Tag: mother

  • ಮಾವಿನ ಹಣ್ಣು ನನಗೂ ಉಳಿಸಿ ಎಂದಿದ್ದಕ್ಕೆ ತಾಯಿ ಮೇಲೆ ಮಗ, ಸೊಸೆಯಿಂದ ಹಲ್ಲೆ

    ಮಾವಿನ ಹಣ್ಣು ನನಗೂ ಉಳಿಸಿ ಎಂದಿದ್ದಕ್ಕೆ ತಾಯಿ ಮೇಲೆ ಮಗ, ಸೊಸೆಯಿಂದ ಹಲ್ಲೆ

    ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಪತ್ನಿ ಜೊತೆ ಸೇರಿಕೊಂಡು ಮಗನೊಬ್ಬ ತನ್ನ ತಾಯಿ ಮೇಲೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ.

    ಗೌರಮ್ಮನ ಮೇಲೆ ಸೊಸೆ ಯಶೋಧ ಹಾಗೂ ಪುತ್ರ ರಾಜೇಶ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗೌರಮ್ಮ ಮೇಲಿನ ಹಲ್ಲೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ನಡೆದಿದ್ದೇನು?:
    ಗೌರಮ್ಮ ಅವರ ತೋಟದಲ್ಲಿ ಎರಡು ಮಾವಿನ ಮರಗಳಿವೆ. ಈ ಮರದಿಂದ ಸೊಸೆ ಹಾಗೂ ಮಗ ಮಾವಿನ ಹಣ್ಣುಗಳನ್ನು ಕೀಳುತ್ತಿದ್ದರು. ಈ ಸಂದರ್ಭದಲ್ಲಿ ಗೌರಮ್ಮ ಅವರು ತನಗೂ ಸ್ವಲ್ಪ ಉಳಿಸಿ ಎಂದು ಹೇಳಿದ್ದಾರೆ. ಅತ್ತೆಯ ಮಾತಿನಿಂದ ಕೆರಳಿದ ಸೊಸೆ ಯಶೋಧ ಮನ ಬಂದಂತೆ ಥಳಿಸಿದ್ದಾಳೆ. ತಾಯಿ ಮೇಲೆ ಪತ್ನಿ ಹಲ್ಲೆ ಮಾಡುವಾಗ ಮಗ ತಡೆಯದೇ ತಾನೂ ಅಮ್ಮನ ಮೇಲೆ ಹಲ್ಲೆಗೆ ಸಹಕರಿಸಿದ್ದಾನೆ.

    ಅಲ್ಲದೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೊಸೆ, ತನ್ನ ಪತಿಯೆದುರೇ ಆತನ ತಾಯಿಗೆ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಗೌರಮ್ಮ ಕೆಳಕ್ಕೆ ಬಿದ್ದಿದ್ದಾರೆ. ಆದರೂ ಬಿಡದ ಸೊಸೆ, ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾಳೆ.

    ಹಲ್ಲೆಯಿಂದ ಅಸ್ವಸ್ಥಗೊಂಡ ವೃದ್ಧೆಗೆ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ತಾಯಿ ಜೊತೆ ಸೇರಿ ಮಗಳಿಂದಲೇ ತಂದೆಯ ಬರ್ಬರ ಹತ್ಯೆ!

    ತಾಯಿ ಜೊತೆ ಸೇರಿ ಮಗಳಿಂದಲೇ ತಂದೆಯ ಬರ್ಬರ ಹತ್ಯೆ!

    – ಪ್ರಿಯಕರನಿಂದಲೂ ಕೊಲೆಗೆ ಸಹಾಯ

    ಬಾಗಲಕೋಟೆ: ತಾಯಿ ಜೊತೆ ಸೇರಿ ತಂದೆಯನ್ನೇ ಮಗಳು ಕೊಲೆ ಮಾಡಿದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 56 ವರ್ಷದ ಮಹಾದೇವ ಕಲ್ಯಾಣಿ ಎಂಬವರೇ ಕೊಲೆಯಾದ ದುರ್ದೈವಿ. ಮಹದೇವನ ಪತ್ನಿ ಬೋರವ್ವ, ಮಗಳು ಅನ್ನಪೂರ್ಣ, ಪ್ರಿಯಕರ ಪರಶು ಈರಗಾರ ಸೇರಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಮಗಳ ಅನೈತಿಕ ಸಂಬಂಧದ ಬಗ್ಗೆ ತಂದೆಗೆ ಗೊತ್ತಾದ ಹಿನ್ನೆಲೆಯಲ್ಲಿ ಪ್ರಿಯಕರನ ಸಹಾಯದಿಂದ ತಾಯಿಯ ಜೊತೆ ಸೇರಿ ಮಗಳು ತಂದೆಯನ್ನೇ ಕೊಲೆ ಮಾಡಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಕಳೆದ ಮೇ 17ರಂದು ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಮಹದೇವನ ತಲೆಗೆ ಬಲವಾದ ಮಾರಕಾಸ್ತ್ರದಿಂದ ಹೊಡೆದು ಆರೋಪಿಗಳು ಕೊಲೆ ಮಾಡಿದ್ದಾರೆ. ಬಳಿಕ ಮನೆಯ ಸಮೀಪದ ತಮ್ಮ ಜಮೀನಿನಲ್ಲಿ ಶವ ಹೂತಿಟ್ಟಿದ್ದಾರೆ. ಕೊಲೆಯಾದ ಮಹದೇವ ವಾರ ಕಳೆದರೂ ಗ್ರಾಮಸ್ಥರಿಗೆ ಕಾಣದ ಹಿನ್ನೆಲೆಯಲ್ಲಿ ಮೃತನ ಸಂಬಂಧಿಕರು ಜಮಖಂಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಹೂತಿಟ್ಟ ಶವವನ್ನು ಅಧಿಕಾರಿಗಳು ಹೊರ ತೆಗೆದಿದ್ದಾರೆ. ಅಲ್ಲದೆ ಆರೋಪಿಗಳಾದ ತಾಯಿ-ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂರನೇ ಆರೋಪಿ ಪರಶುಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಭಿಕ್ಷೆ ಬೇಡಿ 6ರ ಬಾಲಕಿಯಿಂದ ಅನಾರೋಗ್ಯಕ್ಕೀಡಾದ ಅಮ್ಮನ ಆರೈಕೆ!

    ಭಿಕ್ಷೆ ಬೇಡಿ 6ರ ಬಾಲಕಿಯಿಂದ ಅನಾರೋಗ್ಯಕ್ಕೀಡಾದ ಅಮ್ಮನ ಆರೈಕೆ!

    ಕೊಪ್ಪಳ: ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಮರೆಯುವ ಈ ಕಾಲದಲ್ಲಿ ಜಗತ್ತಿನ ಜ್ಞಾನವನ್ನೇ ಅರಿಯದ ಮಗ್ಧ ಬಾಲಕಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಆರೈಕೆಯನ್ನು ಮಾಡುತ್ತಿದ್ದಾಳೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಮನಕಲುಕುವ ದೃಶ್ಯ ಕಂಡು ಬಂದಿದೆ.

    ಕಾರಟಗಿ ತಾಲೂಕಿನ ಸಿದ್ದಾಪುರದ ದುರ್ಗಮ್ಮ ಎಂಬವರು ಕಳೆದ ನಾಲ್ಕು ದಿನಗಳ ಹಿಂದೆ ತಲೆ ನೋವು ಹಾಗೂ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ದುರ್ಗಮ್ಮ ಅವರ ಪತಿ ಅರ್ಜುನ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ನಾಳೆ ಬರುತ್ತೇನೆಂದು 6 ವರ್ಷದ ಮಗಳು ಭಾಗ್ಯಶ್ರೀಗೆ ಹೇಳಿ ಹೋಗಿದ್ದನು. ಆದರೆ ಆಸ್ಪತ್ರೆಯಲ್ಲಿ ಪತ್ನಿ, ಮಗಳನ್ನು ಬಿಟ್ಟು ಹೋದ ಅರ್ಜುನ್ ಮತ್ತೆ ಹಿಂದಿರುಗಲಿಲ್ಲ. ಹೀಗಾಗಿ ಒಬ್ಬಂಟಿಯಾದ ತಾಯಿಗೆ ಬಾಲಕಿ ಭಾಗ್ಯಶ್ರೀ ಆಸೆರೆಯಾಗಿದ್ದಾಳೆ.

    ತಂದೆ ತನ್ನನ್ನು ಹಾಗೂ ತಾಯಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಕಾರಣ ಭಾಗ್ಯಶ್ರೀ ಆಸ್ಪತ್ರೆಯ ಆವರಣ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದಾಳೆ. ಬಳಿಕ ಬಂದ ಹಣದಲ್ಲಿ ತಾಯಿಗೆ ಬೇಕಾದ ಎಳನೀರು, ಹಾಲು ಇನ್ನಿತರ ಪದಾರ್ಥಗಳನ್ನು ತಂದು ಕೊಡುತ್ತಿದ್ದಾಳೆ. ಅಲ್ಲದೆ ಜನರು ಅನ್ನ ಅಥವಾ ರೊಟ್ಟಿಯನ್ನು ಕೊಟ್ಟರೆ ಅದನ್ನು ತನ್ನ ತಾಯಿಗೆ ತಿನ್ನಿಸುತ್ತಾಳೆ. ಊಟ ಮಾಡಿಸುವುದಲ್ಲದೇ ತಾಯಿಯ ತಲೆ ಬಾಚುವುದು, ಸ್ವಚ್ಛಗೊಳಿಸುವ ಕೆಲಸ ಕೂಡ ಭಾಗ್ಯಶ್ರೀ ಮಾಡುತ್ತಿದ್ದಾಳೆ.

    ದುರ್ಗಮ್ಮರಿಗೆ ಮಗಳಲ್ಲದೇ ನಾಲ್ಕನೇ ತರಗತಿ ಓದುತ್ತಿರುವ ವೆಂಕಟೇಶ್ ಎಂಬ ಮಗ ಕೂಡ ಇದ್ದಾನೆ. ಭಾಗ್ಯಶ್ರೀ 1ನೇ ತರಗತಿ ಓದುತ್ತಿದ್ದು, ತನ್ನ ತಾಯಿಯ ಆರೈಕೆ ಮಾಡುತ್ತಿದ್ದಾಳೆ. ದುರ್ಗಮ್ಮ ಅವರ ಪರಿಸ್ಥಿತಿ ನೋಡಿ ಆಸ್ಪತ್ರೆಗೆ ದಾಖಲಾಗಿರುವ ಬೇರೆ ರೋಗಿಗಳು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಪತಿ ಅರ್ಜುನ್ ಎರಡನೇ ಮದುವೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದುರ್ಗಮ್ಮ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ. ದುರ್ಗಮ್ಮರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಎಂದು ವೈದ್ಯರು ಮನೆಗೆ ಹೋಗಲು ತಿಳಿಸಿದ್ದಾರೆ ಎನ್ನಲಾಗಿದೆ.

    ಇತ್ತ ಹಣವಿಲ್ಲದ ಕಾರಣ ಭಾಗ್ಯಶ್ರೀ ಭಿಕ್ಷೆ ಬೇಡಿ ತನ್ನ ತಾಯಿ ದುರ್ಗಮ್ಮರ ಆರೈಕೆ ಮಾಡುತ್ತಿದ್ದಾಳೆ.

  • ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ಜೈಪುರ: ರಾತ್ರಿ ವೇಳೆ ನಿದ್ದೆ ಗುಂಗಿನಲ್ಲಿ ತಾಯಿಯೊಬ್ಬರು 6 ತಿಂಗಳ ಮಗುವನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆಗೈದ ಭಯಾನಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    35 ವರ್ಷದ ಆರೋಪಿ ದೀಪಿಕಾ ಗುಜ್ಜಾರ್ ಈ ಕೃತ್ಯವೆಸೆಗಿದ್ದಾರೆ. ಈ ಘಟನೆಯೂ ಭಾನುವಾರ ನಡೆದಿದ್ದು, ತಾಯಿಯೇ ಆರೋಪಿ ಎನ್ನುವುದು ಮಂಗಳವಾರ ತಿಳಿದಿದೆ. ಭಾನುವಾರ ರಾತ್ರಿ ಪತಿ ಹಾಗೂ ಮಗುವಿನ ಜೊತೆ ಮನೆಯ ಎರಡನೇ ಮಹಡಿಯಲ್ಲಿ ಆರೋಪಿ ಮಲಗಿದ್ದಳು. ಆದೇನಾಯ್ತೋ ಗೊತ್ತಿಲ್ಲ. ರಾತ್ರಿ ನಿದ್ದೆಯಿಂದ ಎದ್ದ ಮಹಿಳೆ ಮಗುವನ್ನು ಎತ್ತುಕೊಂಡು ಹೋಗಿ ಎರಡನೇ ಮಹಡಿಯಯಲ್ಲಿರುವ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ತನ್ನ ಪಾಡಿಗೆ ವಾಪಸ್ ಬಂದು ಮಲಗಿದ್ದಾಳೆ.

    ರಾತ್ರಿ 1.30 ಗಂಟೆ ಸುಮಾರಿಗೆ ಪತಿಗೆ ಎಚ್ಚರವಾದಾಗ ಮಗುವನ್ನು ಕಾಣದೆ ಗಾಬರಿಯಾಗಿದ್ದಾರೆ. ಈ ಬಗೆ ಪತ್ನಿ ಬಳಿ ಕೇಳಿದ್ದಾನೆ. ಆಕೆ ಕೂಡ ನನಗೆ ಗೊತ್ತಿಲ್ಲ ಎಂದಿದ್ದಾಳೆ. ನಂತರ ಮನೆಮಂದಿ ಎಲ್ಲರೂ ಸೇರಿ ರಾತ್ರಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಜ್ಜಿಗೆ ನೀರಿನ ಟ್ಯಾಂಕ್‍ನಲ್ಲಿ ಮುಳುಗಿರುವ ಮಗು ಕಾಣಿಸಿದ್ದು, ಮಗುವನ್ನು ರಕ್ಷಿಸುವ ಮುನ್ನವೇ ಕಂದಮ್ಮ ಸಾವನ್ನಪ್ಪಿತ್ತು.

    ಸೀತಾರಾಮ್ ಗುಜ್ಜಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಆರೋಪಿ ತಾಯಿ ಗೃಹಿಣಿಯಾಗಿದ್ದರು. ಸೀತಾರಾಮ್ ದಂಪತಿ ಮನೆಯಲ್ಲಿ ಪೋಷಕರು ಹಾಗೂ ಅಜ್ಜಿ ಜತೆ ವಾಸವಾಗಿದ್ದರು. ಈ ಕೃತ್ಯದ ಬಗ್ಗೆ ಬೋರೆಖೇಡಾ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದರು. ಆಗ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿಯೇ ಕೊಲೆ ಮಾಡಿರುವುದು ತಿಳಿದು ಬಂದಿದ್ದು, 302ರ ಕಾಯ್ದೆಯ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತಾಯಿಯೇ ಕೊಲೆ ಮಾಡಿರುವ ಬಗ್ಗೆ ತಿಳಿದ ಬಳಿಕ ಆಕೆಯನ್ನು ಪ್ರಶ್ನಿಸಿದಾಗ ನಿದ್ದೆಯಿಂದ ಎದ್ದಿದ್ದಾಗಲಿ, ಮಗುವನ್ನು ತೆಗೆದುಕೊಂಡು ಹೋಗಿ ನೀರಿನ ಟ್ಯಾಂಕ್‍ನಲ್ಲಿ ಹಾಕಿ ಬಂದ ವಿಚಾರ ನನಗೆ ಗೊತ್ತಾಗಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಈ ಕೃತ್ಯ ಎಸಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಸದ್ಯ ಈ ಬಗ್ಗೆ ಪೊಲೀಸರು  ತನಿಖೆ ನಡೆಸುತ್ತಿದ್ದು, ಆರೋಪಿಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂಬುದು ತಿಳಿದಿದೆ. ಅಲ್ಲದೆ ಈ ಹಿಂದೆ ಮಹಿಳೆಯ ಎರಡು ಮಕ್ಕಳು ಕೂಡ ತೀರಿಹೋಗಿದ್ದರು ಎಂದು ವರದಿಯಾಗಿದೆ.

  • ತಾಯಿ-ಮಗನ ಕೊಲೆಗೈದು ರೈಲ್ವೇ ಹಳಿ ಮೇಲೆ ಎಸೆದ!

    ತಾಯಿ-ಮಗನ ಕೊಲೆಗೈದು ರೈಲ್ವೇ ಹಳಿ ಮೇಲೆ ಎಸೆದ!

    ಬೆಳಗಾವಿ: ತಾಯಿ ಹಾಗೂ ಮಗನನ್ನು ಭೀಕರವಾಗಿ ಹತ್ಯೆಗೈದು ಶವವನ್ನು ರೈಲ್ವೇ ಹಳಿಗಳ ಮೇಲೆ ಬಿಸಾಡಿರುವ ಅಮಾನವೀಯ ಘಟನೆ ಬೆಳಗಾವಿಯ ನ್ಯೂ ಗಾಂಧಿನಗರ ಬಳಿ ನಡೆದಿದೆ.

    ನ್ಯೂ ಗಾಂಧಿನಗರ ಬಳಿಯ ರೈಲ್ವೇ ಟ್ರ್ಯಾಕ್‍ನಲ್ಲಿ ಶವಗಳು ಪತ್ತೆಯಾಗಿವೆ. ರೇಣುಕಾ(35) ಹಾಗೂ ಲಕ್ಷಣ(8) ಮೃತ ದುರ್ದೈವಿಗಳು. ಗಂಡನೇ ರೈಲ್ವೇ ಹಳಿ ಪಕ್ಕದಲ್ಲಿ ಇಬ್ಬರನ್ನೂ ಕೊಲೆ ಮಾಡಿ ನಂತರ ಹಳಿಯ ಮೇಲೆ ಶವ ಬಿಸಾಡಿದ್ದಾನೆಂದು ಶಂಕಿಸಲಾಗಿದೆ.

    ಮೂಲತಃ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೀರನೋಳಿ ಗ್ರಾಮದ ನಿವಾಸಿಯಾಗಿರುವ ರೇಣುಕಾ ಕುಟುಂಬ ಕಳೆದ ಹತ್ತು ವರ್ಷದಿಂದ ಬೆಳಗಾವಿಯ ಮಾರುತಿನಗರದಲ್ಲಿ ವಾಸಿಸುತ್ತಿತ್ತು. ತರಕಾರಿ ಮಾರಿಕೊಂಡು ಮಹಿಳೆ ಜೀವನ ನಡೆಸುತ್ತಿದ್ದರು. ಆದರೆ ಪತಿ ಯಲ್ಲಪ್ಪ ಕರಗುಪ್ಪಿ, ಪತ್ನಿ ಹಾಗೂ ಮಗನ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಶವ ಬಿದ್ದಿರುವ ಹಳಿ ಪಕ್ಕದಲ್ಲಿ ರಕ್ತದ ಗುರುತು ಪತ್ತೆಯಾಗಿದೆ. ಇದರಿಂದ ಮೊದಲು ಕೊಲೆ ಮಾಡಿ ನಂತರ ಶವಗಳನ್ನ ಹಳಿ ಮೇಲೆ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಂತರ್ಜಾತಿ ವಿವಾಹವಾಗಿದ್ದ ಮಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ತಾಯಿ

    ಅಂತರ್ಜಾತಿ ವಿವಾಹವಾಗಿದ್ದ ಮಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ತಾಯಿ

    ಪುಣೆ: ಅಂತರ್ಜಾತಿ ವಿವಾಹವಾಗಿದ್ದ 19 ವರ್ಷದ ಮಗಳನ್ನು ತಾಯಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ನಡೆದಿದೆ.

    ಬಾರಾಮತಿ ನಗರದ ಪ್ರಗತಿನಗರದಲ್ಲಿ 34 ವರ್ಷದ ಸಂಜೀವಿನಿ ಬೊಭೇತೆ ತನ್ನ ಮಗಳಾದ ಋತುಜಾಳನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ.

    ಕೊಲೆಯಾದ ಋತುಜಾ ಪೋಷಕರ ಒಪ್ಪಿಗೆ ಇಲ್ಲದೆ ಕಳೆದ ವರ್ಷ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಳು. ಅದರೆ ಮದುವೆಯಾದ ಕೆಲ ತಿಂಗಳ ನಂತರ ಅವರು ಇಬ್ಬರ ನಡುವೆ ಜಗಳವಾಗಿ ಯುವತಿ ಗಂಡನ ಮನೆ ಬಿಟ್ಟು ಮರಳಿ ಪೋಷಕರ ಬಳಿ ಬಂದಿದ್ದಳು. ಪೋಷಕರು ಆಕೆಯ ಗಂಡನ ಜೊತೆ ರಾಜಿ ಮಾಡಿಸಲು ನೋಡಿದ್ದಾರೆ. ಅದರೆ ಇದಕ್ಕೆ ಅವಳ ಗಂಡ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಋತುಜಾ ಅತ್ಯಾಚಾರದ ಆರೋಪ ಮಾಡಿ ಪತಿಯನ್ನು ಜೈಲಿಗೆ ಕಳುಹಿಸಿದ್ದಳು.

    ಆದರೆ ದಿನ ಕಳೆದಂತೆ ನಾನು ಮತ್ತೆ ಗಂಡನ ಮನೆಗೆ ಹೋಗಬೇಕು ರಾಜಿಮಾಡಿಸಿ ನನ್ನನ್ನು ಕಳುಹಿಸಿಕೊಂಡಿ ಎಂದು ಹೇಳಿದ್ದಾಳೆ. ಮತ್ತೆ ಅಳಿಯನ ಬಳಿ ಹೋಗಿ ನಾವು ದೂರನ್ನು ವಾಪಾಸ್ ತೆಗೆದುಕೊಳ್ಳುತ್ತೇವೆ ನಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಬೇಡಿಕೊಂಡಿದ್ದಾರೆ ಅದರೆ ಇದಕ್ಕೆ ಅಳಿಯ ಒಪ್ಪಿರಲಿಲ್ಲ.

    ಇದೇ ವಿಚಾರಕ್ಕೆ ದಿನ ಮನೆಯಲ್ಲಿ ಮಗಳು ಪೋಷಕರ ಜೊತೆ ವಾದಮಾಡುತ್ತಾ ನಿಂದಿಸುತ್ತಿದ್ದಳು. ಹೀಗೆ ಮಂಗಳವಾರ ವಾದ ಮಾಡುತ್ತಿರುವಾಗ ಮಾತಿಗೆ ಮಾತು ಬೆಳೆದು ತಾಯಿ ತನ್ನ ಮಗಳಿಗೆ ದೊಡ್ಡ ಕಲ್ಲಿನಿಂದ ತಲೆಗೆ ಹೊಡೆದ ಕಾರಣ ಮಗಳು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ವಿವಿಧ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಸಂಜೀವಿನಿ ಬೊಭೇತೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಮದರ್ಸ್ ಡೇ ಪ್ರಯುಕ್ತ 80 ವರ್ಷದ ತಾಯಿ ಜೊತೆ ನಟನಿಂದ ಪುಶ್ ಅಪ್ಸ್ – ವಿಡಿಯೋ ನೋಡಿ

    ಮದರ್ಸ್ ಡೇ ಪ್ರಯುಕ್ತ 80 ವರ್ಷದ ತಾಯಿ ಜೊತೆ ನಟನಿಂದ ಪುಶ್ ಅಪ್ಸ್ – ವಿಡಿಯೋ ನೋಡಿ

    ನವದೆಹಲಿ: ಇವತ್ತು ವಿಶ್ವ ತಾಯಂದಿರ ದಿನ ಈ ದಿನದ ಅಂಗವಾಗಿ ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೊಮಾನ್ ಅವರು ತನ್ನ 80 ವರ್ಷದ ತಾಯಿಗೆ ಪುಶ್ ಅಪ್ಸ್ ಮಾಡಿಸಿ ತಾಯಂದಿರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

    ನಟ ಮಿಲಿಂದ್ ಅವರು ತನ್ನ ತಾಯಿ ಉಷಾ ಸೊಮಾನ್ ಅವರನ್ನು ಬೀಚ್‍ಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ ತಾಯಿಯ ಜೊತೆ ಪುಶ್ ಅಪ್ಸ್ ಮಾಡಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

    ತನ್ನ ತಾಯಿ ಜೊತೆ ಪುಶ್ ಅಪ್ಸ್ ಮಾಡುತ್ತಿರುವ ವಿಡಿಯೋ ಹಾಕಿ “ತಡವಾಗಿಲ್ಲ. ನನ್ನ ತಾಯಿಗೆ ಈಗ 80 ವರ್ಷ, ಪ್ರತಿ ದಿನವನ್ನು ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು”ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಇದಾದ ಬಳಿಕ 53 ವರ್ಷದ ಮಿಲಿಂದ್ ಅವರು, “ಈ ಸಂದೇಶ ಎಲ್ಲಾ ತಾಯಂದಿರಿಗೆ ಸಲ್ಲಬೇಕು. ಪ್ರತಿದಿನ ಕನಿಷ್ಠ 5 ನಿಮಿಷವಾದರೂ ತಾಯಂದಿರ ಜೊತೆ ಸಮಯ ಕಳೆಯಬೇಕು. ನಾವು ಎಲ್ಲರೂ ತಾಯಂದಿರನ್ನು ಫಿಟ್ ಆಗಿ ನೋಡಿಕೊಳ್ಳೊಣ” ಹ್ಯಾಪಿ ಮದರ್ಸ್ ಡೇ ಎಂದು ಹೇಳಿದ್ದಾರೆ.

    ಉಷಾ ಅವರು 2017 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಮ್ಯಾರಥಾನ್‍ನಲ್ಲಿ ಬರಿಗಾಲಿನಲ್ಲಿ ಓಡಿದ್ದರು ಮತ್ತು 100 ಕಿ.ಮೀ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

  • ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮಲೇಷ್ಯಾ: ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಅಸಾಧ್ಯ. ಆದರೆ ಮಲೇಷ್ಯಾ ಇಂತಹದೊಂದು ಘಟನೆ ನಡೆದಿದೆ. ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ತಾಯಿ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

    ಹೌದು. ಇದೇನಪ್ಪ ಸಾವನ್ನಪ್ಪಿದವರು ಫೋಟೋದಲ್ಲಿ ಹೇಗೆ ಬಂದರು ಎಂದು ಅಚ್ಚರಿ ಆಗಬಹುದು, ಆದರೆ ತಂತ್ರಜ್ಞಾನದಿಂದ ಇದು ನಿಜವಾಗಿದೆ. ಮಲೇಷ್ಯಾದ ಮಹಿಳಾ ಫೋಟೋಗ್ರಾಫರ್ ಜಾರಾ ಹಲೀನಾ ಅವರ ಸೃಜನಶೀಲತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆದಿದೆ.

    ಮಲೇಷ್ಯಾದ ಅಡೆಲಿನ್ ನೆಲ್ಡಾ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದರು. ನಾಲ್ಕನೇ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಹೊಂದಿದ್ದರು. ಆದರಿಂದ ಅವರು ಫೋಟೋಗ್ರಾಫರ್ ಜಾರಾರನ್ನು ಸಂಪರ್ಕಿಸಿ, ಡೆಲಿವರಿ ಬಳಿಕ ಫ್ಯಾಮಿಲಿ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಡೆಲಿವರಿ ವೇಳೆ ಅಡೆಲಿನಾ ಮೃತಪಟ್ಟಿದ್ದಾರೆ.

    ಅಡೆಲಿನ್ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಅಡೆಲಿನ್ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಕನಸಾಗಿಯೇ ಉಳಿದಿತ್ತು. ಆದರೆ ಛಾಯಾಗ್ರಾಹಕಿ ಆ ಕನಸನ್ನ ನನಸು ಮಾಡಿದ್ದಾರೆ.

    ಅಡೆಲಿನ್ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಅಡೆಲಿನ್‍ರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಕ್ರಿಯೇಟಿವ್ ಎಡಿಟಿಂಗ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾರೆ.

    ಸದ್ಯ ಈ ಫೋಟೋಶೂಟ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

  • ಕಲ್ಪತರುನಾಡಿನಲ್ಲಿ ಕರುಣೆ ಇಲ್ಲದ ಅಮ್ಮಂದಿರ ಸಂಖ್ಯೆ ಹೆಚ್ಚಾಯ್ತಾ!

    ಕಲ್ಪತರುನಾಡಿನಲ್ಲಿ ಕರುಣೆ ಇಲ್ಲದ ಅಮ್ಮಂದಿರ ಸಂಖ್ಯೆ ಹೆಚ್ಚಾಯ್ತಾ!

    ತುಮಕೂರು: ಇಂದು ಅಮ್ಮಂದಿರ ದಿನ, ಹೆತ್ತು- ಹೊತ್ತು, ಸಾಕಿ- ಸಲುಹಿದ ಮಾತೃದೇವತೆಯ ನೆನೆಯುವ ದಿನವಾಗಿದೆ. ಆದರೆ ಕಲ್ಪತರುನಾಡಿನಲ್ಲಿ ದಿನೇ ದಿನೇ ಕರುಣೆ ಇಲ್ಲದ ಅಮ್ಮಂದಿರರ ಸಂಖ್ಯೆ ಹೆಚ್ವಾಗುತ್ತಿವೆ.

    ಹೌದು, ತುಮಕೂರಿನಲ್ಲಿ ಅಮ್ಮಂದಿರಿಗೆ ಕರುಣೆ ಇಲ್ಲವಾಗ್ತಾ ಇದೆಯಾ? ಕರುಣೆ ಇಲ್ಲದ ಅಮ್ಮನಿಂದ ತಿಪ್ಪೆ, ಚರಂಡಿ, ಬೀದಿ ಬೀದಿಗಳಲ್ಲಿ ಕರುಳಿನ ಬಳಿಗಳು ಬಿದ್ದು ಒದ್ದಾಡುತ್ತಿವೆ. ಕೆಲವಡೆ ಇರುವೆ, ನಾಯಿ, ಬೆಕ್ಕುಗಳ ಪಾಲಾಗಿವೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 35 ಕಂದಮ್ಮಗಳು ತಾಯಂದಿರರಿಂದ ದೂರವಾಗಿದೆ. ಅದರಲ್ಲಿ 25 ಶಿಶುಗಳನ್ನ ಹೆಣ್ಣೆಂಬ ಕಾರಣಕ್ಕೆ ಬೀದಿಯಲ್ಲಿ ಬಿಟ್ಟು ಹೋಗಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ ತಿಳಿಸಿದ್ದಾರೆ.

    ಇವುಗಳಲ್ಲಿ ಬೀದಿಯಲ್ಲಿ ಬಿದ್ದ ಸುಮಾರು 11 ಶಿಶುಗಳು ಪ್ರಾಣಿ, ಪಕ್ಷಿಗಳ ದಾಳಿಗೆ ತುತ್ತಾಗಿವೆ. ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಮನೋಭಾವ ಈ ಪ್ರಕರಣಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ತಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿ ಸಾಕಲು ಸಾಧ್ಯವಾಗದ ಸುಮಾರು 15 ಮಕ್ಕಳನ್ನು ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ಕೊಟ್ಟು ಹೋಗಿದ್ದಾರೆ. ಅಮ್ಮಂದಿರ ದಿನದಂದು ನಿಜಕ್ಕೂ ಈ ಅಂಕಿ ಅಂಶ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

  • ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ಹಾಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ.

    ತಾಯಂದಿರ ದಿನ ಶುರುವಾಗಿದ್ದು ಹೇಗೆ?
    ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.

    2ನೇ ಭಾನುವಾರ ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ಮೇ 9, 1914ರಂದು ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

    ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ಯಾವುದೇ ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಸಹ ತಾಯಂದಿರ ದಿನದಂದು ತಾಯಿಗೆ ಮತ್ತಷ್ಟು ಗೌರವ ನೀಡಲಾಗುತ್ತದೆ. ಈ ದಿನದಂದು ತಾಯಿಗೆ ಸಿಹಿ ಜೊತೆ ಉಡುಗೊರೆ ನೀಡಲಾಗುತ್ತದೆ.

    ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 12ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.