Tag: mother

  • ತಾಯಿಯಿಂದ ಮೋದಿಗೆ ಜೈಕಾರ-ಮಗನಿಂದ ರಾಹುಲ್ ಪರ ಘೋಷಣೆ

    ತಾಯಿಯಿಂದ ಮೋದಿಗೆ ಜೈಕಾರ-ಮಗನಿಂದ ರಾಹುಲ್ ಪರ ಘೋಷಣೆ

    ಬಳ್ಳಾರಿ: ಚುನಾವಣಾ ಪ್ರಚಾರದ ವೇಳೆ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಮುಖಾಮುಖಿಯಾಗುವುದು ಸಾಮಾನ್ಯ. ಒಂದು ವೇಳೆ ಎರಡು ಪಕ್ಷಗಳ ನಾಯಕರು ಮತ್ತು ಬೆಂಬಲಿಗರು ಮುಖಾಮುಖಿಯಾದಾಗ ಘೋಷಣೆ, ಜೈಕಾರಗಳು ಮತ್ತಷ್ಟು ಜೋರಾಗುತ್ತದೆ. ಬಳ್ಳಾರಿಯ ಕಣದಲ್ಲಿ ತಾಯಿ ಮೋದಿ ಪರ ಪ್ರಚಾರ ಮಾಡಿದ್ರೆ, ಪುತ್ರ ರಾಹುಲ್ ಗಾಂಧಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

    ಹೊಸಪೇಟೆಯ ಗಣಿ ಉದ್ಯಮಿಯಾಗಿರುವ ರಾಣಿ ಸಂಯುಕ್ತಾ ಸಿಂಗ್ ಬಿಜೆಪಿ ಪಕ್ಷದಲ್ಲಿದ್ದಾರೆ. ರಾಣಿ ಅವರ ಸಹೋದರನಾಗಿರುವ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಶಾಸಕರಾಗಿದ್ರೆ, ಇನ್ನೊಂದೆಡೆ ಆನಂದ್ ಸಿಂಗ್ ಸೋದರಳಿಯ ಸಂದೀಪ್ ಸಿಂಗ್ ಮಾವನೊಂದಿಗೆ ಕಾಂಗ್ರೆಸ್ ನಲ್ಲೆ ಗುರುತಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹೀಗಾಗಿ ತಾಯಿ-ಮಗ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡು ಸದ್ಯ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

    ಹೊಸಪೇಟೆ ನಗರದಲ್ಲಿ ಪ್ರಚಾರ ನಡೆಸುವ ವೇಳೆ ತಾಯಿ- ಮಗ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬಿಜೆಪಿ ಬೆಂಬಲಿಗರು ಒಂದೆಡೆ ಚೌಕಿದಾರ ಮೋದಿಗೆ ಜೈ ಅಂದ್ರೆ ಕಾಂಗ್ರೆಸ್ ನಲ್ಲಿರುವ ಸಂದೀಪ್ ಸಿಂಗ್ ಹಾಗೂ ಅವರ ಬೆಂಬಲಿಗರು ಚೌಕಿದಾರ ಚೋರ ಹೈ ಎಂದು ಘೋಷಣೆ ಕೂಗುತ್ತಾ ಕೆಲ ಕಾಲ ಶಕ್ತಿ ಪ್ರದರ್ಶನ ನಡೆಸಿದರು.

  • ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

    ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

    ಲಂಡನ್: ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ 22ರ ಮಹಿಳೆಯೊಬ್ಬರು ತಮ್ಮ ಕಿರಿಯ ಸಹೋದರ-ಸಹೋದರಿಯನ್ನು ದತ್ತು ಪಡೆಯುವ ಮೂಲಕ ರಾತ್ರೋರಾತ್ರಿ ಏಳು ಮಕ್ಕಳ ತಾಯಿಯಾಗಿದ್ದಾರೆ.

    ಶ್ಯಾನ್ನೋನ್ ಎಲ್ಲಿಸ್ 2 ಮಕ್ಕಳ ತಾಯಿ. ಇವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಎಲ್ಲಿಸ್ ಅವರ 39 ವರ್ಷದ ತಾಯಿ ಶೆಲ್ಲಿ ಮೃತಪಟ್ಟಿದ್ದಾರೆ. ನಂತರ ಎಲ್ಲಿಸ್ ತಮ್ಮ ಐದು ಕಿರಿಯ ಸಹೋದರ ಮತ್ತು ಸಹೋದರಿಯರನ್ನು ದತ್ತು ತೆಗೆದುಕೊಂಡಿದ್ದಾರೆ. ಹೀಗಾಗಿ ಎಲ್ಲಿಸ್ ತಮ್ಮಿಬ್ಬರು ಮಕ್ಕಳು ಸೇರಿದಂತೆ ಈಗ ಏಳು ಮಕ್ಕಳ ತಾಯಿಯಾಗಿದ್ದಾರೆ.

    ವಿಶ್ವ ತಾಯಿಯಂದಿರ ದಿನ ಎಲ್ಲಿಸ್ ಅವರಿಗೆ ಅವರ ಮಕ್ಕಳು ಕೈಯಿಂದ ತಯಾರಿಸಿದ್ದ ಕಾರ್ಡುಗಳು, ಚಾಕ್ಲೇಟ್‍ಗಳು ಮತ್ತು ಹೂವುಗಳನ್ನು ನೀಡಿದರು. ಅಷ್ಟೇ ಅಲ್ಲದೇ ಪಾರ್ಕಿನ ಮರವೊಂದರ ಬಳಿ ಹೋಗಿ ತಮ್ಮ ತಾಯಿ ಶೆಲ್ಲಿ ಅವರಿಗೆ ಕುಟುಂಬದವರು ಒಟ್ಟಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಎಲ್ಲಿಸ್ ತಾಯಿ ಶೆಲ್ಲಿ ಬದುಕ್ಕಿದ್ದಾಗ ತಮ್ಮ ಎಲ್ಲ ಮಕ್ಕಳನ್ನು ಕರೆದುಕೊಂಡು ಪಾರ್ಕಿನಲ್ಲಿದ್ದ ಮರದ ಬಳಿ ಹೋಗುತ್ತಿದ್ದರು. ಅಲ್ಲಿ ಅವರು ಕುಟುಂಬದವರ ಜೊತೆ ಸಂತೋಷದಿಂದ ಇರುತ್ತಿದ್ದರು. ಹೀಗಾಗಿ ಅವರ ತಾಯಿಗೆ ಪ್ರಿಯವಾದ ಅದೇ ಮರದ ಬಳಿಯೇ ಅಸ್ಥಿ ವಿಸರ್ಜನೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ಮರದ ಬಳಿ ಮಕ್ಕಳು ಹೋಗಿ ಅಂತಿಮ ನಮನ ಸಲ್ಲಿಸಿದ್ದಾರೆ.

    ಎಲ್ಲಿಸ್ ತಾಯಿ ಶೆಲ್ಲಿ ಮೃತಪಟ್ಟ ನಂತರ ಅವರ ಸಹೋದರ-ಸಹೋದರಿಯರನ್ನು ದೂರ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಆಗ ಎಲ್ಲಿಸ್ ತಮ್ಮ ಪತಿ ಕೀರನ್ ಫರ್ಗ್ಯೂಸನ್ ಬಳಿ ಅವರನ್ನು ದತ್ತು ಪಡೆದುಕೊಳ್ಳವ ಬಗ್ಗೆ ಹೇಳಿದ್ದಾರೆ. ಆಗ ಪತಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಅವರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

    “ನಮ್ಮ ತಾಯಿ ಬಯಸಿದ್ದಂತೆ ನಮ್ಮ ಕುಟುಂಬ ತುಂಬಾ ದೊಡ್ಡದಾಗಿತ್ತು. ಜೊತೆಗೆ ಯಾವಾಗಲೂ ನಾವು ಸಂತಸದಿಂದ ಇದ್ದೆವು. ನಮಗೆ ತಂದೆ ಇಲ್ಲದಿದ್ದರು ನಮ್ಮ ತಾಯಿ ನಾವು ಕೇಳಿದ ಎಲ್ಲವನ್ನು ಕೊಡಿಸುತ್ತಿದ್ದರು. ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಎಲ್ಲಿಸ್ ಹೇಳಿದ್ದಾರೆ.

    ಜನವರಿ 2018ರಲ್ಲಿ ನಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಹಾಟ್ರ್ಲೆಪೂಲ್ ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ವೈದ್ಯರು ನಮ್ಮ ತಾಯಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರು ಬದುಕುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದರು. ಆಗ ನಮ್ಮ ತಾಯಿ ನನ್ನ ಕಡೆ ದುಃಖದಿಂದ ನೋಡಿದರು. ಈ ವೇಳೆ ನಾನು ಅಮ್ಮನಿಗೆ ನನ್ನ ಸಹೋದರ ಮತ್ತು ಸಹೋದರಿಯರನ್ನು ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿದ್ದೇನೆ. ಹೀಗಾಗಿ ನಾನು ಎಲ್ಲರಿಗೂ ಅಮ್ಮನಾಗಬೇಕೆಂದು ಬಯಸಿದ್ದೇನೆ ಎಂದು ಎಲ್ಲಿಸ್ ತಿಳಿಸಿದ್ದಾರೆ.

    2018 ಜನವರಿ 25 ರಂದು ಶೆಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಎಲ್ಲಿಸ್ ತಾನು ಕೊಟ್ಟ ಮಾತಿನಂತೆ ತನ್ನ ಕಿರಿಯ ಸಹೋದರ ಸಹೋದರಿಯರಿಗೆ ಕಾನೂನಿನ ಪ್ರಕಾರ ತಾಯಿಯಾಗಿದ್ದಾರೆ.

  • ರಮ್ಯಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು!

    ರಮ್ಯಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು!

    ಮಂಡ್ಯ: ನಟಿ, ಮಾಜಿ ಸಂಸದೆ ರಮ್ಯಾಗೆ ಮಂಡ್ಯ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ರಮ್ಯಾ 5 ಲಕ್ಷ ಮತಗಳನ್ನ ಪಡೆದು ಗೆದ್ದಿದ್ದರು. ಅಂಬರೀಶ್ ಕಾಂಗ್ರೆಸ್‍ಗೆ ದ್ರೋಹ ಮಾಡಿ ಜೆಡಿಎಸ್‍ನ್ನ ಗೆಲ್ಲಿಸಿದ್ರು. ಮಂಡ್ಯ ಋಣ ತೀರಿಸಲು ಕೆಲವರಿಗೆ ಅವಕಾಶವಿತ್ತು, ಋಣನೂ ತೀರಿಸಲಿಲ್ಲ, ಕೆಲಸನೂ ಮಾಡಿಲ್ಲ. ನಾವು ಕಾಂಗ್ರೆಸ್‍ನಲ್ಲಿದ್ದೇವೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ರು.

    ರಮ್ಯಾ ಅಥವಾ ನಾನು ಇಲ್ಲಿ ಸೋಲಿಸೋಕೆ ಏನೂ ಇಲ್ಲ. ನಮ್ಮ ಮಂಡ್ಯ ಮತದಾರರು ತುಂಬಾ ಬುದ್ಧಿವಂತರಿದ್ದಾರೆ. ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ದೇಶಕ್ಕೆ ರಮ್ಯಾ ಸೋತಿದ್ದಕ್ಕೆ ಕಾರಣ ಯಾರು, ಸೋಲಿಸಿದವರು ಯಾರು ಎಂದು ಗೊತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಂದ ಸರ್ವನಾಶ ಆಗಿದೆ. 7 ಶಾಸಕರು ಯಾರಿಂದ ಸೋತಿದ್ದರು. ಮಂಡ್ಯದಲ್ಲಿ ನಮ್ಮ 5 ಲಕ್ಷ ಮತದಾರರು ಯಾರಿಂದ ಅನಾಥರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಇಲ್ಲದಂತೆ ಮಾಡಿದ್ದು ಯಾರು ಎಂದು ಮಂಡ್ಯ ಜನತೆಗೆ ಗೊತ್ತಾಗಿದೆ. ಹೀಗಾಗಿ ನಾವೇನೂ ಹೇಳಕ್ಕಾಗಲ್ಲ. ಅವರೇ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ರು.

    ನಾನು ಮಣ್ಣಿನ ನಿಜವಾದ ಮಗಳು. ಈ ಭೂಮಿಗೋಸ್ಕರ ನಾವು ಈ ಜನಕ್ಕೆ ಕೆಲಸ ಮಾಡಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದವರು. ನಮಗೆ ಬೇಕಾದಂತೆ ಬದುಕಬಹುದಿತ್ತು. ಯಾಕಂದ್ರೆ ವೈಭವ, ದುಡ್ಡು ಎಲ್ಲವೂ ಇತ್ತು. ಇವುಗಳನ್ನೆಲ್ಲಾ ಬಿಟ್ಟು ಮಂಡ್ಯ ಜಿಲ್ಲೆಗೆ ಸೇವೆ ಮಾಡಬೇಕು ಎಂದು ಬಂದೆವು. ಹಾಗೆಯೇ ಒಂದು ಅವಕಾಶನೂ ಕೊಟ್ಟರು. ಯಾರ್ಯಾರು ಎಷ್ಟೆಷ್ಟೋ ಗೆದ್ದಿದ್ದರೂ ಬೇಕಾದಷ್ಟು ಸಮಯವಿತ್ತು. ಕೆಲವರಿಗೆ ಋಣ ತೀರಿಸಲು, ಕೆಲಸ ಮಾಡಲು ಸಮಯವಿತ್ತು. ಆದ್ರೆ ಯಾರೂ ಏನೂ ಮಾಡಿಲ್ಲ ಎಂದು ಭಾವುಕರಾದ್ರು.

    ಮಂಡ್ಯ ಜನತೆ ದಡ್ಡರಲ್ಲ. ತುಂಬಾ ಬುದ್ಧಿವಂತರಾಗಿದ್ದು, ಯೋಚನೆ ಮಾಡುವ ಶಕ್ತಿ ಇದೆ. ಇಂದು ರಮ್ಯಾ ಅವರಿಗೆ ಯಾಕೆ ಅವಕಾಶ ಸಿಕ್ಕಿಲ್ಲ ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ರಮ್ಯಾರನ್ನು ಯಾರು ಸೋಲಿಸಿದ್ರು, ಯಾರು ನಮ್ಮ ಕೈ ಬಿಟ್ಟರು ಇವೆಲ್ಲ ಜನತೆಗೆ ಗೊತ್ತಿದೆ. ಜಿಲ್ಲೆಯ ಜನರಿಗೆ ಇನ್ನೂ ನಮ್ಮ ಮೇಲೆ ಪ್ರೀತಿ, ಕರುಣೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಮೈತ್ರಿ ಧರ್ಮ ಪಾಲಿಸುವುದು ನಮ್ಮ ಧರ್ಮವಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಮ್ಮದೇ ಅಭ್ಯರ್ಥಿ ಎಂದು ತಿಳಿದುಕೊಂಡು, ಮಂಡ್ಯದಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಬೆಂಬಲಿಸುತ್ತೇವೆ. ಸದ್ಯ ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರ ಮಾಡೋದಿಕ್ಕೆ ಬಂದಿದ್ದೇನೆ ಅಂದ್ರು.

  • ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ವೈದ್ಯರಿಗೆ ಅಚ್ಚರಿ ನೀಡಿದ್ದಾರೆ.

    ಅರಿಫಾ ಸುಲ್ತಾನ(20) ಕಳೆದ ತಿಂಗಳು ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಡೆಲಿವರಿ ಮಾಡುವ ವೇಳೆ ವೈದ್ಯರು ಮಹಿಳೆ ದೇಹದಲ್ಲಿ ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ.

    ಅರಿಫಾ ಅವರಿಗೂ ನಾನು ಅವಳಿ ಮಕ್ಕಳ ಗರ್ಭಿಣಿ ಎಂಬ ವಿಷಯ ಗೊತ್ತಿರಲಿಲ್ಲ. ಆಕೆ ಮೊದಲ ಮಗುವಿಗೆ ಜನ್ಮ ನೀಡಿ 26 ದಿನದ ಬಳಿಕ ಆಕೆಯ ಹೊಟ್ಟೆಯಲ್ಲಿದ್ದ ನೀರು ಒಡೆದಿದೆ. ಆಗ ಅರಿಫಾ ಆಸ್ಪತ್ರೆಗೆ ದಾಖಲಾದರು ಎಂದು ಸ್ತ್ರೀರೋಗ ತಜ್ಞೆ ಶೀಲಾ ಪೊದರ್ ತಿಳಿಸಿದ್ದಾರೆ.

    ಕಳೆದ ಶುಕ್ರವಾರ ಅರಿಫಾ ಆಸ್ಪತ್ರೆಗೆ ಬಂದ ತಕ್ಷಣ ವೈದ್ಯೆ ಶೀಲಾ ಸಿಸೇರಿಯನ್ ಮಾಡಿ ಅವಳಿ ಮಕ್ಕಳಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಕ್ಕಳಿಬ್ಬರು ಆರೋಗ್ಯವಾಗಿದ್ದು, ಮಂಗಳವಾರ ತಾಯಿ- ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ನಾನು ನನ್ನ 30 ವರ್ಷದ ವೈದ್ಯಕೀಯದ ಅನುಭವದಲ್ಲಿ ಇಂತಹ ಕೇಸ್ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಅಲ್ಲದೆ ಅರಿಫಾಳ ಎರಡನೇ ಗರ್ಭಧಾರಣವನ್ನು ಪತ್ತೆ ಹಚ್ಚದ ಕಾರಣ ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ವಿರುದ್ಧ ದಿಲೀಪ್ ಕ್ರಮಕೈಗೊಂಡಿದ್ದಾರೆ.

    ನನ್ನ ಪತಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು 5 ಸಾವಿರ ರೂ. ದುಡಿಯುತ್ತಾರೆ. ನನಗೆ ಮೂವರು ಮಕ್ಕಳು ಹುಟ್ಟಿರುವುದು ಸಂತೋಷ. ಆದರೆ ಅವರನ್ನು ಹೇಗೆ ನೋಡಿಕೊಳ್ಳುವುದು ಎಂಬ ಚಿಂತೆ ಶುರುವಾಗಿದೆ ಎಂದು ಅರಿಫಾ ಹೇಳಿದ್ದಾರೆ. ಅಲ್ಲಾನ ಚಮತ್ಕಾರದಿಂದ ನನ್ನ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ನನ್ನ ಮಕ್ಕಳನ್ನು ಖುಷಿಯಾಗಿ ಇಡಲು ನಾನು ಪ್ರಯತ್ನಪಡುತ್ತೇನೆ ಎಂದು ಅರಿಫಾ ಪತಿ ಸುಮೋನ್ ಬಿಸ್ವಾಸ್ ತಿಳಿಸಿದ್ದಾರೆ.

  • ತಾಯಿಯೇ ಮಗಳ ಮೇಲೆ ಗ್ಯಾಂಗ್‍ರೇಪ್ ನಡೆಸಲು ಡೀಲ್!

    ತಾಯಿಯೇ ಮಗಳ ಮೇಲೆ ಗ್ಯಾಂಗ್‍ರೇಪ್ ನಡೆಸಲು ಡೀಲ್!

    – ಸಾರ್ವಜನಿಕರಿಂದ ಬೆತ್ತಲೆಯಾಗಿದ್ದ ಯುವತಿಯ ರಕ್ಷಣೆ

    ಬೆಂಗಳೂರು: ದುಷ್ಕರ್ಮಿಗಳು ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದೆ.

    ದುಷ್ಕರ್ಮಿಗಳು ಕಳೆದ ಮೂರು ದಿನಗಳಿಂದ ಕೋಣನಕುಂಟೆಯ ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಜಕ್ಕೂರು ಕೆರೆ ಬಳಿ ಕರೆತಂದು ಆಕೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಯುವತಿಯನ್ನು ದುಷ್ಕರ್ಮಿಗಳ ಕೈಯಿಂದ ರಕ್ಷಿಸಿದ್ದಾರೆ.

    ತಾಯಿಯೇ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಡೀಲ್ ಕೊಟ್ಟಿ ಶಂಕೆ ವ್ಯಕ್ತವಾಗುತ್ತಿದೆ. ತಾಯಿ ತನ್ನ ಮಗಳನ್ನು ಬಾರ್ ಗರ್ಲ್ ಆಗುವಂತೆ ಒತ್ತಾಯಿಸುತ್ತಿದ್ದಳು. ಅಲ್ಲದೆ ಹಣ ಪಡೆದು ತಾಯಿ ತನ್ನ ಮಗಳನ್ನೇ ಮಾರಾಟ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಬಾರ್ ಗರ್ಲ್ ಆಗಿ ಮತ್ತು ವೇಶ್ಯಾವಾಟಿಕೆಗೆ ಒಪ್ಪದ ಮಗಳನ್ನು ಕೊಲೆ ಮಾಡಲು ತಾಯಿ ಹೇಳಿದ್ದಾಳೆ ಎಂಬ ಮಾತುಗಳು ಕೇಳಿಬಂದಿದೆ.

    ಸಾರ್ವಜನಿಕರು ಬೆತ್ತಲೆಯಾಗಿದ್ದ 23 ವರ್ಷದ ಯುವತಿಯನ್ನು ರಕ್ಷಿಸಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಬಳಿಕ ಯುವತಿಯನ್ನು ವಿಕ್ಟೋರಿಯೋ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ.

    ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಳ್ತಿದ್ದ ಮಗನ ತುಟಿಗೆ ಗಮ್ ಹಾಕಿದ ತಾಯಿ!

    ಅಳ್ತಿದ್ದ ಮಗನ ತುಟಿಗೆ ಗಮ್ ಹಾಕಿದ ತಾಯಿ!

    ಪಾಟ್ನಾ: ತಾಯಿಯೊಬ್ಬಳು ಯಾವಾಗಲೂ ಅಳುತ್ತಿದ್ದಾನೆ ಎಂದು ಮಗನ ತುಟಿಗಳಿಗೆ ಗಮ್ ಹಾಕಿರುವ ವಿಲಕ್ಷಣ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ.

    ಶೋಭಾ ಮಗುವಿನ ಬಾಯಿಗೆ ಗಮ್ ಹಾಕಿದ ತಾಯಿ. ಈಕೆ ಎಷ್ಟೇ ಸಮಾಧಾನ ಮಾಡಿದರೂ ಮಗು ಅಳುವುದನ್ನು ನಿಲ್ಲಿಸಿಲ್ಲ ಎಂದು ಕೊನೆಗೆ ಮನೆಯಲ್ಲಿಯೇ ಇದ್ದ ಗಮ್ ತೆಗೆದುಕೊಂಡು ಮಗುವಿನ ತುಟಿಗೆ ಹಾಕಿದ್ದಾಳೆ.

    ನಾನು ಕೆಲಸಕ್ಕೆ ಹೋಗಿ ಮನೆಗೆ ಮರಳಿದ್ದೆ. ಆಗ ಮಗು ಏನು ಮಾತನಾಡದೆ ಸುಮ್ಮನೆ ಕುಳಿತ್ತಿದ್ದ. ನಂತರ ಆತನನ್ನು ನೋಡಿದಾಗ ಬಾಯಿಯಿಂದ ನೊರೆ ಬರುತ್ತಿತ್ತು. ತಕ್ಷಣ ನಾನು ಮಗನಿಗೆ ಏನಾಗಿದೆ ಎಂದು ಪತ್ನಿ ಶೋಭಾಳನ್ನು ಕೇಳಿದೆ. ಆಗ ಶೋಭಾ, ಆತನೂ ಯಾವಾಗಲೂ ಅಳುತ್ತಿದ್ದನು. ಏನೇ ಮಾಡಿದರು ಅಳುವನ್ನು ನಿಲ್ಲಿಸಲಿಲ್ಲ. ಆದ್ದರಿಂದ ತುಟಿಗಳಿಗೆ ಗಮ್ ಹಾಕಿರುವುದಾಗಿ ತಿಳಿಸಿದಳು ಎಂದು ಮಗುವಿನ ತಂದೆ ಹೇಳಿದ್ದಾರೆ.

    ತುಟಿಗಳಿಗೆ ಗಮ್ ಹಾಕಿದ್ದ ಪರಿಣಾಮ ಮಗು ಅಳುವುದನ್ನು ನಿಲ್ಲಿಸಿದ್ದನು. ಆದರೆ ಗಮ್ ಅಂಟಿಕೊಂಡಿದ್ದ ಪರಿಣಾಮ ಮಗು ಬಾಯಿಯನ್ನು ತೆರೆಯಲು ಸಾಧ್ಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ವೈದ್ಯರು ಪರೀಕ್ಷೆ ಮಾಡಿ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

  • ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿ, ಹೂತ್ತಿದ್ದ ತಾಯಿ ಅರೆಸ್ಟ್

    ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿ, ಹೂತ್ತಿದ್ದ ತಾಯಿ ಅರೆಸ್ಟ್

    ರಾಮನಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ಪ್ರಜ್ವಲ್ ಕೊಲೆಯಾದ ಬಾಲಕ. ಪ್ರಜ್ವಲ್ ತಾಯಿ ವರಲಕ್ಷ್ಮಿ ಹಾಗೂ ಪ್ರಿಯಕರ ಕುಮಾರ್ ಕೊಲೆ ಮಾಡಿ, ಮೃತ ದೇಹವನ್ನು ಹೂತಿಟ್ಟಿದ್ದ ಆರೋಪಿಗಳು. ಈ ಘಟನೆಯು ಇದೇ ತಿಂಗಳ 4ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿದೆ ಬಂದಿದೆ.

    ಆಗಿದ್ದೇನು?:
    ವರಲಕ್ಷ್ಮಿ ಪತಿ ಮೃತಪಟ್ಟಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಆಕೆ ಕುಮಾರ್ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಯಾರಿಗೂ ಗೊತ್ತಾಗದಂತೆ ಇವರಿಬ್ಬರು ಜಾಲಮಂಗಲ ಸಮೀಪದ ತೋಟವೊಂದರಲ್ಲಿ ಮಾರ್ಚ್ 4ರಂದು ಕುಳಿತಿದ್ದರು. ತಾಯಿಯ ಜೊತೆಗೆ ಕುಮಾರ್ ಕುಳಿತಿದ್ದನ್ನು ಬಾಲಕ ಪ್ರಜ್ವಲ್ ನೋಡಿದ್ದ. ಇದೇ ವೇಳೆ ಅಲ್ಲಿಗೆ ಬಂದಿದ್ದ ಪ್ರಜ್ವಲ್‍ನನ್ನು ನೋಡಿದ ಕುಮಾರ್, ಓಡಿ ಬಂದು ಹಿಡಿದುಕೊಂಡಿದ್ದ. ಹಾಗೇ ಬಿಟ್ಟರೆ ನಮ್ಮ ಸಂಬಂಧದ ಮನೆಯವರಿಗೆ ತಿಳಿಯುತ್ತದೆ ಎಂದು ಪ್ರಜ್ವಲ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಅಸ್ವಸ್ಥಗೊಂಡು ಬಿದ್ದಿದ್ದ ಪ್ರಜ್ವಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಇದರಿಂದ ಗಾಬರಿಗೊಂಡ ಆರೋಪಿಗಳು ತಕ್ಷಣವೇ ಪ್ರಜ್ವಲ್ ಮೃತದೇಹವನ್ನು ತೋಟದಲ್ಲಿ ಹೂತು ಅಲ್ಲಿಂದ ಪರಾರಿಯಾಗಿದ್ದರು.

    ಮೊಮ್ಮಗ ಪ್ರಜ್ವಲ್ ಮನೆಗೆ ಬಾರದೇ ಇದ್ದಾಗ ಜಯಮ್ಮನಿಗೆ ಅನುಮಾನ ಬಂದಿದೆ. ಈ ಸಂಬಂಧ ಜಯಮ್ಮ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

    ಅಕ್ಕನ ಮನೆಯಲ್ಲಿ ಇದ್ದೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಸೊಸೆ ವರಲಕ್ಷ್ಮಿ ಹೇಳುತ್ತಿದ್ದಳು. ಆದರೆ ಕುಮಾರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪ್ರಜ್ವಲ್‍ನ ತಮ್ಮ ಮನೆಗೆ ಬಂದು ಹೇಳಿದಾಗ ಸೊಸೆಯ ಕೃತ್ಯ ನನಗೆ ತಿಳಿಯಿತು ಎಂದು ಅಜ್ಜಿ ಜಯಮ್ಮ ದೂರಿದ್ದಾರೆ.

    ಆರೋಪಿಗಳನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಪ್ರಜ್ವಲ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನ ಏರುವ ಭರದಲ್ಲಿ ಮಗುವನ್ನೇ ಮರೆತ ತಾಯಿ!

    ವಿಮಾನ ಏರುವ ಭರದಲ್ಲಿ ಮಗುವನ್ನೇ ಮರೆತ ತಾಯಿ!

    ರಿಯಾದ್: ಪ್ರಯಾಣ ಮಾಡುವ ವೇಳೆ ಗಡಿಬಿಡಿಯಲ್ಲಿ ಕೆಲವೊಮ್ಮೆ ಪ್ರಯಾಣಿಕರು ಲಗೇಜ್ ಮರೆತು ಹೋಗುತ್ತಾರೆ. ಆದ್ರೆ ಮಹಿಳೆಯೊಬ್ಬರು ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಏರ್​ಪೋರ್ಟ್ ನಲ್ಲಿ  ಮರೆತು ಹೋದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

    ಹೌದು, ಜೆಡ್ಡಾದ ಕಿಂಗ್ ಅಬ್ದುಲ್ಲ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ಜರುಗಿದೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತನ್ನ ಮಗುವಿನೊಂದಿಗೆ ವಿಮಾನಕ್ಕಾಗಿ ಕಾಯುತ್ತಿದ್ದ ಮಹಿಳೆ, ವಿಮಾನ ಬಂದ ಪ್ರಕಟಣೆ ಕೇಳಿದ ಕೂಡಲೇ ಮಗುವನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿದ್ದಾಳೆ. ಬಳಿಕ ವಿಮಾನ ಟೇಕಾಫ್ ಆಗಿ ಸ್ವಲ್ಪ ದೂರ ಹೋದ ಬಳಿಕ ಮಹಿಳೆಗೆ ತನ್ನ ಮಗುವಿನ ನೆನಪಾಗಿದೆ. ನಂತರ ಗಾಬರಿಯಿಂದ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿ ವಾಪಸ್ ವಿಮಾನವನ್ನು ಜೆಡ್ಡಾ ವಿಮಾನ ನಿಲ್ದಾಣಕ್ಕೆ ತಿರುಗಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

    ಕೊನೆಗೆ ಮಹಿಳೆಯ ಮನವಿಗೆ ಮಣಿದ ಸಿಬ್ಬಂದಿ ವಿಮಾನವನ್ನು ವಾಪಸ್ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದು, ಮಹಿಳೆ ಮಗುವನ್ನು ಕರೆದುಕೊಂದು ವಾಪಸ್ ಅದೇ ವಿಮಾನದಲ್ಲಿ ತಾನು ಹೋಗಬೇಕಿದ್ದ ಊರಿಗೆ ಪ್ರಯಾಣಿಸಿದ್ದಾರೆ.

    ಈ ರೀತಿ ಪ್ರಕರಣ ಇದೇ ಮೊದಲ ಬಾರಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಲ್ಲದೆ ಮಗುವೊಂದೇ ನಿಲ್ದಾಣದಲ್ಲಿ ತಾಯಿಗಾಗಿ ಕಾಯುತ್ತಿದ್ದ ಕಾರಣಕ್ಕೆ ವಿಮಾನವನ್ನು ವಾಪಸ್ ತಿರುಗಿಸಲಾಯಿತು ಎಂದು ಪೈಲಟ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ತಿಗಾಗಿ ಅಪ್ಪ-ಅಮ್ಮನನ್ನು ಕೊಂದು ಜೈಲು ಸೇರಿದ..!

    ಆಸ್ತಿಗಾಗಿ ಅಪ್ಪ-ಅಮ್ಮನನ್ನು ಕೊಂದು ಜೈಲು ಸೇರಿದ..!

    ಭುನನೇಶ್ವರ: ತನ್ನ ಹೆಸರಿಗೆ ಆಸ್ತಿ ಬರೆದುಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಪಾಪಿ ಮಗ ಹೆತ್ತವರನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಈ ಘಟನೆ ಕೊರಾಪುಟ್ ಜಿಲ್ಲೆಯ ಜಯನಗರ ಪ್ರದೇಶದಲ್ಲಿ ಮಾರ್ಚ್ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಲತಿಫ್ ರೆಹಮಾನ್ ಕೃತ್ಯ ಎಸಗಿ ಬಂಧಿತನಾಗಿರುವ ಪಾಪಿ ಮಗ. ಮಗನಿಂದಲೇ ಹತನಾದ ದುರ್ದೈವಿ ತಂದೆಯನ್ನು ಎಂ.ಕೆ ರೆಹಮಾನ್ ಹಾಗೂ ತಾಯಿಯನ್ನು ಫಕಿಝಾ ಬಿಬಿ ಎಂದು ಗುರುತಿಸಲಾಗಿದೆ.

    ಹೆತ್ತವರು ತಮ್ಮ ಆಸ್ತಿಯನ್ನು ಮಗನಿಗೆ ಬರೆದು ಕೊಡಲು ನಿರಾಕರಿಸುತ್ತಿದ್ದರು. ಹಲವು ಬಾರಿ ಮಗ ತನ್ನ ಹೆಸರಿಗೆ ಬರೆದುಕೊಡುವಂತೆ ಅಪ್ಪನಲ್ಲಿ ಹೇಳಿದ್ದನು. ಆದ್ರೆ ಪ್ರತಿ ಬಾರಿಯೂ ತಂದೆ ಮಗನ ಮಾತನ್ನು ಕ್ಯಾರೇ ಎನ್ನುತ್ತಿರಲಿಲ್ಲ. ಇದರಿಂದ ಸಿಟ್ಟುಗೊಂಡ ಪಾಪಿ ಮಗ ಅಪ್ಪ-ಅಮ್ಮನಿಗೆ ಚೆನ್ನಾಗಿ ಥಳಿಸಿ ಬಳಿಕ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಅಲ್ಲದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಎಸ್ ಡಿಪಿಒ ಸಾಗರಿಕಾನಾಥ್ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

    ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

    ನವದೆಹಲಿ: ಚಲಿಸುತ್ತಿದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಾಹನದ ಒಳಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪೂರ್ವ ದೆಹಲಿಯ ಅಕ್ಷರಧಾಮ ಫ್ಲೈಓವರ್ ನಲ್ಲಿ ನಡೆದಿದೆ.

    ಭಾನುವಾರ ಸಂಜೆ ಸುಮಾರು 6.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ದೆಹಲಿಯ ನಿವಾಸಿಗಳಾದ ರಂಜನಾ ಮಿಶ್ರಾ, ರಿಧಿ ಹಾಗೂ ನಿಕ್ಕಿ ಮೃತ ದುರ್ದೈವಿಗಳು. ಭಾನುವಾರ ಸಂಜೆ ಅಕ್ಷರಧಾಮ ದೇವಾಲಯಕ್ಕೆ ರಂಜನಾ, ಪತಿ ಉಪೇಂದ್ರ ಮಿಶ್ರಾ ಹಾಗೂ ಅವರ ಮೂವರು ಮಕ್ಕಳು ಕಾರಿನಲ್ಲಿ ತೆರೆಳುತ್ತಿದ್ದರು. ಈ ವೇಳೆ ಅಕ್ಷರಧಾಮ ಫ್ಲೈಓವರ್ ಮೇಲೆ ಬರುತ್ತಿರುವಾಗ ಕಾರಿನಲ್ಲಿ ಗ್ಯಾಸ್ ಲೀಕ್ ಆದ ಕಾರಣ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ.

    ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರು ಚಲಾಯಿಸುತ್ತಿದ್ದ ಪತಿ, ತನ್ನ ಪಕ್ಕದಲ್ಲೇ ಕೂತಿದ್ದ ಮೂರನೇ ಮಗಳನ್ನು ಎತ್ತಿಕೊಂಡು ಹೊರಗಡೆ ಹಾರಿದ್ದಾರೆ. ಆದ್ರೆ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಕಾರಣಕ್ಕೆ ಅವರನ್ನು ಕಾಪಾಡುವಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಮೂವರು ಕೂಡ ಸಜೀವದಹನವಾಗಿದ್ದಾರೆ.

    ಕಾರಿಗೆ ಬೆಂಕಿ ಹೇಗೆ ತಗುಲಿತು ಅಂತ ನನಗೆ ಗೊತ್ತಿಲ್ಲ ಎಂದು ಶಾಕ್‍ನಲ್ಲಿ ಉಪೇಂದ್ರ ಮಿಶ್ರಾ ಹೇಳುತ್ತಿದ್ದಾರೆ. ಸದ್ಯ ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv