೆ ಕಡೆ ನಾನು ಮಾತನಾಡುತ್ತೇನೆ ಎಂದರು.

    ಇತ್ತ ಮಾಧ್ಯಮಗಳಿಂದ ಸಿನಿಮಾ ಕಲೆಕ್ಷನ್ ಎಷ್ಟು ಎಂಬ ಪ್ರಶ್ನೆ ಕೇಳಿ ಬರುತ್ತಿದಂತೆ ಗರಂ ಆದ ದರ್ಶನ್, ಸಿನಿಮಾ ಕಲೆಕ್ಷನ್ ಬಗ್ಗೆ ಕಟ್ಟಿಕೊಂಡ ಏನ್ ಮಾಡ್ತಿರಾ? ನಿಮಗೆ ಅದರಿಂದ ಉಪಯೋಗ ಆಗುವುದಾದರೆ ಹೇಳಿ ಪೂರ್ತಿ ದಾಖಲೆ ಕೊಡುತ್ತೇನೆ. ಅಷ್ಟೂ ಬೇಕೆಂದರೆ ನೀವೇ ಎಷ್ಟು ಥಿಯೇಟರ್ ಗಳಲ್ಲಿ ಚಿತ್ರ ಇದೆ. ಒಂದು ಶೋಗೆ ಎಷ್ಟು ಕಲೆಕ್ಷನ್ ಆಗುತ್ತೆ. ಹಾಗೇ ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಿ ಎಂದು ಸಿಡಿಮಿಡಿಗೊಂಡರು.

    ಚಿತ್ರವೊಂದಕ್ಕೆ 19 ಕೋಟಿ ರೂ. ಸಂಭಾವನೆ ಆಫರ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾರು ಸರ್. ನಿಮಗೆ ಹೇಳಿದ್ದು? ಅವರನ್ನು ನಾಳೆಯೇ ಕರೆದುಕೊಂಡು ಬನ್ನಿ ಸಿನಿಮಾ ಮಾಡುತ್ತೀನಿ. ನೀವು ಹೀಗೆ ಹೇಳಿ ಹೇಳಿ ಐಟಿಯವರು ನಮ್ಮಲ್ಲಿ ಲೆಕ್ಕ ಕೇಳುತ್ತಾರೆ. ಅವರಿಗೆ ಕನ್ನಡ ಭಾಷೆ ಬರುವುದಿಲ್ಲ. ‘ದರ್ಶನ್ ತುಮಾರ ಪಾಸ್ ಇತ್ನಾ ಪೈಸಾಯೇ’ ಎಂದು ಕೇಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv