Tag: Movement

  • ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

    ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಫಿಟ್ ಇಂಡಿಯಾ ಅಭಿಯಾನ ಚಾಲನೆ ನೀಡಿ ರಾಷ್ಟ್ರದ ಜನರು ಸದೃಢರಾಗುವಂತೆ ಕೋರಿಕೊಂಡಿದ್ದಾರೆ.

    ಇಂದು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲುಗಳನ್ನು ಬಳಸಿ ಫಿಟ್ ಆಗಿರಬೇಕು ಎಂದು ಕರೆಕೊಟ್ಟರು.

    ಸಚಿವರು, ಶಾಲಾ ಮಕ್ಕಳು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದು ಬೋರ್ಡ್ ರೂಮ್ ಆಗಿರಲಿ ಬಾಲಿವುಡ್ ಆಗಿರಲಿ ನಾವು ಫಿಟ್ ಆಗಿರಬೇಕು. ನಮಗೆ ಫಿಟ್ ಆದ ದೇಹವಿದ್ದರೆ. ಮನಸ್ಸು ನಿಯಂತ್ರಣದಲ್ಲಿರುತ್ತದೆ. ಈ ಫಿಟ್ ಇಂಡಿಯಾ ಚಾಲೆಂಜ್ ಅನ್ನು ಎಲ್ಲರೂ ಸ್ವೀಕರಿಸಬೇಕು. ‘ಸ್ವಚ್ಛ ಭಾರತ್’ ಅಭಿಯಾನದಂತೆ ಇದನ್ನು ಎಲ್ಲರೂ ಸ್ವೀಕಾರ ಮಾಡಿ ಎಂದು ಜನರಲ್ಲಿ ಮೋದಿ ಕೋರಿಕೊಂಡರು.

    ನಾವು ಫಿಟ್‍ನೆಸ್ ಅನ್ನು ಜೀವನದ ಮಂತ್ರವಾಗಿ ಮಾಡಿಕೊಳ್ಳಬೇಕು. ನಾವು ಆಹಾರ ಪದ್ಧತಿ ಮತ್ತು ದೇಹದ ಫಿಟ್‍ನೆಸ್ ಬಗ್ಗೆ ಮಾತನಾಡುತ್ತೇವೆ ಆದರೆ ಊಟದ ಟೇಬಲ್ ಬಳಿ ಬಂದಾಗ ನಾವು ಅದನ್ನು ಪಾಲಿಸುವುದಿಲ್ಲ. ಈಗಿನ ನಮ್ಮ ಯಂತ್ರಚಾಲಿತ ಜೀವನ ಶೈಲಿಗೆ ನಮ್ಮ ತಂತ್ರಜ್ಞಾನವು ಬಹುದೊಡ್ಡ ಕಾರಣ. ಕೆಲವು ದಶಕಗಳ ಹಿಂದೆ, ಒಬ್ಬ ಸಾಮಾನ್ಯ ವ್ಯಕ್ತಿಯು ದಿನದಲ್ಲಿ 8-10 ಕಿ.ಮೀ ನಡೆಯುತ್ತಿದ್ದ, ಸೈಕ್ಲಿಂಗ್ ಮಾಡುತ್ತಿದ್ದ ಅಥವಾ ಓಡುತ್ತಿದ್ದನು. ಆದರೆ ಈಗ ತಂತ್ರಜ್ಞಾನದಿಂದ ಈ ಎಲ್ಲಾ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ನಾವು ಈಗ ಕಡಿಮೆ ನಡೆಯುತ್ತೇವೆ ಎಂದು ಮೋದಿ ಹೇಳಿದರು.

    ತಮ್ಮ ದೈನಂದಿನ ದಿನಚರಿಯಲ್ಲಿ ದಿನ ಯೋಗ ಮಾಡುವ ಮೋದಿ ಅವರು ಜನರು ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾವು ಹಿಂದಿನ ಕಾಲದಲ್ಲಿ 60 ವರ್ಷ ಆದ ನಂತರ ಹೃದಯಾಘಾತವಾಗುತ್ತದೆ ಎಂದು ಕೇಳಿದ್ದವು. ಆದರೆ ಈಗ 30, 40 ವರ್ಷಕ್ಕೆ ಜನರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ನಮ್ಮ ಜೀವನದಲ್ಲಿ ನಾವು ಮಾಡಿಕೊಂಡ ಸಣ್ಣ ಬದಲಾವಣೆ ನಮ್ಮ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

    ಈ ಫಿಟ್ ಇಂಡಿಯಾ ಚಳುವಳಿಯು ರಾಷ್ಟ್ರೀಯ ಕ್ರೀಡಾದಿನವನ್ನು ಸೂಚಿಸುತ್ತದೆ. ರಾಷ್ಟ್ರದ ಜನರ ದೈನಂದಿನ ದಿನದಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

  • ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

    ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

    ಗದಗ: ಜಿಲ್ಲೆಯ ಸ್ವಚ್ಛತಾ ಯುವಸೇನೆ ತಂಡದ ಯುವಕರು ಪ್ರತಿ ರವಿವಾರ ಸ್ವಚ್ಛತಾ ಆಂದೋಲನಕ್ಕೆ ಮುಂದಾಗಿದ್ದಾರೆ.

    ಬೇರೆ ಬೇರೆ ಕಾಲೇಜಿನ ಸ್ನೇಹಿತರೆಲ್ಲ ಸೇರಿಕೊಂಡು ಈ ಒಂದು ಟೀಮ್ ಮಾಡಿಕೊಂಡಿದ್ದಾರೆ. ಗದಗ ಬೆಟಗೇರಿ ಅವಳಿ ನಗರದ ಸ್ವಚ್ಛ ಹಾಗೂ ಸೌಂದರ್ಯಕ್ಕಾಗಿ ಈ ಯುವಪಡೆ ಸುಂದರ ಕನಸು ಕಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ವಾರಗಳಿಂದ ನಗರದ ಪ್ರಮುಖ ಬೀದಿಗಳು, ಗಾರ್ಡ್‍ಗಳು ಮತ್ತು ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗುತ್ತಿದೆ.

    ಸುಮಾರು 30 ವಿದ್ಯಾರ್ಥಿಗಳು ನಿಸರ್ಗ ಯುವಪಡೆಯಲ್ಲಿ ಇದ್ದಾರೆ. ಪ್ರತಿ ರವಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸ್ವಚ್ಛತೆಯ ಶ್ರಮದಾನ ಮಾಡುತ್ತಿದ್ದಾರೆ. ಸಲಿಕೆ, ಬುಟ್ಟೆ, ಗುದ್ದಲಿ ಹಾಗೂ ಇತರೆ ಸಲಕರಣೆಗಳನ್ನು ಹಿಡಿದು ಕ್ಲೀನ್ ಮಾಡುವ ಮೂಲಕ ಕಸ ವಿಲೇವಾರಿ ಬಗ್ಗೆ ಸ್ಥಳೀಯರಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

    ಜನರು ಸ್ವಚ್ಛವಾಗಿ ಆರೋಗ್ಯವಾಗಿರಬೇಕು, ರೋಗರುಜಿನಗಳಿಂದ ದೂರವಿರಬೇಕು, ನಗರ ಸೌಂದರ್ಯ ಹೆಚ್ಚಿಸಬೇಕೆಂಬ ಉದ್ದೇಶ ನಮ್ಮದಾಗಿದೆ. ನಮ್ಮ ಜೊತೆ ಸ್ಥಳೀಯರು ಕೈಜೋಡಿಸಿ ಪ್ರೋತ್ಸಾಹಿಸಬೇಕು ಎಂದು ಸ್ವಚ್ಛತಾ ಯುವಪಡೆಯ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

  • ರೆಸಾರ್ಟ್ ರಾಜಕಾರಣ ವಿರುದ್ಧ ರೈತರಿಂದ ಛೀ.. ಥೂ.. ಚಳುವಳಿ

    ರೆಸಾರ್ಟ್ ರಾಜಕಾರಣ ವಿರುದ್ಧ ರೈತರಿಂದ ಛೀ.. ಥೂ.. ಚಳುವಳಿ

    ತುಮಕೂರು: ರಾಜ್ಯದ ಜನತೆಯ ಹಿತಾಸಕ್ತಿಯನ್ನು ಮರೆತು ಅಧಿಕಾರಕೋಸ್ಕರ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ರೈತರು ಛೀ…ಥೂ.. ಚಳುವಳಿ ಕೈಗೊಂಡಿದ್ದಾರೆ.

    ತುಮಕೂರು ಜಿಲ್ಲೆಯಾದ್ಯಂತ ರಾಜ್ಯ ರೈತ ಸಂಘದ ಕಾರ್ಯಕರ್ತರು ರೆಸಾರ್ಟ್ ರಾಜಕಾರಣ ಮಾಡುತಿರುವ ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಲೆ ಅಡಿಕೆಯ ಎಂಜಲನ್ನು ಉಗಿದು ಛೀ…ಥೂ.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಆನಂದ ಹುಲಿಕಟ್ಟೆ ನೇತೃತ್ವದಲ್ಲಿ ನೂರಾರು ಜನ ರೈತರು ಸೇರಿ. ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಂಜಲಿನ ಮಜ್ಜನ ಮಾಡಿಸಿ, ಚಪ್ಪಲಿ ಏಟು ಕೊಟ್ಟು ಪ್ರತಿಕೃತಿ ದಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಮರೆತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ತಂಗಿದ್ದಾರೆ. ಹೀಗಾಗಿ ಅವರ ಮನವೊಲಿಸುವ ಕಾರ್ಯವನ್ನು ಕೈಗೊಂಡು ದೋಸ್ತಿಗಳು ವಿಫಲರಾದರು. ಇತ್ತ ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಜೆಡಿಎಸ್ ನವರು ಕೂಡ ಉಳಿದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ನಂದಿಬೆಟ್ಟದ ಬಳಿಯಿರೋ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಸೇರಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆ.