Tag: mother

  • ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ-ಮಗಳಿಂದ ವ್ಯಕ್ತಿಯ ಬರ್ಬರ ಹತ್ಯೆ

    ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ-ಮಗಳಿಂದ ವ್ಯಕ್ತಿಯ ಬರ್ಬರ ಹತ್ಯೆ

    ಮಡಿಕೇರಿ: ಸಾಲದ ಹಣ ವಾಪಸ್ ಕೇಳಿದ ವ್ಯಕ್ತಿಯನ್ನು ತಾಯಿ ಹಾಗೂ ಮಗಳ ಸೇರಿ ಬರ್ಬರವಾಗಿ ಹತ್ಯೆಗೈದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಳೇ ಕೂಡಿಗೆಯಲ್ಲಿ ನಡೆದಿದೆ.

    ಕೂಡಿಗೆ ಗ್ರಾಮದ ಶಿವು (35) ಹತ್ಯೆಯಾದ ವ್ಯಕ್ತಿ. ಕಮಲಮ್ಮ (50) ಹಾಗೂ ಹರಿಣಿ ಕೊಲೆ ಮಾಡಿದ ಆರೋಪಿಗಳು. ಘಟನೆಯಿಂದಾಗಿ ಕೂಡಿಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

    ಮನೆ ಲೀಸ್ ಹಾಕಿಕೊಳ್ಳಲು ಶಿವು ಸಂಬಂಧಿ ಕಮಲಮ್ಮಗೆ ಸಾಲ ನೀಡಿದ್ದ. ಕಮಲಮ್ಮ ಪಡೆದಿದ್ದ ಸಾಲವನ್ನು ಮರಳಿಸಲು ಸತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಶಿವು ಕಳೆದ ಕೆಲವು ದಿನಗಳಿಂದ ಕಮಲಮ್ಮನ ಮನೆಗೆ ಬಂದು ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಭಾನುವಾರವೂ ಮನೆಗೆ ಬಂದು ಗಲಾಟೆ ಮಾಡಿದ್ದಾನೆ.

    ಮನೆಯ ಒಳಗೆ ಬಂದು ಶಿವು ಮೇಲೆ ಕಮಲಮ್ಮ ಹಾಗೂ ಮಗಳು ಹರಿಣಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ದೀಪದ ಕಂಬದಿಂದ ಹೊಡೆದು ಹತ್ಯೆಗೈದಿದ್ದಾರೆ. ಬಳಿಕ ಶಿವು ಮೃತ ದೇಹವನ್ನು ಮಂಚದ ಕೆಳಗೆ ಬಚ್ಚಿಟ್ಟು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ ಶಿವು ತಮ್ಮ ಮನೆಗೆ ಆಗಾಗ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಿಸಿ ಮನೆಗೆ ವಾಪಸ್ ಹೋಗಿದ್ದಾರೆ. ಆದರೆ ಶಿವು ಕೊಲೆಯಾದ ವಿಚಾರವನ್ನು ಸ್ಥಳೀಯರು ಆತನ ಕುಟುಂಬದವರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.

    ತಕ್ಷಣವೇ ಶಿವು ಕುಟುಂಬಸ್ಥರು ಕಮಲಮ್ಮನ ಮನೆಯ ಬಾಗಿಲು ಮುರಿದು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ. ಆದರೂ ಆರೋಪಿಗಳನ್ನು ತಮಗೆ ಒಪ್ಪಿಸುವಂತೆ ಶಿವು ಸಂಬಂಧಿಕರು ಹಾಗೂ ಗ್ರಾಮಸ್ಥರು ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಗ್ರಾಮದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

    ಕೊಡಗು ಎಸ್‍ಪಿ ಡಾ.ಸುಮನ್ ಡಿ ಪನ್ನೇಕರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದರು. ಬಳಿಕ ಮನೆಗೆ ಬಾಗಿಲು ತೆಗೆದು ಮಂಚದ ಕೆಳಗಿದ್ದ ಶಿವು ಮೃತ ದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ವೇಳೆ ಶಿವು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಹೇಳಿಕೆಯನ್ನು ದಾಖಲಿಸಿಕೊಂಡರು.

    ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಊಟ ಮಾಡದ್ದಕ್ಕೆ 4ರ ಮಗಳನ್ನ ಸಾವನ್ನಪ್ಪುವಂತೆ ಥಳಿಸಿದ ತಾಯಿ

    ಊಟ ಮಾಡದ್ದಕ್ಕೆ 4ರ ಮಗಳನ್ನ ಸಾವನ್ನಪ್ಪುವಂತೆ ಥಳಿಸಿದ ತಾಯಿ

    ತಿರುವನಂತಪುರಂ: ಊಟ ಮಾಡಲು ನಿರಾಕರಿಸಿದ್ದಕ್ಕಾಗಿ ನಾಲ್ಕು ವರ್ಷದ ಮಗಳನ್ನು ತಾಯಿಯೇ ಸಾವನ್ನಪ್ಪುವಂತೆ ಥಳಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

    ದಿಯಾ ಸಾವನ್ನಪಿದ ಬಾಲಕಿಯಾಗಿದ್ದು, ದೀಪಕ್ ಹಾಗೂ ರಮ್ಯಾ ದಂಪತಿಯ ಮಗಳಾಗಿದ್ದಾಳೆ. ದಿಯಾಳ ದೇಹದಲ್ಲಿ ಹಲ್ಲೆ ಮಾಡಿದ ಗಾಯದ ಗುರುತುಗಳಿದ್ದು, ಬಾಲಕಿ ಅನಾರೋಗ್ಯದಿಂದ ಬಳಲುತ್ತಿದ್ದಳು ಎಂದು ವೈದ್ಯರು ದೃಢಪಡಿಸಿದ್ದಾರೆ.

    ಈ ಕುರಿತು ಪೊಲೀಸರು ದಿಯಾಳ ತಾಯಿಯನ್ನು ವಿಚಾರಣೆ ನಡೆಸುತ್ತಿದ್ದು, ರಮ್ಯಾ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಂಗನ್ನುರ್ ಮೂಲದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ಊಟ ಮಾಡುವುದನ್ನು ನಿರಾಕರಿಸಿದ್ದಕ್ಕೆ ಕೋಲಿನಿಂದ ಹೊಡೆದೆ ಎಂದು ರಮ್ಯಾ ತಿಳಿಸಿದ್ದಾರೆ. ಆದರೆ ಬಾಲಕಿ ದೇಹದ ಮೇಲಿರುವ ಹಲ್ಲೆ ಮಾಡಿರುವ ಗುರುತುಗಳು ಎರಡು ದಿನದ ಹಿಂದಿನದಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

    ದಿಯಾ ಊಟ ಮಾಡದ್ದಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವಳಿಗೆ ಅನಾರೋಗ್ಯ ಸಹ ಉಂಟಾಗಿತ್ತು. ದೇಹದ ಮೇಲಿನ ಗಾಯಗಳನ್ನು ನೋಡಿ ವೈದ್ಯರು ಮಗುವಿಗೆ ಹೊಡೆದಿರಾ ಎಂದು ಪ್ರಶ್ನಿಸಿದರು. ಆಗ ರಮ್ಯಾ ಹೌದು ಕೋಲಿನಿಂದ ಹೊಡೆದೆ ಎಂದು ಉತ್ತರಿಸಿದಳು ಎಂದು ದಿಯಾ ಚಿಕ್ಕಮ್ಮ ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ಮಗುವನ್ನು ಪರಿಪ್ಪಳ್ಳಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲೇ ಬಾಲಕಿ ರಕ್ತ ವಾಂತಿ ಮಾಡಿಕೊಂಡಿದ್ದಾಳೆ. ಮಗುವಿನ ಸ್ಥಿತಿ ಗಂಭಿರವಾಗಿದ್ದರಿಂದ ತಿರುವನಂತಪುರಂನ ಆಸ್ಪತ್ರಗೆ ಕರೆದೊಯ್ಯವಂತೆ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಬಾಲಕಿಯ ಹೃದಯ ಬಡಿತ ನಿಂತಿದೆ. ಆಗ ದಾರಿ ಮಧ್ಯೆ ಇಎಸ್‍ಐ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ.

    ಮಗುವಿನ ಕುಟುಂಬವು ಕೊಲ್ಲಂನ ಚಥನ್ನೂರ್‍ನಲ್ಲಿ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದೆ. ದಂಪತಿಗೆ 2 ವರ್ಷದ ಇನ್ನೊಬ್ಬ ಮಗಳಿದ್ದಾಳೆ. ದಿಯಾ ಮೊದಲು ದಾಖಲಾಗಿದ್ದ ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಝಕೂಟ್ಟಂನ ಸಿಎಸ್‍ಐ ಆಸ್ಪತ್ರೆಯಲ್ಲಿ ಮಗುವಿನ ದೇಹವನ್ನು ಇಡಲಾಗಿದೆ. ಮಗುವಿನ ತಂದೆಯನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

  • ತೆಳ್ಳಗಾದ ಫೋಟೋ ಹಂಚಿಕೊಂಡ ಬಾಹುಬಲಿಯ ‘ಬಲ್ಲಾಳ ದೇವ’

    ತೆಳ್ಳಗಾದ ಫೋಟೋ ಹಂಚಿಕೊಂಡ ಬಾಹುಬಲಿಯ ‘ಬಲ್ಲಾಳ ದೇವ’

    ಹೈದರಾಬಾದ್: ಬಾಹುಬಲಿ ಬಲ್ಲಾಳ ದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅವರ ಇತ್ತೀಚಿನ ಪೋಸ್ಟ್ ಕಂಡ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಫೋಟೋದಲ್ಲಿ ರಾಣಾ ತೀರ ತೆಳ್ಳಗೆ ಕಾಣುತ್ತಿದ್ದಾರೆ.

    ರಾಣಾ ಅವರೇ ತಮ್ಮ ಫೋಟೋವನ್ನು ಜಾಹೀರಾತಿನ ಉದ್ದೇಶದಿಂದ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ಫೋಟೋವನ್ನು ಗಮನಿಸಿದ ಅಭಿಮಾನಿಗಳು ರಾಣಾ ಪೋಸ್ಟ್ ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿದ್ದಾರೆ.

    ಕಳೆದ ಜುಲೈನಲ್ಲಿ ರಾಣಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಸುದ್ದಿ ಕೇಳಿತ್ತು. ಈ ಸಂದರ್ಭದಲ್ಲಿ ಅವರು ಕಿಡ್ನಿ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅವರಿಗೆ ಅಮೆರಿಕಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಣಾರ ತಾಯಿ ಅವರೇ ಅವರಿಗೆ ಕಿಡ್ನಿದಾನ ಮಾಡಿದ್ದಾರೆ ಎಂಬ ಸುದ್ದಿಗಳು ಬಾರಿ ಪ್ರಮಾಣದಲ್ಲಿ ಕೇಳಿ ಬಂದಿದ್ದವು.

    ಆ ಬಳಿಕ 34 ವರ್ಷದ ರಾಣಾ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಇಂತಹ ಎಲ್ಲಾ ಸುದ್ದಿಗಳು ಸುಳ್ಳು ಎಂದು ಹೇಳುವ ಮೂಲಕ ಅಲ್ಲಗೆಳೆದಿದ್ದರು. ಅಲ್ಲದೇ ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದರು.

    https://www.instagram.com/p/B3B8U6FjXjC/

    ಬಾಹುಬಲಿ ಸಿನಿಮಾಗಾಗಿ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡುವ ಮೂಲಕ ರಾಣಾ ಭಾರತ ಸಿನಿರಂಗದ ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಸದ್ಯದ ಅವರ ಫೋಟೋ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಇದುವರೆಗೂ ರಾಣಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಲಕ್ನೋ: ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ. ನಾನು ಯಾವುದೇ ಯುವತಿಯನ್ನು ಲವ್ ಮಾಡಿಲ್ಲ ಎಂದು ಯುವಕನೊಬ್ಬ ಡೆತ್ ನೋಟ್ ಬರೆದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದ ಜನಕಿಪುರಂನಲ್ಲಿ ಈ ಘಟನೆ ನಡೆದಿದ್ದು, ಭಾನು ಪ್ರತಾಪ್ ಸಿಂಗ್(19) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಯಾವುದೇ ಯುವತಿಯನ್ನು ಪ್ರೀತಿಸಿಲ್ಲ. ನನ್ನನ್ನು ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ ಎಂದು ಡೆಡ್ ನೋಟ್ ಬರೆದಿಟ್ಟು ಪ್ರತಾಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ:ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ

    ಪ್ರತಾಪ್ ಸೀತಾಪುರ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದನು. ಆದರೆ ಕೆಲದಿನಗಳಿಂದ ಪ್ರತಾಪ್ ಯಾವಾಗಲೂ ಮಂಕಾಗಿ ಇರುತ್ತಿದ್ದನು. ಇದನ್ನು ಗಮನಿಸಿದ ಮನೆಯವರು ಏನಾಯಿತು ಎಂದು ಪ್ರಶ್ನಿಸಿದರು ಆತ ಏನು ಉತ್ತರ ನೀಡುತ್ತಿರಲಿಲ್ಲ. ಹೀಗಾಗಿ ಮನೆಯವರು ಹೆಚ್ಚು ಒತ್ತಾಯ ಮಾಡಿ ಕೇಳಿ ತೊಂದರೆ ಕೋಡೋದು ಬೇಡ ಎಂದು ಸುಮ್ಮನಾಗಿದ್ದರು.

    ಶುಕ್ರವಾರ ಪ್ರತಾಪ್ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದ. ಮಧ್ಯಾಹ್ನವಾದರೂ ತನ್ನ ಕೊಠಡಿಯಿಂದ ಹೊರಬಾರದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾದರು. ಎಷ್ಟೇ ಬಾಗಿಲು ಬಡಿದರೂ ಪ್ರತಾಪ್ ತೆರೆಯದಿದ್ದಾಗ ಚಿಂತೆಗೀಡಾದರು. ಮೊಬೈಲ್‍ಗೆ ಕರೆ ಮಾಡಿದರೂ ಫೋನ್ ಎತ್ತುತ್ತಿರಲಿಲ್ಲ. ಆಗ ಮನೆಯವರು ಬಾಗಿಲನ್ನು ಮುರಿದು ಕೊಠಡಿಯೊಳಗೆ ಹೋದಾಗ ಪ್ರತಾಪ್ ಮೃತದೇಹ ಕಂಡು ಆಘಾತಗೊಂಡಿದ್ದಾರೆ.

    ಮನನೊಂದಿದ್ದ ಪ್ರತಾಪ್ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದನು. ಮರಣೋತ್ತರ ಪರೀಕ್ಷೆಯಲ್ಲೂ ಸಹ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದ್ದು, ನನ್ನನ್ನು ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ, ನಾನು ಯಾವ ಹುಡುಗಿಯನ್ನು ಪ್ರೀತಿ ಮಾಡಿಲ್ಲ ಎಂದು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರತಾಪ್ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ಹೆತ್ತಮ್ಮನಿಗೆ ಬೆದರಿಕೆ ಒಡ್ಡಿದ ಮಕ್ಕಳು- ಆಶ್ರಯವಿಲ್ಲದೆ ಕಣ್ಣೀರಿಡುತ್ತಿರುವ ವೃದ್ಧ ತಾಯಿ

    ಹೆತ್ತಮ್ಮನಿಗೆ ಬೆದರಿಕೆ ಒಡ್ಡಿದ ಮಕ್ಕಳು- ಆಶ್ರಯವಿಲ್ಲದೆ ಕಣ್ಣೀರಿಡುತ್ತಿರುವ ವೃದ್ಧ ತಾಯಿ

    ಬಾಗಲಕೋಟೆ: ಹೆತ್ತವರನ್ನು ಸಾಕಲು ಯೋಗ್ಯತೆ ಇರದ ಪಾಪಿ ಮಕ್ಕಳು ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದು, ಮಕ್ಕಳ ದುಷ್ಟತನಕ್ಕೆ ಹೆದರಿ ಮನನೊಂದ ತಾಯಿ ಕಣ್ಣೀರಿಡುತ್ತಿದ್ದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

    ನವನಗರ ನಿವಾಸಿ ಶಾಂತವ್ವ ತಳವಾರ್ ಮಕ್ಕಳಿಂದ ಬೆದರಿಕೆಗೆ ಒಳಗಾಗಿರುವ ನತದೃಷ್ಟ ತಾಯಿ. ನವನಗರದ 28ನೇ ಸೆಕ್ಟರ್ ನಿವಾಸಿಯಾಗಿರುವ ಶಾಂತವ್ವ ಅವರನ್ನು ಹೆತ್ತ ಮಕ್ಕಳು ನೋಡಿಕೊಳ್ಳುತ್ತಿಲ್ಲ. ಶಾಂತವ್ವ ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಓರ್ವ ಮಗ ಪರಶುರಾಮ್ ಹೊನ್ನಾವರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ಮಗ ಆಕಾಶ್ ಬಾಗಲಕೋಟೆಯಲ್ಲಿ ಕ್ರೂಸರ್ ಡ್ರೈವರ್ ಆಗಿದ್ದಾನೆ. ದುಡಿಯುವ ಎರಡು ಗಂಡು ಮಕ್ಕಳಿದ್ದರೂ ಯಾರೂ ಕೂಡ ತಾಯಿಯನ್ನ ನೋಡಿಕೊಳ್ಳುತ್ತಿಲ್ಲ. ಹೆತ್ತು, ಹೊತ್ತು, ಸಾಕಿದ ತಾಯಿಯನ್ನೆ ಮಕ್ಕಳು ಬೀದಿಗೆ ಬಿಟ್ಟಿದ್ದಾರೆ.

    ಮಕ್ಕಳು ತನಗೆ ಮಾಡುತ್ತಿದ್ದ ಕಿರಿಕಿರಿಯಿಂದ ನೊಂದ ತಾಯಿ ಮನೆ ಬಿಟ್ಟು ಬಂದಿದ್ದಾರೆ. ಜೊತೆಗೆ ಮಕ್ಕಳ ಬೆದರಿಕೆಗೆ ಹೆದರಿ ಕಣ್ಣೀರು ಹಾಕಿದ್ದಾರೆ. ಯಾರಾದರೂ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಬೇಡಿಕೊಂಡಿದ್ದಾರೆ. ವೃದ್ಧ ತಾಯಿಯ ಸಹಾಯಕ್ಕೆ ಬಂದ ಪಬ್ಲಿಕ್ ಟಿವಿ ಪ್ರತಿನಿಧಿ ಮಾನವೀಯತೆ ಮರೆದಿದ್ದಾರೆ. ನೊಂದ ತಾಯಿಗೆ ಸಾಂತ್ವಾನ ಹೇಳಿ, ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಗೆ ಕರೆದುಕೊಂಡು ಹೋಗಿ ಮಕ್ಕಳ ಬಗ್ಗೆ ದೂರು ದಾಖಲಿಸಿದ್ದಾರೆ. ಜೊತೆಗೆ ಎಸ್.ಪಿ ಕಚೇರಿಗೆ ಕರೆದೊಯ್ದು ಎಸ್.ಪಿ ಲೋಕೇಶ್ ಅವರಿಗೆ ಈ ವಿಷಯ ತಿಳಿಸಿ ತಾಯಿಗೆ ಸಹಾಯ ಮಾಡಿದ್ದಾರೆ.

  • ನನ್ನ ಮೇಲೆ ಪ್ರೀತಿ ಕಮ್ಮಿಯಾಗಿದೆ ಎಂದು ಇರಿದ ಮಗ – ತಂದೆ ಸಾವು, ತಾಯಿ ಗಂಭೀರ

    ನನ್ನ ಮೇಲೆ ಪ್ರೀತಿ ಕಮ್ಮಿಯಾಗಿದೆ ಎಂದು ಇರಿದ ಮಗ – ತಂದೆ ಸಾವು, ತಾಯಿ ಗಂಭೀರ

    ನವದೆಹಲಿ: ನನ್ನ ಮೇಲೆ ಜಾಸ್ತಿ ಪ್ರೀತಿ ತೋರಿಸುತ್ತಿಲ್ಲ ಮತ್ತು ನನಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಮಗನೊಬ್ಬ ತಂದೆ-ತಾಯಿಗೆ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಗುರುಗ್ರಾಮ್‍ನಲ್ಲಿ ನಡೆದಿದೆ.

    ಕೊಲೆ ಮಾಡಿದ ಆರೋಪಿಯನ್ನು 32 ವರ್ಷದ ರಿಷಭ್ ಮೆಹ್ತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿರುವ ತಂದೆ ಸುಶೀಲ್ ಮೆಹ್ತಾ ಸಾವನ್ನಪ್ಪಿದ್ದಾರೆ. ತಾಯಿ ಚಂದರ್ ಮೆಹ್ತಾಗೆ ಗಂಭೀರ ಗಾಯವಾಗಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಎಲ್ಲಾ ಘಟನೆಯನ್ನು ಕಣ್ಣಾರೆ ನೋಡಿರುವ ರಿಷಭ್‍ನ ಸಹೋದರ ಮಾಯಾಂಕ್ ಮೆಹ್ತಾ ಮಾತನಾಡಿ, ರಿಷಭ್ ಅಪ್ಪ ಅಮ್ಮನ ಜೊತೆ ದಿನ ಜಗಳವಾಡುತ್ತಿದ್ದನು. ಮಂಗಳವಾರ ಸಂಜೆಯೂ ರಿಷಭ್ ಜಗಳವಾಡುತ್ತಿದ್ದನು. ಆದರೆ ದಿನ ಹೀಗೆ ಮಾಡುತ್ತಾನೆ ಎಂದು ನಾನು ಹಣ್ಣುಗಳನ್ನು ತರಲು ಮಾರ್ಕೆಟ್‍ಗೆ ಹೋದೆ ಎಂದು ಹೇಳಿದ್ದಾನೆ.

    ಮಾರ್ಕೆಟ್‍ನಲ್ಲಿ ಹಣ್ಣು ಖರೀದಿ ಮಾಡುವಾಗ ನನ್ನ ಚಿಕ್ಕಪ್ಪ ನನಗೆ ಕರೆ ಮಾಡಿ ನಿಮ್ಮ ಮನೆಯಲ್ಲಿ ತುಂಬಾ ಗಲಾಟೆಯಾಗುತ್ತದೆ ಎಂದು ಹೇಳಿದರು. ತಕ್ಷಣ ನಾನು ಮನೆಗೆ ಹೋದೆ ಅಲ್ಲಿ ರಿಷಭ್ ಅಪ್ಪನಿಗೆ ಚಾಕುವಿನಿಂದ ಇರಿಯುತ್ತಿದ್ದನು. ಅದನ್ನು ತಡೆಯಲು ಹೋದ ನನ್ನ ಕೈಗೂ ಚಾಕು ಇರಿದ. ನಂತರ ನಾನು ಬಿಡಿಸಿ ಅಪ್ಪ-ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ಅಲ್ಲಿನ ವೈದ್ಯರು ಅಪ್ಪ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಅಮ್ಮನಿಗೆ ಗಂಭೀರಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಯಾಂಕ್ ಹೇಳಿದ್ದಾನೆ.

    ಅಪರಾಧ ಎಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಮಂಗಳವಾರ ಮತ್ತೆ ಅವನು ಆ ಪ್ರದೇಶಕ್ಕೆ ಬಂದಿದ್ದು, ಅವನನ್ನು ಬಂಧಿಸಲಾಗಿದೆ. ಅವನ ಮೇಲೆ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗುರುಗ್ರಾಮ್‍ನ ಪೊಲೀಸ್ ಅಧಿಕಾರಿ ಸುಭಾಷ್ ಬೊಕಾನ್ ಹೇಳಿದ್ದಾರೆ.

  • ಜಾಮೀನಿಗಾಗಿ ಮನೆ ದೇವತೆ ಮೋರೆ ಹೋದ ಡಿಕೆಶಿ ತಾಯಿ-ತಂಗಿ

    ಜಾಮೀನಿಗಾಗಿ ಮನೆ ದೇವತೆ ಮೋರೆ ಹೋದ ಡಿಕೆಶಿ ತಾಯಿ-ತಂಗಿ

    ರಾಮನಗರ: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ಆದೇಶ ಇಂದು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ತಾಯಿ, ಸೋದರಿ ಮತ್ತು ಬೆಂಬಲಿಗರು ಡಿಕೆಶಿಯವರ ಮನೆದೇವತೆ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಕನಕಪುರದ ಸಂಗಮ ರಸ್ತೆಯಲ್ಲಿನ ಕೆಂಕೇರಮ್ಮ ದೇವಾಲಯದಲ್ಲಿ ಜೈಲಿನಲ್ಲಿರುವ ಡಿಕೆಶಿಗೆ ಜಾಮೀನು ಸಿಗಲೆಂದು ವಿಶೇಷ ಪೂಜೆ ಸಲ್ಲಿಸಿದರು. ಜಾಮೀನು ಸಿಕ್ಕು ಜೈಲಿನಿಂದ ಹೊರಬರಲಿ ಹಾಗೂ ಕಾನೂನಾತ್ಮಕ ಹೋರಾಟದಲ್ಲಿ ಜಯ ಸಿಗಲೆಂದು ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ದೇವರಲ್ಲಿ ಬೇಡಿಕೊಂಡಿದ್ದಾರೆ.

    ವಿಶೇಷವಾಗಿ ಪೂಜಾ ಕಾರ್ಯಕ್ರಮದಲ್ಲಿ ಡಿಕೆಶಿ ತಾಯಿ ಗೌರಮ್ಮ ಹಾಗೂ ಸೋದರಿ ಮಂಜುಳಾ ಸಹ ಭಾಗಿಯಾಗಿದರು. ತಮ್ಮ ಮನೆಮಗ ಡಿಕೆ ಶಿವಕುಮಾರ್‍ಗೆ ನಾಳೆ ಜಾಮೀನು ಸಿಕ್ಕು ಹೊರಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇನ್ನೂ ಕಾರ್ಯಕರ್ತರು ದೇವಾಲಯದ ಬಳಿ ಡಿಕೆಶಿಗೆ ಜಾಮೀನು ಸಿಗಲೆಂದು 101 ಈಡುಗಾಯಿ ಸೇವೆಯನ್ನು ಸಲ್ಲಿಸಿದರು.

  • ಮಗನ ಭವಿಷ್ಯಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾದ ತಾಯಿ

    ಮಗನ ಭವಿಷ್ಯಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾದ ತಾಯಿ

    ಭೋಪಾಲ್: ಮಗನಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಲು ತಾಯಿಯೊಬ್ಬರು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ ಹೊತ್ತು ಕೂಲಿ ಮಾಡುತ್ತಿದ್ದಾರೆ. ಕಷ್ಟವಾದರೂ ಮಗನಿಗಾಗಿ ತಾಯಿ ಜೀವ ಬೆವರು ಸುರಿಸುತ್ತಿದೆ.

    ಹೌದು. ಈ ಸುದ್ದಿ ಕೇಳಿದರೆ ಒಂದು ಕಡೆ ತಾಯಿ ಪ್ರೀತಿ ತಿಳಿದರೆ, ಇನ್ನೊಂದೆಡೆ ಜೀವನ ನಡೆಸಲು ಎಷ್ಟು ಕಷ್ಟ ಪಡಬೇಕು ಎನ್ನುವುದು ಅರ್ಥವಾಗುತ್ತೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕೂಲಿ ಕೆಲಸದಿಂದ ಹಿಡಿದು ವಿಮಾನ ಓಡಿಸುವವರೆಗೆ ಎಲ್ಲದರಲ್ಲೂ ಮಹಿಳೆಯರು ಮುಂದಿದ್ದಾರೆ. ಹಾಗೆಯೇ ಮಗನ ಭವಿಷ್ಯಕ್ಕಾಗಿ ಯಾವುದೇ ಕೆಲಸ ಮಾಡಲು ಸಿದ್ಧ ಎಂದು ಪಣತೊಟ್ಟ ಭೋಪಾಲ್ ನಿವಾಸಿ ಲಕ್ಷ್ಮಿ, ರೈಲ್ವೆ ನಿಲ್ದಾಣದಲ್ಲಿ ಕೂಲಿ ಆಗಿ ಕೆಲಸ ಮಾಡಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ಈ ಮೂಲಕ ಭೋಪಾಲ್‍ನ ಮೊದಲ ಮಹಿಳಾ ಕೂಲಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

    ಲಕ್ಷ್ಮಿ ಪತಿ ಇದೇ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡಿಕೊಂಡಿದ್ದರು. ದಂಪತಿಗೆ ಓರ್ವ 8 ವರ್ಷದ ಮಗ ಕೂಡ ಇದ್ದಾನೆ. ಆದರೆ ಅನಾರೋಗ್ಯದ ಕಾರಣದಿಂದ ಪತಿ ಕಳೆದ ಜುಲೈನಲ್ಲಿ ತೀರಿಹೋದರು. ಪತಿಯ ಅಗಲಿಕೆಯ ಬಳಿಕ ಜೀವನ ನಡೆಸಲು ಲಕ್ಷ್ಮಿ ಅವರು ಬಹಳ ಕಷ್ಟಪಟ್ಟರು, ಜೀವನ ನಡೆಸಲು ಯಾವುದೇ ಆಧಾರವಿಲ್ಲದೆ ಕೊನೆಗೆ ಪತಿ ಮಾಡುತ್ತಿದ್ದ ಕೂಲಿ ಕೆಲಸವನ್ನೇ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಹಿಳೆ, ನಾನು ಓದಿಲ್ಲ ಆದ್ದರಿಂದ ಒಳ್ಳೆಯ ಕೆಲಸ ಸಿಕ್ಕಿಲ್ಲ. ಹೀಗಾಗಿ ಪತಿಯ ಕೆಲಸವನ್ನೆ ನಾನು ಪಡೆದು ಮಾಡುತ್ತಿದ್ದೇನೆ. ನನ್ನ ಮಗನಿಗೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕು. ಆತ ದೊಡ್ಡವನಾದ ಬಳಿಕ ನಮ್ಮಂತೆ ಕಷ್ಟಪಡದೆ ಚೆನ್ನಾಗಿ ಬಾಳಬೇಕು. ಈ ಕೆಲಸದಿಂದ ನನಗೆ ದಿನಕ್ಕೆ 50 ರಿಂದ 100 ರೂ. ಹಣ ಸಿಗುತ್ತೆ. ಅದರಲ್ಲೇ ನಾನು, ನನ್ನ ಮಗ ಬದುಕು ನಡೆಸುತ್ತಿದ್ದೇವೆ. ಕೆಲವೊಮ್ಮೆ ಯಾವುದೇ ಹಣ ಸಿಗಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ಈ ಬಗ್ಗೆ ನಿಲ್ದಾಣದಲ್ಲಿ ಕೆಲಸ ಮಾಡುವ ಇತರೆ ಕೂಲಿಗಳು ಪ್ರತಿಕ್ರಿಯಿಸಿ, ಲಕ್ಷ್ಮಿ ಅವರು ತುಂಬ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರಿಗೆ ‘ಡಿ ಗ್ರೂಪ್’ ಕೆಲಸ ನೀಡಿ ಎಂದು ನಾವೆಲ್ಲ ರೈಲ್ವೆ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದೆವು. ಆದರೆ ಇದಕ್ಕೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.

  • ಮುಂದಿನ ವರ್ಷ ನಾನು ತಾಯಿ ಆಗುತ್ತೇನೆ: ರಾಖಿ ಸಾವಂತ್

    ಮುಂದಿನ ವರ್ಷ ನಾನು ತಾಯಿ ಆಗುತ್ತೇನೆ: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಾವು ಮುಂದಿನ ವರ್ಷ ತಾಯಿ ಆಗುತ್ತೇನೆ ಎಂದು ಹೇಳಿದ್ದಾರೆ.

    ರಾಖಿ ಅವರು ರಿತೇಶ್ ಎಂಬವರನ್ನು ಗೌಪ್ಯವಾಗಿ ಮದುವೆಯಾಗಿದ್ದರು. ಆದರೆ ರಾಖಿ ಇದುವರೆಗೂ ತಮ್ಮ ಪತಿಯನ್ನು ಯಾರಿಗೂ ಪರಿಚಯಿಸಿಲ್ಲ. ಸದ್ಯ ಈಗ ಅವರು ಒಂದು ಕಾರ್ಯಕ್ರಮಕ್ಕೆ ತೆರಳಿದ್ದು, ಈ ವೇಳೆ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ರಾಖಿ ಸಾವಂತ್ ಅವರು, “ನಾನು 2020ರವರೆಗೂ ಮಗುವಿನ ಪ್ಲಾನಿಂಗ್ ಮಾಡುತ್ತೇನೆ. ನನ್ನ ಪತಿ ರಿತೇಶ್ ಮಗುವಿನೊಂದಿಗೆ ಎಲ್ಲರ ಮುಂದೆ ಬರುತ್ತಾರೆ” ಎಂದು ಉತ್ತರಿಸಿದ್ದಾರೆ.

    ಬಳಿಕ ರಿತೇಶ್ ಅವರ ಮನೆಯವರ ಬಗ್ಗೆ ಮಾತನಾಡಿದ ರಾಖಿ, “ನನ್ನ ಅತ್ತೆ-ಮಾವ ತುಂಬಾನೇ ಸಿಂಪಲ್, ಸ್ವೀಟ್ ಹಾಗೂ ಕ್ಯಾರಿಂಗ್. ಅವರು ಯಾವ ವಿಚಾರದ ಬಗ್ಗೆಯೂ ಹೆಚ್ಚು ಯೋಚನೆ ಮಾಡುವುದಿಲ್ಲ. ರಿತೇಶ್ ಅವರಿಗೆ ಇಬ್ಬರು ಸಹೋದರಿಯರು ಇದ್ದಾರೆ. ನಾನು ನನ್ನ ಪತಿ ಜೊತೆ ಬಿಗ್ ಬಾಸ್ 13 ಸೀಸನ್‍ನಲ್ಲಿ ಭಾಗವಹಿಸುತ್ತಿದ್ದೇವೆ. ಅಲ್ಲಿಯೇ ಎಲ್ಲರಿಗೂ ನನ್ನ ಪತಿಯನ್ನು ಪರಿಚಯ ಮಾಡಿಸುತ್ತೇನೆ” ಎಂದು ಹೇಳಿದ್ದಾರೆ.

    ನಾನು ನನ್ನ ಪತಿಯನ್ನು ತುಂಬಾ ಪ್ರೀತಿಸುತ್ತೇನೆ. ರಿತೇಶ್ ತುಂಬಾ ಸ್ಮಾರ್ಟ್ ಹಾಗೂ ಹ್ಯಾಂಡ್‍ಸಮ್ ಆಗಿದ್ದಾರೆ. ಅವರು ನನ್ನ ಹೃದಯದ ಒಂದು ಭಾಗ. ರಿತೇಶ್ ಅವರಿಗೆ ಬೇರೆಯವರ ದೃಷ್ಟಿ ಬೀಳುತ್ತೆ ಎಂಬ ಭಯ ನನಗಿದೆ. ಹೀಗಾಗಿ ನಾನು ನನ್ನ ಪತಿಯನ್ನು ಯಾರಿಗೂ ಪರಿಚಯಿಸಿಲ್ಲ. ರಿತೇಶ್ ಉದ್ಯಮಿಯಾಗಿದ್ದು, ಜಗತ್ತಿನ ಮುಂದೆ ಅವರ ಫೋಟೋ ಬರುವುದು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

  • ವಿಧವೆ ತಾಯಿಯ, ಪ್ರಿಯಕರನ ತಲೆ ಕೂದಲು ಕತ್ತರಿಸಿದ ಮಕ್ಕಳು

    ವಿಧವೆ ತಾಯಿಯ, ಪ್ರಿಯಕರನ ತಲೆ ಕೂದಲು ಕತ್ತರಿಸಿದ ಮಕ್ಕಳು

    -ಹಲ್ಲೆ ಮಾಡಿ ಮೂತ್ರ ಕುಡಿಸಲು ಯತ್ನ

    ಜೈಪುರ: ಮಕ್ಕಳೇ ತನ್ನ ವಿಧವೆ ತಾಯಿ ಹಾಗೂ ಆಕೆಯ ಪ್ರಿಯಕರನ ತಲೆ ಕೂದಲು ಕತ್ತರಿಸಿ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ 45 ವರ್ಷದ ಮಹಿಳೆಯ ಇಬ್ಬರು ಮಕ್ಕಳು ಆಕೆಯ ಪ್ರಿಯಕರನಿಗೆ ಮೂತ್ರ ಕುಡಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾವು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಹುಡುಕಲು ಶುರು ಮಾಡಿದ್ದೇವು. ಮಂಗಳವಾರ ಮಹಿಳೆ ನಿಂಬಿ ಜೋಧ ಗ್ರಾಮದಲ್ಲಿ ಪತ್ತೆಯಾಗಿದ್ದಳು. ಮಹಿಳೆಗೆ 35 ವರ್ಷದ ಅವಿವಾಹಿತ ವ್ಯಕ್ತಿ ಜೊತೆ ಪ್ರೇಮವಿತ್ತು. ವ್ಯಕ್ತಿ ಮಹಿಳೆ ದೂರದ ಸಂಬಂಧಿಯಾಗಿದ್ದು, 10 ದಿನದ ಮೊದಲು ಇಬ್ಬರು ಮನೆಯಿಂದ ಓಡಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಮಕ್ಕಳು ಹಾಗೂ ಕೆಲವು ಸಂಬಂಧಿಕರು ನಾಲ್ಕು ದಿನಗಳ ಹಿಂದೆ ನಿಂಬಿ ಜೋಧ ಗ್ರಾಮದಲ್ಲಿ ಆಕೆಯನ್ನು ಹುಡುಕಿ ಮೆನೆಗೆ ಕರೆದುಕೊಂಡು ಬಂದಿದ್ದರು. ಮನೆಗೆ ಕರೆದುಕೊಂಡು ಬಂದ ಬಳಿಕ ಆಕೆಯ ತಲೆ ಕೂದಲನ್ನು ಕತ್ತರಿಸಿ, ಹಲ್ಲೆ ಮಾಡಿದ್ದಾರೆ. ಅಲ್ಲದೆ ಆ ವ್ಯಕ್ತಿಗೆ ಮೂತ್ರ ಕುಡಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಿತೇಶ್ ಆರ್ಯ ತಿಳಿಸಿದ್ದಾರೆ.

    ಸದ್ಯ ಮಹಿಳೆಯ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಮಕ್ಕಳನ್ನು ಬಂಧಿಸಿದ್ದಾರೆ.