Tag: mother

  • ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಬೆಂಗಳೂರು: ಪುತ್ರನೋರ್ವ ತನ್ನ ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡಿಸುತ್ತಿದ್ದಾರೆ. ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿ ರತ್ನಮ್ಮ ಜೊತೆ ತೀರ್ಥಯಾತ್ರೆ ಮಾಡುತ್ತಾ ಇದೀಗ ಛತ್ತೀಸ್ ಗಢದ ದಂತೇವಾಡ ತಲುಪಿದ್ದಾರೆ.

    ಕೃಷ್ಣ ಕುಮಾರ್ ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ಮಾತು ಕೊಟ್ಟಿದ್ದರು.

    ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಾಹಾರಾಷ್ಟ್ರ, ಗೋವಾ, ಪುದುಚೇರಿ ಬಳಿಕ ಇದೀಗ ದಂತೇವಾಡದ ತಲುಪಿದ್ದು, ದಂತೇಶ್ವರಿ ದೇವರ ದರ್ಶನ ಪಡೆಯಲಿದ್ದಾರೆ.

    ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂದು ಕೇಳಿದ್ರೆ, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದು ಕೃಷ್ಣ ಕುಮಾರ್ ಹೇಳುತ್ತಾರೆ.

    ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಇದೂವರೆಗೂ ಎರಡು ಬಾರಿ ಮಾತ್ರ ಮಾರ್ಗ ಮಧ್ಯೆ ಸ್ಕೂಟರ್ ಪಂಚರ್ ಆಗಿದೆ. ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ತಿಳಿಸಿದರು.

    ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

  • ನನಗೆ ಈಗಲೂ ನನ್ನ ತಾಯಿ ಹಣ ನೀಡ್ತಾರೆ: ಮೋದಿ

    ನನಗೆ ಈಗಲೂ ನನ್ನ ತಾಯಿ ಹಣ ನೀಡ್ತಾರೆ: ಮೋದಿ

    ನವದೆಹಲಿ: ನನಗೆ ಈಗಲೂ ನನ್ನ ತಾಯಿಯೇ ಹಣ ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರು ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಅವರು ನೀವು ನಿಮ್ಮ ಸಂಬಳದ ಹಣವನ್ನು ನಿಮ್ಮ ತಾಯಿಗೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮೋದಿ ಅವರು ಈಗಲೂ ನನ್ನ ತಾಯಿ ನನಗೆ ಹಣ ನೀಡುತ್ತಾರೆ. ನಾನು ಅವರನ್ನು ಭೇಟಿ ಮಾಡಲು ಹೋದಾಗ ಅವರು ನನಗೆ ಹಣ ನೀಡುತ್ತಾರೆ ಎಂದರು.

    ನನ್ನ ತಾಯಿ ನನ್ನಿಂದ ಏನೂ ಬಯಸುವುದಿಲ್ಲ. ಅವರಿಗೆ ಆ ಅವಶ್ಯಕತೆ ಕೂಡ ಇಲ್ಲ. ನಾನು ಮುಖ್ಯಮಂತ್ರಿ ಆದಾಗಿನಿಂದ ನನ್ನ ಕುಟುಂಬದ ಖರ್ಚು ಸರ್ಕಾರದ ಮೇಲೆ ಇಲ್ಲ. ಬೇರೆ ಮುಖ್ಯಮಂತ್ರಿ ಕುಟುಂಬದವರಿಗೆ ಮೆಡಿಕಲ್ ಖರ್ಚು ಸಿಗುತ್ತದೆ. ಆದರೆ ನಮ್ಮ ಕುಟುಂಬದವರು ಇದನ್ನು ಯಾವುದು ತೆಗೆದುಕೊಂಡಿಲ್ಲ. ಹಾಗಂತ ನಾನು ನನ್ನ ಕುಟುಂಬವನ್ನು ನಿರ್ಲಕ್ಷಿಸಿ ಇಲ್ಲ. ನಾನು ಮುಖ್ಯಮಂತ್ರಿ ಆದ ದಿನದಿಂದ ನನ್ನ ದೇಶವನ್ನು ನಾನು ಕುಟುಂಬ ಎಂದುಕೊಂಡಿದ್ದೇನೆ ಎಂದು ಹೇಳಿದರು.

  • 87 ವರ್ಷದ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ

    87 ವರ್ಷದ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಗನೊಬ್ಬ ವಿಕಲಚೇತನ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿಸಿದ್ದಾರೆ.

    ಪಶ್ಚಿಮ ಬಂಗಾಳದ ಮಾಲ್ಡಾ ಸೇರಿದಂತೆ 5 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಾಲ್ಡಾ ಮತಕ್ಷೇತ್ರ ವ್ಯಾಪ್ತಿಯ ಕೊಟ್ವಾಲಿಯಲ್ಲಿ ಯುವಕ ತಾಯಿಯನ್ನು ಹೊತ್ತು ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಕರೆ ತಂದಿದ್ದಾನೆ. ಇದನ್ನು ಓದಿ: ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!

    ಯುವಕ ತಾಯಿಯನ್ನು ಹೊತ್ತುಕೊಂಡು ಮತಗಟ್ಟೆಗೆ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 18ರಂದು ನಡೆಸಿದ್ದ ಚುನಾವಣೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ರಾಯ್‍ಗಂಜ್ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮೊಹಮ್ಮದ್ ಸಲಿಂ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆದಿತ್ತು. ಅಷ್ಟೇ ಕೆಲವು ಕಡೆಗಳಲ್ಲಿ ಗಲಾಟೆ, ಹಲ್ಲೆ ಹಾಗೂ ಬಲವಂತವಾಗಿ ಮತದಾನ ಮಾಡಿಸಲಾಗಿತ್ತು.

    ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಆರಂಭವಾಗಿದೆ. 13 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 18 ಕೋಟಿ 85 ಲಕ್ಷ ಜನರು ಇಂದು 1,640 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

    ಅಸ್ಸಾಂನ ಹೈಲಾಕಂಡಿ ಜಿಲ್ಲೆಯ ಸುರ್ಗಲ್ ಬಿಬಿ ಅವರು 102 ವರ್ಷದವರಾಗಿದ್ದು, 1950 ರಿಂದಲೂ ಯಾವುದೇ ಮತದಾವನ್ನು ತಪ್ಪಿಸಿಲ್ಲ. ಅಸ್ಸಾಂನಲ್ಲಿ ಇಂದು ಅವರು ಮತದಾನ ಮಾಡಲಿದ್ದಾರೆ.

  • ತಾಯಿ ಸಾವಿನ ನೋವಿನಲ್ಲೂ  ಮತದಾನ ಮಾಡಿದ ಮಗ

    ತಾಯಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಗ

    ಹುಬ್ಬಳ್ಳಿ: ಮುಂಜಾನೆ ತಾಯಿ ತೀರಿಹೋಗಿದ್ದರೂ ಕೂಡ ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಹೆತ್ತಮ್ಮನ ಸಾವಿನ ನೋವಿನ ನಡುವೆಯೂ ಮಗ ವೋಟ್ ಮಾಡಿದ್ದಾರೆ.

    ಹುಬ್ಬಳ್ಳಿಯ ಮಡಿವಾಳ ನಗರದ ನಿವಾಸಿಗಳಾದ ಸಿ.ಎನ್. ನಾಯಕ ಹಾಗೂ ಅವರ ಪತ್ನಿ ಇಂದಿರಾ ನಾಯಕ ಸಾವಿನ ನೋವಿನಲ್ಲೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಜಿಲ್ಲೆಯ ಭವಾನಿ ನಗರದ ಮತಗಟ್ಟೆ 110ರಲ್ಲಿ ಈ ದಂಪತಿ ಮತದಾನ ಮಾಡಿದ್ದಾರೆ.

    ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸಿ.ಎನ್. ನಾಯಕ ಅವರ ತಾಯಿ ವಿಮಲಾ ನಾಯಕ(89) ಸಾವನ್ನಪ್ಪಿದ್ದಾರೆ. ತಾಯಿ ಅಂಕೋಲಾದಲ್ಲಿ ವಾಸಿಸುತ್ತಿದ್ದು, ಮಗ ಸೊಸೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ತಾಯಿ ತೀರಿಹೋಗಿದ್ದಾರೆ ಎಂದು ಮಾಹಿತಿ ತಿಳಿದ ಬಳಿಕ ಮಗ ಹಾಗೂ ಸೊಸೆ ಅಂಕೋಲಾದತ್ತ ಪಯಣ ಬೆಳೆಸುವ ಮೊದಲು ಮತದಾನ ಮಾಡಿ ಭಾರತೀಯ ಪ್ರಜೆಯ ಕರ್ತವ್ಯವನ್ನು ಮಾಡಿದ್ದಾರೆ.

  • ಕಾಶ್ಮೀರದಲ್ಲಿ ಸಾವಿನಂಚಿನಲ್ಲಿದ್ದ ತಾಯಿ, ಮಗುವಿಗೆ ರಕ್ತ ನೀಡಿ ಜೀವ ಉಳಿಸಿದ ಯೋಧ

    ಕಾಶ್ಮೀರದಲ್ಲಿ ಸಾವಿನಂಚಿನಲ್ಲಿದ್ದ ತಾಯಿ, ಮಗುವಿಗೆ ರಕ್ತ ನೀಡಿ ಜೀವ ಉಳಿಸಿದ ಯೋಧ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪಡೆಯ ಯೋಧರೊಬ್ಬರು ಇಲ್ಲಿನ ಸ್ಥಳೀಯ ಗರ್ಭಿಣಿಗೆ ರಕ್ತದಾನ ಮಾಡಿ ತಾಯಿಯೊಂದಿಗೆ ಮಗುವಿನ ಜೀವವನ್ನೂ ಉಳಿಸಿ ಎಲ್ಲರ ಮನ ಗೆದ್ದಿದ್ದಾರೆ.

    25 ವರ್ಷದ ಮಹಿಳೆಯೊಬ್ಬರಿಗೆ ಡೆಲಿವರಿ ಸಮಯದಲ್ಲಿ ಸಮಸ್ಯೆಯಾಗಿ, ಅವರ ದೇಹದಲ್ಲಿ ರಕ್ತದ ಕೊರತೆ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 53ನೇ ಬೆಟಾಲಿಯನ್‍ನ ಸಿಆರ್‌ಪಿಎಫ್ ಯೋಧ ಗೋಯಲ್ ಶೈಲೇಶ್ ಅವರು ಮಹಿಳೆಗೆ ರಕ್ತ ನೀಡಿ, ತಾಯಿ ಮತ್ತು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

    ಡೆಲಿವರಿ ಸಮಯದಲ್ಲಿ ಮಹಿಳೆಯ ದೇಹದಲ್ಲಿ ರಕ್ತದ ಅಭಾವ ಉಂಟಾದಾಗ ಗುಲ್‍ಶಾನ್ ನಿವಾಸಿಗಳಾದ ಆಕೆಯ ಕುಟುಂಬಸ್ಥರು ‘ಮದಾದ್ಗರ್’ ಮೂಲಕ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ‘ಮದಾದ್ಗರ್’ ಕಾಶ್ಮೀರದ ಜನತೆಗೆ ವೈದ್ಯಕೀಯ ತುರ್ತು ಸೇವೆ ಒದಗಿಸಲು ಸಿಆರ್‌ಪಿಎಫ್ ಸ್ಥಾಪಿಸಿದ ಸಹಾಯವಾಣಿಯಾಗಿದ್ದು, ಕರೆ ಬಂದ ತಕ್ಷಣ ಯೋಧ ಆಸ್ಪತ್ರೆಗೆ ತೆರಳಿ ಸಹಾಯ ಮಾಡಿ ಎರಡು ಜೀವಗಳಿಗೆ ಪುನರ್ಜನ್ಮ ನೀಡಿದ್ದಾರೆ.

    ಈ ಬಗ್ಗೆ ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಯೋಧನಿಗೆ ಅಭಿನಂದನೆ ಅರ್ಪಿಸಿದೆ. ಇದು ರಕ್ತದ ಸಂಬಂಧ. 53ನೇ ಬೆಟಾಲಿಯನ್ ಕಾನ್‍ಸ್ಟೇಬಲ್ ಗೋಹಿಲ್ ಶೈಲೇಶ್ ಅವರು ಡೆಲಿವರಿ ಸಮಯದಲ್ಲಿ ತೊಂದರೆ ಅನಿಭವಿಸುತ್ತಿದ್ದ 25 ವರ್ಷದ ಮಹಿಳೆಗೆ ರಕ್ತದಾನ ಮಾಡಿದ್ದಾರೆ. ಅವರ ರಕ್ತವು ತಾಯಿ ಹಾಗೂ ಮಗು ಇಬ್ಬರ ಜೀವವನ್ನು ಉಳಿಸಿ ಒಂದು ಬಂಧವನ್ನು ಸೃಷ್ಟಿಸಿದೆ ಎಂದು ಬರೆದು ಯೋಧ ರಕ್ತ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದೆ.

    ಯೋಧನ ಈ ನಿಸ್ವಾರ್ಥ ಸಹಾಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯೋಧನ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆಯುತ್ತಿದ್ದಾರೆ.

  • ಚಿರತೆಯ ದವಡೆಯಿಂದ 18 ತಿಂಗಳ ಮಗನನ್ನು ರಕ್ಷಿಸಿದ ತಾಯಿ!

    ಚಿರತೆಯ ದವಡೆಯಿಂದ 18 ತಿಂಗಳ ಮಗನನ್ನು ರಕ್ಷಿಸಿದ ತಾಯಿ!

    ಮುಂಬೈ: ತನ್ನ ಕೈಯಿಂದಲೇ ಚಿರತೆಯ ದವಡೆಗೆ ಹೊಡೆದು 18 ತಿಂಗಳ ಮಗನನ್ನು ಭಾರೀ ಅನಾಹುತದಿಂದ ತಾಯಿ ಪಾರು ಮಾಡಿದ ಘಟನೆ ಮಹಾರಾಷ್ಟ್ರದ ಜುನ್ನರ್ ತಾಲೂಕಿನಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ.

    ಧ್ನ್ಯಾನೇಶ್ವರ್ ಮಲಿ ಅಪಾಯದಿಂದ ಪಾರಾದ ಬಾಲಕನಾಗಿದ್ದು, ಮಗನನ್ನು ಪಾರು ಮಾಡುತ್ತಿದ್ದಂತೆಯೆ ಚಿರತೆ ಆತನ ತಾಯಿ ಮೇಲೂ ದಾಳಿ ಮಾಡಿದೆ.

    ಘಟನೆ ವಿವರ:
    ಪುಣೆಯಿಂದ ಸುಮಾರು 90 ಕಿ.ಮೀ ದೂರದ ಜುನ್ನಾರ್ ತಾಲೂಕಿನ ಧೊಲ್ವಾಡ್ ಗ್ರಾಮದಲ್ಲಿ ಮನೆಯ ಹೊರಗೆ ಎಂದಿನಂತೆ ತನ್ನ ಹೆತ್ತವರಾದ ದಿಲೀಪ್ ಹಾಗೂ ದೀಪಾಲಿ ಜೊತೆ ಬಾಲಕ ಮಲಗಿದ್ದನು. ಈ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಮಗನ ಮೇಲೆ ದಾಳಿ ಮಾಡುತ್ತಿದ್ದಂತೆಯೇ ತಾಯಿ ದೀಪಾಳಿ ಚಿರತೆಯ ದವಡೆಗೆ ತನ್ನ ಕೈಯಿಂದ ಹೊಡೆಯುವ ಮೂಲಕ ತಡೆದಿದ್ದಾರೆ. ಈ ವೇಳೆ ಚಿರತೆ ದೀಪಾಲಿ ಮೇಲೆಯೇ ದಾಳಿ ಮಾಡಲು ಯತ್ನಿಸಿದೆ. ಕೂಡಲೇ ದೀಪಾಲಿ ಕಿರುಚಿಕೊಂಡಿದ್ದಾರೆ.

    ದಿಲೀಪ್, ದೀಪಾಲಿ ಕಾರ್ಮಿಕರಾಗಿದ್ದು, ಇವರಂತೆ ಇತರ ಕಾರ್ಮಿಕರು ಕೂಡ ಮನೆಯ ಹೊರಗಡೆ ಮಲಗಿದ್ದರು. 20 ವರ್ಷದ ದೀಪಾಲಿ ಚಿರತೆಯು ಮಗನ ತಲೆಯನ್ನೇ ಕಚ್ಚಿ ಹಿಡಿದುಕೊಂಡಿದ್ದನ್ನು ನೋಡಿ ದಂಗಾಗಿದ್ದಾರೆ. ಅಲ್ಲದೇ ಮಗನನ್ನು ರಕ್ಷಿಸುವ ಸಲುವಾಗಿ ತನ್ನ ಕೈಯಿಂದಲೇ ಚಿರತೆಗೆ ಹೊಡೆದಿದ್ದಾರೆ. ಪರಿಣಾಮ ಬಾಲಕನನ್ನು ಚಿರತೆ ಬಿಟ್ಟಿದ್ದು, ತಾಯಿಯ ಕೈಯನ್ನು ಕಚ್ಚಿಕೊಂಡಿದೆ. ಇದರಿಂದ ಮತ್ತಷ್ಟು ಗಾಬರಿಗೊಂಡ ದೀಪಾಲಿ, ಜೋರಾಗಿಯೇ ಕಿರುಚಿದ್ದಾರೆ. ಹೀಗಾಗಿ ಚಿರತೆ ಕೂಡಲೇ ಅಲ್ಲಿಂದ ಕಾಲ್ಕಿತ್ತಿತ್ತು. ಘಟನೆಯಿಂದ ಬಾಲಕನ ಕುತ್ತಿಗೆ, ಎಡಗಣ್ಣು ಹಾಗೂ ಕಿವಿಯಲ್ಲಿ ಕಚ್ಚಿದ ಗಾಯಗಳಾಗಿವೆ ಎಂದು ಅರಣ್ಯಾಧಿಕಾರಿ ವಿಶಾಲ್ ಅಧಗಲೆ ಶನಿವಾರ ತಿಳಿಸಿದ್ದಾರೆ.

    ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅರಣ್ಯಾಧಿಕಾರಿ ಸ್ಥಳಕ್ಕೆ ದೌಡಾಯಿಸಿ ಗ್ರಾಮದ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಗಾಯಾಳು ಬಾಲಕನನ್ನು ಮುಂಜಾನೆ 4 ಗಂಟೆ ಸುಮಾರಿಗೆ ಯಶ್ವಂತ್ ರಾವ್ ಚವಾನ್ ಮೆಮರಿಯಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸೋಮವಾರ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ ಎಂಬುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

    ಪುಷ್ಪಾವತಿ ನದಿ ಸಮೀಪದ ಧೊಲ್ವಾಡಿ ಗ್ರಾಮದಲ್ಲಿ ಹಲವು ಕುಟುಂಬಗಳು ವಾಸವಾಗಿವೆ. ಇದರಲ್ಲಿ ಹೆಚ್ಚಿನ ಕುಟುಂಬಗಳು ಕೆಲಸಕ್ಕಾಗಿ ನಾಸಿಕ್ ಜಿಲ್ಲೆಗೆ ವಲಸೆ ಹೋಗಿದ್ದಾರೆ. ಬೋನಿನ ಮೂಲಕ ಚಿರತೆಯನ್ನು ಸೆರೆಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದ್ರೆ ಪ್ರಾಣಿಗಳು ಇರುವುದರಿಂದ ಮನೆಯ ಹೊರಗಡೆ ಮಲಗಬೇಡಿ. ಹಾಗೆಯೇ ನಿಮ್ಮ ರಕ್ಷಣೆಗಾಗಿ ಸಾಕು ಪ್ರಾಣಿಗಳ ಮೊರೆ ಹೋಗಿ ಎಂದು ಸೂಚಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.

  • ಅಮ್ಮನ ಜೊತೆ ಇರುವಾಗ್ಲೇ 17ರ ಹುಡುಗಿ ಮೇಲೆ ಆ್ಯಸಿಡ್ ಎಸೆದ್ರು!

    ಅಮ್ಮನ ಜೊತೆ ಇರುವಾಗ್ಲೇ 17ರ ಹುಡುಗಿ ಮೇಲೆ ಆ್ಯಸಿಡ್ ಎಸೆದ್ರು!

    ಪಾಟ್ನಾ: ಕಿರುಕುಳ ನೀಡಲು ವಿಫಲವಾದ್ದರಿಂದ 17 ವರ್ಷದ ಹುಡುಗಿ ಮೇಲೆ ನೆರೆಮನೆಯವರೇ ಆ್ಯಸಿಡ್ ಎರಚಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ತನ್ನ ತಾಯಿ ಜೊತೆ ಮನೆಯಲ್ಲಿ ಇರುವಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.

    ನೆರೆಮನೆಯ ಪ್ರಿನ್ಸ್ ಎಂಬಾತ ಮೂವರೊಂದಿಗೆ ಏಕಾಏಕಿ ಮನೆಗೆ ನುಗಿದ್ದಾನೆ. ಅಲ್ಲದೆ ಅಮ್ಮನ ಹಣೆಗೆ ಗನ್ ಇಟ್ಟು, ಹುಡುಗಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ಈ ವೇಳೆ ಸಂತ್ರಸ್ತೆ ಕಿಡಿಗೇಡಿಗಳಿಂದ ತಪ್ಪಿಸಿಕೊಂಡಿದ್ದಾಳೆ. ಇದರಿಂದ ಸಿಟ್ಟುಗೊಂಡ ಅವರು, ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದಾರೆ. ಘಟನೆಯ ಬಳಿಕ ಘಟನಾ ಸ್ಥಳದಿಂದ ಗನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ರೂಪ್ ರಂಜನ್ ಹಾರ್ಗವೆ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಪ್ರಿನ್ಸ್‍ನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇತ್ತ ಸಂತ್ರಸ್ತೆಯನ್ನು ಪಾಟ್ನಾ ಮೆಡಿಕಲ್ ಕಾಲೇಜು & ಹಾಸ್ಪಿಟಲ್ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

  • 3 ವರ್ಷದ ಕಂದಮ್ಮನನ್ನ ಹೊಡೆದು ಸಾಯಿಸಿದ ತಾಯಿ!

    3 ವರ್ಷದ ಕಂದಮ್ಮನನ್ನ ಹೊಡೆದು ಸಾಯಿಸಿದ ತಾಯಿ!

    ಕೊಚ್ಚಿ: ಮಾತು ಕೇಳಿಲ್ಲ ಎಂಬ ಕಾರಣಕ್ಕೆ ತಾಯಿ ನೀಡಿದ್ದ ಚಿತ್ರಹಿಂಸೆಗೆ ಕೋಮಾ ಸ್ಥಿತಿಗೆ ಹೋಗಿದ್ದ 3 ವರ್ಷದ ಪುಟ್ಟ ಕಂದಮ್ಮ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.

    ಮೆದುಳಿಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ 3 ವರ್ಷದ ಮಗು ಸಾವನ್ನಪ್ಪಿದೆ. ಜಾರ್ಖಂಡ್ ಮೂಲದ ಈ ಮಗುವಿನ ತಾಯಿ ಮಗ ತನ್ನ ಮಾತು ಕೇಳುತ್ತಿರಲಿಲ್ಲ ಎಂದು ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಗಂಭೀರವಾಗಿ ಪೆಟ್ಟಾಗಿದ್ದ ಮಗುವನ್ನು ತಂದೆ ಬುಧವಾರ ರಾತ್ರಿ ಕೊಚ್ಚಿ ಬಳಿಯ ಅಳುವಾದ ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಡೆಸ್ಕ್ ನಿಂದ ಕೆಳಗೆ ಬಿದ್ದು ಮಗು ತಲೆಗೆ ಪೆಟ್ಟು ಮಾಡಿಕೊಂಡಿದೆ ಎಂದು ಹೇಳಿ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ತಂದೆ ಮಾತಿನ ಮೇಲೆ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದ ಕಾರಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಬಾಲಕನಿಗೆ ಮರದ ವಸ್ತುವಿನಿಂದ ಹೊಡೆದಿದ್ದಾರೆ ಹಾಗೂ ದೇಹದ ಮೇಲೆ ಸುಟ್ಟ ಗಾಯಗಳು ಕೂಡ ಕಂಡು ಬಂದಿದೆ. ಬಾಲಕನ ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ ಬಲಭಾಗದ ಮೆದುಳು ಸಂಪೂರ್ಣ ನಿಷ್ಕ್ರೀಯಗೊಂಡಿತ್ತು. ಈ ಬಗ್ಗೆ ತಿಳಿದ ತಕ್ಷಣವೇ ಸರ್ಜರಿ ಮಾಡಲಾಗಿತ್ತು. ಬಳಿಕ ಬಾಲಕ ಕೋಮಾ ಸ್ಥಿತಿಯಲ್ಲಿದ್ದನು ಎಂದು ವೈದ್ಯರು ಹೇಳಿದ್ದಾರೆ.

    ಬಾಲಕನ ಎಲ್ಲ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಕೇರಳ ಆರೋಗ್ಯ ಸಚಿವೆ ಶೈಲಜಾ ಭರವಸೆ ನೀಡಿದ್ದರು. ಅಲ್ಲದೆ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವನ್ನು ಸಹ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆಸುವುದಾಗಿ ತಿಳಿಸಿದ್ದರು. ಆದ್ರೆ ದುರದೃಷ್ಟವಶಾತ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

    ಈ ಸಂಬಂಧ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೋಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೊತೆಗೆ ಜಾರ್ಖಂಡ್‍ನಲ್ಲಿರುವ ಆ ಮಗುವಿನ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಆತನ ತಂದೆ, ತಾಯಿ ನಿಜವಾಗಲೂ ಹೆತ್ತ ತಾಯಿ-ತಂದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಲೋನ್ ಕಟ್ಟಲು ಇಟ್ಟಿದ್ದ ಹಣದಲ್ಲಿ ಮೊಬೈಲ್ ಖರೀದಿ- ಅಮ್ಮ ಬೈದಿದ್ದಕ್ಕೆ ಮಗಳು ಆತ್ಮಹತ್ಯೆ

    ಲೋನ್ ಕಟ್ಟಲು ಇಟ್ಟಿದ್ದ ಹಣದಲ್ಲಿ ಮೊಬೈಲ್ ಖರೀದಿ- ಅಮ್ಮ ಬೈದಿದ್ದಕ್ಕೆ ಮಗಳು ಆತ್ಮಹತ್ಯೆ

    ಭೋಪಾಲ್: ಮೊಬೈಲ್ ಖರೀದಿ ಮಾಡಿದ್ದಕ್ಕೆ ತಾಯಿ ಬೈದರೆಂದು ಮನನೊಂದ 18 ವರ್ಷದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಉಮರ್ವಾಡಾ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಬೆಳಗ್ಗೆ ಆಕೆಯ ಸಹೋದರ ಮನೆಗೆ ಬಂದು ನೋಡಿದಾಗ ಬೆಳಕಿಗೆ ಬಂದಿರುವುದಾಗಿ ಇಂದು ಬರ್ಘಟ್ ಪೊಲೀಸ್ ಠಾಣೆಯ ಸಂತೋಷ್ ಧ್ರುವೆ ಅವರು ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಯುವತಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ನಡೆದ ಘಟನೆಯ ಬಗ್ಗೆ ಕ್ಷಮಿಸುವಂತೆ ಅಮ್ಮನಲ್ಲಿ ಕೇಳಿಕೊಂಡಿದ್ದಾಳೆ. ಈ ಪತ್ರ ಇದೀಗ ಪೊಲೀಸರಿಗೆ ಸಿಕ್ಕಿದೆ.

    ಮೃತ ಯುವತಿಯ ತಾಯಿ ಕಾರ್ಮಿಕರಾಗಿದ್ದು, ನಾನು ಲೋನ್ ಕಟ್ಟಲೆಂದು ತೆಗೆದು ಇಟ್ಟಿದ್ದ ಹಣದಲ್ಲಿ ಮಗಳು ಮೊಬೈಲ್ ಫೋನ್ ಖರೀದಿಸಿದ್ದಳು. ಈ ವಿಚಾರವಾಗಿ ಭಾನುವಾರ ಆಕೆಗೆ ಬೈದಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಇದೇ ವಿಚಾರಕ್ಕೆ ಮನನೊಂದ ಯುವತಿ ಸೋಮವಾರ ಬೆಳಗ್ಗೆ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.

  • ಕಡು ಬಡತನದಲ್ಲೂ ಛಲ ಬಿಡದೇ ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿ

    ಕಡು ಬಡತನದಲ್ಲೂ ಛಲ ಬಿಡದೇ ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿ

    ಬಳ್ಳಾರಿ: ಕಡು ಬಡತನ, ಕಷ್ಟಗಳ ನಡುವೆಯೂ ವಿದ್ಯಾರ್ಥಿಯೊರ್ವ ಛಲ ಬಿಡದೇ ಓದಿ ದ್ವಿತೀಯ ಪಿಯುಸಿ ಶಿಕ್ಷಣ ವಿಭಾಗದಲ್ಲಿ 571 ಅಂಕಗಳನ್ನು ಪಡೆದು ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

    ಹೌದು. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ದಾದು ಖಲಂದರ್ ದ್ವಿತೀಯ ಪಿಯುಸಿಯಲ್ಲಿ 571 ಅಂಕಗಳಿಸಿ ಉತ್ತೀರ್ಣನಾಗುವ ಮೂಲಕ ಬಡ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಬಡತನ ಶಾಪವಲ್ಲ. ಬಡತನವನ್ನು ಮೆಟ್ಟಿ ನಿಂತರೆ ಸಾಧನೆಯ ಹಾದಿ ದೂರವಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ. ನನ್ನ ತಂದೆಯ ಅಕಾಲಿಕ ಮರಣದಿಂದ ತಾಯಿಗೆ ಎದುರಾದ ಸಂಕಷ್ಠ ನನ್ನ ಇಂದಿನ ಸಾಧನೆಗೆ ಕಾರಣ. ಇಂದು ತುಂಬಾ ಖುಷಿಯಾಗುತ್ತಿದೆ ಎಂದು ವಿದ್ಯಾರ್ಥಿ ಸಂತೋಷವನ್ನು ಹಂಚಿಕೊಂಡಿದ್ದಾನೆ. ಇದನ್ನೂ ಓದಿ:ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ

    ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಾದು ತನ್ನ ತಾಯಿ ಕಷ್ಟವನ್ನ ಕಣ್ಣಾರೆ ಕಂಡು ನೊಂದುಕೊಳ್ಳದ ದಿನವೇ ಇಲ್ಲ, ತಾಯಿ ಪಟ್ಟ ಕಷ್ಟಕ್ಕೆ ಪ್ರತಿಫಲವಾಗಿ ದಾದು ದ್ವಿತೀಯ ಪಿಯು ಶಿಕ್ಷಣ ವಿಭಾಗದಲ್ಲಿ 571 ಅಂಕಗಳಿಸುವ ಮೂಲಕ ಉತ್ತಮ ಸಾಧನೆಗೈದಿದ್ದಾನೆ. ಇದನ್ನೂ ಓದಿ:ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ರ್‍ಯಾಂಕ್ ಕಟ್ಟಿಟ್ಟ ಬುತ್ತಿ – ಈ ಕಾಲೇಜಿನ ವಿಶೇಷತೆ ಏನು?

    ಕಳೆದ ಹತ್ತು ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ದಾದು ತಾಯಿ ಆಶ್ರಯದಲ್ಲಿ ಬೆಳೆದನು. ಹೂವಿನಹಡಗಲಿ ಪುರಸಭೆಯಲ್ಲಿ ತಂದೆ ಮಾಬುಸಾಬು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ಆದ್ರೆ ಮಾಬುಸಾಬ್ ಅಕಾಲಿಕ ಮರಣ ಹೊಂದಿದ ನಂತರ ತಾಯಿ ಮಾಬುನ್ನಿ ಕೂಡ ಅದೇ ಪುರಸಭೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮುಂದುವರೆಸಿದರು. ಕಷ್ಟ ಪಟ್ಟು ತನ್ನ ಮಗನಿಗೆ ಶಿಕ್ಷಣ ಕೊಡಿಸಿ, ಆತನ ಸಾಧನೆಗೆ ಬೆನ್ನೆಲುಬಾಗಿ ಜೊತೆಗೆ ನಿಂತರು. ಇದೀಗ ಬಡ ತಾಯಿ ಮತ್ತು ಮಗ ದಾದು ಖಲಂದರ್ ಸಾಧನೆಗೆ ಹೂವಿನಹಡಗಲಿಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.