Tag: mother

  • ಮಗುವನ್ನು ಬೇಲಿಗೆ ಎಸೆದು ಪಾರು ಮಾಡಿಯೂ ಕಾಡಾನೆಗೆ ತಾಯಿ ಬಲಿ

    ಮಗುವನ್ನು ಬೇಲಿಗೆ ಎಸೆದು ಪಾರು ಮಾಡಿಯೂ ಕಾಡಾನೆಗೆ ತಾಯಿ ಬಲಿ

    ಚಾಮರಾಜನಗರ: ಕಾಡಾನೆ ದಾಳಿ ವೇಳೆ ತನ್ನ ಮಗುವನ್ನು ಪಾರು ಮಾಡಿ ತಾಯಿ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ದೊಡ್ಡಾಣೆ ಬಳಿ ನಡೆದಿದೆ.

    ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ಬಳಿಯ ಹಳೆಯೂರು ಗ್ರಾಮದ ಗೌರಮ್ಮ(45) ಕಾಡಾನೆ ದಾಳಿಗೆ ಬಲಿಯಾದ ಮಹಿಳೆ. ದೊಡ್ಡಾಣೆ ಗ್ರಾಮದಲ್ಲಿ ಹಬ್ಬ ಮುಗಿಸಿ 4 ವರ್ಷದ ಹೆಣ್ಣು ಮಗುವಿನೊಂದಿಗೆ ಗೌರಮ್ಮ ಊರಿಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

    ದಾರಿ ಮಧ್ಯೆ ಕಾಡಾನೆ ಎದುರಾಗಿದೆ. ಕಾಡಾನೆ ಕಂಡ ತಕ್ಷಣ ಕಂಕುಳಲ್ಲಿದ್ದ ಮಗುವನ್ನು ಗೌರಮ್ಮ ಬೇಲಿಗೆ ಎಸೆದಿದ್ದಾರೆ. ಗೌರಮ್ಮನವರ ಮೇಲೆ ದಾಳಿ ನಡೆಸಿದ ಕಾಡಾನೆ ತುಳಿದು ಸಾಯಿಸಿದೆ. ಮಗುವನ್ನು ಬೇಲಿಗೆ ಎಸೆದಿದ್ದರಿಂದ ಹೆಣ್ಣು ಮಗು ಅಪಾಯದಿಂದ ಪಾರಾಗಿದೆ.

    ಹೆಣ್ಣುಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಹದೇಶ್ವರ ಬೆಟ್ಟ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

  • ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಚಂಡೀಗಢ: ಶ್ವಾನಗಳೆರಡು ಚರಂಡಿಯಲ್ಲಿ ಬಿದ್ದ ಶಿಶುವನ್ನು ರಕ್ಷಣೆ ಮಾಡಿದ್ದು, ಆ ಕಂದಮ್ಮನನ್ನು ಉಳಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುತ್ತಿರುವ ಆತಂಕಕಾರಿ ಘಟನೆಯೊಂದು ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಪುಟ್ಟ ಮಗುವನ್ನು ಅದರ ತಾಯಿಯೇ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಚರಂಡಿಗೆ ಬಿಸಾಡಿದ್ದಾಳೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.

     ಸಿಸಿಟಿವಿಯಲ್ಲೇನಿತ್ತು?:
    ಮುಂಜಾನೆ ಮಹಿಳೆಯೊಬ್ಬಳು ಕೈತಾಲ್ ನಲ್ಲಿರುವ ಡೋಗ್ರಾ ಗೇಟ್ ಬಳಿ ನಡೆದುಕೊಂಡು ಬರುತ್ತಾಳೆ. ಪಕ್ಕದಲ್ಲೇ ಚರಂಡಿಯೊಂದಿದ್ದು, ಮಹಿಳೆ ತನ್ನ ಕೈಯಲ್ಲಿದ್ದ ವಸ್ತುವನ್ನು ಎಸೆಯುತ್ತಾಳೆ. ಹೀಗೆ ಚರಂಡಿಗೆ ಬಿದ್ದ ಮಗು ಜೋರಾಗಿ ಬಿದ್ದು ಅಳಲು ಆರಂಭಿಸಿದೆ. ಈ ಶಬ್ಧ ಕೇಳಿ ಪಕ್ಕದಲ್ಲಿದ್ದ ಬೀದಿ ನಾಯಿಗಳು ಬೊಗಳಲು ಆರಂಭಿಸಿವೆ. ಅಲ್ಲದೆ ಕೂಡಲೇ ಶಬ್ಧ ಕೇಳಿ ಬಂದ ಕಡೆ ದೌಡಾಯಿಸಿವೆ. ಹೀಗೆ ಚರಂಡಿ ಬಳಿ ಬಂದ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿವೆ.

    ನಾಯಿಗಳು ಏನು ಮಾಡುತ್ತಿವೆ ಎಂದು ನಿಂತು ನೋಡುತ್ತಿದ್ದ ಜನರಿಗೆ ಅದು ಮಗು ಎಂದು ಗೊತ್ತಾದ ಕೂಡಲೇ ಎಚ್ಚೆತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಶಿಶುವನ್ನು ಸ್ಥಳೀಯ ಕೈತಾಲ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಿಶು ಬದುಕಿದ್ದು, ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಗು ಸರಿಸುಮಾರು 100 ಗ್ರಾಂ ಇದ್ದು, ಆಕೆಯನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಶಿಶುವಿನ ಆರೋಗ್ಯ ಸುಧಾರಿಸಿದ ಬಳಿಕ ಮಗುವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್)ಗೆ ಹಸ್ತಾಂತರಿಸಲಾಗುವುದು. ಆ ಬಳಿಕ ಅಲ್ಲಿಂದ ಹಲವು ಪ್ರಕ್ರಿಯೆಗಳ ಮೂಲಕ ಪಂಚಕುಲ ಅನಾಥಾಶ್ರಮಕ್ಕೆ ಮಗುವನ್ನು ನೀಡಲಾಗುವುದು ಎಂದು ಮತ್ತೊಬ್ಬ ವೈದ್ಯ ತಿಳಿಸಿದ್ದಾರೆ.

    ಶಿಶುವನ್ನು ಚರಂಡಿಗೆ ಬಿಸಾಕಿದ ಸಂಬಂಧ ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ

    ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ

    ಲಕ್ನೋ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನ ಮುರಾದ್ ನಗರದಲ್ಲಿ ನಡೆದಿದೆ.

    ಮೃತ ತಾಯಿಯನ್ನು ಮುರಾದ್ ನಗರದ ಪ್ರೀತ್ ವಿಹಾರ್ ಕಾಲೋನಿ ನಿವಾಸಿ 32 ವರ್ಷದ ದೀಪಾ ಎಂದು ಗುರುತಿಸಲಾಗಿದೆ. ದೀಪಾ ಮಕ್ಕಳಾದ 8 ವರ್ಷದ ರೀನಾ ಮತ್ತು 5 ವರ್ಷದ ಗಂಡು ಮಗು ಲಲಿತ್ ಮೇಲೂ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ತಾಯಿ ದೀಪಾ ಮತ್ತು ಮಗಳು ರೀನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಮಗ ಲಲಿತ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ನರೇಶ್ ಕುಮಾರ್ ಜಾಡಾನ್ ತಿಳಿಸಿದ್ದಾರೆ.

    ಈ ಘಟನೆಯ ಬಗ್ಗೆ ಮಾತನಾಡಿರುವ ನರೇಶ್ ಕುಮಾರ್, ಘಟನಾ ಸ್ಥಳದಲ್ಲಿ ಸಂಪೂರ್ಣ ಅವ್ಯವಸ್ಥೆ ಇದೆ. ಈ ಪ್ರಕರಣವು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೋರುತ್ತದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಕುಂದಾಪುರದ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ

    ಕುಂದಾಪುರದ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ

    ಉಡುಪಿ: ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ಗುರುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಹೆಣ್ಣು ಮಗುವಿನ ಅಪಹರಣ ಪ್ರಕರಣ ಎಂಬ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದೀಗ ಮಗುವಿನ ಶವ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.

    ಸಾನ್ವಿಕಾ ಮೃತ ಮಗು. ಸಂತೋಷ್ ನಾಯ್ಕ ಮತ್ತು ರೇಖಾ ದಂಪತಿ ಮಗು ಅಪಹರಣ ಆಗಿತ್ತೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ನೀಡಿ ಒಂದು ದಿನ ಆಗುವಷ್ಟರಲ್ಲಿ ಹೆಣ್ಣು ಮಗುವಿನ ಮೃತದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.

    ಕುಂದಾಪುರದ ಎಡಮೊಗೆ ಗ್ರಾಮದ ಕುಮ್ಟಿಬೇರು ಸಮೀಪದ ಮನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮಲಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ಮುಸುಕುಧಾರಿಗಳು ಹಿಂದಿನ ಬಾಗಿಲಿನ ಮೂಲಕ ಬಂದು ಮಗುವನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ತಾಯಿ ದೂರಿದ್ದರು. ಆದರೆ ಈಗ ನದಿಯ ನಡುವೆ ಇರುವ ಪೊದೆಯಲ್ಲಿ ಮಗು ಸಾನ್ವಿಕಾಳ ಮೃತದೇಹ ಸಿಕ್ಕಿಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಅಪಹರಣದ ಕಥೆ ಕಟ್ಟಿದ್ಳಾ ತಾಯಿ?
    ರೇಖಾ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಪ್ರಾಣ ಭಯದಿಂದ ಮಗ ಮತ್ತು ತಾಯಿ ನೀರಿಂದ ಮೇಲೆ ಬಂದಿರಬಹುದು. ಒಂದು ವರ್ಷ ಮೂರು ತಿಂಗಳ ಮಗು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಗಂಡ ಬಂದ ಸಂದರ್ಭದಲ್ಲಿ ಭಯಗೊಂಡು ಅಪಹರಣದ ಕಥೆ ಕಟ್ಟಿದ್ದಾಳೆ ಎನ್ನಲಾಗಿದೆ. ವಿಡಿಯೋವೊಂದಲ್ಲಿ ತಂದೆ ಕಣ್ಣೀರಿಡುತ್ತಿದ್ದರೆ, ತಾಯಿ ಭಯದಲ್ಲಿರುವುದು ಕಂಡುಬಂದಿದೆ.

    ಸದ್ಯಕ್ಕೆ ಕುಂದಾಪುರ ಡಿವೈಎಸ್‍ಪಿ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಗುವಿನ ತಾಯಿಯನ್ನು ಶಂಕರ ನಾರಾಯಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

    ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

    ಅಮರಾವತಿ: ತಾಯಿ ಎಂದರೆ ದೇವರ ರೂಪ ಎಂಬ ಮಾತಿದೆ. ಅದರಂತೆ ತೆಲಂಗಾಣದಲ್ಲಿ ತಾಯಿಯೊಬ್ಬರು ಪವಾಡದ ರೀತಿಯಲ್ಲಿ ಸಾವಿನ ದವಡೆಯಲ್ಲಿದ್ದ ತನ್ನ ಮಗನನ್ನು ಉಳಿಸಿಕೊಂಡಿದ್ದಾರೆ.

    ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರಿ ಎಂಬ ಹಳ್ಳಿಯ ಸಿದ್ದಮ್ಮ, ತನ್ನ 18 ವರ್ಷದ ಮಗ ಗಾಂಧಮ್ ಕಿರಣ್‍ಗೆ ಜೂನ್ 26 ರಂದು ವಾಂತಿ ಮತ್ತು ತೀವ್ರ ಭೇದಿ ಕಾಣಿಸಿಕೊಂಡ ಕಾರಣ ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಚಿಕಿತ್ಸೆ ಆರಂಭವಾದ ನಂತರ ಕಿರಣ್‍ಗೆ ಡೆಂಗ್ಯೂ ಮತ್ತು ಕಾಮಾಲೆ ರೋಗದ ಜೊತೆಗೆ ಹೆಪಟೈಟಿಸ್ ಬಿ ಇರುವುದು ಕಂಡು ಬಂದಿದೆ. ನಂತರ ಅಲ್ಲಿನ ಸರ್ಕಾರಿ ವೈದ್ಯರು ಕಿರಣ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

    ವೈದ್ಯರು ಹೇಳಿದಂತೆ ಮಗನನ್ನು ಕಿರಣ್ ತಾಯಿ ಹೈದರಾಬಾದಿಗೆ ಕರೆದುಕೊಂಡು ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿಯೂ ಅವರ ಮಗನ ಆರೋಗ್ಯದ ಸ್ಥಿತಿ ಸುಧಾರಿಸದೇ ಕೋಮಾಗೆ ಜಾರಿದ್ದ. ನಂತರ ಜುಲೈ 3 ರಂದು ಅಲ್ಲಿನ ವೈದ್ಯರು ನಿಮ್ಮ ಮಗನ ಮೆದುಳು ಕೆಲಸ ಮಾಡುತ್ತಿಲ್ಲ. ಆತ ಬದುಕುವುದಿಲ್ಲ, ನಮ್ಮಿಂದ ಗುಣಪಡಿಸಲು ಸಾಧ್ಯವಿಲ್ಲ. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ತಾಯಿ ಸಿದ್ದಮ್ಮನಿಗೆ ಹೇಳಿದ್ದಾರೆ.

    ಇದರಿಂದ ನೊಂದ ತಾಯಿ ತನ್ನ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಮಗನನ್ನು ಕರೆದುಕೊಂಡು ತನ್ನ ಹಳ್ಳಿಗೆ ಬಂದಿದ್ದಾಳೆ. ಆದರೆ ಆಗಲೇ ಕಿರಣ್ ಬದುಕುವುದಿಲ್ಲ ಎಂದು ಗ್ರಾಮಸ್ಥರು ಮತ್ತು ಕುಟುಂಬದವರು ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿದ್ದರು. ಆದರೆ ಭರವಸೆ ಬಿಡದ ಸಿದಮ್ಮ ತನ್ನ ಮಗನನ್ನು ಸಾಯಲು ಬಿಡದೆ ಅವನ ಹಾಸಿಗೆ ಪಕ್ಕದಲ್ಲೇ ಕುಳಿತುಕೊಂಡು ನಿಮಿಷಕ್ಕೆ ಒಂದು ಬಾರಿ ಮಗನನ್ನು ಕರೆಯುತ್ತಲೇ ಇದ್ದಳಂತೆ.

    ಈ ವೇಳೆ ಕಿರಣ್ ನಿಧಾವಾಗಿ ಉಸಿರಾಡುವುದು ಕಂಡು ಬಂದಿದೆ. ಈ ಸಮಯದಲ್ಲಿ ಅಂತ್ಯ ಕ್ರಿಯೆಯನ್ನು ಮುಂದೂಡಿದ ಗ್ರಾಮಸ್ಥರು ಅವನನ್ನು ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಿರಣ್ ಕಣ್ಣಿನಿಂದ ನೀರು ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ರಾಜಾಬಾಬು ರೆಡ್ಡಿ ತಕ್ಷಣ ಕಿರಣ್‍ನ ಸ್ಥಿತಿಯನ್ನು ಅರಿತು ಹೈದರಾಬಾದಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಅ ವೈದ್ಯ ಕಿರಣ್‍ಗೆ ನಾಲ್ಕು ಇಂಜೆಕ್ಷನ್ಸ್ ಕೊಡಲು ಹೇಳಿದ್ದಾರೆ. ನಂತರ ಕಿರಣ್ ಉಸಿರಾಡಲು ಶುರು ಮಾಡಿದ್ದಾನೆ. ನಂತರ ಕಿರಣ್ ನಿಧಾನವಾಗಿ ಚೇತರಿಸಿಕೊಂಡಿದ್ದು, ಈಗ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ತಾಯಿಯೊಂದಿಗೆ ಮಾತನಾಡುತ್ತಾನೆ ಎಂದು ವೈದ್ಯ ರಾಜಾಬಾಬು ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿದ್ದಮ್ಮ 2005 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮಗನನ್ನು ಉಳಿಸಿಕೊಳ್ಳಲು ಹಲವು ಪ್ರಯತ್ನ ನಡೆಸಿದರು. ವೈದ್ಯರು ಕೈ ಚೆಲ್ಲಿದ ಪರಿಣಾಮ ಕೊನೆಗೆ ಮಗ ಗುಣಮುಖನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ತಾಯಿಯ ಪ್ರಾರ್ಥನೆ ಫಲಪ್ರದವಾಗಿದ್ದು ಮಗ ಸಾವಿನ ದವಡೆಯಿಂದ ಪಾರಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ತಾಯಿ-ಮಗಳು

    ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ತಾಯಿ-ಮಗಳು

    ಮುಂಬೈ: ತಾಯಿ-ಮಗಳು ತಮಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನ ಧಾರವಿ ವ್ಯಾಪ್ತಿಯ ಮಹಾರಾಷ್ಟ್ರ ನೇಚರ್ ಪಾರ್ಕ್ ಸಮೀಪದ ಆಬಾದಿ ಬಳಿ ನಡೆದಿದೆ.

    ತಾಯಿ ಸುಲ್ತಾನಾ ಖಾನ್ (34) ಮತ್ತು ಮಗಳು ತೈಶೀನ್ ಖಾನ್ (18) ಇಬ್ಬರು ತಮಗೆ ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದರಿಂದ ಸುಲ್ತಾನಾರ ಮನೆಗೆ ನುಗ್ಗಿದ ಒಂದು ಅಡಿಯ ವಿಷಕಾರಿ ಹಾವು ಬಾಗಿಲ ಬಳಿ ನಿಂತಿದ್ದ ತೈಶೀನ್ ಗೆ ಕಚ್ಚಿದೆ. ಮಗಳಿಗೆ ಕಚ್ಚಿದ ಹಾವನ್ನು ಹಿಡಿಯಲು ಹೋದಾಗ ತಾಯಿಗೂ ಕಚ್ಚಿದೆ. ಕೊನೆಗೆ ತಾಯಿ-ಮಗಳು ಜೊತೆಯಾಗಿ ಹಾವನ್ನು ಹಿಡಿದು ಅದರೊಂದಿಗೆ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ.

    ಸುಲ್ತಾನಾ ಪತಿ ಸಲೀಂ ಖಾನ್ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡಿಕೊಂಡಿದ್ದು, ಆಬಾದಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಲೀಂ ಖಾನ್, ತಮಗೆ ಕಚ್ಚಿದ ಹಾವು ಎಷ್ಟು ವಿಷಕಾರಿ ಎಂಬುದನ್ನು ತಿಳಿಯಲು ಅದನ್ನು ಸೆರೆ ಹಿಡಿದು ಆಸ್ಪತ್ರೆಗೆ ಹೋಗಿದ್ದರು. ಅದೊಂದು ವಿಷಕಾರಿ ಹಾವಾಗಿದ್ದು, ಕಡಿತಕ್ಕೊಳಗಾದ ವ್ಯಕ್ತಿಯ ಸಾವು ಸಂಭವಿಸಬಹುದು. ಹಾವನ್ನು ನೋಡಿದ್ದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಘಟನೆ ನಡೆದ ವೇಳೆ ನಾನು ಮನೆಯಲ್ಲಿರಲಿಲ್ಲ. ಸದ್ಯ ಪತ್ನಿ ಮತ್ತು ಮಗಳ ಆರೋಗದ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

    ತಾಯಿ-ಮಗಳು ಹಾವಿನ ಜೊತೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಚಿಕಿತ್ಸೆ ನೀಡಲು ಸಹಕಾರಿ ಆಯ್ತು. ಹಾವನ್ನು ನೋಡಿದ ಕೂಡಲೇ ವಿಷದ ಅಂಶ ತಿಳಿಯಿತು. ಹಾವನ್ನು ಜೊತೆಯಾಗಿ ತಂದಿದ್ದರಿಂದ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ತಾಯಿ-ಮಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.

  • ಯುವತಿಗಾಗಿ ಟವರ್ ಏರಿ ಕುಳಿತ ಯುವಕ – ತಾಯಿ ಕಣ್ಣೀರಿಟ್ಟರೂ ಕೆಳಗಿಳಿಯದ ಮಗ

    ಯುವತಿಗಾಗಿ ಟವರ್ ಏರಿ ಕುಳಿತ ಯುವಕ – ತಾಯಿ ಕಣ್ಣೀರಿಟ್ಟರೂ ಕೆಳಗಿಳಿಯದ ಮಗ

    ರಾಯಚೂರು: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಗಾಗಿ ಟವರ್ ಏರಿ ಕುಳಿತ ಘಟನೆ ರಾಯಚೂರು ನಗರದ ಪಿಎನ್ ಟಿ ಕ್ವಾಟ್ರಸ್‍ನಲ್ಲಿ ನಡೆದಿದೆ.

    ಶಾಂತಕುಮಾರ (32) ಟವರ್ ಏರಿದ ಯುವಕ. ಶಾಂತಕುಮಾರ್ ಸೆಲ್ಫಿ ವಿಡಿಯೋ ಮಾಡಿ ಸುಮಾರು 120 ಅಡಿ ಎತ್ತರವಿರುವ ಟವರ್ ಏರಿ ಕುಳಿತಿದ್ದಾನೆ. ಅಲ್ಲದೆ ಪ್ರೀತಿಸಿದ ಯುವತಿ ಬರುವವರೆಗೂ ಟವರ್ ನಿಂದ ಇಳಿಯುವುದಿಲ್ಲ ಎಂದು ಹೇಳುತ್ತಿದ್ದಾನೆ.

    ವಿಡಿಯೋದಲ್ಲಿ ಏನಿದೆ?
    ನಾನು ಹಾಗೂ ಕವಿತಾ ತುಂಬಾ ದಿನದಿಂದ ಪ್ರೀತಿಸುತ್ತಿದ್ದೇವೆ. ಕವಿತಾ ನನಗಾಗಿ ತನ್ನ ಮನೆ ಬಿಟ್ಟು ಬಂದಿದ್ದಳು. ಆಕೆ ಮನೆ ಬಿಟ್ಟು ಬಂದಾಗ ನಾವಿಬ್ಬರು ಮದುವೆ ಆಗಿದ್ದೇವೆ. ನನ್ನ ಬಳಿ ಮದುವೆಯ ದಾಖಲೆಗಳು ಇದೆ. ಆದರೆ ಈಗ ಕವಿತಾ ಪೋಷಕರು ನಾವು ಸಾಯುತ್ತೇವೆ ಎಂದು ಹೆದರಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅವರು ಕರೆದುಕೊಂಡು ಹೋಗಿ ಕವಿತಾಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಈಗ ಅವರ ಪೋಷಕರು ನಾನು ಕಟ್ಟಿದ್ದ ತಾಳಿಯನ್ನು ತೆಗೆದು ಬೇರೆ ಮದುವೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ದಯವಿಟ್ಟು ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರು ಬೆಂಬಲ ನೀಡಬೇಕೆಂದು ವಿಡಿಯೋದಲ್ಲಿ ಹೇಳಿದ್ದಾನೆ.

    ಈ ಬಗ್ಗೆ ಪೊಲೀಸರು ಕವಿತಾ ಮನೆಯವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಕವಿತಾ ಮನೆಯವರು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಇತ್ತ ಕವಿತಾ ನಾನು ಶಾಂತಕುಮಾರನನ್ನು ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾಳೆ.

    ತಾಯಿ, ಕುಟುಂಬದವರು ಬಂದು ಮನವೊಲಿಕೆಗೆ ಪ್ರಯತ್ನಿಸಿದರೂ ಶಾಂತಕುಮಾರ್ ಮೊಬೈಲ್ ಟವರ್ ನಿಂದ ಕೆಳಗೆ ಇಳಿಯುತ್ತಿಲ್ಲ. ಮಗನನ್ನು ತಾಯಿ ಕರೆಯುವ ದೃಶ್ಯ ಮನಕಲುಕುವಂತಿದ್ದು, ಸ್ಥಳದಲ್ಲಿ ನೆರೆದಿದ್ದ ಜನ ತಾಯಿಯ ವೇದನೆ ನೋಡಿ ಮರುಕಪಟ್ಟಿದ್ದಾರೆ. ಅಲ್ಲದೆ ತಾಯಿ ನೀನು ಕೆಳಗಿಳಿಯದಿದ್ದರೆ, ನಾನು ಸಾಯುವೆ ಎಂದು ಕಣ್ಣೀರಿಟ್ಟು ಕೆಳಗಿಳಿ ಎಂದರೂ ಶಾಂತಕುಮಾರ್ ತನ್ನ ತಾಯಿಯ ಮಾತನ್ನು ಕೇಳುತ್ತಿಲ್ಲ. ಕವಿತಾಳನ್ನು ಕರೆ ತಂದರೆ ಮಾತ್ರ ಕೆಳಗಿಯುವುದಾಗಿ ಪಟ್ಟು ಹಿಡಿದಿದ್ದಾನೆ. ಶಾಂತಕುಮಾರ್ ಟವರ್ ಏರಿದ ವಿಷಯ ತಿಳಿದು ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ದೌಡಾಯಿಸಿ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

  • ಸಾಕು ತಾಯಿ ಕಳೆದುಕೊಂಡ ನಟ ಜಗ್ಗೇಶ್

    ಸಾಕು ತಾಯಿ ಕಳೆದುಕೊಂಡ ನಟ ಜಗ್ಗೇಶ್

    ಬೆಂಗಳೂರು: ನನ್ನ ಸಾಕುತಾಯಿ ಮೋರುಬಾಯ್ ಇಂದು ನಿಧನರಾಗಿದ್ದಾರೆ ಎಂದು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

    “ನನ್ನ ಸಾಕು ತಾಯಿ ಮೋರುಬಾಯ್ ಜನ್ಮ ಕೊಟ್ಟ ನನ್ನ ತಾಯಿ ಬಳಿ ಸಂಗಾತಿಯಾಗಲು ಹೋಗಿಬಿಟ್ಟಳು. ಕಳೆದ ವಾರ ಹರಸಿ ಕಳಿಸಿದಳು. ಇಂದು ಹರಸಲಾಗದ ಕಣ್ಣಿಗೆ ಕಾಣದ ದೂರದ ಊರಿಗೆ ಹೋಗಿಬಿಟ್ಟಳು. ಇಷ್ಟೆ ಅಲ್ಲವೆ ಮನುಜನ್ಮ. ಅವಳ ಕೈ ತುತ್ತು ತಿಂದ ನಾನು ಅವಳ ಮರೆಯಲು ಸಾಧ್ಯವೇ? ನನಗೆ ಮಮತೆ ತೋರಿ ತುತ್ತು ತಿನ್ನಿಸಿದ ಕಡೆ ತಾಯಿ ಪ್ರೀತಿಯ ಕೊಂಡಿಯೂ ಹೋಯಿತು. ಅಮ್ಮನಂತೆ ಇವಳು, ಇನ್ನುಮುಂದೆ ನೆನಪು ಮಾತ್ರ. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ” ಎಂದು ತಾಯಿ ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದಾರೆ.

    ಜಗ್ಗೇಶ್ ತಾಯಿ ನಂಜಮ್ಮ ಅವರ ಸ್ನೇಹಿತೆಯೇ ಮೋರು ಬಾಯ್. ಇವರ ಜೊತೆ ಜಗ್ಗೇಶ್ ಬಾಲ್ಯದಿಂದಲೇ ಬೆಳೆದಿದ್ದರು. ಹೀಗಾಗಿ ತಾಯಿಯ ಪ್ರೀತಿ ಬಾಂಧವ್ಯವನ್ನು ಇವರ ಜೊತೆ ಹೊಂದಿದ್ದರು. ಕಳೆದವಾರಷ್ಟೇ ಮೋರುಬಾಯ್‍ಯನ್ನು ಭೇಟಿ ಮಾಡಿ ಅವರ ಬಗ್ಗೆ ಒಂದು ಪೋಸ್ಟ್ ಬರೆದು ಹಾಕಿದ್ದರು.

    ಪೋಸ್ಟ್ ನಲ್ಲಿ ಏನಿತ್ತು?
    ನಾನು ಹುಟ್ಟಿದಾಗಿಂದ ನನ್ನ ಲಾಲನೆ ಪಾಲನೆ ಮಾಡಿದ ನನ್ನ ಎರಡನೆ ತಾಯಿ ಮೋರುಬಾಯ್. ನಾನು ಆಕೆಯನ್ನು ಅಕ್ಕ ಎಂದು ಕರೆಯುತ್ತೇನೆ. ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ. ನನ್ನ ಅಮ್ಮನಿಗಿಂತ 9 ವರ್ಷ ಹಿರಿಯಳು. ಈಕೆಗೆ ಈಗ 90 ವರ್ಷ. ಸಾವಿನ ಬಾಗಿಲಿಗೆ ಅಕ್ಕ ಮುಖಮಾಡಿ ಮಾತು ನಿಂತು ನನಗಾಗಿ ಹಂಬಲಿಸಿದ್ದಾಳೆ. ಕೇದಾರನಾಥ ಸನ್ನಿಧಿಯಿಂದ ಬಂದಾಗ ವಿಷಯ ತಿಳಿದು ಓಡಿಹೋದೆ. ಅವಳ ಬಳಿ ಹೋದಾಗ ನಿಂತಮಾತು ಮುಚ್ಚಿದ ಕಣ್ಣು ನಾನು ಅಕ್ಕ ಎಂದು ಕೂಗಿದಾಗ ಕಣ್ಣು ತೆರೆದು ಮಾತು ಮತ್ತೆ ಶುರುವಾಯ್ತು. ಹರಸಿದಳು ನಮಿಸಿದಳು ನನ್ನ ಬಾಲ್ಯ ನೆನಪಾದಳು ಅಳಿಸಿದಳು. ಇದೆ ಅಲ್ಲವೆ ಸಾಕಿದ ಋಣ. ಅಮ್ಮನಿಲ್ಲದ ನನಗೆ 26 ವರ್ಷದಿಂದ ಅಮ್ಮನ ಪ್ರೀತಿ ತೋರುತ್ತಿದ್ದಳು.


    ನನ್ನ ತಂದೆ ಸಾವಿನ ಕಬಂದ ಬಾಹು ಅಪ್ಪುವ ಸಮಯ ಪಕ್ಕದಲ್ಲಿ ಇದ್ದು ಭಾರವಾದ ಹೃದಯದಿಂದ ಅಳುತ್ತ ಅಪ್ಪನ ಕಳಿಸಿಕೊಟ್ಟೆ. ನನ್ನ ದುರ್ವಿಧಿ ಮತ್ತೆ ನನಗೆ ತಿನ್ನಿಸಿ ಆಡಿಸಿದ ಪ್ರೀತಿಯ ಸಾಕು ತಾಯಿ ಅಪ್ಪನಂತೆ ಅನ್ನ ಮಣ್ಣಿನ ಋಣ ತೀರಿಸುವ ಮುನ್ನ ನನ್ನ ಪ್ರೀತಿಯಿಂದ ಮಾತಾಡಿಸಿ ಹರಸಿದಳು. ನನಗೆ ಪ್ರೀತಿಕೊಟ್ಟು ತಾಯಿಯಂತೆ ಪ್ರೀತಿಸಿದ ಆತ್ಮ ನನ್ನ ಬಿಟ್ಟು ಬಾರದ ಊರಿಗೆ ಗಂಟುಮೂಟೆ ಕಟ್ಟುತ್ತಿದ್ದಾಳೆ. ನನಗೆ ತಿಳಿದಿದ್ದು ಒಂದೆ ಶಿವಧ್ಯಾನ ಮಾಡುತ್ತಿರು ನಿಲ್ಲಿಸಬೇಡ ಅಕ್ಕ. ನಿನಗಾಗಿ ಕೈಲಾಸದಿಂದ ಇಳಿದು ಶಿವ ಬರುತ್ತಾರೆ ಎಂದು ಧೈರ್ಯತುಂಬಿದೆ.

    https://www.instagram.com/p/BzQv4WWHk-t/

    ಸಾವಿನ ಲೆಕ್ಕಾಚಾರ ಜಗದ ನಿಯಮ. ಮನುಷ್ಯನ ಕೊನೆ ದಿನ ಹಾಗೂ ನನ್ನ ಪ್ರೀತಿಸಿ ಬೆಳೆಸಿದ ನನ್ನ ಬಾಲ್ಯಕಂಡ ಕೊನೆ ಪ್ರೀತಿಯ ದೇವರ ಉಸಿರು ನಿಂತ ಮೇಲೆ ತಿಳಿಸಿ ಎಂದು ಹೇಳಿ ಅವಳ ಸಾವು ಬರುವುದು ನೋಡಲಾಗದೆ ಬಂದುಬಿಟ್ಟೆ. ಇರುವವರೆಗೂ ನಮ್ಮವರು ಹೋದ ಮೇಲೆ ನೆನಪು ಮಾತ್ರ. ಭಾರವಾಯ್ತು ನನ್ನ ಮನಸ್ಸು, ನನ್ನ 56ನೇ ವಯಸ್ಸಿಗೆ ಎಷ್ಟು ಜನ ಬಂಧುಗಳ ಕಳೆದುಕೊಂಡೆ. ಅವಳ ಆತ್ಮ ನೋವಿಲ್ಲದೆ ಶಿವನ ಪಾದ ಸೇರಲಿ ಎಂದು ಸಾಕು ತಾಯಿಯೊಂದಿಗಿದ್ದ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದರು.

  • ಮಗು ತನಗೆ ಹುಟ್ಟಿಲ್ಲವೆಂದು 2ರ ಪುಟ್ಟ ಕಂದಮ್ಮನ ಕೊಲೆ

    ಮಗು ತನಗೆ ಹುಟ್ಟಿಲ್ಲವೆಂದು 2ರ ಪುಟ್ಟ ಕಂದಮ್ಮನ ಕೊಲೆ

    ಮೈಸೂರು: ಮಗು ತನಗೆ ಹುಟ್ಟಿಲ್ಲ ಎಂದು 2 ವರ್ಷದ ಪುಟ್ಟ ಕಂದಮ್ಮನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕು ಅಸ್ವಾಳು ಗ್ರಾಮದಲ್ಲಿ ನಡೆದಿದೆ.

    ಕುಶಲ್ (2) ಕೊಲೆಯಾದ ಮಗು. ಶಶಿಕುಮಾರ್ ಮಗುವನ್ನು ಕೊಲೆ ಮಾಡಿದ ಆರೋಪಿ ತಂದೆ. ಶಶಿಕುಮಾರ್ ಪರಿಮಳ ಎಂಬರನ್ನು ಪ್ರೀತಿಸಿ ಮದುವೆ ಆಗಿದ್ದನು. ಈ ದಂಪತಿಗೆ ಮೂರು ವರ್ಷದ ಖುಷಿ ಹಾಗೂ 2 ವರ್ಷದ ಕುಶಲ್ ಎಂಬ ಮಕ್ಕಳಿದ್ದರು.

    ಶಶಿಕುಮಾರ್ ತನ್ನ ಪತ್ನಿ ಪರಿಮಳ ಜೊತೆ ಜಗಳವಾಡಿ ಆಕೆಯನ್ನು ಬಿಟ್ಟು ಹೋಗಿದ್ದನು. ಬಳಿಕ 6 ತಿಂಗಳ ಹಿಂದೆ ಮತ್ತೆ ಪರಿಮಳ ಜೊತೆ ಸೇರಿ ಸಂಸಾರ ಮಾಡಲು ಆರಂಭಿಸಿದ್ದನು. ಈ ವೇಳೆ 2 ವರ್ಷದ ಕುಶಲ್ ತನಗೆ ಹುಟ್ಟಿಲ್ಲ ಎಂದು ಶಂಕೆ ವ್ಯಕ್ತಪಡಿಸಿ ಶಶಿಕುಮಾರ್ ತನ್ನ ಮಗನನ್ನೇ ಕೊಲೆ ಮಾಡಿದ್ದಾನೆ.

    ಈ ಕೊಲೆಯಲ್ಲಿ ತಾನೂ ಭಾಗಿ ಆಗಿದ್ದೇನೆ ಎಂದು ಪರಿಮಳ ಸ್ವತಃ ತನ್ನ ಮೇಲೆಯೇ ಆರೋಪವನ್ನು ಹೊತ್ತಿಕೊಂಡಿದ್ದಾರೆ. ಪರಿಮಳ ಮಾತು ಕೇಳಿ ಪೊಲೀಸರು ಆಕೆಯನ್ನು ಹಾಗೂ ಆಕೆಯ ಪತಿ ಶಶಿಕುಮಾರ್ ನನ್ನು ಬಂಧಿಸಿದ್ದಾರೆ.

    ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾಗದೆ ತಾಯಿ-ಮಗಳು ಬೆಂಕಿಗಾಹುತಿ

    ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾಗದೆ ತಾಯಿ-ಮಗಳು ಬೆಂಕಿಗಾಹುತಿ

    ಚಾಮರಾಜನಗರ: ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾರದೆ ತಾಯಿ-ಮಗಳು ಬೆಂಕಿಗೆ ಆಹುತಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗಡಿಭಾಗದ ತಮಿಳುನಾಡಿನ ಮಲ್ಲನಗುಳಿ ಗ್ರಾಮದಲ್ಲಿ ನಡೆದಿದೆ.

    ತಮಿಳುನಾಡಿದ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಮಲ್ಲನಗುಳಿಯ ರಾಜಮ್ಮ(40) ಹಾಗೂ ಮಗಳು ಗೀತಾ(19) ಮೃತ ದುರ್ದೈವಿಗಳು.

    ಮಲ್ಲನಗುಳಿಯು ಕರ್ನಾಟಕದ ಪ್ರದೇಶದ ಗ್ರಾಮವಾಗಿದ್ದು, ಇಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಪುಟ್ಟ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ರಾಜಮ್ಮ ಗುರುವಾರ ಮಧ್ಯಾಹ್ನ ಅಡುಗೆ ಮಾಡುತ್ತಿದ್ದಾಗ ಗುಡಿಸಲಿಗೆ ಕಿಡಿ ತಗುಲಿದೆ. ಪರಿಣಾಮ ಬೆಂಕಿ ಸಂಪೂರ್ಣವಾಗಿ ಗುಡಿಸಲಿಗೆ ಹೊತ್ತಿಕೊಂಡು, ರಾಜಮ್ಮ ಹಾಗೂ ಗೀತಾ ಹೊರಗೆ ಬರಲು ಸಾಧ್ಯವಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ.

    ಈ ಕುರಿತು ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಾಳವಾಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಾಜಮ್ಮ ಹಾಗೂ ಗೀತಾ ಅವರ ಮೃತ ದೇಹಗಳನ್ನು ತಾಳವಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.