Tag: movie

  • ‘ಕೊಡೆಮುರುಗ’ನಿಗೆ ತಟ್ಟಿದ ಕೋವಿಡ್-19 ಬಿಸಿ – ಜುಲೈನಲ್ಲಿ ಮರು ಬಿಡುಗಡೆಗೆ ಚಿತ್ರತಂಡ ನಿರ್ಧಾರ

    ‘ಕೊಡೆಮುರುಗ’ನಿಗೆ ತಟ್ಟಿದ ಕೋವಿಡ್-19 ಬಿಸಿ – ಜುಲೈನಲ್ಲಿ ಮರು ಬಿಡುಗಡೆಗೆ ಚಿತ್ರತಂಡ ನಿರ್ಧಾರ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಕೋವಿಡ್ 19 ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಎರಡನೇ ಅಲೆಯ ಪರಿಣಾಮ ಹೆಚ್ಚಾಗದಂತೆ ಮುನ್ನೆಚ್ಚರಿಕೆಯ ನಿರ್ಬಂಧಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿದೆ. ಈ ನಿರ್ಬಂಧಗಳಿಗೆ ಚಿತ್ರರಂಗ ಕೂಡ ಹೊರತಾಗಿಲ್ಲ.

    ಕೊರೊನಾ ಹರಡುವಿಕೆ ತಡೆಯಲು ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ನೈಟ್ ಕಫ್ರ್ಯೂ ಜಾರಿಗೆ ತಂದು ಜನರ ರಾತ್ರಿ ಓಡಾಟಕ್ಕೇ ಬ್ರೇಕ್ ಹಾಕಿದ್ರೂ ಕೂಡ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಹೀಗೆ ದಿನದಿಂದ ದಿನಕ್ಕೆ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಚಿತ್ರಮಂದಿರಗಳೂ ಕೂಡ ಜನರಿಲ್ಲದೆ ಬಣಗುಟ್ಟತ್ತಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದುರಾಗಿದೆ. ಈ ಕಾರಣಕ್ಕಾಗಿ ಕಳೆದ ವಾರ ತೆರೆಕಂಡ `ಕೊಡೆಮುರುಗ’ ಸಿನಿಮಾವನ್ನು ಹಿಂಪಡೆದು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

    ಈ ಬಗ್ಗೆ ಮಾತನಾಡಿರುವ `ಕೊಡೆಮುರುಗ’ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಸಿನಿಮಾ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಶೇಕಡಾ 50ರಷ್ಟು ಆಸನಕ್ಕೆ ಅವಕಾಶ ನೀಡಿದ್ದರು ಕೂಡ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದಿದ್ದರಿಂದ ಜನ ಬರುತ್ತಿದ್ದರು. ಆದರೆ ಕೊರೊನಾ ಎರಡನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗಿನ ಶೋಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಆದುದರಿಂದ ಕೋವಿಡ್ 19 ಸುಧಾರಣೆಗೆ ಬಂದ ಮೇಲೆ ಸಿನಿಮಾ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದಿದ್ದಾರೆ.

    ನಿರ್ದೇಶಕ ಸುಬ್ರಮಣ್ಯ ಪ್ರಸಾದ್. ಸರ್ಕಾರದ ಆದೇಶವನ್ನು ಗೌರವಿಸುತ್ತ, ಸಾರ್ವಜನಿಕರ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು `ಕೊಡೆಮುರುಗ’ ಸಿನಿಮಾವನ್ನು ಚಿತ್ರಮಂದಿರದಿಂದ ಹಿಂಪಡೆದಿದ್ದು, ಜುಲೈ ತಿಂಗಳಲ್ಲಿ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. `ಕೊಡೆಮುರುಗ’ ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಚೊಚ್ಚಲ ಸಿನಿಮಾ. ಮುನಿಕೃಷ್ಣ ಹಾಗೂ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾವಾಗಿದ್ದು ಕೆ. ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಚಿತ್ರಕ್ಕಿದೆ.

  • ಹಳ್ಳಿ ಸೊಗಡಿನ ಚಿತ್ರ ‘ನಿಮ್ಮೂರು’ ಬಿಡುಗಡೆ ಸಿದ್ಧ..!

    ಹಳ್ಳಿ ಸೊಗಡಿನ ಚಿತ್ರ ‘ನಿಮ್ಮೂರು’ ಬಿಡುಗಡೆ ಸಿದ್ಧ..!

    ಸ್ಯಾಂಡಲ್‌ವುಡ್‌ನಲ್ಲಿ ಹಳ್ಳಿ ಸೊಗಡಿನ ಸಿನಿಮಾವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಮುಗಿಸಿ ಇದೀಗ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಈ ಚಿತ್ರದ ಹೆಸರು ‘ನಿಮ್ಮೂರು’. ಹಠವಾದಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದು ವಿಜಯ್. ಎಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಗ್ರಾಮೀಣ ಭಾಗದ ಜನರ ದಿನನಿತ್ಯದ ಆಗು ಹೋಗುಗಳು, ಪ್ರೀತಿ ಪ್ರೇಮದ ಎಳೆಯ ಜೊತೆ, ಅವರ ಹಾಸ್ಯ ಪ್ರಜ್ಞೆಯನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ವಿಜಯ್. ಎಸ್ ಮಾಡಿದ್ದಾರೆ. ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ, ತಲಕಾಡು, ಸಕಲೇಶಪುರ, ರಾಣೆಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ‘ನಿಮ್ಮೂರು’ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು, ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಎಲ್ಲವನ್ನು ಮುಗಿಸಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ.

    ಮನೋರಂಜನಾತ್ಮಕ ಕಥಾಹಂದರ ಒಳಗೊಂಡಿರುವ ‘ನಿಮ್ಮೂರು’ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್ ಕಶ್ಯಪ್, ಮಧು ಸುದಂಡಿ ಸಂಗೀತ ನಿರ್ದೇಶನವಿದೆ. ಲಕ್ಕಿ ರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಂ, ಸಿದ್ದು ಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಶೇಖರ್, ಚಂದ್ರಶೇಖರ್ ದಾವಣಗೆರೆ ಅವರು ಹಠವಾದಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ಶ್ರೀಘ್ರದಲ್ಲೇ ‘ನಿಮ್ಮೂರು’ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಕಮರ್ಷಿಯಲ್ ಸಿನಿಮಾ ನೋಡಿ ನೋಡಿ ಬೇಸರವಾಗಿದ್ದ ಸಿನಿರಸಿಕರಿಗೆ ಈ ಚಿತ್ರ ಒಂದೊಳ್ಳೆಯ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.

  • 16ನೇ ವಯಸ್ಸಿನಲ್ಲೇ ಸಲ್ಮಾನ್ ಸಿನಿಮಾವನ್ನು ನಿರಾಕರಿಸಿದ ಶ್ರದ್ಧಾ

    16ನೇ ವಯಸ್ಸಿನಲ್ಲೇ ಸಲ್ಮಾನ್ ಸಿನಿಮಾವನ್ನು ನಿರಾಕರಿಸಿದ ಶ್ರದ್ಧಾ

    ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ 16ನೇ ವಯಸ್ಸಿನಲ್ಲೇ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ನಿರಾಕರಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರದ್ಧಾ, ನಾನು 16ನೇ ವಯಸ್ಸಿನಲ್ಲಿದ್ದಾಗ ಸಲ್ಮಾನ್ ಖಾನ್ ಅವರ ಜೊತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಆದರೆ ನಾನು ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು ಎಂದು ಈ ಸಿನಿಮಾವನ್ನು ನಿರಾಕರಿಸಿದೆ ಎಂದು ತಿಳಿಸಿದರು.

    16ನೇ ವಯಸ್ಸಿನಲ್ಲಿ ನಾನು ಚಿಕ್ಕವಳಾಗಿದೆ. ಮೊದಲು ನಾನು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕಾಲೇಜಿಗೆ ಹೋಗಬೇಕು ಎಂದು ಬಯಸಿದ್ದೆ. ಆದರೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವ ಅವಕಾಶವನ್ನು ತಿರಸ್ಕರಿಸಿ, ನನ್ನ ವಿದ್ಯಾಭ್ಯಾಸದತ್ತ ಗಮನಹರಿಸಲು ಕಷ್ಟವಾಯಿತು ಎಂದು ಶ್ರದ್ಧಾ ಹೇಳಿದ್ದಾರೆ.

    2010ರಲ್ಲಿ ಶ್ರದ್ಧಾ ‘ಟೀನ್ ಪತ್ತಿ’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್, ಮಾದವನ್ ಹಾಗೂ ರೈಮಾ ಸೇನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಶ್ರದ್ಧಾ ಸಾಹೋ, ಆಶಿಕಿ-2, ಏಕ್-ವಿಲನ್, ಹಾಫ್ ಗರ್ಲ್‍ಫ್ರೆಂಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

    ಸದ್ಯ ಕೊನೆಯದಾಗಿ ಶ್ರದ್ಧಾ ‘ಭಾಘಿ-3’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶ್ರದ್ಧಾಗೆ ನಟ ಟೈಗರ್ ಶ್ರಾಫ್ ನಾಯಕನಾಗಿ ನಟಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಕಿರುತೆರೆ ನಟಿ ಮೇಲೆ ರೇಪ್

    ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಕಿರುತೆರೆ ನಟಿ ಮೇಲೆ ರೇಪ್

    – ಗೋವಾ, ಹೈದರಾಬಾದ್, ಮುಂಬೈನಲ್ಲಿ ಕೃತ್ಯ
    – ಸತತ 6 ವರ್ಷಗಳಿಂದ ನಟಿಗೆ ಟಾರ್ಚರ್
    – ವಿಡಿಯೋ ಬ್ಲ್ಯಾಕ್‍ಮೇಲ್ ಮಾಡಿ 6 ಬಾರಿ ಅತ್ಯಾಚಾರ

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನಿರ್ಮಾಪಕನೊಬ್ಬ ನಟಿ ಮೇಲೆ ಅತ್ಯಾಚಾರ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

    ಸಂಗಮೇಶ್ ಪಾಟೀಲ್ ವಿರುದ್ಧ ನಟಿ ದೂರು ನೀಡಿದ್ದಾಳೆ ಆರೋಪಿ ಸಂಗಮೇಶ್ 2013ರಲ್ಲಿ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಕಿರುತೆರೆ ನಟಿಯನ್ನು ಹೈದರಾಬಾದ್‍ಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿ ನಟಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ.

    ಕಳೆದ 6 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ನಿರ್ಮಾಪಕನ ವಿರುದ್ಧ ನಟಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಮೆರೆಗೆ ಪೊಲೀಸರು ನಿರ್ಮಾಪಕನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಇದೀಗ ನ್ಯಾಯಾಲಯದ ಸೂಚನೆಯಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?
    2013ರಲ್ಲಿ ಆರೋಪಿ ಸಂಗಮೇಶ್ ಕಿರುತೆರೆ ನಟಿಗೆ ಕರೆ ಮಾಡಿ ತಾನು ನಿರ್ಮಾಪಕನೆಂದು ಹೇಳಿಕೊಂಡಿದ್ದನು. ಅಲ್ಲದೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಚಿತ್ರರಂಗದಲ್ಲಿರುವ ಒಬ್ಬ ವ್ಯಕ್ತಿಯ ಬಳಿ ಪಡೆದೆ. ಚಿತ್ರರಂಗದಲ್ಲಿ ನಿಮಗೆ ನಟಿ ಆಗುವ ಚಾನ್ಸ್ ಕೊಡಿಸುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿದ್ದನು. ಇದಾದ ಕೆಲವು ದಿನಗಳ ನಂತರ ಸಂಗಮೇಶ್, ಯುವತಿಗೆ ಕರೆ ಮಾಡಿ ಚಿತ್ರವೊಂದರಲ್ಲಿ ನಟಿ ಪಾತ್ರ ಕೊಡಿಸುತ್ತೇನೆ ಎಂದು ಹೇಳಿ ಆಕೆಯನ್ನು ಹೈದರಾಬಾದ್‍ಗೆ ಕರೆಸಿಕೊಂಡಿದ್ದನು. ಆರೋಪಿ ಮಾತು ನಂಬಿದ ಯುವತಿ ಹೈದರಾಬಾದ್‍ಗೆ ತೆರಳಿದ್ದಳು.

    ಯುವತಿ ಹೈದರಾಬಾದ್‍ಗೆ ಹೋಗಿದ್ದಾಗ ಆರೋಪಿ ಆಕೆಯನ್ನು ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಹಾಕಿ ಆಕೆಗೆ ನೀಡಿದ್ದನು. ತಂಪು ಪಾನೀಯ ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದಾಗ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಯುವತಿಗೆ ಪ್ರಜ್ಞೆ ಬಂದಾಗ ಆಕೆಯ ಮೇಲೆ ಅತ್ಯಾಚಾರವಾದ ವಿಷಯ ಬೆಳಕಿಗೆ ಬಂದಿದೆ. ಆದಾದ ಬಳಿಕ ಆರೋಪಿ ಯುವತಿಯನ್ನು ಸಮಾಧಾನ ಮಾಡಿ ಆಕೆಯನ್ನು ಬೆಂಗಳೂರಿಗೆ ವಾಪಸ್ ಕಳುಹಿಸಿದ್ದನು. ಈ ಘಟನೆಯನ್ನು ನಟಿ ಯಾರ ಬಳಿಯೂ ಹೇಳದೇ ಸುಮ್ಮನಾಗಿದ್ದಳು ಎನ್ನಲಾಗಿದೆ.

    ಗೋವಾ, ಮುಂಬೈನಲ್ಲಿ ಮತ್ತೆ ರೇಪ್:
    ಈ ಘಟನೆ ನಡೆದ ನಂತರ 2014ರಲ್ಲಿ ಆರೋಪಿ ಮತ್ತೆ ಯುವತಿಗೆ ಕರೆ ಮಾಡಿ ಗೋವಾಗೆ ಬರುವಂತೆ ಹೇಳಿದ್ದಾನೆ. ಆದರೆ ಯುವತಿ ಇದಕ್ಕೆ ನಿರಾಕರಿಸಿದ್ದಳು. ಯುವತಿ ನಿರಾಕರಿಸಿದಾಗ ಆರೋಪಿ ನನ್ನ ಬಳಿ ನಿನ್ನ ನಗ್ನ ವಿಡಿಯೋಗಳಿವೆ. ಅದನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ವಿಡಿಯೋ ವೈರಲ್ ಆಗುತ್ತೆ ಎಂಬ ಭಯದಿಂದ ಯುವತಿ ಗೋವಾಗೆ ತೆರಳಿದ್ದಳು. ಈ ವೇಳೆ ಆರೋಪಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದನು. ಬಳಿಕ ಮುಂಬೈನಲ್ಲೂ ಆರು ಬಾರಿ ಆರೋಪಿ ನಟಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
    ನಿರ್ಮಾಪಕ ಆಗಾಗ ನಟಿಯ ಮನೆಗೆ ಬಂದು ಹೋಗುತ್ತಿದ್ದನು. ಈ ವೇಳೆ ಆತ ನಟಿಗೆ ಪ್ರತ್ಯೇಕ ಮನೆ ಮಾಡುವಂತೆ ತಿಳಿಸಿದ್ದನು. ನಟಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಬಳಿಕ ತನ್ನನ್ನು ಮದುವೆ ಆಗುವಂತೆ ನಟಿ ನಿರ್ಮಾಪಕನ ಬಳಿ ಕೇಳಿಕೊಂಡಿದ್ದು, ಆರೋಪಿ ಕೂಡ ಇದಕ್ಕೆ ಒಪ್ಪಿಕೊಂಡಿದ್ದನು. ಮದುವೆಗೂ ಮೊದಲು ಆತನ ಹಿನ್ನೆಲೆ ಪರಿಶೀಲಿಸಿದಾಗ ಆರೋಪಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವ ವಿಷಯ ಬೆಳಕಿಗೆ ಬಂದಿದೆ. ನಟಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಸುಪಾರಿ ಕೊಟ್ಟು ಆಕೆಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದನು.

    ಈ ಘಟನೆ ಬಗ್ಗೆ ತಿಳಿದ ಆರೋಪಿ ಪತ್ನಿ ನಟಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಹೈದರಾಬಾದ್‍ಗೆ ಕರೆಸಿಕೊಂಡಿದ್ದಳು. ಈ ವೇಳೆ ನಟಿಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಳು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

  • ಸಿಗರೇಟ್ ಸೇದೋದಂತೆ, ಲಿಪ್‍ಕಿಸ್ ಅಂತೆ – ರಚಿತಾ ವಿರುದ್ಧ ಹುಚ್ಚ ವೆಂಕಟ್ ಫೈರ್

    ಸಿಗರೇಟ್ ಸೇದೋದಂತೆ, ಲಿಪ್‍ಕಿಸ್ ಅಂತೆ – ರಚಿತಾ ವಿರುದ್ಧ ಹುಚ್ಚ ವೆಂಕಟ್ ಫೈರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ವಿರುದ್ಧ ಫೈರಿಂಗ್ ಸ್ಟಾರ್ ನಟ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ.

    ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಟ್ರೈಲರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಈ ಟ್ರೈಲರ್ ವಿಚಾರವಾಗಿ ಮಾತನಾಡಿರುವ ಹುಚ್ಚ ವೆಂಕಟ್ ರಚಿತಾ ರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ರೈಲರ್‍ನಲ್ಲಿ ನಾಯಕ ರಾನಾ ಜೊತೆಗೆ ರಚಿತಾ ರಾಮ್ ಲಿಪ್‍ಲಾಕ್ ಹಾಗೂ ಸಿಗರೇಟ್ ಸೇದುವ ದೃಶ್ಯ ನೋಡಿದ ವೆಂಕಟ್ ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ನಿರ್ದೇಶಕ ಪ್ರೇಮ್ ಅವರಿಗೆ ಒಂದಿಷ್ಟು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

     ವೆಂಕಟ್ ಹೇಳಿದ್ದೇನು?
    ನನ್ ಮಗಂದ್ ಡೈಲಾಗ್… ಇದು ರಚಿತಾ ರಾಮ್ ಅವರಿಗೆ ಹೇಳುತ್ತಿರೋದು. ಯಾಕ್ರೀ.. ಯಾಕ್ರೀ.. ಈ ಥರಹದ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡ್ತೀರಾ? ನೀವು ಮಾಡಿರುವುದು ಏನು? ಸಿಗರೇಟ್ ಸೇದುವುದಂತೆ, ಲಿಪ್‍ಕಿಸ್ ಅಂತೆ… ಇದರಿಂದ ಏನಾಗುತ್ತೆ? ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡೋಕಾಗುತ್ತಾ? ಹೆಣ್ಣು ಮಕ್ಕಳಿಗೆ ಮುಜುಗರ ಆಗುವುದಿಲ್ಲವಾ? ಡೈರೆಕ್ಟರ್ ಕೊಟ್ರೂ ಅದಕ್ಕೆ ಮಾಡಿದ್ವಿ ಎಂದು ಎಲ್ಲವನ್ನೂ ಡೈರೆಕ್ಟರ್ ಮೇಲೆ ಹಾಕ್ತೀರಾ. ನಿಮಗೆ ಇಷ್ಟವಿಲ್ಲ ಅಂದರೆ ಡೈರೆಕ್ಟರ್ ಬಲವಂತ ಮಾಡಲು ಸಾಧ್ಯವಿಲ್ಲ. ಯಾಕ್ ಈ ಥರಾ ಮಾಡ್ತೀರಾ? ಇದನ್ನೂ ಓದಿ: “ಹೆಣ್ಣು ಮಕ್ಳು ಬಾರ್‌ಗೆ ಹೋಗ್ಬಾರ್ದಾ”: ರಚಿತಾ ರಾಮ್

    ಕಳೆದ ಸಿನಿಮಾದಲ್ಲೂ (ಐ ಲವ್ ಯೂ) ಹೀಗೆ ಮಾಡಿದ್ರಿ. ಈ ಸಿನಿಮಾದಲ್ಲೂ ಮಾಡಿದ್ದೀರಾ. ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಬೇರೆ ದಾರಿ ಇಲ್ವಾ? ನಿಮಗೆ ಪ್ರತಿಭೆ ಇದ್ದರೆ ಬೇರೆ ಕಡೆಗೆ ತೋರಿಸಿ. ಹೀಗೆ ಮಾಡೋದನ್ನು ಪ್ರತಿಭೆ ಅಂತರಾ? ನನ್ ಮಗಂದ್ ತೂ….

    ಇಂತ ಸೀನ್‍ಗಳಿಂದ ಎಷ್ಟೋ ಜನ ಹಾಳಾಗುತ್ತಾರೆ ಅಂತ ನಿಮಗೆ ಗೊತ್ತಾ? ಒಂದು ಗಂಡಸು ಡ್ರಿಂಕ್ಸ್ ಮಾಡಿ ಸಿಗರೇಟ್ ಸೇದಿದ್ರೇನೆ ತಪ್ಪು. ಅಂತಹದ್ರಲ್ಲಿ ನೀವು ಸಿಗರೇಟ್ ಸೇದೋದು, ಲಿಪ್ ಕಿಸ್ ಮಾಡೋದು ಅಂದ್ರೆ ಏನ್ ಅರ್ಥ? ಇಲ್ಯಾರೂ ಕೇಳೋರು ಇಲ್ವಾ? ಇದರಿಂದ ನಿಮ್ಮ ಮನೆಯಲ್ಲಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನೋವು ಅನುಭವಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ.

    ಈ ಹಿಂದೆ ಕನ್ನಡ ಇಂಡಸ್ಟ್ರಿ ಅಂದರೆ ಹೇಗಿತ್ತು? ಕನ್ನಡ ಇಂಸ್ಟ್ರಿ ಅಂದ್ರೆ ಒಂದೇ ಒಂದು ಅಶ್ಲೀಲ ಇಲ್ಲ ಎನ್ನುವಂತಿತ್ತು. ಇವತ್ತು ಏನೆಲ್ಲಾ ಆಗಿದೆ ನೋಡಿ. ಪ್ರೇಮ್ ನಿನಗೆ ಇದು ಬೇಕಿತ್ತಾ? ಈ ರೀತಿಯ ಶಾಟ್ ಇಡೋದು ಬೇಕಿತ್ತಾ? ಇದ್ರಿಂದ ನೀನು ಜನರಿಗೆ ತೋರಿಸೋದಾದ್ರೂ ಏನು? ಆ ದೃಶ್ಯವನ್ನು ತೆಗೆದು ಹಾಕು.

    ರಚಿತಾ ರಾಮ್ ಅವ್ರೆ ನಾಳೆ ನೀವು ಮದ್ವೆ ಆಗ್ಬೇಕು. ನಿಮ್ಮ ಗಂಡ ಇದನ್ನ ನೋಡಬೇಕು. ನೋಡಿ ನಿಮಗೇನ್ ಅಂತಾನೆ. ಬೇಶ್ ಎನ್ನುತ್ತಾನಾ? ಚಿಕ್ಕ ಕಾರಣ ಸಿಕ್ರೆ ಸಾಕು ಡಿವೋರ್ಸ್ ಕೊಡ್ತಾರೆ. ಅಂಥ್ರದಲ್ಲಿ ನೋಡಿ ನೀವು ಏನ್ ಮಾಡ್ತಾ ಇದ್ದೀರಾ? ಸಿನಿಮಾ ರಂಗವೇ ನಿಮಗೆ ಕೊನೆಯಲ್ಲ. ನೀವು ಮದ್ವೆ ಆಗ್ಬೇಕು, ತಾಯಿ ಆಗಬೇಕು ನೆನಪಿರಲಿ.

    ರಚಿತಾ ರಾಮ್ ಅವ್ರ ತಂದೆ-ತಾಯಿಗೂ ನನ್ನದೊಂದು ವಿನಂತಿ. ಇನ್ಮೇಲೆ ನಿಮ್ಮ ಮಗಳಿಗೆ ನೀವು ಬುದ್ಧಿ ಹೇಳಿ. ನಾನು ಎಲ್ಲ ರೀತಿ ಹೇಳಿ ಮುಗಿಸಿದ್ದೇನೆ. ಲಿಪ್‍ಕಿಸ್ ಸೀನ್‍ಗಳನ್ನು ನಿಮಗೆ ನೋಡೋಕೆ ಆಗುತ್ತಾ? ಈ ವಿಚಾರದಲ್ಲಿ ನಿಮ್ಮನ್ನ ಎಳೆದಿದ್ದಕ್ಕೆ ತಪ್ಪು ತಿಳಿಯಬೇಡಿ.

    ಸಿನಿಮಾದಿಂದ ಲಿಪ್‍ಲಾಕ್, ಸಿಗರೇಟ್ ಸೇದುವ ಸೀನ್ ತೆಗೆದುಹಾಕಬೇಕು. ಕನ್ನಡ ಇಂಡಸ್ಟ್ರಿ ಇಷ್ಟು ಕೆಟ್ಟ ಮಟ್ಟಕ್ಕೆ ಇಳಿಯುವುದು ನನಗೆ ಇಷ್ಟವಿಲ್ಲ. ಇಲ್ಲಿ ಕಲೆಗೆ ಬೆಲೆ ಕೊಡಲಾಗುತ್ತದೆ. ಹೆಣ್ಣು ಮಕ್ಕಳು ಡ್ರಿಂಕ್ಸ್ ಮಾಡೋದು, ಪಾರ್ಟಿ ಮಾಡೋದು ಸಿರಿಯಲ್‍ಗಳಲ್ಲೂ ಬಂದಿದೆ. ಈ ಬಗ್ಗೆ ಯಾರೂ ಯಾಕೆ ಹೋರಾಟ ಮಾಡುತ್ತಿಲ್ಲ?

    ಆ ಬಂದು ಸೀನ್ ತೆಗೆದು ಹಾಕಿದ್ರೆ ಸಿನಿಮಾ ಓಡಲ್ವಾ? ಸಿನಿಮಾದ ಹೀರೋಗೆ ಅಣ್ಣನಾಗಿ ಹೇಳುತ್ತಿದ್ದೇನೆ, ನೀನು ಫಸ್ಟ್ ಟೈಮ್ ನಾಯಕನಾಗಿ ಕನ್ನಡ ಇಂಡಸ್ಟ್ರಿ ಬರುತ್ತಿದ್ದಿಯಾ. ಉತ್ತಮ ಸಿನಿಮಾದೊಂದಿಗೆ ಕಾಲಿಡು. ನಾನು ಮಾಡುವ ಸಿನಿಮಾದಲ್ಲಿ ಐಟಂ ಸಾಂಗ್ ಹಾಕ್ತಾರೆ ಎನ್ನುವ ಭಯದಿಂದ ಅನೇಕರು ನನ್ನ ಕೈಬಿಟ್ಟಿದ್ದಾರೆ. ಯಾಕಂದ್ರೆ ನಾನು ಸಿನಿಮಾ ಕಥೆಯನ್ನು ಸಂಪೂರ್ಣವಾಗಿ ಓದಿ ಓಕೆ ಎನ್ನುತ್ತೇನೆ. ಕೆಟ್ಟ ಸೀನ್ ಇದ್ರೆ ಸಿನಿಮಾ ಬೇಡ ರಿಜೆಕ್ಟ್ ಮಾಡ್ತೀನಿ.

    ರಚಿತಾ ರಾಮ್ ಅವ್ರೆ ಎಷ್ಟೋ ನಟಿಯರ ಜೀವನ ಹಾಳಾಗಿದೆ. ನೀವು ಅರ್ಥ ಮಾಡಿಕೊಂಡು ಪಾತ್ರ ನಿರ್ವಹಿಸಿ.

  • ಹಾಟಿ ಜೊತೆಗೆ ಮೂವೀ ನೋಡ್ದೆ: ವಿರಾಟ್

    ಹಾಟಿ ಜೊತೆಗೆ ಮೂವೀ ನೋಡ್ದೆ: ವಿರಾಟ್

    ನವದೆಹಲಿ: ಬಾಂಗ್ಲಾದೇಶದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲವು ಸಾಧಿಸಿದ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್‍ಗೆ ಜಾರಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಇರುವ ಫೋಟೋ ಹಂಚಿಕೊಂಡು, ನಿನ್ನೆ ರಾತ್ರಿ ಈ ಹಾಟಿ ಜೊತೆಗೆ ಮೂವೀಗೆ ಹೋಗಿದ್ದೆ ಎಂದು ಬರೆದುಕೊಂಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿ ವೇಳೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಜಾಲಿ ಟ್ರಿಪ್ ಹಾಗೂ ಟ್ರೆಕ್ಕಿಂಗ್ ಕೈಗೊಂಡಿದ್ದರು. ಬಳಿಕ ಇಂದೋರ್‍ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ವಿರಾಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿಸಿದ್ದರು. ಆದರೆ ಪಿಂಕ್ ಬಾಲ್ ಟೆಸ್ಟ್‍ನಲ್ಲಿ ಬಾಂಗ್ಲಾ ಬೌಲರ್ ಗಳನ್ನು ಭರ್ಜರಿ ಕಾಡಿ, ತಂಡದ ಮೊತ್ತವನ್ನು ಏರಿಸಿದರು. ಈ ವೇಳೆ ಕೊಹ್ಲಿ 136 ರನ್ ಗಳಿಸಿ ಔಟಾಗಿದ್ದರು.

    ವಿರಾಟ್ ಹೆಚ್ಚು ಟೆಸ್ಟ್ ಗೆದ್ದ ಐದನೇ ನಾಯಕ:
    ಆಸ್ಟ್ರೇಲಿಯಾದ ಆಲನ್ ಬಾರ್ಡರ್ ಅವರನ್ನು ಹಿಂದಿಕ್ಕಿ ಕೊಹ್ಲಿ ವಿಶ್ವದ ಐದನೇ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತವು 53 ಟೆಸ್ಟ್ ಪಂದ್ಯಗಳಲ್ಲಿ 33 ಪಂದ್ಯಗಳನ್ನು ಗೆದ್ದಿದೆ. ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 93 ಟೆಸ್ಟ್ ಪಂದ್ಯಗಳಲ್ಲಿ 32 ಗೆದ್ದಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 53 ಟೆಸ್ಟ್ ಗೆದ್ದು, ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ 48 ಪಂದ್ಯ ಜಯಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೀವ್ ವಾ ಇದ್ದಾರೆ. ಅವರ ನಾಯಕತ್ವದಲ್ಲಿ 41 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್‍ನ ಕ್ಲೈವ್ ಲಾಯ್ಡ್ ನಾಯಕನಾಗಿ 36 ಪಂದ್ಯಗಳನ್ನು ಗೆದ್ದಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಈವರೆಗಿನ ಎಲ್ಲಾ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 116 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ 60 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

  • ಟಿಕ್ ಟಾಕ್‍ನೊಂದಿಗೆ ಮತ್ತೆ ಅರ್ಜುನಾಗಮನ!

    ಟಿಕ್ ಟಾಕ್‍ನೊಂದಿಗೆ ಮತ್ತೆ ಅರ್ಜುನಾಗಮನ!

    ಹೆಚ್ಚೂಕಮ್ಮಿ ಒಂದು ದಶಕದ ಹಿಂದೆ ಮೆಂಟಲ್ ಮಂಜ ಅಂತೊಂದು ಸಿನಿಮಾ ತೆರೆ ಕಂಡಿತ್ತು. ಅದರಲ್ಲಿ ನಾಯಕನಾಗಿ ನಟಿಸಿದ್ದದ್ದು ಅರ್ಜುನ್. ಈ ಸಿನಿಮಾದಿಂದಲೇ ಒಂದಷ್ಟು ಸುದ್ದಿ ಮಾಡಿದ್ದ ಅರ್ಜುನ್ ಆ ನಂತರದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅವ್ಯಾವುವೂ ಹೇಳಿಕೊಳ್ಳುವಷ್ಟು ಸುದ್ದಿ ಮಾಡಿರಲಿಲ್ಲ. ಆ ನಂತರದಲ್ಲಿ ಅರ್ಜುನ್ ಸಂಪೂರ್ಣವಾಗಿ ಚಿತ್ರರಂಗದಿಂದ ದೂರಾಗಿ ಬಿಟ್ಟಿದ್ದರು. ಹಾಗೆ ಸುದೀರ್ಘಾವಧಿಯ ಕಾಲ ಚಿತ್ರರಂಗದಿಂದ ದೂರವುಳಿದಿದ್ದ ಅರ್ಜುನ್ ಮತ್ತೆ ನಾಯಕನಾಗಿ ಮರಳಿದ್ದಾರೆ. ಹೊಸ ಬಗೆಯ ಕಥೆ ಮತ್ತು ಲುಕ್‍ನೊಂದಿಗೆ ಅವರು ಟಿಕ್‍ಟಾಕ್ ಗಣೇಶ ಎಂಬ ಚಿತ್ರದ ಮೂಲಕ ಮತ್ತೆ ಆಗಮಿಸಿದ್ದಾರೆ.

    ಅರ್ಜುನ್ ಯಾಕೆ ಇಷ್ಟೊಂದು ಕಾಲಾವಧಿಯವರೆಗೂ ಮರೆಯಾಗಿದ್ದರೆಂಬುದಕ್ಕೆ ಉತ್ತರವಿಲ್ಲ. ಆದರೆ ದಶಕದ ಹಿಂದೆಯೇ ಆ ಕಾಲಕ್ಕೆ ಒಂದಷ್ಟು ಸೌಂಡು ಮಾಡಿದ್ದವರೆಂಬ ಕಾರಣದಿಂದ ಅರ್ಜುನ್ ಎಂಟ್ರಿ ಒಂದಷ್ಟು ನಿರೀಕ್ಷೆ ಮೂಡಿಸಿದೆ. ಟಕ್ ಟಾಕ್ ಗಣೇಶ ಎಂಬ ಟೈಟಲ್ಲೇ ಇದು ಯುವ ಸಮುದಾಯದ ಕಥೆ ಹೊಂದಿರುವ ಸಿನಿಮಾ ಅನ್ನೋದನ್ನೂ ಸಾಬೀತುಗೊಳಿಸುತ್ತದೆ. ಇದುವ ಯಾವ ಥರದ ಸಿನಿಮಾ, ಅದರಲ್ಲಿ ಅರ್ಜುನ್ ಎಂಥಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಅನ್ನೋದಕ್ಕೆಲ್ಲ ಚಿತ್ರತಂಡದ ಕಡೆಯಿಂದ ಒಂದಷ್ಟು ಮಾಹಿತಿಗಳು ಸಿಗುತ್ತವೆ. ಅವೆಲ್ಲವೂ ಇಂಟರೆಸ್ಟಿಂಗ್ ಆಗಿವೆ.

    ಮೆಂಟಲ್ ಮಂಜ ಖ್ಯಾತಿಯ ಅರ್ಜುನ್ ಈ ಬಾರಿ ಸಂಪೂರ್ಣವಾಗಿ ಮನೋರಂಜನೆ ಕೊಡುತ್ತಲೇ ಮತ್ತೆ ಚಿತ್ರರಂಗಕ್ಕೆ ಆಗಮಿಸುವ, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉಮೇದು ಹೊಂದಿದ್ದಾರೆ. ಈ ಸಿನಿಮಾ ಕಾಮಿಡಿ ಜಾನರಿನದ್ದು. ವಿ3 ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಇದು ನಿರ್ಮಾಣಗೊಳ್ಳಲಿದೆಯಂತೆ. ಪ್ರೇಕ್ಷಕರನ್ನು ಸಂಪೂರ್ಣವಾಗಿ ಖುಷಿಗೊಳಿಸುವಂಥಾ ಎಲ್ಲ ಅಂಶಗಳಿರೋ ಈ ಸಿನಿಮಾದಲ್ಲಿ ಶುಭ ರಕ್ಷಾ ಅರ್ಜುನ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಇದರಲ್ಲಿ ಸದ್ಯ ಪ್ರಸಿದ್ಧಿ ಪಡೆದಿರೋ ಒಂದಷ್ಟು ಯುವ ಟಿಕ್‍ಟಾಕ್ ಸ್ಟಾರ್‌ಗಳಿಗೂ ನಟಿಸೋ ಅವಕಾಶ ಕಲ್ಪಿಸಲಾಗಿದೆಯಂತೆ. ಸದ್ಯ ಇದರ ಚಿತ್ರೀಕರಣ ಶುರುವಾಗಿದೆ.

  • ನಾನು ಪ್ರೀತಿಸುತ್ತಿರೋದು ನಿಜ: ರಶ್ಮಿಕಾ ಮಂದಣ್ಣ

    ನಾನು ಪ್ರೀತಿಸುತ್ತಿರೋದು ನಿಜ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ನಟನನ್ನು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಈ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿ ನಾನು ಪ್ರೀತಿಸುತ್ತಿರುವುದು ನಿಜ ಎಂದು ಹೇಳಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ರಶ್ಮಿಕಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ತೆಲುಗು ನಟನನ್ನು ಪ್ರೀತಿಸುತ್ತಿರುವ ಗಾಸಿಪ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

    ರಶ್ಮಿಕಾ, ಹೌದು. ನಾನು ಪ್ರೀತಿಸುತ್ತಿರುವುದು ನಿಜ. ಆದರೆ ನಾನು ನನ್ನ ಸಿನಿಮಾವನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನನಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಈಗ ನನಗೆ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ನಿಜಕ್ಕೂ ಖುಷಿ ಇದೆ. ನಾನು ಚಿತ್ರಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದೇ ವೇಳೆ ರಶ್ಮಿಕಾ ಮೇಕಪ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಶೂಟಿಂಗ್ ಇದ್ದಾಗ ಮಾತ್ರ ಮೇಕಪ್ ಮಾಡಿಕೊಳ್ಳುತ್ತೀನಿ. ನಿಜ ಜೀವನದಲ್ಲಿ ನಾನು ಮೇಕಪ್ ಇಲ್ಲದೇ ಇರುತ್ತೇನೆ ಎಂದು ತಿಳಿಸಿದ್ದಾರೆ.

    ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರರಂಗದಲ್ಲೂ ನಟಿಸುತ್ತಿದ್ದಾರೆ. ಸದ್ಯ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರಿಲೇರು ನಿಕ್ಕೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿತಿನ್ ಅಭಿನಯದ ‘ಭೀಷ್ಮಾ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

  • ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಬೆಂಗಳೂರು: ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ‘ಶಿವಾರ್ಜುನ’ ಚಿತ್ರದ ಫಸ್ಟ್ ಲುಕ್ ಟೀಸರ್ ಧ್ರುವಸರ್ಜಾ ಬಿಡುಗಡೆ ಮಾಡಿದರು.

    ಇತ್ತೀಚೆಗೆ ನಡೆದ ನಾಯಕ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ದಿನ ಈ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದೆ. ನಟಿ ತಾರಾ ವೇಣು, ಮೇಘನಾ ರಾಜ್, ನಿರ್ಮಾಪಕ ಉದಯ್ ಕೆ ಮೆಹ್ತಾ, ಚಿತ್ರತಂಡ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಈ ಫಸ್ಟ್ ಲುಕ್ ಟೀಸರ್ ಲೋಕಾರ್ಪಣೆಯಾಗಿದೆ.


    ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಮಾತಿನ ಜೋಡಣೆ ಮುಕ್ತಾಯವಾಗಿದೆ. ಹೆಚ್.ಸಿ.ವೇಣು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಚೇತನ್ ಕುಮಾರ್ (ಬಹದ್ದೂರ್) ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

    ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.

  • ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ಮುಂಬೈ: ಇಂಟರ್ ನೆಟ್ ಸ್ಟಾರ್ ರಾನು ಮೊಂಡಲ್ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ್ದೇಕೆ ಎಂಬುದನ್ನು ಗಾಯಕ ಹಿಮೇಶ್ ರೇಶ್ಮಿಯಾ ರಿವೀಲ್ ಮಾಡಿದ್ದಾರೆ.

    ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಔರ್ ಹೀರ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವಾಗ ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಅವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದು ಏಕೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

    ನನ್ನ ಚಿತ್ರದ 5-6 ಹಾಡುಗಳು ರೆಕಾರ್ಡ್ ಆಗಿತ್ತು. ಉಳಿದ ಹಾಡುಗಳಿಗೆ ಕೆಲವು ಅಂಶಗಳನ್ನು ಹುಡುಕುತ್ತಿದ್ದೆ. ನನ್ನ ಚಿತ್ರಕ್ಕಾಗಿ ನಾನು ಎಂತಹ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದರೆ ಆ ಕಾಲದಲ್ಲಿ ಲತಾ ಅವರು ಹೇಗೆ ಹಾಡುತ್ತಿದ್ದರೋ ಈ ಕಾಲದಲ್ಲಿ ಅವರ ಧ್ವನಿಯಂತೆ ಇರುವ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದು ಹೇಳಿದ್ದಾರೆ.

    ರಾನು ಅವರು ರಿಯಾಲಿಟಿ ಶೋಗೆ ಬಂದಾಗ ಇವರು ನನ್ನ ಚಿತ್ರದಲ್ಲಿ ಹಾಡಲು ಪರ್ಫೆಕ್ಟ್ ಎಂದು ನನಗೆ ಅನಿಸಿತ್ತು. ನಾನು ಒಂದು ಕನೆಕ್ಷನ್ ಹುಡುಕುತ್ತಿದೆ. ಅದು ನನಗೆ ರಾನು ಅವರ ಧ್ವನಿಯಲ್ಲಿ ಸಿಕ್ಕಿತ್ತು. ಅವರು ರಿಯಾಲಿಟಿ ಶೋನಲ್ಲಿ ಕೇವಲ 2 ನಿಮಿಷ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಹಾಡನ್ನು ಹಾಡಿದ್ದರು. ಅಂದು ಅವರು ಆ 2 ನಿಮಿಷದಲ್ಲಿ ಅಷ್ಟು ಚೆನ್ನಾಗಿ ಹಾಡಿರಲಿಲ್ಲ ಎಂದರೆ ಇಂದು ಇದೆಲ್ಲಾ ಆಗಲು ಸಾಧ್ಯವಿರುತ್ತಿರಲಿಲ್ಲ ಎಂದರು.

    ರಾನು ಅವರ ಹಾಡು ಕೇಳಿದ ಮರುದಿನವೇ ನಾನು ಅವರಿಗೆ ಕರೆ ಮಾಡಿ ಸಿನಿಮಾದಲ್ಲಿ ಹಾಡುವಂತೆ ಹೇಳಿದೆ. ಅವರು ನನ್ನ ಮಾತು ಕೇಳಿ ಹಾಡು ಕೂಡ ಹಾಡಿದ್ದರು. ನಂತರ ರಾನು ಅವರು ಹಾಡಿದ ಹಾಡನ್ನು ನಾನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಅಷ್ಟೇ. ನಂತರ ನಾನು ಏನೂ ಮಾಡಿಲ್ಲ. ಜನರೇ ಎಲ್ಲವನ್ನು ಮಾಡಿದ್ದಾರೆ. ‘ತೇರಿ ಮೇರಿ ಕಹಾನಿ’ ಈಗ ಗ್ಲೋಬಲ್ ನಂಬರ್ 1 ಹಾಡು ಆಗಿದೆ ಎಂದು ಹಿಮೇಶ್ ತಿಳಿಸಿದ್ದಾರೆ.