Tag: mother

  • ತಾಯಿ ಮುಂದೆ 6 ವರ್ಷದ ಬಾಲಕನನ್ನು ಕೊಂದ ಬೀದಿ ನಾಯಿಗಳು

    ತಾಯಿ ಮುಂದೆ 6 ವರ್ಷದ ಬಾಲಕನನ್ನು ಕೊಂದ ಬೀದಿ ನಾಯಿಗಳು

                                                               ಸಾಂದರ್ಭಿಕ ಚಿತ್ರ

    ಭೋಪಾಲ್: ಶುಕ್ರವಾರ ಭೋಪಾಲಿನ ಅವಧಪುರಿ ಪ್ರದೇಶದಲ್ಲಿ ತಾಯಿಯ ಎದುರೇ 6 ವರ್ಷದ ಬಾಲಕನನ್ನು ಬೀದಿ ನಾಯಿಗಳು ಕೊಂದು ಹಾಕಿದ ಶಾಕಿಂಗ್ ಘಟನೆ ನಡೆದಿದೆ.

    6 ವರ್ಷದ ಸಂಜು ಮೃತಪಟ್ಟ ಬಾಲಕ. ಶಿವ ಸಂಗ್ರಮ್ ನಗರದಲ್ಲಿ ಇರವ ಅವರ ಮನೆಯಿಂದ 300 ಮೀಟರ್ ದೂರದಲ್ಲಿ ತೆರೆದ ಮೈದಾನವಿದೆ. ಅಲ್ಲಿ ಆಟವಾಡಲು ಹೋಗಿದ್ದ ಸಂದರ್ಭದಲ್ಲಿ ಕೆಲವು ಬೀದಿ ನಾಯಿಗಳು ಬಾಲಕನ್ನು ಕಚ್ಚಿ ಕೊಂದು ಹಾಕಿವೆ.

    ಮೃತಪಟ್ಟ ಬಾಲಕನ ತಾಯಿ ಗರ್ಭಿಣಿಯಾಗಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕೆಲಸಕ್ಕೆ ಹೋಗಿದ್ದ ತಂದೆ ಮನೆಗೆ ಬಂದು ಮಗ ಎಲ್ಲಿ ಎಂದು ಕೇಳಿದ್ದಾನೆ. ಆ ಸಮಯದಲ್ಲಿ ತಾಯಿ ಮಗನನ್ನು ಕರೆದುಕೊಂಡು ಬರಲು ಹೋದಾಗ ಬಾಲಕನ ಸುತ್ತ 6 ರಿಂದ 7 ಬಿದಿ ನಾಯಿಗಳು ಸುತ್ತುವರಿದು ಕಚ್ಚುತ್ತಿರುವುದನ್ನು ಕಂಡು ಕಿರುಚಾಡಲು ಪ್ರಾರಂಭಿಸಿದ್ದಾಳೆ. ಇದನ್ನು ಕಂಡ ಅಕ್ಕಪಕ್ಕದ ಮನೆಯವರು ಬಂದು ಮಗುವನ್ನು ಕಾಪಾಡಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಸಂಜು ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಈ ಘಟನೆಗೆ ಪುರಸಭೆ ಅವರೇ ಕಾರಣ. ಬೀದಿ ನಾಯಿಗಳ ಸಂಖ್ಯೆ ನಗರದಲ್ಲಿ ಏರಿಕೆಯಾಗಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • SSLCಯಲ್ಲಿ ಮಗ ಶೇ. 60 ಅಂಕಗಳಿಸಿದಕ್ಕೆ ತಾಯಿಯ ಪೋಸ್ಟ್- ಜನರಿಂದ ಮೆಚ್ಚುಗೆ

    SSLCಯಲ್ಲಿ ಮಗ ಶೇ. 60 ಅಂಕಗಳಿಸಿದಕ್ಕೆ ತಾಯಿಯ ಪೋಸ್ಟ್- ಜನರಿಂದ ಮೆಚ್ಚುಗೆ

    ನವದೆಹಲಿ: ಸೋಮವಾರ 10ನೇ ತರಗತಿಯ ಸಿಬಿಎಸ್‍ಸಿ ಫಲಿತಾಂಶ ಹೊರಬಿದಿದ್ದು, 13 ವಿದ್ಯಾರ್ಥಿಗಳು 500ಕ್ಕೆ 499 ಅಂಕಗಳನ್ನು ಪಡೆದಿದ್ದಾರೆ. ಹೀಗಿರುವಾಗ ತಾಯಿಯೊಬ್ಬರು ತನ್ನ ಮಗ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕಗಳಿಸಿದ್ದಾನೆ ಎಂದು ಹಾಕಿದ ಪೋಸ್ಟ್ ವೈರಲ್ ಆಗುತ್ತಿದೆ.

    ಮಕ್ಕಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಬೇಕು, ಶೇ. 90 ಕಿಂತ ಹೆಚ್ಚು ಅಂಕಗಳಿಸಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರಿದ್ದಾರೆ. ಅದರೆ ದೆಹಲಿಯ ಮಹಿಳೆ ತನ್ನ ಮಗ ಶೇ. 60 ಅಂಕಗಳಿಸಿರುವುದಕ್ಕೆ ಖುಷಿಪಟ್ಟು ಅದನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

    ವಂದನಾ ಸುಫಿಯಾ ಕಟೊಚ್ ಎಂಬ ಮಹಿಳೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಗ ಶೇ. 60ರಷ್ಟು ಅಂಕಗಳಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ನನಗೆ ನನ್ನ ಮಗ ಶೇ.60 ಅಂಕಗಳನ್ನು ತೆಗೆದಿರುವುದು ಹೆಮ್ಮೆ ಇದೆ. ಹೌದು ಅವನು ಶೇ.90 ತೆಗೆದಿಲ್ಲ ಅದರೂ ನನಗೆ ಖುಷಿ ಇದೆ. ಏಕೆಂದರೆ ಅವನು ಕೆಲವೊಂದು ವಿಷಯದಲ್ಲಿ ತುಂಬ ದುರ್ಬಲನಾಗಿದ್ದನು. ಅದರೆ ಅದನ್ನು ಮೀರಿ ಅಂಕಗಳಿಸಿರುವುದು ನನಗೆ ಸಂತೋಷವಾಗಿದೆ. ನಿನ್ನ ಕುತೂಹಲ ಮತ್ತು ಬುದ್ಧಿವಂತಿಕೆಯನ್ನು ಜೀವಂತವಾಗಿ ಇಟ್ಟಿಕೊ. ನನ್ನ ಪ್ರೀತಿಯ ಮಗನೇ ನಿನಗೆ ಒಳ್ಳೆಯದು ಅಗಲಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಾಯಿಯ ಈ ಪೋಸ್ಟ್ ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, ಮಗನಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ. ಮತ್ತು ಕೆಲವರು ನಿಮ್ಮಂತಹ ತಾಯಿಯನ್ನು ಪಡೆಯಲು ನಿಮ್ಮ ಮಗ ಪುಣ್ಯ ಮಾಡಿದ್ದಾನೆ ಎಂದು ತಾಯಿಯ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಮೆಟ್ ಗಾಲಾ 2019’ ಕಾರ್ಯಕ್ರಮದಲ್ಲಿ ಧರಿಸಿದ್ದ ಗೌನಿನ ಬೆಲೆ ರಿವೀಲ್ ಆಗಿದೆ. ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಗೌನ್ ಧರಿಸಿದ್ದಾರೆ.

    ಪ್ರಿಯಾಂಕಾ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಡಿಯೋರ್ ವಿನ್ಯಾಸದ ಡ್ರಾಮಾಟಿಕ್ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು.

    ಪ್ರಿಯಾಂಕಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ.ಯ ಗೌನ್ ಧರಿಸಿದ್ದರು. 1500 ಗಂಟೆಗಳ ಕಾಲ ಶ್ರಮವಹಿಸಿ ಈ ಗೌನ್‍ನನ್ನು ಟುಲೆಯಿಂದ ತಯಾರಿಸಲಾಗಿದೆ. ಆ ಗೌನ್‍ಗೆ ಪ್ರಿಯಾಂಕಾ ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರದ ಇಯರಿಂಗ್ ಹಾಕಿದ್ದರು.

    ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಮೆಟ್ ಗಾಲಾ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮಿಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆದರೆ ಈಗ ಪ್ರಿಯಾಂಕ ಲುಕ್ ಬಗ್ಗೆ ಸ್ವತಃ ಅವರ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಿಯಾಂಕಾ ಲುಕ್ ಬಗ್ಗೆ ಅವರ ತಾಯಿ ಮಧು ಚೋಪ್ರಾ ಬಳಿ ಕೇಳಿದ್ದಕ್ಕೆ, “ಇಷ್ಟು ದೂರದಿಂದ ನಾನು ಏನೆಂದು ಪ್ರತಿಕ್ರಿಯಿಸಲಿ. ಪ್ರಿಯಾಂಕಾ ನನ್ನ ಮುಂದೆ ಇದ್ದಿದ್ದರೆ ನಾನು ಅವಳನ್ನು ತಬ್ಬಿಕೊಳ್ಳುತ್ತಿದೆ. ಏಕೆಂದರೆ ಅವಳು ಅಷ್ಟು ಸುಂದರವಾಗಿ ಹಾಗೂ ಸ್ಪೆಷಲ್ ಆಗಿ ಕಾಣಿಸುತ್ತಿದ್ದಳು” ಎಂದು ಹೇಳಿದ್ದಾರೆ.

    ಮೆಟ್ ಗಾಲಾ ಕಾರ್ಯಕ್ರಮಕ್ಕೆ ಪ್ರಿಯಾಂಕ ಪತಿ, ಅಮೆರಿಕದ ಗಾಯಕ ನಿಕ್ ಜೋನಸ್ ಪ್ರಿಸ್ಟಿನ್ ಬಿಳಿ ಬಣ್ಣದ ಸೂಟ್ ಧರಿಸಿ ಪತ್ನಿ ಜೊತೆ ಆಗಮಿಸಿದ್ದರು. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

  • ನಿಶ್ಚಿತಾರ್ಥದ ಬಳಿಕ ಮಗಳು ಎಸ್ಕೇಪ್ – ಚಿಕ್ಕಬಳ್ಳಾಪುರದಲ್ಲಿ ತಂದೆ, ತಾಯಿ ಆತ್ಮಹತ್ಯೆ

    ನಿಶ್ಚಿತಾರ್ಥದ ಬಳಿಕ ಮಗಳು ಎಸ್ಕೇಪ್ – ಚಿಕ್ಕಬಳ್ಳಾಪುರದಲ್ಲಿ ತಂದೆ, ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಇದರಿಂದ ನೊಂದ ಯುವತಿಯ ಪೋಷಕರು ಆತ್ಮಹತ್ಯೆಗೆ ಶರಣಾದ ಘಟನೆ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 37 ವರ್ಷದ ಚೌಡಮ್ಮ ಹಾಗೂ 43 ವರ್ಷದ ಚೌಡಪ್ಪ ಮೃತ ದಂಪತಿ. ದಂಪತಿಯ ಕಿರಿಯ ಪುತ್ರಿ ಮಧುಶ್ರೀಗೆ ಮದುವೆ ನಿಶ್ಚಯವಾಗಿದ್ದು, ಆದರೆ ಮದುವೆಗೂ ಮುನ್ನವೇ ಆಕೆ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಈ ಹಿಂದೆ ಮೊದಲ ಮಗಳು ಕೂಡ ಓಡಿಹೋಗಿ ಪ್ರಿಕರನನ್ನು ಮದುವೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ನೊಂದ ಅಪ್ಪ- ಅಮ್ಮ ನೇಣಿಗೆ ಶರಣಾಗಿದ್ದಾರೆ.

    ಮಗಳು ಮಧುಶ್ರೀ ಮದುವೆಗೆ ಬೇಕಾದ ಸಕಲ ಸಿದ್ಧತೆಗಳಲ್ಲಿ ದಂಪತಿ ತೊಡಗಿಕೊಂಡಿದ್ದರು. ಆದರೆ ಕಳೆದೆರಡು ದಿನಗಳಿಂದ ಮಗಳು ಮಧುಶ್ರೀ ಕಾಣೆಯಾಗಿದ್ದು, ಪ್ರೀತಿಸಿದ ಯುವಕನ ಜೊತೆ ಪರಾರಿಯಾಗಿ ವಿವಾಹವಾಗಿರುವ ವಿಷಯ ತಿಳಿದು ಮನನೊಂದಿದ್ದರು.

    ಕಳೆದ 3 ವರ್ಷಗಳ ಹಿಂದೆಯೂ ಸಹ ಮೊದಲ ಮಗಳು ಅನುಶ್ರೀ ಸಹ ಪ್ರೀತಿಸಿದ ಯುವಕನ ಜೊತೆ ಪರಾರಿಯಾಗಿ ಮದುವೆಯಾಗಿದ್ದಳು. ಮೂಲತಃ ನೇಕಾರ ವೃತ್ತಿಯಲ್ಲಿ ತೊಡಗಿಕೊಂಡು ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದ ದಂಪತಿ ಶನಿವಾರ ಸ್ವಗ್ರಾಮ ಬೇವಿನಹಳ್ಳಿಗೆ ಆಗಮಿಸಿದ್ದಾರೆ. ಮಕ್ಕಳ ಈ ನಿರ್ಧಾರದಿಂದ ಅವಮಾನ ಆಗಿದೆ ಎಂದು ಮನನೊಂದಿದ್ದ ದಂಪತಿ ಗ್ರಾಮದ ಹೊರವಲಯದ ಜಮೀನಿನಲ್ಲಿನ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಂದು ಬೆಳಗ್ಗೆ ಗ್ರಾಮಸ್ಥರು ಮೃತದೇಹ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದು, ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ: ತಾಯಿ-ಮಗ ಸಾವು

    ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ: ತಾಯಿ-ಮಗ ಸಾವು

    – ಜನಿಸಿದ್ದ ಮಗನನ್ನ ನೋಡದೇ ಪ್ರಾಣಬಿಟ್ಟ ಅಪ್ಪ

    ಬಳ್ಳಾರಿ: ಚಲಿಸುತ್ತಿದ್ದ ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆಯ ಇಂದು ಬೆಳಗ್ಗೆ ಕೂಡ್ಲಿಗಿ ತಾಲೂಕಿನ ಮೀನಕೆರೆ ಬಳಿ ನಡೆದಿದೆ.

    ಕೂಡ್ಲಿಗಿ ತಾಲೂಕಿನ ಮಾಡ್ಲಕನಹಳ್ಳಿ ಗ್ರಾಮದ ನಿವಾಸಿ ಹನುಮಕ್ಕ (49) ಹಾಗೂ ಮಂಜುನಾಥ್ (28) ಮೃತಪಟ್ಟ ದುರ್ದೈವಿಗಳು. ಮಂಜುನಾಥ್ ಅವರ ಮಗ ಹರೀಶ್ (5) ಎಂಬುವವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಡ್ಲಕನಹಳ್ಳಿ ಗ್ರಾಮದಿಂದ ಆಂಧ್ರ ಪ್ರದೇಶದ ರಾಯದುರ್ಗಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ.

    ಆಂಧ್ರ ಪ್ರದೇಶದ ರಾಯದುರ್ಗದ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಮಂಜುನಾಥ್ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಮಗು-ತಾಯಿಯ ಆರೋಗ್ಯ ವಿಚಾರಿಸಿಕೊಂಡು ಬರಲು ಇಂದು ಮಂಜುನಾಥ್, ತಾಯಿ ಹಾಗೂ ಹಿರಿಯ ಮಗನ ಜೊತೆಗೆ ಬೈಕ್‍ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದರು.

    ಮಾಡ್ಲಕನಹಳ್ಳಿ ಗ್ರಾಮದಿಂದ ಮೀನಕೆರೆ ಹತ್ತಿರ ಹೋಗುವಾಗ, ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಹನುಮಕ್ಕ ಮೃತ ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಹರೀಶಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್‍ನಲ್ಲಿದ್ದ ಮಂಜುನಾಥ್ ಅವರ ತಂಗಿಯ ಮಗ ಅಜ್ಜಯ್ಯನಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 30 ವರ್ಷಗಳ ಹಿಂದೆ ತಾಯಿ ಮಾಡಿದ ತಪ್ಪಿಗೆ ಈಗ ಮಕ್ಕಳಿಗೆ ಶಿಕ್ಷೆ!

    30 ವರ್ಷಗಳ ಹಿಂದೆ ತಾಯಿ ಮಾಡಿದ ತಪ್ಪಿಗೆ ಈಗ ಮಕ್ಕಳಿಗೆ ಶಿಕ್ಷೆ!

    ಚಾಮರಾಜನಗರ: ಹೆತ್ತ ತಾಯಿಯನ್ನೇ ಮಾತನಾಡಿಸುವಂತಿಲ್ಲ, ಆಕೆ ಸತ್ತರೂ ಹೋಗುವಂತಿಲ್ಲ. ಇಷ್ಟೇ ಅಲ್ಲ ಯಾವುದೇ ಶುಭ ಕಾರ್ಯಗಳಿಗೂ ಇವರಿಗೆ ಪ್ರವೇಶವಿಲ್ಲ. ಸಂಬಂಧಿಕರ ಜೊತೆ ಅಕ್ಕ ಪಕ್ಕದವರ ಜೊತೆಯೂ ಮಾತನಾಡುವಂತಿಲ್ಲ ಇದು ಚಾಮರಾಜನಗರದಲ್ಲಿ ಕುಟುಂಬವೊಂದಕ್ಕೆ ಹೇರಲಾಗಿರುವ ಸಾಮಾಜಿಕ ಬಹಿಷ್ಕಾರ.

    ಹೌದು. ಚಾಮರಾಜನಗರದ ಮೇದರ ಬೀದಿಯ ಪುಟ್ಟಸ್ವಾಮಿ ಎಂಬವರ ಕುಟುಂಬಕ್ಕೆ ಅವರ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. 30 ವರ್ಷಗಳ ಹಿಂದೆ ಪುಟ್ಟಸ್ವಾಮಿಯವರ ತಾಯಿ ಮಾಡಿದ ತಪ್ಪಿಗೆ ಅವರ ಮಕ್ಕಳ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ.

    ತಾಯಿ ಮಾಡಿದ್ದ ತಪ್ಪೇನು?
    ಪುಟ್ಟಸ್ವಾಮಿ ಅವರ ತಾಯಿ 30 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಯಾಗಿ ಓಡಿ ಹೋಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ಮಕ್ಕಳಿಗೆ ಬಹಿಷ್ಕಾರ ಹಾಕಲಾಗಿದೆ. ಹಿರಿಯ ಮಗ ನಾಗೇಂದ್ರ ಕುಟುಂಬ ದಂಡ ಕಟ್ಟಿ ಕುಲ ಸೇರಿಕೊಂಡಿದೆ. ಆದರೆ ಕೂಲಿ ನಾಲಿ ಮಾಡಿ ಬದುಕುವ ಇನ್ನೊಬ್ಬ ಮಗ ಪುಟ್ಟಸ್ವಾಮಿ ಕುಟುಂಬ ದಂಡ ಕಟ್ಟಲಾರದೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ.

  • ಆಸ್ತಿಗಾಗಿ ಹೆತ್ತವರನ್ನೇ ಕೂಡಿ ಹಾಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಮುಖಂಡ!

    ಆಸ್ತಿಗಾಗಿ ಹೆತ್ತವರನ್ನೇ ಕೂಡಿ ಹಾಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಮುಖಂಡ!

    – ಸಹೋದರಿಯರಿಂದ ಸಹೋದರನ ಮೇಲೆ ಆರೋಪ

    ಬೆಂಗಳೂರು: ಆಸ್ತಿಯನ್ನು ಬರೆದುಕೊಡದ್ದಕ್ಕೆ ಸಿಟ್ಟಾಗಿ ತಂದೆ, ತಾಯಿಯನ್ನು ಗೃಹ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪ ಕಾಂಗ್ರೆಸ್ ಮುಖಂಡನ ಮೇಲೆ ಕೇಳಿ ಬಂದಿದೆ.

    ಸಹೋದರನಾದ ತೇಜುಮೂರ್ತಿ ನಮ್ಮ ತಂದೆ ಹಿರಪ್ಪ(80), ತಾಯಿ ಲಕ್ಷ್ಮಮ್ಮ(67) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ನಿವಾಸಿ ತೇಜುಮೂರ್ತಿ ಆಸ್ತಿ ನೀಡದ್ದಕ್ಕೆ ಪೋಷಕರನ್ನು ಗೃಹ ಬಂಧನದಲ್ಲಿ ಇರಿಸಿದ್ದಾನೆ. ಈ ವಿಚಾರವನ್ನು ಪ್ರಶ್ನಿಸಲು ಬಂದಿದ್ದಕ್ಕೆ ನಮ್ಮ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸಹೋದರಿಯರು ಹೇಳಿದ್ದಾರೆ. ತೇಜುಮೂರ್ತಿ ಹಲ್ಲೆ ನಡೆಸುವ ದೃಶ್ಯ ಮೊಬೈಲಿನಲ್ಲಿ ಸೆರೆ ಆಗಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಿಸಿಸಲು ಹಿರಪ್ಪನ ಪುತ್ರಿಯರು ಹೋಗಿದ್ದರು. ಆದರೆ ತೇಜುಮೂರ್ತಿಯ ಒತ್ತಡಕ್ಕೆ ಮಣಿದ ಪೊಲೀಸರು ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಹಿರಪ್ಪನ ಪುತ್ರಿ ಆರೋಪಿಸಿದ್ದಾರೆ.

    ಸದ್ಯ ಪುತ್ರಿಯರು ಪೋಷಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ತೋಟಕ್ಕೆ ಹೋದ ತಾಯಿ-ಮಗಳನ್ನು ನಡುರಸ್ತೆಯಲ್ಲೇ ಕೊಲೆಗೈದ್ರು!

    ತೋಟಕ್ಕೆ ಹೋದ ತಾಯಿ-ಮಗಳನ್ನು ನಡುರಸ್ತೆಯಲ್ಲೇ ಕೊಲೆಗೈದ್ರು!

    ಮಡಿಕೇರಿ: ನಡುರಸ್ತೆಯಲ್ಲಿ ತಾಯಿ-ಮಗಳನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆಯ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    45 ವರ್ಷದ ತಾಯಿ ಕವಿತಾ ಹಾಗೂ 16 ವರ್ಷದ ಜಗಶ್ರೀ ಕೊಲೆಯಾದ ದುರ್ದೈವಿಗಳು. 10 ವರ್ಷದ ಹಿಂದೆ ಪತಿಯನ್ನ ಕಳೆದುಕೊಂಡಿದ್ದ ಕವಿತಾ, ಧೈರ್ಯಗುಂದದೆ ತಂದೆಯಿಲ್ಲದ ಕೊರಗು ಇಬ್ಬರು ಮಕ್ಕಳಿಗೂ ಬರಬಾರದು ಎಂಬ ರೀತಿಯಲ್ಲಿ ಸಾಕುತ್ತಿದ್ದರು. ತಮ್ಮ ಪಾಲಿಗೆ ಬಂದಿದ್ದ ಸುಮಾರು 8 ಎಕರೆ ಜಾಗದಲ್ಲಿ ಕಾಫಿ ಹಾಕಿ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದರು.

    ಮಂಗಳವಾರ ತಾಯಿ-ಮಗಳು ತೋಟದತ್ತ ತೆರಳಿದ್ದರು. ಸಂಜೆಯಾದರೂ ತೋಟಕ್ಕೆ ಹೋದ ಅಕ್ಕ-ಅಮ್ಮ ಬಾರದಿಂದ ಗಾಬರಿಗೊಂಡ ಪುತ್ರ ಮದನ್ ರಾಜ್ ಅವರನ್ನು ಕರೆದುಕೊಂಡು ಬರಲು ಹೋಗಿದ್ದಾನೆ. ಈ ವೇಳೆ ತೋಟದ ಮಾರ್ಗ ಮಧ್ಯೆಯೇ ಅಕ್ಕ-ಅಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ಕಂಡ ಮದನ್, ಭಯಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮಸ್ಥರು ಬರೋವಷ್ಟರಲ್ಲಿ ತಾಯಿ-ಮಗಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

    ಸೋದರ ಮತ್ಸರ: ಪತಿ ಕಳೆದುಕೊಂಡ ಬಳಿಕ ಕವಿತಾ ತಮ್ಮ ಪಾಲಿಗೆ ಬಂದ ಜಮೀನಿನಲ್ಲಿ ಕಾಫಿ ತೋಟ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈ ನೆಮ್ಮದಿಯ ಜೀವನ ಕವಿತಾರ ಪತಿ ಸೋದರನ ಕಣ್ಣು ಕೆಂಪು ಮಾಡಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ವ್ಯಕ್ತಿ ಕವಿತಾರ ತೋಟದ ಪಕ್ಕದಲ್ಲಿಯೇ ಮನೆಯ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಓಡಾಡಲು ದಾರಿ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರಂತೆ. ಈ ಪ್ರಕರಣ ಸದ್ಯ ಕೋರ್ಟ್ ನಲ್ಲಿದೆ. ಇದೇ ವಿಚಾರವಾಗಿ ಹಲವು ಬಾರಿ ಎರಡು ಕುಟುಂಬದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

    ಘಟನಾ ಸ್ಥಳಕ್ಕೆ ಸೋಮವಾರ ಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

  • ಅಮ್ಮನ ಕಳೆದುಕೊಂಡ ನಾಲ್ಕನೇ ತರಗತಿ ಬಾಲಕಿ- ಅಪ್ಪನಿಂದ್ಲೇ ನಿರಂತರ ಅತ್ಯಾಚಾರ!

    ಅಮ್ಮನ ಕಳೆದುಕೊಂಡ ನಾಲ್ಕನೇ ತರಗತಿ ಬಾಲಕಿ- ಅಪ್ಪನಿಂದ್ಲೇ ನಿರಂತರ ಅತ್ಯಾಚಾರ!

    ಚಂಡೀಗಢ: ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪಾಪಿ ತಂದೆಯನ್ನು ಹರಿಯಾಣದ ಗುರುಗ್ರಾಮ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಬಾಲಕಿಗೆ 8 ವರ್ಷವಾಗಿದ್ದು, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ದಿನದಿಂದ ದಿನಕ್ಕೆ ಬಾಲಕಿಯ ವರ್ತನೆಯಲ್ಲಿ ಬದಲಾವಣೆ ಕಂಡ ಪಕ್ಕದ ಮನೆಯವರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಂದೆಯ ಕೃತ್ಯ ಬೆಳಕಿಗೆ ಬಂದಿದೆ.

    ಐದು ದಿನಗಳಿಂದ ಬಾಲಕಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಪ್ರತಿನಿತ್ಯ ಚುರುಕಿನಿಂದ ಓಡಾಡುತ್ತಿದ್ದ ಬಾಲಕಿಯನ್ನು ಗಮನಿಸಿದ ನೆರೆಹೊರೆಯವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬಾಲಕಿ ತನ್ನ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿರುವುದರ ಬಗ್ಗೆ ಬಿಚ್ಚಿಟ್ಟಿದ್ದಾಳೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಪರಾಧ ವಿಭಾಗದ ಎಸಿಪಿ ಶಂಶೀರ್ ಸಿಂಗ್ ಹೇಳಿದ್ದಾರೆ.

    ಬಾಲಕಿ ತನ್ನ ತಂದೆಯ ಜೊತೆ ಪಟೌಡಿ ಪ್ರದೇಶದಲ್ಲಿ ವಾಸವಾಗಿದ್ದಳು. ಈಕೆ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ಅಪ್ಪನ ಜೊತೆ ವಾಸ ಮಾಡುತ್ತಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ತಂದೆ ಕಳೆದ ಎರಡು ತಿಂಗಳಿನಿಂದ ತನ್ನ ಪುಟ್ಟ ಕಂದಮ್ಮಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಮಾಡುವ ಮೂಲಕ ಮೃಗೀಯ ವರ್ತನೆ ತೋರಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಅಪ್ಪ ಕುಡಿದು ಬಂದು ಪ್ರತಿ ದಿನ ರಾತ್ರಿ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಕಳೆದ ವಾರವೂ ಅವರು ಎರಡು ಬಾರಿ ರೇಪ್ ಮಾಡಿದ್ದರು ಎಂದು ಬಾಲಕಿ ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

    ಘಟನೆ ಸಂಬಂಧಿಸಿದಂತೆ ಬಾಲಕಿಯ ತಂದೆಯನ್ನು ಬಂಧಿಸಲಾಗಿದ್ದು, ಸದ್ಯ ಬಾಲಕಿಯನ್ನು ಆಕೆಯ ಅಪ್ಪನ ಕೈಯಿಂದ ರಕ್ಷಣೆ ಮಾಡಿದ್ದು, ಆಕೆಯನ್ನು ಕೌನ್ಸಿಲಿಂಗ್ ಮಾಡಲು ಕಳುಹಿಸಲಾಗಿದೆ.

  • ಅಚ್ಚರಿಯಾದ್ರೂ ಸತ್ಯ- 39ನೇ ವಯಸ್ಸಿಗೆ 38 ಮಕ್ಕಳನ್ನ ಹೆತ್ತ ಮಹಾತಾಯಿ

    ಅಚ್ಚರಿಯಾದ್ರೂ ಸತ್ಯ- 39ನೇ ವಯಸ್ಸಿಗೆ 38 ಮಕ್ಕಳನ್ನ ಹೆತ್ತ ಮಹಾತಾಯಿ

    ರಿಯಾಮ್ ನಬಾಟಾಂಜಿ ಎಂಬ 39 ವರ್ಷದ ಮಹಿಳೆ ಬರೋಬ್ಬರಿ 38 ಮಕ್ಕಳನ್ನು ಪಡೆದಿದ್ದಾರೆ. ಉಗಾಂಡದ ನಿವಾಸಿಯಾಗಿರುವ ಮರಿಯಾಮ್ ಒಟ್ಟು 38 ಮಕ್ಕಳನ್ನು ಏಕಾಂಗಿಯಾಗಿ ಸಲಹುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಮರಿಯಾಮ್ ಳನ್ನು ಪತಿ ಬಿಟ್ಟು ಹೋಗಿದ್ದು, ಇದೀಗ ಎಲ್ಲ ಮಕ್ಕಳು ತಾಯಿಯ ಆರೈಕೆಯಲ್ಲಿವೆ.

    12ನೇ ವಯಸ್ಸಿನಲ್ಲಿಯೇ ಸಾಂಸರಿಕ ಜೀವನಕ್ಕೆ ಕಾಲಿಟ್ಟ ಮರಿಯಾಮ್ ಐದಕ್ಕಿಂತ ಹೆಚ್ಚು ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಾಲ್ಕು ಬಾರಿ ತ್ರಿವಳಿ ಮತ್ತು ಐದು ಬಾರಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ಉತ್ತರ ಕಂಪಾಲಾದಿಂದ 50 ಕಿ.ಮೀ. ದೂರದಲ್ಲಿರುವ ಕಾಫಿ ತೋಟಗಳ ಬಳಿಯ ಹಳ್ಳಿಯೊಂದರ ನಾಲ್ಕು ಪುಟ್ಟ ಮನೆಯಲ್ಲಿ ಮರಿಯಾಮ್ ವಾಸವಾಗಿದ್ದಾರೆ. ಮೊದಲಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ಮರಿಯಾಮ್ ಸ್ಥಳೀಯ ವೈದ್ಯರೊಬ್ಬರನ್ನ ಸಂಪರ್ಕಿಸಿದ್ದರು. ಅಂಡಾಶಯ ಸಾಮನ್ಯ ಗಾತ್ರಕ್ಕಿಂತ ದೊಡ್ಡದಾಗಿದೆ. ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿದ್ದರಂತೆ. ಅಂದಿನಿಂದ ಮಕ್ಕಳು ಬರತೊಡಗಿವೆ.

    ಎರಡೂವರೆ ವರ್ಷಗಳ ಹಿಂದೆ ಕೊನೆಯ ಬಾರಿ ಅವಳಿ ಮಕ್ಕಳಿಗೆ ಮರಿಯಾಮ್ ಜನ್ಮ ನೀಡಿದ್ದರು. ಅದರಲ್ಲಿ ಒಂದು ಮಗು ಸೇರಿದಂತೆ ಒಟ್ಟು 6 ಮಕ್ಕಳು ಸಾವನ್ನಪ್ಪಿವೆ. ಕಣ್ಣೀರಿನಲ್ಲಿ ನನ್ನ ಜೀವನ ಸಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿಯೇ ಮದುವೆ, ಇಷ್ಟು ಮಕ್ಕಳ ಪಾಲನೆಗಾಗಿ ಕೆಲಸ ಮಾಡುವುದು. ಗಂಡ ನಬಾಟಂಜಿ ಮಕ್ಕಳನ್ನು ನೋಡಿಕೊಳ್ಳಲಾಗದೇ ಬಿಟ್ಟು ಹೋದ ಎಂದು ಮರಿಯಾಮ್ ಕಣ್ಣೀರು ಹಾಕುತ್ತಾರೆ.

    ಮನೆಯ ಎಲ್ಲ ಕೆಲಸಗಳನ್ನು ಮಾಡುವುದರ ಜೊತೆಗೆ ಹೊರಗಡೆ ಹೋಗಿ ದುಡಿಯುತ್ತಾರೆ. ಬಟ್ಟೆ-ಪಾತ್ರೆ ತೊಳೆಯುವುದು, ಅಡುಗೆ ಮಾಡುವದರಲ್ಲಿ ಅಮ್ಮನಿಗೆ ಸಹಾಯ ಮಾಡುತ್ತೇನೆ ಎಂದು 23 ವರ್ಷದ ಹಿರಿಯ ಮಗ ಕಿಬುಕಾ ಹೇಳುತ್ತಾನೆ.

    ಅಜ್ಜಿ ನೀಡಿದ ಚಿಕ್ಕ ಭೂಮಿಯಲ್ಲಿ ಇಟ್ಟಿಗೆಗಳಿಂದ ನಾಲ್ಕು ಚಿಕ್ಕ ಕೋಣೆಗಳನ್ನು ಇಟ್ಟಿಗೆಗಳಿಂದ ಕಟ್ಟಿಕೊಂಡಿದ್ದೇನೆ. 38 ಮಕ್ಕಳನ್ನು ಸಾಕುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. 12 ಮಕ್ಕಳು ಬೆಡ್ ಮೇಲೆ ಒಂದು ಕೋಣೆಯಲ್ಲಿ ಮಲಗಿದ್ರೆ, ಉಳಿದು ನೆಲದ ಮೇಲೆ ಹಾಸಿದ ದೊಡ್ಡ ಹಾಸಿಗೆಯಲ್ಲಿ ಹೊಂದಿಕೊಂಡು ಮಲಗುತ್ತಾರೆ. ಒಂದು ದಿನಕ್ಕೆ 25 ಕೆ.ಜಿ. ಮೆಕ್ಕೆಜೋಳದ ಹಿಟ್ಟು ಬಳಕೆ ಆಗುತ್ತದೆ. ಮಾಂಸ ಅಥವಾ ಮೀನೂಟ ತುಂಬಾ ಕಡಿಮೆ. ಇನ್ನು ಕೆಲಸದ ವೇಳಾ ಪಟ್ಟಿಯನ್ನು ನಾವೆಲ್ಲ ಸಿದ್ಧ ಮಾಡಿಕೊಳ್ಳುತ್ತೇವೆ. ಹೀಗೆ ಮನೆಯ ನಿರ್ವಹಣೆಯ ಮರಿಯಾಮ್ ಹೇಳಿಕೊಂಡರು.

    ಪ್ರತಿ ಶನಿವಾರ ಎಲ್ಲರೂ ಒಟ್ಟಾಗಿ ಮನೆಯ ಕೆಲಸವನ್ನು ಮಾಡುತ್ತೇವೆ. ಕೆಲ ಮಕ್ಕಳು ಪದವಿ ಪಡೆದು ಉದ್ಯೋಗದಲ್ಲಿದ್ದು, ಕೆಲವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ನನ್ನ ಬಾಲ್ಯದಲ್ಲಿಯೇ ಸಂಸಾರ ಜೀವನಕ್ಕೆ ಕಾಲಿಟ್ಟ ನಾನು ಒಂದು ದಿನವೂ ಖುಷಿಯನ್ನು ಕಂಡಿಲ್ಲ. ಮಕ್ಕಳ ಲಾಲನೆ-ಪಾಲನೆ, ಸಂಸಾರ ನಿರ್ವಹಣೆ ಮಾಡುತ್ತಾ ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ಮಕ್ಕಳನ್ನು ಸಂತೋಷವಾಗಿ ಇಡುವುದೇ ನನ್ನ ಜೀವನದ ಗುರಿ ಎಂದು ಮರಿಯಾಮ್ ಹೇಳಿದ್ದಾರೆ.